ಹುಡುಕಿ

ಸಿರಿಯಾಗೆ ಪ್ರೇಷಿತ ಪ್ರತಿನಿಧಿಯ ಕ್ರೈಸ್ತ ಗ್ರಾಮಗಳಿಗೆ ಭೇಟಿ ಸಿರಿಯಾಗೆ ಪ್ರೇಷಿತ ಪ್ರತಿನಿಧಿಯ ಕ್ರೈಸ್ತ ಗ್ರಾಮಗಳಿಗೆ ಭೇಟಿ 

ಸಿರಿಯಾದ ಇಡ್ಲಿಬ್ ಪ್ರಾಂತ್ಯದ ಕ್ರೈಸ್ತ ಗ್ರಾಮಗಳಿಗೆ ಭೇಟಿ ನೀಡಿದ ಪ್ರೇಷಿತ ಪ್ರತಿನಿಧಿ

ಸಿರಿಯಾದ ಪ್ರೇಷಿತ ಪ್ರತಿನಿಧಿಯಾದ ವಂ. ಮಹಾಧರ್ಮಾಧ್ಯಕ್ಷ ಲೂಯಿಜಿ ರೊಬೆರ್ಟೊ ಕೋನಾ ಅವರು ದೇಶದ ಇಡ್ಲಿಬ್ ಪ್ರಾಂತ್ಯದ ಮೂರು ಐತಿಹಾಸಿಕ ಕ್ರೈಸ್ತ ಗ್ರಾಮಗಳಿಗೆ ಭೇಟಿ ನೀಡಿ, ವರ್ಷಗಳ ಯುದ್ಧ, ಸ್ಥಳಾಂತರ ಮತ್ತು ಭೂಕಂಪದ ಹಾನಿಯಿಂದ ತತ್ತರಿಸಿರುವ ಸಮುದಾಯಗಳಿಗೆ ಧೈರ್ಯ ತುಂಬಿದರು.

ಲೇಖಕರು: ಆಂಟೊನೆಲ್ಲಾ ಪಲೆರ್ಮೊ 

ಸಿರಿಯಾದ ಪ್ರೇಷಿತ ಪ್ರತಿನಿಧಿಯಾದ ವಂ. ಮಹಾಧರ್ಮಾಧ್ಯಕ್ಷ ಲೂಯಿಜಿ ರೊಬೆರ್ಟೊ ಕೋನಾ ಅವರು ಜೂನ್ 26ರಿಂದ 28ರವರೆಗೆ ವಾಯವ್ಯ ಸಿರಿಯಾದ ಯಾಕೂಬಿಯೆ, ಕ್ನಾಯೆ ಮತ್ತು ಘಸ್ಸಾನಿಯೆ ಎಂಬ ಕ್ರೈಸ್ತ ಗ್ರಾಮಗಳಿಗೆ ಭೇಟಿ ನೀಡಿದರು.ವರ್ಷಗಳ ಯುದ್ಧ, ಬಲವಂತದ ಸ್ಥಳಾಂತರ ಹಾಗೂ ಇತ್ತೀಚಿನ ವಿನಾಶಕಾರಿ ಭೂಕಂಪವನ್ನು ಎದುರಿಸಿರುವ ಈ ಸಮುದಾಯಗಳು ಪ್ರೇಷಿತ ಪ್ರತಿನಿಧಿಯನ್ನು ಆತ್ಮೀಯವಾಗಿ ಸ್ವಾಗತಿಸಿದವು. ತಮ್ಮ ಭೇಟಿಯ ವೇಳೆ ಮಹಾಧರ್ಮಾಧ್ಯಕ್ಷ ಕೋನಾ ಅವರು ಸ್ಥಳೀಯ ನಿವಾಸಿಗಳ ಭಯ ಮತ್ತು ನಿರೀಕ್ಷೆಗಳನ್ನು ಆಲಿಸಿದರು. ಪ್ರಸ್ತುತ ಪರಿಸ್ಥಿತಿಯ ಅನಿಶ್ಚಿತತೆಗಳ ನಡುವೆಯೂ ದೇವರಲ್ಲಿ ಭರವಸೆ ಇಡಬೇಕೆಂದು ವಿಶ್ವಾಸಿಗಳಿಗೆ ಪ್ರೋತ್ಸಾಹ ನೀಡಿದರು.

ಒಂದು ಕಾಲದಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಪ್ರಮುಖ ನೆಲೆಯಾಗಿದ್ದ ಇಡ್ಲಿಬ್ ಪ್ರಾಂತ್ಯದ ಕೃಷಿ ಪ್ರದೇಶದ ಬೆಟ್ಟಗಳಲ್ಲಿ ನೆಲೆಗೊಂಡಿರುವ ಈ ಗ್ರಾಮಗಳು, ಸಿರಿಯಾದ ಅತ್ಯಂತ ಪುರಾತನ ಕ್ರೈಸ್ತ ಸಮುದಾಯಗಳಲ್ಲಿ ಒಂದಕ್ಕೆ ನೆಲೆಯಾಗಿದೆ. ಸ್ಥಳೀಯ ಧರ್ಮಸಭೆಗಳಿಗೆ ನಿರಂತರವಾಗಿ ಸೇವೆ ಸಲ್ಲಿಸುತ್ತಾ, ವಿಶ್ವಾಸವನ್ನು ಕಾಪಾಡಿ, ಇತ್ತೀಚಿನ ವರ್ಷಗಳ ಸಂಕಷ್ಟಗಳ ನಡುವೆಯೂ ಆಶಾಭರವಸೆಯನ್ನು ಉಳಿಸಿಕೊಂಡಿರುವ ಫ್ರಾನ್ಸಿಸ್ಕನ್ ಧರ್ಮಗುರುಗಳ ಉಪಸ್ಥಿತಿಯಿಂದಲೇ ಈ ಭೇಟಿ ಸಾಧ್ಯವಾಯಿತು.

ಮಹಾಧರ್ಮಾಧ್ಯಕ್ಷ ಕೋನಾ ಅವರು ಧರ್ಮಗುರುಗಳ ಬೆಂಬಲದಿಂದ ನಡೆಯುತ್ತಿರುವ ಶಿಕ್ಷಣ ಮತ್ತು ಆರೋಗ್ಯ ಸೇವಾ ಯೋಜನೆಗಳನ್ನು ಒಳಗೊಂಡ ಸಮುದಾಯ ಕೇಂದ್ರಗಳಿಗೂ ಭೇಟಿ ನೀಡಿ, ಸಂಘರ್ಷ ಮತ್ತು ಭೂಕಂಪದಿಂದ ಆಳವಾಗಿ ಬಾಧಿತರಾದ ನಿವಾಸಿಗಳ ಸಾಕ್ಷ್ಯಗಳನ್ನು ಆಲಿಸಿದರು. ತಮ್ಮ ಅನುಭವಗಳನ್ನು ಹಂಚಿಕೊಂಡವರಲ್ಲಿ ಹಿಂಸೆ, ದೌರ್ಜನ್ಯ ಹಾಗೂ ಮನೆ ಮತ್ತು ಜೀವನೋಪಾಯವನ್ನು ಕಳೆದುಕೊಂಡವರೂ ಸೇರಿದ್ದರು. ಅವರ ಕಥೆಗಳು ಈ ಸಮುದಾಯಗಳ ನೋವನ್ನು ಮಾತ್ರವಲ್ಲದೆ, ತಮ್ಮ ಪೂರ್ವಜರ ನೆಲದಲ್ಲಿಯೇ ಉಳಿಯಬೇಕೆಂಬ ಅವರ ದೃಢ ಸಂಕಲ್ಪವನ್ನೂ ಪ್ರತಿಬಿಂಬಿಸಿದವು.

ಮಹಾಧರ್ಮಾಧ್ಯಕ್ಷ ಕೋನಾ ಅವರು ಯುವಜನರ ಆತಂಕಗಳನ್ನೂ ಆಲಿಸಿದರು. ಗ್ರಾಮಗಳ ಭವಿಷ್ಯವನ್ನು ಭದ್ರಪಡಿಸಲು ತರಬೇತಿ, ಉದ್ಯೋಗಾವಕಾಶಗಳು ಮತ್ತು ಅಗತ್ಯ ಬೆಂಬಲದ ಅವಶ್ಯಕತೆಯನ್ನು ಅವರು ವಿವರಿಸಿದರು. ಸ್ಥಳೀಯ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಹಾಗೂ ಪ್ರವಾಸೋದ್ಯಮವನ್ನು ಉತ್ತೇಜಿಸಲು ಸಾಂಪ್ರದಾಯಿಕ ಕಟ್ಟಡಗಳ ಪುನಃಸ್ಥಾಪನೆ ಕುರಿತು ಸಹ ಚರ್ಚಿಸಲಾಯಿತು.

ಸ್ಥಳೀಯ ನಿವಾಸಿಗಳನ್ನು ಭೇಟಿಯಾಗುವುದರ ಜೊತೆಗೆ, ಮಹಾಧರ್ಮಾಧ್ಯಕ್ಷ ಕೋನಾ ಅವರು ಉಪ ಗೃಹ ಸಚಿವ ಅಬ್ದೆಲ್ ಖಾದರ್ ತಹಾನ್, ರಾಜಕೀಯ ವ್ಯವಹಾರಗಳ ಸಾಮಾನ್ಯ ಕಾರ್ಯದರ್ಶಿಯ ಅಹ್ಮದ್ ಹಸ್ಸಿನಾತ್, ಸಂಸತ್ ಸದಸ್ಯ ಮುಸ್ತಫಾ ಮೂಸಾ, ಅಲ್-ಶುಘೂರ್ ಜಿಲ್ಲಾ ನಿರ್ದೇಶಕ ಅಬ್ದೆಲ್ ರಝಾಕ್ ಅಲ್ಲೂಶ್, ಹಾಗೂ ಡಾರ್ಕುಷ್‌ನ ಅಲ್-ರಹ್ಮಾ ಆಸ್ಪತ್ರೆಯ ನಿರ್ದೇಶಕ ಅಹ್ಮದ್ ಘಂದೂರ್ ಸೇರಿದಂತೆ ಹಲವು ಸಾರ್ವಜನಿಕ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

15 ಜುಲೈ 2026, 18:47