ಹುಡುಕಿ

ಆಸ್ಟ್ರೇಲಿಯಾದ ಧರ್ಮಾಧ್ಯಕ್ಷ ಕ್ರಿಸ್ಟೋಫರ್ ಸಾಂಡರ್ಸ್ ಅವರ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಶಿಕ್ಷೆ ಪ್ರಕಟವಾದ ಬಳಿಕ, ಸಂತ್ರಸ್ತರಿಗೆ ಧರ್ಮಾಧ್ಯಕ್ಷ ಟಿಮೊತಿ ನಾರ್ಟನ್ ಅವರು ಆಳವಾದ ದುಃಖ ವ್ಯಕ್ತಪಡಿಸಿದ್ದಾರೆ ಆಸ್ಟ್ರೇಲಿಯಾದ ಧರ್ಮಾಧ್ಯಕ್ಷ ಕ್ರಿಸ್ಟೋಫರ್ ಸಾಂಡರ್ಸ್ ಅವರ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಶಿಕ್ಷೆ ಪ್ರಕಟವಾದ ಬಳಿಕ, ಸಂತ್ರಸ್ತರಿಗೆ ಧರ್ಮಾಧ್ಯಕ್ಷ ಟಿಮೊತಿ ನಾರ್ಟನ್ ಅವರು ಆಳವಾದ ದುಃಖ ವ್ಯಕ್ತಪಡಿಸಿದ್ದಾರೆ 

ಆಸ್ಟ್ರೇಲಿಯಾ: ಹಿಂದಿನ ಧರ್ಮಾಧ್ಯಕ್ಷರ ದುರ್ವರ್ತನೆ ಪ್ರಕರಣದ ಬಳಿಕ ಗುಣಮುಖತೆಯ ಹಾದಿಗೆ ಬದ್ಧರಾದ ಪ್ರಸ್ತುತ ಧರ್ಮಾಧ್ಯಕ್ಷರು

ಆಸ್ಟ್ರೇಲಿಯಾದ ಬ್ರೂಮ್ ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಟಿಮೊತಿ ನಾರ್ಟನ್ ಅವರು, ಆಸ್ಟ್ರೇಲಿಯಾದ ಧರ್ಮಾಧ್ಯಕ್ಷ ಕ್ರಿಸ್ಟೋಫರ್ ಸಾಂಡರ್ಸ್ ಅವರಿಗೆ ಶಿಕ್ಷೆ ವಿಧಿಸಲ್ಪಟ್ಟ ಬಳಿಕ ಬಾಧಿತರು ಮತ್ತು ಬದುಕುಳಿದವರು ಅನುಭವಿಸಿದ ನೋವಿಗಾಗಿ ಆಳವಾದ ದುಃಖ ವ್ಯಕ್ತಪಡಿಸಿದ್ದಾರೆ. ಆಲಿಸುವಿಕೆ, ಹೊಣೆಗಾರಿಕೆ ಮತ್ತು ನಿರೀಕ್ಷೆಯನ್ನು ಆಧಾರವಾಗಿಟ್ಟುಕೊಂಡು ಧರ್ಮ ಕ್ಷೇತ್ರವು ಗುಣಮುಖತೆಯ ಹಾದಿಯಲ್ಲಿ ಸಾಗಲಿದೆ ಎಂದು ಅವರು ಭರವಸೆ ನೀಡಿದ್ದಾರೆ.

ವ್ಯಾಟಿಕನ್ ವರದಿ

ಆಸ್ಟ್ರೇಲಿಯಾದ ಬ್ರೂಮ್ ಧರ್ಮ ಕ್ಷೇತ್ರದ ಧರ್ಮಾಧ್ಯಕ್ಷರು, ತಮ್ಮ ಹಿಂದಿನ ಧರ್ಮಾಧ್ಯಕ್ಷರ ವಿರುದ್ಧದ ಲೈಂಗಿಕ ಅಪರಾಧಗಳ ಪ್ರಕರಣದಲ್ಲಿ ಶಿಕ್ಷೆ ಪ್ರಕಟವಾದ ಬಳಿಕ, ಬಾಧಿತರು ಮತ್ತು ಬದುಕುಳಿದವರು ಅನುಭವಿಸಿದ ಅಪಾರ ನೋವು ಹಾಗೂ ಅವಮಾನಕ್ಕಾಗಿ ತಮ್ಮ ಆಳವಾದ ದುಃಖವನ್ನು ವ್ಯಕ್ತಪಡಿಸಿದ್ದಾರೆ. ಗುರುವಾರ, ಪಶ್ಚಿಮ ಆಸ್ಟ್ರೇಲಿಯಾದ ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯಲ್ಲಿ ನ್ಯಾಯಮಂಡಳಿಯು ಬ್ರೂಮ್‌ನ ನಿವೃತ್ತ ಧರ್ಮಾಧ್ಯಕ್ಷ ಕ್ರಿಸ್ಟೋಫರ್ ಸಾಂಡರ್ಸ್ ಅವರು ಇಬ್ಬರು ಯುವ ಮೂಲನಿವಾಸಿ ಪುರುಷರ ವಿರುದ್ಧ ನಡೆಸಿದ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ 13 ಅಪರಾಧಗಳಲ್ಲಿ ತಪ್ಪಿತಸ್ಥರೆಂದು ತೀರ್ಪು ನೀಡಿತು.

ಧರ್ಮಾಧ್ಯಕ್ಷ ಸಾಂಡರ್ಸ್ ಅವರು ಲೈಂಗಿಕ ದೌರ್ಜನ್ಯಗಳು ನಡೆದಿಲ್ಲ ಎಂದು ನಿರಾಕರಿಸಿದ್ದು, ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವ ಅವಕಾಶವನ್ನು ಹೊಂದಿದ್ದಾರೆ. ಅವರು 1996ರಿಂದ 2021ರವರೆಗೆ ಬ್ರೂಮ್ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಆರೋಪಿಸಲಾದ ಅಪರಾಧಗಳು 2008ರಿಂದ 2019ರ ಅವಧಿಯಲ್ಲಿ ನಡೆದವು.

ಕಿಂಬರ್ಲಿ ಪ್ರದೇಶದಾದ್ಯಂತದ ಕಥೋಲಿಕರಿಗೆ ಬರೆದ ತಮ್ಮ ಧರ್ಮಪಾಲನಾ ಪತ್ರದಲ್ಲಿ, ಪ್ರಸ್ತುತ ಬ್ರೂಮ್ ಧರ್ಮ ಕ್ಷೇತ್ರದ ಧರ್ಮಾಧ್ಯಕ್ಷರಾದ ಟಿಮೊತಿ ನಾರ್ಟನ್, ಎಸ್.ವಿ.ಡಿ., ತೀರ್ಪನ್ನು ಅಂಗೀಕರಿಸಿ, ಪ್ರಕರಣವನ್ನು ನ್ಯಾಯಮಂಡಳಿಯ ಮುಂದೆ ತಂದ ಆಸ್ಟ್ರೇಲಿಯಾದ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು. ತಮ್ಮ ಸತ್ಯವನ್ನು “ವ್ಯಕ್ತಪಡಿಸಲು ಮುಂದೆ ಬಂದ” ಸಂತ್ರಸ್ತರು, ಬದುಕುಳಿದವರು ಮತ್ತು ಇತರ ಸಾಕ್ಷಿಗಳಿಗೆ ಧರ್ಮಾಧ್ಯಕ್ಷ ನಾರ್ಟನ್ ಗೌರವ ಸಲ್ಲಿಸಿದರು.

“ಅವರು ದೀರ್ಘ ಮತ್ತು ಕಠಿಣ ಪ್ರಕ್ರಿಯೆಯುದ್ದಕ್ಕೂ ಅಸಾಮಾನ್ಯ ದೃಢತೆ ಮತ್ತು ಬದ್ಧತೆಯನ್ನು ತೋರಿಸಿದ್ದಾರೆ,” ಎಂದು ಅವರು ಹೇಳಿದರು. “ಅವರ ಮಾತುಗಳನ್ನು ಕರುಣೆಯಿಂದ ಆಲಿಸಿ, ಘನತೆಯಿಂದ ನಡೆಸಿಕೊಳ್ಳಬೇಕಾಗಿತ್ತು.”

ಸಂತ್ರಸ್ತರು ಅನುಭವಿಸಿದ ನೋವು ಮತ್ತು ಅವಮಾನಕ್ಕಾಗಿ ಧರ್ಮಾಧ್ಯಕ್ಷ ನಾರ್ಟನ್ ಅವರು ಆಳವಾದ ದುಃಖವನ್ನು ವ್ಯಕ್ತಪಡಿಸಿದರು. ಅವರ ಧ್ವನಿಗಳಿಗೆ ಕಿವಿಗೊಡಲು ಮತ್ತು ಅವರು ಅನುಭವಿಸಿದ ನೋವನ್ನು ಗುರುತಿಸಲು ಇಷ್ಟು ದೀರ್ಘಕಾಲ ತೆಗೆದುಕೊಂಡಿರುವುದಕ್ಕೂ ಅವರು ವಿಷಾದ ವ್ಯಕ್ತಪಡಿಸಿದರು. ಸಂತ್ರಸ್ತರನ್ನು ತಲುಪಿ, ಅವರನ್ನು ನಿರೀಕ್ಷೆ ಮತ್ತು ಗುಣಮುಖತೆಯತ್ತ ಕರೆದೊಯ್ಯುವ ಪ್ರಯಾಣದಲ್ಲಿ ಜೊತೆಯಾಗಿ ಸಾಗಲು ಬ್ರೂಮ್ ಧರ್ಮ ಕ್ಷೇತ್ರವು ಸಾಧ್ಯವಿರುವ ಎಲ್ಲವನ್ನೂ ಮಾಡಲಿದೆ ಎಂದು ಧರ್ಮಾಧ್ಯಕ್ಷ ನಾರ್ಟನ್ ಭರವಸೆ ನೀಡಿದರು.

ತಮ್ಮ ಧರ್ಮಪಾಲನಾ ಪತ್ರದಲ್ಲಿ ಆಸ್ಟ್ರೇಲಿಯಾದ ಧರ್ಮಾಧ್ಯಕ್ಷರು, ಈ ನೋವು ಪೊಲೀಸ್ ಅಧಿಕಾರಿಗಳಿಗೆ ಮತ್ತು ನ್ಯಾಯಾಲಯದ ಮುಂದೆ ಸಾಕ್ಷ್ಯ ನೀಡಿದವರಿಗಷ್ಟೇ ಸೀಮಿತವಾಗಿಲ್ಲ ಎಂದು ಗುರುತಿಸಿದರು. “ವಿಶ್ವಾಸಕ್ಕೆ ಧಕ್ಕೆಯಾಗಿದೆ ಮತ್ತು ದ್ರೋಹ ಹಾಗೂ ವಿಭಜನೆಯ ಗಾಯಗಳು ಧರ್ಮ ಕ್ಷೇತ್ರದಾದ್ಯಂತ ಬಹಿರಂಗಗೊಂಡಿವೆ,” ಎಂದು ಅವರು ಹೇಳಿದರು. “ನಮ್ಮ ನಾಯಕತ್ವ ಮತ್ತು ನಮ್ಮ ಧರ್ಮಸಭೆಯ ಮೇಲೆ ವಿಶ್ವಾಸವಿಟ್ಟವರಿಗೂ ಈ ನೋವು ತಲುಪಿದೆ.” ತಮ್ಮ ಧರ್ಮಕೇಂದ್ರಗಳು ಮತ್ತು ಸ್ಥಳೀಯ ಸಮುದಾಯಗಳಲ್ಲಿ ಸೇವೆ ಸಲ್ಲಿಸಿದ ಅನೇಕ ಕಥೋಲಿಕರಿಗೆ ಇದು “ಕಠಿಣ ಪ್ರಶ್ನೆಗಳು ಮತ್ತು ಪರಿಹಾರವಾಗದ ಭಾವನೆಗಳನ್ನು” ಉಳಿಸಿದೆ.

ಧರ್ಮಕ್ಷೇತ್ರದ ನಾಯಕತ್ವದೊಳಗೆ ಇಂತಹ ವಿಶ್ವಾಸದ್ರೋಹ ಹೇಗೆ ಸಂಭವಿಸಿತು ಎಂಬುದನ್ನು ಅರ್ಥಮಾಡಿಕೊಳ್ಳಲು ಸ್ಥಳೀಯ ಕಥೋಲಿಕ ಸಮುದಾಯವು ಹೋರಾಡುತ್ತಿರುವ ನೋವನ್ನೂ ಧರ್ಮಾಧ್ಯಕ್ಷ ನಾರ್ಟನ್ ಅಂಗೀಕರಿಸಿದರು. ಇದಕ್ಕೆ ಪ್ರತಿಕ್ರಿಯೆಯಾಗಿ, ಬ್ರೂಮ್ ಪ್ರಧಾನ ದೇವಾಲಯದಿಂದ ಹಿಡಿದು ಕಿಂಬರ್ಲಿಯ ಅತ್ಯಂತ ದೂರದ ಸಮುದಾಯಗಳವರೆಗೆ ಧರ್ಮ ಕ್ಷೇತ್ರವನ್ನು “ಸುರಕ್ಷತೆ, ಗೌರವ ಮತ್ತು ಹೊಣೆಗಾರಿಕೆಯ” ಸ್ಥಳವನ್ನಾಗಿ ಮಾಡುವ ಹೊಸ ಬದ್ಧತೆಯನ್ನು ಅವರು ವ್ಯಕ್ತಪಡಿಸಿದರು.

ಪ್ರತಿಯೊಬ್ಬ ವ್ಯಕ್ತಿಯನ್ನೂ ಘನತೆ ಮತ್ತು ಕರುಣೆಯಿಂದ ನಡೆಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಧರ್ಮ ಕ್ಷೇತ್ರವು ಕಾರ್ಯನಿರ್ವಹಿಸಲಿದೆ ಎಂದು ಧರ್ಮಾಧ್ಯಕ್ಷ ನಾರ್ಟನ್ ಹೇಳಿದರು. ಪರಸ್ಪರ ಒಪ್ಪಿಗೆಯಾಗದ ಸಂದರ್ಭಗಳಲ್ಲಿಯೂ “ಪ್ರಾಮಾಣಿಕ ಮತ್ತು ಶಾಂತಿಯುತ ಸಂಬಂಧಗಳನ್ನು” ನಿರ್ಮಿಸಲು ಪ್ರಯತ್ನಿಸಲಾಗುವುದು ಎಂದು ಅವರು ತಿಳಿಸಿದರು.

ಮುಂದಿನ ತಿಂಗಳುಗಳನ್ನು ಗಮನದಲ್ಲಿಟ್ಟುಕೊಂಡು, ವಿಶಾಲವಾದ ಧರ್ಮಕ್ಷೇತ್ರದ ವಿವಿಧ ಸಮುದಾಯಗಳಿಗೆ ತಾವು ಭೇಟಿ ನೀಡುವುದಾಗಿ ಧರ್ಮಾಧ್ಯಕ್ಷ ನಾರ್ಟನ್ ಪ್ರಕಟಿಸಿದರು. ಈ ಭೇಟಿಗಳು ದುಃಖವನ್ನು ವ್ಯಕ್ತಪಡಿಸಲು ಮತ್ತು ಪರಸ್ಪರ ಆಲಿಸಲು ಒಂದು ಅವಕಾಶವಾಗಲಿವೆ. ವಿಶ್ವಾಸಿಗಳು ಹೆಚ್ಚು ಕರುಣಾಮಯವಾದ ಭವಿಷ್ಯದತ್ತ ಸಹಯಾತ್ರೆಯ ಮಾರ್ಗದಲ್ಲಿ ಒಟ್ಟಾಗಿ ಸಾಗಲಿದ್ದಾರೆ ಎಂದು ಅವರು ಹೇಳಿದರು.

ಗುಣಮುಖತೆಯ ಈ ಸಮುದಾಯದ ಪ್ರಯಾಣಕ್ಕೆ ತಮ್ಮ ಕಳವಳಗಳು ಮತ್ತು ಅಭಿಪ್ರಾಯಗಳನ್ನು ಹಂಚಿಕೊಳ್ಳುವಂತೆ ಅವರು ಜನರನ್ನು ಆಹ್ವಾನಿಸಿದರು.ತೀರ್ಪಿನಿಂದ ಅಥವಾ ವಿಚಾರಣೆಯ ಸಂದರ್ಭದಲ್ಲಿ ಕೇಳಿಬಂದ ಹೇಳಿಕೆಗಳಿಂದ ಮನಸ್ಸಿನಲ್ಲಿ ಸಂಕಟಕ್ಕೊಳಗಾದ ಯಾರಾದರೂ ಸಹಾಯವನ್ನು ಪಡೆದುಕೊಳ್ಳುವಂತೆ ಧರ್ಮಾಧ್ಯಕ್ಷರು ಪ್ರೋತ್ಸಾಹಿಸಿದರು. ಧರ್ಮ ಕ್ಷೇತ್ರ ಮತ್ತು ಧರ್ಮಕೇಂದ್ರದ ಸಿಬ್ಬಂದಿ ಸ್ವತಂತ್ರ ಸಹಾಯ ಸೇವೆಗಳೊಂದಿಗೆ ಅವರನ್ನು ಸಂಪರ್ಕಿಸಲು ನೆರವಾಗಬಹುದು ಎಂದು ಅವರು ತಿಳಿಸಿದರು.

ತಮ್ಮ ಧರ್ಮಪಾಲನಾ ಪತ್ರದ ಕೊನೆಯಲ್ಲಿ ಧರ್ಮಾಧ್ಯಕ್ಷ ನಾರ್ಟನ್ ಅವರು ಬ್ರೂಮ್ ಧರ್ಮ ಕ್ಷೇತ್ರದ ಪಾಲಕಿಯಾದ ಶಾಂತಿಯ ರಾಣಿಯಾದ ಮಾತೆ ಮರಿಯಮ್ಮ ಅವರ ಪಾದಗಳಿಗೆ ಧರ್ಮಕ್ಷೇತ್ರವನ್ನು ಸಮರ್ಪಿಸಿದರು. “ಸಮನ್ವಯ, ಗುಣಮುಖತೆ ಮತ್ತು ನಿರೀಕ್ಷೆ”ಯತ್ತ ಸಾಗುವ ಈ ಪ್ರಯಾಣದಲ್ಲಿ ಅವರ ಮಧ್ಯಸ್ಥಿಕೆ ಮತ್ತು ಜೊತೆಯನ್ನು ಕೋರಿದರು.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

13 ಆಗಸ್ಟ್ 2026, 21:34