ಕಾರಿತಸ್ ಕೊಲಂಬಿಯಾ: ಸುದ್ದಿಯ ಶೀರ್ಷಿಕೆಗಳು ಮರೆಯಾದರೂ ನೆರವು ನಿಲ್ಲಬಾರದು
ಲೇಖಕರು: ಸೆಬಾಸ್ತಿಯಾನ್ ಸಾನ್ಸೋನ್ ಫೆರಾರಿ
“ಈ ಸಮಯದಲ್ಲಿ ಸಂಕಷ್ಟ ಅನುಭವಿಸುತ್ತಿರುವವರೊಂದಿಗೆ ನಾವು ಐಕ್ಯತೆಯಿಂದ ನಿಲ್ಲುತ್ತೇವೆ.”
ಆಗಸ್ಟ್ 10, ಸೋಮವಾರ ಸಂಭವಿಸಿದ ಭೂಕಂಪದಿಂದ ದೇಶದ ಐದು ಪ್ರದೇಶಗಳಲ್ಲಿನ ಹಲವು ಪುರಸಭೆಗಳು ಬಾಧಿತವಾದ ಹಿನ್ರೆಲೆಯಲ್ಲಿ, ಸೋಚಾ ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಹಾಗೂ ಕಾರಿತಸ್ ಕೊಲಂಬಿಯಾದ ಅಧ್ಯಕ್ಷ ಧರ್ಮಾಧ್ಯಕ್ಷ ಜುವಾನ್ ಕಾರ್ಲೋಸ್ ಬರೇಟೊ ಬರೇಟೊ ಅವರು ಕಥೋಲಿಕ ಧರ್ಮಸಭೆಯ ಬದ್ಧತೆಯನ್ನು ಈ ಮಾತುಗಳ ಮೂಲಕ ವಿವರಿಸಿದ್ದಾರೆ.
ಕಾರಿತಸ್ ಕೊಲಂಬಿಯಾದ ಅಧ್ಯಕ್ಷರು ಉಲ್ಲೇಖಿಸಿದ ಅಧಿಕೃತ ವರದಿಗಳ ಪ್ರಕಾರ, ಭೂಕಂಪದಿಂದ 2 ಲಕ್ಷಕ್ಕೂ ಹೆಚ್ಚು ಜನರು ಬಾಧಿತರಾಗಿದ್ದಾರೆ. ಇದರಲ್ಲಿ 300ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಸಾವಿರಾರು ಜನರು ಗಾಯಗೊಂಡಿದ್ದಾರೆ. ಮನೆಗಳು, ಅಪಾರ್ಟ್‌ಮೆಂಟ್ ಕಟ್ಟಡಗಳು, ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಭಾರೀ ಹಾನಿಯಾಗಿದೆ. ಈ ಪರಿಸ್ಥಿತಿಗೆ ಪ್ರತಿಕ್ರಿಯೆಯಾಗಿ ಧರ್ಮಸಭೆಯು ಹಲವು ಹಂತಗಳಲ್ಲಿ ತನ್ನ ನೆರವು ಕಾರ್ಯಗಳನ್ನು ಸಂಘಟಿಸಿದೆ. ಸ್ಥಳೀಯ ಕಾರಿತಸ್, ಕೊಲಂಬಿಯಾದ ಧರ್ಮಾಧ್ಯಕ್ಷರ ಸಮ್ಮೇಳನ, ದೇಶದ ವಿವಿಧ ಧರ್ಮಕ್ಷೇತ್ರಗಳಲ್ಲಿನ ಕಾರಿತಸ್ ಸಂಸ್ಥೆಗಳು, ಸ್ಥಳೀಯ ಮತ್ತು ರಾಷ್ಟ್ರೀಯ ಅಧಿಕಾರಿಗಳು, ನಾಗರಿಕ ಸಮಾಜದ ಸಂಘಟರೆಗಳು ಹಾಗೂ ಅಂತರರಾಷ್ಟ್ರೀಯ ಸಹಕಾರ ಸಂಸ್ಥೆಗಳೊಂದಿಗೆ ಸೇರಿ ಕಾರ್ಯನಿರ್ವಹಿಸುತ್ತಿದೆ.
“ಧರ್ಮಸಭೆಯಾಗಿ ನಾವು ನಮ್ಮ ಪ್ರಯತ್ನಗಳನ್ನು ಸಮನ್ವಯಗೊಳಿಸಬಹುದು. ಆದರೆ ನಾಗರಿಕ ಸಮಾಜ ಮತ್ತು ಸರ್ಕಾರದ ಪ್ರಯತ್ನಗಳೊಂದಿಗೂ ನಾವು ಕೈಜೋಡಿಸಬೇಕು,” ಎಂದು ಧರ್ಮಾಧ್ಯಕ್ಷ ಬರೇಟೊ ವಿವರಿಸಿದರು. ಬಾಧಿತ ಸಮುದಾಯಗಳಿಗೆ ಆರ್ಥಿಕ ನೆರವು ಮತ್ತು ಅಗತ್ಯ ವಸ್ತುಗಳನ್ನು ಒದಗಿಸುವ ‘ಕೊಲಂಬಿಯಾದೊಂದಿಗೆ ಕೊನೆಯ ಮೂಲೆವರೆಗೂ’ ಅಭಿಯಾನವನ್ನು ಅವರು ಉಲ್ಲೇಖಿಸಿದರು.
ದೇಶಾದ್ಯಂತ ಸಂಘಟಿತ ಧರ್ಮಸಭೆ
ತುರ್ತು ಪರಿಸ್ಥಿತಿಯ ವ್ಯಾಪ್ತಿ ಸಂಘಟಿತ ಪ್ರತಿಕ್ರಿಯೆಯ ಅಗತ್ಯವನ್ನು ಉಂಟುಮಾಡಿದೆ. ಕಾರಿತಸ್ ಕೊಲಂಬಿಯಾ ಅತ್ಯಂತ ಹೆಚ್ಚು ಹಾನಿಗೊಳಗಾದ ಪ್ರದೇಶಗಳಲ್ಲಿನ ಸುಮಾರು 14 ಧರ್ಮಕ್ಷೇತ್ರಗಳ ಸಾಮಾಜಿಕ ಸೇವೆಯ ಜವಾಬ್ದಾರಿ ಹೊಂದಿರುವವರೊಂದಿಗೆ ಸಭೆ ನಡೆಸಿತು. ಬಳಿಕ ದೇಶದಾದ್ಯಂತ ಇರುವ 78 ಧರ್ಮಕ್ಷೇತ್ರಗಳ ಸಾಮಾಜಿಕ ಸೇವಾ ನಿರ್ದೇಶಕರೊಂದಿಗೆ ಪ್ರಯತ್ನಗಳನ್ನು ಸಮನ್ವಯಗೊಳಿಸಲಾಯಿತು.
ಇದರ ಜೊತೆಗೆ ಲ್ಯಾಟಿನ್ ಅಮೆರಿಕ, ಯುರೋಪ್ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿರುವ ಸಹಭಾಗಿ ಕಾರಿತಸ್ ಸಂಸ್ಥೆಗಳು ಹಾಗೂ ಅಂತರರಾಷ್ಟ್ರೀಯ ಸಹಕಾರ ಸಂಸ್ಥೆಗಳೊಂದಿಗೆ ಸಂಪರ್ಕ ಸಾಧಿಸಿ ಪರಿಸ್ಥಿತಿಯ ಕುರಿತು ಮಾಹಿತಿ ನೀಡಲಾಗಿದ್ದು, ನೆರವಿಗಾಗಿ ಮನವಿ ಮಾಡಲಾಗಿದೆ.ಈ ಪ್ರತಿಕ್ರಿಯೆ ಕೇವಲ ನೆರವು ವಿತರಿಸುವುದಕ್ಕೆ ಸೀಮಿತವಾಗಿಲ್ಲ. ಸಾವುನೋವುಗಳು ಮತ್ತು ಹಾನಿಯ ಕುರಿತು ಅಧಿಕೃತ ಮಾಹಿತಿಯನ್ನು ಧರ್ಮಗುರುಗಳು, ಧಾರ್ಮಿಕ ಸಮುದಾಯಗಳು ಮತ್ತು ಧರ್ಮಕೇಂದ್ರಗಳ ಸಮುದಾಯಗಳಿಗೆ ತಲುಪಿಸಲಾಗುತ್ತಿದೆ. ಪ್ರಾರ್ಥನಾ ಕಾರ್ಯಕ್ರಮಗಳನ್ನು ಉತ್ತೇಜಿಸಲಾಗುತ್ತಿದ್ದು, ಆರ್ಥಿಕ ನೆರವು ಹಾಗೂ ಅಗತ್ಯ ವಸ್ತುಗಳನ್ನು ನೀಡುವಂತೆ ಜನರನ್ನು ಪ್ರೋತ್ಸಾಹಿಸಲಾಗುತ್ತಿದೆ.
ಆಹಾರ, ಆಶ್ರಯ ಮತ್ತು ಔಷಧಗಳು
ಮೊದಲ ಕೆಲವು ವಾರಗಳಲ್ಲಿ ಆಹಾರಕ್ಕೆ ಆದ್ಯತೆ ನೀಡಲಾಗುತ್ತಿದೆ. ಆದರೆ ಅಗತ್ಯಗಳು ಇದಕ್ಕಿಂತಲೂ ವ್ಯಾಪಕವಾಗಿವೆ. ಗುಡಾರಗಳು, ಹಾಸಿಗೆಗಳು ಮತ್ತು ಆಹಾರ ತಯಾರಿಸಲು ಬೇಕಾದ ಉಪಕರಣಗಳ ಅಗತ್ಯವೂ ಬಾಧಿತ ಪ್ರದೇಶಗಳಿಂದ ಕೇಳಿಬರುತ್ತಿದೆ. ಕೆಲವರು ತಮ್ಮ ಮನೆಗಳಿಗೆ ಮರಳಲು ಇನ್ನೂ ಸಾಧ್ಯವಾಗುತ್ತಿಲ್ಲ. ಕೆಲವು ಮರೆಗಳು ಸಂಪೂರ್ಣವಾಗಿ ನಾಶವಾಗಿದ್ದರೆ, ಇನ್ನು ಕೆಲವು ತೀವ್ರವಾಗಿ ಹಾನಿಗೊಳಗಾಗಿವೆ. ಔಷಧಿಗಳ ಅಗತ್ಯವೂ ಇದೆ. ಇದರ ಜೊತೆಗೆ ಧರ್ಮಸಭೆಯ ಆರೋಗ್ಯ ಸೇವಾ ವಿಭಾಗವು ತುರ್ತು ಪರಿಸ್ಥಿತಿಯಲ್ಲಿ ವೈಯಕ್ತಿಕ ಮಾನಸಿಕ ರೆರವು ಒದಗಿಸಲು ತಜ್ಞರಿಂದ ನಿರ್ವಹಿಸಲ್ಪಡುವ ಮಾನಸಿಕ ಬೆಂಬಲ ದೂರವಾಣಿ ಸೇವೆಯನ್ನು ಆರಂಭಿಸಿದೆ.
ಕೊಲಂಬಿಯಾದೊಳಗಿನಿಂದಲೂ ಮತ್ತು ವಿದೇಶಗಳಿಂದಲೂ ವ್ಯಕ್ತವಾಗಿರುವ ಐಕ್ಯತೆಯಿಂದ ಆರಂಭಿಕ ನೆರವು ಸಾಧ್ಯವಾಗಿದೆ ಎಂದು ಧರ್ಮಾಧ್ಯಕ್ಷ ಬರೇಟೊ ಹೇಳಿದರು. ದೊರೆತ ಸಂಪನ್ಮೂಲಗಳಿಂದ ತಕ್ಷಣದ ಅಗತ್ಯಗಳಾದ ಆಹಾರ ಮತ್ತು ರಾತ್ರಿ ಉಳಿದುಕೊಳ್ಳಲು ಸುರಕ್ಷಿತ ಸ್ಥಳಗಳನ್ನು ಒದಗಿಸಲು ಸಾಧ್ಯವಾಗಿದೆ. “ಇಲ್ಲಿಯವರೆಗೆ ದೊರೆತ ಪ್ರತಿಕ್ರಿಯೆಗಾಗಿ ನಾವು ಬಹಳ ಕೃತಜ್ಞರಾಗಿದ್ದೇವೆ ಮತ್ತು ತುಂಬಾ ಪ್ರೋತ್ಸಾಹಿತರಾಗಿದ್ದೇವೆ,” ಎಂದು ಅವರು ಹೇಳಿದರು.
ಆದರೆ ಮಾಧ್ಯಮಗಳ ಗಮನ ಕಡಿಮೆಯಾದಂತೆ ತುರ್ತು ಪರಿಸ್ಥಿತಿಯೂ ಮುಗಿಯುವುದಿಲ್ಲ ಎಂದು ಕಾರಿತಸ್ ಕೊಲಂಬಿಯಾದ ಅಧ್ಯಕ್ಷರು ಎಚ್ಚರಿಸಿದರು.
“ಮೊದಲ ಕೆಲವು ವಾರಗಳಿಗೆ ಮಾತ್ರ ನೆರವು ಸೀಮಿತವಾಗಬಾರದು”
ಧರ್ಮಾಧ್ಯಕ್ಷ ಬರೇಟೊ ಅವರ ಪ್ರಮುಖ ಮನವಿಗಳಲ್ಲಿ ‘ದೀರ್ಘಕಾಲದವರೆಗೆ ಐಕ್ಯತೆಯನ್ನು ಮುಂದುವರಿಸುವುದು’ ಒಂದಾಗಿದೆ. “ಮೊದಲ ಕೆಲವು ವಾರಗಳಲ್ಲಿ ಕೆಲವೊಮ್ಮೆ ಮಾಧ್ಯಮಗಳ ಹೆಚ್ಚಿನ ಗಮನ ದೊರೆಯುತ್ತದೆ,” ಎಂದು ಅವರು ಹೇಳಿದರು. ಆದರೆ ನಂತರ ಇನ್ನಷ್ಟು ದೀರ್ಘಕಾಲೀನ ಸವಾಲುಗಳು ಎದುರಾಗಲಿವೆ. ಕಾಲೇಜುಗಳು, ವಿಶ್ವವಿದ್ಯಾಲಯಗಳು, ಶಾಲೆಗಳು ಮತ್ತು ಆಸ್ಪತ್ರೆಗಳನ್ನು ಪುನರ್‌ನಿರ್ಮಿಸಬೇಕು. ಹಾನಿಗೊಳಗಾದ ಮರೆಗಳು, ಧರ್ಮಕೇಂದ್ರಗಳು ಮತ್ತು ದೇವಾಲಯಗಳನ್ನೂ ಪುನರ್‌ನಿರ್ಮಿಸಬೇಕಾಗಿದೆ. “ಸಹಾಯ ಮಾಡುವ ಈ ಬದ್ಧತೆಯಲ್ಲಿ ನಾವು ಮುಂದುವರಿಯಬೇಕು. ಅದು ದೀರ್ಘಕಾಲದವರೆಗೆ ಸ್ಥಿರವಾಗಿರಬೇಕು,” ಎಂದು ಅವರು ಒತ್ತಿಹೇಳಿದರು.
ಕಾರಿತಸ್ ಕೊಲಂಬಿಯಾ ಈಗಾಗಲೇ ಸಮನ್ವಯಿತ ಕಾರ್ಯಯೋಜರೆಯನ್ನು ರೂಪಿಸಿದೆ. ಪ್ರತಿಯೊಂದು ಪ್ರದೇಶದ ಅಗತ್ಯಗಳಿಗೆ ಅನುಗುಣವಾಗಿ ಅದನ್ನು ಹೊಂದಿಸಿಕೊಳ್ಳಲಾಗುತ್ತದೆ. ಮೊದಲ ಹಂತದಲ್ಲಿ ಆಹಾರ ನೆರವು, ಆರೋಗ್ಯ ಸಾಮಗ್ರಿಗಳು ಮತ್ತು ಜನರು ರಾತ್ರಿ ಸುರಕ್ಷಿತವಾಗಿ ವಿಶ್ರಾಂತಿ ಪಡೆಯಲು ಅಗತ್ಯ ಪರಿಸ್ಥಿತಿಗಳನ್ನು ಒದಗಿಸಲಾಗುತ್ತದೆ. ನಂತರ ಶಿಕ್ಷಣ ಸಂಸ್ಥೆಗಳಲ್ಲಿ ಸಾಮಾನ್ಯ ಸ್ಥಿತಿಯನ್ನು ಪುನಃಸ್ಥಾಪಿಸುವುದು ಮತ್ತು ಮರೆಗಳನ್ನು ಪುನರ್‌ನಿರ್ಮಿಸುವುದು ಪ್ರಮುಖವಾಗಲಿದೆ. ಕೆಲವು ಮರೆಗಳನ್ನು ಸಂಪೂರ್ಣವಾಗಿ, ಇನ್ನು ಕೆಲವು ಭಾಗಶಃ ಪುನರ್‌ನಿರ್ಮಿಸಬೇಕಾಗುತ್ತದೆ.
ಸಶಸ್ತ್ರ ಸಂಘರ್ಷಗಳಿಂದ ಹಿಡಿದು ನೈಸರ್ಗಿಕ ವಿಪತ್ತುಗಳು ಮತ್ತು ಪ್ರವಾಹಗಳವರೆಗೆ ವಿವಿಧ ತುರ್ತು ಪರಿಸ್ಥಿತಿಗಳಲ್ಲಿ ಕಾರಿತಸ್ ಕೊಲಂಬಿಯಾ ಗಳಿಸಿರುವ ಅನುಭವವು ಈ ಹೊಸ ಬಿಕ್ಕಟ್ಟಿಗೆ ಮಹತ್ವದ ಸಂಪನ್ಮೂಲವಾಗಿದೆ. ಅದೇ ಸಮಯದಲ್ಲಿ, ಇತರ ಕಾರಿತಸ್ ಸಂಸ್ಥೆಗಳಿಂದ ಅನುಭವಗಳನ್ನು ಪಡೆದುಕೊಂಡು, ಸರ್ಕಾರ ಮತ್ತು ನಾಗರಿಕ ಸಮಾಜದ ಪ್ರಯತ್ನಗಳೊಂದಿಗೆ ತನ್ನ ಕಾರ್ಯವನ್ನು ಸಮನ್ವಯಗೊಳಿಸಲು ಸಂಸ್ಥೆ ಪ್ರಯತ್ನಿಸುತ್ತಿದೆ.
ಸೋಚಾ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರ ಪ್ರಕಾರ, ಗುರಿ “ಸಮನ್ವಯಿತ, ಸಂಘಟಿತ ಮತ್ತು ಸೂಕ್ತವಾದ” ಕಾರ್ಯಾಚರಣೆಯಾಗಿದೆ.
“ಪ್ರಥಮ ಚಿಕಿತ್ಸೆ ” ಆಧ್ಯಾತ್ಮಿಕವಾಗಿಯೂ ಇರಬಹುದು
ಈ ಮಾನವೀಯ ನೆರವಿನ ನಡುವೆ, ಆಹಾರ, ಔಷಧ ಅಥವಾ ಆಶ್ರಯದಿಂದ ಮಾತ್ರ ಪರಿಹರಿಸಲಾಗದ ಮತ್ತೊಂದು ರೀತಿಯ ನೋವಿಗೂ ಧರ್ಮಸಭೆ ಸ್ಪಂದಿಸಲು ಪ್ರಯತ್ನಿಸಿದೆ. ಬೊಗೊಟಾ ಧರ್ಮಾಧ್ಯಕ್ಷರ ಕಚೇರಿಯು ‘ಆಧ್ಯಾತ್ಮಿಕ ಪ್ರಥಮ ಚಿಕಿತ್ಸೆ ’ ನೀಡಲು ಅತ್ಯಂತ ಹೆಚ್ಚು ಹಾನಿಗೊಳಗಾದ ಪ್ರದೇಶಗಳಿಗೆ 80 ಧರ್ಮಗುರುಗಳನ್ನು ಕಳುಹಿಸಿದೆ ಎಂದು ಧರ್ಮಾಧ್ಯಕ್ಷ ಬರೇಟೊ ವಿವರಿಸಿದರು. “ಅವರ ಸೇವೆಯೂ ಬಹಳ ಮಹತ್ವದ್ದಾಗಿದೆ,” ಎಂದು ಕಾರಿತಸ್ ಕೊಲಂಬಿಯಾದ ಅಧ್ಯಕ್ಷರು ಹೇಳಿದರು. ಈ ಸೇವೆ ಆಗಸ್ಟ್ 19ರಂದು ಅಧಿಕೃತವಾಗಿ ಆರಂಭವಾಯಿತು. ಸ್ಥಳೀಯ ಧರ್ಮಕ್ಷೇತ್ರಗಳ ಧರ್ಮಾಧ್ಯಕ್ಷರೊಂದಿಗೆ ಸಮನ್ವಯದಲ್ಲಿ ತಂಡಗಳಾಗಿ ಕಾರ್ಯನಿರ್ವಹಿಸುತ್ತಿರುವ ಧರ್ಮಗುರುಗಳು ಪೆರೇರಾ, ಕಾಲಿ, ಪಾಲ್ಮಿರಾ, ಕಾರ್ತಾಗೊ, ಬುಘಾ ಮತ್ತು ಬುವೆನವೆಂಚುರಾ ಪ್ರದೇಶಗಳಿಗೆ ತೆರಳಿದರು.
ಅವರ ಕಾರ್ಯ ಸರಳವಾದದ್ದಾದರೂ ಆಳವಾದದ್ದು: ಬಾಧಿತರನ್ನು ಭೇಟಿಯಾಗುವುದು, ಅವರ ಮಾತುಗಳನ್ನು ಆಲಿಸುವುದು, ಅವರೊಂದಿಗೆ ಮಾತನಾಡುವುದು, ಅವರೊಂದಿಗೆ ಪ್ರಾರ್ಥಿಸುವುದು ಮತ್ತು ಪಾಪನಿವೇದನೆ ಸಂಸ್ಕಾರವನ್ನು ನೀಡುವುದು. ಮನೆಗಳು, ಆಸ್ತಿಪಾಸ್ತಿಗಳು, ಪರಿಚಿತ ಪರಿಸರ ಮತ್ತು ಕೆಲವೊಮ್ಮೆ ಪ್ರೀತಿಪಾತ್ರರನ್ನು ಕಳೆದುಕೊಂಡ ಜನರು ಅನುಭವಿಸುತ್ತಿರುವ ಆಘಾತ ಮತ್ತು ನೋವಿನ ಸಂದರ್ಭದಲ್ಲಿ ಅವರೊಂದಿಗೆ ನಿಲ್ಲುವುದು ಈ ಸೇವೆಯ ಉದ್ದೇಶವಾಗಿದೆ.
ಬೊಗೊಟಾ ಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷ ಪ್ರಧಾನ ಗುರು ಲೂಯಿಸ್ ಜೋಸೆ ರುಯೆದಾ ಅಪಾರಿಸಿಯೊ ಅವರು ಈ ಮೊದಲ ದಿನಗಳಲ್ಲಿ ಬಾಧಿತ ಸಮುದಾಯಗಳು ಅನೇಕ ಪ್ರಶ್ರೆಗಳು ಮತ್ತು ಸವಾಲುಗಳನ್ನು ಎದುರಿಸುತ್ತಿವೆ ಎಂದು ವಿವರಿಸಿದರು. ಆದ್ದರಿಂದ ಧರ್ಮಗುರುಗಳು ಜನರನ್ನು ನೇರವಾಗಿ ಭೇಟಿಯಾಗಿ ಧೈರ್ಯದ ಸಂದೇಶವನ್ನು ನೀಡುತ್ತಿದ್ದಾರೆ—ಧರ್ಮಸಭೆ ಅವರನ್ನು ಪ್ರೀತಿಸುತ್ತದೆ ಮತ್ತು ಕ್ರಿಸ್ತ ಅವರೊಂದಿಗೆ ಇದ್ದಾರೆ ಎಂಬ ಸಂದೇಶವನ್ನು ಸಾರುತ್ತಿದ್ದಾರೆ.
“ಈ ಸಮುದಾಯಗಳ ಮಧ್ಯದಲ್ಲಿರುವ ಸಂಕಷ್ಟ ಅನುಭವಿಸುತ್ತಿರುವ ಕ್ರಿಸ್ತನನ್ನು ನಾವು ಕಾಣಲು ಮತ್ತು ಭರವಸೆಯನ ಮಾತಿನೊಂದಿಗೆ ಅವರೊಂದಿಗೆ ಇರಲು ಬಯಸುತ್ತೇವೆ,” ಎಂದು ಪ್ರಧಾನ ಗುರು ರುಯೆದಾ ಹೇಳಿದರು. ಹೀಗಾಗಿ ಈ ಆಧ್ಯಾತ್ಮಿಕ ಸೇವೆಯು ಕಾರಿತಸ್ ಕೊಲಂಬಿಯಾ ದೇಶಾದ್ಯಂತ ವಿವರಿಸುತ್ತಿರುವ ಮಾನವೀಯ ಪ್ರತಿಕ್ರಿಯೆಯೊಂದಿಗೆ ಬೆಸೆದುಕೊಂಡಿದೆ—ಸಂಪನ್ಮೂಲಗಳನ್ನು ಮಾತ್ರವಲ್ಲ, “ಪ್ರಾರ್ಥರೆ, ಜೀವನ ಮತ್ತು ಭರವಸೆಯನ್ನು” ಹಂಚಿಕೊಳ್ಳುವ ಧರ್ಮಸಭೆಯ ಪ್ರತಿಕ್ರಿಯೆಯಾಗಿದೆ.
ಮಕ್ಕಳಿಗೆ ವಿಶೇಷ ಗಮನ
ಈ ತುರ್ತು ಪರಿಸ್ಥಿತಿಯು ಮಕ್ಕಳು ಮತ್ತು ಹದಿಹರೆಯದವರ ದುರ್ಬಲತೆಯನ್ನು ಮತ್ತಷ್ಟು ಹೆಚ್ಚಿಸಿದೆ. ತಂದೆ-ತಾಯಿಯನ್ನು ಕಳೆದುಕೊಳ್ಳುವುದು, ಕುಟುಂಬಗಳಿಂದ ಬೇರ್ಪಡುವುದು ಮತ್ತು ಮನೆಗೆ ಮರಳಲು ಸಾಧ್ಯವಾಗದಿರುವುದು ಅವರನ್ನು ಅಂಚಿನ ಬದುಕು, ಮಾನವ ಕಳ್ಳಸಾಗಣೆ ಮತ್ತು ಇತರ ರೀತಿಯ ಶೋಷಣೆಗೆ ಗುರಿಯಾಗಿಸುವ ಅಪಾಯವನ್ನು ಹೆಚ್ಚಿಸಬಹುದು.
ಧರ್ಮಾಧ್ಯಕ್ಷ ಬರೇಟೊ ಅವರ ಪ್ರಕಾರ, ‘ಆರೈಕೆಯ ಸಂಸ್ಕೃತಿ’ ಎಂದು ಕರೆಯಲಾಗುವ ವಿಧಾನದಿಂದ ಈ ಸಮಸ್ಯೆಯನ್ನು ಪರಿಹರಿಸಬೇಕು.ಪ್ರತಿಯೊಂದು ಪ್ರದೇಶದಲ್ಲಿನ ನಿರ್ದಿಷ್ಟ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಕಾರಿತಸ್ ಕೊಲಂಬಿಯಾ ಧರ್ಮಕ್ಷೇತ್ರಗಳೊಂದಿಗೆ ಚರ್ಚಿಸುತ್ತಿದೆ. ಅಪ್ರಾಪ್ತ ವಯಸ್ಕರ ರಕ್ಷಣೆಯನ್ನೂ ಒಳಗೊಂಡ ಸಮಗ್ರ ಪ್ರತಿಕ್ರಿಯೆಯನ್ನು ರೂಪಿಸುವುದು ಇದರ ಉದ್ದೇಶವಾಗಿದೆ.
“ಪ್ರಭು ನಮ್ಮ ಪಕ್ಕದಲ್ಲಿ ನಡೆಯುತ್ತಾರೆ”
ದೀರ್ಘಕಾಲದ ಪುನಶ್ಚೇತನದ ಅಗತ್ಯವಿರುವ ಈ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ, ಕಾರಿತಸ್ ಕೊಲಂಬಿಯಾದ ಅಧ್ಯಕ್ಷರು ಈಗಾಗಲೇ ವ್ಯಕ್ತವಾಗಿರುವ ಐಕ್ಯತೆಯತ್ತ ಮತ್ತೊಮ್ಮೆ ಗಮನ ಸೆಳೆದರು. ಕೊಲಂಬಿಯಾದ ಜನರಿಗೆ,ನೆರವು ಕಳುಹಿಸಿರುವ ಕಾರಿತಸ್ ಸಂಸ್ಥೆಗಳಿಗೆ, ಅಂತರರಾಷ್ಟ್ರೀಯ ಸಹಕಾರ ಸಂಸ್ಥೆಗಳಿಗೆ ಮತ್ತು ಅಂತಾರಾಷ್ಟ್ರೀಯ ಸಮುದಾಯಕ್ಕೆ ಅವರು ಕೃತಜ್ಞತೆ ಸಲ್ಲಿಸಿದರು.
ಸರ್ಕಾರದ ನಾಯಕರು “ಸಿದ್ಧಾಂತಗಳನ್ನು ಮೀರಿ” ಮಾನವೀಯ ನೆರವಿಗೆ ಆದ್ಯತೆ ನೀಡಬೇಕು ಎಂದು ಧರ್ಮಾಧ್ಯಕ್ಷ ಬರೇಟೊ ಮನವಿ ಮಾಡಿದರು. ಧರ್ಮಸಭೆಯ ಕಾರ್ಯವನ್ನು ನೆಲಮಟ್ಟದಲ್ಲಿ ಮುಂದುವರಿಸುತ್ತಿರುವ ಧರ್ಮಾಧ್ಯಕ್ಷರು, ಧರ್ಮಗುರುಗಳು, ಧಾರ್ಮಿಕ ಸಮುದಾಯಗಳು, ಧರ್ಮಕೇಂದ್ರಗಳ ಸಮುದಾಯಗಳು ಮತ್ತು ಕಾರಿತಸ್ ಕಾರ್ಯಕರ್ತರಿಗೂ ಅವರು ವಿಶೇಷ ಸಂದೇಶ ನೀಡಿದರು.
“ಇವು ಅವರಿಗೆ ಕಷ್ಟಕರ ಸಮಯಗಳೆಂದು ನಮಗೆ ತಿಳಿದಿದೆ, ಆದರೆ ಪ್ರಭುವಿನಲ್ಲಿ ಭರವಸೆ ಇಡುವವರ ಆತ್ಮವನ್ನು ಪ್ರಭು ಬಲಪಡಿಸುತ್ತಾರೆ” ಎಂದು ಧರ್ಮಾಧ್ಯಕ್ಷ ಬರೇಟೊ ಸೇರಿಸಿದರು.
ಹೀಗಾಗಿ ಭೂಕಂಪಕ್ಕೆ ನೀಡಲಾಗುತ್ತಿರುವ ಪ್ರತಿಕ್ರಿಯೆಯು ಈಗಷ್ಟೇ ಆರಂಭವಾಗಿರುವ ಒಂದು ಪಯಣವಾಗಿದೆ. ಮೊದಲಿಗೆ ಆಹಾರ, ಆಶ್ರಯ, ಔಷಧಿಗಳು ಮತ್ತು ಬೆಂಬಲ; ನಂತರ ಪುನರ್‌ನಿರ್ಮಾಣ ಮತ್ತು ಜನರು ಮತ್ತೆ ಸ್ವಾವಲಂಬಿಗಳಾಗಲು ನೆರವು. ಈ ಸಂಪೂರ್ಣ ಪ್ರಕ್ರಿಯೆಯುದ್ದಕ್ಕೂ ಸಂಕಷ್ಟದಲ್ಲಿರುವವರೊಂದಿಗೆ ನಿಲ್ಲುವ ಪಾಲನಾ ಸೇವೆಯ ಸಾನ್ನಿಧ್ಯ ಮುಂದುವರಿಯಬೇಕಾಗಿದೆ.
“ಪ್ರಭು ನಮ್ಮ ಪಕ್ಕದಲ್ಲಿ ನಡೆಯುತ್ತಾರೆ ಮತ್ತು ನಾವು ಒಟ್ಟಾಗಿ ಮುಂದುವರಿಯುವಂತೆ ನಮ್ಮನ್ನು ಆಹ್ವಾನಿಸುತ್ತಾರೆ."
ಬೊಗೊಟಾ ಮಹಾಧರ್ಮಕ್ಷೇತ್ರದ ಸಂವಹನ ಕಚೇರಿಯ ಸಹಯೋಗದೊಂದಿಗೆ.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).