ಮರಣದ ಎದುರು ಜೀವಕ್ಕೆ ಸಾಕ್ಷಿ-ಸಂತ ಮ್ಯಾಕ್ಸಿಮಿಲಿಯನ್ ಕೋಲ್ಬೆ
ಲೇಖಕರು: ಕ್ರಿಸ್ಯಾನೆ ವೈಲಾಂಕೋರ್ಟ್ ಮರ್ಫಿ, ಕಥೋಲಿಕ್ ಜನಜಾಗೃತಿ ಒಕ್ಕೂಟದ ಕಾರ್ಯನಿರ್ವಾಹಕ ನಿರ್ದೇಶಕಿ
ಈ ತಿಂಗಳು ಧರ್ಮಸಭೆಯು ಸಂತ ಮ್ಯಾಕ್ಸಿಮಿಲಿಯನ್ ಕೋಲ್ಬೆ, OFM Conv. ಅವರ ಹಬ್ಬವನ್ನು ಆಗಸ್ಟ್ 14ರಂದು ಆಚರಿಸಿತು. ಇವರು ನಿರ್ಮಲ ಮಾತೆಯ ಮೇಲೆ ಅಪಾರ ಭಕ್ತಿಯನ್ನು ಹೊಂದಿದ್ದ ಪೋಲಿಷ್ ಧರ್ಮಗುರು. 1941ರಲ್ಲಿ ನಾಜಿ ಜರ್ಮನಿಯ ಸೆರೆಶಿಬಿರದಲ್ಲಿ ಅವರನ್ನು ಬಂಧಿಸಿ, ಅಂತಿಮವಾಗಿ ಹತ್ಯೆ ಮಾಡಲಾಯಿತು.
ವಿಶೇಷವಾಗಿ ಈ ವರ್ಷ, ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಅವರ ಮಧ್ಯಸ್ಥಿಕೆ ಅತ್ಯಂತ ಅಗತ್ಯವಾಗಿದೆ ಎಂದು ನಾನು ನಂಬುತ್ತೇನೆ. ಅಲ್ಲಿ ಮರಣದಂಡನೆಗಳ ಸಂಖ್ಯೆ ಹೆಚ್ಚುತ್ತಿರುವ ಪ್ರವೃತ್ತಿ ಮುಂದುವರಿದಿದ್ದು, 2025ರಲ್ಲಿ ದಾಖಲೆಯ 47 ಮರಣದಂಡನೆಗಳು ಜಾರಿಗೊಂಡಿದ್ದವು. 2026ರಲ್ಲಿ ಈಗಾಗಲೇ 23 ಮಂದಿಗೆ ಮರಣದಂಡನೆ ಜಾರಿಗೊಳಿಸಲಾಗಿದೆ. ಅವರಲ್ಲಿ ಮೂವರು ಪುರುಷರಿಗೆ ಸಂತ ಕೋಲ್ಬೆಯವರ ಹಬ್ಬದ ಹಿಂದಿನ ದಿನವೇ ಮರಣದಂಡನೆ ಜಾರಿಗೊಳಿಸಲಾಯಿತು.
ನಾಜಿ ಮರಣಶಿಬಿರವಾದ ಆಶ್ವಿಟ್ಜ್‌ನಿಂದ ಬಂದ ಸಾಕ್ಷ್ಯಗಳ ಮೂಲಕ, ಕೈದಿಗಳ ಮತ್ತು ಜೀವಪರ ಚಳವಳಿಯ ಪೋಷಕ ಸಂತನಾದ ಕೋಲ್ಬೆಯವರು ಮರಣಕ್ಕಿಂತ ಜೀವದ ಶಕ್ತಿಯಲ್ಲಿ ನಿಜವಾಗಿಯೂ ನಂಬಿಕೆ ಇಟ್ಟಿದ್ದರು ಎಂಬುದನ್ನು ನಾವು ಕಾಣಬಹುದು.
ಅಮೆರಿಕಾ ಸಂಯುಕ್ತ ಸಂಸ್ಥಾನದ ಹಲವು ರಾಜ್ಯಗಳು ನ್ಯಾಯದ ಹೆಸರಿನಲ್ಲಿ ಇನ್ನೂ ವ್ಯಕ್ತಿಗಳಿಗೆ ಮರಣದಂಡನೆ ವಿಧಿಸುತ್ತಿರುವ ಸಂದರ್ಭದಲ್ಲಿ—ಮರಣಕ್ಕೆ ಪ್ರತಿಯಾಗಿ ಮರಣ ನೀಡುವ, ಅಂತ್ಯವಿಲ್ಲದ ಹಾನಿಯ ಚಕ್ರವನ್ನು ಮುಂದುವರಿಸುತ್ತಿರುವ ಸಂದರ್ಭದಲ್ಲಿ—ಸಂತ ಕೋಲ್ಬೆಯವರು ಜೀವದಲ್ಲಿ ಬೇರೂರಿದ ನ್ಯಾಯದ ದೃಷ್ಟಿಕೋನವನ್ನು ಹುಡುಕುತ್ತಾ ಮುಂದುವರಿಯಲು ನಮಗೆ ಸ್ಫೂರ್ತಿ ನೀಡುತ್ತಾರೆ. ಕೋಲ್ಬೆಯವರು ನಾಜಿ ಆಡಳಿತದ ವಿರುದ್ಧ ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಿದ್ದಕ್ಕಾಗಿ ಬಂಧಿಸಲ್ಪಟ್ಟರು. ಅವರು ಪ್ರಕಟಿಸುತ್ತಿದ್ದ ಜನಪ್ರಿಯ ಪತ್ರಿಕೆ ಮತ್ತು ನಡೆಸುತ್ತಿದ್ದ ರೇಡಿಯೋ ಕೇಂದ್ರದ ಮೂಲಕ ನಾಜಿ ಆಡಳಿತದ ವಿರುದ್ಧ ತಮ್ಮ ಧ್ವನಿಯನ್ನು ಎತ್ತಿದ್ದರು. ಜುಲೈ ತಿಂಗಳಲ್ಲಿ ಕೋಲ್ಬೆಯವರು ಇದ್ದ ಬ್ಯಾರಕ್‌ನಿಂದ ಕೆಲವು ಕೈದಿಗಳು ತಪ್ಪಿಸಿಕೊಂಡರು. ಅದಕ್ಕೆ ಶಿಕ್ಷೆಯಾಗಿ, ಕಮಾಂಡರ್ ಹತ್ತು ಮಂದಿಯನ್ನು ಆಯ್ಕೆ ಮಾಡಿ ಹಸಿವಿನಿಂದ ಸಾಯುವಂತೆ ಉಪವಾಸ ಕೊಠಡಿಗೆ ಕಳುಹಿಸಲು ಆದೇಶಿಸಿದನು. ಆ ಹತ್ತು ಮಂದಿಯಲ್ಲಿ ಫ್ರಾನ್ಸಿಸ್ಜೆಕ್ ಗಜೋವ್ನಿಚೆಕ್ ಎಂಬ ಯುವಕನ ಹೆಸರನ್ನು ಆಯ್ಕೆ ಮಾಡಿದಾಗ, ಅವನು ತನ್ನ ಪತ್ನಿ ಮತ್ತು ಮಕ್ಕಳಿಗಾಗಿ ಗೋಗರೆದು ಆಳಲು ಪ್ರಾರಂಭಿಸಿದಾಗ ಕೋಲ್ಬೆಯವರು ಮುಂದೆ ಬಂದು, ಅವನ ಬದಲಿಗೆ ತಾನು ಹೋಗಲು ಅನುಮತಿ ಕೇಳಿದರು. ಮರಣದ ಎದುರು ಕೋಲ್ಬೆಯವರು ಮಾಡಿದ ಈ ತ್ಯಾಗವು ಜೀವದ ಮೇಲಿನ ಅವರ ಅಚಲ ಬದ್ಧತೆಯನ್ನು ತೋರಿಸಿತು—ಈ ಯುವ ತಂದೆಯ ಭವಿಷ್ಯಕ್ಕೂ ಮತ್ತು ಅವನ ಮಕ್ಕಳ ಭವಿಷ್ಯಕ್ಕೂ ಅವರು ಮೌಲ್ಯ ನೀಡಿದರು.
ಆ ಬದ್ಧತೆ ಅಲ್ಲಿಯೇ ಕೊನೆಗೊಳ್ಳಲಿಲ್ಲ. ಕೋಲ್ಬೆಯವರು ಮತ್ತು ಅವರೊಂದಿಗೆ ಶಿಕ್ಷೆಗೆ ಒಳಗಾದ ಇತರ ಒಂಬತ್ತು ಕೈದಿಗಳು ಕತ್ತಲೆಯ ಕೊಠಡಿಯಲ್ಲಿ ಹಸಿವಿನಿಂದ ಸಾವಿನತ್ತ ಸಾಗುತ್ತಿದ್ದಾಗಲೂ, ಅವರು ಅವರಿಗೆ ಬದುಕುವುದನ್ನು ಮುಂದುವರಿಸಲು ಕಾರಣವನ್ನು ನೀಡಿದರು. ಆಶ್ವಿಟ್ಜ್‌ನ ಸಾಕ್ಷ್ಯಗಳ ಪ್ರಕಾರ, ಕೋಲ್ಬೆಯವರು ಆ ಪುರುಷರನ್ನು ಪ್ರಾರ್ಥನೆ ಮತ್ತು ಭಜನೆಗಳಲ್ಲಿ ಮುನ್ನಡೆಸಿದರು. ಅವರು ಅವರ ಪಾಪಸ್ವೀಕಾರವನ್ನೂ ಕೇಳಿದರು. ಜೀವದ ಮೇಲಿನ ಈ ಭರವಸೆ ಮರಣಶಿಬಿರದಲ್ಲಿದ್ದ ಇತರ ಕೈದಿಗಳಿಗೂ ವಿಸ್ತರಿಸಿತು.
ನಾಜಿಗಳು ತಮ್ಮ ಅಧಿಕಾರ ಮತ್ತು ಕೈದಿಗಳ ಜೀವಗಳ ಮೇಲಿನ ನಿಯಂತ್ರಣವನ್ನು ಪ್ರದರ್ಶಿಸಲು ಕಠಿಣ ಶಿಕ್ಷೆಯನ್ನು ವಿಧಿಸಿದ್ದರು. ಆದರೆ ಕಿರುಚಾಟಗಳು ಮತ್ತು ನೋವಿನ ಅಳಲುಗಳ ಬದಲಾಗಿ, ಶಿಬಿರದಲ್ಲಿದ್ದ ಕೈದಿಗಳು ಆ ಕೊಠಡಿಯಿಂದ ಭರವಸೆಯ ಧ್ವನಿಗಳನ್ನು ಕೇಳಿದರು. ಎರಡು ವಾರಗಳಿಗೂ ಹೆಚ್ಚು ಕಾಲ ಯಾವುದೇ ಆಹಾರ ಅಥವಾ ನೀರಿಲ್ಲದೆ ಕಳೆದ ನಂತರ, ಕೋಲ್ಬೆಯವರು ಮತ್ತು ಇನ್ನೂ ಮೂವರು ಕೈದಿಗಳು ಮಾತ್ರ ಜೀವಂತವಾಗಿದ್ದರು. ಅಂತಿಮವಾಗಿ ಅವರಿಗೆ ಕಾರ್ಬೋಲಿಕ್ ಆಮ್ಲದ ವಿಷಕಾರಿ ಇಂಜೆಕ್ಷನ್ ಮೂಲಕ ಮರಣದಂಡನೆ ಜಾರಿಗೊಳಿಸಲಾಯಿತು. ಕೊನೆಯ ಕ್ಷಣದವರೆಗೂ ಕೋಲ್ಬೆಯವರು ತಮ್ಮ ಘನತೆಯನ್ನು ಕಾಪಾಡಿಕೊಂಡರು. ಮಾರಕ ಇಂಜೆಕ್ಷನ್ ನೀಡಲು ನರ್ಸ್‌ಗೆ ತಮ್ಮ ಕೈಯನ್ನು ಎತ್ತಿಕೊಟ್ಟರು. ಫ್ರಾನ್ಸಿಸ್ಜೆಕ್ ಗಜೋವ್ನಿಚೆಕ್ ಆ ಹಸಿವಿನ ಕೊಠಡಿಯ ಮರಣದ ಅಪಾಯದಿಂದ ಮಾತ್ರವಲ್ಲ, ಆಶ್ವಿಟ್ಜ್‌ನಿಂದಲೂ ಮತ್ತು ಸಂಪೂರ್ಣ ಯುದ್ಧದಿಂದಲೂ ಬದುಕುಳಿದರು.
ನಲವತ್ತೊಂದು ವರ್ಷಗಳ ನಂತರ, ಪೋಲಿಷ್ ಪೂಜ್ಯ ಜಗದ್ಗುರು ಎರಡನೆ ಜಾನ್ ಪಾಲ್ ಅವರು ಸಂತ ಮ್ಯಾಕ್ಸಿಮಿಲಿಯನ್ ಕೋಲ್ಬೆಯವರನ್ನು ಸಂತರೆಂದು ಘೋಷಿಸಿದಾಗ, ಗಜೋವ್ನಿಚೆಕ್ ಸಂತ ಪೇತ್ರನ ಚೌಕದಲ್ಲಿ ಉಪಸ್ಥಿತರಿದ್ದರು. ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಪ್ರತಿ ಬಾರಿ ಯಾರಿಗಾದರೂ ಮರಣದಂಡನೆ ಜಾರಿಗೊಳಿಸಿದಾಗ—ಈ ವರ್ಷ ಈಗಾಗಲೇ ಜೀವ ಕಳೆದುಕೊಂಡಿರುವ ಆ 23 ಮಂದಿಯಂತೆ—ಇಷ್ಟೊಂದು ಮರಣದ ನಡುವೆ ಜೀವವನ್ನು ಉಳಿಸಲು ಸಂತ ಕೋಲ್ಬೆಯವರು ತೋರಿದ ದೃಢನಿಶ್ಚಯ ನನಗೆ ನೆನಪಾಗುತ್ತದೆ.
ನಮ್ಮ ಕಾಲದಲ್ಲಿಯೂ ಅದೇ ರೀತಿಯಲ್ಲಿ ಜೀವವನ್ನು ಕಾಪಾಡಲು, ವಿಶೇಷವಾಗಿ ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಮರಣದಂಡನೆಗೆ ವಿರೋಧವಾಗಿ ನಿಲ್ಲುವ ನಮ್ಮ ಪ್ರಯತ್ನದಲ್ಲಿ, ಸಂತ ಕೋಲ್ಬೆಯವರು ನಮಗಾಗಿ ಮಧ್ಯಸ್ಥಿಕೆ ವಹಿಸಲಿ ಎಂದು ನಾನು ಪ್ರಾರ್ಥಿಸುತ್ತೇನೆ.
ಸಂತ ಮ್ಯಾಕ್ಸಿಮಿಲಿಯನ್ ಕೋಲ್ಬೆಯವರೇ, ನಮಗಾಗಿ ಪ್ರಾರ್ಥಿಸಿರಿ.
* ಕ್ರಿಸ್ಯಾನೆ ವೈಲಾಂಕೋರ್ಟ್ ಮರ್ಫಿ ಅವರು ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿನ ರಾಷ್ಟ್ರೀಯ ಸಂಸ್ಥೆಯಾದ Catholic Mobilizing Network ನ ಕಾರ್ಯನಿರ್ವಾಹಕ ನಿರ್ದೇಶಕಿ. ಈ ಸಂಸ್ಥೆಯು ಮರಣದಂಡನೆಯನ್ನು ಕೊನೆಗೊಳಿಸಲು, ಕಥೋಲಿಕ ಮೌಲ್ಯಗಳಿಗೆ ಹೊಂದಿಕೆಯಾಗುವ ನ್ಯಾಯಪರ ಪರಿಹಾರಗಳನ್ನು ಮುಂದುವರಿಸಲು ಮತ್ತು ಪುನಶ್ಚೇತನಾತ್ಮಕ ನ್ಯಾಯದ ವಿಧಾನಗಳ ಮೂಲಕ ಗುಣಮುಖತೆಯನ್ನು ಉತ್ತೇಜಿಸಲು ಕಥೋಲಿಕರು ಹಾಗೂ ಸದುದ್ದೇಶದ ಜನರನ್ನು ಒಗ್ಗೂಡಿಸುತ್ತದೆ.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).