ಭೂಕಂಪದಿಂದ ಸ್ಥಳಾಂತರಗೊಂಡ ಮಕ್ಕಳು ಶಾಲೆಯೊಳಗಿನ ತಾತ್ಕಾಲಿಕ ಆಶ್ರಯ ಕೇಂದ್ರದಲ್ಲಿ ಆಟವಾಡುತ್ತಿರುವ ದೃಶ್ಯ ಭೂಕಂಪದಿಂದ ಸ್ಥಳಾಂತರಗೊಂಡ ಮಕ್ಕಳು ಶಾಲೆಯೊಳಗಿನ ತಾತ್ಕಾಲಿಕ ಆಶ್ರಯ ಕೇಂದ್ರದಲ್ಲಿ ಆಟವಾಡುತ್ತಿರುವ ದೃಶ್ಯ 

ವೆನೆಜುವೆಲಾದಲ್ಲಾದ ಭೂಕಂಪದ ಬಳಿಕ ಶಿಕ್ಷಣದ ಬಾಗಿಲುಗಳನ್ನು ಪುನಃ ತೆರೆಯುತ್ತಿರುವ ಧಾರ್ಮಿಕ ಸಹೋದರಿಯರು

ವೆನೆಜುವೆಲಾದಲ್ಲಿ ಸಂಭವಿಸಿದ ಭೀಕರ ಭೂಕಂಪಗಳಿಗೆ ಒಂದು ತಿಂಗಳು ಕಳೆದಿದ್ದರೂ, ದೇಶದಲ್ಲಿ ತುರ್ತು ಅಗತ್ಯಗಳನ್ನು ಪೂರೈಸುವುದರ ಜೊತೆಗೆ ದೀರ್ಘಕಾಲೀನ ಪುನಶ್ಚೇತನ ಕಾರ್ಯಗಳೂ ಮುಂದುವರಿದಿವೆ. ನಜರೇತಿನ ಪವಿತ್ರ ಕುಟುಂಬ ಸಭೆಯ ಸಹೋದರಿಯರು (MHSFN), CADIS ಅಂತರರಾಷ್ಟ್ರೀಯ ಸಂಸ್ಥೆಯ ಸಹಯೋಗದೊಂದಿಗೆ, ತಮ್ಮ ಶಾಲೆಯನ್ನು ಪುನಃ ಆರಂಭಿಸುವ ಮೂಲಕ ಈಗಾಗಲೇ ದಾಖಲಾದ ವಿದ್ಯಾರ್ಥಿಗಳ ಜೊತೆಗೆ ಸ್ಥಳಾಂತರಗೊಂಡ ಮಕ್ಕಳಿಗೂ ಶಿಕ್ಷಣದ ಅವಕಾಶ ಕಲ್ಪಿಸುತ್ತಿದ್ದಾರೆ.

ಲೇಖಕರು: ಸಹೋದರಿ ಕ್ರಿಸ್ಟಿನ್ ಮಸಿವೊ, CPS

ಒಂದು ತಿಂಗಳ ಹಿಂದೆ ವೆನೆಜುವೆಲಾದಲ್ಲಿ ಸಂಭವಿಸಿದ ವಿನಾಶಕಾರಿ ಭೂಕಂಪದ ನಂತರ, ಸಂತ್ರಸ್ತ ಜನರ ತುರ್ತು ಅಗತ್ಯಗಳನ್ನು ಪೂರೈಸಲು ಮಾನವೀಯ ಸಂಸ್ಥೆಗಳು ತಮ್ಮ ನೆರವಿನ ಕಾರ್ಯಗಳನ್ನು ಮುಂದುವರಿಸಿವೆ. ನಜರೇತಿನ ಪವಿತ್ರ ಕುಟುಂಬ ಸಭೆಯ ಸಹೋದರಿಯರು  (MHSFN), ಕ್ಯಾಮಿಲಿಯನ್ ಡಿಸಾಸ್ಟರ್ ಸರ್ವಿಸ್ (CADIS) ಇಂಟರ್‌ನ್ಯಾಷನಲ್, ಬ್ರೆಜಿಲ್ ಪ್ರಾಂತ್ಯದ ಕ್ಯಾಮಿಲಿಯನ್ ಸಂಘದ ಸದಸ್ಯರು ಹಾಗೂ CADIS ಬ್ರೆಜಿಲ್ ಸಹಯೋಗದೊಂದಿಗೆ ತುರ್ತು ಪರಿಹಾರ ಕಾರ್ಯಗಳನ್ನು ಸಮನ್ವಯಗೊಳಿಸುತ್ತಿದ್ದು, ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಅಗತ್ಯ ನೆರವು ಒದಗಿಸಲು ನಿಧಿ ಸಂಗ್ರಹ ಅಭಿಯಾನವನ್ನೂ ನಡೆಸುತ್ತಿದ್ದಾರೆ.

ಪುನರ್ನಿರ್ಮಾಣದಲ್ಲಿ ಶಿಕ್ಷಣದ ಮಹತ್ವದ ಪಾತ್ರ

ತುರ್ತು ಪರಿಹಾರ ಕಾರ್ಯಗಳ ಜೊತೆಗೆ, ಸಮುದಾಯದ ಪುನಶ್ಚೇತನದಲ್ಲಿ ಶಿಕ್ಷಣವು ಪ್ರಮುಖ ಅಂಶವಾಗಿರುವುದರಿಂದ, ಶಿಕ್ಷಣದ ಪ್ರವೇಶವನ್ನು ಪುನಃಸ್ಥಾಪಿಸುವ ಉದ್ದೇಶದಿಂದ CADIS ಸಂಸ್ಥೆಯು ನಜರೇತಿನ ಪವಿತ್ರ ಕುಟುಂಬ ಸಭೆಯ ಸಹೋದರಿಯರರೊಂದಿಗೆ (MHSFN) ಕೈಜೋಡಿಸಿದೆ. ಭೂಕಂಪದಿಂದ 400ಕ್ಕೂ ಹೆಚ್ಚು ಶಾಲಾ ಕಟ್ಟಡಗಳು ಹಾನಿಗೊಳಗಾಗಿದ್ದು, ಈಗಾಗಲೇ ಸಾಮಾಜಿಕ ಹಾಗೂ ಆರ್ಥಿಕ ಸಂಕಷ್ಟದಲ್ಲಿದ್ದ ಸಾವಿರಾರು ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗಿದೆ.

ಶಿಕ್ಷಣದ ಮೇಲಿನ ಧಾರ್ಮಿಕ ಸಹೋದರಿಯರ ಬದ್ಧತೆ

ಎಲ್ಲಾ ಸವಾಲುಗಳ ನಡುವೆಯೂ, ಕಾರಕಾಸ್‌ನಲ್ಲಿ ಭಾಗಶಃ ಹಾನಿಗೊಳಗಾದ ತಮ್ಮ ಶಾಲೆಯನ್ನು ಈ ವರ್ಷದ ಸೆಪ್ಟೆಂಬರ್‌ನಲ್ಲಿ ಪುನಃ ಆರಂಭಿಸಲು ಧಾರ್ಮಿಕ ಸಹೋದರಿಯರು ಸಿದ್ಧತೆ ನಡೆಸುತ್ತಿದ್ದಾರೆ. ದೇಶದ ವಾಯುವ್ಯ ಹಾಗೂ ಮಧ್ಯ ಭಾಗಗಳಲ್ಲಿ ಪುನರ್‌ನಿರ್ಮಾಣ ಕಾರ್ಯಗಳು ಮುಂದುವರಿದಿದ್ದರೂ, ಶಿಕ್ಷಣ ನಿಲ್ಲಬಾರದು ಎಂಬ ದೃಢ ಸಂಕಲ್ಪದಿಂದ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಈ ಬದ್ಧತೆಯಿಂದ ಭೂಕಂಪದಿಂದ ಬಾಧಿತರಾದ ಮಕ್ಕಳಿಗೆ ಶಿಕ್ಷಣದ ಅವಕಾಶ ನಿರಂತರವಾಗಿ ಲಭ್ಯವಾಗಲಿದೆ.

ಕಥೋಲಿಕ ಸುದ್ದಿಸಂಸ್ಥೆ 'ಅಜೆನ್ಸಿಯಾ ಫೀಡೆಸ್’ ವರದಿಯ ಪ್ರಕಾರ, ಶಾಲೆಯನ್ನು ಎರಡು ಪಾಳಿಗಳಲ್ಲಿ ನಡೆಸಲು ಧಾರ್ಮಿಕ ಸಹೋದರಿಯರು ಯೋಜಿಸಿದ್ದಾರೆ.ಬೆಳಗಿನ ಅವಧಿಯಲ್ಲಿ ಈಗಾಗಲೇ ಶಾಲೆಯಲ್ಲಿ ದಾಖಲಾಗಿರುವ ಸುಮಾರು 400ರಿಂದ 600 ವಿದ್ಯಾರ್ಥಿಗಳಿಗೆ ತರಗತಿಗಳನ್ನು ನಡೆಸಲಾಗುತ್ತದೆ. ಮಧ್ಯಾಹ್ನದ ಅವಧಿಯಲ್ಲಿ, ನೆರೆಯ ಸಮುದಾಯಗಳ ಶಾಲೆಗಳು ಭೂಕಂಪದಿಂದ ಸಂಪೂರ್ಣವಾಗಿ ನಾಶವಾಗಿರುವ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತದೆ. ಇದರ ಮೂಲಕ ಶಾಲೆಗಳ ಪುನರ್‌ನಿರ್ಮಾಣ ಪೂರ್ಣಗೊಳ್ಳುವವರೆಗೆ ಕಾಯದೆ ಹೆಚ್ಚಿನ ಮಕ್ಕಳು ತಮ್ಮ ಶಿಕ್ಷಣವನ್ನು ನಿರಂತರವಾಗಿ ಮುಂದುವರಿಸಲು ಸಾಧ್ಯವಾಗಲಿದೆ.

ಸವಾಲುಗಳ ನಡುವೆಯೂ ಪರಿಹಾರ ಕಾರ್ಯಗಳು

ಭೂಕಂಪ ಸಂತ್ರಸ್ತರಿಗೆ ನೆರವು ನೀಡುವ ಕಾರ್ಯಾಚರಣೆಗಳು ಇನ್ನೂ ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಮುಂದುವರಿಯುತ್ತಿವೆ. ಪ್ರಸ್ತುತ ಕಾರಕಾಸ್ ವಿಮಾನ ನಿಲ್ದಾಣ ತುರ್ತು ಕಾರ್ಯಾಚರಣೆಗಳ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಹೆಚ್ಚಿನ ಮಾನವೀಯ ನೆರವು ಸಾಮಗ್ರಿಗಳನ್ನು ವಲೆನ್ಸಿಯಾದ ಆರ್ಟುರೊ ಮಿಚೆಲೆನಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಮರುನಿರ್ದೇಶಿಸಲಾಗುತ್ತಿರುವುದರಿಂದ ಪರಿಹಾರ ಕಾರ್ಯಾಚರಣೆಗಳಿಗೆ ಹಲವು ವ್ಯವಸ್ಥಾಪನಾ ಸವಾಲುಗಳು ಎದುರಾಗುತ್ತಿವೆ.

ಅಜೆನ್ಸಿಯಾ ಫೀಡೆಸ್ ಪ್ರಕಟಿಸಿದ ಅಧಿಕೃತ ಮಾಹಿತಿಯ ಪ್ರಕಾರ, 2026ರ ಜೂನ್ 24ರಂದು ವಾಯುವ್ಯ ಮತ್ತು ಮಧ್ಯ ವೆನೆಜುವೆಲಾದಲ್ಲಿ ಸಂಭವಿಸಿದ ಭೂಕಂಪದಲ್ಲಿ ಕನಿಷ್ಠ 5,346 ಮಂದಿ ಮೃತಪಟ್ಟಿದ್ದು, 16,740 ಮಂದಿ ಗಾಯಗೊಂಡಿದ್ದಾರೆ. 16,300ಕ್ಕೂ ಹೆಚ್ಚು ಜನರು ತಮ್ಮ ಮನೆಗಳನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ. ಇನ್ನೂ ಅನೇಕ ಕುಟುಂಬಗಳ ಮನೆಗಳನ್ನು ವಾಸಯೋಗ್ಯವಲ್ಲವೆಂದು ಘೋಷಿಸಲಾಗಿದೆ. 23,000ಕ್ಕೂ ಹೆಚ್ಚು ಮಂದಿ ಇನ್ನೂ ತಾತ್ಕಾಲಿಕ ಆಶ್ರಯ ಕೇಂದ್ರಗಳಲ್ಲಿ ವಾಸಿಸುತ್ತಿದ್ದು, ವಿಶ್ವಸಂಸ್ಥೆಯ ಅಂದಾಜಿನ ಪ್ರಕಾರ 50,000 ಮಂದಿ ಇನ್ನೂ ಅವಶೇಷಗಳಡಿ ಸಿಲುಕಿರುವ ಸಾಧ್ಯತೆಯಿದೆ.

ಮಾನವೀಯ ನೆರವಿನ ಅಗತ್ಯ ಇನ್ನೂ ಮುಂದುವರಿದಿದೆ. ಈ ಸಂದರ್ಭದಲ್ಲಿ ನಜರೇತಿನ ಪವಿತ್ರ ಕುಟುಂಬ ಸಭೆಯ ಸಹೋದರಿಯರು  (MHSFN) ಕೈಗೊಳ್ಳುತ್ತಿರುವ ಕಾರ್ಯಗಳು, ಭೂಕಂಪದಿಂದ ಅಸ್ತವ್ಯಸ್ತಗೊಂಡ ಮಕ್ಕಳಿಗೆ ಶಿಕ್ಷಣವನ್ನು ನಿರಂತರವಾಗಿ ಒದಗಿಸುವ ಮೂಲಕ ವಿಪತ್ತು ಪುನಶ್ಚೇತನದಲ್ಲಿ ವಿಶ್ವಾಸಾಧಾರಿತ ಸಂಸ್ಥೆಗಳು ಹೇಗೆ ಮಹತ್ವದ ಕೊಡುಗೆ ನೀಡುತ್ತಿವೆ ಎಂಬುದನ್ನು ತೋರಿಸುತ್ತವೆ.

CADIS ಇಂಟರ್‌ನ್ಯಾಷನಲ್ ಜೊತೆಗಿನ ಧಾರ್ಮಿಕ ಸಹೋದರಿಯರ ಸಹಯೋಗವು, ಪುನರ್‌ನಿರ್ಮಾಣದ ಹಾದಿಯಲ್ಲಿರುವ ಸಮುದಾಯಗಳಿಗೆ ಪ್ರಾಯೋಗಿಕ ಹಾಗೂ ದೀರ್ಘಕಾಲೀನ ಬೆಂಬಲ ನೀಡುವ ಅವರ ದೃಢ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

23 ಜುಲೈ 2026, 20:22