ಹುಡುಕಿ

ದಕ್ಷಿಣ ಕೊರಿಯಾದ ಸೋಲ್‌ನ ಸೊಗಾಂಗ್ ವಿಶ್ವವಿದ್ಯಾಲಯದಲ್ಲಿ 2026ರ ಆಗಸ್ಟ್ 4–5ರಂದು ನಡೆದ ಪ್ರಥಮ ಕನ್ಫ್ಯೂಷಿಯನ್–ಕ್ರೈಸ್ತ ಸಂವಾದ ದಕ್ಷಿಣ ಕೊರಿಯಾದ ಸೋಲ್‌ನ ಸೊಗಾಂಗ್ ವಿಶ್ವವಿದ್ಯಾಲಯದಲ್ಲಿ 2026ರ ಆಗಸ್ಟ್ 4–5ರಂದು ನಡೆದ ಪ್ರಥಮ ಕನ್ಫ್ಯೂಷಿಯನ್–ಕ್ರೈಸ್ತ ಸಂವಾದ 

ಕನ್ಫ್ಯೂಷಿಯನ್–ಕ್ರೈಸ್ತ ಸಂವಾದದ ಅಂತಿಮ ಹೇಳಿಕೆ: ಸಾಮರಸ್ಯದ ವಿಶ್ವ ನಿರ್ಮಾಣಕ್ಕೆ ಕರೆ

ದಕ್ಷಿಣ ಕೊರಿಯಾದಸೋಲ್‌ನಲ್ಲಿ ನಡೆದ ಪ್ರಥಮ ಕನ್ಫ್ಯೂಷಿಯನ್–ಕ್ರೈಸ್ತ ಸಂವಾದದ ಅಂತಿಮ ಹೇಳಿಕೆಯಲ್ಲಿ, ಉಭಯ ಪರಂಪರೆಗಳ ನಡುವಿನ ಸ್ನೇಹ ಮತ್ತು ಸಂವಾದವನ್ನು ಮತ್ತಷ್ಟು ಗಾಢಗೊಳಿಸಲು ಹಾಗೂ ಸಮಸ್ತ ಮಾನವಕುಲ ಮತ್ತು ಇಡೀ ಜೀವಸಮುದಾಯದ ಏಳಿಗೆಗಾಗಿ ಒಟ್ಟಾಗಿ ಶ್ರಮಿಸಲು ಭಾಗವಹಿಸಿದವರು ಬದ್ಧತೆಯನ್ನು ವ್ಯಕ್ತಪಡಿಸಿದ್ದಾರೆ.

ವ್ಯಾಟಿಕನ್ ವರದಿ

“ಪ್ರಾಮಾಣಿಕವಾದ ಮುಖಾಮುಖಿಯು ನಮ್ಮ ನಡುವಿನ ಭಿನ್ನತೆಗಳನ್ನು ಅಳಿಸುವುದಿಲ್ಲ; ಬದಲಾಗಿ ಅದು ಪರಸ್ಪರ ತಿಳುವಳಿಕೆಯನ್ನು ಗಾಢಗೊಳಿಸುತ್ತದೆ, ವಿಶ್ವಾಸವನ್ನು ಬಲಪಡಿಸುತ್ತದೆ ಮತ್ತು ನಮ್ಮೆಲ್ಲರನ್ನೂ ಸಮೃದ್ಧಗೊಳಿಸುತ್ತದೆ” ಎಂದು ದಕ್ಷಿಣ ಕೊರಿಯಾದಸೋಲ್‌ನ ಸೊಗಾಂಗ್ ವಿಶ್ವವಿದ್ಯಾಲಯದಲ್ಲಿ ಆಗಸ್ಟ್ 4ರಿಂದ 5ರವರೆಗೆ ನಡೆದ ಪ್ರಥಮ ಕನ್ಫ್ಯೂಷಿಯನ್–ಕ್ರೈಸ್ತ ಸಂವಾದದ ಅಂತಿಮ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಅಂತರ್‌ಧರ್ಮೀಯ ಸಂವಾದ ವಿಭಾಗವು ಕೊರಿಯಾದ ಕಥೋಲಿಕ ಧರ್ಮಾಧ್ಯಕ್ಷರ ಸಮ್ಮೇಳನ, ಕೊರಿಯಾದ ಕನ್ಫ್ಯೂಷಿಯನ್ ಅಕಾಡೆಮಿ (ಸುಂಗ್‌ಕ್ಯುಂಕ್ವಾನ್) ಮತ್ತು ಸೊಗಾಂಗ್ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಈ ಸಂವಾದವನ್ನು ಆಯೋಜಿಸಿತ್ತು. ಏಷ್ಯಾ, ಯುರೋಪ್ ಮತ್ತು ಉತ್ತರ ಅಮೆರಿಕದಿಂದ ವಿದ್ವಾಂಸರು, ಧಾರ್ಮಿಕ ಮುಖಂಡರು, ಶಿಕ್ಷಣತಜ್ಞರು ಹಾಗೂ ವಿವಿಧ ಕ್ಷೇತ್ರಗಳ ಪ್ರತಿನಿಧಿಗಳು ಇದರಲ್ಲಿ ಭಾಗವಹಿಸಿದ್ದರು.

“ಹೊಸ ಆಕಾಶ, ಹೊಸ ಭೂಮಿ ಮತ್ತು ಮಹಾ ಸಾಮರಸ್ಯ/ಮಹಾ ಏಕತೆ: ಆದರ್ಶ ಸಮಾಜ ನಿರ್ಮಾಣಕ್ಕಾಗಿ ಕನ್ಫ್ಯೂಷಿಯನ್–ಕ್ರೈಸ್ತ ಸಂವಾದ” ಎಂಬ ವಿಷಯದ ಕುರಿತು ಅವರು ಚಿಂತನ-ಮಂಥನ ನಡೆಸಿದರು.

ಮಾನವಕುಲದ ಆಶೋತ್ತರಗಳಿಗೆ ಧ್ವನಿ

ಅಂತರ್‌ಧರ್ಮೀಯ ಸಂವಾದ ವಿಭಾಗದ ಮುಖ್ಯಸ್ಥರಾದ ಪ್ರಧಾನ ಗುರು ಜಾರ್ಜ್ ಜೇಕಬ್ ಕೂವಕಾಡ್ ಹಾಗೂ ವಿಭಾಗದ ಕಾರ್ಯದರ್ಶಿ ಮಾನ್ಸಿನೋರ್ ಇಂದೂನಿಲ್ ಜನಕರತ್ನೆ ಕೊಡಿತುವಕ್ಕು ಕಂಕಣಮಲಗೆ ಅವರು ಪ್ರಮುಖ ಭಾಷಣಕಾರರಲ್ಲಿ ಸೇರಿದ್ದರು. ಪ್ರಧಾನ ಗುರು ಕೂವಕಾಡ್ ಅವರು ಸಂವಾದದ ಮಹತ್ವವನ್ನು ವಿವರಿಸುತ್ತಾ, ಮೂಲಭೂತ ಭಿನ್ನತೆಗಳನ್ನು ಗೌರವಿಸುವುದರ ಜೊತೆಗೆ ಒಂದು ಪರಂಪರೆಯು ಮತ್ತೊಂದು ಪರಂಪರೆಯ ದೃಷ್ಟಿಕೋನವನ್ನು ಸಮೃದ್ಧಗೊಳಿಸಲು ಮತ್ತು ವಿಸ್ತರಿಸಲು ಅವಕಾಶ ನೀಡುವುದರಲ್ಲಿಯೇ ನಿಜವಾದ ಸಂವಾದದ ಮೌಲ್ಯ ಅಡಗಿದೆ ಎಂದು ಹೇಳಿದರು.

ಕ್ರೈಸ್ತ ದೃಷ್ಟಿಕೋನ ಮತ್ತು ಕನ್ಫ್ಯೂಷಿಯನ್ ಆದರ್ಶವು ಮಾನವಕುಲದ ಅತ್ಯಂತ ಆಳವಾದ ಆಶಯಗಳಲ್ಲಿ ಒಂದಕ್ಕೆ ಧ್ವನಿಯಾಗಿವೆ ಎಂದು ಅವರು ತಿಳಿಸಿದರು. ಅಂದರೆ, ನಮ್ಮ ಸಾಮೂಹಿಕ ಜೀವನವು ನಿಜವಾಗಿಯೂ ಒಳ್ಳೆಯದು ಮತ್ತು ಸುಂದರವಾದ ಮಾರ್ಗದೊಂದಿಗೆ, ನೈತಿಕ ನ್ಯಾಯ, ಶಾಂತಿ ಮತ್ತು ಸಾಮರಸ್ಯದೊಂದಿಗೆ ಸಾಗಬೇಕು ಎಂಬ ಆಶಯವಾಗಿದೆ. ಸಂವಾದದ ಮಹತ್ವದ ಕುರಿತು ಪ್ರಧಾನ ಗುರುಗಳ ಅಭಿಪ್ರಾಯವನ್ನು ಪ್ರತಿಧ್ವನಿಸಿದ ಮಾನ್ಸಿನೋರ್ಕಂಕಣಮಲಗೆ ಅವರು, ಸಮಾಜ ಎದುರಿಸುತ್ತಿರುವ ಅನೇಕ ಸವಾಲುಗಳನ್ನು ಕ್ರೈಸ್ತರು ಮತ್ತು ಕನ್ಫ್ಯೂಷಿಯನ್ನರು ಒಟ್ಟಾಗಿ ಎದುರಿಸಲು ಸಾಧ್ಯವಾಗಲಿ ಎಂಬ ಆಶಯ ವ್ಯಕ್ತಪಡಿಸಿದರು.

ಆಗಸ್ಟ್ 5ರಂದು ಬಿಡುಗಡೆಗೊಂಡ ಅಂತಿಮ ಹೇಳಿಕೆಯ ಪ್ರಕಾರ, “ಸ್ನೇಹ, ಆತಿಥ್ಯ ಮತ್ತು ಪರಸ್ಪರ ಗೌರವದ ಮನೋಭಾವದಲ್ಲಿ” ನಡೆದ ಸಂವಾದಗಳ ಮೂಲಕ, “ನ್ಯಾಯ, ಗೌರವ, ಕರುಣೆ, ಶಾಂತಿ ಮತ್ತು ಸಾಮರಸ್ಯದಿಂದ ಕೂಡಿದ ವಿಶ್ವವನ್ನು ನಿರ್ಮಿಸುವ ಸಾಮಾನ್ಯ ಕರೆಯನ್ನು” ಭಾಗವಹಿಸಿದವರು ಗುರುತಿಸಿದರು. ವಿಭಿನ್ನ ಪರಂಪರೆಗಳಲ್ಲಿ ಬೇರುಬಿಟ್ಟಿದ್ದರೂ, ಕ್ರೈಸ್ತರು ಮತ್ತು ಕನ್ಫ್ಯೂಷಿಯನ್ನರು “ವಿಭಜನೆಗಳನ್ನು ಮೀರಿ, ಪ್ರತಿಯೊಬ್ಬರೂ ಘನತೆಯಿಂದ ಬದುಕುವ ಮತ್ತು ಪರಸ್ಪರ ಕಾಳಜಿ ವಹಿಸುವ ಸಮುದಾಯವನ್ನು ನಿರ್ಮಿಸುವ ಸಾಮಾನ್ಯ ಆಶಯವನ್ನು” ಹೊಂದಿರುವುದನ್ನು ಕಂಡುಕೊಂಡರು.

ಹಂಚಿಕೊಂಡ ಮೌಲ್ಯಗಳು

ಧಾರ್ಮಿಕ ಮತ್ತು ತಾತ್ವಿಕ ನೆಲೆಗಳು ವಿಭಿನ್ನವಾಗಿದ್ದರೂ ಹಾಗೂ ಮಾನವನ ಪರಿಪೂರ್ಣತೆ ಮತ್ತು ಸಮಾಜದ ಕುರಿತ ದೃಷ್ಟಿಕೋನಗಳಲ್ಲಿ ವ್ಯತ್ಯಾಸಗಳಿದ್ದರೂ, ಎರಡೂ ಪರಂಪರೆಗಳು ಹಂಚಿಕೊಂಡಿರುವ ಹಲವು ಮೌಲ್ಯಗಳು ಮತ್ತು ನಂಬಿಕೆಗಳನ್ನು ಅಂತಿಮ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. “ವೈಯಕ್ತಿಕ ಪರಿವರ್ತನೆ, ನೈತಿಕ ಜೀವನ ಮತ್ತು ಇತರರ ಮೇಲಿನ ಕಾಳಜಿ ಆರೋಗ್ಯಕರ ಕುಟುಂಬಗಳು, ಸಮುದಾಯಗಳು ಮತ್ತು ಸಮಾಜಗಳ ಅಡಿಪಾಯವಾಗಿವೆ”; “ನ್ಯಾಯಯುತ ಮತ್ತು ಶಾಂತಿಯುತ ಸಮಾಜವು ಪ್ರಾಮಾಣಿಕತೆ, ವಿನಯ, ಸೇವೆ ಮತ್ತು ಸಾಮಾನ್ಯ ಒಳಿತಿನ ಕಾಳಜಿಯನ್ನು ಆಧರಿಸಿದ ನಾಯಕತ್ವವನ್ನು ಅವಲಂಬಿಸಿದೆ”; “ದುರ್ಬಲರ, ಮುಂದಿನ ಪೀಳಿಗೆಯ ಮತ್ತು ನಮ್ಮ ಸಾಮಾನ್ಯ ಮನೆಯ ಕಾಳಜಿಯು ನೈತಿಕ ಹಾಗೂ ಆಧ್ಯಾತ್ಮಿಕ ಜವಾಬ್ದಾರಿಯಾಗಿದೆ” ಎಂಬುದನ್ನು ಎರಡೂ ಪರಂಪರೆಗಳು ಒಪ್ಪಿಕೊಂಡಿವೆ.

ಅದೇ ರೀತಿ, “ಉತ್ತಮ ವಿಶ್ವದ ಭರವಸೆಯು ಇಂದಿನ ಸಂಕಷ್ಟಗಳು ಮತ್ತು ಅಪೂರ್ಣತೆಗಳ ನಡುವೆಯೂ ಒಟ್ಟಾಗಿ ಕಾರ್ಯನಿರ್ವಹಿಸುವಂತೆ ನಮ್ಮನ್ನು ಕರೆಯುತ್ತದೆ” ಹಾಗೂ ಎಲ್ಲ ತಾಂತ್ರಿಕ ಪ್ರಗತಿಯೂ “ಮಾನವ ಘನತೆ ಮತ್ತು ನೈತಿಕ ಮೌಲ್ಯಗಳನ್ನು ಸಕ್ರಿಯವಾಗಿ ವೃದ್ಧಿಸಬೇಕು” ಎಂದು ಹೇಳಿಕೆ ತಿಳಿಸಿದೆ.

ಇಂದಿನ ಜಾಗತಿಕ ಸವಾಲುಗಳು

ಸಾಮಾಜಿಕ ವಿಭಜನೆ, ಏಕಾಂಗಿತನ, ಬಲವಂತದ ವಲಸೆ, ಹೆಚ್ಚುತ್ತಿರುವ ಅಸಮಾನತೆ, ಪರಿಸರ ನಾಶ, ಯುದ್ಧ, ತಾರತಮ್ಯ ಹಾಗೂ ಕೃತಕ ಬುದ್ಧಿಮತ್ತೆಯ ವೇಗದ ಬೆಳವಣಿಗೆ ಸೇರಿದಂತೆ ಹಲವು ಜಾಗತಿಕ ಸಮಸ್ಯೆಗಳ ಕುರಿತು ಭಾಗವಹಿಸಿದವರು ಚರ್ಚಿಸಿದರು. “ಈ ಸವಾಲುಗಳನ್ನು ಕೇವಲ ತಂತ್ರಜ್ಞಾನ ಅಥವಾ ಆರ್ಥಿಕತೆಯಿಂದ ಮಾತ್ರ ಎದುರಿಸಲು ಸಾಧ್ಯವಿಲ್ಲ. ಅವುಗಳಿಗೆ ನೈತಿಕ ವಿವೇಕ, ಆಧ್ಯಾತ್ಮಿಕ ಆಳ, ಸಮುದಾಯ ಪ್ರಜ್ಞೆ ಹಾಗೂ ಪ್ರತಿಯೊಬ್ಬ ಮಾನವನ ಘನತೆ ಮತ್ತು ಸಾಮಾನ್ಯ ಒಳಿತಿನ ಕುರಿತು ನವೀಕೃತ ಬದ್ಧತೆ ಅಗತ್ಯವಾಗಿದೆ” ಎಂಬ ನಿರ್ಣಯಕ್ಕೆ ಅವರು ಬಂದರು.

ಸಂವಾದ ಮತ್ತು ಸಹಕಾರ ಮುಂದುವರಿಸಲು ಬದ್ಧತೆ

ಸಂಶೋಧನೆ, ಶಿಕ್ಷಣ, ಸಂವಾದ ಮತ್ತು ಪ್ರಾಯೋಗಿಕ ಉಪಕ್ರಮಗಳ ಮೂಲಕ ಕ್ರೈಸ್ತ–ಕನ್ಫ್ಯೂಷಿಯನ್ ಸಹಕಾರವನ್ನು ನಿರಂತರವಾಗಿ ಮುಂದುವರಿಸುವಂತೆ ಅಂತಿಮ ಹೇಳಿಕೆ ಕರೆ ನೀಡಿದೆ. ಯುವಜನರನ್ನು ಈ ಪ್ರಯತ್ನಗಳಲ್ಲಿ ತೊಡಗಿಸಿಕೊಳ್ಳುವುದು ಹಾಗೂ ಉದಯೋನ್ಮುಖ ತಂತ್ರಜ್ಞಾನಗಳಿಂದ ಉಂಟಾಗುವ ನೈತಿಕ ಪರಿಣಾಮಗಳನ್ನು ಒಟ್ಟಾಗಿ ಅಧ್ಯಯನ ಮಾಡುವ ಅಗತ್ಯವನ್ನೂ ಅದು ಒತ್ತಿಹೇಳಿದೆ.

ಕನ್ಫ್ಯೂಷಿಯನ್ನರು ಮತ್ತು ಕ್ರೈಸ್ತರ ನಡುವಿನ “ಸ್ನೇಹ ಮತ್ತು ಸಂವಾದವನ್ನು ಮತ್ತಷ್ಟು ಗಾಢಗೊಳಿಸಲು”, “ಕರುಣೆ, ನ್ಯಾಯ, ಸಾಮರಸ್ಯ ಮತ್ತು ಹಂಚಿಕೊಂಡ ಜವಾಬ್ದಾರಿಯನ್ನು ಆಧರಿಸಿದ ಸಮಾಜಗಳನ್ನು ಉತ್ತೇಜಿಸಲು” ಹಾಗೂ “ಮಾನವಕುಲ ಮತ್ತು ಇಡೀ ಜೀವಸಮುದಾಯದ ಏಳಿಗೆಗಾಗಿ ಒಟ್ಟಾಗಿ ಶ್ರಮಿಸಲು” ಭಾಗವಹಿಸಿದವರು ತಮ್ಮ ಬದ್ಧತೆಯನ್ನು ನವೀಕರಿಸಿದರು.

ಪ್ರತಿಯೊಬ್ಬ ವ್ಯಕ್ತಿ ಮತ್ತು ಪ್ರತಿಯೊಂದು ಸಮುದಾಯವು ಘನತೆ, ಶಾಂತಿ, ಭರವಸೆ ಮತ್ತು ಸಾಮರಸ್ಯದಿಂದ ಬದುಕಬಹುದಾದ ವಿಶ್ವವನ್ನು ನಿರ್ಮಿಸುವ ಕಾರ್ಯವನ್ನು ಮುಂದುವರಿಸುವುದಾಗಿ ಭಾಗವಹಿಸಿದವರು ಪ್ರತಿಜ್ಞೆ ಮಾಡುವುದರೊಂದಿಗೆ ಅಂತಿಮ ಹೇಳಿಕೆ ಮುಕ್ತಾಯಗೊಂಡಿದೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

05 ಆಗಸ್ಟ್ 2026, 17:36