ಹುಡುಕಿ

ಸಹೋದರಿ ಅಬ್ಬಿ ಅವೆಲಿನೊ ಹಾಗೂ ತಲಿತಾ ಕುಮ್ ಜಾಲತಾಣದ ಕೆಲವು ಸದಸ್ಯರು (ತಲಿತಾ ಕುಮ್ ಇಂಟರ್‌ನ್ಯಾಷನಲ್) ಸಹೋದರಿ ಅಬ್ಬಿ ಅವೆಲಿನೊ ಹಾಗೂ ತಲಿತಾ ಕುಮ್ ಜಾಲತಾಣದ ಕೆಲವು ಸದಸ್ಯರು (ತಲಿತಾ ಕುಮ್ ಇಂಟರ್‌ನ್ಯಾಷನಲ್)  (Talitha Kum International)

ವಂಚನೆಯ ಹಿಂದೆ ಅಡಗಿರುವ ಸತ್ಯ: ಮಾನವ ಕಳ್ಳಸಾಗಣೆ ಸಂತ್ರಸ್ತರ ಘನತೆ ಮತ್ತು ಭರವಸೆಯ ಪುನರುಜ್ಜೀವನ

"ವಂಚನೆಯ ಹಿಂದೆ ಸಿಲುಕಿರುವವರು" ಎಂಬ ವಿಷಯದೊಂದಿಗೆ ಆಚರಿಸಲಾಗುತ್ತಿರುವ 2026ರ ವಿಶ್ವ ಮಾನವ ಕಳ್ಳಸಾಗಣೆ ವಿರೋಧಿ ದಿನದ ಸಂದರ್ಭದಲ್ಲಿ, ಮಾನವ ಕಳ್ಳಸಾಗಣೆ ವಿರುದ್ಧ ಹೋರಾಡುವ ಧಾರ್ಮಿಕ ಸೇವೆಯಲ್ಲಿರುವವರ ಜಾಗತಿಕ ಜಾಲತಾಣವಾದ ತಲಿತಾ ಕುಮ್‌ನ ಇಂಟರ್‌ನ್ಯಾಷನಲ್‌ನ ಸಂಯೋಜಕಿ, ಇಂದಿನ ಕಾಲದ ಸಾಮಾನ್ಯವಾಗಿಬಿಟ್ಟ ಒಂದು ನೈಜ ಘಟನೆಯನ್ನು ಹಂಚಿಕೊಳ್ಳುತ್ತಾ, ಯಾರನ್ನೂ ಸರಕಿನಂತೆ ಪರಿಗಣಿಸದ ಸಮಾಜ ನಿರ್ಮಿಸಲು ಭರವಸೆ, ಶಾಂತಿ, ಸ್ವಾತಂತ್ರ್ಯ ಮತ್ತು ನ್ಯಾಯದ ಜಾಲಗಳನ್ನು ಹೆಣೆಯುವಂತೆ ಕರೆ ನೀಡಿದ್ದಾರೆ.

ಲೇಖಕರು: ಸಹೋದರಿ ಅಬ್ಬಿ ಅವೆಲಿನೊ, MM*

ಮಾನವ ಕಳ್ಳಸಾಗಣೆ ನಿರಂತರವಾಗಿ ಹೊಸ ಹೊಸ ರೂಪಗಳನ್ನು ಪಡೆಯುತ್ತಿದೆ. ತಂತ್ರಜ್ಞಾನವು ಅಭಿವೃದ್ಧಿಯಾಗುತ್ತಿದ್ದಂತೆ, ಕಳ್ಳಸಾಗಣೆಗಾರರೂ ಸಾಮಾಜಿಕ ಜಾಲತಾಣಗಳು, ಆನ್‌ಲೈನ್ ವೇದಿಕೆಗಳು ಮತ್ತು ಮೋಸದ ನೇಮಕಾತಿ ವಿಧಾನಗಳನ್ನು ಬಳಸಿಕೊಂಡು ಉತ್ತಮ ಅವಕಾಶಗಳನ್ನು ಹುಡುಕುತ್ತಿರುವ ಜನರನ್ನು ಶೋಷಿಸಲು ತಮ್ಮ ತಂತ್ರಗಳನ್ನು ಬದಲಾಯಿಸುತ್ತಿದ್ದಾರೆ. ಭರವಸೆ ಮತ್ತು ಉತ್ತಮ ಭವಿಷ್ಯವನ್ನು ನೀಡುವ ಉದ್ಯೋಗದ ಆಮಿಷವು ಭಯ, ದೌರ್ಜನ್ಯ ಮತ್ತು ಶೋಷಣೆಯ ದಾರಿಯಾಗಬಹುದು.

ಆಯು[1] ಅವರ ಕಥೆಯು ಈ ನೋವಿನ ವಾಸ್ತವತೆಗೆ ಒಂದು ಉದಾಹರಣೆಯಾಗಿದೆ. ವಿಶ್ವಾಸಾರ್ಹ ಸ್ನೇಹಿತೆಯೊಬ್ಬರು ನೀಡಿದ ನಿಜವಾದ ಉದ್ಯೋಗದ ಅವಕಾಶವೆಂದು ನಂಬಿ ಅವರು ಇಂಡೋನೇಷ್ಯಾವನ್ನು ತೊರೆದರು. ಆದರೆ ಫಿಲಿಪ್ಪೀನ್ಸ್‌ನಲ್ಲಿ ಮಾನವ ಕಳ್ಳಸಾಗಣೆಯ ಬಲೆಗೆ ಸಿಲುಕಿದರು. ಅವರನ್ನು ಆನ್‌ಲೈನ್ ವಂಚನಾ ಕೇಂದ್ರವೊಂದಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಸಶಸ್ತ್ರ ಕಾವಲುಗಾರರ ಕಣ್ಗಾವಲಿನಲ್ಲಿ ನಿರಂತರ ಭಯದ ನಡುವೆ ಕೆಲಸ ಮಾಡಲು ಅವರನ್ನು ಬಲವಂತಪಡಿಸಲಾಯಿತು. ತಪ್ಪಿಸಿಕೊಳ್ಳುವುದು ಬಹುತೇಕ ಅಸಾಧ್ಯವಾಗಿತ್ತು. ತಮ್ಮ ರಕ್ಷಣೆಯಾಗುವ ಮೊದಲು, ಅನೇಕ ಜನರು ಬೆದರಿಕೆ, ಹಿಂಸೆ ಮತ್ತು ಮಾನಸಿಕ ದೌರ್ಜನ್ಯವನ್ನು ಅನುಭವಿಸುತ್ತಿರುವುದನ್ನು ಅವರು ಕಣ್ಣಾರೆ ಕಂಡರು.

ಇಂಡೋನೇಷ್ಯಾ ಮತ್ತು ಫಿಲಿಪ್ಪೀನ್ಸ್‌ನಲ್ಲಿರುವ ತಾಲಿತಾ ಕುಮ್ನ ಜಾಲತಾಣಗಳು ಹಾಗೂ ಇಂಟರ್‌ನ್ಯಾಷನಲ್ ಜಸ್ಟಿಸ್ ಮಿಷನ್ (IJM)ನ ಸಹಯೋಗದಿಂದ ಅವರು ರಕ್ಷಿಸಲ್ಪಟ್ಟರು ಮತ್ತು ತಮ್ಮ ಗುಣಮುಖತೆಯ ಪಯಣವನ್ನು ಆರಂಭಿಸಿದರು. ಇಂದು ಅವರು ಮಾನವ ಕಳ್ಳಸಾಗಣೆಯಿಂದ ಬದುಕುಳಿದವರ ಪರ ವಕಾಲತ್ತು ವಹಿಸುತ್ತಿದ್ದು, ತಮ್ಮ ಧ್ವನಿಯ ಮೂಲಕ ಮಾನವ ಕಳ್ಳಸಾಗಣೆಯ ನೈಜತೆಯನ್ನು ಬಹಿರಂಗಪಡಿಸಿ, ಇತರರು ಇದೇ ರೀತಿಯ ಶೋಷಣೆಗೆ ಒಳಗಾಗದಂತೆ ಜಾಗೃತಿ ಮೂಡಿಸುತ್ತಿದ್ದಾರೆ. ಅವರ ಅನುಭವವು ಡಿಜಿಟಲ್ ಜಗತ್ತಿನ ಹಿಂದೆ ಅಡಗಿರುವ ನೋವಿನ ವಾಸ್ತವತೆಯನ್ನು ಅನಾವರಣಗೊಳಿಸುತ್ತದೆ.

ಪ್ರತಿಯೊಂದು ವಂಚನೆಯ ಸಂದೇಶದ ಹಿಂದೆ, ನಕಲಿ ಹೂಡಿಕೆ ಯೋಜನೆಯ ಹಿಂದೆ ಅಥವಾ ಆನ್‌ಲೈನ್ ಮೋಸದ ಹಿಂದೆ, ತನ್ನ ಸ್ವಾತಂತ್ರ್ಯವನ್ನು ಕಳೆದುಕೊಂಡ ವ್ಯಕ್ತಿಯೊಬ್ಬರು ಇರಬಹುದು. ಸುಳ್ಳು ಭರವಸೆಗಳಿಂದ ಮೋಸಹೋಗಿ, ಗಡಿಗಳನ್ನು ದಾಟಿಸಿ ಕಳ್ಳಸಾಗಣೆಗೊಳಗಾಗಿ, ಅಪರಾಧ ಜಾಲಗಳಿಂದ ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸಲು ಬಲವಂತಪಡಿಸಲ್ಪಟ್ಟ ಮಹಿಳೆ ಅಥವಾ ಪುರುಷ ಇರಬಹುದು.

2026ರ ವಿಶ್ವ ಮಾನವ ಕಳ್ಳಸಾಗಣೆ ವಿರೋಧಿ ದಿನದ "ವಂಚನೆಯ ಹಿಂದೆ ಸಿಲುಕಿರುವವರು" ಎಂಬ ವಿಷಯವು, ಪರದೆಯ ಆಚೆ ಇರುವ ಆನ್‌ಲೈನ್ ಅಪರಾಧಗಳ ಹಿಂದೆ ಅಡಗಿರುವ ಮಾನವರನ್ನು ಗುರುತಿಸಲು ನಮ್ಮನ್ನು ಆಹ್ವಾನಿಸುತ್ತದೆ. ವಂಚನಾ ಕೇಂದ್ರಗಳಲ್ಲಿ ಸಿಲುಕಿರುವ ಅನೇಕರು ಅಪರಾಧಿಗಳಲ್ಲ. ಅವರು ಮಾನವ ಕಳ್ಳಸಾಗಣೆಯ ಸಂತ್ರಸ್ತರು. ಅವರ ಘನತೆ, ಸ್ವಾತಂತ್ರ್ಯ ಮತ್ತು ಕನಸುಗಳನ್ನು ಕಸಿದುಕೊಳ್ಳಲಾಗಿದೆ.

ಮಾನವ ಕಳ್ಳಸಾಗಣೆ ಮತ್ತು ಎಲ್ಲಾ ರೀತಿಯ ಶೋಷಣೆಯನ್ನು ಕೊನೆಗೊಳಿಸಲು ಬದ್ಧವಾಗಿರುವ ಕಥೋಲಿಕ ಸಹೋದರಿಯರ ಜಾಗತಿಕ ಜಾಲತಾಣವಾದ ತಲಿತಾ ಕುಮ್ ಆಗಿ, ನಾವು ಬದುಕುಳಿದವರೊಂದಿಗಿದ್ದೇವೆ ಮತ್ತು ಗುಣಮುಖತೆ, ನ್ಯಾಯ ಹಾಗೂ ಪುನರುಜ್ಜೀವನದತ್ತ ಅವರೊಂದಿಗೆ ಹೆಜ್ಜೆ ಹಾಕುತ್ತೇವೆ. ನಾವು ಅವರ ಕಥೆಗಳನ್ನು ಆಲಿಸುತ್ತೇವೆ, ಅವರ ಪಯಣದಲ್ಲಿ ಜೊತೆಯಾಗುತ್ತೇವೆ ಹಾಗೂ ಯಾವುದೇ ಶೋಷಣೆಯೂ ಕಸಿದುಕೊಳ್ಳಲಾಗದ ಅವರ ಮಾನವ ಘನತೆಯನ್ನು ದೃಢೀಕರಿಸುತ್ತೇವೆ.

 ಈ ಧ್ಯೇಯವು ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರ "ಮ್ಯಾಗ್ನಿಫಿಕಾ ಹುಮಾನಿತಾಸ್" ವಿಶ್ವಪತ್ರಿಕೆಯ ಕರೆಗೆ ಪ್ರತಿಧ್ವನಿಯಾಗಿದೆ.[2] ಸಾಮಾಜಿಕ, ಆರ್ಥಿಕ ಮತ್ತು ತಾಂತ್ರಿಕ ಅಭಿವೃದ್ಧಿಯ ಪ್ರತಿಯೊಂದು ಹಂತದಲ್ಲೂ ಮಾನವ ಘನತೆಯು ಕೇಂದ್ರಸ್ಥಾನದಲ್ಲಿರಬೇಕು ಎಂದು ಆ ವಿಶ್ವಪತ್ರಿಕೆ ನಮಗೆ ನೆನಪಿಸುತ್ತದೆ.

ಕೆಲಸವು ಕೇವಲ ಜೀವನೋಪಾಯಕ್ಕಾಗಿ ಹಣ ಸಂಪಾದಿಸುವ ಮಾರ್ಗವಲ್ಲ. ಅದು ಮಾನವ ಘನತೆಯ ಅಭಿವ್ಯಕ್ತಿ, ದೇವರ ಸೃಷ್ಟಿಕಾರ್ಯದಲ್ಲಿ ಪಾಲ್ಗೊಳ್ಳುವಿಕೆ ಮತ್ತು ಸಾಮಾನ್ಯ ಹಿತಕ್ಕೆ ನೀಡುವ ಕೊಡುಗೆಯಾಗಿದೆ. ಇಂದು ಡಿಜಿಟಲ್ ಪರಿವರ್ತನೆ ಮತ್ತು ಕೃತಕ ಬುದ್ಧಿಮತ್ತೆ ಮಾನವಕುಲಕ್ಕೆ ಅಪಾರ ಅವಕಾಶಗಳನ್ನು ಒದಗಿಸುತ್ತಿವೆ. ಆದರೆ ತಂತ್ರಜ್ಞಾನವು ಯಾವಾಗಲೂ ಮಾನವನ ಸೇವೆಗಾಗಿಯೇ ಇರಬೇಕು. ಅದು ಎಂದಿಗೂ ಜನರನ್ನು ಲಾಭ ಅಥವಾ ಶೋಷಣೆಯ ಸಾಧನಗಳಾಗಿ ಕುಗ್ಗಿಸುವ ಉಪಕರಣವಾಗಬಾರದು.

ವಂಚನಾ ಕಾರ್ಯಾಚರಣೆಗಳಲ್ಲಿ ಬಲವಂತದ ಅಪರಾಧ ಚಟುವಟಿಕೆಗಳಿಗೆ ಜನರನ್ನು ಬಳಸಿಕೊಳ್ಳುವುದು ಕೆಲಸದ ಘನತೆಯ ಮೇಲಿನ ಗಂಭೀರ ಉಲ್ಲಂಘನೆಯಾಗಿದೆ. ಮಾನವ ಕಳ್ಳಸಾಗಣೆಗೆ ಒಳಗಾದವರ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಗುತ್ತದೆ. ಅವರ ಸಾಮರ್ಥ್ಯವನ್ನು ಶೋಷಿಸಲಾಗುತ್ತದೆ ಮತ್ತು ಅವರ ಮಾನವೀಯತೆಯನ್ನು ನಿರಾಕರಿಸಲಾಗುತ್ತದೆ. ಅವರನ್ನು ದೇವರ ಸ್ವರೂಪ ಮತ್ತು ಹೋಲಿಕೆಯಲ್ಲಿ ಸೃಷ್ಟಿಸಲಾದ ವ್ಯಕ್ತಿಗಳಾಗಿ ನೋಡದೆ, ಕೇವಲ ಸರಕುಗಳಂತೆ ಪರಿಗಣಿಸಲಾಗುತ್ತದೆ.

ತಲಿತಾ ಕುಮ್‌ನಲ್ಲಿ, ಬಲವಂತದ ಅಪರಾಧ ಚಟುವಟಿಕೆಗಳಿಗಾಗಿ ನಡೆಯುವ ಮಾನವ ಕಳ್ಳಸಾಗಣೆಯನ್ನು ಮಾನವ ಘನತೆಯ ಮೇಲಿನ ಗಂಭೀರ ಉಲ್ಲಂಘನೆ ಎಂದು ನಾವು ನಿರಂತರವಾಗಿ ಖಂಡಿಸುತ್ತೇವೆ. ನಮ್ಮ ಪ್ರತಿಕ್ರಿಯೆಯು ಕೇವಲ ರಕ್ಷಣೆಗೆ ಮಾತ್ರ ಸೀಮಿತವಾಗಿಲ್ಲ. ತಡೆಗಟ್ಟುವಿಕೆ, ಬದುಕುಳಿದವರ ಜೊತೆಗಿರುವಿಕೆ, ಪಾಲುದಾರಿಕೆ ಮತ್ತು ವಕಾಲತ್ತಿನ ಮೂಲಕ ನಾವು ಸಮುದಾಯಗಳು, ಸರ್ಕಾರಗಳು, ಅಂತರರಾಷ್ಟ್ರೀಯ ಸಂಸ್ಥೆಗಳು, ನಾಗರಿಕ ಸಮಾಜ ಮತ್ತು ಯುವಜನರೊಂದಿಗೆ ಸೇರಿ ಮಾನವ ಕಳ್ಳಸಾಗಣೆಯ ಮೂಲ ಕಾರಣಗಳನ್ನು ನಿವಾರಿಸಲು ಹಾಗೂ ಸ್ವಾತಂತ್ರ್ಯ ಮತ್ತು ಭರವಸೆಯ ದಾರಿಗಳನ್ನು ನಿರ್ಮಿಸಲು ಕಾರ್ಯನಿರ್ವಹಿಸುತ್ತೇವೆ. ಯುವಜನರು ಡಿಜಿಟಲ್ ಜಗತ್ತಿನೊಂದಿಗೆ ನಿಕಟವಾಗಿ ಸಂಪರ್ಕ ಹೊಂದಿದ್ದಾರೆ. ಇದರಿಂದ ಅವಕಾಶಗಳು ಹೆಚ್ಚಾಗುವುದರ ಜೊತೆಗೆ ಮೋಸ ಮತ್ತು ಶೋಷಣೆಯ ಹೊಸ ಅಪಾಯಗಳೂ ಎದುರಾಗುತ್ತವೆ. ಆದ್ದರಿಂದ ತಡೆಗಟ್ಟುವಿಕೆ ಮತ್ತು ಶಿಕ್ಷಣ ಅತ್ಯಗತ್ಯ. ಆದರೆ ಯುವಜನರು ಕೇವಲ ಅಪಾಯದಲ್ಲಿರುವವರಲ್ಲ; ಅವರು ಪರಿಹಾರದ ಭಾಗವೂ ಆಗಿದ್ದಾರೆ. ತಮ್ಮ ಸೃಜನಶೀಲತೆ, ಶಕ್ತಿ ಮತ್ತು ತಮ್ಮ ಸಮವಯಸ್ಕರ ಮೇಲಿನ ಪ್ರಭಾವದ ಮೂಲಕ ಅವರು ಜಾಗೃತಿ ಮೂಡಿಸುವಲ್ಲಿ ಮತ್ತು ತಡೆಗಟ್ಟುವಿಕೆಯ ಸಂಸ್ಕೃತಿಯನ್ನು ಬೆಳೆಸುವಲ್ಲಿ ನಾಯಕರಾಗಬಹುದು. ಜ್ಞಾನ, ಮೌಲ್ಯಗಳು ಮತ್ತು ಜವಾಬ್ದಾರಿಯ ಮೂಲಕ ಅವರನ್ನು ಸಬಲಗೊಳಿಸುವ ಮೂಲಕ, ತಮ್ಮನ್ನೂ ತಮ್ಮ ಸಮುದಾಯದ ಇತರರನ್ನೂ ರಕ್ಷಿಸುವ ಅವರ ಸಾಮರ್ಥ್ಯವನ್ನು ನಾವು ಗುರುತಿಸುತ್ತೇವೆ. ತಮ್ಮ ಸಮವಯಸ್ಕರಲ್ಲಿ ಜಾಗೃತಿ ಮೂಡಿಸಿ, ಸತ್ಯ, ಐಕ್ಯತೆ, ಜವಾಬ್ದಾರಿ ಮತ್ತು ಮಾನವ ಘನತೆಯ ಗೌರವದ ಮೇಲೆ ಆಧಾರಿತ ಡಿಜಿಟಲ್ ಸಂಸ್ಕೃತಿಯನ್ನು ಉತ್ತೇಜಿಸುತ್ತಿರುವ ತಾಲಿತಾ ಕುಮ್ನ ಯುವ ರಾಯಭಾರಿಗಳ ಬದ್ಧತೆಯಿಂದ ನಾವು ಸ್ಫೂರ್ತಿ ಪಡೆಯುತ್ತೇವೆ.

2025ರಲ್ಲಿ, ತಲಿತಾ ಕುಮ್ನ ಜಾಗತಿಕ ಜಾಲತಾಣವು ತಡೆಗಟ್ಟುವಿಕೆ, ರಕ್ಷಣೆ, ವಕಾಲತ್ತು, ಜಾಲಬಂಧನ ಮತ್ತು ಬದುಕುಳಿದವರ ಜೊತೆಗಿರುವ ಕಾರ್ಯಗಳ ಮೂಲಕ 12 ಲಕ್ಷಕ್ಕೂ ಹೆಚ್ಚು ಜನರನ್ನು ತಲುಪಿತು. ಪ್ರತಿಯೊಂದು ಸಂಖ್ಯೆಯ ಹಿಂದೆಯೂ ಒಬ್ಬ ವ್ಯಕ್ತಿಯಿದ್ದಾನೆ—ಸ್ವಾತಂತ್ರ್ಯವನ್ನು ಮರಳಿ ಪಡೆದ ಬದುಕುಳಿದವರು, ಬದಲಾವಣೆಗೆ ನಾಯಕತ್ವ ನೀಡುತ್ತಿರುವ ಯುವಕ ಅಥವಾ ಯುವತಿ, ಭರವಸೆ ಕಂಡುಕೊಂಡ ಕುಟುಂಬ ಅಥವಾ ಐಕ್ಯತೆಯನ್ನು ಆರಿಸಿಕೊಂಡ ಸಮುದಾಯ. ಸಾವಿರಾರು ಕಥೋಲಿಕ ಸಹೋದರಿಯರು, ಧರ್ಮಗುರುಗಳು, ಯುವ ನಾಯಕರು, ಬದುಕುಳಿದವರ ಪರ ವಕಾಲತ್ತು ವಹಿಸುವವರು ಮತ್ತು ವಿಶ್ವದಾದ್ಯಂತದ ಪಾಲುದಾರರು ಕರುಣೆಯನ್ನು ಕಾರ್ಯರೂಪಕ್ಕೆ ತರುವ ಸಮರ್ಪಣೆಯಿಂದ ಈ ಪರಿಣಾಮ ಸಾಧ್ಯವಾಗಿದೆ.

ಆದಾಗ್ಯೂ, ಇನ್ನೂ ಅನೇಕ ಸವಾಲುಗಳು ಉಳಿದಿವೆ ಮತ್ತು ನಮ್ಮ ಕಾರ್ಯ ಈಗ ಹಿಂದೆಂದಿಗಿಂತಲೂ ಹೆಚ್ಚು ತುರ್ತಾಗಿದೆ. ಬದುಕುಳಿದವರು ತಮ್ಮ ಜೀವನವನ್ನು ಪುನರ್‌ನಿರ್ಮಿಸಿಕೊಳ್ಳಲು ಹಾಗೂ ಸುರಕ್ಷಿತ ಮತ್ತು ಸ್ಥಿರ ಭವಿಷ್ಯಕ್ಕಾಗಿ ಅವಕಾಶಗಳನ್ನು ಹುಡುಕುವಲ್ಲಿ ಇನ್ನೂ ಕಠಿಣ ಪಯಣವನ್ನು ಎದುರಿಸುತ್ತಿದ್ದಾರೆ.

ಬದುಕುಳಿದ ಒಬ್ಬ ಆಫ್ರಿಕಾದ ಯುವಕ ಹೀಗೆ ಹೇಳಿದ್ದಾರೆ: "ಈ ಕ್ಷಣದಲ್ಲಿ ನನ್ನ ಪ್ರಮುಖ ಸವಾಲೆಂದರೆ, ನನ್ನ ಜೀವನ ಸಾಗಿಸಲು ನನಗೆ ಉದ್ಯೋಗ ಅಥವಾ ಯಾವುದೇ ಸ್ಥಿರ ಚಟುವಟಿಕೆ ಇಲ್ಲ. ಅವಕಾಶಗಳನ್ನು ಹುಡುಕಲು ಮತ್ತು ನನ್ನ ಜೀವನವನ್ನು ಪುನರ್‌ನಿರ್ಮಿಸಿಕೊಳ್ಳಲು ನಾನು ನನ್ನಿಂದಾದ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇನೆ."

ಅವರ ಮಾತುಗಳು ನಮಗೆ ಒಂದು ಸತ್ಯವನ್ನು ನೆನಪಿಸುತ್ತವೆ. ಮಾನವ ಕಳ್ಳಸಾಗಣೆ ಕೇವಲ ಒಂದು ಅಪರಾಧ ಕೃತ್ಯವಲ್ಲ. ಅದು ಮಾನವ ಘನತೆಯ ಮೇಲಿನ ಉಲ್ಲಂಘನೆಯಾಗಿದ್ದು, ನಮ್ಮೆಲ್ಲರ ಸಾಮೂಹಿಕ ಪ್ರತಿಕ್ರಿಯೆಯನ್ನು ಬಯಸುವ ಆಳವಾದ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಗಳನ್ನು ಬಯಲಿಗೆಳೆಯುತ್ತದೆ.

ಶೋಷಣೆಯಿಂದ ಮುಕ್ತಿಯಾಗುವುದು ಕೇವಲ ಆರಂಭ ಮಾತ್ರ. ಬದುಕುಳಿದವರಿಗೆ ತಮ್ಮ ಜೀವನ ಮತ್ತು ಘನತೆಯನ್ನು ಸಂಪೂರ್ಣವಾಗಿ ಪುನರ್‌ನಿರ್ಮಿಸಿಕೊಳ್ಳಲು ಅವಕಾಶಗಳು, ಜೊತೆಗಿರುವಿಕೆ, ಬೆಂಬಲ ನೀಡುವ ಸಮುದಾಯಗಳು ಮತ್ತು ಭರವಸೆ ಅಗತ್ಯ.

ಈ ವಿಶ್ವ ಮಾನವ ಕಳ್ಳಸಾಗಣೆ ವಿರೋಧಿ ದಿನದಂದು, ವಂಚನೆಯ ಹಿಂದೆ ಅಡಗಿರುವ ಸತ್ಯವನ್ನು ಅನಾವರಣಗೊಳಿಸಲು, ಬದುಕುಳಿದವರ ಧ್ವನಿಯನ್ನು ಆಲಿಸಲು ಹಾಗೂ ಶೋಷಣೆಗೆ ಒಳಗಾದ ಪ್ರತಿಯೊಬ್ಬ ವ್ಯಕ್ತಿಯ ಘನತೆಯನ್ನು ರಕ್ಷಿಸಲು ನಾವೆಲ್ಲರೂ ಬದ್ಧರಾಗೋಣ. ತಂತ್ರಜ್ಞಾನವು ಮಾನವಕುಲದ ಸೇವೆ ಮಾಡುವ, ಕೆಲಸವು ಘನತೆಯನ್ನು ಪುನರುಜ್ಜೀವನಗೊಳಿಸುವ ಮತ್ತು ಯಾರನ್ನೂ ಎಂದಿಗೂ ಸರಕಿನಂತೆ ಪರಿಗಣಿಸದ ಜಗತ್ತನ್ನು ನಿರ್ಮಿಸುವ ಕಾರ್ಯವನ್ನು ಮುಂದುವರಿಸೋಣ.

ನಾವೆಲ್ಲರೂ ಸೇರಿ ಭರವಸೆ, ಶಾಂತಿ, ಸ್ವಾತಂತ್ರ್ಯ ಮತ್ತು ನ್ಯಾಯದ ಜಾಲಗಳನ್ನು ಹೆಣೆಯೋಣ. ಆಗ ಪ್ರತಿಯೊಬ್ಬ ವ್ಯಕ್ತಿಯೂ ತಮಗೆ ಸಲ್ಲಬೇಕಾದ ಘನತೆ, ರಕ್ಷಣೆ, ಪ್ರೀತಿ ಮತ್ತು ಶಾಂತಿಯೊಂದಿಗೆ ಬದುಕಲು ಸಾಧ್ಯವಾಗುತ್ತದೆ.

ಸಹೋದರಿ ಅಬ್ಬಿ ಅವೆಲಿನೊ, MM, ತಲಿತಾ ಕುಮ್ ಇಂಟರ್‌ನ್ಯಾಷನಲ್‌ನ ಸಂಯೋಜಕರಾಗಿದ್ದಾರೆ.

[1] ಬದುಕುಳಿದವರ ಗುರುತನ್ನು ರಕ್ಷಿಸುವ ಸಲುವಾಗಿ ಅವರ ಹೆಸರನ್ನು ಬದಲಾಯಿಸಲಾಗಿದೆ.

[2] ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ, "Safeguarding Humanity at a Time of Transformation", Magnifica Humanitas (148–156).

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

30 ಜುಲೈ 2026, 18:04