ಹುಡುಕಿ

ಸ್ಪೇನ್‌ನ ಸೆಯುಟಾ ಪ್ರದೇಶವನ್ನು ಪ್ರವೇಶಿಸಲು ಫ್ನಿಡೆಕ್‌ನಲ್ಲಿ ಸೇರುವ ವಲಸಿಗರು ಸ್ಪೇನ್‌ನ ಸೆಯುಟಾ ಪ್ರದೇಶವನ್ನು ಪ್ರವೇಶಿಸಲು ಫ್ನಿಡೆಕ್‌ನಲ್ಲಿ ಸೇರುವ ವಲಸಿಗರು 

ಸೆಯುಟಾದಲ್ಲಿ ವಲಸೆ ತುರ್ತು ಪರಿಸ್ಥಿತಿ ನಡುವೆ ಬಲಗೊಂಡಿರುವ ಧರ್ಮಕ್ಷೇತ್ರದ ನೆರವು

ಸ್ಪೇನ್‌ನ ಸ್ವಾಯತ್ತ ನಗರವಾದ ಸೆಯುಟಾದಲ್ಲಿ ತೀವ್ರಗೊಂಡಿರುವ ವಲಸೆ ತುರ್ತು ಪರಿಸ್ಥಿತಿಯ ಕುರಿತು ಕಾಡಿಸ್ ಮತ್ತು ಸೆಯುಟಾ ಮಹಾಧರ್ಮಪ್ರಾಂತ್ಯ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಸಾರ್ವಜನಿಕ ಅಧಿಕಾರಿಗಳೊಂದಿಗೆ ಸಹಕರಿಸುವುದಾಗಿ ತಿಳಿಸಿದೆ. ಜೊತೆಗೆ, ಈ ವಾರಾಂತ್ಯದಲ್ಲಿ ನಗರದ ಎಲ್ಲಾ ಧರ್ಮಕೇಂದ್ರಗಳಲ್ಲಿ ಸಂಗ್ರಹವಾಗುವ ಕಾಣಿಕೆಗಳನ್ನು ಸಂಪೂರ್ಣವಾಗಿ ವಲಸಿಗರ ಅತ್ಯಂತ ತುರ್ತು ಅಗತ್ಯಗಳನ್ನು ಪೂರೈಸಲು ಮೀಸಲಿಡುವುದಾಗಿ ಘೋಷಿಸಿದೆ.

ಲೇಖಕರು:ಸೆಬಾಸ್ಟಿಯನ್ ಸಾನ್ಸೋನ್ ಫೆರಾರಿ ಮತ್ತು ಲಿಂಡಾ ಬೋರ್ಡೋನಿ

ಮೊರಾಕ್ಕೊದಿಂದ ಕಳೆದ 24 ಗಂಟೆಗಳಲ್ಲಿ ಸುಮಾರು 60,000 ವಲಸಿಗರು ಸ್ಪೇನ್‌ನ ಸ್ವಾಯತ್ತ ನಗರವಾದ ಸೆಯುಟಾಗೆ ಪ್ರವೇಶಿಸಿದ್ದಾರೆ ಎಂದು ಸೆಯುಟಾದ ಅಧ್ಯಕ್ಷ ಜುವಾನ್ ಜೆಸೂಸ್ ವಿವಾಸ್ ಶುಕ್ರವಾರ ತಿಳಿಸಿದ್ದಾರೆ. ಈ ಸಂಖ್ಯೆ ನಗರದ ಒಟ್ಟು ಜನಸಂಖ್ಯೆಯ ಸುಮಾರು 70 ಪ್ರತಿಶತಕ್ಕೆ ಸಮಾನವಾಗಿದೆ. ಸಮುದ್ರ ದಾಟುವ ಪ್ರಯತ್ನದಲ್ಲಿ ಕನಿಷ್ಠ 34 ವಲಸಿಗರು ಮೃತಪಟ್ಟಿದ್ದು, ಈ ಬಿಕ್ಕಟ್ಟಿನ ಮಾನವೀಯ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದನ್ನು ಇದು ತೋರಿಸುತ್ತದೆ.

ಆಫ್ರಿಕಾದ ಉತ್ತರ ಕರಾವಳಿಯಲ್ಲಿ ನೆಲೆಗೊಂಡಿದ್ದು, ಮೊರಾಕ್ಕೊ ಗಡಿಯನ್ನು ಹೊಂದಿರುವ ಸೆಯುಟಾ, ಹಲವು ದಶಕಗಳಿಂದ ಯುರೋಪ್ ಪ್ರವೇಶಿಸಲು ಪ್ರಯತ್ನಿಸುವ ವಲಸಿಗರ ಪ್ರಮುಖ ಪ್ರವೇಶ ದ್ವಾರಗಳಲ್ಲಿ ಒಂದಾಗಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ವಲಸಿಗರ ಆಗಮನದಿಂದ ಸಾವಿರಾರು ಜನರು ಗಡಿ ಬೇಲಿಯನ್ನು ಏರುವುದು ಅಥವಾ ಎಲ್ ತರಾಜಲ್ ಅಲೆತಡೆ ಪ್ರದೇಶದಿಂದ ಈಜುತ್ತಾ ಸೆಯುಟಾ ಕರಾವಳಿಯನ್ನು ತಲುಪಲು ಪ್ರಯತ್ನಿಸುವ ದೃಶ್ಯಗಳು ಕಂಡುಬಂದಿವೆ. ವಲಸಿಗರ ಸ್ವಾಗತ ಕೇಂದ್ರಗಳು ಈಗಾಗಲೇ ತಮ್ಮ ಸಾಮರ್ಥ್ಯವನ್ನು ಮೀರಿ ಕಾರ್ಯನಿರ್ವಹಿಸುತ್ತಿವೆ.

ಸಶಸ್ತ್ರ ಪಡೆಗಳ ನಿಯೋಜನೆ

ತುರ್ತು ಪರಿಸ್ಥಿತಿಯ ಗಂಭೀರತೆಯನ್ನು ಗಮನಿಸಿ, ಸ್ಪೇನ್ ಸರ್ಕಾರ ಭದ್ರತೆಯನ್ನು ಬಲಪಡಿಸಲು ಮತ್ತು ನಾಗರಿಕ ಗಾರ್ಡ್‌ಗೆ ನೆರವು ನೀಡಲು ಸಶಸ್ತ್ರ ಪಡೆಗಳ ಸದಸ್ಯರನ್ನು ನಿಯೋಜಿಸಲು ಆದೇಶಿಸಿದೆ. ಅದೇ ವೇಳೆ, ಸೆಯುಟಾದ ಸ್ವಾಯತ್ತ ನಗರದ ಅಧ್ಯಕ್ಷರು ತುರ್ತು ನೆರವಿಗಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ಪರಿಸ್ಥಿತಿಯನ್ನು ನಿಭಾಯಿಸುವ ನಗರದ ಸಾಮರ್ಥ್ಯ ಈಗಾಗಲೇ ತನ್ನ ಮಿತಿಯನ್ನು ತಲುಪಿದೆ ಎಂದು ಎಚ್ಚರಿಸಿದ್ದಾರೆ. ಆಗಮಿಸಿದವರಲ್ಲಿ ಅನಾಥ ಮತ್ತು ಪಾಲಕರಿಲ್ಲದ ಅನೇಕ ಅಪ್ರಾಪ್ತ ವಯಸ್ಕರೂ ಇದ್ದು, ಅವರ ರಕ್ಷಣೆ ಮತ್ತು ಆಶ್ರಯ ಕಲ್ಪಿಸುವ ಕಾರ್ಯವನ್ನು ಇನ್ನಷ್ಟು ಸಂಕೀರ್ಣಗೊಳಿಸಿದೆ.

ಇದೇ ವೇಳೆ, ಇನ್ನಷ್ಟು ಜನರು ಸೆಯುಟಾಗೆ ನುಗ್ಗದಂತೆ ತಡೆಯಲು ಮೊರಾಕ್ಕೊ ಭದ್ರತಾ ಪಡೆಗಳು ಲಾಠಿ ಮತ್ತು ಅಶ್ರುವಾಯು ಬಳಸಿ ಗೇಟ್‌ಗಳ ಬಳಿ ಜನರನ್ನು ಚದುರಿಸಿದವು ಎಂದು ವರದಿಯಾಗಿದೆ. ಮೆಡಿಟರೇನಿಯನ್ ಸಮುದ್ರದ ತೀರದಲ್ಲಿರುವ ಈ ಸಣ್ಣ ಸ್ಪ್ಯಾನಿಷ್ ಪ್ರದೇಶದತ್ತ ನುಗ್ಗಲು ಯತ್ನಿಸಿದ ಗುಂಪುಗಳನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ.

ಕಾಡಿಸ್ ಮತ್ತು ಸೆಯುಟಾ ಮಹಾಧರ್ಮಕ್ಷೇತ್ರ

ಈ ಹಿನ್ನೆಲೆದಲ್ಲಿ, ಕಾಡಿಸ್ ಮತ್ತು ಸೆಯುಟಾ ಮಹಾಧರ್ಮಕ್ಷೇತ್ರವು ವಲಸಿಗರ ಅಭೂತಪೂರ್ವ ಸಂಖ್ಯೆಯ ಆಗಮನದ ಬಗ್ಗೆ ತನ್ನ "ಆಳವಾದ ಕಳವಳ"ವನ್ನು ವ್ಯಕ್ತಪಡಿಸಿದೆ. 2026ರ ಜುಲೈ 30ರಂದು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ, ಸ್ಥಳೀಯ ಧರ್ಮಸಭೆಯು ಈ ಬಿಕ್ಕಟ್ಟಿನಿಂದ ತೊಂದರೆಗೊಳಗಾದ ಎಲ್ಲರೊಂದಿಗೆ ತನ್ನ ಐಕ್ಯತೆಯನ್ನು ವ್ಯಕ್ತಪಡಿಸಿದ್ದು, ಮಾನವೀಯ ತುರ್ತು ಪರಿಸ್ಥಿತಿಗೆ ಸ್ಪಂದಿಸುವಲ್ಲಿ ಸಾರ್ವಜನಿಕ ಅಧಿಕಾರಿಗಳೊಂದಿಗೆ ಕೈಜೋಡಿಸಲು ಸಿದ್ಧವಿರುವುದಾಗಿ ಪುನರುಚ್ಚರಿಸಿದೆ.

ಮೊದಲ ಸ್ಪಷ್ಟ ಕ್ರಮವಾಗಿ, ಈ ವಾರಾಂತ್ಯದಲ್ಲಿ ಸೆಯುಟಾದ ಎಲ್ಲ ಧರ್ಮಕೇಂದ್ರಗಳಲ್ಲಿ ಸಂಗ್ರಹವಾಗುವ ಕಾಣಿಕೆಗಳನ್ನು ಸಂಪೂರ್ಣವಾಗಿ ಧರ್ಮಪ್ರಾಂತ್ಯದ ವಲಸಿಗರ ಕಚೇರಿಗೆ ಮೀಸಲಿಡಲಾಗುವುದು ಎಂದು ಮಹಾಧರ್ಮಕ್ಷೇತ್ರ ಘೋಷಿಸಿದೆ. ಈ ನಿಧಿಯನ್ನು ಸೇಂಟ್ ಆಂಟನಿ ವಲಸಿಗರ ಸಹಾಯ ಕೇಂದ್ರದ ಮೂಲಕ ಅತ್ಯಂತ ತುರ್ತು ಅಗತ್ಯಗಳನ್ನು ಪೂರೈಸಲು, ಸಂಬಂಧಿತ ಸೇವೆಗಳ ಸಹಯೋಗದಲ್ಲಿ ಬಳಸಲಾಗುವುದು.

ಮಹಾಧರ್ಮಕ್ಷೇತ್ರದ ಮೂಲಗಳ ಪ್ರಕಾರ, ಸದ್ಯಕ್ಕೆ ಸ್ಥಳೀಯ ಧರ್ಮಸಭೆಯ ಸಂಪನ್ಮೂಲಗಳು ಸೀಮಿತವಾಗಿದ್ದು, ತುರ್ತು ಪರಿಸ್ಥಿತಿಯನ್ನು ಸಮನ್ವಯಗೊಳಿಸಲು ಸ್ವಾಯತ್ತ ನಗರದ ಸರ್ಕಾರ ರಚಿಸಿರುವ ಏಕೀಕೃತ ನಿಯಂತ್ರಣ ಕೇಂದ್ರದಿಂದ ಹೆಚ್ಚಿನ ಮಾರ್ಗದರ್ಶನಕ್ಕಾಗಿ ಕಾಯುತ್ತಿದೆ. ಆದಾಗ್ಯೂ, ಪರಿಸ್ಥಿತಿ ಹೇಗೆ ಬೆಳೆಯುತ್ತದೆಯೋ ಅದಕ್ಕೆ ಅನುಗುಣವಾಗಿ ತನ್ನಲ್ಲಿರುವ ಎಲ್ಲಾ ಮಾನವೀಯ ಸಂಪನ್ಮೂಲಗಳನ್ನು ಅಧಿಕಾರಿಗಳ ಸೇವೆಗೆ ಒದಗಿಸಲು ಧರ್ಮಕ್ಷೇತ್ರ ಸಂಪೂರ್ಣ ಸಿದ್ಧವಾಗಿದೆ ಎಂದು ತಿಳಿಸಿದೆ.

ಬೆಂಬಲ ಮತ್ತು ಪ್ರಾರ್ಥನೆಗೆ ಮನವಿ

ಈ ಉಪಕ್ರಮಕ್ಕೆ ಬೆಂಬಲ ನೀಡುತ್ತಿರುವ ವಿಶ್ವಾಸಿಗಳು ಹಾಗೂ  ಎಲ್ಲರಿಗೂ ಧರ್ಮಕ್ಷೇತ್ರ ಕೃತಜ್ಞತೆ ಸಲ್ಲಿಸಿದೆ. ಈ ಬಿಕ್ಕಟ್ಟಿನಿಂದ ಸಂಕಷ್ಟ ಅನುಭವಿಸುತ್ತಿರುವ ಎಲ್ಲರಿಗಾಗಿ, ಪರಿಸ್ಥಿತಿಯನ್ನು ನಿರ್ವಹಿಸುತ್ತಿರುವ ಅಧಿಕಾರಿಗಳಿಗಾಗಿ ಹಾಗೂ ಶಾಂತಿ, ನ್ಯಾಯ ಮತ್ತು ಭರವಸೆಯ ಮಾರ್ಗಗಳನ್ನು ನಿರ್ಮಿಸಲು ಶ್ರಮಿಸುತ್ತಿರುವ ಪ್ರತಿಯೊಬ್ಬರಿಗಾಗಿ ಕ್ರೈಸ್ತ ಸಮುದಾಯಗಳು ಹೆಚ್ಚಿನ ಪ್ರಾರ್ಥನೆ ಸಲ್ಲಿಸುವಂತೆ ಅದು ಮನವಿ ಮಾಡಿದೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

31 ಜುಲೈ 2026, 15:22