ಹುಡುಕಿ

ಕ್ಲಾರೆನ್ಸ್ ಹೌಸ್‌ನಲ್ಲಿ ಮಹಾರಾಣಿ ಕ್ಯಾಮಿಲ್ಲಾ ಅವರನ್ನು ಭೇಟಿಯಾದ UISG ಭಗಿನಿಯರು ಹಾಗೂ ಡಾ. ಅನಾಬೆಲ್ ಇಂಗೆ (© Buckingham Palace) ಕ್ಲಾರೆನ್ಸ್ ಹೌಸ್‌ನಲ್ಲಿ ಮಹಾರಾಣಿ ಕ್ಯಾಮಿಲ್ಲಾ ಅವರನ್ನು ಭೇಟಿಯಾದ UISG ಭಗಿನಿಯರು ಹಾಗೂ ಡಾ. ಅನಾಬೆಲ್ ಇಂಗೆ (© Buckingham Palace)  (© BuckinghamPalace)

ವಿಶ್ವದ ಮುಂಚೂಣಿ ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕಥೋಲಿಕ ಭಗಿನಿಯರ ಸಾಕ್ಷ್ಯವನ್ನು ಆಲಿಸಿದ ರಾಣಿ ಕಮಿಲ್ಲಾ

ಕ್ಲಾರೆನ್ಸ್ ಹೌಸ್‌ನಲ್ಲಿ ರಾಣಿ ಕಮಿಲ್ಲಾ ಅವರನ್ನು ಭೇಟಿಯಾದ ಬಳಿಕ, ಅಂತರರಾಷ್ಟ್ರೀಯ ಸುಪೀರಿಯರ್ಸ್ ಜನರಲ್ ಒಕ್ಕೂಟದ (UISG) ಪ್ರತಿನಿಧಿಗಳು, ಮಾನವ ಕಳ್ಳಸಾಗಣೆ, ಸಂಘರ್ಷಪೀಡಿತ ಪ್ರದೇಶಗಳು ಹಾಗೂ ಹವಾಮಾನ ಬದಲಾವಣೆಯಿಂದ ಬಾಧಿತ ಸಮುದಾಯಗಳಲ್ಲಿ ಸೇವೆ ಸಲ್ಲಿಸುವ ಮೂಲಕ ವಿಶ್ವದಾದ್ಯಂತ ಕಥೋಲಿಕ ಭಗಿನಿಯರು ದುರ್ಬಲ ಮಹಿಳೆಯರು ಮತ್ತು ಬಾಲಕಿಯರನ್ನು ಹೇಗೆ ರಕ್ಷಿಸುತ್ತಿದ್ದಾರೆ ಎಂಬುದನ್ನು ಹಂಚಿಕೊಂಡರು.

ಲೇಖನ: ಲಿಂಡಾ ಬೋರ್ಡೋನಿ

ರಾಜ ಮೂರನೇ ಚಾರ್ಲ್ಸ್ ಮತ್ತು ರಾಣಿ ಕ್ಯಾಮಿಲ್ಲಾ ಅವರ ಜಗದ್ಗುರುಗಳ ಅಧಿಕಾರ ಪೀಠದ ರಾಜ್ಯ ಭೇಟಿಯ ಸಂದರ್ಭದಲ್ಲಿ ನಡೆದ ಮೊದಲ ಭೇಟಿಯ ಒಂದು ವರ್ಷದೊಳಗೆ, ಅಂತರರಾಷ್ಟ್ರೀಯ ಸುಪೀರಿಯರ್ಸ್ ಜನರಲ್ ಒಕ್ಕೂಟದ (UISG) ಪ್ರತಿನಿಧಿಗಳು ಮತ್ತೊಮ್ಮೆ ಲಂಡನ್‌ಗೆ ತೆರಳಿ ಕ್ಲಾರೆನ್ಸ್ ಹೌಸ್‌ನಲ್ಲಿ ರಾಣಿಯವರನ್ನು ಭೇಟಿ ಮಾಡಿದರು. ಈ ವೇಳೆ, ವಿಶ್ವದ ಅತ್ಯಂತ ದುರ್ಬಲ ಸಮುದಾಯಗಳ ನಡುವೆ ತಮ್ಮ ಸೇವೆಯ ಮುಂಚೂಣಿ ಪ್ರದೇಶಗಳಿಂದ ಅನೇಕ ಅನುಭವಗಳನ್ನು ಅವರು ಹಂಚಿಕೊಂಡರು.

ಬುಧವಾರ ನಡೆದ ಈ ಭೇಟಿಯು, ವಿಶ್ವದಾದ್ಯಂತ ಸೇವೆ ಸಲ್ಲಿಸುತ್ತಿರುವ ಕಥೋಲಿಕ ಭಗಿನಿಯರ ಕಾರ್ಯವನ್ನು, ವಿಶೇಷವಾಗಿ ಸಂಘರ್ಷ, ಮಾನವ ಕಳ್ಳಸಾಗಣೆ, ಬಡತನ ಮತ್ತು ಹವಾಮಾನ ಬದಲಾವಣೆಯ ಹೆಚ್ಚುತ್ತಿರುವ ಪರಿಣಾಮಗಳಿಂದ ಬಾಧಿತರಾದ ಮಹಿಳೆಯರು ಹಾಗೂ ಬಾಲಕಿಯರನ್ನು ರಕ್ಷಿಸುವ ಅವರ ಬದ್ಧತೆಯನ್ನು ಪರಾಮರ್ಶಿಸಲು ಅವಕಾಶ ನೀಡಿತು. ಮಾನವ ಘನತೆ ಮತ್ತು ಸ್ಥೈರ್ಯವನ್ನು ಉತ್ತೇಜಿಸುವ ಉಪಕ್ರಮಗಳಿಗೆ UISG ಹಾಗೂ ಜಗದ್ಗುರುಗಳ ಅಧಿಕಾರ ಪೀಠದಲ್ಲಿನ ಬ್ರಿಟಿಷ್ ರಾಯಭಾರ ಕಚೇರಿ ನಡುವಿನ ನಿರಂತರ ಸಹಯೋಗವನ್ನೂ ಇದು ಎತ್ತಿ ತೋರಿಸಿತು.

ಜಗದ್ಗುರುಗಳ ಅಧಿಕಾರ ಪೀಠದಲ್ಲಿನ ಬ್ರಿಟಿಷ್ ರಾಯಭಾರ ಕಚೇರಿಯ ಹಂಗಾಮಿ ಕಾರ್ಯನಿರ್ವಾಹಕ ಮುಖ್ಯಸ್ಥೆ ಡಾ. ಅನಾಬೆಲ್ ಇಂಗೆ, ಈ ಭೇಟಿಯನ್ನು “ನಿಜಕ್ಕೂ ವಿಶೇಷವಾದ, ಸಂತಸದ ಸಂದರ್ಭ” ಎಂದು ಬಣ್ಣಿಸಿದರು. ಈ ಆಹ್ವಾನವು ಧಾರ್ಮಿಕ ಸನ್ಯಾಸಿನಿಯರ ಸೇವೆಯ ಬಗ್ಗೆ ಮಹಾರಾಣಿ ಕ್ಯಾಮಿಲ್ಲಾ ಹೊಂದಿರುವ ಆಳವಾದ ಮೆಚ್ಚುಗೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು.

“ಇಷ್ಟು ಬೇಗ ಭಗಿನಿಯರನ್ನು ಕ್ಲಾರೆನ್ಸ್ ಹೌಸ್‌ಗೆ ಆಹ್ವಾನಿಸಲಾಗುತ್ತದೆ ಎಂದು ನಮ್ಮಲ್ಲಿ ಯಾರೂ ನಿರೀಕ್ಷಿಸಿರಲಿಲ್ಲ,” ಎಂದು ಅವರು ಹೇಳಿದರು. “ಇದು ಧಾರ್ಮಿಕ ಸನ್ಯಾಸಿನಿಯರ ಸೇವೆಯ ಬಗ್ಗೆ ರಾಣಿಯವರ ಆಳವಾದ ಗೌರವವನ್ನು ಸ್ಪಷ್ಟವಾಗಿ ತೋರಿಸುತ್ತದೆ.” 

ಕಳೆದ ಐದು ವರ್ಷಗಳಿಂದ UISG ಜೊತೆಗೆ ನಿಕಟವಾಗಿ ಕಾರ್ಯನಿರ್ವಹಿಸಿರುವ ಡಾ. ಇಂಗೆ, ಭಗಿನಿಯರ ಮೌನವಾದರೂ ಧೈರ್ಯಶಾಲಿ ಸಾಕ್ಷ್ಯವನ್ನು ಶ್ಲಾಘಿಸಿದರು. “ಈ ಸೇವೆಯನ್ನು ಅವರು ಯಾವುದೇ ಪ್ರಚಾರವಿಲ್ಲದೆ, ಅಪಾರ ವಿನಮ್ರತೆಯಿಂದ ಹಾಗೂ ವಿಶ್ವದ ಅತ್ಯಂತ ಕಠಿಣ ಪ್ರದೇಶಗಳಲ್ಲಿ ನಿರ್ವಹಿಸುತ್ತಾರೆ ಎಂಬ ಭಾವನೆ ನನಗಿದೆ,” ಎಂದು ಅವರು ಹೇಳಿದರು. ಸ್ಥಳೀಯ ಸಮುದಾಯಗಳಲ್ಲಿ ಅವರ ಸೇವೆಯನ್ನು ವಿಶಿಷ್ಟಗೊಳಿಸುವ ಗುಣಗಳಾಗಿ “ವಿಶ್ವಾಸ, ಸಾನ್ನಿಧ್ಯ ಮತ್ತು ನಿರಂತರತೆ”ಯನ್ನು ಅವರು ಉಲ್ಲೇಖಿಸಿದರು.

“ಅವರು ಸ್ಥಳೀಯ ಸಮುದಾಯಗಳೊಳಗೆ ಬೆರೆತು ಬದುಕುತ್ತಾರೆ... ಸಂಘರ್ಷದ ಸಂದರ್ಭಗಳಲ್ಲಿಯೂ ಅಲ್ಲಿಯೇ ಉಳಿದುಕೊಂಡು, ಅನೇಕ ಬಾರಿ ತಮ್ಮ ವೈಯಕ್ತಿಕ ಜೀವವನ್ನೇ ಅಪಾಯಕ್ಕೆ ಒಡ್ಡುತ್ತಾರೆ,” ಎಂದು ಅವರು ಹೇಳಿದರು.

ಪ್ರವಾದೀಯ ಸಾನ್ನಿಧ್ಯ

UISGಯ ಕಾರ್ಯನಿರ್ವಾಹಕ ಕಾರ್ಯದರ್ಶಿ ಸಹೋದರಿ ರೊಕ್ಸಾನ್ ಶೇರ್ಸ್ ಅವರ ಪ್ರಕಾರ, ಯುದ್ಧ, ಸ್ಥಳಾಂತರ ಮತ್ತು ಸಂಕಷ್ಟಗಳ ನಡುವೆಯೂ ಜನರೊಂದಿಗೆ ಉಳಿದು ಸೇವೆ ಸಲ್ಲಿಸುತ್ತಿರುವ ಸಾವಿರಾರು ಧಾರ್ಮಿಕ ಸನ್ಯಾಸಿನಿಯರ ಕುರಿತು ಮಾತನಾಡಲು ಈ ಭೇಟಿಯು ಒಂದು ಅವಕಾಶವಾಗಿತ್ತು.

“ನಮ್ಮ ಭಗಿನಿಯರು ಸೇವೆ ಸಲ್ಲಿಸುವ ಎಲ್ಲೆಡೆ ಜನರೊಂದಿಗೇ ಇರುತ್ತಾರೆ, ಅದು ವಿಶ್ವವಿದ್ಯಾಲಯವಾಗಿರಲಿ, ಶಿಶುವಿಹಾರವಾಗಿರಲಿ, ಸಾಮಾಜಿಕ ಸೇವೆಯಾಗಿರಲಿ ಅಥವಾ ಪಾಲನಾ ಸೇವೆಯಾಗಿರಲಿ, ಅವರ ಸಾನ್ನಿಧ್ಯವು ಜನರಿಗೆ ಸಾಂತ್ವನ, ಬೆಂಬಲ ಮತ್ತು ಧೈರ್ಯದ ಮೂಲವಾಗಿದೆ.”

ಉಕ್ರೇನ್, ಲೆಬನಾನ್ ಮತ್ತು ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಸಿಸ್ಟರ್ಸ್‌ಗಳೊಂದಿಗೆ ನಡೆದ ಇತ್ತೀಚಿನ ಸಂಭಾಷಣೆಗಳನ್ನು ಅವರು ನೆನಪಿಸಿಕೊಂಡರು. ನಿರಂತರ ಹಿಂಸಾಚಾರದ ನಡುವೆಯೂ ಅನೇಕರು ಅಲ್ಲಿಯೇ ಉಳಿಯಲು ನಿರ್ಧರಿಸಿದ್ದಾರೆ.

ಒಬ್ಬ ಸಹೋದರಿ, ಬಾಂಬ್ ದಾಳಿಗಳ ಸಂದರ್ಭದಲ್ಲಿ ಭಯಗೊಂಡಿದ್ದ ಮಕ್ಕಳನ್ನು ನೆಲಮಾಳಿಗೆಗೆ ಕರೆದೊಯ್ದು, “ಬಾಂಬ್‌ಗಳ ಸದ್ದಿನ ಹೊರತಾಗಿ ಮತ್ತೊಂದು ಧ್ವನಿಯಾಗಲೆಂದು” ಪವಿತ್ರ ಬೈಬಲ್‌ನ ವಚನಗಳನ್ನು ಓದಿ ಕೇಳಿಸುತ್ತಿದ್ದ ಅನುಭವವನ್ನು ಅವರು ಹಂಚಿಕೊಂಡರು. ಈ ಸಾಕ್ಷ್ಯಗಳನ್ನು ರಾಣಿ ಕಮಿಲ್ಲಾ ಅಪಾರ ಕರುಣೆಯಿಂದ ಆಲಿಸಿದ್ದು, ಅವುಗಳಿಂದ “ಆಳವಾಗಿ ಸ್ಪರ್ಶಿತರಾದರು” ಎಂದು ಸಹೋದರಿ ರೊಕ್ಸಾನ್ ಹೇಳಿದರು.

“ತಮ್ಮ ಕರುಣಾಮಯ ಆಲಿಸುವಿಕೆಯ ಮೂಲಕ ವಿಶ್ವದಾದ್ಯಂತ ಇರುವ ಭಗಿನಿಯರಿಗೆ ತಮ್ಮದೇ ರೀತಿಯಲ್ಲಿ ಬೆಂಬಲವಾಗಬೇಕೆಂಬ ಬಯಕೆಯನ್ನು ಅವರು ಹೊಂದಿದ್ದಾರೆ ಎಂದು ನಾನು ಭಾವಿಸುತ್ತೇನೆ,” ಎಂದು ಅವರು ಹೇಳಿದರು.

ಮಾನವ ಕಳ್ಳಸಾಗಣೆ ವಿರುದ್ಧದ ಹೋರಾಟದ ಮುಂಚೂಣಿಯಲ್ಲಿ ಯುವಜನರು 

ಮಾನವ ಕಳ್ಳಸಾಗಣೆಯ ವಿಷಯವು ಈ ಸಂಭಾಷಣೆಯ ಕೇಂದ್ರಬಿಂದುವಾಗಿಯೇ ಉಳಿಯಿತು. ವಿಶ್ವದಾದ್ಯಂತ ಮಾನವ ಕಳ್ಳಸಾಗಣೆ ವಿರುದ್ಧ ಹೋರಾಡುತ್ತಿರುವ ಕಥೋಲಿಕ ಭಗಿನಿಯರ ಜಾಲ ತಾಲಿತಾ ಕುಮ್‌ನ ಅಂತರರಾಷ್ಟ್ರೀಯ ಸಂಯೋಜಕಿ ಸಹೋದರಿ ಅಬ್ಬಿ ಅವೆಲಿನೊ, ಶೋಷಣೆಯನ್ನು ತಡೆಗಟ್ಟಲು ಮತ್ತು ಬದುಕುಳಿದವರಿಗೆ ಬೆಂಬಲ ನೀಡಲು ಜಾಲವು ಕೈಗೊಂಡಿರುವ ಬೆಳೆಯುತ್ತಿರುವ ಪ್ರಯತ್ನಗಳನ್ನು ಹಂಚಿಕೊಂಡರು. ಉದ್ಯೋಗ ಹುಡುಕುತ್ತಿರುವ ಯುವಜನರನ್ನು ಗುರಿಯಾಗಿಸಿಕೊಂಡಿರುವ ಆನ್‌ಲೈನ್ ನೇಮಕಾತಿ ವಂಚನೆಗಳು ಇಂದಿನ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮಾನವ ಕಳ್ಳಸಾಗಣೆ ಅಪಾಯಗಳಲ್ಲಿ ಒಂದಾಗಿವೆ ಎಂದು ಅವರು ವಿವರಿಸಿದರು.

“ಯುವಜನರು ಆನ್‌ಲೈನ್ ವಂಚನೆಗಳಿಗೆ ಸುಲಭವಾಗಿ ಬಲಿಯಾಗುತ್ತಿದ್ದಾರೆ,” ಎಂದು ಅವರು ಹೇಳಿದರು. ಇದಕ್ಕೆ ಪ್ರತಿಯಾಗಿ, ತಾಲಿತಾ ಕುಮ್ ಯುವ ವಯಸ್ಕರಿಗೆ ತರಬೇತಿ ನೀಡಿ ‘ಮಾನವ ಕಳ್ಳಸಾಗಣೆ ವಿರುದ್ಧದ ಯುವ ರಾಯಭಾರಿಗಳಾಗಿ’ ರೂಪಿಸುತ್ತಿದೆ ಎಂದು ವಿವರಿಸಿದರು. ಜಗದ್ಗುರುಗಳ ಅಧಿಕಾರ ಪೀಠದಲ್ಲಿನ ಬ್ರಿಟಿಷ್ ರಾಯಭಾರ ಕಚೇರಿಯ ಬೆಂಬಲದೊಂದಿಗೆ ಮೊದಲಿಗೆ ಏಷ್ಯಾದಲ್ಲಿ ಆರಂಭವಾದ ಈ ಕಾರ್ಯಕ್ರಮವು ಈಗ ವಿಶ್ವದಾದ್ಯಂತ ವಿಸ್ತರಿಸಿದೆ.

“ಅವರೇ ಧ್ವನಿಯಾಗುತ್ತಾರೆ, ಅವರೇ ಬದಲಾವಣೆಯ ಹರಿಕಾರರಾಗುತ್ತಾರ.”ಎಂದು ಸಹೋದರಿ ಅಬ್ಬಿ ಹೇಳಿದರು 18 ರಿಂದ 30 ವರ್ಷದೊಳಗಿನ ಯುವಜನರಿಗೆ ಈ ಆರು ತಿಂಗಳ ತರಬೇತಿ ಕಾರ್ಯಕ್ರಮವು ಮಾನವ ಕಳ್ಳಸಾಗಣೆ ಮತ್ತು ಶೋಷಣೆಯ ಎಚ್ಚರಿಕೆ ಸೂಚನೆಗಳ ಬಗ್ಗೆ ತಮ್ಮ ಸಮವಯಸ್ಕರಿಗೆ ಅರಿವು ಮೂಡಿಸಲು ನೆರವಾಗುತ್ತದೆ ಎಂದು ಅವರು ವಿವರಿಸಿದರು.ಈ ಚಳವಳಿಯು ನಿರಂತರವಾಗಿ ಬೆಳೆಯುತ್ತಿದ್ದು, ಇಂದು ತಾಲಿತಾ ಕುಮ್ 68 ರಾಷ್ಟ್ರೀಯ ಮತ್ತು ಪ್ರಾದೇಶಿಕ ಜಾಲಗಳ ಮೂಲಕ 110ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. 2025ರಲ್ಲಿ ತಡೆಗಟ್ಟುವಿಕೆ, ರಕ್ಷಣೆ, ಶಿಕ್ಷಣ, ಜಾಗೃತಿ ಮತ್ತು ಬದುಕುಳಿದವರಿಗೆ ಬೆಂಬಲ ನೀಡುವ ಕಾರ್ಯಗಳ ಮೂಲಕ ಸುಮಾರು 12 ಲಕ್ಷ ಜನರನ್ನು ತಲುಪಿದೆ. ಪ್ರತಿಯೊಂದು ಅಂಕಿ-ಅಂಶದ ಹಿಂದೆ ಒಬ್ಬ ಮಾನವನ ಬದುಕಿದೆ ಎಂದು ಸಹೋದರಿ ಅಬ್ಬಿ ಒತ್ತಿಹೇಳಿದರು.

“ಈ ಅಂಕಿ-ಅಂಶಗಳ ಹಿಂದೆ ಅನೇಕ ಕಥೆಗಳಿವೆ,” ಮಾನವ ಕಳ್ಳಸಾಗಣೆಯಿಂದ ಪಾರಾದ ಬಳಿಕ, ಈಗ ಅದೇ ದುಃಖವನ್ನು ಇತರ ಯುವಜನರು ಅನುಭವಿಸದಂತೆ ಅವರನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿರುವ ಒಬ್ಬ ಬದುಕುಳಿದವರ ಸಾಕ್ಷ್ಯವನ್ನು ಅವರು ನೆನಪಿಸಿಕೊಂಡರು.

ಹವಾಮಾನ ಬದಲಾವಣೆ ಮತ್ತು ಮಾನವ ಘನತೆ

ಈ ಭೇಟಿಯಲ್ಲಿ ಪ್ರಸ್ತಾಪವಾದ ಮತ್ತೊಂದು ಪ್ರಮುಖ ವಿಷಯವೆಂದರೆ ಹವಾಮಾನ ಬದಲಾವಣೆ, ಬಲವಂತದ ವಲಸೆ ಮತ್ತು ಮಾನವ ಕಳ್ಳಸಾಗಣೆಯ ನಡುವಿನ ಹೆಚ್ಚುತ್ತಿರುವ ಸಂಬಂಧ. UISG-USG ನ್ಯಾಯ, ಶಾಂತಿ ಮತ್ತು ಸೃಷ್ಟಿಯ ಸಮಗ್ರತೆ ಆಯೋಗದ ಕಾರ್ಯನಿರ್ವಾಹಕ ಸಹ-ಕಾರ್ಯದರ್ಶಿ ಸಹೋದರಿ ಮಾಮಲಿಫರ್ ಪೊರೆಕು, ಪರಿಸರ ಹಾನಿಯು ದುರ್ಬಲ ಕುಟುಂಬಗಳನ್ನು ಹೇಗೆ ಇನ್ನಷ್ಟು ಬಡತನದತ್ತ ತಳ್ಳುತ್ತಿದೆ ಎಂಬುದನ್ನು ವಿವರಿಸಿದರು. “ಹವಾಮಾನ ಬದಲಾವಣೆ ವಾಸ್ತವ, ಅದು ಕೇವಲ ಕಥೆಯಲ್ಲ” ಎಂದು ಅವರು ಹೇಳಿದರು.

ಒಮ್ಮೆ ಕೃಷಿಯನ್ನೇ ಅವಲಂಬಿಸಿ ಬದುಕುತ್ತಿದ್ದ ಸಮುದಾಯಗಳು ಈಗ ದೀರ್ಘಕಾಲದ ಬರಗಾಲ ಅಥವಾ ಭೀಕರ ಪ್ರವಾಹಗಳನ್ನು ಎದುರಿಸುತ್ತಿವೆ ಎಂದು ಅವರು ವಿವರಿಸಿದರು. “ಜನರು ವಲಸೆ ಹೋಗಬೇಕಾದ ಪರಿಸ್ಥಿತಿ ಎದುರಾಗುತ್ತದೆ. ವಲಸೆ ಹೋಗುವ ಪ್ರಕ್ರಿಯೆಯಲ್ಲಿ ಅವರು ಮಾನವ ಕಳ್ಳಸಾಗಣೆಗೆ ಒಳಗಾಗುತ್ತಾರೆ. ನಂತರ ಅವರು ಗುಲಾಮಗಿರಿಗೆ ತಳ್ಳಲ್ಪಡುತ್ತಾರೆ. ಇದು ದುಷ್ಟಚಕ್ರವಾಗುತ್ತದೆ.” ಈ ದುಷ್ಟಚಕ್ರದ ಅತಿ ದೊಡ್ಡ ಬೆಲೆಯನ್ನು ಮಹಿಳೆಯರು, ಬಾಲಕಿಯರು ಮತ್ತು ಯುವಜನರೇ ತೆರಬೇಕಾಗುತ್ತದೆ ಎಂದು ಅವರು ಹೇಳಿದರು. ಈ ದುಷ್ಟಚಕ್ರವನ್ನು ಮುರಿಯಲು ಅನೇಕ ಭಗಿನಿಯರು ಪುನರುಜ್ಜೀವನಕಾರಿ ಕೃಷಿ, ಪರಿಸರ ಶಿಕ್ಷಣ ಹಾಗೂ ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ ಒದಗಿಸುವ ಮತ್ತು ಮಕ್ಕಳನ್ನು ಶಾಲೆಯಲ್ಲಿ ಉಳಿಸುವ ಆದಾಯ ಸೃಷ್ಟಿಸುವ ಯೋಜನೆಗಳನ್ನು ಉತ್ತೇಜಿಸುತ್ತಿದ್ದಾರೆ. “ಇದು ಆ ದುಷ್ಟಚಕ್ರವನ್ನು ಮುರಿಯುವ ಕಾರ್ಯವಾಗಿದೆ,” ಎಂದು ಅವರು ವಿವರಿಸಿದರು.

ಭರವಸೆಯ ಸಹನಿರ್ಮಾಣ

ಮುಂದಿನ ದಿನಗಳ ಕುರಿತು ಮಾತನಾಡಿದ ಸಹೋದರಿ ರೊಕ್ಸಾನ್, ತುರ್ತು ಪರಿಸ್ಥಿತಿಗಳಿಗೆ ಸ್ಪಂದಿಸುವುದರಲ್ಲಿ ಮಾತ್ರವಲ್ಲದೆ ಅನ್ಯಾಯದ ಮೂಲ ಕಾರಣಗಳನ್ನು ಪರಿಹರಿಸುವಲ್ಲಿಯೂ ಸಹಕಾರ ಅತ್ಯಗತ್ಯ ಎಂದು ಹೇಳಿದರು. “ನಾವು ಮೂಲ ಕಾರಣಗಳನ್ನು ಪರಿಹರಿಸಲು ಆರಂಭಿಸದಿದ್ದರೆ, ಇದೇ ಸಮಸ್ಯೆಗಳು ಮತ್ತೆ ಮತ್ತೆ ಎದುರಾಗುತ್ತವೆ,” ಎಂದು ಅವರು ಹೇಳಿದರು. ನಾಯಕತ್ವ, ವಕಾಲತ್ತು ಮತ್ತು ಸಿನೊಡಾಲಿಟಿಯ ಕುರಿತ ತರಬೇತಿಯನ್ನು UISG ಬಲಪಡಿಸುತ್ತಿದ್ದು, ಇಂದಿನ ಸವಾಲುಗಳಿಗೆ ಒಟ್ಟಾಗಿ ಸ್ಪಂದಿಸಬಲ್ಲ “ಜಾಗತಿಕ ಸಹೋದರಿತ್ವ”ವನ್ನು ನಿರ್ಮಿಸುತ್ತಿದೆ ಎಂದು ಅವರು ವಿವರಿಸಿದರು.

ಕ್ಲಾರೆನ್ಸ್ ಹೌಸ್‌ನಲ್ಲಿ ನಡೆದ ಈ ಭೇಟಿಯು, ಮಾನವ ಘನತೆಯನ್ನು ಕಾಪಾಡುವ ಉದ್ದೇಶದಿಂದ ಸರ್ಕಾರಗಳು, ನಾಗರಿಕ ಸಮಾಜ ಮತ್ತು ಧಾರ್ಮಿಕ ಸಮುದಾಯಗಳು ಒಟ್ಟಾಗಿ ಕಾರ್ಯನಿರ್ವಹಿಸುತ್ತಿರುವುದಕ್ಕೆ ಮತ್ತೊಂದು ಸಾಕ್ಷಿಯಾಯಿತು. ಕೊನೆಯಲ್ಲಿ, ಪ್ರತಿಯೊಬ್ಬ ವ್ಯಕ್ತಿಯ ಘನತೆಯನ್ನು ಕಾಪಾಡಬೇಕೆಂಬ ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರ ಕರೆಗೆ ಪ್ರತಿಧ್ವನಿಯಾಗಿ ಸಹೋದರಿ ಅಬ್ಬಿ ಹೇಳಿದರು: “ಯಾವೊಬ್ಬ ವ್ಯಕ್ತಿಯೂ ಅಥವಾ ಯಾವುದೇ ಸಂಸ್ಥೆಯೂ ಮಾನವ ಕಳ್ಳಸಾಗಣೆಯ ವಿರುದ್ಧ ಏಕಾಂಗಿಯಾಗಿ ಹೋರಾಡಲು ಸಾಧ್ಯವಿಲ್ಲ. ಸಹಕಾರವೇ ಮುಖ್ಯ ಕೀಲಿಕೈ.”

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

16 ಜುಲೈ 2026, 20:30