ಆಳಸಮುದ್ರ ಗಣಿಗಾರಿಕೆ ಕುರಿತು ಎಚ್ಚರಿಕೆಯಿಂದ ಮುಂದುವರಿಯುವಂತೆ ಪೆಸಿಫಿಕ್ ಧರ್ಮಾಧ್ಯಕ್ಷರ ಕರೆ
ಲೇಖಕರು: ದೆಬೋರ ಕ್ಯಾಸ್ತೆಲ್ಲಾನೋ ಲುಬೋವ್
“ಇಂತಹ ಚಟುವಟಿಕೆಯಿಂದ ಗಂಭೀರ ಅಥವಾ ಹಿಂತಿರುಗಿಸಲಾಗದ ಹಾನಿ ಉಂಟಾಗುವುದಿಲ್ಲ ಎಂಬುದಕ್ಕೆ ಮನವರಿಕೆ ಮಾಡುವಂತಹ ಸಾಕ್ಷ್ಯ ದೊರೆಯುವವರೆಗೆ, ವಿವೇಕವು ನಮ್ಮನ್ನು ಅತ್ಯಂತ ಎಚ್ಚರಿಕೆಯಿಂದ ಮುಂದುವರಿಯುವಂತೆ ಕರೆಯುತ್ತದೆ.”
ಆಗಸ್ಟ್ 10ರಂದು ಆಳಸಮುದ್ರ ಗಣಿಗಾರಿಕೆಯ ಕುರಿತು ಹೊರಡಿಸಿದ ಧರ್ಮಾಧ್ಯಕ್ಷರ ಪಾಲನಾ ಪತ್ರದಲ್ಲಿ ಪೆಸಿಫಿಕ್ ಧರ್ಮಾಧ್ಯಕ್ಷರ ಸಭೆ (CEPAC) ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಸಭೆಯ ಅಧ್ಯಕ್ಷರಾಗಿರುವ ಹಾಗೂ ಓಷಿಯಾನಿಯಾದ ಕಥೋಲಿಕ ಧರ್ಮಾಧ್ಯಕ್ಷರ ಸಭೆಗಳ ಒಕ್ಕೂಟದ (FCBCO) ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿರುವ ಗುವಾಮ್‌ನ ಅಗಾನಾದ ಮಹಾಧರ್ಮಾಧ್ಯಕ್ಷ ರಯಾನ್ ಪಿ. ಜಿಮೆನೆಝ್ ಅವರು ಈ ಪತ್ರಕ್ಕೆ ಸಹಿ ಹಾಕಿದ್ದಾರೆ.
ಪತ್ರದಲ್ಲಿ ಧರ್ಮಾಧ್ಯಕ್ಷರು, “ಆಳಸಮುದ್ರ ಗಣಿಗಾರಿಕೆಗೆ ಸಂಬಂಧಿಸಿದ ನಿರ್ಧಾರಗಳ ಹೊಣೆ ಹೊತ್ತಿರುವ ಎಲ್ಲರೂ ವಿವೇಕ, ಪಾರದರ್ಶಕತೆ, ವಿನಯ ಮತ್ತು ಸಾಮಾನ್ಯ ಹಿತದ ಕುರಿತ ನಿಜವಾದ ಕಾಳಜಿಯೊಂದಿಗೆ ಮುಂದುವರಿಯುವಂತೆ ನಾವು ಗೌರವಪೂರ್ವಕವಾಗಿ ಮನವಿ ಮಾಡುತ್ತೇವೆ." ತಲೆಮಾರುಗಳಿಂದ ಮಾನವಕುಲವು ಆರ್ಥಿಕ ಅಭಿವೃದ್ಧಿಯನ್ನು ಮುಂದುವರಿಸಲು ಭೂಮಿಯ ಖನಿಜ ಸಂಪನ್ಮೂಲಗಳನ್ನು ಹೊರತೆಗೆದುಕೊಳ್ಳುತ್ತಿದೆ. ಆದರೆ ಅನೇಕ ಸಂದರ್ಭಗಳಲ್ಲಿ ನಮ್ಮೆಲ್ಲರ ಮನೆಯಾದ ಸೃಷ್ಟಿಯ ಮೇಲೆ ಉಂಟಾಗಬಹುದಾದ ದೀರ್ಘಕಾಲೀನ ಪರಿಣಾಮಗಳನ್ನು ಸಂಪೂರ್ಣವಾಗಿ ಪರಿಗಣಿಸಲಾಗಿಲ್ಲ ಎಂದು ಹೇಳಿದ್ದಾರೆ.
ಸನ್ನಿಹಿತವಾಗುತ್ತಿರುವ ಆತಂಕಗಳು
ಇಂದು ಈ ಪ್ರದೇಶದಲ್ಲಿ ವಾಣಿಜ್ಯ ಆಳಸಮುದ್ರ ಗಣಿಗಾರಿಕೆಯ ಸಾಧ್ಯತೆ ಹೆಚ್ಚುತ್ತಿದ್ದು, ಅದು ಹೆಚ್ಚು ಸನ್ನಿಹಿತವಾಗುತ್ತಿರುವಂತೆ ಕಾಣುತ್ತಿದೆ ಎಂದು ಅವರು ಎಚ್ಚರಿಸಿದರು. ಅಮೆರಿಕನ್ ಸಮೋವಾ ಸುತ್ತಮುತ್ತಲಿನ ಸಮುದ್ರಜಲ ಪ್ರದೇಶಗಳಲ್ಲಿರುವ 33 ದಶಲಕ್ಷ ಎಕರೆ ಸೇರಿದಂತೆ ಪೆಸಿಫಿಕ್ ಸಮುದ್ರದ ತಳಭಾಗದ ವಿಶಾಲ ಪ್ರದೇಶಗಳು ಹಾಗೂ ಮರಿಯಾನಾ ಟ್ರೆಂಚ್ ಸಮುದ್ರ ರಾಷ್ಟ್ರೀಯ ಸ್ಮಾರಕದ ಸಮೀಪದ ಪ್ರದೇಶಗಳನ್ನು ಈಗ ವಾಣಿಜ್ಯ ಗುತ್ತಿಗೆಗಾಗಿ ಪರಿಗಣಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಈ ಬೆಳವಣಿಗೆಗಳು ಸರ್ಕಾರಗಳು, ವಿಜ್ಞಾನಿಗಳು, ಸ್ಥಳೀಯ ಮೂಲನಿವಾಸಿ ಸಮುದಾಯಗಳು, ಧರ್ಮಸಭೆಗಳು ಮತ್ತು ಅನೇಕ ಸದ್ಭಾವನೆಯ ಜನರನ್ನು ತಮ್ಮ ಸಾಗರದ ಭವಿಷ್ಯ ಮತ್ತು ಮುಂದಿನ ತಲೆಮಾರುಗಳಿಗೆ ತಾವು ಬಿಟ್ಟುಹೋಗುವ ಪರಂಪರೆಯ ಕುರಿತು ಮಹತ್ವದ ಸಂವಾದದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿವೆ ಎಂದು ಪೆಸಿಫಿಕ್ ಧರ್ಮಾಧ್ಯಕ್ಷರು ಹೇಳಿದರು.ಧಾರ್ಮಿಕ ನಾಯಕರ ಜವಾಬ್ದಾರಿ ಶುಭಸಂದೇಶವನ್ನು ಸಾರುವುದಷ್ಟೇ ಅಲ್ಲ, ಧರ್ಮಸಭೆಯ ಸಾಮಾಜಿಕ ಬೋಧನೆಯ ಬೆಳಕಿನಲ್ಲಿ ಇಂತಹ ಪ್ರಶ್ನೆಗಳನ್ನು ಪರಿಶೀಲಿಸುವುದೂ ಆಗಿದೆ ಎಂದು ಅವರು ನೆನಪಿಸಿದರು. ಈ ಹಿನ್ನೆಲೆಯಲ್ಲಿ, ಸೃಷ್ಟಿ, ಸಂಪನ್ಮೂಲಗಗಳನ್ನು ಈ ಪೀಳಿಗೆಗೆ ಮಾತ್ರವಲ್ಲದೆ ಮುಂದಿನ ಪೀಳಿಗೆಗಳಿಗೂ ನೀಡಿದೆ ಎಂದು ಅವರು ಪುನರುಚ್ಚರಿಸಿದರು.
ವಿಜ್ಞಾನದಲ್ಲಿ ಅನಿಶ್ಚಿತತೆ ಇರುವಾಗ ವಿವೇಕ ಅಗತ್ಯ
“ಗಂಭೀರ ಅಥವಾ ಹಿಂತಿರುಗಿಸಲಾಗದ ಹಾನಿಯನ್ನು ಉಂಟುಮಾಡಬಹುದಾದ ಕ್ರಮಗಳ ಪರಿಣಾಮಗಳ ಕುರಿತು ವಿಜ್ಞಾನದಲ್ಲಿ ಇನ್ನೂ ಅನಿಶ್ಚಿತತೆ ಇರುವಾಗ, ವಿನಯ, ವಿವೇಕ ಮತ್ತು ಪ್ರಾರ್ಥನಾಪೂರ್ವಕ ವಿವೇಚನೆಯೊಂದಿಗೆ ಮುಂದುವರಿಯುವಂತೆ ಜ್ಞಾನವು ನಮಗೆ ಕರೆ ನೀಡುತ್ತದೆ ಎಂಬುದನ್ನು ಇತಿಹಾಸ ಕಲಿಸುತ್ತದೆ,” ಪೆಸಿಫಿಕ್ ಜನರ ಪಾಲಿಗೆ ಈ ನಂಬಿಕೆಯು ಅವರ ಜೀವನಶೈಲಿಯಲ್ಲಿಯೇ ಆಳವಾಗಿ ಬೇರೂರಿದೆ ಎಂದು ಧರ್ಮಾಧ್ಯಕ್ಷರು ವಿವರಿಸಿದರು.
ತಮ್ಮ ಪೀಳಿಗೆಯನ್ನು ಸೃಷ್ಟಿಯಿಂದ “ಏನನ್ನು ಹೊರತೆಗೆದಿತು” ಎಂಬುದಕ್ಕಾಗಿ ಅಲ್ಲ, “ಏನನ್ನು ಸಂರಕ್ಷಿಸಿತು” ಎಂಬುದಕ್ಕಾಗಿ ನೆನಪಿಸಿಕೊಳ್ಳಬೇಕೆಂಬ ಆಶಯವನ್ನು ಅವರು ವ್ಯಕ್ತಪಡಿಸಿದರು.
ಆಳಸಮುದ್ರವು ಜನರು ಇನ್ನೂ ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳದ ಪರಿಸರ ವ್ಯವಸ್ಥೆಗಳಲ್ಲಿ ಒಂದಾಗಿದೆ ಎಂದು ಅವರು ಗಮನಿಸಿದರು. ವಿಜ್ಞಾನಿಗಳು ಅದರ ಜೀವವೈವಿಧ್ಯ, ಪರಿಸರ ಸಂಬಂಧಗಳು ಮತ್ತು ದೀರ್ಘಕಾಲೀನ ಸ್ಥಿರತೆಯ ಕುರಿತು ಇನ್ನೂ ಬಹಳಷ್ಟು ತಿಳಿದಿಲ್ಲ ಎಂಬುದನ್ನು ಒಪ್ಪಿಕೊಳ್ಳುತ್ತಾರೆ ಎಂದು ಧರ್ಮಾಧ್ಯಕ್ಷರು ಹೇಳಿದರು. ಆದ್ದರಿಂದ ಇಂದು ತೆಗೆದುಕೊಳ್ಳುವ ನಿರ್ಧಾರಗಳು ಸುಲಭವಾಗಿ ಹಿಂತಿರುಗಿಸಲಾಗದ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ಎಚ್ಚರಿಸಿದರು.
“ಗಂಭೀರ ಅಥವಾ ಹಿಂತಿರುಗಿಸಲಾಗದ ಹಾನಿಯ ನಿಜವಾದ ಸಾಧ್ಯತೆ ಇರುವ ಸಂದರ್ಭದಲ್ಲಿ, ಸಂಪೂರ್ಣ ವೈಜ್ಞಾನಿಕ ಖಚಿತತೆಯ ಕೊರತೆಯನ್ನು ಸೂಕ್ತ ಎಚ್ಚರಿಕೆಯಿಲ್ಲದೆ ಮುಂದುವರಿಯಲು ಎಂದಿಗೂ ನೆಪವಾಗಿಸಬಾರದು,” ಎಂದು ಧರ್ಮಾಧ್ಯಕ್ಷರು ಒತ್ತಿಹೇಳಿದರು.
ತಾಂತ್ರಿಕ ಪ್ರಗತಿಗೆ ವಿರೋಧವಿಲ್ಲ
ವಿವೇಕವು “ಪ್ರಗತಿಗೆ ಅಡ್ಡಿಯಲ್ಲ”, ಬದಲಾಗಿ “ನಿಜವಾದ ಪ್ರಗತಿಯು ಮಾನವಕುಲಕ್ಕೂ ಸೃಷ್ಟಿಗೂ ಸೇವೆ ಸಲ್ಲಿಸುವಂತೆ ಮಾಡುವ ಸದ್ಗುಣ” ಎಂದು ಅವರು ವಿವರಿಸಿದರು.
“ಧರ್ಮಸಭೆಯು ವೈಜ್ಞಾನಿಕ ಸಂಶೋಧನೆ ಅಥವಾ ಜವಾಬ್ದಾರಿಯುತ ಆರ್ಥಿಕ ಅಭಿವೃದ್ಧಿಯನ್ನು ವಿರೋಧಿಸುವುದಿಲ್ಲ. ಬದಲಾಗಿ,” ತಾಂತ್ರಿಕ ಪ್ರಗತಿಯು ಸದಾ ಮಾನವ ವ್ಯಕ್ತಿಯ ಘನತೆಯನ್ನು ಗೌರವಿಸಬೇಕು, ಸೃಷ್ಟಿಯ ಸಮಗ್ರತೆಯನ್ನು ರಕ್ಷಿಸಬೇಕು ಮತ್ತು ಸಾಮಾನ್ಯ ಹಿತಕ್ಕೆ ಸೇವೆ ಸಲ್ಲಿಸಬೇಕು ಎಂದು ಖಚಿತಪಡಿಸಿಕೊಳ್ಳುವಂತೆ ಧರ್ಮಸಭೆ ಕರೆ ನೀಡುತ್ತದೆ ಎಂದು ಧರ್ಮಾಧ್ಯಕ್ಷರು ಸ್ಪಷ್ಟಪಡಿಸಿದರು.
ಸೃಷ್ಟಿಯ ಆರೈಕೆಯನ್ನು ನ್ಯಾಯ, ಶಾಂತಿ, ಸಂಸ್ಕೃತಿ ಮತ್ತು ಜನರ ಘನತೆಯಿಂದ ಪ್ರತ್ಯೇಕಿಸಲು ಸಾಧ್ಯವಿಲ್ಲ. ಕೊನೆಯಲ್ಲಿ, “ಎಲ್ಲವೂ ಯಾರ ಮೂಲಕ ಸೃಷ್ಟಿಸಲ್ಪಟ್ಟವೋ ಮತ್ತು ಯಾರಲ್ಲಿ ಎಲ್ಲವೂ ಒಟ್ಟಾಗಿ ಅಸ್ತಿತ್ವದಲ್ಲಿವೆಯೋ ಆ ಕ್ರಿಸ್ತನು ನಮ್ಮ ನಾಯಕರಿಗೆ ಜ್ಞಾನ, ನಮ್ಮ ಸಮುದಾಯಗಳಿಗೆ ಧೈರ್ಯ ಮತ್ತು ಭೂಮಿಯ ಕೂಗು ಹಾಗೂ ಬಡವರ ಕೂಗು ಎರಡಕ್ಕೂ ಕಿವಿಗೊಡುವ ಹೃದಯಗಳನ್ನು ನೀಡಲಿ,” ಎಂದು ಪೆಸಿಫಿಕ್ ಧರ್ಮಾಧ್ಯಕ್ಷರು ಪ್ರಾರ್ಥಿಸಿದರು.
“ಸತ್ಯ, ನ್ಯಾಯ ಮತ್ತು ಪ್ರೀತಿಯಲ್ಲಿ ಬೇರೂರಿರುವ ನಿರ್ಧಾರಗಳನ್ನು ಕೈಗೊಳ್ಳುವಂತೆ ಪವಿತ್ರಾತ್ಮರು ನಮಗೆ ಮಾರ್ಗದರ್ಶನ ನೀಡಲಿ. ಹೀಗೆ ಮುಂದಿನ ಪೀಳಿಗೆಗಳು ದೇವರ ಮಹಿಮೆಯನ್ನು ನಿರಂತರವಾಗಿ ಸಾರುವ ಮತ್ತು ಪೆಸಿಫಿಕ್ ಜನರಿಗೆ ಜೀವನಾಧಾರವಾಗಿರುವ ಸಾಗರವನ್ನು ತಮ್ಮ ಪಾಲಿಗೆ ಪಡೆದುಕೊಳ್ಳಲಿ,” ಎಂದು ಅವರು ಹೇಳಿದರು.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).