ಹುಡುಕಿ

ವಾಷಿಂಗ್ಟನ್ ಡಿ.ಸಿ. ವಾಷಿಂಗ್ಟನ್ ಡಿ.ಸಿ. 

ವಲಸೆ ಕಾನೂನು ಜಾರಿಯಲ್ಲಿ ಜನಾಂಗೀಯ ತಾರತಮ್ಯ ಅಂತ್ಯಗೊಳಿಸುವಂತೆ ಅಮೆರಿಕದ ಧರ್ಮಾಧ್ಯಕ್ಷರ ಕರೆ

ಇತ್ತೀಚೆಗೆ ವಲಸೆ ಕಾನೂನು ಜಾರಿ ಕಾರ್ಯಾಚರಣೆಗಳ ವೇಳೆ ಹಲವು ಮಂದಿ ಜೀವ ಕಳೆದುಕೊಂಡ ಘಟನೆಗಳ ಹಿನ್ನೆಲೆಯಲ್ಲಿ, ಅಮೆರಿಕದ ಧರ್ಮಾಧ್ಯಕ್ಷರಾದ ಡೇನಿಯಲ್ ಇ. ಗಾರ್ಸಿಯಾ ಮತ್ತು ಬ್ರೆಂಡನ್ ಜೆ. ಕಾಹಿಲ್ ಅವರು, ಪ್ರತಿಯೊಬ್ಬ ವ್ಯಕ್ತಿಯ ದೇವದತ್ತ ಘನತೆಯನ್ನು ಸದಾ ಗೌರವಿಸುವ ವಲಸೆ ಕಾನೂನು ಜಾರಿಗೆ ಕರೆ ನೀಡುತ್ತಾ, ವಲಸಿಗರನ್ನು ಅಮಾನವೀಯವಾಗಿ ನಡೆಸಿಕೊಳ್ಳುವುದನ್ನು ತಿರಸ್ಕರಿಸುವ ಧಾರ್ಮಿಕ ಸಂದೇಶವನ್ನು ಪ್ರಕಟಿಸಿದ್ದಾರೆ.

ಲೇಖಕರು: ದೆಬೋರ ಕ್ಯಾಸ್ತೆಲ್ಲಾನೋ ಲುಬೋವ್

“ಕಥೋಲಿಕರಾದ ನಾವು, ಪ್ರತಿಯೊಬ್ಬ ವ್ಯಕ್ತಿಯೂ ದೇವರ ಸ್ವರೂಪ ಮತ್ತು ಹೋಲಿಕೆಯಲ್ಲಿ ಸೃಷ್ಟಿಸಲ್ಪಟ್ಟಿದ್ದಾನೆ ಎಂದು ನಂಬುತ್ತೇವೆ. ಆದ್ದರಿಂದ ಮಾನವ ಜೀವವು ಸಹಜವಲ್ಲದ ರೀತಿಯಲ್ಲಿ ಅಂತ್ಯಗೊಳ್ಳುವ ಪ್ರತಿಯೊಂದು ಘಟನೆಯೂ ನಮಗೆ ಆಳವಾದ ದುಃಖವನ್ನುಂಟುಮಾಡುತ್ತದೆ.” ಈ ಮಾತುಗಳೊಂದಿಗೆ, ಅಮೆರಿಕದ ಕಥೋಲಿಕ ಧರ್ಮಾಧ್ಯಕ್ಷರ ಸಮ್ಮೇಳನದ ಜನಾಂಗೀಯ ನ್ಯಾಯ ಮತ್ತು ಸಮನ್ವಯ ಉತ್ತೇಜನ ಉಪಸಮಿತಿಯ ಅಧ್ಯಕ್ಷರಾದ ಧರ್ಮಾಧ್ಯಕ್ಷ ಡೇನಿಯಲ್ ಇ. ಗಾರ್ಸಿಯಾ ಹಾಗೂ ವಲಸೆ ಸಮಿತಿಯ ಅಧ್ಯಕ್ಷರಾದ ಧರ್ಮಾಧ್ಯಕ್ಷ ಬ್ರೆಂಡನ್ ಜೆ. ಕಾಹಿಲ್ ಅವರು ತಮ್ಮ ಧಾರ್ಮಿಕ ಸಂದೇಶವನ್ನು ಆರಂಭಿಸಿದ್ದಾರೆ. ಅಮೆರಿಕದಲ್ಲಿ ಇತ್ತೀಚೆಗೆ ವಲಸೆ ಕಾನೂನು ಜಾರಿ ಕಾರ್ಯಾಚರಣೆಗಳ ಸಂದರ್ಭದಲ್ಲಿ ಸಂಭವಿಸಿದ ಹಲವು ಸಾವಿನ ಘಟನೆಗಳ ಹಿನ್ನೆಲೆಯಲ್ಲಿ ಈ ಸಂದೇಶವನ್ನು ಪ್ರಕಟಿಸಲಾಗಿದೆ.

2026ರ ಜುಲೈ 20ರಂದು ಅಮೆರಿಕದ ಕಥೋಲಿಕ ಧರ್ಮಾಧ್ಯಕ್ಷರ ಸಮ್ಮೇಳನದ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಈ ಸಂದೇಶದಲ್ಲಿ, ಜೀವ ಕಳೆದುಕೊಂಡವರಿಗಾಗಿ ಧರ್ಮಾಧ್ಯಕ್ಷರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ನಾಗರಿಕ ಆಡಳಿತದ ಕರ್ತವ್ಯವನ್ನು ಅವರು ಅಂಗೀಕರಿಸಿದರೂ, ಕಾನೂನು ಜಾರಿ ಯಾವುದೇ ಸಂದರ್ಭದಲ್ಲೂ ಮಾನವ ಘನತೆ ಅಥವಾ ಮಾನವ ಜೀವಕ್ಕೆ ಧಕ್ಕೆ ಉಂಟುಮಾಡಬಾರದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

'ರಾಜ್ಯದ ಅಧಿಕಾರವು ನೈತಿಕ ನಿಯಮಗಳ ಮಿತಿಯೊಳಗಿರಬೇಕು'

“ನಾಗರಿಕ ಆಡಳಿತವು ಕಾನೂನನ್ನು ಮಾನವೀಯ ರೀತಿಯಲ್ಲಿ ಹಾಗೂ ಜೀವಿಸುವ ಹಕ್ಕು ಮತ್ತು ನ್ಯಾಯಸಮ್ಮತ ನ್ಯಾಯಾಂಗ ಪ್ರಕ್ರಿಯೆ ಸೇರಿದಂತೆ ಮೂಲಭೂತ ಮಾನವ ಹಕ್ಕುಗಳನ್ನು ಗೌರವಿಸುತ್ತಾ ಜಾರಿಗೊಳಿಸುವ ನ್ಯಾಯಸಮ್ಮತ ಪಾತ್ರವನ್ನು ನಾವು ಮುಂದುವರಿಸಿ ದೃಢೀಕರಿಸುತ್ತೇವೆ” ಎಂದು ಧರ್ಮಾಧ್ಯಕ್ಷರು ತಮ್ಮ ಹೇಳಿಕೆಯಲ್ಲಿ ಪುನರುಚ್ಚರಿಸಿದ್ದಾರೆ. ಧರ್ಮಾಧ್ಯಕ್ಷ ಗಾರ್ಸಿಯಾ ಮತ್ತು ಧರ್ಮಾಧ್ಯಕ್ಷ ಕಾಹಿಲ್ ಅವರು, “ರಾಜ್ಯದ ಅಧಿಕಾರವು ಯಾವಾಗಲೂ ನೈತಿಕ ನಿಯಮಗಳ ಮಿತಿಯೊಳಗೆ ಮಾತ್ರ ಚಲಾಯಿಸಲ್ಪಡಬೇಕು” ಎಂದು ಒತ್ತಿ ಹೇಳಿದರು.

“ಆದ್ದರಿಂದ,ಹೊಣೆಗಾರಿಕೆ, ಪಾರದರ್ಶಕತೆ ಮತ್ತು ನ್ಯಾಯವನ್ನು ನಾವು ಆಗ್ರಹಿಸುತ್ತೇವೆ. ಇದಕ್ಕಾಗಿ ನಮ್ಮ ವಲಸೆ ವ್ಯವಸ್ಥೆಯಲ್ಲಿ ಅರ್ಥಪೂರ್ಣ ಸುಧಾರಣೆಗಳನ್ನು ತರಬೇಕಾಗಿದೆ.”

ಜನಾಂಗೀಯ ಗುರುತಿಸುವಿಕೆ ಕುರಿತು ಕಳವಳ

ಕಳೆದ ನವೆಂಬರ್‌ನಲ್ಲಿ ಅಮೆರಿಕದ ಧರ್ಮಾಧ್ಯಕ್ಷರು ವ್ಯಕ್ತಪಡಿಸಿದ್ದ ಅಭಿಪ್ರಾಯವನ್ನು ಸ್ಮರಿಸಿದ ಅವರು, “ನಮ್ಮ ಜನರಲ್ಲಿ ಜನಾಂಗೀಯ ಗುರುತಿಸುವಿಕೆ ಹಾಗೂ ವಲಸೆ ಕಾನೂನು ಜಾರಿಗೆ ಸಂಬಂಧಿಸಿದ ಭಯ ಮತ್ತು ಆತಂಕದ ವಾತಾವರಣವನ್ನು ಕಂಡಾಗ ನಾವು ತೀವ್ರವಾಗಿ ಕಳವಳಗೊಳ್ಳುತ್ತೇವೆ” ಎಂದು ಪುನರುಚ್ಚರಿಸಿದರು.

ಜನಾಂಗೀಯ ಗುರುತಿಸುವಿಕೆಯು “ದೇವರು ನೀಡಿದ ಮಾನವ ಘನತೆಯನ್ನು ಉಲ್ಲಂಘಿಸುವುದಷ್ಟೇ ಅಲ್ಲ, ಭಯವನ್ನು ಹೆಚ್ಚಿಸುವ ಮೂಲಕ, ಪರಸ್ಪರ ವಿಶ್ವಾಸವನ್ನು ಕುಗ್ಗಿಸುವ ಮೂಲಕ ಮತ್ತು ಅನ್ಯಾಯಕರ ಹಾಗೂ ದುರಂತಕರ ಪರಿಣಾಮಗಳ ಅಪಾಯವನ್ನು ಹೆಚ್ಚಿಸುವ ಮೂಲಕ ವ್ಯಕ್ತಿಗಳು, ಕುಟುಂಬಗಳು ಮತ್ತು ಸಮುದಾಯಗಳಿಗೆ ಆಳವಾದ ಹಾನಿಯನ್ನುಂಟುಮಾಡುತ್ತದೆ” ಎಂದು ಅವರು ಹೇಳಿದರು. ತಮ್ಮ ಧಾರ್ಮಿಕ ಕಾಳಜಿಯು ನಾಗರಿಕ ಕಾನೂನು ಅನುಮತಿಸುವ ವಿಷಯಗಳಿಂದ ಭಿನ್ನವಾಗಿದೆ ಎಂಬುದನ್ನೂ ಧರ್ಮಾಧ್ಯಕ್ಷರು ಒಪ್ಪಿಕೊಂಡರು.

ಮಾನವ ಘನತೆಯನ್ನು ಕಡೆಗಣಿಸುವುದನ್ನು ಎಂದಿಗೂ ಸಾಮಾನ್ಯಗೊಳಿಸಬಾರದು

“ಯಾವುದೇ ವ್ಯಕ್ತಿ ಅಥವಾ ಜನರ ಗುಂಪಿನ ಘನತೆಯನ್ನು ಕುಗ್ಗಿಸುವ ಅಥವಾ ನಿರ್ಲಕ್ಷಿಸುವ ಕೃತ್ಯಗಳನ್ನು ನಮ್ಮ ಸಮಾಜದಲ್ಲಿ ಎಂದಿಗೂ ಸಾಮಾನ್ಯವೆಂದು ಪರಿಗಣಿಸಬಾರದು.” “ಅವರ ಕಾನೂನುಬದ್ಧ ಸ್ಥಿತಿ ಏನೇ ಆಗಿರಲಿ, ವಲಸಿಗರನ್ನು ಅಮಾನವೀಯವಾಗಿ ನಡೆಸಿಕೊಳ್ಳುವುದು” ಮತ್ತು “ಕಾನೂನು ಜಾರಿ ಅಧಿಕಾರಿಗಳನ್ನು ಅಪಹಾಸ್ಯ ಮಾಡುವುದು” ಎಂಬ ಎರಡೂ ಮನೋಭಾವಗಳು ಎಂದಿಗೂ ಸಾಮಾನ್ಯವಾಗಬಾರದು ಎಂದು ಧರ್ಮಾಧ್ಯಕ್ಷ ಗಾರ್ಸಿಯಾ ಮತ್ತು ಧರ್ಮಾಧ್ಯಕ್ಷ ಕಾಹಿಲ್ ಒತ್ತಿ ಹೇಳಿದರು.

ಕೊನೆಯಲ್ಲಿ, ಮೃತಪಟ್ಟವರ ಆತ್ಮಶಾಂತಿಗಾಗಿ, ಅವರ ಕುಟುಂಬಗಳಿಗಾಗಿ, ಇಡೀ ರಾಷ್ಟ್ರಕ್ಕಾಗಿ ಹಾಗೂ ಸಾರ್ವಜನಿಕ ಸೇವೆಯ ಜವಾಬ್ದಾರಿಯನ್ನು ಹೊತ್ತಿರುವ ಎಲ್ಲರಿಗಾಗಿಯೂ, “ಅಮಾನವೀಯ ಭಾಷಣ, ಜನಾಂಗೀಯ ಪೂರ್ವಾಗ್ರಹ ಮತ್ತು ಹಿಂಸೆಗೆ ಅಂತ್ಯವಾಗಲಿ; ಪ್ರತಿಯೊಬ್ಬ ವ್ಯಕ್ತಿಯೂ ದೇವರ ಮಗುವಾಗಿ ಹೊಂದಿರುವ ಅಂತರ್ಗತ ಘನತೆಯನ್ನು ಗುರುತಿಸುವ ಹೊಸ ಬದ್ಧತೆ ನಮ್ಮಲ್ಲಿ ಮೂಡಲಿ” ಎಂದು  ಪ್ರಾರ್ಥಿಸಿದರು.

“ದುಃಖ, ಸಂಕಷ್ಟ ಮತ್ತು ಅನಿಶ್ಚಿತತೆಯ ಸಮಯದಲ್ಲಿ ಪರಿಪೂರ್ಣ ವಿಶ್ವಾಸದ ಮಾದರಿಯಾಗಿರುವ ತಾಯಿಯಾದ ಮರಿಯಮ್ಮನವರ ಮಧ್ಯಸ್ಥಿಕೆಯನ್ನು ನಾವು ವಿನಂತಿಸುತ್ತೇವೆ” ಎಂದು ಅವರು ತಮ್ಮ ಸಂದೇಶವನ್ನು ಮುಕ್ತಾಯಗೊಳಿಸಿದರು.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

21 ಜುಲೈ 2026, 18:25