ಹುಡುಕಿ

ಅಲ್ಮೇರಿಯಾದಲ್ಲಿ ಕಾಡ್ಗಿಚ್ಚಿನ ನಂತರದ ದೃಶ್ಯಗಳು (ANA BELTRAN) ಅಲ್ಮೇರಿಯಾದಲ್ಲಿ ಕಾಡ್ಗಿಚ್ಚಿನ ನಂತರದ ದೃಶ್ಯಗಳು (ANA BELTRAN)  (ANA BELTRAN)

ಅಲ್ಮೇರಿಯಾ ಧರ್ಮಾಧ್ಯಕ್ಷರು: ದುಃಖದಲ್ಲಿರುವವರಿಗಾಗಿ ನಾವು ದೇವರ ಕೈಗಳಾಗೋಣ

ಜುಲೈ 9ರಂದು ಬೆದಾರ್ ಮತ್ತು ಲೋಸ್ ಗಲ್ಲಾರ್ಡೋಸ್ ಪ್ರದೇಶಗಳಲ್ಲಿ ಸಂಭವಿಸಿದ ಕಾಡ್ಗಿಚ್ಚಿನ ದುರಂತದ ಕುರಿತು ಅಲ್ಮೇರಿಯಾದ ಧರ್ಮಾಧ್ಯಕ್ಷರಾದ ಆಂಟೋನಿಯೊ ಗೊಮೆಸ್ ಕ್ಯಾಂಟೆರೊ ಅವರು ಚಿಂತನೆ ಹಂಚಿಕೊಂಡಿದ್ದು, ಸ್ಥಳೀಯ ಜನರು ತೋರಿದ ಐಕ್ಯತೆ ಮತ್ತು ಸ್ಥಳೀಯ ಧರ್ಮಸಭೆಯ ಸ್ಪಂದನೆಯನ್ನು ಶ್ಲಾಘಿಸಿದ್ದಾರೆ. ನೋವು ಮತ್ತು ನಷ್ಟದ ನಡುವೆಯೂ, ಅವರು ಭರವಸೆ, ಸೃಷ್ಟಿಯ ಸಂರಕ್ಷಣೆ ಹಾಗೂ ಸಮುದಾಯ ಮತ್ತು ಕರುಣೆಯಲ್ಲಿ ಬೇರುಬಿಟ್ಟ ನಂಬಿಕೆಯ ಜೀವನಕ್ಕೆ ಕರೆ ನೀಡಿದ್ದಾರೆ.

ಲೇಖಕರು: ಸೆಬಾಸ್ಟಿಯನ್ ಸಾನ್ಸೋನ್ ಫೆರಾರಿ 

ಜುಲೈ 9ರಂದು ಬೆದಾರ್ ಮತ್ತು ಲೋಸ್ ಗಲ್ಲಾರ್ಡೋಸ್ ಪಟ್ಟಣಗಳಲ್ಲಿ ಕಾಣಿಸಿಕೊಂಡ ಕಾಡ್ಗಿಚ್ಚಿನಿಂದ ತೊಂದರೆಗೊಳಗಾದವರ ಜೊತೆ ನಿಲ್ಲಲು ಹಾಗೂ ಅವರ ತುರ್ತು ಅಗತ್ಯಗಳನ್ನು ಪೂರೈಸಲು ಅಲ್ಮೇರಿಯಾ ಧರ್ಮಕ್ಷೇತ್ರದ ಧರ್ಮಸಭೆ ಮೊದಲ ಗಂಟೆಗಳಿಂದಲೇ ಕಾರ್ಯಪ್ರವೃತ್ತವಾಯಿತು. ಕನಿಷ್ಠ 13 ಮಂದಿ ಮೃತಪಟ್ಟಿದ್ದು, 8 ಮಂದಿ ಗಾಯಗೊಂಡಿದ್ದಾರೆ ಎಂದು ದೃಢಪಟ್ಟಿದೆ. ಅಂಡಲುಸಿಯಾದ ಲೋಸ್ ಗಲ್ಲಾರ್ಡೋಸ್ನಲ್ಲಿ ಗುರುವಾರ ಆರಂಭವಾದ ಬೆಂಕಿ 6,600 ಹೆಕ್ಟೇರ್ ಪ್ರದೇಶಕ್ಕೆ ವ್ಯಾಪಿಸಿದ್ದು, 23 ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ. ಸುಮಾರು 1,500 ನಿವಾಸಿಗಳು ಸ್ಥಳಾಂತರಗೊಂಡಿದ್ದಾರೆ.

ವ್ಯಾಟಿಕನ್ ವಾರ್ತಾ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅಲ್ಮೇರಿಯಾದ ಧರ್ಮಾಧ್ಯಕ್ಷರಾದ ಆಂಟೋನಿಯೊ ಗೊಮೆಸ್ ಕ್ಯಾಂಟೆರೊ ಅವರು, ತೀವ್ರ ಉಷ್ಣತೆ ಮತ್ತು ಬಲವಾದ ಗಾಳಿಯ ಕಾರಣ ಬೆಂಕಿ ಅಸಾಧಾರಣ ವೇಗದಲ್ಲಿ ಹರಡಿದ್ದು, ಕಂದರಗಳು ಹಾಗೂ ತಲುಪಲು ಕಷ್ಟವಾದ ಪ್ರದೇಶಗಳಲ್ಲಿದ್ದ ಪ್ರತ್ಯೇಕ ಮನೆಗಳನ್ನು ಆವರಿಸಿತು ಎಂದು ನೆನಪಿಸಿಕೊಂಡರು.

"ಪ್ರತಿ ನಿಮಿಷವೂ ಗಾಳಿಯು ಪೊದೆಗಿಡಗಳ ಮಧ್ಯೆ ಬೆಂಕಿಯನ್ನು ಇನ್ನೂರು ಮೀಟರ್‌ಗಳಷ್ಟು ಮುಂದಕ್ಕೆ ತಳ್ಳುತ್ತಿತ್ತು," ಎಂದು ಅವರು ಹೇಳಿದರು.

ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಅಧಿಕಾರಿಗಳು ಸ್ಥಳಾಂತರ ಕ್ರಮಗಳನ್ನು ಕೈಗೊಂಡರು. ಇದೇ ವೇಳೆ, ಧರ್ಮಕೇಂದ್ರಗಳು ಮತ್ತು ಕರಿತಸ್ ತಕ್ಷಣವೇ ಸ್ಥಳಾಂತರಗೊಂಡವರಿಗೆ ನೆರವು ಒದಗಿಸಲು ಸಂಘಟಿತವಾಗಿ ಕಾರ್ಯನಿರ್ವಹಿಸಿದವು. ಅನೇಕರು ತಾತ್ಕಾಲಿಕ ಆಶ್ರಯಗಳಲ್ಲಿ ವಾಸ್ತವ್ಯ ಹೂಡಿದರೆ, ಇನ್ನು ಕೆಲವರನ್ನು ಖಾಸಗಿ ಮನೆಗಳಲ್ಲಿ ಆಶ್ರಯ ನೀಡಲಾಯಿತು. ಅಗ್ನಿಶಾಮಕ ಸಿಬ್ಬಂದಿಗೆ ಆಹಾರ ಮತ್ತು ನೀರು ಒದಗಿಸಿದ ಹಾಗೂ ಸ್ಥಳಾಂತರಗೊಂಡವರಿಗೆ ನೆರವಾದ ಸ್ವಯಂಸೇವಕರ ಐಕ್ಯತೆಯನ್ನು ಧರ್ಮಾಧ್ಯಕ್ಷರು ಶ್ಲಾಘಿಸಿದರು.

"ಈ ಮಹಾ ದುರಂತದ ಸಂದರ್ಭದಲ್ಲಿ ಎಲ್ಲರೂ ಒಂದಾಗಿ ಐಕ್ಯತೆಯಿಂದ ಸ್ಪಂದಿಸಿದರು," ಎಂದು ಅವರು ಹೇಳಿದರು. ತುರ್ತು ಪರಿಸ್ಥಿತಿಯಲ್ಲಿ ಜನರಿಗೆ ಎಚ್ಚರಿಕೆ ನೀಡುವ ಸಂಪ್ರದಾಯದಂತೆ, ಸ್ಥಳೀಯ ಮಹಿಳೆಯೊಬ್ಬರು ಗ್ರಾಮಸ್ಥರು ಸುರಕ್ಷಿತವಾಗಿ ಸ್ಥಳಾಂತರಗೊಳ್ಳುವಂತೆ ಧರ್ಮಕೇಂದ್ರದ ಗಂಟೆ ಬಾರಿಸಿದ್ದನ್ನು ಧರ್ಮಾಧ್ಯಕ್ಷರು ಸ್ಮರಿಸಿದರು.

ಧರ್ಮಕ್ಷೇತ್ರದ ಪಾಲನಾ ಸ್ಪಂದನೆ

ಧರ್ಮಕ್ಷೇತ್ರದ ಪಾಲನಾ ಕಾರ್ಯಗಳ ಕುರಿತು ಮಾತನಾಡಿದ ಧರ್ಮಾಧ್ಯಕ್ಷ ಗೊಮೆಸ್ ಕ್ಯಾಂಟೆರೊ ಅವರು, ಆರಂಭದಿಂದಲೇ ಯಾಜಕರು ಜನರೊಂದಿಗಿದ್ದು, ವಿಶೇಷವಾಗಿ ವೃದ್ಧರು ಹಾಗೂ ಸ್ಥಳಾಂತರಗೊಂಡ ಕುಟುಂಬಗಳಿಗೆ ಸಾಂತ್ವನ ಮತ್ತು ಸಹಕಾರ ನೀಡಿದರು ಎಂದು ಹೇಳಿದರು. ಕಾರ್ಮೆಲ್ ಮಾತೆ ಮರಿಯಮ್ಮನ ಹಬ್ಬದ ಆಚರಣೆಗಳ ಸಂದರ್ಭದಲ್ಲಿ ತಾವು ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವುದಾಗಿ ಅವರು ಘೋಷಿಸಿದರು. ದುರಂತದ ಮಾನವೀಯ ನಷ್ಟದ ಕುರಿತು ಮಾತನಾಡಿದ ಅವರು, ಮೃತಪಟ್ಟವರು, ಮೃತದೇಹಗಳ ಗುರುತಿಸುವಿಕೆ ಹಾಗೂ ಕಂದರದಲ್ಲಿ ಎರಡು ದಿನಗಳ ಕಾಲ ಸಿಲುಕಿದ್ದ ಇಬ್ಬರು ಪಾದಯಾತ್ರಿಕರನ್ನು ಜೀವಂತವಾಗಿ ರಕ್ಷಿಸಿದ ಘಟನೆಯನ್ನು ಉಲ್ಲೇಖಿಸಿದರು.

ಇಂತಹ ದುಃಖದ ಸಂದರ್ಭದಲ್ಲಿ ದೇವರು ಎಲ್ಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸುತ್ತಾ, ತಮ್ಮ ಒಬ್ಬ ಯಾಜಕರ ಮಾತುಗಳನ್ನು ಅವರು ನೆನಪಿಸಿದರು: "ದೇವರು ನಿಮ್ಮೊಂದಿಗಿದ್ದಾರೆ; ಶಿಲುಬೆಯ ಮೇಲೆ ಈ ನೋವನ್ನು ಅನುಭವಿಸುತ್ತಿದ್ದಾರೆ." ಇಂತಹ ಸಂದರ್ಭಗಳಲ್ಲಿ ದೋಷಾರೋಪಣೆ ಮಾಡುವುದಕ್ಕಿಂತ, ಸಂಕಷ್ಟದಲ್ಲಿರುವವರ ಆರೈಕೆಗೆ ಆದ್ಯತೆ ನೀಡುವಂತೆ ಅವರು ಕ್ರೈಸ್ತರನ್ನು ಕರೆ ನೀಡಿದರು.

"ಈಗ ದೋಷಾರೋಪಣೆ ಮಾಡುವ ಸಮಯವಲ್ಲ; ಈಗ ನೋವಿನಲ್ಲಿರುವವರ ಹೊಣೆಗಾರಿಕೆಯನ್ನು ನಾವು ಎಲ್ಲರೂ ಹೊರುವ ಸಮಯ," ಎಂದು ಅವರು ಹೇಳಿ, ವಿಶ್ವಾಸಿಗಳನ್ನು “ಒಳ್ಳೆಯ ಸಮಾರಿಯನ ಧರ್ಮಸಭೆ"ಯಾಗಲು ಆಹ್ವಾನಿಸಿದರು. ಒಳ್ಳೆಯ ಸಮಾರಿಯನ ದೃಷ್ಟಾಂತವನ್ನು ಉಲ್ಲೇಖಿಸಿದ ಅವರು, ಅಗತ್ಯದಲ್ಲಿರುವವರನ್ನು "ಕಾಣಬೇಕು, ಸ್ವಾಗತಿಸಬೇಕು, ಗುಣಪಡಿಸಬೇಕು, ಪುನಃಸ್ಥಾಪಿಸಬೇಕು ಮತ್ತು ರಕ್ಷಿಸಬೇಕು" ಎಂಬುದು ಕ್ರೈಸ್ತರ ಕರ್ತವ್ಯ ಎಂದು ಹೇಳಿದರು.

ಐಕ್ಯತೆ ಭರವಸೆಯ ಸಂಕೇತ

ನೆರೆಹೊರೆಯವರು, ಧರ್ಮಕೇಂದ್ರಗಳು ಮತ್ತು ಸ್ವಯಂಸೇವಕರು ತೋರಿದ ಐಕ್ಯತೆ ಭರವಸೆಯ ಸಂಕೇತವಾಗಿದೆ ಎಂದು ಧರ್ಮಾಧ್ಯಕ್ಷರು ಹೇಳಿದರು. "ಮತ್ತೆ ಆರಂಭಿಸುವುದು ಎಂದರೆ ಭವಿಷ್ಯದತ್ತ ನೋಡುವುದು; ಮತ್ತೆ ಆರಂಭಿಸುವುದು ಎಂದರೆ ಭರವಸೆಯನ್ನು ಹೊಂದುವುದು."

ಕ್ರೈಸ್ತರು ದೇವರ ಕರುಣೆಯ ಸಾಧನಗಳಾಗಲು ಕರೆಯಲ್ಪಟ್ಟಿದ್ದಾರೆ ಎಂದು ಹೇಳಿ, "ಅನೇಕ ಬಾರಿ ನಾವೇ ದೇವರ ಕೈಗಳು, ದೇವರ ಪಾದಗಳು, ದೇವರ ಕಣ್ಣುಗಳು, ದೇವರ ಧ್ವನಿ ಮತ್ತು ದೇವರ ಕಿವಿಗಳಾಗುತ್ತೇವೆ. ಏಕೆಂದರೆ ನಮ್ಮ ನಂಬಿಕೆ ನಮ್ಮ ಜೀವನದ ಮೂಲಕ ದೇವರನ್ನು ಇತರರ ಬಳಿಗೆ ಕೊಂಡೊಯ್ಯಲು ನಮ್ಮನ್ನು ಕರೆಯುತ್ತದೆ," ಎಂದರು. ಕೊನೆಗೆ, ಈ ದುರಂತವು ಸೃಷ್ಟಿಯ ಸಂರಕ್ಷಣೆಯ ಬಗ್ಗೆ ಹೊಸ ಬದ್ಧತೆಯನ್ನು ಮೂಡಿಸಬೇಕು ಎಂದು ಧರ್ಮಾಧ್ಯಕ್ಷ ಗೊಮೆಸ್ ಕ್ಯಾಂಟೆರೊ ಹೇಳಿದರು. ಜಗದ್ಗುರು ಫ್ರಾನ್ಸಿಸ್ ಅವರ ಲೌದಾತೊ ಸಿʼ ವಿಶ್ವಪತ್ರಿಕೆಯನ್ನು ಉಲ್ಲೇಖಿಸಿ, ಕಾಡುಗಳನ್ನು ಸಂರಕ್ಷಿಸುವುದು ಮತ್ತು ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕುವ ಮಹತ್ವವನ್ನು ಅವರು ಒತ್ತಿ ಹೇಳಿದರು.

"ನಾವು ಪ್ರಕೃತಿಯನ್ನು ಕಾಪಾಡಿದರೆ, ಪ್ರಕೃತಿಯೂ ನಮ್ಮನ್ನು ಕಾಪಾಡುತ್ತದೆ," ಎಂದು ಕರೆ ನೀಡಿದರು.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

14 ಜುಲೈ 2026, 19:41