SIGNIS ವಿಶ್ವ ಕಾಂಗ್ರೆಸ್ 2026: ಶಾಂತಿಯ ಸೇವೆಯಲ್ಲಿ ಸಂವಹನ
ಲೇಖಕರು: ಸಹೋದರಿ ಏಂಜೆಲ್ಲಾ ರ್ವೆಝೌಲಾ, ಸಹೋದರಿ ಅರ್ನೆಸ್ಟಿನಾ ಪ್ಯಾಟ್ರಿಕ್ ಲಾಸ್ವೇ, ಸಹೋದರಿ ಮಿಶೆಲ್ ಎನ್‌ಜೇರಿ, ಸಹೋದರಿ ಫ್ರಾನ್ಸಿನ್-ಮೇರಿ ಕೂಪರ್ – ಕಿಗಾಲಿ, ರುವಾಂಡಾ
SIGNIS ವಿಶ್ವ ಕಾಂಗ್ರೆಸ್‌ನ ಮೊದಲ ದಿನವಾದ ಆಗಸ್ಟ್ 4ರ ಮಧ್ಯಾಹ್ನ, ಇಂದಿನ ಕಥೋಲಿಕ ಸಂವಹನ ಕ್ಷೇತ್ರ ಎದುರಿಸುತ್ತಿರುವ ಕೆಲವು ಪ್ರಮುಖ ಸವಾಲುಗಳ ಕುರಿತು ಹಲವು ಸಂವಾದಗಳು ನಡೆದವು. ಸಿನೊಡಾಲಿಟಿ, ಸೃಷ್ಟಿಯ ಸಂರಕ್ಷಣೆ, ಡಿಜಿಟಲ್ ಜಗತ್ತಿನಲ್ಲಿ ಮಕ್ಕಳ ರಕ್ಷಣೆ, ಶಾಂತಿ ಪತ್ರಿಕೋದ್ಯಮ ಹಾಗೂ ಕೃತಕ ಬುದ್ಧಿಮತ್ತೆಯಿಂದ ದೊರೆಯುವ ಅವಕಾಶಗಳು ಮತ್ತು ಎದುರಾಗುವ ಸವಾಲುಗಳ ಕುರಿತು ಭಾಷಣಕಾರರು ಚಿಂತನೆ ನಡೆಸಿದರು. ಮಾನವ ಘನತೆ ಮತ್ತು ಸಾಮಾನ್ಯ ಒಳಿತನ್ನು ಉತ್ತೇಜಿಸುವ ಜವಾಬ್ದಾರಿ ಸಂವಹನಕಾರರ ಮೇಲಿದೆ ಎಂಬುದನ್ನು ಎಲ್ಲರೂ ಒತ್ತಿಹೇಳಿದರು.
ಪ್ರಭಾವಶಾಲಿಗಳಿಗಿಂತ ಮೊದಲು ಶಿಷ್ಯರಾಗೋಣ: ಕೃತಕ ಬುದ್ಧಿಮತ್ತೆಯ ಸವಾಲು
ಕಾಂಗ್ರೆಸ್‌ನ ಮೊದಲ ಸಮಗ್ರ ಅಧಿವೇಶನದಲ್ಲಿ ಮಹಾಧರ್ಮಾಧ್ಯಕ್ಷ ಫಾರ್ಚುನಾಟಸ್ ನ್ವಾಚುಕ್ವು ಮಾತನಾಡಿ, ಆಫ್ರಿಕಾ ಮೊದಲ ಬಾರಿಗೆ SIGNIS ವಿಶ್ವ ಕಾಂಗ್ರೆಸ್‌ಗೆ ಆತಿಥ್ಯ ವಹಿಸುತ್ತಿರುವುದು ಆಫ್ರಿಕಾದ ಧರ್ಮಸಭೆಯ ಪ್ರಬುದ್ಧತೆಯನ್ನು ತೋರಿಸುತ್ತದೆ ಹಾಗೂ ಜಾಗತಿಕ ಮಟ್ಟದಲ್ಲಿ ಅದರ ಧ್ವನಿಗೂ ಕಿವಿಗೊಡಬೇಕಾದ ಅಗತ್ಯವನ್ನು ಎತ್ತಿ ತೋರಿಸುತ್ತದೆ ಎಂದರು. ಆಫ್ರಿಕಾದ ಧರ್ಮಸಭೆಯನ್ನು ಇನ್ನು ಮುಂದೆ “ತೊಟ್ಟಿಲಿನಲ್ಲಿರುವ ಮಗುವಿನಂತೆ” ಪರಿಗಣಿಸಬಾರದು ಎಂದು ಅವರು ಹೇಳಿದರು.
“ಕಥೋಲಿಕ ಸಂವಹನಕಾರರು ಆನ್‌ಲೈನ್ ಅಂಕಿಅಂಶಗಳು, ಜನರ ಗಮನ ಅಥವಾ ಸಾಮಾಜಿಕ ಮಾಧ್ಯಮದ ಪ್ರಭಾವವನ್ನು ಬೆನ್ನಟ್ಟುವುದಕ್ಕಿಂತ ಮೊದಲು ತಾವು ಕ್ರಿಸ್ತನ ಶಿಷ್ಯರು ಎಂಬ ಗುರುತಿಗೆ ಆದ್ಯತೆ ನೀಡಬೇಕು” ಎಂದು ಮಹಾಧರ್ಮಾಧ್ಯಕ್ಷರು ಒತ್ತಿಹೇಳಿದರು.
ಸಾಂಸ್ಕೃತಿಕ ಸಾಮರಸ್ಯ ಎಂದರೆ ವಿಭಿನ್ನ ಸಂಸ್ಕೃತಿಗಳನ್ನು ಒಂದೇ ಮಾದರಿಗೆ ಒಳಪಡಿಸುವುದಲ್ಲ; ಬದಲಾಗಿ ದೇವರು ನೀಡಿರುವ ವೈವಿಧ್ಯತೆಯನ್ನು ಸಂಭ್ರಮಿಸುವುದಾಗಿದೆ ಎಂದರು. ಜ್ಞಾನೋಕ್ತಿ 31:8ನ್ನು ಉಲ್ಲೇಖಿಸಿದ ಅವರು, ವಾಣಿಜ್ಯ ಉದ್ದೇಶದ ತಂತ್ರಾಂಶ ವ್ಯವಸ್ಥೆಗಳು ಕಡೆಗಣಿಸುವ ಅಂಚಿನಲ್ಲಿರುವವರು, ನಿರ್ಗತಿಕರು ಮತ್ತು ದೌರ್ಜನ್ಯಕ್ಕೆ ಒಳಗಾದವರ ಧ್ವನಿಯನ್ನು ಜಗತ್ತಿಗೆ ತಲುಪಿಸುವ ಪ್ರವಾದನಾತ್ಮಕ ಹೊಣೆಗಾರಿಕೆ ಕಥೋಲಿಕ ಪತ್ರಕರ್ತರ ಮೇಲಿದೆ ಎಂದು ನೆನಪಿಸಿದರು.
ಸಂವಹನ ವಿಭಾಗದ ಧರ್ಮಶಾಸ್ತ್ರೀಯ-ಪಾಲನಾ ನಿರ್ದೇಶಕಿ ಡಾ. ನತಾಶಾ ಗೊವೆಕಾರ್ ಅವರು ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರ 60ನೇ ವಿಶ್ವ ಸಾಮಾಜಿಕ ಸಂವಹನ ದಿನದ ಸಂದೇಶ ಹಾಗೂ ಮ್ಯಾಗ್ನಿಫಿಕಾ ಹ್ಯುಮಾನಿಟಾಸ್ ವಿಶ್ವಪತ್ರಿಕೆಯ ಕುರಿತು ಮಾತನಾಡಿದರು. ಕೃತಕ ಬುದ್ಧಿಮತ್ತೆಯ ಪರಿಣಾಮವನ್ನು ವಿವರಿಸಿದ ಅವರು, “ಕೃತಕ ಬುದ್ಧಿಮತ್ತೆಯ ಮೂಲಭೂತ ಸವಾಲು ತಾಂತ್ರಿಕವಾದುದಲ್ಲ, ಬದಲಾಗಿ ಮಾನವನಿಗೆ ಸಂಬಂಧಿಸಿದ್ದಾಗಿದೆ” ಎಂದು ಒತ್ತಿಹೇಳಿದರು.
ಬೃಹತ್ ಭಾಷಾ ಮಾದರಿಗಳು ಮಾನವನ ಭಾಷೆ ಮತ್ತು ಸಹಜ ಮಾತಿನ ಮೇಲೆಯೂ ಹೆಚ್ಚು ಪ್ರಭಾವ ಬೀರುತ್ತಿದ್ದು, ಇದರಿಂದ ಸ್ವತಂತ್ರವಾಗಿ ಚಿಂತಿಸುವ ಸಾಮರ್ಥ್ಯ ಕುಂದುವ ಅಪಾಯವಿದೆ ಎಂದು ಅವರು ಎಚ್ಚರಿಸಿದರು. ಆದ್ದರಿಂದ ಆಗಾಗ “ಪರದೆಗಳಿಂದ ದೂರವಿರಲು” ಭಾಗವಹಿಸಿದವರಿಗೆ ಕರೆ ನೀಡಿದ ಅವರು, ನಿಜವಾದ ಮಾನವೀಯ ಬೆಳವಣಿಗೆಗೆ ಸಮಯ, ಪರಿಶ್ರಮ ಮತ್ತು ನೈಜ ಮಾನವ ಸಂಬಂಧಗಳು ಅಗತ್ಯವೆಂದು ಹೇಳಿದರು. ಡಿಜಿಟಲ್ ವೇದಿಕೆಗಳನ್ನು ಏಕಾಂಗಿತನ ಮತ್ತು ಲಾಭಕೇಂದ್ರಿತ ಬಳಕೆಯನ್ನು ಉತ್ತೇಜಿಸುವ ವ್ಯವಸ್ಥೆಗಳ ಬದಲಾಗಿ, ಪರಸ್ಪರ ವಿಶ್ವಾಸವನ್ನು ಬೆಳೆಸುವ ಸಾರ್ವಜನಿಕ ಸ್ಥಳಗಳಂತೆ ರೂಪಿಸಬೇಕೆಂದೂ ಅವರು ಕರೆ ನೀಡಿದರು. “ದಕ್ಷತೆಯೇ ಮೌಲ್ಯವನ್ನು ಅಳೆಯುವ ಅಂತಿಮ ಮಾನದಂಡವಾದಾಗ, ಮನುಷ್ಯನು ತನ್ನನ್ನು ಸಂಬಂಧ ಮತ್ತು ಸಹಭಾಗಿತ್ವಕ್ಕೆ ಕರೆಯಲ್ಪಟ್ಟ ವ್ಯಕ್ತಿಯೆಂದು ಕಾಣುವುದಕ್ಕಿಂತ, ನಿರಂತರವಾಗಿ ಸುಧಾರಿಸಬೇಕಾದ ಯೋಜನೆಯಂತೆ ಕಾಣುವ ಅಪಾಯವಿದೆ” ಎಂದು ಅವರು ಹೇಳಿದರು.
“ಎಷ್ಟೇ ಅತ್ಯಾಧುನಿಕವಾದ ಗಣಕ ವ್ಯವಸ್ಥೆಯಾದರೂ ತನ್ನನ್ನೇ ಅರ್ಪಿಸುವ ಹೃದಯವನ್ನಾಗಲಿ, ಒಳಿತು ಮತ್ತು ಕೆಡುಕಿನ ನಡುವಿನ ವ್ಯತ್ಯಾಸವನ್ನು ಅರಿಯುವ ಮನಸ್ಸಾಕ್ಷಿಯನ್ನಾಗಲಿ ಸೃಷ್ಟಿಸಲು ಸಾಧ್ಯವಿಲ್ಲ” ಎಂದರು.
ಸಿನೊಡಲ್ ಸಂವಹನ ಮತ್ತು ಸೃಷ್ಟಿಯ ಸಂರಕ್ಷಣೆ
ಮೊದಲ ಸಂವಾದವು “ಸಿನೊಡಾಲಿಟಿ: ಶಾಂತಿಯುತ ಸಹಬಾಳ್ವೆ ಮತ್ತು ಸಾಮಾಜಿಕ ಅಭಿವೃದ್ಧಿಯ ಮಾದರಿ” ಎಂಬ ವಿಷಯದ ಮೇಲೆ ಕೇಂದ್ರೀಕೃತವಾಗಿತ್ತು. ಸಿನೊಡಲ್ ಸಂವಹನದ ಕುರಿತು ಮಾತನಾಡಿದ ಸಹೋದರಿ ಮೇರಿ-ಕೋಲ್ಬೆ ಝಮೊರಾ, OSF, ಸಿನೊಡಲ್ ಸಂವಹನವೆಂದರೆ ಕೇವಲ ಪರಿಪೂರ್ಣ ವಿಷಯವನ್ನು ಜನರಿಗೆ ತಲುಪಿಸುವುದಲ್ಲ; ಅದಕ್ಕೆ ಸಿನೊಡಲ್ ಮನೋಭಾವವುಳ್ಳ ಸಂವಹನಕಾರರ ಅಗತ್ಯವಿದೆ ಎಂದರು. “ಸಿನೊಡಲ್ ಸಂವಹನಕಾರರು ಕ್ರಿಸ್ತನಲ್ಲಿ ವೈಯಕ್ತಿಕ ವಿಮೋಚನೆಯನ್ನು ಅನುಭವಿಸಿದವರು, ಆ ವಿಮೋಚನೆಯನ್ನು ತಮ್ಮ ಜೀವನದಲ್ಲಿ ಸಕ್ರಿಯವಾಗಿ ಜೀವಿಸುವವರು ಮತ್ತು ಕೇವಲ ಕಾರ್ಯತಂತ್ರದ ಸಂದೇಶಗಳ ಮೇಲೆ ಅವಲಂಬಿತರಾಗದೆ ದೇವರೊಂದಿಗೆ ನೇರ ಸಂವಾದದಲ್ಲಿ ತಮ್ಮ ಸಂವಹನವನ್ನು ರೂಪಿಸುವವರಾಗಿದ್ದಾರೆ” ಎಂದು ಅವರು ಹೇಳಿದರು. ಪರಿಸರ ಸಂವಹನ ಮತ್ತು ಸೃಷ್ಟಿಯ ಸಂರಕ್ಷಣೆ ಕುರಿತು ಮಾತನಾಡಿದ ಜಾಂಬಿಯಾದ ಎಮರ್ಜಿಂಗ್ ಫಾರ್ಮರ್ಸ್ ಇನಿಶಿಯೇಟಿವ್‌ನ ಯೋಜನಾ ವ್ಯವಸ್ಥಾಪಕಿ ಸಹೋದರಿ ಜೂನ್ಜಾ ಸಿ. ಮ್ವಾಂಗಾನಿ, ಕೃಷಿಯನ್ನು ಪರಿಸರ ಪರಿವರ್ತನೆಯ ಸಂದೇಶವನ್ನು ಸಾರುವ ಮಾರ್ಗವಾಗಿ ಪ್ರಸ್ತುತಪಡಿಸಿದರು.
“ನಾವು ತ್ಯಾಜ್ಯವನ್ನು ಉಪಯುಕ್ತ ಸಂಪನ್ಮೂಲಗಳಾಗಿ ಪರಿವರ್ತಿಸುತ್ತೇವೆ ಹಾಗೂ ಹವಾಮಾನ ಬದಲಾವಣೆಯನ್ನು ಎದುರಿಸಬಲ್ಲ ಸಮಗ್ರ ಕೃಷಿಯನ್ನು ನಿರ್ಮಿಸುತ್ತೇವೆ. ನಮ್ಮ ಜಾಲವು ಯುವಜನರು ಮತ್ತು ಮಹಿಳೆಯರಿಗೆ ಮಾರ್ಗದರ್ಶನ ನೀಡುತ್ತದೆ. ಮಹಿಳೆಯರಿಗೆ ತಮ್ಮದೇ ಕಥೆಗಳನ್ನು ಹೇಳಲು ಅವಕಾಶ ಮತ್ತು ಸಬಲೀಕರಣ ನೀಡಬೇಕು ಎಂದು ನಾನು ನಂಬುತ್ತೇನೆ” ಎಂದರು. ಅಸ್ಸಿಸಿಯ ಲೌದಾತೊ ಸಿ ಕೇಂದ್ರದ ಅಧ್ಯಕ್ಷ ತೋಮಸ್ ಇನ್ಸುವಾ ಅವರು, ಸೃಷ್ಟಿಯ ಸಂರಕ್ಷಣೆಗಾಗಿ ವಿಶ್ವ ಪ್ರಾರ್ಥನಾ ದಿನ ಮತ್ತು ಸೃಷ್ಟಿಯ ಕಾಲವು ಪರಿಸರ ಕುರಿತ ಸಂವಾದವನ್ನು ವ್ಯಾಪಕವಾಗಿ ಜನರಿಗೆ ತಲುಪಿಸಲು ಕಥೋಲಿಕ ಸಂವಹನಕಾರರಿಗೆ ಪ್ರಮುಖ ಅವಕಾಶಗಳಾಗಬೇಕು ಎಂದು ಹೇಳಿದರು. ಸೃಷ್ಟಿಯ ವಿಶ್ವ ದಿನಕ್ಕಾಗಿ ಜಗದ್ಗುರುಗಳು ನೀಡುವ ವಾರ್ಷಿಕ ಸಂದೇಶಕ್ಕೆ ಇನ್ನಷ್ಟು ಪ್ರಾಮುಖ್ಯತೆ ದೊರೆಯಬೇಕು ಎಂದ ಅವರು, ಸೃಷ್ಟಿಯ ದಿನವನ್ನು ಪಾಲನಾ ಕಾರ್ಯಕ್ರಮಗಳಲ್ಲಿ ಅಳವಡಿಸಿಕೊಂಡಿರುವ ಫಿಲಿಪ್ಪೀನ್ಸ್‌ನ ಧರ್ಮಸಭೆಯನ್ನು ಉದಾಹರಣೆಯಾಗಿ ಉಲ್ಲೇಖಿಸಿದರು.
ಜುಬಿಲಿ ವರ್ಷದ ‘ಭರವಸೆ’ ಎಂಬ ವಿಷಯವನ್ನು ಉಲ್ಲೇಖಿಸಿದ ಲೌದಾತೊ ಸಿ ಚಳವಳಿಯ ಲ್ಯಾಟಿನ್ ಅಮೆರಿಕಾ ಸಂವಹನ ವ್ಯವಸ್ಥಾಪಕಿ ಲೆಟಿಸಿಯಾ ಫ್ಲೊರೆನ್ಸಿಯೊ, “ಭರವಸೆಯು ಕ್ರಿಯೆಯಲ್ಲಿ ವ್ಯಕ್ತವಾಗಬೇಕು” ಎಂದರು. ಧೈರ್ಯ, ಜವಾಬ್ದಾರಿ ಮತ್ತು ಉತ್ತರದಾಯಿತ್ವದೊಂದಿಗೆ ಮಾಹಿತಿಯನ್ನು ಒದಗಿಸಬೇಕು ಎಂದು ಅವರು ಹೇಳಿದರು. “ಸೃಜನಾತ್ಮಕ ಸಂವಹನವು ಜನರನ್ನು ಸಾಮಾಜಿಕ ಪರಿವರ್ತನೆಯ ಪ್ರಮುಖ ಪಾತ್ರಧಾರಿಗಳಾಗಿ ಗುರುತಿಸುತ್ತದೆ. ನಮ್ಮ ಸಾಮಾನ್ಯ ಮನೆಯ ಸಂರಕ್ಷಣೆಯೇ ಶುಭಸಂದೇಶವನ್ನು ಜೀವನದಲ್ಲಿ ಅನುಷ್ಠಾನಗೊಳಿಸುವುದಾಗಿದೆ” ಎಂದು ಅವರು ಹೇಳಿದರು.
ಮಕ್ಕಳ ರಕ್ಷಣೆ ಮತ್ತು ಶಾಂತಿಯ ಉತ್ತೇಜನ
ಮತ್ತೊಂದು ಸಂವಾದದಲ್ಲಿ ಸಹೋದರಿ ಪೇಶನ್ಸ್ ಶಿನೊಂಡೊ, RSC, ಸಹೋದರಿ ಬಬಿತಾ ಅಬ್ರಹಾಂ ವಲಿಯಪರಂಬಿಲ್, FMM, ಪ್ರೊ. ಜೀನ್-ಪಾಲ್ ನಿಯಿಗೇನಾ ಮತ್ತು ವಂದನೀಯ ಗುರು ಲಾರೆನ್ಸ್ ಅಡು-ಗ್ಯಾಮ್ಫಿ ಭಾಗವಹಿಸಿ, ಡಿಜಿಟಲ್ ಜಗತ್ತಿನಲ್ಲಿ ಮಕ್ಕಳು ಮತ್ತು ಯುವಜನರನ್ನು ರಕ್ಷಿಸುವ ತುರ್ತು ಅಗತ್ಯವನ್ನು ಎತ್ತಿ ತೋರಿಸಿದರು. ಆನ್‌ಲೈನ್ ಶೋಷಣೆ ಮತ್ತು ಮಕ್ಕಳನ್ನು ಮೋಸದಿಂದ ವಿಶ್ವಾಸಕ್ಕೆ ತೆಗೆದುಕೊಂಡು ದುರುಪಯೋಗಪಡಿಸಿಕೊಳ್ಳುವ ಕೃತ್ಯಗಳು ಮಾನವ ಕಳ್ಳಸಾಗಣೆಗೆ ದಾರಿಯಾಗುತ್ತಿವೆ ಎಂದು ಅವರು ಎಚ್ಚರಿಸಿದರು. ಬಲವಾದ ಡಿಜಿಟಲ್ ಸಾಕ್ಷರತೆ, ಮಕ್ಕಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡ ತಂತ್ರಜ್ಞಾನ ವಿನ್ಯಾಸ ಹಾಗೂ ತಂತ್ರಜ್ಞಾನ ಸಂಸ್ಥೆಗಳಿಂದ ಹೆಚ್ಚಿನ ಉತ್ತರದಾಯಿತ್ವ ಅಗತ್ಯವೆಂದು ಕರೆ ನೀಡಿದರು. ಮಕ್ಕಳ ರಕ್ಷಣೆ ಕುಟುಂಬಗಳು, ಶಿಕ್ಷಕರು, ಸರ್ಕಾರಗಳು ಮತ್ತು ವಿಶ್ವಾಸ ಸಮುದಾಯಗಳ ಸಾಮೂಹಿಕ ಜವಾಬ್ದಾರಿಯಾಗಿದೆ ಎಂದ ಅವರು, ವಿಮರ್ಶಾತ್ಮಕ ಚಿಂತನೆಯನ್ನು ಬೆಳೆಸಬೇಕು ಹಾಗೂ ಡಿಜಿಟಲ್ ತಂತ್ರಜ್ಞಾನಗಳು ಮಾನವ ಘನತೆಯನ್ನು ಕುಗ್ಗಿಸುವ ಬದಲು ಅದಕ್ಕೆ ಸೇವೆ ಸಲ್ಲಿಸುವಂತೆ ನೋಡಿಕೊಳ್ಳಬೇಕು ಎಂದು ಒತ್ತಿಹೇಳಿದರು.
“ಸಮಾನತೆ, ಲಿಂಗ ಸಮಾನತೆ ಮತ್ತು ಸಬಲೀಕರಣಕ್ಕಾಗಿ ಡಿಜಿಟಲ್ ಸಂವಹನ” ಎಂಬ ಸಂವಾದದಲ್ಲಿ CORAT ಆಫ್ರಿಕಾದ ಜಾನ್ ಮಕೋಖಾ ಮಾತನಾಡಿ, ಡಿಜಿಟಲ್ ಮಾಧ್ಯಮದ ಮೂಲಕ ನಡೆಯುವ ಲೈಂಗಿಕ ಬೆದರಿಕೆ ಮತ್ತು ಸುಲಿಗೆ, ವಿಶ್ವದಾದ್ಯಂತ ಮಕ್ಕಳು ಮತ್ತು ಯುವಜನರನ್ನು ಬಾಧಿಸುತ್ತಿರುವ ವೇಗವಾಗಿ ಹೆಚ್ಚುತ್ತಿರುವ ತಂತ್ರಜ್ಞಾನ ಆಧಾರಿತ ಲೈಂಗಿಕ ಹಿಂಸೆಯ ರೂಪಗಳಲ್ಲಿ ಒಂದಾಗಿದೆ ಎಂದು ಎಚ್ಚರಿಸಿದರು. ಡಿಜಿಟಲ್ ತಂತ್ರಜ್ಞಾನಗಳು ಶಿಕ್ಷಣ, ಸಂವಹನ ಮತ್ತು ಸಾಮಾಜಿಕ ಭಾಗವಹಿಸುವಿಕೆಗೆ ಹಿಂದೆಂದೂ ಕಾಣದ ಅವಕಾಶಗಳನ್ನು ನೀಡಿದ್ದರೂ, ಅಂತರ್ಜಾಲದ ಮೂಲಕ ನಡೆಯುವ ಶೋಷಣೆಗೆ ಮಕ್ಕಳು ಒಳಗಾಗುವ ಅಪಾಯವನ್ನೂ ಹೆಚ್ಚಿಸಿವೆ. ಆದ್ದರಿಂದ ಡಿಜಿಟಲ್ ಜಗತ್ತಿನಲ್ಲಿ ಮಕ್ಕಳನ್ನು ಉತ್ತಮವಾಗಿ ರಕ್ಷಿಸಲು ಸ್ಪಷ್ಟ ನಿಯಮಗಳು ಮತ್ತು ಮಾರ್ಗಸೂಚಿಗಳು ಅಗತ್ಯವೆಂದು ಅವರು ಹೇಳಿದರು.
“ಆಫ್ರಿಕಾದ ಕಥೋಲಿಕ ಮಾಧ್ಯಮಗಳ ಉಳಿವಿನ ಮಾದರಿಯಾಗಿ ಶಾಂತಿ ಪತ್ರಿಕೋದ್ಯಮ” ಎಂಬ ವಿಷಯದ ಕುರಿತು ಮಾತನಾಡಿದ ಡಾ. ಜೋಸೆಫಾಟ್ ಮೊಹಾಂಜಿ, ಟಾಂಜಾನಿಯಾವನ್ನು “ಶಾಂತಿಯ ದ್ವೀಪ”ವನ್ನಾಗಿಸಿದ ಪರಂಪರೆ ಮತ್ತು ಮ್ವಾಲಿಮು ಜೂಲಿಯಸ್ ಕಂಬರಾಗೆ ನ್ಯೆರೆರೆ ಅವರ ದೃಷ್ಟಿಕೋನವನ್ನು ನೆನಪಿಸಿದರು. ಕಥೋಲಿಕ ಮಾಧ್ಯಮಗಳು ಕೇವಲ ಸಂಘರ್ಷಗಳ ಕುರಿತು ವರದಿ ಮಾಡುವುದಕ್ಕೆ ಸೀಮಿತವಾಗದೆ, ಶಾಂತಿಯನ್ನು ಸಕ್ರಿಯವಾಗಿ ನಿರ್ಮಿಸಬೇಕು, ಪೋಷಿಸಬೇಕು ಮತ್ತು ಬಲಪಡಿಸಬೇಕು ಎಂದರು. ಸಮುದಾಯಗಳ ಧ್ವನಿಯನ್ನು ಜನರಿಗೆ ತಲುಪಿಸಲು ಮತ್ತು ಸಮಸ್ಯೆಗಳಿಗೆ ಪರಿಹಾರಗಳನ್ನು ಕೇಂದ್ರೀಕರಿಸಿ ವರದಿ ಮಾಡಲು ಶಾಂತಿ ಪತ್ರಿಕೋದ್ಯಮಕ್ಕೆ ಸಮರ್ಪಕ ಸಂಪನ್ಮೂಲಗಳ ಅಗತ್ಯವಿದೆ ಎಂದೂ ಅವರು ತಿಳಿಸಿದರು.
ಕೇಂದ್ರೀಯ ವಿಷಯವಾಗಿ ಮಾನವ ಘನತೆ
ದಿನವಿಡೀ ನಡೆದ ಚರ್ಚೆಗಳು ತಾಂತ್ರಿಕ ಪ್ರಗತಿಯೊಂದಿಗೆ ಸಾಗುವಾಗಲೂ ಮಾನವ ಘನತೆಯನ್ನು ಕಾಪಾಡುವ ಅಗತ್ಯವನ್ನು ಪ್ರಮುಖವಾಗಿ ಒತ್ತಿಹೇಳಿದವು. ಅತ್ಯಂತ ದುರ್ಬಲರಾಗಿರುವ ಮಕ್ಕಳಿಗೆ ವಿಶೇಷ ರಕ್ಷಣೆ ಅಗತ್ಯವಿದ್ದು, ಕಥೋಲಿಕ ಸಂವಹನಕಾರರು ಭರವಸೆ, ಶಾಂತಿ, ಸೃಷ್ಟಿಯ ಸಂರಕ್ಷಣೆ ಮತ್ತು ನೈಜ ಮಾನವ ಅಭಿವೃದ್ಧಿಯನ್ನು ಉತ್ತೇಜಿಸುವ ಕರೆಯನ್ನು ಹೊಂದಿದ್ದಾರೆ.
ಭಾಗವಹಿಸಿದವರ ಪ್ರಶ್ನೆಗಳೊಂದಿಗೆ ಅಧಿವೇಶನಗಳು ಮುಕ್ತಾಯಗೊಂಡವು. ಈ ಮೂಲಕ SIGNIS ವಿಶ್ವ ಕಾಂಗ್ರೆಸ್‌ನ ವೈಶಿಷ್ಟ್ಯವಾಗಿರುವ ಸಂವಾದದ ಮನೋಭಾವ ಮುಂದುವರಿಯಿತು. ಕಿಗಾಲಿಯಲ್ಲಿ ನಡೆಯುತ್ತಿರುವ ಈ ವಿಶ್ವ ಕಾಂಗ್ರೆಸ್ ಆಗಸ್ಟ್ 8ರವರೆಗೆ ಮುಂದುವರಿಯಲಿದೆ.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).