ಸಮುದ್ರ ಮಾರ್ಗದ ಅಪಾಯಕಾರಿ ಪ್ರಯಾಣದ ವೇಳೆ ಪ್ರಾಣ ಕಳೆದುಕೊಂಡ ವಲಸಿಗರು ಮತ್ತು ನಿರಾಶ್ರಿತರನ್ನು ಸ್ಮರಿಸುತ್ತಿರುವ ದೃಶ್ಯ (@JRS) ಸಮುದ್ರ ಮಾರ್ಗದ ಅಪಾಯಕಾರಿ ಪ್ರಯಾಣದ ವೇಳೆ ಪ್ರಾಣ ಕಳೆದುಕೊಂಡ ವಲಸಿಗರು ಮತ್ತು ನಿರಾಶ್ರಿತರನ್ನು ಸ್ಮರಿಸುತ್ತಿರುವ ದೃಶ್ಯ (@JRS)  (@JRS)

ಜೆಸುಯಿಟ್ ನಿರಾಶ್ರಿತರ ಸೇವಾ ಸಂಸ್ಥೆ (JRS): ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರ ಲಾಂಪೆದುಸಾ ಭೇಟಿ-ವಲಸೆಯ ಮಾನವೀಯ ಮುಖದ ಅನಾವರಣ

ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರು ಲಾಂಪೆದುಸಾಗೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ, ಜೆಸುಯಿಟ್ ನಿರಾಶ್ರಿತರ ಸೇವಾ ಸಂಸ್ಥೆಯ (JRS) ಅಂತರರಾಷ್ಟ್ರೀಯ ವಕಾಲತ್ತು ಸಲಹೆಗಾರ್ತಿ ಅಮಾಯಾ ವಾಲ್ಕಾರ್ಸೆಲ್, ವಲಸಿಗರು ಹಾಗೂ ಮಯನ್ಮಾರ್ ಮತ್ತು ಸುಡಾನ್‌ನಂತಹ ಕಡೆಗಣಿಸಲ್ಪಟ್ಟಿರುವ ಮಾನವೀಯ ಬಿಕ್ಕಟ್ಟುಗಳ ಕುರಿತು ಜಗದ್ಗುರುಗಳ ಕಾಳಜಿಯು, ಸಂಘರ್ಷ ಮತ್ತು ಸ್ಥಳಾಂತರದ ಅಮಾಯಕ ಸಂತ್ರಸ್ತರನ್ನು ನೆನಪಿಸುವ ಶಕ್ತಿಯುತ ಸಂದೇಶವಾಗಿದ್ದು, ಪ್ರತಿಯೊಬ್ಬ ಮಾನವನ ಘನತೆ ಮತ್ತು ಐಕ್ಯತೆಯನ್ನು ಜಗತ್ತಿನ ಪ್ರತಿಕ್ರಿಯೆಯ ಕೇಂದ್ರಬಿಂದುವಾಗಿಸಬೇಕೆಂದು ಕರೆ ನೀಡುತ್ತದೆ ಎಂದು ಹೇಳಿದ್ದಾರೆ.

ಲೇಖಕರು: ಲಿಂಡಾ ಬೋರ್ಡೋನಿ

ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರು ಶೀಘ್ರದಲ್ಲೇ ಲಾಂಪೆದುಸಾಗೆ ನೀಡಲಿರುವ ಭೇಟಿ, 2013ರಲ್ಲಿ ಪೂಜ್ಯ ಜಗದ್ಗುರುಗಳಾದ ಫ್ರಾನ್ಸಿಸ್ ಆರಂಭಿಸಿದ ಮಾರ್ಗದ ಮುಂದುವರಿಕೆಯಾಗಿದೆ. ಅಂದು ಅವರ ಮೊದಲ ಪ್ರೇಷಿತೀಯ ಭೇಟಿ ಮಧ್ಯಧರಾ ಸಮುದ್ರದ ಪುಟ್ಟ ದ್ವೀಪವಾದ ಲಾಂಪೆದುಸಾವನ್ನು ವಲಸಿಗರು ಮತ್ತು ನಿರಾಶ್ರಿತರೊಂದಿಗೆ ಐಕ್ಯತೆಯ ಜಾಗತಿಕ ಸಂಕೇತವನ್ನಾಗಿ ಪರಿವರ್ತಿಸಿತ್ತು.

ಆ ಐತಿಹಾಸಿಕ ಭೇಟಿಯ ಸಂದರ್ಭದಲ್ಲಿ ಪೂಜ್ಯ ಜಗದ್ಗುರುಗಳಾದ ಫ್ರಾನ್ಸಿಸ್ ಅವರು "ನಿರಾಸಕ್ತಿಯ ಜಾಗತೀಕರಣ"ವನ್ನು ಖಂಡಿಸಿ, ಇಂದಿಗೂ ಪ್ರತಿಧ್ವನಿಸುತ್ತಿರುವ ಒಂದು ಪ್ರಶ್ನೆಯನ್ನು ಕೇಳಿದ್ದರು: "ನಿನ್ನ ಸಹೋದರ ಎಲ್ಲಿದ್ದಾನೆ?"

ಜೆಸುಯಿಟ್ ನಿರಾಶ್ರಿತರ ಸೇವಾ ಸಂಸ್ಥೆ (JRS) ಅಂತರರಾಷ್ಟ್ರೀಯ ವಕಾಲತ್ತು ಸಲಹೆಗಾರ್ತಿ ಅಮಾಯಾ ವಾಲ್ಕಾರ್ಸೆಲ್ ಅವರ ಪ್ರಕಾರ, ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರ ಲಾಂಪೆದುಸಾ ಭೇಟಿ ಅತ್ಯಂತ ಮಹತ್ವದ ಘಟ್ಟದಲ್ಲಿ ನಡೆಯುತ್ತಿದ್ದು, ಮಾನವ ವ್ಯಕ್ತಿಯನ್ನು ಕೇಂದ್ರದಲ್ಲಿರಿಸುವ ಸಂದೇಶವನ್ನು ಹೊತ್ತು ತರುತ್ತದೆ.

"ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರ ಹೃದಯದಲ್ಲಿ ನಿರಾಶ್ರಿತರು ಮತ್ತು ವಲಸಿಗರಿಗೆ ವಿಶೇಷ ಸ್ಥಾನವಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ" ಎಂದು ಅವರು ಹೇಳಿದ್ದಾರೆ.

ಬಡವರು, ದುರ್ಬಲರು ಮತ್ತು ಸಮಾಜದಿಂದ ಹೊರಗುಳಿಸಲ್ಪಟ್ಟವರನ್ನು ಶುಭಸಂದೇಶದ ವಿಶೇಷ ಸ್ವೀಕರ್ತರೆಂದು ಜಗದ್ಗುರುಗಳು ನಿರಂತರವಾಗಿ ಒತ್ತಿ ಹೇಳುತ್ತಿದ್ದು, ಲಾಂಪೆದುಸಾ ಭೇಟಿಯು ಆ ದೃಢನಂಬಿಕೆಯ ಸ್ಪಷ್ಟ ಅಭಿವ್ಯಕ್ತಿಯಾಗಿದೆ ಎಂದು ಅವರು ವಿವರಿಸಿದರು. ಇತ್ತೀಚೆಗೆ ಜಗದ್ಗುರುಗಳು 1951ರ ನಿರಾಶ್ರಿತರ ಸ್ಥಾನಮಾನ ಕುರಿತ ಒಪ್ಪಂದದ 75ನೇ ವಾರ್ಷಿಕೋತ್ಸವವನ್ನು ಸ್ಮರಿಸಿದ್ದನ್ನೂ ಅವರು ಉಲ್ಲೇಖಿಸಿದರು. ದ್ವಿತೀಯ ವಿಶ್ವಯುದ್ಧದ ನಂತರ ನಿರಾಶ್ರಿತರ ಹಕ್ಕುಗಳನ್ನು ರಕ್ಷಿಸಲು ಹಾಗೂ ತಮ್ಮ ಮನೆಗಳನ್ನು ತೊರೆಯಬೇಕಾದವರಿಗೆ ಕಾನೂನುಬದ್ಧ ರಕ್ಷಣೆ ಒದಗಿಸಲು ರೂಪಿಸಲಾದ ಈ ಅಂತರರಾಷ್ಟ್ರೀಯ ಒಪ್ಪಂದದ ಶಾಶ್ವತ ಮಹತ್ವದ ಬಗ್ಗೆ ಜಗದ್ಗುರುಗಳು ಚಿಂತನೆ ನಡೆಸಿದ್ದರು.

"ಈ ಮಹತ್ವದ ಅಂತರರಾಷ್ಟ್ರೀಯ ಒಪ್ಪಂದದ ರಚನೆಗೆ ಪ್ರೇರಣೆಯಾದ ಮನೋಭಾವವು ಇಂದಿಗೂ ರಾಷ್ಟ್ರಗಳ ಜವಾಬ್ದಾರಿಯುತ ನಾಯಕರ ಮನಸ್ಸುಗಳನ್ನು ಬೆಳಗಿಸಲಿ ಎಂದು ನಾನು ಆಶಿಸುತ್ತೇನೆ" ಎಂದು ಅವರು ಜೂನ್ 21ರಂದು ನಡೆದ ದೇವದೂತರ ಪ್ರಾರ್ಥನೆಯ ವೇಳೆ ಹೇಳಿದ್ದರು.

ಪೂಜ್ಯ ಜಗದ್ಗುರುಗಳಾದ ಫ್ರಾನ್ಸಿಸ್ ಅವರ ಹೆಜ್ಜೆಗುರುತುಗಳಲ್ಲಿ

ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರ ಲಾಂಪೆದುಸಾ ಭೇಟಿ, ಪೂಜ್ಯ ಜಗದ್ಗುರುಗಳಾದ ಫ್ರಾನ್ಸಿಸ್ ಅವರ ಮೊದಲ ಲಾಂಪೆದುಸಾ ಭೇಟಿಯನ್ನು ಅನಿವಾರ್ಯವಾಗಿ ನೆನಪಿಸುತ್ತದೆ. ಆ ಸಂದರ್ಭದಲ್ಲಿ ಅವರು ಜಗತ್ತಿನ ಮನಸ್ಸಾಕ್ಷಿಯನ್ನು ಎಚ್ಚರಿಸಿ, ತಮ್ಮ ತಾಯ್ನಾಡು ತೊರೆಯಬೇಕಾದವರ ದುಃಖದ ಬಗ್ಗೆ ನಿರಾಸಕ್ತರಾಗದಂತೆ ಮಾನವಕುಲಕ್ಕೆ ಕರೆ ನೀಡಿದ್ದರು.

ವಾಲ್ಕಾರ್ಸೆಲ್ ಅವರ ಪ್ರಕಾರ, ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರು ತಮ್ಮ ಪಾಲನಾ ಸೇವೆ ಮತ್ತು ಸ್ಥಳಾಂತರಗೊಂಡ ಜನರ ಪರವಾಗಿ ಮಾಡುತ್ತಿರುವ ನಿರಂತರ ಮನವಿಗಳ ಮೂಲಕ ಅದೇ ಧ್ಯೇಯವನ್ನು ಮುಂದುವರಿಸುತ್ತಿದ್ದಾರೆ. ಲಕ್ಷಾಂತರ ವಲಸಿಗರು ಮತ್ತು ನಿರಾಶ್ರಿತರ ಬದುಕಿನಲ್ಲಿ ಅಡಗಿರುವ ಮಾನವೀಯ ನೋವನ್ನು ಗುರುತಿಸುವಂತೆ ಅವರು ಪ್ರತಿಯೊಬ್ಬರಿಗೂ ಸವಾಲು ಹಾಕುತ್ತಿದ್ದಾರೆ. ಪೂಜ್ಯ ಜಗದ್ಗುರುಗಳಾದ ಫ್ರಾನ್ಸಿಸ್ ಅವರಂತೆ, ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರೂ ವಲಸೆಯ ಕುರಿತು ನಾಲ್ಕು ಮೂಲತತ್ವಗಳಾದ ಸ್ವಾಗತ, ರಕ್ಷಣೆ, ಅಭಿವೃದ್ಧಿ ಮತ್ತು ಸಮನ್ವಯಗಳನ್ನು ಮುಂದುವರಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.

"ವಲಸೆ ಎನ್ನುವುದು ಕೇವಲ ಒಂದು ವಿದ್ಯಮಾನವಲ್ಲ. ಅದು ಹೆಸರುಗಳು, ಮುಖಗಳು, ಕಥೆಗಳು ಮತ್ತು ಕುಟುಂಬಗಳನ್ನು ಹೊಂದಿರುವ ಮನುಷ್ಯರ ಜೀವನವಾಗಿದೆ. ನಾವೆಲ್ಲರೂ ಒಂದಲ್ಲೊಂದು ದಿನ ವಲಸಿಗರು ಅಥವಾ ನಿರಾಶ್ರಿತರಾಗುವ ಸಾಧ್ಯತೆ ಇದೆ" ಎಂದು ಅವರು ಹೇಳಿದರು.

ಗಡಿಗಳಲ್ಲಿ ನಡೆಯುತ್ತಿರುವ ತಪ್ಪಿಸಬಹುದಾದ ಸಾವುಗಳ ಬಗ್ಗೆ ಜವಾಬ್ದಾರಿ ಹೊರುವಂತೆ ಹಾಗೂ ದುಃಖಿತರೊಂದಿಗೆ ಅಳುವ ಸಾಮರ್ಥ್ಯವನ್ನು ಮರುಪಡೆಯುವಂತೆ ಜಗದ್ಗುರುಗಳ ಸಂದೇಶ ಕರೆ ನೀಡುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.

ಮರೆತುಹೋಗಿರುವ ಸಂಘರ್ಷಗಳಿಗೆ ಧ್ವನಿ

ತಮ್ಮ ಪದವಿಯ ಪ್ರಮುಖ ವಿಷಯವಾಗಿ ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರು ಶಾಂತಿಗೆ ನೀಡುತ್ತಿರುವ ಆದ್ಯತೆಯನ್ನೂ ಹಾಗೂ ಅದು ಬಲವಂತದ ಸ್ಥಳಾಂತರದ ಮೂಲ ಕಾರಣಗಳೊಂದಿಗೆ ಹೊಂದಿರುವ ನೇರ ಸಂಬಂಧವನ್ನೂ ಪ್ರಸ್ತಾಪಿಸಿರುವುದನ್ನೂ ವಾಲ್ಕಾರ್ಸೆಲ್ ಉಲ್ಲೇಖಿಸಿದರು. 

ಮಯನ್ಮಾರ್ ಮತ್ತು ಸುಡಾನ್‌ನಂತಹ ದೇಶಗಳನ್ನು ತಮ್ಮ ಪ್ರಾರ್ಥನೆಗಳಲ್ಲಿ ನಿರಂತರವಾಗಿ ಸ್ಮರಿಸುವ ಮೂಲಕ, ಜಾಗತಿಕ ಸುದ್ದಿಗಳಿಂದ ಮರೆಯಾಗಿರುವ ಮಾನವೀಯ ಬಿಕ್ಕಟ್ಟುಗಳತ್ತ ಜಗದ್ಗುರುಗಳು ಜಗತ್ತಿನ ಗಮನ ಸೆಳೆಯುತ್ತಿದ್ದಾರೆ, ಮರೆಯಲಾಗದ ಅಮಾಯಕ ಸಂತ್ರಸ್ತರ ಸಂಕಷ್ಟವನ್ನು ನೆನಪಿಸುತ್ತಿದ್ದಾರೆ ಎಂದು ಹೇಳಿದರು.

ಜೆಸುಯಿಟ್ ನಿರಾಶ್ರಿತರ ಸೇವಾ ಸಂಸ್ಥೆಯ ದೃಷ್ಟಿಯಲ್ಲಿ, ಹಿಂಸಾಚಾರ, ಕಿರುಕುಳ ಮತ್ತು ಅಸ್ಥಿರತೆಯ ಮೂಲ ಕಾರಣಗಳನ್ನು ಪರಿಹರಿಸುವುದು ವಲಸೆಯ ಸಮಸ್ಯೆಗೆ ಅರ್ಥಪೂರ್ಣ ಪ್ರತಿಕ್ರಿಯೆಯ ಅವಿಭಾಜ್ಯ ಅಂಗವಾಗಿದೆ.

ಗಡಿಗಳನ್ನು ಮೀರಿ ನೋಡುವ ದೃಷ್ಟಿಕೋನ

ಜೆಸುಯಿಟ್ ನಿರಾಶ್ರಿತರ ಸೇವಾ ಸಂಸ್ಥೆ (JRS) ಲಾಂಪೆದುಸಾದಲ್ಲಿ ನೇರವಾಗಿ ಕಾರ್ಯನಿರ್ವಹಿಸುತ್ತಿಲ್ಲವಾದರೂ, ಅದರ ಸಿಸಿಲಿಯ ತಂಡಗಳು ಆ ದ್ವೀಪದ ಮೂಲಕ ಆಗಮಿಸಿರುವ ಅನೇಕ ಜನರೊಂದಿಗೆ ನಿರಂತರವಾಗಿ ಸಹಯಾತ್ರೆ ನಡೆಸುತ್ತಿವೆ. ಪಲೆರ್ಮೊ ಮತ್ತು ಕಟಾನಿಯಾದಲ್ಲಿ, ಆಶ್ರಯ ಅರ್ಜಿಗಳಿಗೆ ಕಾನೂನು ನೆರವು, ಆರೋಗ್ಯ ಸೇವೆ, ಇಟಾಲಿಯನ್ ಭಾಷಾ ತರಬೇತಿ, ಉದ್ಯೋಗಾವಕಾಶಗಳ ಸಂಪರ್ಕ, ಶಾಲೆಯ ನಂತರದ ಚಟುವಟಿಕೆಗಳು, ಬಟ್ಟೆಗಳ ವಿತರಣೆ, ಆಲಿಸುವಿಕೆ ಮತ್ತು ಮಾನಸಿಕ ಬೆಂಬಲ ಸೇವೆಗಳು ಹಾಗೂ ಕಾರಾಗೃಹದ ಪಾಲನಾ ಸೇವೆಯನ್ನು ಈ ಸಂಸ್ಥೆ ಒದಗಿಸುತ್ತಿದೆ. ವಾಲ್ಕಾರ್ಸೆಲ್ ಅವರ ಪ್ರಕಾರ, ವಲಸೆ ನೀತಿಗಳು ಅಂತರರಾಷ್ಟ್ರೀಯ ನಿರಾಶ್ರಿತರ ಕಾನೂನು, ಯುರೋಪಿನ ನಿರಾಶ್ರಿತರ ಕಾನೂನು ಹಾಗೂ ಯುರೋಪಿಯನ್ ಒಕ್ಕೂಟ ಮಾನ್ಯಗೊಳಿಸಿರುವ ಮಾನವ ಹಕ್ಕುಗಳ ಬದ್ಧತೆಗಳಿಗೆ ಅನುಗುಣವಾಗಿರಬೇಕು. ಜೀವ ಅಥವಾ ಸ್ವಾತಂತ್ರ್ಯಕ್ಕೆ ಅಪಾಯವಿರುವ ಸ್ಥಳಗಳಿಗೆ ಜನರನ್ನು ಹಿಂದಿರುಗಿಸುವುದನ್ನು ನಿಷೇಧಿಸುವ 'ಹಿಂದಕ್ಕೆ ಹಿಂತಿರುಗಿಸದಿರುವ ತತ್ವ' (Non-refoulement) ದುರ್ಬಲಗೊಳ್ಳುವಂತೆ ಮಾಡುವ ಗಡಿ ನಿಯಂತ್ರಣದ ಹೊರಗುತ್ತಿಗೆ ಹಾಗೂ ಗಡೀಪಾರು ನೀತಿಗಳ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು.

"ವಲಸಿಗರು ಮತ್ತು ನಿರಾಶ್ರಿತರು ತಮ್ಮ ದೇಶಗಳನ್ನು ತೊರೆಯಲು ಕಾರಣವಾದ ಮೂಲ ಸಂಗತಿಗಳತ್ತ ಮರಳುವುದು ಅತ್ಯಂತ ಮುಖ್ಯ. ನಾವು ಆ ಮೂಲ ಕಾರಣಗಳನ್ನು ಆಳವಾಗಿ ಅರ್ಥಮಾಡಿಕೊಳ್ಳಬೇಕು. ಮುಖ್ಯವಾಗಿ, ಪ್ರತಿಯೊಬ್ಬ ವ್ಯಕ್ತಿಯನ್ನೂ ಗೌರವದಿಂದ ಕಾಣಬೇಕು."  ಕೇವಲ ವಲಸಿಗರು ಎಂಬ ಕಾರಣಕ್ಕೆ ಅವರನ್ನು ಸಾಮೂಹಿಕವಾಗಿ ಹೊರಹಾಕುವ ವಲಸೆ ನೀತಿಗಳ ವಿರುದ್ಧ ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರು ಇತ್ತೀಚೆಗೆ ವ್ಯಕ್ತಪಡಿಸಿದ್ದ ಟೀಕೆಯನ್ನೂ ಅವರು ನೆನಪಿಸಿ, ಪ್ರತಿಯೊಬ್ಬ ವ್ಯಕ್ತಿಯ ಪರಿಸ್ಥಿತಿಯನ್ನು ಪ್ರತ್ಯೇಕವಾಗಿ ಪರಿಗಣಿಸಿ, ಘನತೆ ಮತ್ತು ಗೌರವದಿಂದ ನಡೆಸಿಕೊಳ್ಳಬೇಕೆಂದು ಜಗದ್ಗುರುಗಳು ಪದೇ ಪದೇ ಒತ್ತಿ ಹೇಳಿದ್ದಾರೆ ಎಂದು  ತಿಳಿಸಿದರು.

ವಲಸಿಗರು ತಮ್ಮ ಹೊಸ ಸಮಾಜದ ಭಾಷೆ, ಕಾನೂನುಗಳು ಮತ್ತು ಸಂಸ್ಕೃತಿಯನ್ನು ಕಲಿಯುವಂತೆಯೇ, ಆತಿಥ್ಯ ನೀಡುವ ಸಮಾಜವೂ ಅವರ ಸ್ವಂತ ಗುರುತು ಮತ್ತು ಸಂಸ್ಕೃತಿಯನ್ನು ಅಳಿಸಿಹಾಕುವಂತೆ ಒತ್ತಾಯಿಸದೆ ಅವರನ್ನು ಸ್ವಾಗತಿಸಬೇಕು. ಸಮನ್ವಯವು ಪರಸ್ಪರ ಜವಾಬ್ದಾರಿಯ ಪ್ರಕ್ರಿಯೆಯಾಗಿರಬೇಕು ಎಂದು  ಹೇಳಿದರು.

ವಲಸೆಯ ಮಾನವೀಯ ಮುಖವನ್ನು ಮರುಸ್ಥಾಪಿಸುವುದು

ವಲಸೆಯ ಕುರಿತ ಸಾರ್ವಜನಿಕ ಚರ್ಚೆಗಳಲ್ಲಿ ಮಾನವ ಘನತೆಯನ್ನು ಮರುಸ್ಥಾಪಿಸುವುದರ ಮೇಲಿನ ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರ ಒತ್ತಾಯವು ಅವರ ಅತ್ಯಂತ ಮಹತ್ವದ ಕೊಡುಗೆಗಳಲ್ಲಿ ಒಂದಾಗಿದೆ ಎಂದು ವಾಲ್ಕಾರ್ಸೆಲ್ ಅಭಿಪ್ರಾಯಪಟ್ಟರು. "ಮಾನವ ವ್ಯಕ್ತಿಯ ಘನತೆ ಮತ್ತು ಸೌಂದರ್ಯ"ವೇ ಕೇಂದ್ರಬಿಂದುವಾಗಿರಬೇಕು, ನಿರಾಶ್ರಿತರನ್ನು ಕೇವಲ ಅಂಕಿಅಂಶಗಳು ಅಥವಾ ಗುರುತುಪಟ್ಟಿಗಳಾಗಿ ಅಲ್ಲ, ವಿಶಿಷ್ಟ ಜೀವನಕಥೆಗಳನ್ನು ಹೊಂದಿರುವ ವ್ಯಕ್ತಿಗಳಾಗಿ ನೋಡುವ ಜಗದ್ಗುರುಗಳ ದೃಷ್ಟಿಕೋನವನ್ನು ಅವರು ಉಲ್ಲೇಖಿಸಿದರು.

ವೈಯಕ್ತಿಕ ಸಾಕ್ಷ್ಯಗಳನ್ನು ಆಲಿಸುವುದು ಪೂರ್ವಗ್ರಹಗಳನ್ನು ನಿವಾರಿಸಲು ಹಾಗೂ ಪರಾನುಭೂತಿಯನ್ನು ಬೆಳೆಸಲು ಸಹಾಯಕವಾಗುತ್ತದೆ ಎಂದು ಅವರು ನಂಬಿದ್ದಾರೆ. ಅನೇಕ ನಿರಾಶ್ರಿತರು ತಾವು ಎಲ್ಲರಂತೆ ಸಮಾನ ಮಾನವರು ಎಂಬ ಗುರುತನ್ನು ಮಾತ್ರ ಬಯಸುತ್ತಾರೆ. ಬಲವಂತವಾಗಿ ತಾಯ್ನಾಡು ತೊರೆದವರ ಮಾತುಗಳನ್ನು ನೆನಪಿಸಿಕೊಂಡ ಅವರು, "ನಾನೂ ನಿಮ್ಮಂತೆಯೇ ಒಬ್ಬ ಮಾನವ" ಎಂದು ಅವರು ಹೇಳುವುದನ್ನು ಕೇಳಿದ್ದೇನೆ ಎಂದರು.

ಇನ್ನೂ ಕೆಲವರು, "ನನಗೆ ಬೇರೆ ಯಾವುದೇ ಆಯ್ಕೆಯಿರಲಿಲ್ಲ; ನಾನು ತಾಯ್ನಾಡು ಬಿಟ್ಟು ಓಡಿಹೋಗಲೇಬೇಕಾಯಿತು" ಎಂದು ತಮ್ಮ ನೋವನ್ನು ವ್ಯಕ್ತಪಡಿಸುತ್ತಾರೆ ಎಂದು  ಹೇಳಿದರು.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

03 ಜುಲೈ 2026, 14:25