ಹುಡುಕಿ

“ಅಮ್ಮನನ್ನು ನಿರ್ಲಕ್ಷಿಸಿ, ನೋಡೋಣ!” “ಅಮ್ಮನನ್ನು ನಿರ್ಲಕ್ಷಿಸಿ, ನೋಡೋಣ!” 

ಪ್ರಭುವಿನ ದಿನದ ಧ್ಯಾನ: “ಅಮ್ಮನನ್ನು ನಿರ್ಲಕ್ಷಿಸಿ, ನೋಡೋಣ!”

ಸಾಧಾರಣ ಕಾಲದ ಇಪ್ಪತ್ತನೇ ಭಾನುವಾರವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ, ಜೆನ್ನಿ ಕ್ರಾಸ್ಕಾ ಅವರು “ಅಮ್ಮನನ್ನು ನಿರ್ಲಕ್ಷಿಸಿ, ನೋಡೋಣ!” ಎಂಬ ವಿಷಯದ ಕುರಿತು ಚಿಂತನೆಯನ್ನು ಹಂಚಿಕೊಂಡಿದ್ದಾರೆ.

ಲೇಖಕರು: ಜೆನ್ನಿ ಕ್ರಾಸ್ಕಾ

ಶುಭಸಂದೇಶದಲ್ಲಿ, ಅತ್ಯಂತ ಅದ್ಭುತವಾದ ವಿಶ್ವಾಸದ ಉದಾಹರಣೆಗಳಲ್ಲಿ ಒಂದನ್ನು ನಾವು ಇಂದು ಕಾಣುತ್ತೇವೆ. ಒಬ್ಬ ಕಾನಾನ್ಯ ಸ್ತ್ರೀ ಪ್ರಭು ಯೇಸುವಿನ ಬಳಿಗೆ ಬಂದು, ಹತಾಶೆಯಿಂದ ಹೀಗೆ ಮೊರೆಯಿಡುತ್ತಾಳೆ: “ಪ್ರಭುವೇ, ದಾವೀದನ ಪುತ್ರನೇ, ನನ್ನ ಮೇಲೆ ಕರುಣೆ ತೋರಿ! ನನ್ನ ಮಗಳನ್ನು ದೆವ್ವವು ಬಹಳವಾಗಿ ಪೀಡಿಸುತ್ತಿದೆ.” ಅವಳ ಮನವಿಯು ಒಬ್ಬ ತಾಯಿಯ ಹೃದಯದಿಂದ ಹೊರಹೊಮ್ಮುತ್ತದೆ. ಅವಳು ತನಗಾಗಿ ಕೇಳುತ್ತಿಲ್ಲ; ತನ್ನ ಮಗುವಿಗಾಗಿ ಬಿನ್ನವಿಸು ತ್ತಿದ್ದಾಳೆ.

ಆದರೆ ಆರಂಭದಲ್ಲಿ ಅವಳಿಗೆ ದೊರೆಯುವ ಪ್ರತಿಕ್ರಿಯೆ ಉತ್ತೇಜನಕಾರಿಯಾಗಿರುವುದಿಲ್ಲ. ಪ್ರಭು ಯೇಸು ಮೌನವಾಗಿರುವಂತೆ ತೋರುತ್ತದೆ. ಶಿಷ್ಯರು ಅವಳನ್ನು ಕಳುಹಿಸಿಬಿಡುವಂತೆ ಕೇಳಿಕೊಳ್ಳುತ್ತಾರೆ. ಪ್ರಭು ಯೇಸು ಮಾತನಾಡಿದಾಗಲೂ, ಅವರ ಮಾತುಗಳು ಅವಳ ಮುಂದೆ ಒಂದು ಅಡೆತಡೆಯನ್ನು ಇಟ್ಟಂತೆ ತೋರುತ್ತವೆ. ಆದರೂ ಅವಳು ನಿರಾಶೆಗೊಳ್ಳುವುದಿಲ್ಲ. ಅವಳು ಪಟ್ಟುಬಿಡದೆ ಮುಂದುವರಿಯುತ್ತಾಳೆ. ಯಾವುದೇ ಅಡೆತಡೆಗಿಂತ ಪ್ರಭುವಿನ ಕರುಣೆ ದೊಡ್ಡದು ಎಂಬ ವಿಶ್ವಾಸದಲ್ಲಿ ಅವಳು ಸ್ಥಿರಳಾಗಿರುತ್ತಾಳೆ. ಅಂತಿಮವಾಗಿ ಪ್ರಭು ಯೇಸು ಅವಳ ನಂಬಿಕೆಯನ್ನು ಮೆಚ್ಚಿ ಹೀಗೆ ಹೇಳುತ್ತಾರೆ: “ಅಮ್ಮಾ, ನಿನ್ನ ನಂಬಿಕೆ ದೊಡ್ಡದು! ನೀನು ಬಯಸಿದಂತೆ ನಿನಗಾಗಲಿ.” ಅದೇ ಕ್ಷಣದಲ್ಲಿ ಅವಳ ಮಗಳು ಗುಣಹೊಂದುತ್ತಾಳೆ.

ಈ ತಿಂಗಳ ಕೊನೆಯಲ್ಲಿ, ಧರ್ಮಸಭೆಯು ಮತ್ತೊಬ್ಬ ತಾಯಿಯಾದ ಸಂತ ಮೋನಿಕಾರ ಹಬ್ಬವನ್ನು ಆಚರಿಸುತ್ತದೆ. ತನ್ನ ಮಗನ ಪರಿವರ್ತನೆಗಾಗಿ ಪ್ರಾರ್ಥಿಸುವುದನ್ನು ಎಂದಿಗೂ ನಿಲ್ಲಿಸದ ತಾಯಿ ಅವರು. ಮೋನಿಕಾ ತನ್ನ ಮಗ ಅಗಸ್ಟೀನ್ ನಂಬಿಕೆಯಿಂದ ದೂರ ಸರಿಯುವುದನ್ನು, ಸುಳ್ಳು ತತ್ತ್ವಗಳನ್ನು ಸ್ವೀಕರಿಸುವುದನ್ನು ಮತ್ತು ತಾನು ಪ್ರೀತಿಸಿದ ಶುಭಸಂದೇಶದಿಂದ ಬಹಳ ದೂರದ ಜೀವನವನ್ನು ನಡೆಸುವುದನ್ನು ವರ್ಷಗಳ ಕಾಲ ನೋಡಬೇಕಾಯಿತು. ತನ್ನ ಪ್ರೀತಿಯ ಮಗನು ಸತ್ಯದ ಮಾರ್ಗದಿಂದ ದೂರ ಅಲೆಯುತ್ತಿರುವುದನ್ನು ನೋಡುವ ನೋವನ್ನು ಅವರು ಅನುಭವಿಸಿದರು. ಕಾನಾನ್ಯ ಸ್ತ್ರೀಯಂತೆಯೇ, ಮೋನಿಕಾಳಿಗೂ ದೇವರ ಮೌನದಂತೆ ತೋರುವ ಕ್ಷಣಗಳು ಎದುರಾದವು. ವರ್ಷಗಳು ಕಳೆದವು. ಅವರ ಪ್ರಾರ್ಥನೆಗಳಿಗೆ ಉತ್ತರ ದೊರೆಯುತ್ತಿಲ್ಲವೆಂದು ತೋರುತ್ತಿತ್ತು. ಆದರೂ ಅವಳು ತನ್ನ ನಿರೀಕ್ಷೆಯನ್ನು ತ್ಯಜಿಸಲಿಲ್ಲ. ಅವಳ ಕಣ್ಣೀರು ಪ್ರಾರ್ಥನೆಯಾಯಿತು. ಅವಳ ಪ್ರಾರ್ಥನೆಗಳು ನಿರಂತರ ಪ್ರಾರ್ಥನೆಯಾಗಿ ರೂಪುಗೊಂಡವು. ಅವರ ನಿರಂತರ ಪ್ರಾರ್ಥನೆಯು ಕ್ರೈಸ್ತ ಇತಿಹಾಸದ ಅತ್ಯಂತ ಶಕ್ತಿಯುತ ಸಾಕ್ಷ್ಯಗಳಲ್ಲಿ ಒಂದಾಯಿತು.

ಸಂತ ಅಗಸ್ಟೀನರ ಪರಿವರ್ತನೆ ನಮಗೆ ಒಂದು ಮಹತ್ವದ ಸತ್ಯವನ್ನು ನೆನಪಿಸುತ್ತದೆ: ದೇವರು ಅನೇಕ ಬಾರಿ ನಮ್ಮ ಸಮಯಕ್ಕಿಂತ ಭಿನ್ನವಾದ ಸಮಯದಲ್ಲಿ ಕಾರ್ಯನಿರ್ವಹಿಸುತ್ತಾರೆ. ಮೋನಿಕಾಳಿಗೆ ತಕ್ಷಣವೇ ಉತ್ತರ ದೊರೆಯಲಿಲ್ಲ. ಆದರೂ ಅವರು ವಿಶ್ವಾಸದಲ್ಲಿ ಸ್ಥಿರವಾಗಿದ್ದರು. ಕಾಲಕ್ರಮೇಣ, ಅವರ ಮಗ ಕೇವಲ ಕ್ರೈಸ್ತನಾಗುವುದಷ್ಟೇ ಅಲ್ಲದೆ, ಮಹಾನ್ ಸಂತನಾಗಿ, ಧರ್ಮಶಾಸ್ತ್ರಜ್ಞನಾಗಿ ಮತ್ತು ಧರ್ಮಸಭೆಯ ಪಂಡಿತನಾಗಿ ರೂಪುಗೊಂಡನು.

ಈ ಇಬ್ಬರು ತಾಯಂದಿರು ಪ್ರೀತಿಯ ಸ್ವಭಾವದ ಕುರಿತು ಒಂದು ಆಳವಾದ ಸತ್ಯವನ್ನು ನಮಗೆ ತೋರಿಸುತ್ತಾರೆ. ನಿಜವಾದ ಪ್ರೀತಿ ಕಷ್ಟಗಳು ಎದುರಾದಾಗ ಪ್ರೀತಿಪಾತ್ರರನ್ನು ಕೈಬಿಡುವುದಿಲ್ಲ. ಅದು ನಿರೀಕ್ಷಿಸುತ್ತಲೇ ಇರುತ್ತದೆ, ಪ್ರಾರ್ಥಿಸುತ್ತಲೇ ಇರುತ್ತದೆ ಮತ್ತು ದೇವರಲ್ಲಿ ಭರವಸೆಯಿಡುತ್ತಲೇ ಇರುತ್ತದೆ. ಅವರ ಪ್ರೀತಿ ಕನ್ಯಾಮಾತೆ ಮರಿಯಮ್ಮನ ಮಾತೃ ಹೃದಯವನ್ನು ಪ್ರತಿಬಿಂಬಿಸುತ್ತದೆ.

ಕಾನಾದಲ್ಲಿ, ಅಗತ್ಯದಲ್ಲಿದ್ದ ಒಬ್ಬ ಯುವ ದಂಪತಿಯ ಪರವಾಗಿ ಮಾತೆ ಮರಿಯಮ್ಮ ಮಧ್ಯಸ್ಥಿಕೆ ವಹಿಸಿದರು. ಕಲ್ವಾರಿಯಲ್ಲಿ, ತಮ್ಮ ಪುತ್ರನ ಶಿಲುಬೆಯ ಕೆಳಗೆ ಅವರು ನಿಷ್ಠೆಯಿಂದ ನಿಂತರು. ಧರ್ಮಸಭೆಯ ಮಾತೆಯಾಗಿ, ಇಂದಿಗೂ ಅವರು ಅಚಲವಾದ ವಿಶ್ವಾಸದಿಂದ ನಮ್ಮ ಅಗತ್ಯಗಳನ್ನು ಪ್ರಭು ಯೇಸುವಿನ ಮುಂದೆ ಅರ್ಪಿಸುತ್ತಾರೆ.

ಇಂದು ಅನೇಕ ತಂದೆ-ತಾಯಂದಿರು ಮತ್ತು ಅಜ್ಜ-ಅಜ್ಜಿಯರು ಮೋನಿಕಾ ಮತ್ತು ಕಾನಾನ್ಯ ಸ್ತ್ರೀಯರಂತೆಯೇ ಅದೇ ನೋವನ್ನು ತಮ್ಮ ಹೃದಯದಲ್ಲಿ ಹೊತ್ತುಕೊಂಡಿದ್ದಾರೆ. ನಂಬಿಕೆಯಿಂದ ದೂರ ಸರಿದ ಮಕ್ಕಳಿಗಾಗಿ ಅವರು ಪ್ರಾರ್ಥಿಸುತ್ತಿದ್ದಾರೆ. ಧೂಮಪಾನ, ಮಧ್ಯಪಾನ, ಮಾದಕವಸ್ತುಗಳ ವ್ಯಸನದೊಂದಿಗೆ ಹೋರಾಡುತ್ತಿರುವವರಿಗಾಗಿ, ಅನಾರೋಗ್ಯದಿಂದ ಬಳಲುತ್ತಿರುವವರಿಗಾಗಿ, ಅಥವಾ ಗುಣಪಡಿಸಲಾಗದಷ್ಟು ಆಳವಾದ ಗಾಯಗಳನ್ನು ಹೊತ್ತಿರುವವರಿಗಾಗಿ ಅವರು ಪ್ರಾರ್ಥಿಸುತ್ತಿದ್ದಾರೆ.

ಈ ಶುಭಸಂದೇಶವು ನೋವಿನಿಂದ ಪ್ರಾರ್ಥಿಸುವ ಪ್ರತಿಯೊಬ್ಬರಿಗೂ ಧೈರ್ಯವನ್ನು ನೀಡುತ್ತದೆ. ದೇವರು ಪ್ರತಿಯೊಂದು ಪ್ರಾರ್ಥನೆಯನ್ನು ಕೇಳುತ್ತಾರೆ. ಪ್ರೀತಿಯಿಂದ ಸುರಿಯುವ ಯಾವುದೇ ಕಣ್ಣೀರು ವ್ಯರ್ಥವಾಗುವುದಿಲ್ಲ. ನಂಬಿಕೆಯಿಂದ ಸಲ್ಲಿಸುವ ಯಾವುದೇ ಮನವಿಯೂ ದೇವರ ಗಮನದಿಂದ ತಪ್ಪಿಹೋಗುವುದಿಲ್ಲ.

ಆದುದರಿಂದ, ಪ್ರಿಯ ಸಹೋದರ ಸಹೋದರಿಯರೇ, ನಮ್ಮ ಪ್ರಾರ್ಥನೆಗಳಿಗೆ ತಕ್ಷಣ ಉತ್ತರ ದೊರೆಯದಿದ್ದರೂ ನಿರಾಶರಾಗದಿರೋಣ. ಕಾನಾನ್ಯ ಸ್ತ್ರೀಯ ನಂಬಿಕೆಯನ್ನು ಮತ್ತು ಸಂತ ಮೋನಿಕಾರ ನಿರಂತರ ಪ್ರಾರ್ಥನೆಯನ್ನು ನೆನಪಿಸಿಕೊಳ್ಳೋಣ. ನಮ್ಮ ಕುಟುಂಬಗಳಿಗಾಗಿ, ನಮ್ಮ ಮಕ್ಕಳಿಗಾಗಿ ಮತ್ತು ನಮ್ಮ ಪ್ರೀತಿಪಾತ್ರರಿಗಾಗಿ ವಿಶ್ವಾಸದಿಂದ ಪ್ರಾರ್ಥಿಸುತ್ತಲೇ ಇರೋಣ.

ಕುಟುಂಬಕ್ಕಾಗಿ ಬೇಡಿದ ಕನ್ಯಾಮತೆ ಮರಿಯಮ್ಮನವರ ಮಾರ್ಗದರ್ಶನ ನಮಗೆ ನೆರವಾಗಲಿ. ತಮ್ಮ ಪ್ರಾರ್ಥನೆಯಲ್ಲಿ ಸ್ಥಿರವಾಗಿರುವಂತಹ ಸಂತ ಮೋನಿಕಾರ  ಆದರ್ಶ ನಮಗೆ ಸಹಾಯಮಾಡಲಿ. ಪ್ರಭು ನಮ್ಮ ಪ್ರಾರ್ಥನೆಗಳನ್ನು ಸ್ವೀಕರಿಸಿ, ತಮ್ಮ ಸಮಯದಲ್ಲಿ ತಮ್ಮ ಕೃಪೆಯನುಸಾರ ಉತ್ತರಿಸಲಿ. ಆಮೆನ್.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

15 ಆಗಸ್ಟ್ 2026, 16:09