ಮೊಜಾಂಬಿಕ್: ಶಾಯ್-ಶಾಯ್‌ನ ಪ್ರವಾಹ ಸಂತ್ರಸ್ತರಿಗೆ ನೆರವಿನ ಹಸ್ತ ಚಾಚಿದ ಧರ್ಮಭಗಿನಿಯರು
ಲೇಖಕರು: ಸಹೋದರಿ ಕ್ರಿಸ್ಟಿನ್ ಮಸಿವೊ, CPS
ವಿಶ್ವದ ಅನೇಕ ಭಾಗಗಳಲ್ಲಿ ಕರಾವಳಿ ಪ್ರದೇಶಗಳು ಅನಿರೀಕ್ಷಿತ ಪ್ರವಾಹಗಳಿಗೆ ತುತ್ತಾಗುತ್ತಿದ್ದು, ಅವು ಅಪಾರ ಹಾನಿಯನ್ನು ಉಂಟುಮಾಡಿ ಜನರನ್ನು ಸ್ಥಳಾಂತರಗೊಳಿಸುತ್ತವೆ ಹಾಗೂ ಅವರ ದೈನಂದಿನ ಜೀವನವನ್ನು ಅಸ್ತವ್ಯಸ್ತಗೊಳಿಸುತ್ತವೆ. ಮೊಜಾಂಬಿಕ್‌ನ ರಾಜಧಾನಿ ಮಪುಟೊ ಹಾಗೂ ಲಿಂಪೊಪೊ ಪ್ರದೇಶಗಳಲ್ಲಿ, ಕಳೆದ ಹತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅಮೂಲ್ಯ ರಕ್ತದ ಧಾರ್ಮಿಕ ಸಹೋದರಿಯರು, ಇಂತಹ ಪ್ರವಾಹದ ಸಂದರ್ಭಗಳಲ್ಲಿ ತಕ್ಷಣವೇ ಕಾರ್ಯಪ್ರವೃತ್ತರಾಗಿ ಜನರಿಗೆ ಅಗತ್ಯ ನೆರವು ಒದಗಿಸುತ್ತಿದ್ದಾರೆ.
ಸಂಕಷ್ಟದಲ್ಲಿರುವವರ ನಡುವೆ ಸೇವೆ
ಕಳೆದ ಹಲವು ವರ್ಷಗಳಲ್ಲಿ ಅವರ ಸೇವೆ ಮಪುಟೊ, ಗಾಜಾ, ಟೆಟೆ ಮತ್ತು ನಕಾಲಾ ಸೇರಿದಂತೆ ದೇಶದ ವಿವಿಧ ಪ್ರಾಂತ್ಯಗಳಿಗೆ ವಿಸ್ತರಿಸಿದೆ. ಕೃಷಿ, ಶಿಕ್ಷಣ, ಆರೋಗ್ಯ ಸೇವೆ, ಸಾಮಾಜಿಕ ಸೇವೆ ಹಾಗೂ ಧಾರ್ಮಿಕ ಸೇವೆಗಳ ಮೂಲಕ ಅವರು ಜನರಿಗೆ ಸೇವೆ ಸಲ್ಲಿಸುತ್ತಿದ್ದಾರೆ. ಜೊತೆಗೆ ಅನಾಥರು, ಸಂಕಷ್ಟದಲ್ಲಿರುವ ಮಕ್ಕಳು, ವೃದ್ಧರು, ಅಪೌಷ್ಟಿಕತೆಯಿಂದ ಬಳಲುವವರು ಹಾಗೂ HIV ಸೋಂಕಿನೊಂದಿಗೆ ಬದುಕುತ್ತಿರುವವರಿಗಾಗಿ ವಿವಿಧ ಯೋಜನೆಗಳನ್ನು ನಡೆಸುತ್ತಿದ್ದಾರೆ. ಸಮಗ್ರ ಮಾನವ ಅಭಿವೃದ್ಧಿಯನ್ನು ಉತ್ತೇಜಿಸಿ, ಸಂಕಷ್ಟದಲ್ಲಿರುವ ಸಮುದಾಯಗಳಿಗೆ ಭರವಸೆಯನ್ನು ನೀಡುವುದು ಅವರ ಧ್ಯೇಯವಾಗಿದೆ.
ಶಾಯ್-ಶಾಯ್‌ನ ಪ್ರವಾಹ ಸಂತ್ರಸ್ತರು
ಸಮಾಜದ ಅತ್ಯಂತ ದುರ್ಬಲ ವರ್ಗದವರ ಸೇವೆ, ಅಂಚಿನಲ್ಲಿರುವವರೊಂದಿಗೆ ನಿಲ್ಲುವುದು ಹಾಗೂ ಪ್ರತಿಯೊಬ್ಬ ಮಾನವನ ಘನತೆಯನ್ನು ಎತ್ತಿಹಿಡಿಯುವುದು ಸಹೋದರಿಯರ ಧ್ಯೇಯವಾಗಿದೆ. ಪ್ರಾದೇಶಿಕ ಮೇಲಧ್ಯಕ್ಷರಾದ ಸಹೋದರಿ ಲೀಜಿಯಾ ಅಲ್ಬೆರ್ಟೊ ಮುಯಾಂಗಾ ವ್ಯಾಟಿಕನ್ ವಾರ್ತಾ ಸಂಸ್ಥೆಯೊಂದಿಗೆ ಮಾತನಾಡುತ್ತಾ,“ಗಾಜಾ ಪ್ರಾಂತ್ಯದ ಕೆಲವು ಭಾಗಗಳಲ್ಲಿ ಭೀಕರ ಪ್ರವಾಹ ಉಂಟಾಗಿ, ವಿಶೇಷವಾಗಿ ಶಾಯ್-ಶಾಯ್ ಜಿಲ್ಲೆಯಲ್ಲಿ, ಅನೇಕ ಕುಟುಂಬಗಳು ತಮ್ಮ ಮನೆಗಳನ್ನು ತೊರೆದು ಸ್ಥಳಾಂತರಗೊಳ್ಳಬೇಕಾಯಿತು. ಅವರಿಗೆ ತುರ್ತು ನೆರವಿನ ಅಗತ್ಯವಿದೆ” ಎಂದು ಹೇಳಿದರು. ನೀರಿನ ಮಟ್ಟ ನಿರಂತರವಾಗಿ ಏರಿದ ಪರಿಣಾಮ ಅನೇಕ ಸಮುದಾಯಗಳು ತಮ್ಮ ನಿವಾಸಗಳನ್ನು ತೊರೆದು ಸುರಕ್ಷಿತ ಸ್ಥಳಗಳಿಗೆ ತೆರಳಬೇಕಾಯಿತು.
ಸ್ಥಳಾಂತರಗೊಂಡವರಿಗೆ ಆಶ್ರಯ
ಇಂತಹ ವಿಪತ್ತಿನ ಸಂದರ್ಭಗಳಲ್ಲಿ ಧಾರ್ಮಿಕ ಸಹೋದರಿಯರು ಮುಂದಾಳತ್ವ ವಹಿಸಿ ಸಂಕಷ್ಟದಲ್ಲಿರುವವರಿಗೆ ನೆರವಾಗುತ್ತಾರೆ. ಸ್ಥಳೀಯ ಆಡಳಿತವು ಸಂತ್ರಸ್ತರನ್ನು ಸುರಕ್ಷತೆಗಾಗಿ ಶಾಲೆಗಳು ಹಾಗೂ ದೊಡ್ಡ ಆಶ್ರಯ ಕೇಂದ್ರಗಳಿಗೆ ಸ್ಥಳಾಂತರಿಸಿದ ನಂತರ, ತಮ್ಮ ಸುತ್ತಮುತ್ತಲಿನ ಅತ್ಯಂತ ಅಗತ್ಯವಿರುವ ಪ್ರದೇಶಗಳನ್ನು ಗುರುತಿಸಿ, ಸುಮಾರು 1,600 ಮಂದಿ ಸ್ಥಳಾಂತರಗೊಂಡವರಿಗೆ, ಅವರಲ್ಲಿ ಸುಮಾರು 600 ಮಕ್ಕಳು ಸೇರಿ, ನೆರವು ನೀಡುತ್ತಿದ್ದಾರೆ. ಅವರಲ್ಲಿ ಅನೇಕರು ಧರಿಸಿದ್ದ ಬಟ್ಟೆಗಳನ್ನು ಹೊರತುಪಡಿಸಿ ಬೇರೆ ಏನನ್ನೂ ಉಳಿಸಿಕೊಳ್ಳಲಾಗದೆ ಬಂದಿದ್ದಾರೆ. ತಮ್ಮ ಮನೆ, ಆಸ್ತಿ ಹಾಗೂ ಜೀವನೋಪಾಯವನ್ನು ಕಳೆದುಕೊಂಡಿರುವ ನೋವಿನಿಂದ ಅವರು ತತ್ತರಿಸಿದ್ದಾರೆ.
ರಕ್ಷಣಾ ಸೇವೆ ಮತ್ತು ಕರುಣೆ
ಪರಿಸ್ಥಿತಿಯ ತುರ್ತು ಅಗತ್ಯವನ್ನು ಅರಿತು, ಸಹೋದರಿಯರು ವಾರಕ್ಕೆ ಮೂರು ಬಾರಿ ಸಂತ್ರಸ್ತರಿಗೆ ಆಹಾರ ವಿತರಿಸುವ ಕಾರ್ಯವನ್ನು ಆರಂಭಿಸಿದರು. ತಮ್ಮ ಮಠದಲ್ಲೇ ಆಹಾರವನ್ನು ತಯಾರಿಸಿ, ಆಶ್ರಯ ಕೇಂದ್ರಗಳಿಗೆ ಸಾಗಿಸಿ, ಸ್ಥಳಾಂತರಗೊಂಡ ಕುಟುಂಬಗಳಿಗೆ ವಿತರಿಸುತ್ತಿದ್ದಾರೆ. ಈ ಮಾನವೀಯ ಸೇವೆಯಲ್ಲಿ ಧಾರ್ಮಿಕ ಸಹೋದರಿಯರು ಮಾತ್ರವಲ್ಲದೆ, ಅವರ ಸಮರ್ಪಣೆ ಮತ್ತು ಕರುಣೆಯಿಂದ ಪ್ರೇರಿತರಾದ ಹಲವಾರು ಸ್ಥಳೀಯ ಮಹಿಳೆಯರೂ ಸ್ವಯಂಸೇವಕರಾಗಿ ಸೇರಿಕೊಂಡಿದ್ದಾರೆ. ಅವರು ಆಹಾರ ತಯಾರಿಕೆ ಮತ್ತು ವಿತರಣೆಯಲ್ಲಿ ಸಹಕರಿಸುತ್ತಿದ್ದಾರೆ. ಆಹಾರ ಮತ್ತು ಆಶ್ರಯ ಮಾತ್ರವಲ್ಲದೆ, ಸ್ವಚ್ಛತಾ ಸಾಮಗ್ರಿಗಳು, ಬಟ್ಟೆಗಳು ಹಾಗೂ ಸಂತ್ರಸ್ತರ ಸುರಕ್ಷತೆ ಸೇರಿದಂತೆ ಇತರ ಅಗತ್ಯಗಳನ್ನೂ ಗುರುತಿಸಿ, ಅವುಗಳನ್ನು ಪೂರೈಸಲು ಧಾರ್ಮಿಕ ಸಹೋದರಿಯರು ಶ್ರಮಿಸುತ್ತಿದ್ದಾರೆ.
ಅವರ ನೋವನ್ನು ಆಲಿಸುವ ಸೇವೆ
ಆಶ್ರಯ ಕೇಂದ್ರಗಳಲ್ಲಿ ಕುಟುಂಬಗಳು ವಿಶ್ರಾಂತಿ ಪಡೆಯಲು ಹಾಸಿಗೆಗಳನ್ನು ವ್ಯವಸ್ಥೆ ಮಾಡಲಾಗಿದೆ. ಪ್ರವಾಹದ ನೀರು ಇಳಿದು, ಜೀವನ ಮತ್ತೆ ಸಹಜ ಸ್ಥಿತಿಗೆ ಮರಳುವ ದಿನಕ್ಕಾಗಿ ಅವರು ಕಾಯುತ್ತಿದ್ದಾರೆ. ಈ ಸಂದರ್ಭದಲ್ಲಿ ಸಹೋದರಿಯರು ಸ್ಥಳೀಯ ಸಮುದಾಯಗಳು ಹಾಗೂ ಸಹಯೋಗಿ ಸಂಸ್ಥೆಗಳಲ್ಲಿ ಜಾಗೃತಿ ಮೂಡಿಸಿ, ತುರ್ತು ಅಗತ್ಯಗಳನ್ನು ಪೂರೈಸಲು ಹೆಚ್ಚಿನ ನೆರವು ನೀಡುವಂತೆ ಮನವಿ ಮಾಡುತ್ತಿದ್ದಾರೆ.
ಸಹೋದರಿ ಲೀಜಿಯಾ ಅವರು ಹೇಳುವಂತೆ, “ಆಶ್ರಯ ಕೇಂದ್ರಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ಧಾರ್ಮಿಕ ಸಹೋದರಿಯರು ಸ್ಥಳಾಂತರಗೊಂಡ ಕುಟುಂಬಗಳ ಆತಂಕಗಳನ್ನು ಆಲಿಸಲು ಸಮಯ ಮೀಸಲಿಡುತ್ತಾರೆ. ಅವರ ಅತ್ಯಂತ ತುರ್ತು ಅಗತ್ಯಗಳನ್ನು ತಿಳಿದುಕೊಳ್ಳುತ್ತಾರೆ. ಅವರ ಈ ಸಾನ್ನಿಧ್ಯವೇ ಸಂತ್ರಸ್ತರಿಗೆ ಸಾಂತ್ವನ ನೀಡುತ್ತದೆ ಮತ್ತು ಅವರ ನೋವನ್ನು ಹಗುರಗೊಳಿಸುತ್ತದೆ.”
ದುಃಖದ ಮಧ್ಯೆ ಭರವಸೆಯ ಬೆಳಕು
ಈ ಸಂಕಷ್ಟದ ಸಮಯದಲ್ಲಿ ಧಾರ್ಮಿಕ ಸಹೋದರಿಯರ ಉಪಸ್ಥಿತಿಯು ಜನರಿಗೆ ಭರವಸೆಯ ದೀಪವಾಗಿದೆ. ಅವರ ಸೇವೆ ಅವರ ಧಾರ್ಮಿಕ ಧ್ಯೇಯವನ್ನು ಪ್ರತಿಬಿಂಬಿಸುತ್ತದೆ—ಅಂಚಿನಲ್ಲಿರುವವರು ಮತ್ತು ದುಃಖ ಅನುಭವಿಸುತ್ತಿರುವವರೊಂದಿಗೆ ನಿಂತು, ನಿರಾಶೆಯ ಮಧ್ಯೆ ಮಾನವ ಘನತೆಯನ್ನು ಪುನಃಸ್ಥಾಪಿಸುವುದು.
ಆಹಾರ ತಯಾರಿಸುವುದು, ಆಶ್ರಯ ಕೇಂದ್ರಗಳಿಗೆ ಭೇಟಿ ನೀಡುವುದು ಹಾಗೂ ಸ್ಥಳಾಂತರಗೊಂಡವರೊಂದಿಗೆ ಹೆಜ್ಜೆ ಹಾಕುವುದು ಮೊದಲಾದ ಸರಳವಾದರೂ ಶಕ್ತಿಯುತ ಸೇವೆಗಳ ಮೂಲಕ, ಮೊಜಾಂಬಿಕ್‌ನಲ್ಲಿ ಒಂದು ಶತಮಾನಕ್ಕೂ ಹೆಚ್ಚು ಕಾಲ ತಮ್ಮನ್ನು ಮಾರ್ಗದರ್ಶಿಸಿರುವ ಧರ್ಮಪ್ರಚಾರದ ಧ್ಯೇಯವನ್ನು ಅವರು ಇಂದಿಗೂ ಜೀವಂತವಾಗಿರಿಸಿದ್ದಾರೆ. ಅಂಚಿನಲ್ಲಿರುವವರ ನಡುವೆ ಅವರ ಕರುಣಾಮಯ ಸಾನ್ನಿಧ್ಯವು ಗಾಯಗೊಂಡಿರುವ ಮಾನವ ಬದುಕುಗಳಿಗೆ ಪುನಃ ಭರವಸೆ, ಸಾಂತ್ವನ ಮತ್ತು ಚೈತನ್ಯವನ್ನು ನೀಡುತ್ತಿದೆ.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).