‘ಫ್ರಾನ್ಸಿಸ್ ಪ್ರಾಂಗಣದಲ್ಲಿ’ ಜೀವನವೇ “ಶುಭಸಂದೇಶ”
ಲೇಖಕರು:ಮಾರಯಾ ಮಿಲ್ವಿಯಾ ಮೊರ್ಚಿಯೇನೋ
ಮರದ ಕೊಂಬೆಗಳಂತೆ ಚಾಚಿರುವ ಸಂತ ಫ್ರಾನ್ಸಿಸ್ ಅವರ ಕೈಗಳೊಂದಿಗೆ, ಬೀಜದಿಂದ ಮೊಳಕೆಯೊಡೆದು ಬೆಳೆಯುತ್ತಿರುವ ಒಂದು ಮರ.
2026ರ ಫ್ರಾನ್ಸಿಸ್ ಪ್ರಾಂಗಣದ 12ನೇ ಆವೃತ್ತಿಗೆ ಆಯ್ಕೆ ಮಾಡಿರುವ ಚಿತ್ರವಿದು. ಸೆಪ್ಟೆಂಬರ್ 10ರಿಂದ 13ರವರೆಗೆ ಹಾಗೂ ಸೆಪ್ಟೆಂಬರ್ 17ರಿಂದ 20ರವರೆಗೆ “ಒಂದು ಶುಭಸಂದೇಶ” ಎಂಬ ಧ್ಯೇಯದೊಂದಿಗೆ ಈ ಕಾರ್ಯಕ್ರಮವು ಅಸ್ಸಿಸಿಗೆ ಮರಳಲಿದೆ. ಇಲ್ಲಿ ಶುಭಸಂದೇಶವೆಂದರೆ ಜೀವನ.
ಅಸ್ಸಿಸಿಯ ಸಂತ ಫ್ರಾನ್ಸಿಸ್ ಅವರ ಮರಣದ 800ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಈ ವರ್ಷದಲ್ಲಿ, ಪವಿತ್ರ ಮಠದ ಗುರುಗಳು ಪ್ರೋತ್ಸಾಹಿಸುತ್ತಿರುವ ಈ ಕಾರ್ಯಕ್ರಮವು ಪ್ರತಿಯೊಬ್ಬ ವ್ಯಕ್ತಿಗೂ ಅತ್ಯಂತ ನಿಕಟವಾಗಿ ಸಂಬಂಧಿಸಿದ ವಿಷಯದಿಂದ ಆರಂಭಿಸಿ ವರ್ತಮಾನವನ್ನು ಎದುರಿಸಲು ಪ್ರಯತ್ನಿಸುತ್ತದೆ: ಜೀವನದ ಗುಣಮಟ್ಟ ಮತ್ತು ಅದನ್ನು ರೂಪಿಸುವ ಸಂಬಂಧಗಳ ಗುಣಮಟ್ಟ.
ವಿಶ್ವಾಸಿಗಳು ಮತ್ತು ವಿಶ್ವಾಸವಿಲ್ಲದವರ ನಡುವೆ ಸಂವಾದವನ್ನು ಉತ್ತೇಜಿಸಲು ಆಗಿನ ಸಂಸ್ಕೃತಿ ಕುರಿತ ಪಾಂಟಿಫಿಕಲ್ ಮಂಡಳಿಯು ಪ್ರಾರಂಭಿಸಿದ್ದ *ಅನ್ಯಜನರ ಪ್ರಾಂಗಣ”ದ ಅನುಭವದಿಂದ ಹುಟ್ಟಿಕೊಂಡ “ಫ್ರಾನ್ಸಿಸ್ ಪ್ರಾಂಗಣ”ವು ಕ್ರಮೇಣ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ.
ವಿದ್ವಾಂಸರು, ಕಲಾವಿದರು, ಸಾಂಸ್ಥಿಕ ಕ್ಷೇತ್ರದ ಪ್ರಮುಖರು, ವಿಜ್ಞಾನ ಮತ್ತು ಧಾರ್ಮಿಕ ಲೋಕದ ಪ್ರತಿನಿಧಿಗಳು ವಿಭಿನ್ನ ಭಾಷೆಗಳು ಹಾಗೂ ಜ್ಞಾನಕ್ಷೇತ್ರಗಳ ಮೂಲಕ ಪರಸ್ಪರ ಸಂವಾದ ನಡೆಸಲು ಆಹ್ವಾನಿಸಲ್ಪಡುತ್ತಾರೆ. ಇದರ ಹೃದಯಭಾಗದಲ್ಲಿರುವುದು ಆಳವಾದ ಫ್ರಾನ್ಸಿಸ್ಕನ್ ಚಿಂತನೆ: ಭ್ರಾತೃತ್ವವನ್ನು ಕೇವಲ ವ್ಯಕ್ತಿಗತ ಮನೋಭಾವವಾಗಿ ಮಾತ್ರವಲ್ಲದೆ, ಸಮಾಜವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುವ ಒಂದು ಸಾಂಸ್ಕೃತಿಕ ದೃಷ್ಟಿಕೋನವಾಗಿ ನೋಡುವುದು.
ಸಂಬಂಧಗಳಲ್ಲಿ ಜೀವನ
ಜ್ಞಾನದ ವಿವಿಧ ಕ್ಷೇತ್ರಗಳ ವಿಶೇಷೀಕರಣ ಮತ್ತು ಮಾನವ ವ್ಯಕ್ತಿತ್ವದ ಸಮಗ್ರ ದೃಷ್ಟಿಕೋನವನ್ನು ಪುನರ್‌ನಿರ್ಮಿಸುವ ಅಗತ್ಯ—ಇವೆರಡರ ನಡುವಿನ ಸಂಬಂಧವು ಕಾರ್ಯಕ್ರಮದ ಪ್ರಮುಖ ಅಂಶಗಳಲ್ಲಿ ಒಂದಾಗಿದೆ ಎಂದು ಪವಿತ್ರ ಮಠದ ಸಂವಹನ ಕಚೇರಿಯ ನಿರ್ದೇಶಕರಾದ ವಂ. ಗುರು ಜೂಲಿಯೊ ಚೆಸಾರೆಯೊ, OFM Conv., ವಿವರಿಸುತ್ತಾರೆ.
ಸಮಕಾಲೀನ ವಿಷಯಗಳನ್ನು ಅಮೂರ್ತವಾಗಿ ಚರ್ಚಿಸುವ ಬದಲು, ಅವು ಮಾನವರ ಜೀವನದ ಮೇಲೆ ಬೀರುವ ನೈಜ ಪರಿಣಾಮಗಳಿಂದಲೇ ಚರ್ಚೆಯನ್ನು ಆರಂಭಿಸುವುದು “ಫ್ರಾನ್ಸಿಸ್ ಪ್ರಾಂಗಣ”ದ ಉದ್ದೇಶವಾಗಿದೆ ಎಂದು ಅವರು ಹೇಳುತ್ತಾರೆ. ವೈಜ್ಞಾನಿಕ, ವಿಮರ್ಶಾತ್ಮಕ, ಸೌಂದರ್ಯಶಾಸ್ತ್ರೀಯ, ಸಾಂಸ್ಥಿಕ ಮತ್ತು ಧಾರ್ಮಿಕ ಜ್ಞಾನವನ್ನು “ಜೀವನದ ಸೇವೆಗೆ” ಸಮರ್ಪಿಸುವುದು ಇದರ ದೃಷ್ಟಿಕೋನವಾಗಿದೆ.
ಈ ದೃಷ್ಟಿಕೋನಕ್ಕೆ ಸಂತ ಫ್ರಾನ್ಸಿಸ್ ಅವರ ಜೀವನವೇ ಸ್ಪಷ್ಟವಾದ ಆಧಾರವಾಗಿದೆ. “ನಮ್ಮ ಅಸ್ತಿತ್ವದ ಗುಣಮಟ್ಟವನ್ನು ಮೂಲಭೂತವಾಗಿ ಅಳೆಯುವುದು ನಮ್ಮನ್ನು ಕಟ್ಟುವ ಮತ್ತು ಒಟ್ಟಾಗಿ ಸಾಗುವ ನಮ್ಮ ಜೀವನದ ದಿಕ್ಕನ್ನು ರೂಪಿಸುವ ಸಂಬಂಧಗಳ ಮೂಲಕ,” ಎಂದು ವಂ. ಗುರು ಚೆಸಾರೆಯೊ ಹೇಳುತ್ತಾರೆ.
ಈ ವಿಶಾಲ ಅರ್ಥದಲ್ಲಿಯೇ 2026ರ ಧ್ಯೇಯವು ಸಂತೋಷ ಮತ್ತು ಆಧ್ಯಾತ್ಮಿಕತೆ, ಆರೋಗ್ಯ ಮತ್ತು ಸಂಸ್ಕೃತಿ, ಮಾನವ ಸಂಬಂಧಗಳು ಹಾಗೂ ತಾಂತ್ರಿಕ ಬದಲಾವಣೆಗಳನ್ನು ಒಳಗೊಂಡಿದೆ.
ಸಂಗೀತದಿಂದ ಕೃತಕ ಬುದ್ಧಿಮತ್ತೆಯವರೆಗೆ
ಉಪನ್ಯಾಸಗಳು, ಪ್ರದರ್ಶನಗಳು, ಸಂಗೀತ ಮತ್ತು ಚಿಂತನೆಯ ಕ್ಷಣಗಳ ಮೂಲಕ ಕಾರ್ಯಕ್ರಮವು ಈ ವೈವಿಧ್ಯತೆಯನ್ನು ಅಭಿವ್ಯಕ್ತಗೊಳಿಸಲಿದೆ.
ಸೆಪ್ಟೆಂಬರ್ 13ರಂದು ಇಟಲಿಯ ಪಿಯಾನೋ ವಾದಕ ಮತ್ತು ಸಂಗೀತ ಸಂಯೋಜಕ ಜಿಯೋವಾನ್ನಿ ಅಲೆವಿಯವರು ಸಂತ ಫ್ರಾನ್ಸಿಸ್ ಪ್ರಧಾನ ಬಸಿಲಿಕಾದ ಮೇಲಿನ ಪ್ರಾಂಗಣದಲ್ಲಿ ಇಟಾಲಿಯನ್ ಸಿಂಫನಿ ಆರ್ಕೆಸ್ಟ್ರಾದೊಂದಿಗೆ ಸಂಗೀತ ಪ್ರದರ್ಶನ ನೀಡಲಿದ್ದಾರೆ.
ಸೆಪ್ಟೆಂಬರ್ 18ರಂದು “ಫ್ರಾನ್ಸಿಸ್ ಪ್ರಾಂಗಣ"ವು ಸ್ಪೊಲೆತೊ ಕಾರಾಗೃಹದ #SIneNOmine ನಾಟಕ ತಂಡದೊಂದಿಗೆ ಮತ್ತೊಮ್ಮೆ ಸಹಯೋಗಿಸಲಿದೆ. ತಂಡವು “ಕಣ್ಣುಗಳು ಮತ್ತು ಪಂಜರಗಳು – ಮುಚ್ಚುವ ಕೋಣೆ / ಉಳಿಸುವ ಕೋಣೆ” ಎಂಬ ಕೃತಿಯನ್ನು ಪ್ರದರ್ಶಿಸಲಿದೆ. ಈ ನಾಟಕವು ಬಂಧನ ಮತ್ತು ಸ್ವಾತಂತ್ರ್ಯದ ನಡುವಿನ ಸಂಬಂಧವನ್ನು ಅನ್ವೇಷಿಸುತ್ತದೆ.
ಕೃತಕ ಬುದ್ಧಿಮತ್ತೆಯಿಂದ ಉಂಟಾಗುತ್ತಿರುವ ಬದಲಾವಣೆಗಳಿಗೂ ಕಾರ್ಯಕ್ರಮದಲ್ಲಿ ವಿಶೇಷ ಸ್ಥಾನವಿದೆ. ಸೆಪ್ಟೆಂಬರ್ 19ರಂದು ವಾಮ್. ಗುರು ಪಾವ್ಲೊ ಬೆನಾಂತಿ, TOR., ಕೃತಕ ಬುದ್ಧಿಮತ್ತೆಯ ಕುರಿತು ಅಂತರ್‌ಶಿಸ್ತೀಯ ಚರ್ಚೆಯಲ್ಲಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಪೊಲಿಸೋಫಿಯಾ ಯೋಜನೆಯ ಕುರಿತು ಪ್ರಸ್ತುತಿಗಳು ನಡೆಯಲಿದ್ದು, ರುಬೆನ್ ರಜ್ಜಾಂತೆ ಮತ್ತು ಮಾರ್ಕೊ ರೊಟ್ಟಿನಿ ಅವರ “ಅಲ್ಗೊರಿದಮ್‌ನ ಲೋಲಕ” ಎಂಬ ಪುಸ್ತಕವನ್ನೂ ಪರಿಚಯಿಸಲಾಗುವುದು.
ಅದೇ ದಿನ ವಂ. ಗುರು ಕೊಸಿಮೊ ಶೆನಾ ಅವರು ಯುವಜನರು ಮತ್ತು ವಯಸ್ಕರೊಂದಿಗೆ ಸಂಬಂಧಗಳು, ನಂಬಿಕೆ ಮತ್ತು ಆಧ್ಯಾತ್ಮಿಕತೆಯ ಕುರಿತು ಸಂವಾದ ನಡೆಸಲಿದ್ದಾರೆ.
ಕಾರ್ಯಕ್ರಮದಲ್ಲಿ Assisi4life ಕೂಡ ಭಾಗವಹಿಸಲಿದೆ. ಅಸ್ಸಿಸಿ ನಗರಸಭೆಯ ಪ್ರೋತ್ಸಾಹದಲ್ಲಿ ಬಾರ್ಬರಾ ಕಾರ್ಲಿ ಅವರ ನೇತೃತ್ವದಲ್ಲಿ ರೂಪುಗೊಂಡಿರುವ ಈ ಉತ್ಸವವು ದೈಹಿಕ ಚಟುವಟಿಕೆ, ಪೌಷ್ಟಿಕ ಆಹಾರ ಮತ್ತು ಸುಸ್ಥಿರ ಜೀವನಶೈಲಿಗೆ ಸಮರ್ಪಿತವಾಗಿದೆ. ಕ್ಷೇಮವನ್ನು ಪ್ರತ್ಯೇಕವಾಗಿ ನೋಡುವ ಬದಲು, ಮಾನವ ವ್ಯಕ್ತಿತ್ವದ ವಿಶಾಲ ಸಮಗ್ರ ದೃಷ್ಟಿಕೋನದ ಒಂದು ಭಾಗವಾಗಿ ಪರಿಗಣಿಸುವ ಕಾರ್ಯಕ್ರಮದ ಆಯ್ಕೆಯೊಂದಿಗೆ ಇದರ ಉಪಸ್ಥಿತಿಯು ಹೊಂದಿಕೆಯಾಗುತ್ತದೆ.
ಅಸ್ಸಿಸಿಯ ಬೀದಿಗಳಲ್ಲಿ ಲೌದೆ
“ಫ್ರಾನ್ಸಿಸ್ ಪ್ರಾಂಗಣ” ಕಾರ್ಯಕ್ರಮವು ಸೆಪ್ಟೆಂಬರ್ 20ರ ಭಾನುವಾರ ಫ್ರಾನ್ಸಿಸ್ಕನ್ ಪರಂಪರೆಯ ಆಧ್ಯಾತ್ಮಿಕ ಮತ್ತು ಸಂಗೀತದ ಬೇರುಗಳತ್ತ ಮರಳುವ ಮೂಲಕ ಮುಕ್ತಾಯಗೊಳ್ಳಲಿದೆ. “ಸಿಯಾ ಲೌದಾತೊ ಸಾನ್ ಫ್ರಾನ್ಸೆಸ್ಕೊ” ಎಂಬ ಕೃತಿ—ಆಯೋಜಕರ ಪ್ರಕಾರ “ಮೊದಲ ಕಿರಿಯ ಸಹೋದರ”ರಾದ ಸಂತ ಫ್ರಾನ್ಸಿಸ್ ಅವರಿಗೆ ಅರ್ಪಿಸಲಾದ ಜನಭಕ್ತಿಯ ಮತ್ತು ಸಂಗೀತಮಯ ಆರಾಧನೆಯ ರೂಪ—ಉಂಬ್ರಿಯಾ ಹಾಗೂ ಇಟಲಿಯ ಇತರ ಪ್ರದೇಶಗಳ ಸಂಗೀತ ತಂಡಗಳು ಮತ್ತು ಗಾಯನ ತಂಡಗಳನ್ನು ಒಂದಾಗಿಸಲಿದೆ.
ಲೌದೆ ಗೀತೆಗಳು ಅಸ್ಸಿಸಿಯ ಐತಿಹಾಸಿಕ ಕೇಂದ್ರದ ಬೀದಿಗಳಲ್ಲಿ ಮೊಳಗುತ್ತಾ ಅಂತಿಮವಾಗಿ ಮೇಲಿನ ಬಸಿಲಿಕಾವನ್ನು ತಲುಪಲಿವೆ. ಅಲ್ಲಿ ಈ ಆಧ್ಯಾತ್ಮಿಕ ಪಯಣವು ಗ್ರೆಗೋರಿಯನ್ ಗಾಯನ ಮತ್ತು ಪವಿತ್ರ ಬಹುಸ್ವರ ಸಂಗೀತದೊಂದಿಗೆ ಮುಂದುವರಿಯಲಿದೆ.
ಈ ವರ್ಷದ ಕಾರ್ಯಕ್ರಮಕ್ಕೆ ಆಯ್ಕೆ ಮಾಡಿರುವ ಚಿತ್ರವು ಈ ಸಂಪೂರ್ಣ ಪಯಣವನ್ನು ಸಾಂಕೇತಿಕವಾಗಿ ಸಾರುತ್ತದೆ. ಸಂತ ಫ್ರಾನ್ಸಿಸ್ ಒಂದು ಬೀಜದಿಂದ ಬೆಳೆದು ಬಂದ ಮರದಂತೆ; ಅದರ ಕೊಂಬೆಗಳು ಹೊರಗೆ ಚಾಚಿಕೊಂಡು ಒಂದು ಸಮುದಾಯವನ್ನು ಅಪ್ಪಿಕೊಳ್ಳುತ್ತವೆ.
ಅವರ ಮರಣದ ಎಂಟು ನೂರು ವರ್ಷಗಳ ಬಳಿಕ, “ಫ್ರಾನ್ಸಿಸ್ ಪ್ರಾಂಗಣ” ಮತ್ತೊಮ್ಮೆ ಅತ್ಯಂತ ಸ್ಪಷ್ಟವಾದ ಒಂದು ಪ್ರಶ್ನೆಯೊಂದಿಗೆ ಆರಂಭವಾಗುತ್ತದೆ: ಜೀವನವನ್ನು ಸಂಪೂರ್ಣ ಮಾನವೀಯವಾಗಿಸುವುದು ಯಾವುದು? ಮತ್ತು ಇಂದು ಜೀವನವು ಅರಳಿ ಬೆಳೆಯಲು ಯಾವ ಸಂಬಂಧಗಳು ಇನ್ನೂ ಅವಕಾಶ ನೀಡುತ್ತವೆ?
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).