ಅಮೆರಿಕದ 250ನೇ ವಾರ್ಷಿಕೋತ್ಸವದ ಅಂಗವಾಗಿ ಫ್ಲೋರಿಡಾದ ಒರ್ಲ್ಯಾಂಡೊದಲ್ಲಿ ನೂರಾರು ಅಮೆರಿಕನ್ ಕಥೋಲಿಕ ಧರ್ಮಾಧ್ಯಕ್ಷರು ಪವಿತ್ರ ಬಲಿಪೂಜೆಯನ್ನು ಅರ್ಪಿಸುತ್ತಿರುವ ದೃಶ್ಯ ಅಮೆರಿಕದ 250ನೇ ವಾರ್ಷಿಕೋತ್ಸವದ ಅಂಗವಾಗಿ ಫ್ಲೋರಿಡಾದ ಒರ್ಲ್ಯಾಂಡೊದಲ್ಲಿ ನೂರಾರು ಅಮೆರಿಕನ್ ಕಥೋಲಿಕ ಧರ್ಮಾಧ್ಯಕ್ಷರು ಪವಿತ್ರ ಬಲಿಪೂಜೆಯನ್ನು ಅರ್ಪಿಸುತ್ತಿರುವ ದೃಶ್ಯ 

ಒಂದೇ ದಿನ ನಿಗದಿಯಾಗಿರುವ ಎರಡು ಮರಣದಂಡನೆಗಳನ್ನು ತಡೆಹಿಡಿಯುವಂತೆ ಫ್ಲೋರಿಡಾ ಧರ್ಮಾಧ್ಯಕ್ಷರಿಂದ ರಾಜ್ಯಪಾಲರಿಗೆ ಮನವಿ

ಫ್ಲೋರಿಡಾ ಕಥೋಲಿಕ ಧರ್ಮಾಧ್ಯಕ್ಷರ ಸಮ್ಮೇಳನದ ಕಾರ್ಯನಿರ್ವಾಹಕ ನಿರ್ದೇಶಕರು ಸಹಿ ಮಾಡಿರುವ ಪತ್ರದಲ್ಲಿ, ಇಬ್ಬರು ಪುರುಷರ ಮರಣದಂಡನೆಯನ್ನು ತಡೆಹಿಡಿಯುವಂತೆ ರಾಜ್ಯಪಾಲ ರಾನ್ ಡಿಸ್ಯಾಂಟಿಸ್ ಅವರಿಗೆ ಧರ್ಮಾಧ್ಯಕ್ಷರು ಮನವಿ ಮಾಡಿದ್ದಾರೆ. ಅವರ ಅಪರಾಧಗಳು “ಅತ್ಯಂತ ಘೋರವಾದವು” ಎಂಬುದನ್ನು ಒಪ್ಪಿಕೊಂಡಿರುವ ಅವರು, “ನ್ಯಾಯವನ್ನು ಎತ್ತಿಹಿಡಿಯುವುದೂ, ಕರುಣೆಯನ್ನು ತೋರಿಸುವುದೂ ಎರಡನ್ನೂ ಒಟ್ಟಿಗೆ ಮಾಡುವುದು ಸಾಧ್ಯ” ಎಂದು ಹೇಳಿದ್ದಾರೆ.

ಲೇಖಕರು: ಕಿಯೆಲ್ಸೆ ಗುಸ್ಸಿ

ಜುಲೈ 21ರಂದು, ಫ್ಲೋರಿಡಾ ಕಥೋಲಿಕ ಧರ್ಮಾಧ್ಯಕ್ಷರ ಸಮ್ಮೇಳನದ ಕಾರ್ಯನಿರ್ವಾಹಕ ನಿರ್ದೇಶಕರಾದ ಮೈಕೆಲ್ ಬಿ. ಶೀಡಿ, ಫ್ಲೋರಿಡಾ ರಾಜ್ಯಪಾಲ ರಾನ್ ಡಿಸ್ಯಾಂಟಿಸ್ ಅವರಿಗೆ ಪತ್ರ ಬರೆದು, ಜೇಮ್ಸ್ ಡಕೆಟ್ ಮತ್ತು ಡೊಮಿನಿಕ್ ಒಕ್ಕಿಕೋನ್ ಜೂನಿಯರ್ ಅವರ ಮರಣದಂಡನೆಯನ್ನು “ತಡೆಹಿಡಿಯುವಂತೆ” ಹಾಗೂ “ಅವರ ಶಿಕ್ಷೆಯನ್ನು ಪರಿವರ್ತಿಸುವಂತೆ” ಮನವಿ ಮಾಡಿದರು. ಈ ಇಬ್ಬರು ವಿಭಿನ್ನ ಕೊಲೆ ಪ್ರಕರಣಗಳಲ್ಲಿ ಅಪರಾಧಿಗಳೆಂದು ಶಿಕ್ಷೆಗೊಳಗಾಗಿದ್ದಾರೆ. ಡಕೆಟ್ ಅವರು 1987ರಲ್ಲಿ 11 ವರ್ಷದ ತೆರೆಸಾ ಮ್ಯಾಕ್‌ಅಬೀ ಅವರನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಹಾಗೂ ಒಕ್ಕಿಕೋನ್ ಅವರು 1986ರಲ್ಲಿ ರೇಮಂಡ್ ಮತ್ತು ಮಾರ್ಥಾ ಆರ್ಟ್ಜ್ನರ್ ದಂಪತಿಯನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದಾರೆ. ಇವರಿಬ್ಬರಿಗೂ ಜುಲೈ 28ರಂದು ಮರಣದಂಡನೆ ಜಾರಿಗೊಳಿಸಲು ನಿಗದಿಯಾಗಿದೆ.

ಈ ಇಬ್ಬರು ಅಪರಾಧಿಗಳು ಎಸಗಿರುವ ಕೃತ್ಯಗಳು “ಅತ್ಯಂತ ಘೋರವಾದವು” ಎಂದು ಶೀಡಿ ಒತ್ತಿಹೇಳಿದರು. ಅಲ್ಲದೆ, ಈ ಸಾವಿನಿಂದ ಉಂಟಾದ ನೋವು “ಅವರ ಪ್ರೀತಿಪಾತ್ರರು ಜೀವನದ ಕೊನೆಯವರೆಗೂ ಹೊತ್ತುಕೊಂಡು ಹೋಗುವ ಆಳವಾದ ದುಃಖವಾಗಿದೆ” ಎಂದು ಅವರು ಹೇಳಿದರು. ಫ್ಲೋರಿಡಾ ಕಥೋಲಿಕ ಧರ್ಮಾಧ್ಯಕ್ಷರ ಸಮ್ಮೇಳನದ ಕಾರ್ಯನಿರ್ವಾಹಕ ನಿರ್ದೇಶಕರು, ಈ ಇಬ್ಬರ ಮರಣದಂಡನೆಯನ್ನು ತಡೆಹಿಡಿಯುವಂತೆ ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ. ಧರ್ಮಾಧ್ಯಕ್ಷರು, ಪೆರೋಲ್‌ ಅವಕಾಶವಿಲ್ಲದ ಜೀವಾವಧಿ ಶಿಕ್ಷೆಯಾಗಿ ಅವರ ಶಿಕ್ಷೆಯನ್ನು ಪರಿವರ್ತಿಸಬೇಕೆಂದು ಕೋರಿದ್ದಾರೆ.

ಮನುಷ್ಯನು ಇಳಿಯಬಹುದಾದ ಅಧಃಪತನದ ಆಳಗಳು

ಸಂತ ಎರಡನೇ ಜಾನ್ ಪಾಲರ "ಎವಾಂಜೆಲಿಯುಮ್ ವಿಟೇ" ಎಂಬ ಪರಿಪತ್ರವನ್ನು ಉಲ್ಲೇಖಿಸಿದ ಶೀಡಿ, ನಾಜಿ ಮತ್ತು ಸೋವಿಯತ್ ಆಡಳಿತಗಳ ಅಡಿಯಲ್ಲಿ ಬದುಕಿದ್ದ ಪೂಜ್ಯ ಜಗದ್ಗುರುಗಳಿಗೆ "ಮನುಷ್ಯರು ಇಳಿಯಬಹುದಾದ ಕತ್ತಲೆ ಮತ್ತು ಅಧಃಪತನ"ದ ಅರಿವು ಇರಲಿಲ್ಲವೆಂದು ಹೇಳಲು ಸಾಧ್ಯವಿಲ್ಲ ಎಂದು ಸೂಚಿಸಿದರು. ಒಳಿತು ಮತ್ತು ಕೆಡುಕು ಮಾನವನ ದೈನಂದಿನ ಬದುಕಿನಲ್ಲಿ ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬ ವೈಯಕ್ತಿಕ ಅನುಭವ ಹೊಂದಿದ್ದ ಪೋಲಿಷ್ ಪೂಜ್ಯ ಜಗದ್ಗುರುಗಳು, "ದುಷ್ಟಶಕ್ತಿಗಳ ವೈರತ್ವಕ್ಕೆ" ದೇವರು ತೋರಿಸಿದ ಮಾರ್ಗದಲ್ಲಿಯೇ ಪ್ರತಿಕ್ರಿಯಿಸುವಂತೆ ಎಲ್ಲರನ್ನೂ ಕರೆ ನೀಡಿದ್ದರು.

"ಎವಾಂಜೆಲಿಯುಮ್ ವಿಟೇ" ಪರಿಪತ್ರದ ಆರಂಭದಲ್ಲಿ, ಪೂಜ್ಯ ಜಗದ್ಗುರುಗಳು ಪವಿತ್ರ ಬೈಬಲ್‌ನಲ್ಲಿರುವ ಕಾಯಿನ್ ಮತ್ತು  ಹೇಬೆಲ್ ಅವರ ಕಥೆಯನ್ನು ಧ್ಯಾನಿಸುತ್ತಾರೆ. ಕಾಯಿನ್ ತನ್ನ ಸಹೋದರನನ್ನು ಕೊಂದದ್ದು ಭಯಾನಕ ಪಾಪವಾಗಿತ್ತು: "ಮುಗ್ದ ಮಾನವ ಜೀವವನ್ನು ಕಸಿದುಕೊಳ್ಳುವುದು." ದೇವರು "ಕಾಯನನನ್ನು ಶಿಕ್ಷೆಯಿಲ್ಲದೆ ಬಿಡಲಿಲ್ಲ" ಎಂದು ಶೀಡಿ ನೆನಪಿಸಿದರು. ಬದಲಿಗೆ ದೇವರು ಅವನಿಗೆ ಕಠಿಣ ಶಿಕ್ಷೆಯನ್ನು ವಿಧಿಸಿದರು. ಆದರೆ ಅವನನ್ನು ಕೊಲ್ಲುವಂತೆ ಆಜ್ಞಾಪಿಸಲಿಲ್ಲ. ಆ ಕಥೆಯನ್ನು ಪ್ರತಿಬಿಂಬಿಸುತ್ತಾ ಪೋಲಿಷ್ ಪೂಜ್ಯ ಜಗದ್ಗುರುಗಳು ಹೀಗೆ ಬರೆದಿದ್ದರು: "ಕೊಲೆಗಾರನೂ ಸಹ ತನ್ನ ವೈಯಕ್ತಿಕ ಘನತೆಯನ್ನು ಕಳೆದುಕೊಳ್ಳುವುದಿಲ್ಲ."

ಈ ಕಾರಣಕ್ಕಾಗಿಯೇ ಫ್ಲೋರಿಡಾದ ಧರ್ಮಾಧ್ಯಕ್ಷರು ರಾಜ್ಯಪಾಲ ಡಿಸ್ಯಾಂಟಿಸ್ ಅವರಿಗೆ ಒಕ್ಕಿಕೋನ್ ಮತ್ತು ಡಕೆಟ್ ಅವರ ಮರಣದಂಡನೆಯನ್ನು ಜಾರಿಗೊಳಿಸದಂತೆ ಮನವಿ ಮಾಡಿದ್ದಾರೆ. "ಜೀವಾವಧಿ ಶಿಕ್ಷೆ ವಿಧಿಸುವುದರಿಂದ ಈ ಪುರುಷರು ಎಸಗಿರುವ ಘೋರ ಅಪರಾಧಗಳ ಭೀಕರತೆಯನ್ನು ಕಡಿಮೆ ಮಾಡಿದಂತಾಗುವುದಿಲ್ಲ" ಎಂದು ಶೀಡಿ ವಿವರಿಸಿದರು. ಬದಲಾಗಿ, ದೇವರೇ ಜೀವದ ಕರ್ತೃ ಎಂಬುದನ್ನು ಅದು ಅಂಗೀಕರಿಸುತ್ತದೆ ಮತ್ತು ಸಾಮಾನ್ಯ ಹಿತವನ್ನು ಕಾಪಾಡಲು ಬೇರೆ ಯಾವುದೇ ಮಾರ್ಗವಿಲ್ಲದ ಸಂದರ್ಭಗಳನ್ನು ಹೊರತುಪಡಿಸಿ, ಜೀವವನ್ನು ತೆಗೆದುಕೊಳ್ಳುವ ಅಧಿಕಾರ ದೇವರಿಗೆ ಮಾತ್ರ ಮೀಸಲಾಗಿರಬೇಕು ಎಂದು ಅವರು ಹೇಳಿದರು.

ಇದಲ್ಲದೆ, ಒಂದೇ ದಿನ ಇಬ್ಬರನ್ನು ಮರಣದಂಡನೆಗೆ ಒಳಪಡಿಸುವಂತೆ ರಾಜ್ಯದ ಅಧಿಕಾರಿಗಳನ್ನು ಒತ್ತಾಯಿಸುವುದು "ವಿಶೇಷವಾಗಿ ಕ್ರೂರವಾದ ಕ್ರಮ" ಎಂದು ಶೀಡಿ ಒತ್ತಿಹೇಳಿದರು. ನ್ಯಾಯವನ್ನು ಎತ್ತಿಹಿಡಿಯುವುದು ಮತ್ತು ಕರುಣೆಯನ್ನು ತೋರಿಸುವುದು ಪರಸ್ಪರ ವಿರುದ್ಧವಾದವುಗಳಲ್ಲ ಎಂದು ಧರ್ಮಾಧ್ಯಕ್ಷರು ರಾಜ್ಯಪಾಲ ಡಿಸ್ಯಾಂಟಿಸ್ ಅವರಿಗೆ ತಿಳಿಸಿದರು. "ಪ್ರತಿಯೊಬ್ಬ ವ್ಯಕ್ತಿಯ ಅಂತಿಮ ನ್ಯಾಯತೀರ್ಪನ್ನು ನಾವು ದೇವರಿಗೆ ಒಪ್ಪಿಸಬೇಕು" ಎಂದು ಅವರು ಹೇಳಿದರು. ತೆರೆಸಾ ಮ್ಯಾಕ್‌ಅಬೀ ಹಾಗೂ ರೇಮಂಡ್ ಮತ್ತು ಮಾರ್ಥಾ ಆರ್ಟ್ಜ್ನರ್ ಅವರ ಆತ್ಮಗಳಿಗೆ ಶಾಶ್ವತ ಶಾಂತಿ ದೊರೆಯಲೆಂದು ಹಾಗೂ ಅವರ ಕುಟುಂಬಗಳಿಗೆ ಸಾಂತ್ವನ ದೊರೆಯಲೆಂದು ಧರ್ಮಾಧ್ಯಕ್ಷರು ಪ್ರಾರ್ಥಿಸುತ್ತಿದ್ದಾರೆ ಎಂಬುದನ್ನೂ ಪತ್ರದಲ್ಲಿ ವ್ಯಕ್ತಪಡಿಸಲಾಗಿದೆ.

ಪತ್ರದ ಕೊನೆಯಲ್ಲಿ, ಕಾರ್ಯನಿರ್ವಾಹಕ ನಿರ್ದೇಶಕರು ಧರ್ಮಾಧ್ಯಕ್ಷರ ಪ್ರಾರ್ಥನೆಗಳು ರಾಜ್ಯಪಾಲ ಡಿಸ್ಯಾಂಟಿಸ್ ಅವರೊಂದಿಗೂ ಇವೆ ಎಂದು ತಿಳಿಸಿ, ತಮ್ಮ ಮನವಿಯನ್ನು ಪರಿಗಣಿಸುವಂತೆ ಕೋರಿದರು. ಜೊತೆಗೆ ಧ್ಯಾನಕ್ಕಾಗಿ ಪವಿತ್ರ ಬೈಬಲ್‌ನ ಈ ವಾಕ್ಯವನ್ನು ಉಲ್ಲೇಖಿಸಿದರು: “ದುಷ್ಟನು ಸಾಯುವುದರಲ್ಲಿ ನನಗೆ ಸಂತೋಷವಿದೆಯೇ? ಅವನು ತನ್ನ ದುರ್ಮಾರ್ಗವನ್ನು ಬಿಟ್ಟು ಬದುಕುವುದರಲ್ಲಿ ನನಗೆ ಹೆಚ್ಚು ಸಂತೋಷವಿಲ್ಲವೇ?” (ಯೆಜೆಕಿಯೇಲ 18:23).

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

24 ಜುಲೈ 2026, 20:03