ಆಫ್ರಿಕಾದ ಧರ್ಮಸಭೆಗೆ ಬೆಂಬಲ ನೀಡುವಂತೆ ಅಮೆರಿಕದ ಧರ್ಮಾಧ್ಯಕ್ಷರ ಆಹ್ವಾನ
ಲೇಖಕರು: ದೆಬೋರ ಕ್ಯಾಸ್ತೆಲ್ಲಾನೋ ಲುಬೋವ್
ಆಫ್ರಿಕಾದ ಧರ್ಮಸಭೆಗಾಗಿ ಐಕ್ಯತಾ ನಿಧಿಯ ಮೂಲಕ, ಅಮೆರಿಕದ ಕಥೋಲಿಕರಿಗೆ ಆಫ್ರಿಕಾದ ಧರ್ಮಸಭೆಯನ್ನು ಬೆಂಬಲಿಸುವ ಅವಕಾಶ ದೊರೆತಿದೆ. ಸುಮಾರು ಎರಡು ದಶಕಗಳ ಹಿಂದೆ ಅಮೆರಿಕದ ಕಥೋಲಿಕ ಧರ್ಮಾಧ್ಯಕ್ಷರ ಸಮ್ಮೇಳನ (USCCB) ಈ ನಿಧಿಯನ್ನು ಸ್ಥಾಪಿಸಿತು. ವಿಶ್ವಾಸವು ವೇಗವಾಗಿ ಬೆಳೆಯುತ್ತಿರುವ ಆಫ್ರಿಕಾ ಖಂಡದಲ್ಲಿ ಧಾರ್ಮಿಕ ಸೇವೆಯ ಅಗತ್ಯಗಳನ್ನು ಪೂರೈಸಲು ಧರ್ಮಸಭೆಗೆ ಸೀಮಿತ ಸಾಮರ್ಥ್ಯವಿದ್ದು, ಅನೇಕ ಗಂಭೀರ ಸವಾಲುಗಳನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಈ ನಿಧಿಯನ್ನು ಆರಂಭಿಸಲಾಯಿತು.
2026ರ ಏಪ್ರಿಲ್ 13ರಿಂದ 23ರವರೆಗೆ ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರು ಆಫ್ರಿಕಾದ ನಾಲ್ಕು ರಾಷ್ಟ್ರಗಳಿಗೆ ನಡೆಸಿದ ಪ್ರೇಷಿತ ಭೇಟಿಯ ನಂತರ, ಅಮೆರಿಕದ ಧರ್ಮಾಧ್ಯಕ್ಷರು ವಿಶ್ವಾಸಿಗಳಿಗೆ ಈ ನಿಧಿಯ ಮೂಲಕ ಆಫ್ರಿಕಾದ ಧರ್ಮಸಭೆಯನ್ನು ಬೆಂಬಲಿಸುವ ಮೂಲಕ ಅವರು ಸಹ ಪೂಜ್ಯ ಜಗದ್ಗುರುಗಳ ಕರೆಗೆ ಕೈಜೋಡಿಸಬಹುದು ಎಂದು ತಿಳಿಸಿದ್ದಾರೆ. 2025ರಲ್ಲಿ ಈ ನಿಧಿಯು 97 ಯೋಜನೆಗಳಿಗೆ ಒಟ್ಟು 30 ಲಕ್ಷ ಅಮೆರಿಕನ್ ಡಾಲರ್‌ಗಿಂತಲೂ ಹೆಚ್ಚಿನ ಅನುದಾನವನ್ನು ನೀಡಿದೆ.
ಖಂಡದಾದ್ಯಂತ ಯೋಜನೆಗಳಿಗೆ ಅನುದಾನ
USCCBಯ ಆಫ್ರಿಕಾದ ಧರ್ಮಸಭೆ ಉಪಸಮಿತಿಯ ಅಧ್ಯಕ್ಷರಾದ ಮಹಾಧರ್ಮಾಧ್ಯಕ್ಷ ಥಾಮಸ್ ಜಿಂಕುಲಾ "ಅಮೆರಿಕದ ಕಥೋಲಿಕರು ಆಫ್ರಿಕಾದ ಧರ್ಮಸಭೆಗಾಗಿ ಐಕ್ಯತಾ ನಿಧಿಗೆ ನೀಡುವ ಕಾಣಿಕೆಗಳು ಶಾಂತಿಯ ಅಡಿಪಾಯವನ್ನು ನಿರ್ಮಿಸುವ ಯೋಜನೆಗಳಿಗೆ ಬೆಂಬಲ ನೀಡುತ್ತವೆ. ಜೊತೆಗೆ ಧರ್ಮಪ್ರಚಾರ, ಧಾರ್ಮಿಕ ಕರೆಯ ಬೆಳವಣಿಗೆ, ಪರಿಸರದ ಸಂರಕ್ಷಣೆ, ನಾಯಕತ್ವದ ತರಬೇತಿ ಹಾಗೂ ನಮ್ಮ ವಿಶ್ವಾಸದ ಇತರ ಅನೇಕ ಕ್ಷೇತ್ರಗಳಿಗೆ ಸಂಬಂಧಿಸಿದ ಯೋಜನೆಗಳಿಗೂ ಈ ಅನುದಾನ ನೆರವಾಗುತ್ತದೆ.ಆಫ್ರಿಕಾದಲ್ಲಿ ಶಾಂತಿ ಮತ್ತು ಸೌಹಾರ್ದತೆಗಾಗಿ ನಮ್ಮ ಜಗದ್ಗುರುಗಳು ನೀಡಿರುವ ಕರೆಗೆ ಪ್ರತಿಕ್ರಿಯೆಯಾಗಿ ಈ ಕಾಣಿಕೆಗಳು ಇನ್ನಷ್ಟು ಹೆಚ್ಚಾಗಲಿ ಎಂಬುದು ನನ್ನ ಪ್ರಾರ್ಥನೆ" ಎಂದು ಮಹಾಧರ್ಮಾಧ್ಯಕ್ಷ ಜಿಂಕುಲಾ ಹೇಳಿದರು.
"ನಿಮ್ಮ ಕಾಣಿಕೆಗಳ ಪರಿಣಾಮವನ್ನು ನಾನು ಸ್ವತಃ ಕಂಡಿದ್ದೇನೆ. ನೀವು ನೀಡುವ ಪ್ರತಿಯೊಂದು ಕೊಡುಗೆಯನ್ನೂ ಜಾಣ್ಮೆಯಿಂದ ಮತ್ತು ಪರಿಣಾಮಕಾರಿಯಾಗಿ ಬಳಸಲಾಗುತ್ತದೆ ಎಂಬುದಕ್ಕೆ ನಾನು ಸಾಕ್ಷಿಯಾಗಿದ್ದೇನೆ."
ಈ ಬೇಸಿಗೆಯಲ್ಲಿ ಅಮೆರಿಕದ ಅನೇಕ ಧರ್ಮಪ್ರಾಂತ್ಯಗಳ ಧರ್ಮಕೇಂದ್ರಗಳಲ್ಲಿ ಈ ನಿಧಿಗಾಗಿ ವಿಶೇಷ ಕಾಣಿಕೆ ಸಂಗ್ರಹ ನಡೆಯಲಿದೆ. ಜೊತೆಗೆ #iGiveCatholic ಮೂಲಕವೂ ಆನ್‌ಲೈನ್‌ನಲ್ಲಿ ಆಫ್ರಿಕಾದ ಧರ್ಮಸಭೆಗಾಗಿ ಐಕ್ಯತಾ ನಿಧಿಗೆ ಕಾಣಿಕೆ ಸಲ್ಲಿಸಬಹುದು.
ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರು ಆಫ್ರಿಕಾದ ನಮ್ಮ ಸಹೋದರ-ಸಹೋದರಿಯರೊಂದಿಗೆ ಐಕ್ಯತೆಯಲ್ಲಿ ನಿಲ್ಲುವಂತೆ ಕರೆ ನೀಡಿದ್ದಾರೆ ಎಂದು ಮಹಾಧರ್ಮಾಧ್ಯಕ್ಷ ಜಿಂಕುಲಾ ನೆನಪಿಸಿದರು. "ಆಫ್ರಿಕಾದ ಧರ್ಮಸಭೆಗಾಗಿ ಐಕ್ಯತಾ ನಿಧಿಯು ನಿಖರವಾಗಿ ಅದನ್ನೇ ಸಾಧ್ಯವಾಗಿಸುತ್ತದೆ" ಎಂದು ಅವರು ಹೇಳಿದರು.
ಸಂಕಷ್ಟದಲ್ಲಿರುವ ಜನರಿಗೆ ಸ್ಪಷ್ಟ ಬೆಂಬಲ
2025ರಲ್ಲಿ ನೀಡಲಾದ ಅನುದಾನಗಳ ಕೆಲವು ಉದಾಹರಣೆಗಳನ್ನು USCCB ನೀಡಿದೆ. ಮಾಲಿಯಲ್ಲಿ ಅನೇಕ ಮಕ್ಕಳು ಯುದ್ಧ ಮತ್ತು ಭಯೋತ್ಪಾದನೆಯನ್ನೇ ಜೀವನದ ಸಾಮಾನ್ಯ ಭಾಗವೆಂದು ನಂಬುತ್ತಾ ಬೆಳೆಯುತ್ತಿರುವ ಸಂದರ್ಭದಲ್ಲಿ, ಒಂದು ಅನುದಾನದ ಮೂಲಕ ದೇಶದಾದ್ಯಂತದ 200ಕ್ಕೂ ಹೆಚ್ಚು ಯುವಜನರಿಗೆ ವಿಶೇಷ ಬೈಬಲ್ ಶಿಬಿರವನ್ನು ಆಯೋಜಿಸಲಾಯಿತು. ಅಲ್ಲಿ ಅವರು ಶುಭಸಂದೇಶದ ಮೌಲ್ಯಗಳ ಜೊತೆಗೆ, ಎರಡನೇ ವ್ಯಾಟಿಕನ್ ಮಹಾಸಭೆಯ ಧಾರ್ಮಿಕ ಸ್ವಾತಂತ್ರ್ಯ ಮತ್ತು ಧರ್ಮಾಂತರ ಸಂವಾದ ಕುರಿತ ಬೋಧನೆಗಳನ್ನು ಕಲಿತರು. ಸುಡಾನಿನಲ್ಲಿ, ಯುದ್ಧದಿಂದ ಉಂಟಾದ ವಿಶ್ವದ ಅತಿ ದೊಡ್ಡ ಮಾನವೀಯ ಬಿಕ್ಕಟ್ಟಿನ ನಡುವೆಯೂ, ಮತ್ತೊಂದು ಅನುದಾನದ ಮೂಲಕ ನುಬಾ ಪರ್ವತಗಳು ಮತ್ತು ಅಬಿಯೇ ಪ್ರದೇಶದ 223 ಸಾಮಾನ್ಯ ಧರ್ಮಬೋಧಕರಿಗೆ ಮೂರು ತಿಂಗಳ ಧರ್ಮಪ್ರಚಾರ, ಧಾರ್ಮಿಕ ಸೇವೆ ಹಾಗೂ ಸಂಸ್ಕಾರಗಳ ಸಿದ್ಧತೆ ಕುರಿತ ತರಬೇತಿಗಾಗಿ ಸಾರಿಗೆ, ಆಹಾರ, ವಸತಿ ಹಾಗೂ ತರಬೇತಿ ಸಾಮಗ್ರಿಗಳನ್ನು ಒದಗಿಸಲಾಯಿತು.
USCCB ತಿಳಿಸಿರುವಂತೆ, ಈ ತರಬೇತಿಯ ಮೂಲಕ ಅವರು ಈಗ ಅತ್ಯಂತ ಕಡಿಮೆ ಸಂಖ್ಯೆಯ ಧರ್ಮಗುರುಗಳು ಸೇವೆ ಸಲ್ಲಿಸುತ್ತಿರುವ ಪ್ರದೇಶದಲ್ಲಿ, ಹಿಂಸಾಚಾರದಿಂದ ಸ್ಥಳಾಂತರಗೊಂಡ ಸಾವಿರಾರು ಜನರಿಗೆ ಇನ್ನಷ್ಟು ಪರಿಣಾಮಕಾರಿಯಾಗಿ ಧಾರ್ಮಿಕ ಸೇವೆ ಸಲ್ಲಿಸಲು ಸಜ್ಜಾಗಿದ್ದಾರೆ.
ಐಕ್ಯತೆ ಮತ್ತು ಧಾರ್ಮಿಕ ಸೇವೆಯ ಮೂಲ
ಆಫ್ರಿಕಾದ ಕೊಂಬು (Horn of Africa) ಪ್ರದೇಶದಲ್ಲಿ ಯುದ್ಧ ಮತ್ತು ಸಂಘರ್ಷಗಳು ಹೆಚ್ಚುತ್ತಿದ್ದಂತೆ, ದುರ್ಬಲ ಜನರನ್ನು ಗುರಿಯಾಗಿಸಿಕೊಂಡ ಮಾನವ ಕಳ್ಳಸಾಗಣೆ ಜಾಲಗಳು ಸಕ್ರಿಯವಾಗಿವೆ. ಈ ಹಿನ್ನೆಲೆಯಲ್ಲಿ, ಮತ್ತೊಂದು ಅನುದಾನದ ಮೂಲಕ ಆ ಪ್ರದೇಶದ ಧರ್ಮಸಭೆಯ ನಾಯಕರಿಗಾಗಿ ಕಾರ್ಯಾಗಾರಗಳನ್ನು ಆಯೋಜಿಸಿ, ಮಾನವ ಕಳ್ಳಸಾಗಣೆ ಕುರಿತು ಜಾಗೃತಿ ಮೂಡಿಸುವುದು, ತಡೆಗಟ್ಟುವ ಕಾರ್ಯತಂತ್ರಗಳನ್ನು ರೂಪಿಸುವುದು ಹಾಗೂ ಸಂತ್ರಸ್ತರಿಗೆ ನೆರವಾಗಲು ಧಾರ್ಮಿಕ ಸೇವಕರಿಗೆ ತರಬೇತಿ ನೀಡಲಾಯಿತು.
ಬುರ್ಕಿನಾ ಫಾಸೋದಲ್ಲಿ, ವ್ಯಾಪಕ ಹಿಂಸಾಚಾರ ಮತ್ತು ಬಡತನದ ನಡುವೆಯೂ ತಮ್ಮ ಧರ್ಮಪ್ರಾಂತ್ಯಗಳನ್ನು ಸ್ವಾವಲಂಬಿಯನ್ನಾಗಿಸುವ ಗುರಿಯನ್ನು ಅಲ್ಲಿನ ಧರ್ಮಾಧ್ಯಕ್ಷರು ಹೊಂದಿದ್ದಾರೆ. ಈ ಉದ್ದೇಶಕ್ಕಾಗಿ ನೀಡಲಾದ ಅನುದಾನದ ಮೂಲಕ, ದೇಶದ 15 ಧರ್ಮಪ್ರಾಂತ್ಯಗಳ ಸಿಬ್ಬಂದಿ ಹಾಗೂ ರಾಷ್ಟ್ರೀಯ ಧರ್ಮಾಧ್ಯಕ್ಷರ ಸಮ್ಮೇಳನದ ಸಿಬ್ಬಂದಿಗೆ ಧರ್ಮಸಭೆಯ ಸೇವೆಯನ್ನು ಸಮರ್ಥವಾಗಿ ನಿರ್ವಹಿಸಲು ಮತ್ತು ಬೆಂಬಲಿಸಲು ಸುಸ್ಥಿರ ಯೋಜನೆಗಳನ್ನು ರೂಪಿಸುವ ತರಬೇತಿ ನೀಡಲಾಯಿತು.
ಕೊನೆಯದಾಗಿ, ಮಧ್ಯ ಆಫ್ರಿಕಾ ಗಣರಾಜ್ಯದಲ್ಲಿ, ಕಳಪೆ ರಸ್ತೆಗಳ ಕಾರಣ ಅನೇಕ ಸಮುದಾಯಗಳು ಪ್ರತ್ಯೇಕಗೊಂಡಿರುವ ಹಿನ್ನೆಲೆಯಲ್ಲಿ, ಒಂದು ಅನುದಾನದ ಮೂಲಕ ಮರಿಯಾನಿಸ್ಟ್ ದೇವರ ಸಮರ್ಪಿತ ಸಹೋದರಿಯರು "ಶುಭಸಂದೇಶದ ಸ್ವಯಂಸೇವಕರಿಗೆ" ತರಬೇತಿ ನೀಡಿ, ಬೈಬಲ್‌ಗಳು ಮತ್ತು ಜಪಮಾಲೆಗಳನ್ನು ವಿತರಿಸಲು ಅವರಿಗೆ ಸೈಕಲ್‌ಗಳನ್ನು ಒದಗಿಸಿದರು. ಅಮೆರಿಕದ ಧರ್ಮಾಧ್ಯಕ್ಷರ ಪ್ರಕಾರ, ಈ ಸೈಕಲ್‌ಗಳು ಸಾವಿರಾರು ಕುಟುಂಬಗಳನ್ನು ತಲುಪಲು ಸಹಾಯ ಮಾಡಿರುವುದರಿಂದ ಅವರ ಧಾರ್ಮಿಕ ಸೇವೆ ಗಮನಾರ್ಹವಾಗಿ ವಿಸ್ತರಿಸಿದೆ.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).