ಧರ್ಮಪ್ರಚಾರ ನಾಯಕತ್ವದ ಭವಿಷ್ಯ ಯೋಜನಾ ಕಾರ್ಯಾಗಾರಕ್ಕೆ ರೋಮ್ ಸಮೀಪದ ನೇಮಿಯಲ್ಲಿ ಒಟ್ಟುಗೂಡಿದ ದೈವವಾಕ್ಯ ಸಭೆಯ (SVD) ನೂತನ ಮೇಲಾಧಿಕಾರಿಗಳು. (@SVD Generalate Media Department) ಧರ್ಮಪ್ರಚಾರ ನಾಯಕತ್ವದ ಭವಿಷ್ಯ ಯೋಜನಾ ಕಾರ್ಯಾಗಾರಕ್ಕೆ ರೋಮ್ ಸಮೀಪದ ನೇಮಿಯಲ್ಲಿ ಒಟ್ಟುಗೂಡಿದ ದೈವವಾಕ್ಯ ಸಭೆಯ (SVD) ನೂತನ ಮೇಲಾಧಿಕಾರಿಗಳು. (@SVD Generalate Media Department)  (@SVD Generalate Media Department)

ದೈವವಾಕ್ಯ ಸಭೆಯ ಧರ್ಮಪ್ರಚಾರಕರ ಸೇವೆ: ಸಹಯಾತ್ರೆಯ ನಾಯಕತ್ವಕ್ಕೆ ಆದ್ಯತೆ

ರೋಮ್ ಸಮೀಪದ ನೇಮಿಯಲ್ಲಿ ನಡೆದ ಎರಡು ವಾರಗಳ ತರಬೇತಿ ಕಾರ್ಯಕ್ರಮವನ್ನು ಪೂರ್ಣಗೊಳಿಸಿದ ದೈವವಾಕ್ಯ ಸಭೆಯ (SVD) 35 ನೂತನ ಮೇಲಾಧಿಕಾರಿಗಳು, ದೇವರ ಧ್ಯೇಯವನ್ನು ತಮ್ಮ ಸೇವೆಯ ಕೇಂದ್ರಬಿಂದುವಾಗಿರಿಸಿಕೊಂಡು ಸಹಯಾತ್ರೆಯ(synodal) ಮನೋಭಾವದಲ್ಲಿ ನಾಯಕತ್ವವನ್ನು ನಿರ್ವಹಿಸುವ ನವ ಸಂಕಲ್ಪದೊಂದಿಗೆ ತಮ್ಮ ಸೇವಾಸ್ಥಳಗಳಿಗೆ ಮರಳಿದ್ದಾರೆ.

ಲೇಖಕರು: ಕಾಸ್ಮಿರ್ ನೇಮಾ, SVD – ನೇಮಿ, ಇಟಲಿ

ಜೂನ್ 21ರಿಂದ ಜುಲೈ 4ರವರೆಗೆ ರೋಮ್ ಸಮೀಪದ ನೇಮಿಯ ಸೆಂಟ್ರೊ ಅಡ್ ಜೆಂಟೆಸ್ ಕೇಂದ್ರದಲ್ಲಿ ನಡೆದ ಈ ಕಾರ್ಯಾಗಾರವು "ಮಿಸ್ಸಿಯೋ ದೇಯಿ (ದೇವರ ಧ್ಯೇಯ)ಯ ಸೇವೆಯಲ್ಲಿ ಸಹಯಾತ್ರೆಯ ನಾಯಕತ್ವ" ಎಂಬ ವಿಷಯದಡಿ ನಡೆಯಿತು. ಆಫ್ರಿಕಾ, ಏಷ್ಯಾ-ಪೆಸಿಫಿಕ್, ಯುರೋಪ್ ಮತ್ತು ಅಮೆರಿಕ ಖಂಡಗಳ ಪ್ರಾಂತೀಯ, ಪ್ರಾದೇಶಿಕ ಹಾಗೂ ಧರ್ಮಪ್ರಚಾರ ಕೇಂದ್ರಗಳ 35 ಮೇಲಾಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.  ಆಧ್ಯಾತ್ಮಿಕ ತರಬೇತಿ, ದೈವಶಾಸ್ತ್ರೀಯ ಚಿಂತನೆ ಹಾಗೂ ಪ್ರಾಯೋಗಿಕ ನಾಯಕತ್ವ ತರಬೇತಿಯನ್ನು ಒಳಗೊಂಡ ಈ ಕಾರ್ಯಕ್ರಮವು, ಧರ್ಮಸಭೆ ಮತ್ತು ಜಗತ್ತಿನ ಬದಲಾಗುತ್ತಿರುವ ವಾಸ್ತವತೆಗಳ ನಡುವೆ ಧರ್ಮಪ್ರಚಾರ ಸಮುದಾಯಗಳಿಗೆ ಮಾರ್ಗದರ್ಶನ ನೀಡುವ ತಮ್ಮ ಹೊಸ ಜವಾಬ್ದಾರಿಗಳಿಗೆ ಅವರನ್ನು ಸಜ್ಜುಗೊಳಿಸಿತು.

ದೇವರ ಧ್ಯೇಯದಲ್ಲಿ ಬೇರೂರಿರುವ ನಾಯಕತ್ವ

ಕಾರ್ಯಾಗಾರವನ್ನು ಉದ್ಘಾಟಿಸಿದ ದೈವವಾಕ್ಯ ಸಭೆಯ ಮಹಾಧ್ಯಕ್ಷ ವಂದನೀಯ ಗುರು ಅನ್ಸೆಲ್ಮೊ ರಿಕಾರ್ಡೊ ರಿಬೈರೊ, SVD, ಧರ್ಮಸಭೆಯಲ್ಲಿನ ನಾಯಕತ್ವವು ಅಧಿಕಾರ ಅಥವಾ ಆಡಳಿತದಿಂದ ಆರಂಭವಾಗುವುದಿಲ್ಲ; ಬದಲಾಗಿ ದೇವರ ಧ್ಯೇಯದಲ್ಲಿ ಪಾಲುಗೊಳ್ಳುವುದರಿಂದ ಆರಂಭವಾಗುತ್ತದೆ ಎಂದು ನೆನಪಿಸಿದರು. ಹೊಸ ಮೇಲಾಧಿಕಾರಿಗಳು ತಮ್ಮ ನಾಯಕತ್ವವನ್ನು ಸೇವೆಯ ಧರ್ಮಕಾರ್ಯವಾಗಿ ಅರ್ಥಮಾಡಿಕೊಂಡು, ತಮ್ಮ ಸಹೋದರ ಯಾಜಕರೊಂದಿಗೆ ಸಹಯಾತ್ರೆ ನಡೆಸಬೇಕು, ಐಕ್ಯತೆಯನ್ನು ಬೆಳೆಸಬೇಕು ಹಾಗೂ ಧರ್ಮಪ್ರಚಾರದ ಜೀವನದಲ್ಲಿ ಎಲ್ಲರ ಸಹಭಾಗಿತ್ವವನ್ನು ಉತ್ತೇಜಿಸಬೇಕು ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮದುದ್ದಕ್ಕೂ ಭಾಗವಹಿಸಿದವರು ಆಲಿಸುವಿಕೆ, ಸಂವಾದ ಹಾಗೂ ಸಾಮೂಹಿಕ ವಿವೇಚನೆಯ ಮೂಲಕ ಮುನ್ನಡೆಯುವ ಸಹಯಾತ್ರೆಯ ನಾಯಕತ್ವದ ಬಗ್ಗೆ ಆಳವಾದ ಚಿಂತನೆ ನಡೆಸಿದರು. ನಾಯಕತ್ವವನ್ನು ಕೇವಲ ಆಡಳಿತದ ಕಾರ್ಯವೆಂದು ನೋಡುವ ಬದಲು, ಧಾರ್ಮಿಕ ಸಭೆಗಳ ಮೇಲಾಧಿಕಾರಿಗಳು ಪ್ರತಿಯೊಬ್ಬ ಸದಸ್ಯರೂ ಧರ್ಮಸಭೆಯ ಸುವಾರ್ತಾ ಪ್ರಚಾರದ ಧ್ಯೇಯದಲ್ಲಿ ತಮ್ಮದೇ ಆದ ಕೊಡುಗೆ ನೀಡಬಹುದಾದ ಸಮುದಾಯಗಳನ್ನು ನಿರ್ಮಿಸುವವರಾಗಿರಬೇಕು ಎಂದು ವಿವಿಧ ಭಾಷಣಕಾರರು ಒತ್ತಿ ಹೇಳಿದರು.

ದೈವವಾಕ್ಯ ಸಭೆಯ ಸಂಸ್ಥಾಪಕರಾದ ಸಂತ ಅರ್ನಾಲ್ಡ್ ಜಾನ್ಸೆನ್, ಹಾಗೂ ಸಭೆಯ ಸಂತರು ಮತ್ತು ಧನ್ಯರ ಆಧ್ಯಾತ್ಮಿಕತೆಯಿಂದ ಪ್ರೇರಣೆ ಪಡೆದ ಈ ಅಧಿವೇಶನಗಳು, ವಿನಯ, ಪವಿತ್ರಾತ್ಮರಿಗೆ ಮುಕ್ತ ಮನಸ್ಸು ಹಾಗೂ ವಿವೇಚನೆಯನ್ನು ಧರ್ಮಪ್ರಚಾರ ನಾಯಕತ್ವದ ಮೂಲ ಗುಣಗಳೆಂದು ಬಿಂಬಿಸಿದವು. ಬೈಬಲ್ ಧ್ಯಾನಗಳು ಮೋಶೆ, ಎಸ್ತೇರ್ ಹಾಗೂ ಸಂತ ಪೌಲರ ಜೀವನವನ್ನು ಆಧರಿಸಿದ್ದರೆ, ಸೇವಕ ನಾಯಕತ್ವದ ಪರಿಪೂರ್ಣ ಮಾದರಿಯಾಗಿ ಪ್ರಭು ಯೇಸು ಕ್ರಿಸ್ತರನ್ನು ಪ್ರಸ್ತುತಪಡಿಸಲಾಯಿತು.

ಬಹುಸಂಸ್ಕೃತಿಯ ಧರ್ಮಪ್ರಚಾರ ಸಮುದಾಯಗಳ ನಿರ್ಮಾಣ

ಕಾರ್ಯಾಗಾರದ ಪ್ರಮುಖ ಭಾಗವು ಬಹುಸಂಸ್ಕೃತಿಯ ಜೀವನದ ಮೇಲೆ ಕೇಂದ್ರೀಕೃತವಾಗಿತ್ತು. 80ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ದೈವವಾಕ್ಯ ಸಭೆಯ ವಿಶೇಷ ಲಕ್ಷಣವೇ ಈ ಬಹುಸಂಸ್ಕೃತಿಯ ಜೀವನವಾಗಿದೆ. ಸಾಂಸ್ಕೃತಿಕ ವೈವಿಧ್ಯತೆಯನ್ನು ಧರ್ಮಪ್ರಚಾರದ ಸಾಕ್ಷಿಯನ್ನು ಬಲಪಡಿಸುವ ಹಾಗೂ ಶುಭಸಂದೇಶ ಸಾರ್ವತ್ರಿಕತೆಯನ್ನು ವ್ಯಕ್ತಪಡಿಸುವ ದೇವರ ವರವೆಂದು ಭಾಗವಹಿಸಿದವರು ಪರಿಗಣಿಸಿದರು.

ಸಹೋದರತ್ವ, ಸಂವಾದ ಹಾಗೂ ಪರಸ್ಪರ ಕಲಿಕೆಯ ಮನೋಭಾವವನ್ನು ಹೊಂದಿರುವ ಸಮುದಾಯಗಳನ್ನು ನಿರ್ಮಿಸುವಂತೆ ಅವರಿಗೆ ಪ್ರೋತ್ಸಾಹ ನೀಡಲಾಯಿತು. ಈ ತರಬೇತಿಯಲ್ಲಿ ಮಕ್ಕಳ ಹಾಗೂ ದುರ್ಬಲರ ರಕ್ಷಣೆ, ಆರ್ಥಿಕ ನಿರ್ವಹಣೆ, ಆಡಳಿತ, ಧರ್ಮಶಾಸ್ತ್ರ, ಪಾಲನಾ ಸಹಯಾತ್ರೆ ಹಾಗೂ ಸಮುದಾಯದ ವಿವೇಚನೆ ಸೇರಿದಂತೆ ಧಾರ್ಮಿಕ ನಾಯಕರಿಗೆ ವಹಿಸಲಾದ ಪ್ರಾಯೋಗಿಕ ಜವಾಬ್ದಾರಿಗಳ ಕುರಿತೂ ಚರ್ಚಿಸಲಾಯಿತು. ಪಾರದರ್ಶಕತೆ, ಉತ್ತರದಾಯಿತ್ವ ಹಾಗೂ ಜವಾಬ್ದಾರಿಯುತ ಆಡಳಿತವು ಜನರಿಗೂ ದೇವರ ಧ್ಯೇಯಕ್ಕೂ ಸಲ್ಲಿಸುವ ಸೇವೆಯ ಅವಿಭಾಜ್ಯ ಅಂಗಗಳಾಗಿವೆ ಎಂದು ಭಾಷಣಕಾರರು ತಿಳಿಸಿದರು.

ಇಂದಿನ ಧರ್ಮಪ್ರಚಾರ ಸವಾಲುಗಳಿಗೆ ಸ್ಪಂದನೆ

ಕಾರ್ಯಕ್ರಮದ ಎರಡನೇ ವಾರದಲ್ಲಿ, ಜನಸಂಖ್ಯೆಯ ಬದಲಾವಣೆಗಳು, ಹೊಸ ಧರ್ಮಪ್ರಚಾರ ಆದ್ಯತೆಗಳು ಹಾಗೂ ಸಭೆಯ ಹೆಚ್ಚುತ್ತಿರುವ ಅಂತರರಾಷ್ಟ್ರೀಯ ಸದಸ್ಯತ್ವಕ್ಕೆ ಅನುಗುಣವಾಗಿ ದೈವವಾಕ್ಯ ಸಭೆಯ ಭವಿಷ್ಯದ ಕುರಿತು ಚರ್ಚೆಗಳು ನಡೆದವು.

ವಂದನೀಯ ಗುರು ರಿಬೈರೊ ಅವರು ಹೊಸ ಧರ್ಮಪ್ರಚಾರ ಸಹಕಾರದ ಮಾರ್ಗಗಳನ್ನು ವಿವೇಚಿಸುವಂತೆ ಹಾಗೂ ವಿಶೇಷವಾಗಿ ಜಾಗತಿಕ ದಕ್ಷಿಣ ರಾಷ್ಟ್ರಗಳಲ್ಲಿ ಧರ್ಮಸಭೆ ಬೆಳೆಯುತ್ತಿರುವ ಈ ಸಂದರ್ಭದಲ್ಲಿ ಬಹುಸಂಸ್ಕೃತಿಯ ನಾಯಕತ್ವವನ್ನು ಬಲಪಡಿಸುವಂತೆ ಭಾಗವಹಿಸಿದವರನ್ನು ಉತ್ತೇಜಿಸಿದರು. ಬೈಬಲ್ ಸೇವೆ, ಸಂವಹನ, ನ್ಯಾಯ–ಶಾಂತಿ–ಸೃಷ್ಟಿಯ ಸಮಗ್ರತೆ (JPIC) ಹಾಗೂ ದುರ್ಬಲ ಪರಿಸ್ಥಿತಿಯಲ್ಲಿರುವ ಜನರ ಸೇವೆ ಸೇರಿದಂತೆ ಸಭೆಯ ಪ್ರಮುಖ ಧರ್ಮಪ್ರಚಾರ ಕ್ಷೇತ್ರಗಳ ಕುರಿತೂ ವಿಶೇಷ ಅಧಿವೇಶನಗಳು ನಡೆದವು

ಡಿಜಿಟಲ್ ಯುಗದಲ್ಲಿನ ಶುಭಸಂದೇಶ ಪ್ರಚಾರದ ಕುರಿತು ಮಾತನಾಡಿದ ದೈವವಾಕ್ಯ ಸಭೆಯ ಸಾಮಾನ್ಯ ಆಡಳಿತದ ಸಂವಹನ ಸಂಯೋಜಕರಾದ ವಂದನೀಯ ಗುರು ಕಾಸ್ಮಿರ್ ನೇಮಾ, SVD, ಸಂವಹನವು ಧರ್ಮಸಭೆಯ ಧ್ಯೇಯದ ಅವಿಭಾಜ್ಯ ಆಯಾಮವಾಗಿದೆ ಎಂದು ಹೇಳಿದರು.

'ಭವ್ಯ ಮಾನವೀಯತೆ’ (ಮ್ಯಾಗ್ನಿಫಿಕಾ ಹ್ಯೂಮಾನಿಟಾಸ್) ಎಂಬ ವಿಶ್ವಪತ್ರಿಕೆಯಲ್ಲಿ ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರು ಕೃತಕ ಬುದ್ಧಿಮತ್ತೆಯ ಕುರಿತು ನೀಡಿರುವ ಬೋಧನೆಯನ್ನು ಉಲ್ಲೇಖಿಸಿದ ಅವರು, ಸತ್ಯ, ಮಾನವ ಘನತೆ ಹಾಗೂ ನೈಜ ಮಾನವ ಸಂಬಂಧಗಳನ್ನು ಉತ್ತೇಜಿಸುತ್ತಾ ಡಿಜಿಟಲ್ ಮಾಧ್ಯಮಗಳನ್ನು ಶುಭಸಂದೇಶ ಸಾರುವ ಪರಿಣಾಮಕಾರಿ ಸಾಧನಗಳಾಗಿ ಬಳಸುವಂತೆ ಭಾಗವಹಿಸಿದವರನ್ನು ಪ್ರೋತ್ಸಾಹಿಸಿದರು.

ಸಹಯಾತ್ರೆಯ ಮನೋಭಾವದೊಂದಿಗೆ ಧರ್ಮಪ್ರಚಾರಕ್ಕೆ ಕಳುಹಿಸಲ್ಪಟ್ಟವರು

ಕಾರ್ಯಾಗಾರ ಮುಕ್ತಾಯಗೊಂಡ ನಂತರ, ಹೊಸ ಮೇಲಾಧಿಕಾರಿಗಳು ವಿವೇಚನೆ, ಸಹಭಾಗಿತ್ವ ಹಾಗೂ ಧರ್ಮಪ್ರಚಾರ ಸೇವೆಯ ಮನೋಭಾವದೊಂದಿಗೆ ತಮ್ಮ ಪ್ರಾಂತಗಳು, ಪ್ರದೇಶಗಳು ಹಾಗೂ ಧರ್ಮಪ್ರಚಾರ ಕೇಂದ್ರಗಳಿಗೆ ಮರಳಿದರು. ಧರ್ಮಸಭೆಯಲ್ಲಿನ ನಾಯಕತ್ವವು ಅಧಿಕಾರ ಚಲಾಯಿಸುವುದರಲ್ಲಿ ಅಲ್ಲ; ಬದಲಾಗಿ ಐಕ್ಯತೆ, ವಿನಯ ಮತ್ತು ಭರವಸೆಯೊಂದಿಗೆ ದೇವರ ಧ್ಯೇಯಕ್ಕೆ ನಿಷ್ಠೆಯಿಂದ ಸೇವೆ ಸಲ್ಲಿಸುವುದರಲ್ಲಿ ಬೇರೂರಿದೆ ಎಂಬ ಸತ್ಯವನ್ನು ಈ ತರಬೇತಿ ಮತ್ತೊಮ್ಮೆ ದೃಢಪಡಿಸಿತು.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

03 ಜುಲೈ 2026, 15:50