ಹುಡುಕಿ

ಪರಮತ್ರಿತ್ವ ಮತ್ತು ಬಂಧಿತರ ಸಭೆ (O.SS.T.) ಮಡಗಾಸ್ಕರ್‌ನಲ್ಲಿ ತನ್ನ 100 ವರ್ಷಗಳ ಸೇವೆಯನ್ನು ಆಚರಿಸುತ್ತಿದೆ. ಪರಮತ್ರಿತ್ವ ಮತ್ತು ಬಂಧಿತರ ಸಭೆ (O.SS.T.) ಮಡಗಾಸ್ಕರ್‌ನಲ್ಲಿ ತನ್ನ 100 ವರ್ಷಗಳ ಸೇವೆಯನ್ನು ಆಚರಿಸುತ್ತಿದೆ. 

ಭರವಸೆ, ಸ್ವಾತಂತ್ರ್ಯ ಮತ್ತು ಕರುಣೆಯಿಂದ ತುಂಬಿದ ಮಡಗಾಸ್ಕರ್‌ನ ಪರಮತ್ರಿತ್ವ ಸಭೆಯ ಶತಮಾನದ ಸೇವೆ

ಪರಮತ್ರಿತ್ವ ಮತ್ತು ಬಂಧಿತರ ಸಭೆಯು ಮಡಗಾಸ್ಕರ್‌ನಲ್ಲಿ ತನ್ನ ಮಿಷನರಿ ಸೇವೆಯ ಶತಮಾನೋತ್ಸವವನ್ನು ಆಚರಿಸುತ್ತಿದ್ದು, ಸ್ಥಳೀಯ ಧರ್ಮಸಭೆಯನ್ನು ಬಲಪಡಿಸಿದ, ಧಾರ್ಮಿಕ ಕರೆಗಳನ್ನು ಬೆಳೆಸಿದ ಮತ್ತು ದೇಶದ ಅತ್ಯಂತ ದೂರದ ಪ್ರದೇಶಗಳಿಗೂ ಶುಭಸಂದೇಶವನ್ನು ತಲುಪಿಸಿದ ಹಲವು ತಲೆಮಾರುಗಳ ಮಿಷನರಿಗಳ ಸೇವೆಗಾಗಿ ದೇವರಿಗೆ ಕೃತಜ್ಞತೆ ಸಲ್ಲಿಸುತ್ತಿದೆ. ಈ ಶತಮಾನೋತ್ಸವವು ಇಂದಿನ ಜಗತ್ತಿನ ಹೊಸ ಗಡಿಗಳಲ್ಲಿ ಭರವಸೆ ಮತ್ತು ವಿಮೋಚನೆಯ ಸಂದೇಶವನ್ನು ಕೊಂಡೊಯ್ಯುವ ಸಭೆಯ ಬದ್ಧತೆಯನ್ನು ಮತ್ತೊಮ್ಮೆ ನವೀಕರಿಸಿದೆ.

ಲೇಖಕರು: ಸಹೋದರಿ ಕ್ರಿಸ್ಟಿನ್ ಮಸಿವೋ, CPS 

ತ್ರಿತ್ವ ಸಭೆ ಎಂದೂ ಕರೆಯಲ್ಪಡುವ ಪರಮತ್ರಿತ್ವ ಮತ್ತು ಬಂಧಿತರ ಸಭೆಯು ಮಡಗಾಸ್ಕರ್‌ನಲ್ಲಿ ತನ್ನ ಮಿಷನರಿ ಸೇವೆಯ 100 ವರ್ಷಗಳನ್ನು ಆಚರಿಸುತ್ತಿದೆ. ಒಂದು ಶತಮಾನದಿಂದ ನಡೆದ ಶುಭಸಂದೇಶ ಪ್ರಚಾರ, ಧರ್ಮಪಾಲನಾ ಸೇವೆ ಮತ್ತು ಸುವಾರ್ತೆಯ ಸಾಕ್ಷ್ಯವು ಅಲ್ಲಿನ ಸ್ಥಳೀಯ ಧರ್ಮಸಭೆಯನ್ನೂ ತ್ರಿತ್ವ ಸಭೆಯನ್ನೂ ಆಳವಾಗಿ ರೂಪಿಸಿದೆ.

ಸೇವಾ ಸಾಕ್ಷ್ಯದ ಒಂದು ಶತಮಾನ

ಈ ಶತಮಾನೋತ್ಸವವು 1926ರ ಜೂನ್ 4ರಂದು ರೋಮ್‌ನಿಂದ ಹೊರಟ ಮೊದಲ ಐವರು ತ್ರಿತ್ವ ಸಭೆಯ ಮಿಷನರಿಗಳನ್ನು ಸ್ಮರಿಸುತ್ತದೆ. ಪರಮತ್ರಿತ್ವ ಮಹೋತ್ಸವದ ಕೆಲವೇ ದಿನಗಳ ನಂತರ ಅವರು ತಮ್ಮ ಮಿಷನರಿ ಪ್ರಯಾಣವನ್ನು ಆರಂಭಿಸಿದ್ದರು. ಆಗಿನ ಸಭೆಯ ಮಹಾಧಿಕಾರಿಯಾಗಿದ್ದ ವಂದನೀಯ ಗುರು ಫ್ರಾನ್ಸಿಸ್ ಝೇವಿಯರ್ ಆಫ್ ದ ಇಮ್ಯಾಕ್ಯುಲೇಟ್ ಕನ್ಸೆಪ್ಶನ್ ಅವರೊಂದಿಗೆ, 1924ರಲ್ಲಿ ಸೊಮಾಲಿಯಾದಿಂದ ಸಭೆಯು ಹಿಂತೆಗೆದುಕೊಂಡ ನಂತರ ಮಡಗಾಸ್ಕರ್‌ನಲ್ಲಿ ತ್ರಿತ್ವ ಸಭೆಯ ಮಿಷನ್ ಸ್ಥಾಪಿಸುವ ಉದ್ದೇಶದಿಂದ ಅವರು ಹೊರಟರು. ತಮಗೆ ವಹಿಸಲಾದ ಮಿಯಾರಿನರಿವೊ ಮಿಷನ್ ಪ್ರದೇಶದಲ್ಲಿ ನೆಲೆಸುವ ಮೊದಲು ಅವರು ಮಲಗಾಸಿ ಮತ್ತು ಫ್ರೆಂಚ್ ಭಾಷೆಗಳನ್ನು ಕಲಿತರು.

ಶತಮಾನೋತ್ಸವದ ಕುರಿತು ವ್ಯಾಟಿಕನ್‌ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಸಭೆಯ ಮಹಾಧಿಕಾರಿ ವಂದನೀಯ ಗುರು ಲೂಯಿಜಿ ಬುಕ್ಕರೆಲ್ಲೊ, ಪವಿತ್ರಾತ್ಮರ ಪ್ರೇರಣೆಗೆ ಸ್ಪಂದಿಸಿ ಸಾಂಸ್ಕೃತಿಕ, ಭಾಷಿಕ ಮತ್ತು ಧಾರ್ಮಿಕ ಗಡಿಗಳನ್ನು ದಾಟಲು ಮೊದಲ ಮಿಷನರಿಗಳು “ಸುವಾರ್ತೆಯ ಧೈರ್ಯ”ವನ್ನು ಪ್ರದರ್ಶಿಸಿದರು ಎಂದು ಹೇಳಿದರು. ಅವರ ಪ್ರಯಾಣವು ಕೇವಲ ಸಭೆಯ ವಿಸ್ತರಣೆಯಾಗಿರಲಿಲ್ಲ; ಬದಲಾಗಿ, ತ್ರಿತ್ವ ಸಭೆಯ ನಿರಂತರ ಮಿಷನರಿ ಗುರುತಿನ ಅಭಿವ್ಯಕ್ತಿಯಾಗಿತ್ತು ಎಂದು ಅವರು ತಿಳಿಸಿದರು.

ಶುಭಸಂದೇಶ ಪ್ರಚಾರ ಮತ್ತು ಮಾನವ ಘನತೆಯ ಸೇವೆ

ಸಂತ ಜಾನ್ ಡಿ ಮಾತಾ ಮತ್ತು ಸಂತ ಫೆಲಿಕ್ಸ್ ಆಫ್ ವಾಲೊಯಿಸ್ ಅವರ ಧ್ಯೇಯದಿಂದ ಪ್ರೇರಣೆ ಪಡೆದ ತ್ರಿತ್ವ ಸಭೆಯ ಮಿಷನ್, ಶುಭಸಂದೇಶ ಘೋಷಣೆಯೊಂದಿಗೆ ಮಾನವನ ಸ್ವಾತಂತ್ರ್ಯ ಮತ್ತು ಘನತೆಯ ರಕ್ಷಣೆಯನ್ನು ಸದಾ ಒಂದಾಗಿಸಿಕೊಂಡಿದೆ. ಸಂಘರ್ಷ ಮತ್ತು ಗುಲಾಮಗಿರಿಯ ಕಾಲಘಟ್ಟದಲ್ಲಿ ಸ್ಥಾಪನೆಯಾದ ಈ ಸಭೆಯು ಆರಂಭದಲ್ಲಿ ಬಂಧಿತರ ನೆರವಿಗಾಗಿ ತನ್ನನ್ನು ಸಮರ್ಪಿಸಿಕೊಂಡಿತ್ತು. ಸಮಾಜದ ಅಂಚಿನಲ್ಲಿ ಬದುಕುತ್ತಿರುವ ಜನರ ಸೇವೆಯ ಮೂಲಕ ಆ ಮಿಷನ್ ಇಂದಿಗೂ ಮುಂದುವರಿಯುತ್ತಿದೆ.

ಮಡಗಾಸ್ಕರ್‌ನಲ್ಲಿ ಮಿಷನರಿಗಳು ದೂರದ ಹಳ್ಳಿಗಳಿಗೆ ನಿರಂತರ ಧರ್ಮಪಾಲನಾ ಭೇಟಿಗಳನ್ನು ನೀಡುವುದಕ್ಕೆ ಹೆಚ್ಚಿನ ಆದ್ಯತೆ ನೀಡಿದರು. ಇದರಿಂದ ವಿವಿಧ ಪ್ರದೇಶಗಳಲ್ಲಿ ಚದುರಿದ್ದ ಕ್ರೈಸ್ತ ಸಮುದಾಯಗಳು ಧರ್ಮಸಭೆಯ ಜೀವನದೊಂದಿಗೆ ಸಂಪರ್ಕದಲ್ಲಿರಲು ಸಾಧ್ಯವಾಯಿತು. ಧರ್ಮಬೋಧಕರು ಮತ್ತು ಧರ್ಮಪಾಲನಾ ಕಾರ್ಯಕರ್ತರ ತರಬೇತಿಗೂ ಹೆಚ್ಚಿನ ಒತ್ತು ನೀಡಿದರು. ಧರ್ಮಬೋಧನಾ ತರಬೇತಿ ಕೇಂದ್ರದ ಮೂಲಕ ಸ್ಥಳೀಯ ನಾಯಕರನ್ನು ಶುಭಸಂದೇಶ ಸೇವೆಗೆ ಸಿದ್ಧಪಡಿಸಿದರು. ಅದೇ ಸಮಯದಲ್ಲಿ ದೇವಾಲಯಗಳು, ಶಾಲೆಗಳು ಮತ್ತು ಬಹುಉದ್ದೇಶದ ಕೇಂದ್ರಗಳನ್ನು ನಿರ್ಮಿಸಿದರು. ಆರಾಧನಾ ಸ್ಥಳಗಳನ್ನು ಪುನರುಜ್ಜೀವನಗೊಳಿಸುವ ಮೂಲಕ ಜನರ ಆಧ್ಯಾತ್ಮಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ನೆರವಾದರು.

ತಮ್ಮ ಸೇವೆಯುದ್ದಕ್ಕೂ ತ್ರಿತ್ವ ಸಭೆಯ ಮಿಷನರಿಗಳು ಸ್ಥಳೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಗೌರವಿಸುತ್ತಾ, ವಿಶ್ವಾಸದ ಪಯಣದಲ್ಲಿ ಜನರೊಂದಿಗೆ ನಡೆದರು. ಅವರ ಸೇವೆಯು ಸುವಾರ್ತಾ ಪ್ರಚಾರಕ್ಕೆ ಮಾತ್ರ ಸೀಮಿತವಾಗದೆ, ಶಿಕ್ಷಣ, ಧರ್ಮಪಾಲನಾ ತರಬೇತಿ ಮತ್ತು ದ್ವೀಪದಾದ್ಯಂತ ಕ್ರೈಸ್ತ ಸಮುದಾಯಗಳ ಬಲವರ್ಧನೆಗೂ ಮಹತ್ವದ ಕೊಡುಗೆ ನೀಡಿತು.

ಭವಿಷ್ಯದತ್ತ ಬೆಳೆಯುತ್ತಿರುವ ಸೇವೆ

ಕಳೆದ ಒಂದು ಶತಮಾನದಲ್ಲಿ ಮಡಗಾಸ್ಕರ್‌ನ ತ್ರಿತ್ವ ಸಭೆಯ ಸೇವೆ ಗಮನಾರ್ಹವಾಗಿ ಬೆಳೆದಿದ್ದು, ಸ್ವಾವಲಂಬಿ ಸ್ಥಳೀಯ ಧರ್ಮಸಭೆಗಳನ್ನು ನಿರ್ಮಿಸುವ ತನ್ನ ಗುರಿಯನ್ನು ಸಾಧಿಸುವತ್ತ ಮಹತ್ವದ ಹೆಜ್ಜೆಗಳನ್ನು ಇಟ್ಟಿದೆ. 1939ರಲ್ಲಿ ಮಿಯಾರಿನರಿವೊ ಪ್ರೇಷಿತ ಧರ್ಮಪ್ರಾಂತ್ಯದ ಸ್ಥಾಪನೆಯೊಂದಿಗೆ ಈ ಬೆಳವಣಿಗೆಗೆ ಮಹತ್ವದ ತಿರುವು ದೊರೆಯಿತು. ಇದು ಆಫ್ರಿಕಾದಲ್ಲಿ ತ್ರಿತ್ವ ಸಭೆಗೆ ವಹಿಸಲಾದ ಮೊದಲ ಧಾರ್ಮಿಕ ಆಡಳಿತ ಪ್ರದೇಶವಾಗಿತ್ತು. ನಂತರ ಮಿಷನ್ ಸಿರೋಅನೊಮಾಂಡಿಡಿ ಮತ್ತು ಅಂಬತೊಂಡ್ರಝಾಕ ಪ್ರದೇಶಗಳಿಗೂ ವಿಸ್ತರಿಸಿತು. ಇಂದು ತ್ರಿತ್ವ ಸಭೆಯ ಸದಸ್ಯರು ಮಡಗಾಸ್ಕರ್‌ನ 22 ಧರ್ಮಕ್ಷೇತ್ರಗಳಲ್ಲಿ 12 ಧರ್ಮಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಧಾರ್ಮಿಕ ಕರೆಗಳು ಸಮೃದ್ಧವಾಗಿ ಬೆಳೆಯುತ್ತಿದ್ದು, ಮಡಗಾಸ್ಕರ್‌ನ ಮಿಷನರಿಗಳು ವಿದೇಶಗಳಲ್ಲಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಮಲಗಾಸಿ ಧರ್ಮಸಭೆಯಿಂದ ಐವರು ತ್ರಿತ್ವ ಸಭೆಯ ಧರ್ಮಾಧ್ಯಕ್ಷರೂ ಹೊರಹೊಮ್ಮಿದ್ದಾರೆ.

ಶತಮಾನೋತ್ಸವದ ಸಂದರ್ಭದಲ್ಲಿ ವಂದನೀಯ ಗುರು ಬುಕ್ಕರೆಲ್ಲೊ, ಈ ಆಚರಣೆಯು ಇಂದಿನ ಜಗತ್ತಿನ ಸಾಂಸ್ಕೃತಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಗಡಿಗಳಲ್ಲಿ ಸಭೆಯ ಮಿಷನರಿ ಬದ್ಧತೆಯನ್ನು ನವೀಕರಿಸುವ ಕರೆಯಾಗಿದೆ ಎಂದು ಹೇಳಿದರು. ಸಮರ್ಪಣೆ ಮತ್ತು ತ್ಯಾಗದಿಂದ ಸೇವೆ ಸಲ್ಲಿಸಿದ ಹಲವು ತಲೆಮಾರುಗಳ ಮಿಷನರಿಗಳಿಗಾಗಿ ತ್ರಿತ್ವ ಸಭೆಯು ಕೃತಜ್ಞತೆ ಸಲ್ಲಿಸುತ್ತಿದೆ. ಒಂದು ಕಾಲದಲ್ಲಿ ಸಣ್ಣ ಮಿಷನರಿ ಉಪಸ್ಥಿತಿಯಾಗಿ ಆರಂಭವಾದ ಸೇವೆಯು ಇಂದು ಜೀವಂತ ಮತ್ತು ಚೈತನ್ಯಪೂರ್ಣ ಧರ್ಮಸಭೆಯಾಗಿ ಬೆಳೆದಿದ್ದು, ಭರವಸೆ, ಸ್ವಾತಂತ್ರ್ಯ ಮತ್ತು ಕರುಣೆಯ ಸಂಕೇತವಾಗಿ ಶುಭಸಂದೇಶವನ್ನು ನಿರಂತರವಾಗಿ ಸಾರುತ್ತಿದೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

03 ಆಗಸ್ಟ್ 2026, 19:27