ತಯ್ಬೆಹ್‌ನ ಬೈಜಾಂಟೈನ್ ಸಂತ ಜಾರ್ಜ್ ದೇವಾಲಯ (AFP ಅಥವಾ ಪರವಾನಗಿದಾರರು) ತಯ್ಬೆಹ್‌ನ ಬೈಜಾಂಟೈನ್ ಸಂತ ಜಾರ್ಜ್ ದೇವಾಲಯ (AFP ಅಥವಾ ಪರವಾನಗಿದಾರರು)  (AFP or licensors)

ತಯ್ಬೆಹ್‌ಗೆ ಭೇಟಿ ನೀಡಿದ ಪ್ರಧಾನ ಗುರು ಪಿಜ್ಜಬಲ್ಲಾ; ಕ್ರೈಸ್ತ ಸಾನ್ನಿಧ್ಯವನ್ನು ಉಳಿಸುವಂತೆ ಮನವಿ

ಜೆರುಸಲೇಮ್‌ನ ಲ್ಯಾಟಿನ್ ಧರ್ಮಪೀಠದ ಪ್ರಧಾನ ಗುರು ಪಿಯರ್‌ಬತ್ತಿಸ್ತಾ ಪಿಜ್ಜಬಲ್ಲಾ ಅವರು ಪ್ಯಾಲೇಸ್ತೀನಿನ ಉಳಿದಿರುವ ಕೊನೆಯ ಕ್ರೈಸ್ತ ಗ್ರಾಮವಾದ ತಯ್ಬೆಹ್‌ಗೆ ಭೇಟಿ ನೀಡಿದರು. ಗ್ರಾಮವು ಪ್ರವೇಶದ ಮೇಲೆ ತೀವ್ರ ನಿರ್ಬಂಧಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ, “ಈ ಅತ್ಯಂತ ಸಂಕೀರ್ಣ ಪರಿಸ್ಥಿತಿಯ ನಡುವೆಯೂ ನಾವು ಕ್ರೈಸ್ತ ಧ್ವನಿಯಾಗಿ ಮುಂದುವರಿಯಲು ನಿಮ್ಮ ಸಾಕ್ಷ್ಯವು ಮಹತ್ವದ್ದಾಗಿದೆ,” ಎಂದು ಒತ್ತಿಹೇಳಿದರು.

ಲೇಖಕರು: ವಲೇರಿಯೊ ಪಲೊಂಬಾರೊ

“ಪವಿತ್ರ ಭೂಮಿಯಾದ್ಯಂತ, ಪ್ರತಿಯೊಂದು ಹಂತದಲ್ಲಿಯೂ ಇಲ್ಲಿರುವ ಧರ್ಮಸಭೆಯ ಸಾನ್ನಿಧ್ಯವನ್ನು ಉಳಿಸಿಕೊಳ್ಳಲು ನಮ್ಮಿಂದ ಸಾಧ್ಯವಿರುವ ಎಲ್ಲವನ್ನೂ ನಾವು ಮುಂದುವರಿಸುತ್ತೇವೆ.”

ಪೂಜ್ಯ ಕನ್ಯಾಮರಿಯಮ್ಮನ ಸ್ವರ್ಗಸ್ವೀಕಾರ ಮಹೋತ್ಸವದಂದು ಜೆರುಸಲೇಮ್‌ನ ಲ್ಯಾಟಿನ್ ಧರ್ಮಪೀಠದ ಪ್ರಧಾನ ಗುರು ಪಿಯರ್‌ಬತ್ತಿಸ್ತಾ ಪಿಜ್ಜಬಲ್ಲಾ ಅವರು ಪಶ್ಚಿಮ ದಂಡೆಯಲ್ಲಿರುವ ಸಣ್ಣ ಕ್ರೈಸ್ತ ಗ್ರಾಮವಾದ ತಯ್ಬೆಹ್‌ಗೆ ಭೇಟಿ ನೀಡಿ ಅಲ್ಲಿನ ಜನರೊಂದಿಗೆ ತಮ್ಮ ಐಕ್ಯತೆಯನ್ನು ವ್ಯಕ್ತಪಡಿಸಿದರು.

ತಯ್ಬೆಹ್‌ನ ಕ್ರಿಸ್ತ ರಕ್ಷಕ ಲ್ಯಾಟಿನ್ ದೇವಾಲಯದಲ್ಲಿ ಪವಿತ್ರ ಬಲಿಪೂಜೆಯ ಸಂದರ್ಭದಲ್ಲಿ ಪ್ರಧಾನ ಗುರು ಪಿಯರ್‌ಬತ್ತಿಸ್ತಾ ಪಿಜ್ಜಬಲ್ಲಾ ಅವರ, “ಮಾನವೀಯ ಅಥವಾ ಲೌಕಿಕ ಮಟ್ಟದಲ್ಲಿ ನನ್ನ ಬಳಿ ಉತ್ತರಗಳಿಲ್ಲದಿರಬಹುದು. ಆದರೆ ನಾನು ದೇವರಲ್ಲಿ ನಂಬಿಕೆ ಇಟ್ಟಿದ್ದೇನೆ. ಮತ್ತು ದೇವರಲ್ಲಿ ನಂಬಿಕೆಯಿಟ್ಟಾಗ, ಇಲ್ಲಿಯೂ ತಯ್ಬೆಹ್‌ನಲ್ಲಿ ನಾವು ಜೀವವನ್ನು ನೀಡುತ್ತಾ ಮುಂದುವರಿಯಬಹುದು ಎಂಬುದು ನನಗೆ ಖಚಿತ,” ಎಂದು ಹೇಳಿದರು.

“ತನ್ನ ಜನರ ನಡುವೆ” ಸ್ವಾಗತ

ಪವಿತ್ರ ಬಲಿಪೂಜೆಯ ಆರಂಭದಲ್ಲಿ ಪ್ರಧಾನ ಗುರುಗಳನ್ನು ಸ್ವಾಗತಿಸಿದ ತಯ್ಬೆಹ್ ಧರ್ಮಕೇಂದ್ರದ ಧರ್ಮಗುರು ವಂ.ಗುರು ಬಶಾರ್ ಫವಾದ್ಲೆಹ್, ಗ್ರಾಮವು ಅವರನ್ನು “ತನ್ನ ಜನರ ನಡುವೆ ಮತ್ತು ತನ್ನ ಮನೆಗೆ” ಸ್ವಾಗತಿಸಿದೆ ಎಂದು ಹೇಳಿದರು.ಜೆರುಸಲೇಮ್‌ನ ಲ್ಯಾಟಿನ್ ಧರ್ಮಪೀಠದ ಹೇಳಿಕೆಯ ಪ್ರಕಾರ, ಕಠಿಣ ಪರಿಸ್ಥಿತಿಯಲ್ಲಿ ತನ್ನ ಮಕ್ಕಳ ಪಕ್ಕದಲ್ಲಿ ನಿಂತಿರುವ ತಂದೆಯ ಸಾನ್ನಿಧ್ಯದಂತೆ ಪ್ರಧಾನ ಗುರುಗಳ ಭೇಟಿಯನ್ನು ಧರ್ಮಗುರು ವಿವರಿಸಿದರು.

ಪ್ರಧಾನ ಗುರು ಪಿಜ್ಜಬಲ್ಲಾ ಅವರ ಸಾನ್ನಿಧ್ಯವು ಸಮುದಾಯವು ಏಕಾಂಗಿಯಲ್ಲ ಎಂಬುದನ್ನು ನೆನಪಿಸುತ್ತದೆ ಮತ್ತು ಧರ್ಮಸಭೆಯು ತನ್ನ ಮಕ್ಕಳೊಂದಿಗೆ ನಿಂತಿದೆ; ಈ ಧರ್ಮಸಭೆಯು “ಈ ನಾಡಿನ ಶಿಲುಬೆ ಮತ್ತು ನಿರೀಕ್ಷೆಯನ್ನು” ತನ್ನೊಂದಿಗೆ ಹೊತ್ತುಕೊಂಡಿದೆ ಎಂದು ವಂ.ಗುರು ಬಶಾರ್ ಹೇಳಿದರು.

ಪ್ರಧಾನ ಗುರು ಪಿಜ್ಜಬಲ್ಲಾ ಪೂಜ್ಯ ಕನ್ಯಾಮರಿಯಮ್ಮನ ಸ್ವರ್ಗಸ್ವೀಕಾರ ಮಹೋತ್ಸವವನ್ನು “ಪುನರುತ್ಥಾನದ ಫಲ” ಎಂದು ವಿವರಿಸಿದರು. ಮಾನವೀಯ ಲೆಕ್ಕಾಚಾರಗಳ ಆಧಾರದ ಮೇಲೆ ಅಲ್ಲದೆ, “ದೈವಿಕ ದೃಷ್ಟಿಯಿಂದ” ವಾಸ್ತವವನ್ನು ನೋಡುವುದನ್ನು, ಮಾತೆ ಮರಿಯ ಕ್ರೈಸ್ತರಿಗೆ ಕಲಿಸುತ್ತಾರೆ ಎಂದು ಹೇಳಿದರು. ನಂತರ ಅವರು ಈ ಸಂದೇಶವನ್ನು ನೇರವಾಗಿ ತಯ್ಬೆಹ್‌ನ ಪರಿಸ್ಥಿತಿಗೆ ಅನ್ವಯಿಸಿ, ಭವಿಷ್ಯವು ಕಠಿಣವಾಗಿರುವಂತೆ ಅಥವಾ ಅಸಾಧ್ಯವೆನಿಸುವ ಸಂದರ್ಭಗಳಲ್ಲಿಯೂ ನಂಬಿಕೆ ಮತ್ತು ನಿರೀಕ್ಷೆಯಲ್ಲಿ ನೆಲೆಗೊಂಡು ಮುಂದುವರಿಯುವಂತೆ ಅಲ್ಲಿನ ಜನರನ್ನು ಪ್ರೋತ್ಸಾಹಿಸಿದರು.

ಭಯದಿಂದ ಹೃದಯವನ್ನು ಕಾಪಾಡಿಕೊಳ್ಳುವುದು

ಕ್ರೈಸ್ತ ಸಾನ್ನಿಧ್ಯವನ್ನು ಉಳಿಸಿಕೊಳ್ಳಲು ಭಯ, ನಿರಾಶೆ ಮತ್ತು ಕಠಿಣ ಪರಿಸ್ಥಿತಿಗಳ ಪರಿಣಾಮಗಳಿಂದ ಹೃದಯವನ್ನು ಕಾಪಾಡಿಕೊಳ್ಳುವುದು ಅಗತ್ಯವೆಂದು ಪ್ರಧಾನ ಗುರು ಒತ್ತಿಹೇಳಿದರು. “ಬದುಕುವ ನಮ್ಮ ಹಕ್ಕನ್ನು ಬಿಟ್ಟುಕೊಡದೆ ಜೀವವನ್ನು ನೀಡುವ ಸಮುದಾಯವಾಗಿ ನಾವು  ಉಳಿಯಲು ಬಯಸುತ್ತೇವೆ. ಆದ್ದರಿಂದ ಧೈರ್ಯವಾಗಿರಿ. ಭಯಪಡಬೇಡಿ.”

ತಯ್ಬೆಹ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ತಾವು ವಂ.ಗುರು ಬಶಾರ್ ಅವರಿಂದ ದೊರೆಯುವ ಸಂದೇಶಗಳು ಮತ್ತು ಮಾಹಿತಿಗಳ ಮೂಲಕ ನಿಕಟವಾಗಿ ಗಮನಿಸುತ್ತಿರುವುದಾಗಿಯೂ ಪ್ರಧಾನ ಗುರು ಪಿಜ್ಜಬಲ್ಲಾ ಹೇಳಿದರು. ಕಳೆದ ಜುಲೈನಲ್ಲಿ ಇಸ್ರಾಯೇಲ್ ಹೊರಡಿಸಿದ ಆದೇಶದ ಹಿನ್ನೆಲೆಯಲ್ಲಿಯೇ ಪ್ರಧಾನ ಗುರುಗಳ ಈ ಭೇಟಿ ನಡೆಯಿತು. ಆ ಆದೇಶದ ಮೂಲಕ “ತಯ್ಬೆಹ್ ಮತ್ತು ರಿಮೋನ್ ಪ್ರದೇಶ”ವನ್ನು ಮುಚ್ಚಿದ ಸೈನಿಕ ವಲಯವೆಂದು ಘೋಷಿಸಲಾಗಿದ್ದು,ಇಸ್ರಾಯೇಲರು ಮತ್ತು ವಿದೇಶಿ ಪ್ರಜೆಗಳು ಆ ಪ್ರದೇಶಕ್ಕೆ ಪ್ರವೇಶಿಸುವುದು ಅಥವಾ ಅಲ್ಲಿ ಉಳಿಯುವುದನ್ನು ನಿಷೇಧಿಸಲಾಗಿದೆ.

ನಿರಂತರ ಕ್ರೈಸ್ತ ಸಾನ್ನಿಧ್ಯದ ಅಗತ್ಯ

ನಿಗದಿಪಡಿಸಲಾದ ಈ ಪ್ರದೇಶದಲ್ಲಿ ತಯ್ಬೆಹ್‌ನ ನಿರ್ಮಿತ ಪ್ರದೇಶದ ಒಂದು ಭಾಗ, ಕೃಷಿಭೂಮಿ ಹಾಗೂ ಧಾರ್ಮಿಕ ಮತ್ತು ಐತಿಹಾಸಿಕ ಸ್ಥಳಗಳು ಒಳಗೊಂಡಿವೆ.ಈ ಆದೇಶವು ತೀರ್ಥಯಾತ್ರಿಕರು, ಪ್ರವಾಸಿಗರು, ಪತ್ರಕರ್ತರು, ಸ್ವಯಂಸೇವಕರು ಮತ್ತು ಇತರ ವಿದೇಶಿ ಪ್ರಜೆಗಳಿಗೆ ತಯ್ಬೆಹ್‌ಗೆ ಪ್ರವೇಶಿಸುವ ಸಾಧ್ಯತೆಯ ಬಗ್ಗೆಯೂ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ತಯ್ಬೆಹ್‌ನಲ್ಲಿ ನಡೆಯುತ್ತಿರುವ ಘಟನೆಗಳು ಈಗ ಆ ಪಟ್ಟಣದ ಗಡಿಗಳನ್ನು ಮೀರಿ ಹೆಚ್ಚು ವ್ಯಾಪಕವಾಗಿ ತಿಳಿದುಬರುತ್ತಿವೆ. ಈ ಹಿನ್ನೆಲೆಯಲ್ಲಿ , “ಈ ಅತ್ಯಂತ ಸಂಕೀರ್ಣ ಪರಿಸ್ಥಿತಿಯ ನಡುವೆಯೂ ನಾವು ಕ್ರೈಸ್ತ ಧ್ವನಿಯಾಗಿ ಮುಂದುವರಿಯಲು ನಿಮ್ಮ ಸಾಕ್ಷ್ಯವು ಮಹತ್ವದ್ದಾಗಿದೆ’ ಎಂದು ಪ್ರಧಾನ ಗುರು ಒತ್ತಿಹೇಳಿದರು.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

17 ಆಗಸ್ಟ್ 2026, 14:25