ಹುಡುಕಿ

ವೆನೆಜುವೆಲಾದ ಲಾ ಗುವೈರಾದಲ್ಲಿ ಭೂಕಂಪದ ಬಳಿಕದ ವಿನಾಶದ ದೃಶ್ಯa ವೆನೆಜುವೆಲಾದ ಲಾ ಗುವೈರಾದಲ್ಲಿ ಭೂಕಂಪದ ಬಳಿಕದ ವಿನಾಶದ ದೃಶ್ಯa  (Ricardo Arduengo)

ವೆನೆಜುವೆಲಾ: ತಾತ್ಕಾಲಿಕ ಆಸ್ಪತ್ರೆ ಸ್ಥಾಪಿಸಿದ ಮೈಕ್ವೆಟಿಯಾದ ಬಡವರ ಕಿರಿಯ ಸಹೋದರಿಯರು

ವೆನೆಜುವೆಲಾದಲ್ಲಿ ಸಂಭವಿಸಿದ ಭೂಕಂಪದ ಬಳಿಕ, ಮೈಕ್ವೆಟಿಯಾದ ಬಡವರ ಕಿರಿಯ ಸಹೋದರಿಯರು ನಡೆಸುತ್ತಿರುವ ಲಾ ಗುವೈರಾದ ಸಾನ್ ಹೊಸೆ ಆಸ್ಪತ್ರೆ ತೀವ್ರ ರಚನಾತ್ಮಕ ಹಾನಿಗೊಳಗಾಗಿದೆ. ಈ ತುರ್ತು ಪರಿಸ್ಥಿತಿಗೆ ಸ್ಪಂದಿಸಿದ ಧಾರ್ಮಿಕ ಸಭೆಯು ಗಾಯಾಳುಗಳ ಚಿಕಿತ್ಸೆಗೆ ತಾತ್ಕಾಲಿಕ ಆಸ್ಪತ್ರೆಯನ್ನು ಸ್ಥಾಪಿಸಿದೆ.

ಲೇಖಕರು: ಜೋಹಾನ್ ಪಚೆಕೊ

"ಭೂಕಂಪದಿಂದ ಸಾನ್ ಹೊಸೆ ಆಸ್ಪತ್ರೆ ತೀವ್ರವಾದ ರಚನಾತ್ಮಕ ಹಾನಿಗೊಳಗಾಗಿದ್ದು, ಇನ್ನು ಮುಂದೆ ಅದರೊಳಗೆ ಸುರಕ್ಷಿತವಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಅದಕ್ಕಾಗಿ ನಾವು ಆಸ್ಪತ್ರೆಯ ಎದುರಿನಲ್ಲೇ ತಾತ್ಕಾಲಿಕ ಆಸ್ಪತ್ರೆಯನ್ನು ಸ್ಥಾಪಿಸಿದ್ದೇವೆ," ಎಂದು ವೆನೆಜುವೆಲಾದ ಲಾ ಗುವೈರಾ ಮತ್ತು ಕರಾಕಾಸ್ ಪ್ರದೇಶಗಳಲ್ಲಿ ಆರೋಗ್ಯ ಸೇವೆ ಸಲ್ಲಿಸುತ್ತಿರುವ ಮೈಕ್ವೆಟಿಯಾದ ಬಡವರ ಕಿರಿಯ ಸಹೋದರಿಯರ ಸಭೆಯ ಶ್ರೇಷ್ಠ ಭಗಿನಿ ಸಹೋದರಿ ಮರಿಯಾ ಇರೈಡಾ ಮೊರಾ ಸಾಂಚೆಸ್ ತಿಳಿಸಿದ್ದಾರೆ.

ದೇಶದ ಉಳಿದ ಜನರಂತೆ, ಇನ್ನಷ್ಟು ಬದುಕುಳಿದವರನ್ನು ಅವಶೇಷಗಳಡಿಯಿಂದ ರಕ್ಷಿಸುವಂತಾಗಲಿ ಎಂಬುದೇ ತಮ್ಮ ದೊಡ್ಡ ಪ್ರಾರ್ಥನೆಯಾಗಿದೆ ಎಂದು ಅವರು ಹೇಳುತ್ತಾರೆ. ಇತ್ತೀಚಿನ ಗಂಟೆಗಳಲ್ಲಿ ಲಾ ಗುವೈರಾದಲ್ಲಿ ಅವಶೇಷಗಳಡಿಯಿಂದ ಕೆಲವರು ಜೀವಂತವಾಗಿ ಪತ್ತೆಯಾಗಿರುವುದು ಈ ಆಶೆಯನ್ನು ಮತ್ತಷ್ಟು ಬಲಪಡಿಸಿದೆ. ಅಧಿಕಾರಿಗಳ ಪ್ರಕಾರ, ಈ ಭೂಕಂಪದಲ್ಲಿ ಈಗಾಗಲೇ 3,500ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.

"ಯಾರೊಂದಿಗೇ ಮಾತನಾಡಿದರೂ ಅವರು ಸ್ನೇಹಿತನನ್ನೋ, ಬಂಧುವನ್ನೋ ಅಥವಾ ಮಗುವನ್ನೋ ಕಳೆದುಕೊಂಡಿರುವುದಾಗಿ ಹೇಳುತ್ತಾರೆ. ಇನ್ನೂ ಕೆಲವರು ತಮ್ಮ ಮನೆಗಳನ್ನೂ, ಜೀವನೋಪಾಯವನ್ನೂ ಕಳೆದುಕೊಂಡಿದ್ದಾರೆ. ಅವರು ಕೆಲಸ ಮಾಡುತ್ತಿದ್ದ ಪ್ರದೇಶಗಳೂ ಸಂಪೂರ್ಣ ನಾಶವಾಗಿವೆ," ಎಂದು ಭೂಕಂಪದ ನಂತರದ ಜನಜೀವನವನ್ನು ಸಹೋದರಿ ವಿವರಿಸುತ್ತಾರೆ.

ಮಾನವೀಯ ಬಿಕ್ಕಟ್ಟಿನ ನಡುವೆ ಆಶ್ರಯ ಕೇಂದ್ರಗಳ ಸೇವೆ

ತಾತ್ಕಾಲಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವುದರ ಜೊತೆಗೆ, "ನಾವು ಮೂರು ತುರ್ತು ಆಶ್ರಯ ಕೇಂದ್ರಗಳಿಗೆ  ಭೇಟಿ ನೀಡುತ್ತಿದ್ದೇವೆ. ಅಲ್ಲಿನ ಪರಿಸ್ಥಿತಿ ಅತ್ಯಂತ ಕಠಿಣವಾಗಿದೆ. ಈಗಾಗಲೇ ತೀವ್ರ ಆರ್ಥಿಕ ಹಾಗೂ ಮಾನವೀಯ ಬಿಕ್ಕಟ್ಟನ್ನು ಎದುರಿಸುತ್ತಿದ್ದ ವೆನೆಜುವೆಲಾಗೆ ಈ ಭೂಕಂಪ ಮತ್ತಷ್ಟು ಸಂಕಷ್ಟ ತಂದಿದೆ," ಎಂದು ಸಹೋದರಿ ಮೊರಾ ವಿವರಿಸುತ್ತಾರೆ.

ಕಳೆದ ಭಾನುವಾರ ಪಾದ್ರೆ ಮಚಾಡೊ ಚೌಕದಲ್ಲಿ ನಡೆದ ಪವಿತ್ರ ಬಲಿಪೂಜೆಯನ್ನು ಲಾ ಗುವೈರಾದ ಧರ್ಮಾಧ್ಯಕ್ಷ ಪೂಜ್ಯ ಪಾಬ್ಲೊ ಮೊಡೆಸ್ಟೊ ನೇತೃತ್ವ ವಹಿಸಿದ್ದರು ಎಂಬುದನ್ನು ಅವರು ನೆನಪಿಸಿದರು. "ಇಷ್ಟೊಂದು ದುಃಖದ ನಡುವೆಯೂ ಜನರ ದೇವರ ಮೇಲಿನ ವಿಶ್ವಾಸ ಮತ್ತು ನಂಬಿಕೆ ಇನ್ನೂ ದೃಢವಾಗಿದೆ," ಎಂದು ಅವರು ಹೇಳುತ್ತಾರೆ.

ಟೆಂಟ್‌ಗಳಡಿ ಕಾರ್ಯನಿರ್ವಹಿಸುತ್ತಿರುವ ಆಸ್ಪತ್ರೆ

ಭೂಕಂಪದ ಬಳಿಕ ಆಸ್ಪತ್ರೆ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಸಹೋದರಿ ಮರಿಯಾ ಮೊರಾ ವಿವರಿಸುತ್ತಾ ಹೀಗೆ ಹೇಳಿದರು: "ಲಾ ಗುವೈರಾದಲ್ಲಿ ನಾವು ವಿವಿಧ ವೈದ್ಯಕೀಯ ಸೇವೆಗಳನ್ನು ಒದಗಿಸುವ ದ್ವಿತೀಯ ಹಂತದ ಆರೋಗ್ಯ ಕೇಂದ್ರವಾದ ಸಾನ್ ಹೊಸೆ ಆಸ್ಪತ್ರೆಯನ್ನು ನಡೆಸುತ್ತೇವೆ. ಜೊತೆಗೆ ಮೈಕ್ವೆಟಿಯಾದಲ್ಲಿ ಮದರ್ ಎಮಿಲಿಯಾ ಶಾಲೆ, ಕರಾಕಾಸ್‌ನಲ್ಲಿ ಇನ್ನೂ ಕೆಲವು ಆರೋಗ್ಯ ಕೇಂದ್ರಗಳು ಹಾಗೂ ವೃದ್ಧಾಶ್ರಮವನ್ನೂ ನಡೆಸುತ್ತಿದ್ದೇವೆ. ಆದರೆ ಸಾನ್ ಹೊಸೆ ಆಸ್ಪತ್ರೆ ತೀವ್ರ ಹಾನಿಗೊಳಗಾಗಿರುವುದರಿಂದ ಅದನ್ನು ಬಳಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಆಸ್ಪತ್ರೆಯ ಎದುರಿನ ಚೌಕದಲ್ಲೇ ತಾತ್ಕಾಲಿಕ ಆಸ್ಪತ್ರೆಯನ್ನು ಸ್ಥಾಪಿಸಿದ್ದೇವೆ. ಈ ಕಾರ್ಯಕ್ಕೆ ಇಟಾಲಿಯನ್ ರೆಡ್ ಕ್ರಾಸ್, AVESSOC (ಕ್ರೈಸ್ತ ಮೌಲ್ಯಾಧಾರಿತ ಆರೋಗ್ಯ ಸೇವೆಗಳ ವೆನೆಜುವೆಲಾ ಸಂಘ) ಹಾಗೂ ನಮ್ಮ ಸಭೆಯ ವೈದ್ಯರು ಸಹಕರಿಸುತ್ತಿದ್ದಾರೆ."

ಅವರು ಮುಂದುವರಿದು,  "ನಾವು ಟೆಂಟ್‌ಗಳು ಹಾಗೂ ತಾತ್ಕಾಲಿಕ ಆಶ್ರಯಗಳಡಿ ಕೆಲಸ ಮಾಡುತ್ತಿದ್ದೇವೆ. ಲಭ್ಯವಿರುವ ಸೌಲಭ್ಯಗಳಲ್ಲೇ ಸಾಧ್ಯವಾದಷ್ಟು ಉತ್ತಮ ವೈದ್ಯಕೀಯ ಸೇವೆ ನೀಡಲು ಪ್ರಯತ್ನಿಸುತ್ತಿದ್ದೇವೆ. ನಮ್ಮ ಸಿಬ್ಬಂದಿ ಮತ್ತು ಸ್ವಯಂಸೇವಕರಲ್ಲಿಯೂ ಹಲವರು ಈ ದುರಂತದಿಂದಲೇ ಬಾಧಿತರಾಗಿದ್ದಾರೆ. ಪ್ರತಿದಿನ ಸ್ಥಳಾಂತರಗೊಂಡಿರುವ ಕುಟುಂಬಗಳು ವಾಸಿಸುತ್ತಿರುವ ಟೆಂಟ್ ಶಿಬಿರಗಳಿಗೆ ಭೇಟಿ ನೀಡಿ ಕುಡಿಯುವ ನೀರು, ಆಹಾರ, ಔಷಧಿಗಳು ಮತ್ತು ಇತರ ಅಗತ್ಯ ವಸ್ತುಗಳನ್ನು ವಿತರಿಸುತ್ತಿದ್ದೇವೆ. ಈ ದುರಂತದ ಮಧ್ಯೆಯೂ ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಅಪಸ್ಮಾರದಂತಹ ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವವರನ್ನು ಮರೆಯಲು ಸಾಧ್ಯವಿಲ್ಲ. ಅವರಿಗೆ ನಿರಂತರ ಚಿಕಿತ್ಸೆ ಹಾಗೂ ಔಷಧಿಗಳು ದೊರೆಯುವಂತೆ ನೋಡಿಕೊಳ್ಳುವುದು ಅತ್ಯಗತ್ಯ."

ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯ ಭೀತಿ

ಸಾಂಕ್ರಾಮಿಕ ರೋಗಗಳ ಅಪಾಯದ ಕುರಿತು ಕೇಳಿದಾಗ, "ದುರದೃಷ್ಟವಶಾತ್, ಭೂಕಂಪಕ್ಕೂ ಮುನ್ನವೇ ನಮ್ಮ ದೇಶದ ಆರೋಗ್ಯ ವ್ಯವಸ್ಥೆ ಅತ್ಯಂತ ಸಂಕಷ್ಟದಲ್ಲಿತ್ತು. ಈಗ ಆಂಟಿಹಿಸ್ಟಮಿನ್ ಔಷಧಿಗಳು, ರಕ್ತದೊತ್ತಡದ ಮಾತ್ರೆಗಳು ಮತ್ತು ಶಿಲೀಂಧ್ರ ಸೋಂಕುಗಳಿಗೆ ಬಳಸುವ ಔಷಧಿಗಳ ತುರ್ತು ಅಗತ್ಯವಿದೆ. ವರ್ಗಾಸ್ ರಾಜ್ಯವು ಅತ್ಯಂತ ಉಷ್ಣ ಪ್ರದೇಶವಾಗಿದ್ದು, ಈಗ ಕುಡಿಯುವ ನೀರಿನ ಪೂರೈಕೆಯೂ ಇಲ್ಲ. ಅಗತ್ಯ ವಸ್ತುಗಳ ಕೊರತೆ ಅಂತ್ಯವೇ ಕಾಣುತ್ತಿಲ್ಲ. ಅವಶೇಷಗಳ ನಡುವೆ ಬದುಕುಳಿದವರನ್ನು ಹುಡುಕುತ್ತಿರುವವರಿಗೂ ಹಾಗೂ ತಮ್ಮ ಉಳಿದಿರುವ ವಸ್ತುಗಳನ್ನು ಸಂಗ್ರಹಿಸಲು ಶ್ರಮಿಸುತ್ತಿರುವವರಿಗೂ ಕುಡಿಯುವ ನೀರಿನ ಅಗತ್ಯ ಅಪಾರವಾಗಿದೆ” ಎಂದು ಸಹೋದರಿ ಮೊರಾ ಹೇಳಿದರು.

ವೈದ್ಯರ ಸೇವೆಯ ಕುರಿತು ಮಾತನಾಡಿದ ಅವರು, "ವರ್ಗಾಸ್ ರಾಜ್ಯದ ಬಹುತೇಕ ಔಷಧ ಅಂಗಡಿಗಳು ನಾಶವಾಗಿವೆ ಅಥವಾ ಮುಚ್ಚಲ್ಪಟ್ಟಿವೆ. ಆದ್ದರಿಂದ ವೈದ್ಯರು ತಮ್ಮ ರೋಗಿಗಳನ್ನು ಸಂಘಟಿಸಿ ಲಭ್ಯವಿರುವ ಔಷಧಿಗಳನ್ನು ಹಂಚುತ್ತಿದ್ದಾರೆ," ಎಂದು ತಿಳಿಸಿದರು.

ಗಂಭೀರವಾಗಿ ಗಾಯಗೊಂಡಿರುವ ರೋಗಿಗಳನ್ನು ಕರಾಕಾಸ್‌ನ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. "ನಾವು ಇಲ್ಲಿ ಪ್ರಾಥಮಿಕ ಆರೋಗ್ಯ ಸೇವೆಗಳಿಗೆ ಒತ್ತು ನೀಡುತ್ತಿದ್ದೇವೆ. ಗಾಯಗಳಿಗೆ ಚಿಕಿತ್ಸೆ ನೀಡುವುದು, ಅತಿಸಾರ ಹಾಗೂ ಈಗಾಗಲೇ ಕಾಣಿಸಿಕೊಳ್ಳುತ್ತಿರುವ ವೈರಲ್ ಸೋಂಕುಗಳಿಗೆ ಚಿಕಿತ್ಸೆ ನೀಡುವುದು ನಮ್ಮ ಪ್ರಮುಖ ಕೆಲಸವಾಗಿದೆ," ಎಂದು ಅವರು ಹೇಳಿದರು.

138 ವರ್ಷಗಳ ಸೇವೆಯ ಪರಂಪರೆ

ಸಾನ್ ಹೊಸೆ ಆಸ್ಪತ್ರೆ ಹಾನಿಗೊಳಗಾದ ಬಗ್ಗೆ "ಇದು ನಮ್ಮ ಧಾರ್ಮಿಕ ಸಭೆಯ ಜನ್ಮಸ್ಥಳ. ನಮ್ಮ ಸಂಸ್ಥಾಪಕರಾದ ಫಾ. ಮಚಾಡೊ ಮತ್ತು ಮದರ್ ಎಮಿಲಿಯಾ ಅವರ ಸಮಾಧಿಗಳು ಇರುವ ಪ್ರಾರ್ಥನಾ ಮಂದಿರ ಇಲ್ಲಿಯೇ ಇದೆ. ಈ ಆಸ್ಪತ್ರೆ ಕೇವಲ ನಮ್ಮ ಸಭೆಗೆ ಮಾತ್ರವಲ್ಲ, ಇಡೀ ವರ್ಗಾಸ್ (ಲಾ ಗುವೈರಾ) ರಾಜ್ಯಕ್ಕೆ ಒಂದು ಸಂಕೇತವಾಗಿದೆ. ಕಳೆದ 138 ವರ್ಷಗಳಿಂದ ಇದು ಜನರಿಗೆ ಸೇವೆ ಸಲ್ಲಿಸುತ್ತಿದೆ” ಎಂದು ಸಹೋದರಿ ಮೊರಾ ತಮ್ಮ ದುಃಖವನ್ನು ಹಂಚಿಕೊಂಡರು.

"ಆಸ್ಪತ್ರೆ ಎಂದರೆ ಕೇವಲ ಗೋಡೆಗಳು ಮತ್ತು ಕಾಂಕ್ರೀಟ್ ಕಟ್ಟಡವಲ್ಲ. ಆಸ್ಪತ್ರೆ ಎಂದರೆ ನಾವೆಲ್ಲರೂ—ಪ್ರತಿಯೊಬ್ಬ ದಾದಿ, ಪ್ರತಿಯೊಬ್ಬ ವೈದ್ಯರು ಮತ್ತು ಪ್ರತಿದಿನ ತಮ್ಮ ಅತ್ಯುತ್ತಮ ಸೇವೆಯನ್ನು ಸಲ್ಲಿಸಲು ಶ್ರಮಿಸುವ ಪ್ರತಿಯೊಬ್ಬ ಸಹೋದರಿಯೇ ಆಸ್ಪತ್ರೆ”ಎಂದು ಎಲ್ಲಾ ವಿನಾಶದ ನಡುವೆಯೂ ಅವರು ಆಶಾಭಾವದ ಮಾತುಗಳೊಂದಿಗೆ ತಮ್ಮ ಸಂದೇಶವನ್ನು ಮುಕ್ತಾಯಗೊಳಿಸಿದರು.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

08 ಜುಲೈ 2026, 20:22