ಮುಗುಚಿದ ದೋಣಿಯ ಮೀರಿ : ಜಾಗತಿಕ ವಲಸಿಗರ ವಿದ್ಯಮಾನ ಪರಿವರ್ತನೆ
ಲೇಖಕರು: ವಂ. ಗುರು ಜಾನ್ ಲೈಡನ್, OSA*
ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರ ಇದುವರೆಗಿನ ಅಲ್ಪಾವಧಿಯ ಪೋಪ್ ಸೇವೆಯನ್ನು ಗಮನಿಸಿದಾಗ, ಅವರು "ಕಾಲದ ಚಿಹ್ನೆಗಳನ್ನು" ಓದುವ ಮೂಲಕ ಗುರುತಿಸಿರುವ ಕೆಲವು ಪ್ರಮುಖ ಕಾಳಜಿಗಳನ್ನು ನಾವು ಸುಲಭವಾಗಿ ಕಾಣಬಹುದು. ಅದೇ ಸಮಯದಲ್ಲಿ, ಆ ಸವಾಲುಗಳಿಗೆ ಪ್ರತಿಕ್ರಿಯಿಸುವಲ್ಲಿ ದೇವರ ಜ್ಞಾನವನ್ನು ವಿವೇಚಿಸಲು ಧರ್ಮಸಭೆಗೆ ಅವರು ನೆರವಾಗುತ್ತಿದ್ದಾರೆ.
ಅವುಗಳಲ್ಲಿ ಪ್ರಮುಖವಾದುದೆಂದರೆ ವಲಸಿಗರು ಮತ್ತು ನಿರಾಶ್ರಿತರ ಬಿಕ್ಕಟ್ಟು. ಇದು ಯುರೋಪ್ ಮತ್ತು ಉತ್ತರ ಅಮೆರಿಕದ ಅನೇಕ ರಾಷ್ಟ್ರಗಳಲ್ಲಿ ಆಗಾಗ ರಾಜಕೀಯ ವಿವಾದದ ಕೇಂದ್ರಬಿಂದುವಾಗಿ ಪರಿಣಮಿಸಿದೆ. ಈ ಜಾಗತಿಕ ವಿದ್ಯಮಾನಕ್ಕೆ ಪ್ರತಿಕ್ರಿಯಿಸುವ ಕುರಿತು ಇಂದಿನ ದಿನಗಳಲ್ಲಿ ಹೆಚ್ಚೆಚ್ಚು ಸಂಕುಚಿತವಾಗುತ್ತಿರುವ ದೃಷ್ಟಿಕೋನದ ವಿರುದ್ಧ ಪೋಪ್ ಅವರ ಸಂದೇಶವು ನೇರವಾದ ವಿಮರ್ಶೆಯಾಗಿದೆ.
ಅವರು ಇತ್ತೀಚೆಗೆ ಕ್ಯಾನರಿ ದ್ವೀಪಗಳಿಗೆ ನೀಡಿದ ಭೇಟಿ, ಜುಲೈ 4ರಂದು ಲಾಂಪೆಡುಸಾಗೆ ನೀಡಲಿರುವ ಭೇಟಿ ಹಾಗೂ ಇತ್ತೀಚೆಗೆ ಮದರ್ ಕಬ್ರಿನಿ ಅವರ ಜನ್ಮಸ್ಥಳಕ್ಕೆ ನೀಡಿದ ಭೇಟಿ—ಇವೆಲ್ಲವೂ ಧರ್ಮಸಭೆಗೆ ಶುಭಸಂದೇಶವು ನೀಡುವ ಧರ್ಮಪ್ರಚಾರದ ಕರೆಯ ಕುರಿತ ಅವರ ದೃಷ್ಟಿಯಲ್ಲಿ ಈ ವಿಷಯಕ್ಕೆ ಇರುವ ಮಹತ್ವವನ್ನು ಸ್ಪಷ್ಟಪಡಿಸುತ್ತವೆ.
ವಿಶೇಷವಾಗಿ ಕ್ಯಾನರಿ ದ್ವೀಪಗಳಿಗೆ ನೀಡಿದ ಅವರ ಭೇಟಿಯೇ, ವಲಸಿಗರು ಮತ್ತು ನಿರಾಶ್ರಿತರ ಕುರಿತ ಸಾರ್ವಜನಿಕ ಚರ್ಚೆಯಲ್ಲಿ ರೂಢಿಯಾಗಿರುವ ನಿಲುವುಗಳನ್ನು ಅವರು ಪ್ರಶ್ನಿಸುತ್ತಿರುವುದರ ಅತ್ಯಂತ ಸ್ಪಷ್ಟ ಸಂಕೇತವಾಗಿದೆ.
ಜಗದ್ಗುರುಗಳು ಹೀಗೆ ಹೇಳಿದರು: " ಒಂದು ನಗರದಲ್ಲಿ ಆಗಮನದ ನಂತರ ಸಂಭವಿಸುವ ಧ್ವನಿಯಿಲ್ಲದೆ, ಸಂಬಂಧಗಳಿಲ್ಲದೆ, ಉದ್ಯೋಗವಿಲ್ಲದೆ, ಭದ್ರತೆಯ ಭಾವನೆಯಿಲ್ಲದೆ ಏಕಾಂಗಿಯಾಗಿ ಬಿಟ್ಟುಬಿಡುವುದು ಹಾಗೂ ಅವರ ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಳ್ಳುವವರ ಕೈಸಿಕ್ಕುವಂತೆ ಮಾಡುವ ಮೌನದ ಹಡಗು ದುರಂತವನ್ನು ನಾವು ಎದುರಿಸಬೇಕು." (ಟೆನೆರಿಫೆಯಲ್ಲಿ ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ)
ಅಗತ್ಯಗಳು ಉದ್ಭವಿಸಿದಾಗ ಅವುಗಳನ್ನು ತಾತ್ಕಾಲಿಕವಾಗಿ ನಿರ್ವಹಿಸುವುದರಲ್ಲೇ ನಮ್ಮ ಪ್ರತಿಕ್ರಿಯೆಯನ್ನು ಸೀಮಿತಗೊಳಿಸುವ ಪ್ರಲೋಭನೆ ಸಹಜವಾಗಿದೆ. ಆದರೆ, ನಾವು ಕೇವಲ ತಾತ್ಕಾಲಿಕ ಪರಿಹಾರಗಳಿಗೆ ಸೀಮಿತರಾಗಲು ಸಾಧ್ಯವಿಲ್ಲ. ಕರುಣೆಯಿಂದ ಕೂಡಿದ ವ್ಯವಸ್ಥಾತ್ಮಕ ಪರಿವರ್ತನೆಯ ಅಗತ್ಯವಿದೆ. ವಲಸೆಗೆ ಕಾರಣವಾಗಿರುವ ಮೂಲ ಕಾರಣಗಳನ್ನು ಪರಿಶೀಲಿಸಿ ಅವುಗಳನ್ನು ನಿವಾರಿಸಲು ನಾವು ಪ್ರಯತ್ನಿಸಬೇಕು. ನಂತರ, ಆಗಮಿಸುವವರ ಮುಖಗಳಲ್ಲಿ ಶ್ರಮಿಸುವ ಪ್ರಭು ಯೇಸು ಕ್ರಿಸ್ತರ ಮುಖವೇ ಪ್ರತಿಫಲಿಸುತ್ತಿರುವುದನ್ನು ಅರಿತು, ಅವರನ್ನು ಸಹಾನುಭೂತಿಯಿಂದ ಸ್ವೀಕರಿಸಬೇಕು.
ನಮ್ಮ ಮುಂದೆ ಕಾಣಿಸುವ ವಲಸಿಗರ ಚಿತ್ರಗಳ ಹಿಂದೆ ಪರಿಹರಿಸಬೇಕಾದ ಸಂಕೀರ್ಣ ಕಾರಣಗಳಿವೆ. ವಲಸಿಗರ ವಿರುದ್ಧ ಜನಪ್ರಿಯವಾಗಿರುವ ರಾಜಕೀಯ ಚರ್ಚೆಗಳ ಕೆಳಗೆ ಅಡಗಿರುವ ಭಯವನ್ನು ನಾವು ಆಳವಾಗಿ ಅರಿಯಬೇಕು. ಏಕೆಂದರೆ ಅದೇ ಭಯವು ನಮ್ಮನ್ನು ನಮ್ಮ ವಿಶ್ವಾಸ ಕೇಳುವ ಪ್ರತಿಕ್ರಿಯೆಯಿಂದ ದೂರ ಕೊಂಡೊಯ್ಯುತ್ತದೆ.
ಜಗದ್ಗುರು ಫ್ರಾನ್ಸಿಸ್ ಅವರು "ನಿರಾಸಕ್ತಿಯ ಜಾಗತೀಕರಣ" ಕುರಿತು ಮಾತನಾಡಿದರೆ, ಜಗದ್ಗುರು ಹದಿನಾಲ್ಕನೆ ಲಿಯೋ "ಅಸಹಾಯಕತೆಯ ಜಾಗತೀಕರಣ" ಕುರಿತು ಮಾತನಾಡುತ್ತಾರೆ. ಇವೆರಡೂ ಒಂದೇ ನಾಣ್ಯದ ಎರಡು ಮುಖಗಳಾಗಿದ್ದು, ಸಂವಾದ, ಪರಿಶೀಲನೆ, ಐಕ್ಯತೆ ಮತ್ತು ಸಹಾನುಭೂತಿಗೆ ನಮ್ಮನ್ನು ಕರೆಯುತ್ತವೆ. ಆಗ ಮಾತ್ರ ನಾವು ದೇವರ ಒಂದೇ ಕುಟುಂಬವಾಗಿ ಪ್ರತಿಕ್ರಿಯಿಸಲು ಸಾಧ್ಯವಾಗುತ್ತದೆ.
ಕ್ಯಾನರಿ ದ್ವೀಪಗಳ ಟೆನೆರಿಫೆಗೆ ನೀಡಿದ ಭೇಟಿಯ ವೇಳೆ ಜಗದ್ಗುರುಗಳು ಶಕ್ತಿಯುತವಾಗಿ ನೆನಪಿಸಿದಂತೆ: "ಮಾನವನ ಅಂತಃಕರಣ, ಅದರಲ್ಲೂ ವಿಶೇಷವಾಗಿ ಕ್ರೈಸ್ತ ಅಂತಃಕರಣವು, ಈ ಸಮುದ್ರದ ಸಮಾಧಿಗಳ ಎದುರು ಎಂದಿಗೂ ನಿರಾಸಕ್ತವಾಗಿರಲು ಸಾಧ್ಯವಿಲ್ಲ. ಈ ಮಾರ್ಗಗಳಲ್ಲಿ ಕಳೆದುಹೋಗುವ ಪ್ರತಿಯೊಂದು ಜೀವವೂ ಇಡೀ ಮಾನವಕುಲದ ವೈಫಲ್ಯವಾಗಿದೆ." (ಟೆನೆರಿಫೆಯಲ್ಲಿ ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ)
ತಮ್ಮ "ಭವ್ಯ ಮಾನವೀಯತೆ” (Magnifica Humanitas) ಪರಿಪತ್ರದಲ್ಲಿ ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಈ ಪರಿವರ್ತನೆಗೆ ಅಗತ್ಯವಾದ ನೈತಿಕ ದಿಕ್ಸೂಚಿಯನ್ನು ನೀಡುತ್ತಾರೆ. ಅವರು ಹೀಗೆ ಹೇಳುತ್ತಾರೆ: "ಇಂದಿನ ಸಾಮಾಜಿಕ ನ್ಯಾಯವನ್ನು ಅಳೆಯುವ ನಿಜವಾದ ಮಾನದಂಡವೆಂದರೆ ವಲಸಿಗರು, ನಿರಾಶ್ರಿತರು ಹಾಗೂ ಬಡತನ, ಹಿಂಸಾಚಾರ, ಹವಾಮಾನ ಬದಲಾವಣೆ ಮತ್ತು ಪರಿಸರ ವಿಕೋಪಗಳಿಂದ ತಮ್ಮ ನೆಲೆಯನ್ನು ತೊರೆಯಬೇಕಾದವರನ್ನು ನಾವು ಹೇಗೆ ನಡೆಸಿಕೊಳ್ಳುತ್ತೇವೆ ಎಂಬುದಾಗಿದೆ. ಒಂದು ಸಮಾಜವು ಅವರನ್ನು ಹೇಗೆ ನಡೆಸಿಕೊಳ್ಳುತ್ತದೆ ಎಂಬುದು ಅದರ ನ್ಯಾಯಪ್ರಜ್ಞೆಯು ಭಯದಿಂದ ಪ್ರೇರಿತವಾಗಿದೆಯೇ ಅಥವಾ ಭ್ರಾತೃತ್ವದ ಮನೋಭಾವದಿಂದ ಪ್ರೇರಿತವಾಗಿದೆಯೇ ಎಂಬುದನ್ನು ಬಹಿರಂಗಪಡಿಸುತ್ತದೆ." (Magnifica Humanitas)
ಮುಂದೆ ಅವರು ನಮಗೆ ಹೀಗೆ ಕರೆ ನೀಡುತ್ತಾರೆ: ಗಾಯಗೊಂಡಿರುವ ಈ ಲೋಕವನ್ನು ಮರುನಿರ್ಮಿಸುವುದೆಂದರೆ, "ವೈವಿಧ್ಯಮಯ ಧ್ವನಿಗಳು ಮತ್ತು ದೃಷ್ಟಿಕೋನಗಳ ನಡುವೆ... ಒಟ್ಟಾಗಿ ನಿರ್ಮಿಸುವ, ವೈವಿಧ್ಯತೆಯನ್ನು ಸಂಪನ್ಮೂಲವನ್ನಾಗಿ ಪರಿವರ್ತಿಸುವ ಹಾಗೂ ಆಲಿಸುವಿಕೆ ಮತ್ತು ಸಂವಾದವನ್ನು ನ್ಯಾಯ ಮತ್ತು ಭ್ರಾತೃತ್ವ ಬೆಳೆಯುವ ಸಾಮಾನ್ಯ ನೆಲೆಯನ್ನಾಗಿ ರೂಪಿಸುವ ಪ್ರಕಾಶಮಾನವಾದ ಸಾಧ್ಯತೆಯಿದೆ" ಎಂಬುದನ್ನು ಗುರುತಿಸುವುದಾಗಿದೆ. (Magnifica Humanitas, ಸಂ. 10)
ಜಗದ್ಗುರುಗಳು ಹೇಳಿರುವಂತೆ, ಶೈಕ್ಷಣಿಕ ಸಂಸ್ಥೆಗಳು "ಭರವಸೆಯ ನಕ್ಷತ್ರಪುಂಜ”ವಾಗಿ ಒಂದಾಗಬೇಕೆಂಬ ನೈತಿಕ ಹೊಣೆಗಾರಿಕೆಯನ್ನು ಹೊಂದಿವೆ ಎಂಬ ದೃಢ ನಂಬಿಕೆಯಿಂದ, ವಲಸೆಯ ಮೂಲ ಕಾರಣಗಳನ್ನು ಎದುರಿಸಲು ಹಾಗೂ ವಲಸಿಗರು ತಮ್ಮ ಹೊಸ ನೆಲೆಗಳಲ್ಲಿ ಹೇಗೆ ಉತ್ತಮವಾಗಿ ಒಳಗೊಳ್ಳಬಹುದು ಎಂಬುದರ ಕುರಿತು ನಾವು ಒಟ್ಟಾಗಿ ಚಿಂತಿಸಬೇಕಾಗಿದೆ. ನೋವು ಅನುಭವಿಸುತ್ತಿರುವವರ "ಮೊರೆ" ನಮ್ಮನ್ನು ಕ್ರಿಯಾಶೀಲರನ್ನಾಗಿಸಬೇಕು.
ಈ ದೃಢ ನಂಬಿಕೆಯಿಂದ ಪ್ರೇರಿತರಾಗಿ, ಜಗದ್ಗುರುಗಳ ಭೇಟಿಯ ನಂತರ ನಾವು ತಕ್ಷಣವೇ ಟೆನೆರಿಫೆಯ ಯೂನಿವರ್ಸಿದಾದ್ ದೆ ಲಾ ಲಾಗುನಾ ವಿಶ್ವವಿದ್ಯಾಲಯದಲ್ಲಿ "ನಮ್ಮ ಸಾಮಾನ್ಯ ಮನೆಯಲ್ಲಿ ನಿರಾಶ್ರಿತರು ಮತ್ತು ವಲಸಿಗರು" ಎಂಬ ವಿಚಾರ ಸಂಕಿರಣಕ್ಕಾಗಿ ಸೇರಿದೆವು.
"ನಾವು ಕೇವಲ ಉಪನ್ಯಾಸಗಳನ್ನು ಆಲಿಸಲು ಸೇರಲಿಲ್ಲ. ಬದಲಾಗಿ, ಶಿಕ್ಷಣ, ಸಂಶೋಧನೆ, ಹಕ್ಕು ಪ್ರತಿಪಾದನೆ ಹಾಗೂ ಸೇವೆ ಎಂಬ ನಾಲ್ಕು ಪ್ರಮುಖ ಕ್ಷೇತ್ರಗಳಲ್ಲಿ ಸ್ಪಷ್ಟ ಕಾರ್ಯಯೋಜನೆಗಳನ್ನು ರೂಪಿಸುವ ಉದ್ದೇಶದಿಂದ ಶಿಕ್ಷಣತಜ್ಞರು, ಸರ್ಕಾರೇತರ ಸಂಸ್ಥೆಗಳ ನಾಯಕರು ಹಾಗೂ ವಲಸಿಗರನ್ನು ಒಟ್ಟುಗೂಡಿಸಿದೆವು. ಜಗದ್ಗುರುಗಳ ಈ ಸಂದೇಶಕ್ಕೆ ಪ್ರತಿಕ್ರಿಯೆಯಾಗಿ ಇನ್ನಷ್ಟು ಸಮಗ್ರವಾದ ಕಾರ್ಯವಿಧಾನವನ್ನು ರೂಪಿಸುವುದೇ ನಮ್ಮ ಉದ್ದೇಶವಾಗಿತ್ತು: 'ಏಕೀಕರಣವೆಂದರೆ ಎರಡನೇ ಹಡಗು ದುರಂತವನ್ನು ತಡೆಯುವುದು. ಗಾಯಗೊಂಡು ಬಂದವರು ತಮ್ಮ ನೋವಿನಲ್ಲಿಯೇ ಶಾಶ್ವತವಾಗಿ ಸಿಲುಕಿಕೊಳ್ಳದೆ, ಮತ್ತೆ ಎದ್ದು ನಿಲ್ಲಲು, ತಮ್ಮ ಪ್ರತಿಭೆಗಳನ್ನು ಗುರುತಿಸಿ ಸಮುದಾಯಕ್ಕೆ ಸಮರ್ಪಿಸಲು ನೆರವಾಗುವುದೇ ಏಕೀಕರಣವಾಗಿದೆ.'" (ಟೆನೆರಿಫೆಯಲ್ಲಿ ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ)
ಆದ್ದರಿಂದ, ಮತ್ತೊಂದು ಸಂದರ್ಭದಲ್ಲಿ ಜಗದ್ಗುರುಗಳು ಹೇಳಿದಂತೆ "ಭರವಸೆಯ ಸಂದೇಶವಾಹಕರು" ಆಗಿರುವ ವಲಸಿಗರ ಮೊರೆಯನ್ನು ಆಲಿಸುವುದರೊಂದಿಗೆ ನಾವು ನಮ್ಮ ಕಾರ್ಯವನ್ನು ಆರಂಭಿಸಿದೆವು. ಈ ಭರವಸೆಗೆ ಮಾನವೀಯ ಮುಖವಿದೆ.
ಕೇವಲ 12ನೇ ವಯಸ್ಸಿನಲ್ಲಿ ಮರುಭೂಮಿ ಮತ್ತು ಸಮುದ್ರವನ್ನು ದಾಟುತ್ತಾ ಎಂಟು ರಾಷ್ಟ್ರಗಳ ಮೂಲಕ ಐದು ವರ್ಷಗಳ ಕಾಲ ಅತ್ಯಂತ ಕಠಿಣ ಪ್ರಯಾಣ ನಡೆಸಿ ಬದುಕುಳಿದ ಔಸ್ಮಾನ್ ಉಮರ್ ಅವರಂತಹವರ ಸಾಕ್ಷ್ಯಗಳ ಮೂಲಕ ಕ್ಯಾನರಿ ದ್ವೀಪಗಳಲ್ಲಿ ನಾವು ಈ ಭರವಸೆಯನ್ನು ಜೀವಂತವಾಗಿ ಕಂಡೆವು. ಆ ಪ್ರಯಾಣದಲ್ಲಿ ಅವರ ಬಹುತೇಕ ಸಹಚರರು ಪ್ರಾಣ ಕಳೆದುಕೊಂಡರು. ಇಂದು, MBA ಪದವೀಧರರಾಗಿರುವ ಅವರು ತಮ್ಮ ತಾಯ್ನಾಡಾದ ಘಾನಾದ ತಮ್ಮ ಗ್ರಾಮದಲ್ಲಿ ಶಿಕ್ಷಣ ಮತ್ತು ಆರ್ಥಿಕ ಅವಕಾಶಗಳನ್ನು ಉತ್ತೇಜಿಸುವ ಸರ್ಕಾರೇತರ ಸಂಸ್ಥೆಯೊಂದನ್ನು ಮುನ್ನಡೆಸುತ್ತಿದ್ದಾರೆ. ಇದರಿಂದ ಇತರ ಯುವಕರು ವಲಸೆ ಹೋಗಲು ತಮ್ಮ ಜೀವವನ್ನೇ ಪಣಕ್ಕಿಡಬೇಕಾದ ಪರಿಸ್ಥಿತಿ ಎದುರಾಗದಂತೆ ಮಾಡಲು ಅವರು ಶ್ರಮಿಸುತ್ತಿದ್ದಾರೆ. ಬುವೆನ್ ಸಮರಿಟಾನೊ ಕೇಂದ್ರದ ಇತರ ನಿರಾಶ್ರಿತರೂ ತಮ್ಮ ಬದುಕುಳಿಯುವ ಹೋರಾಟ ಹಾಗೂ ಅಂತಿಮವಾಗಿ ಸಮಾಜದಲ್ಲಿ ಒಳಗೊಳ್ಳುವ ಅನುಭವಗಳ ಮನಕಲಕುವ ಕಥೆಗಳನ್ನು ಹಂಚಿಕೊಂಡರು.
ಶೈಕ್ಷಣಿಕ ತಜ್ಞರು, ಸರ್ಕಾರೇತರ ಸಂಸ್ಥೆಗಳು ಹಾಗೂ ವಲಸಿಗರನ್ನು ಒಟ್ಟುಗೂಡಿಸಿ, ಪರಸ್ಪರ ಸಹಭಾಗಿತ್ವವನ್ನು ನಿರ್ಮಿಸುವ ಮೂಲಕ ಸಮಾಜದಲ್ಲಿ ವಲಸಿಗರ ಏಕೀಕರಣವನ್ನು ಉತ್ತೇಜಿಸುವ ಬದಲಾವಣೆಗಳಿಗೆ ಕಾರಣವಾಗುವ ಸಂವಾದದ ಸೇತುವೆಗಳನ್ನು ನಿರ್ಮಿಸಲು ನಾವು ಶ್ರಮಿಸುತ್ತಿದ್ದೇವೆ. ಅವರ ಉಪಸ್ಥಿತಿಯನ್ನು ಎಲ್ಲರಿಗೂ ಆಶೀರ್ವಾದವೆಂದು ಪರಿಗಣಿಸುವ ಮನೋಭಾವವನ್ನು ಬೆಳೆಸುವುದೂ ನಮ್ಮ ಉದ್ದೇಶವಾಗಿದೆ.
ಈ ರೀತಿಯ ಸಮಗ್ರ ಸೇತುವೆಗಳನ್ನು ನಿರ್ಮಿಸುವಲ್ಲಿ ವಿಶ್ವವಿದ್ಯಾಲಯಗಳ ಸಹಭಾಗಿತ್ವವು ನೀಡಬಲ್ಲ ವಿಶೇಷ ಕೊಡುಗೆ ಅತ್ಯಂತ ಮಹತ್ವದ್ದಾಗಿದೆ. ನಮ್ಮ ಮುಂದಿರುವ ಸವಾಲು ಕ್ಯಾನರಿ ದ್ವೀಪಗಳ ಕರಾವಳಿಯನ್ನು ಮೀರಿ ಬಹುದೂರ ವ್ಯಾಪಿಸಿದೆ.
ಇಂದು ಟೆನೆರಿಫೆ ನೋವಿನ ಕೇಂದ್ರಬಿಂದುವಾಗಿದ್ದರೂ, ಮಾನವ ಘನತೆಯ ಹಡಗು ದುರಂತವು ನಮ್ಮ ಸಾಮಾನ್ಯ ಮನೆಯ ಎಲ್ಲ ಗಡಿಗಳಲ್ಲಿಯೂ ಪ್ರತಿದಿನ ನಡೆಯುತ್ತಿದೆ. ಈ ಜಾಗತಿಕ ಬಿಕ್ಕಟ್ಟಿಗೆ ಪರಿಹಾರವು ಚದುರಿದ ಪ್ರಯತ್ನಗಳಿಂದ ಸಾಧ್ಯವಾಗುವುದಿಲ್ಲ. ಸಹಜವಾಬ್ದಾರಿಯ ಮನೋಭಾವದಿಂದ ಒಂದಾಗಿರುವ ಜಾಗತಿಕ ಸಮುದಾಯವನ್ನು ಕ್ರಿಯಾಶೀಲಗೊಳಿಸುವ ಮೂಲಕವೇ ಅದನ್ನು ಸಾಧಿಸಬಹುದು.
ಕ್ಯಾನರಿ ದ್ವೀಪಗಳಲ್ಲಿ ಕಳೆದ ಈ ದಿನಗಳ ಸಾಕ್ಷ್ಯಗಳು ಮನಮುಟ್ಟುವಂತಿದ್ದವು. ಜಗದ್ಗುರುಗಳ ಮಾತುಗಳು ನಮ್ಮೆಲ್ಲರಿಗೂ ಸ್ಫೂರ್ತಿ ತುಂಬುವುದರ ಜೊತೆಗೆ ಸವಾಲನ್ನೂ ಒಡ್ಡಿದವು. ಅನೇಕ ಭಾಗವಹಿಸಿದವರ ವಿಚಾರ ಮಂಡನೆಗಳು, ಇಂದಿನ ಸಮಾಜದಲ್ಲಿ ಆಗಾಗ ಕತ್ತಲೆಯ ಸಮುದ್ರದಂತೆ ಕಾಣುವ ಪರಿಸ್ಥಿತಿಯ ಮಧ್ಯೆ ಪ್ರಕಾಶಮಾನವಾಗಿ ಹೊಳೆಯುವ ನಕ್ಷತ್ರಪುಂಜವನ್ನೇ ನಮ್ಮ ಮುಂದಿಟ್ಟವು. ಪೂರ್ವಾಗ್ರಹಗಳನ್ನು ಕಿತ್ತೊಗೆಯುವುದು ಹಾಗೂ ಹೆಚ್ಚು ನ್ಯಾಯಸಮ್ಮತ ಮತ್ತು ಎಲ್ಲರನ್ನೂ ಒಳಗೊಳ್ಳುವ ಭವಿಷ್ಯದತ್ತ ಕೊಂಡೊಯ್ಯುವ ವ್ಯವಸ್ಥಾತ್ಮಕ ಸೇತುವೆಗಳನ್ನು ನಿರ್ಮಿಸುವುದು ನಮ್ಮೆಲ್ಲರ ಉನ್ನತ ಮತ್ತು ಅನಿವಾರ್ಯ ಹೊಣೆಗಾರಿಕೆಯಾಗಿದೆ.
ಸ್ಪೇನ್‌ನಲ್ಲಿ ತಮ್ಮ ವಿದಾಯ ಸಂದೇಶದಲ್ಲಿ ಜಗದ್ಗುರುಗಳು ನೀಡಿದ ಕರೆಯಂತೆ: "ನಿಮ್ಮ ದೃಷ್ಟಿಯನ್ನು ಮೇಲಕ್ಕೆತ್ತಿರಿ! ಹೌದು, ಶಿಲುಬೆಗೆರಿಸಲ್ಪಟ್ಟ ಪ್ರಭು ಯೇಸು ಕ್ರಿಸ್ತರ ಕಡೆಗೆ ನಮ್ಮ ದೃಷ್ಟಿಯನ್ನು ಹರಿಸೋಣ... ಹಾಗೂ ಮರಿಯಮ್ಮನವರ ಮಾರ್ಗದರ್ಶನದಲ್ಲಿ ಭರವಸೆಯೊಂದಿಗೆ ನಮ್ಮ ಪಯಣವನ್ನು ಮುಂದುವರಿಸೋಣ!" (ಟೆನೆರಿಫೆಯಲ್ಲಿ ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ).
ವಲಸಿಗರು, ನಿರಾಶ್ರಿತರು ಹಾಗೂ ವಾಸ್ತವವಾಗಿ ನಮ್ಮ ಇಡೀ ಸಮಾಜಕ್ಕೆ ಉತ್ತಮ ಭವಿಷ್ಯವನ್ನು ರೂಪಿಸುವ ಸಲುವಾಗಿ ಇಂದಿನ ಪರಿಸ್ಥಿತಿಗಳು ಮತ್ತು ಮನೋಭಾವಗಳನ್ನು ಪರಿವರ್ತಿಸುವ ನಮ್ಮ ಕಾರ್ಯವು ಈಗಷ್ಟೇ ಆರಂಭವಾಗಿದೆ.
*ವಂ. ಗುರು ಜಾನ್ ಲೈಡನ್, OSA ಅವರು ಅಗಸ್ಟಿನಿಯನ್ ಸಭೆಯ ಯಾಜಕರಾಗಿದ್ದು, ಅಮೆರಿಕದ ವಿಲ್ಲನೋವಾ ವಿಶ್ವವಿದ್ಯಾಲಯದ ಮದರ್ ಕಬ್ರಿನಿ ವಲಸೆ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಅಲ್ಲದೆ "ನಮ್ಮ ಸಾಮಾನ್ಯ ಮನೆಯಲ್ಲಿ ನಿರಾಶ್ರಿತರು ಮತ್ತು ವಲಸಿಗರು" ಎಂಬ ಜಾಗತಿಕ ಉಪಕ್ರಮದ ಸಹ-ಸಂಯೋಜಕರಾಗಿದ್ದಾರೆ.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).