ಕಾರ್ಡಿನಲ್ ಟ್ಯಾಗ್ಲೆ: ಸ್ನೇಹದಿಂದ ಪ್ರಭುಯೇಸುವಿನ ಮತ್ತು ಧರ್ಮಸಭೆಯ ಮುಖದ ಜನರಿಗೆ ಅನಾವರಣ
ಲೇಖಕರು: ವಂ. ಗುರು ಕಾಸ್ಮಿರ್ ನೇಮಾ, SVD ಮತ್ತು ಲೀಹ್ನಾ ‘ಯಾನಾ’ ವಿಲ್ಲಾಜೋಸ್ – ಮನಿಲಾ
ನಿಜವಾದ ಸ್ನೇಹವು ಕೇವಲ ಮಾನವ ಸಂಬಂಧವಲ್ಲ; ಅದು ಶುಭಸಂದೇಶಪ್ರಚಾರದ ಒಂದು ವಿಶೇಷ ಮಾರ್ಗವಾಗಿದೆ. ಅದು ಯೇಸು ಹಾಗೂ ಧರ್ಮಸಭೆಯ ಮುಖವನ್ನು ಜನರ ಜೀವನದಲ್ಲಿ ಗೋಚರಿಸುವಂತೆ ಮಾಡುತ್ತದೆ ಎಂದು ಫಿಲಿಪ್ಪೀನ್ಸ್‌ನ 12ನೇ ಹೊಸ ಶುಭಸಂದೇಶಪ್ರಚಾರ ಸಮ್ಮೇಳನ (PCNE XII)ದಲ್ಲಿ ಕಾರ್ಡಿನಲ್ ಲೂಯಿಸ್ ಅಂಟೋನಿಯೊ ಟ್ಯಾಗ್ಲೆ ಹೇಳಿದರು.
ಜುಲೈ 24ರಂದು ಮನಿಲಾದ ಪಾಂಟಿಫಿಕಲ್ ಯುನಿವರ್ಸಿಟಿ ಆಫ್ ಸ್ಯಾಂಟೋ ಟೊಮಾಸ್ನಲ್ಲಿ ನಡೆದ "ಕಾರ್ಡಿನಲ್ ಚಿಟೊ ಟ್ಯಾಗ್ಲೆಯವರೊಂದಿಗೆ ಹೃದಯದಿಂದ ಹೃದಯಕ್ಕೆ: ಸ್ನೇಹ ಮತ್ತು ಸಹಪ್ರಯಾಣ" ಎಂಬ ಸಂವಾದದಲ್ಲಿ, ಶುಭಸಂದೇಶಪ್ರಚಾರ ವಿಭಾಗದ ಮುಖ್ಯ ಆಡಳಿತಾಧಿಕಾರಿಯಾದ ಆಗಿರುವ ಕಾರ್ಡಿನಲ್ ಟ್ಯಾಗ್ಲೆ ಅವರು, ಸತ್ಯ, ಪ್ರೀತಿ ಮತ್ತು ನಿಷ್ಠಾವಂತ ಸಹಪ್ರಯಾಣದಿಂದ ಕೂಡಿದ ಸ್ನೇಹವನ್ನು ಬೆಳೆಸಿಕೊಳ್ಳುವಂತೆ ಕಥೋಲಿಕರನ್ನು ಉತ್ತೇಜಿಸಿದರು.
ಈ ಸಂವಾದದಲ್ಲಿ ಸಿ. ಮೇರಿ ಜೊನೈನ್ ಬೊಲಿಸಾಯ್, SPC, ಫಾ. ಡೀನ್ ಜೆರೋಮ್ ಕ್ರೂಸ್, ಬ್ರ. ಆರ್ಟೆಮಿಯೋ ಮನುಬೆನ್, OFS, ಆನ್ ಮತ್ತು ಬಿಲ್ಲಿ ಡುಮಲಿಯಾಂಗ್, ಹಾಗೂ ಜಾಯ್ ಕ್ಯಾನ್ಸಿಯೊ ಸೇರಿದಂತೆ ಧಾರ್ಮಿಕ ಸೇವಕ-ಸೇವಕಿಯರು ಮತ್ತು ಸಾಮಾನ್ಯ ಕಥೋಲಿಕ ನಾಯಕರು ಭಾಗವಹಿಸಿ, ತಮ್ಮ ತಮ್ಮ ಜೀವನದ ಕರೆಯಲ್ಲಿ ಸ್ನೇಹ ಮತ್ತು ಸಹಪ್ರಯಾಣದ ವೈಯಕ್ತಿಕ ಅನುಭವಗಳನ್ನು ಹಂಚಿಕೊಂಡರು.
ಸಂವಾದದುದ್ದಕ್ಕೂ ಕಾರ್ಡಿನಲ್ ಟ್ಯಾಗ್ಲೆ ಅವರು, ನಿಜವಾದ ಸ್ನೇಹಕ್ಕೆ ಮುಕ್ತ ಮನಸ್ಸು, ತಾಳ್ಮೆ ಮತ್ತು ಪ್ರೀತಿಯಿಂದ ಸತ್ಯವನ್ನು ಹೇಳುವ ಧೈರ್ಯ ಅಗತ್ಯವೆಂದು ಒತ್ತಿಹೇಳಿದರು. "ಸ್ನೇಹವನ್ನು ಬೆಳೆಸಲು ಹೆದರಬೇಡಿ,ಇಂದು ನೀವು ಬಿತ್ತುವ ಸ್ನೇಹದ ಬೀಜಗಳು ಭವಿಷ್ಯದಲ್ಲಿ ಜೀವನದ ಕರೆಯ ಸಮೃದ್ಧ ಫಸಲಾಗಿ ಬೆಳೆಯುತ್ತವೆ."
ನಿಜವಾದ ಸ್ನೇಹಿತರು ಕೇವಲ ಸಾಂತ್ವನ ನೀಡುವವರಲ್ಲ; ಪ್ರಾಮಾಣಿಕ ಮಾರ್ಗದರ್ಶನ ನೀಡುವ ಸಹಯಾತ್ರಿಗಳೂ ಆಗಿರುತ್ತಾರೆ ಎಂದು ಅವರು ಹೇಳಿದರು. "ಕೆಲವೊಮ್ಮೆ ನಿಜವಾದ ಸ್ನೇಹಿತನು ನೀವು ಕೇಳಲು ಇಷ್ಟಪಡದ ವಿಷಯವನ್ನೂ ಹೇಳುವ ಧೈರ್ಯವನ್ನು ಹೊಂದಿರುತ್ತಾನೆ."
ಸ್ನೇಹವು ಧರ್ಮಪ್ರಚಾರದ ಆಯಾಮವನ್ನೂ ಹೊಂದಿದೆ. "ಪ್ರಭುಯೇಸುವಿನ ಮುಖವನ್ನು, ಧರ್ಮಸಭೆಯ ಮುಖವನ್ನು ಜನರಿಗೆ ನೈಜವಾಗಿ ಪರಿಚಯಿಸುವಲ್ಲಿ ಸ್ನೇಹದ ಪಾತ್ರವನ್ನು ನಾವು ಎಂದಿಗೂ ಕಡಿಮೆ ಅಂದಾಜಿಸಬಾರದು," ಎಂದು ಅವರು ಹೇಳಿದರು.
ಸ್ನೇಹವನ್ನು ಅವರು ಕ್ರೈಸ್ತ ಜವಾಬ್ದಾರಿಯೊಂದಿಗೆ ಕೂಡ ಜೋಡಿಸಿದರು. ಸೃಷ್ಟಿಯನ್ನು ಹಾಗೂ ಪರಸ್ಪರರನ್ನು ಕಾಪಾಡಿಕೊಳ್ಳುವುದು ದೇವರ ಪ್ರೀತಿಗೆ ನೀಡುವ ಸ್ಪಷ್ಟ ಪ್ರತಿಕ್ರಿಯೆಯಾಗಿದೆ. "ಸೃಷ್ಟಿಯನ್ನು ಮತ್ತು ಒಬ್ಬರನ್ನೊಬ್ಬರು ಸೃಷ್ಟಿಕರ್ತನಿಗೆ ಪ್ರತಿಕ್ರಿಯೆಯಾಗಿ ಕಾಳಜಿ ವಹಿಸುವುದು ಸ್ನೇಹದ ಒಂದು ಕಾರ್ಯವಾಗಿದೆ," ಎಂದು ಅವರು ಹೇಳಿದರು.
ಸಂವಾದದ ಕೊನೆಯಲ್ಲಿ,"ನಮ್ಮನ್ನು ಇಲ್ಲಿ ಒಟ್ಟುಗೂಡಿಸಿರುವುದು ಪ್ರಭುವಿನೊಂದಿಗಿನ ನಮ್ಮ ಸಾಮಾನ್ಯ ಸ್ನೇಹವಾಗಿದೆ. ನಮ್ಮನ್ನು ಮೊದಲು ತಮ್ಮ ಸ್ನೇಹಿತರಾಗಿ ಪರಿಗಣಿಸಿದವರು ಅವರೇ," ಎಂದು ಅವರು ಹೇಳಿದರು.
ಸ್ನೇಹವು ಜೊತೆಸಾಗುತ್ತದೆ, ಬಲವಂತಪಡಿಸುವುದಿಲ್ಲ
ಈ ಸಂವಾದಕ್ಕೂ ಮುನ್ನ ನಡೆದ ಸಮ್ಮೇಳನದ ಉದ್ಘಾಟನಾ ಪವಿತ್ರ ಬಲಿಪೂಜೆಯಲ್ಲಿ, ಮನಿಲಾದ ಮಹಾಧರ್ಮಾಧ್ಯಕ್ಷರಾದ ಕಾರ್ಡಿನಲ್ ಜೋಸ್ ಅಡ್ವಿಂಕುಲಾ ಅವರು ಈ ವರ್ಷದ ವಿಷಯವಾದ "ಸಂಗ್ಕಾಯ್" (ಫಿಲಿಪ್ಪೀನೋ ಭಾಷೆಯಲ್ಲಿ ಸ್ನೇಹ ಎಂಬ ಅರ್ಥ) ಕುರಿತು ಪ್ರತಿಬಿಂಬಿಸುತ್ತಾ, ತಾಳ್ಮೆಯ ಸಹಪ್ರಯಾಣದಲ್ಲಿ ಬೇರೂರಿರುವ ಸುವಾರ್ತಾಪ್ರಚಾರದ ಶೈಲಿಯನ್ನು ಅಳವಡಿಸಿಕೊಳ್ಳುವಂತೆ ಕಥೋಲಿಕರಿಗೆ ಕರೆ ನೀಡಿದರು.
ಕನ್ಯಾ ಮರಿಯಮ್ಮನವರಿಂದ ಸ್ಫೂರ್ತಿ ಪಡೆದು ಮಾತನಾಡಿದ ಕಾರ್ಡಿನಲ್ ಅಡ್ವಿಂಕುಲಾ ಅವರು, ನಿಜವಾದ ಕ್ರೈಸ್ತ ಸ್ನೇಹವು ಸೌಮ್ಯತೆ, ದೃಢತೆ ಮತ್ತು ಸಹಕಾರದಿಂದ ಗುರುತಿಸಲ್ಪಡುತ್ತದೆ ಎಂದು ಹೇಳಿದರು. ಇತರರ ಮೇಲೆ ವಿಶ್ವಾಸವನ್ನು ಹೇರಿಕೆಯಿಂದ ಹೇರಬಾರದು; ಬದಲಾಗಿ ಪ್ರೀತಿಯಿಂದ ಅವರೊಂದಿಗೆ ಹೆಜ್ಜೆ ಹಾಕಬೇಕು ಎಂದು ಅವರು ತಿಳಿಸಿದರು.
"ನಿಜವಾದ ಸ್ನೇಹದಲ್ಲಿ ಪ್ರೀತಿಯು ಎಂದಿಗೂ ಬಲವಂತ ಮಾಡುವುದಿಲ್ಲ; ಅದು ಕೇವಲ ಸಹಪ್ರಯಾಣ ಮಾಡುತ್ತದೆ ಎಂಬುದನ್ನು ಮರಿಯಮ್ಮ ನಮಗೆ ನೆನಪಿಸುತ್ತಾರೆ, ನಿಜವಾದ ಸ್ನೇಹಿತರು ಕಾಯುವುದನ್ನು ಬಲ್ಲವರಾಗಿರುತ್ತಾರೆ, ಏಕೆಂದರೆ ಕಾಯುವುದೂ ಪ್ರೀತಿಯ ಒಂದು ರೂಪವಾಗಿದೆ."
ವಿಶ್ವಾಸದ ಉತ್ಸಾಹ ಕುಂದಿರಬಹುದಾದವರೊಂದಿಗೆ ಸಹ ತಾಳ್ಮೆಯಿಂದ ಜೊತೆಯಾಗಿರುವಂತೆ ಹಾಗೂ ಪ್ರತಿಯೊಬ್ಬರ ಹೃದಯದಲ್ಲಿಯೂ ದೇವರು ಇನ್ನೂ ತಾಳ್ಮೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ವಿಶ್ವಾಸವನ್ನು ಹೊಂದುವಂತೆ ಮಹಾಧರ್ಮಾಧ್ಯಕ್ಷರು ವಿಶ್ವಾಸಿಗಳನ್ನು ಪ್ರೋತ್ಸಾಹಿಸಿದರು.
ಧರ್ಮಸಭೆಯ ಧರ್ಮಪ್ರಚಾರದ ಕಾರ್ಯವು ಕ್ರಿಸ್ತನೊಂದಿಗಿನ ಸ್ನೇಹದಲ್ಲಿ ಬೇರೂರಿದೆ ಎಂಬುದನ್ನೂ ಅವರು ನೆನಪಿಸಿದರು. "ಪ್ರಭುಯೇಸು ನಮ್ಮನ್ನು ತಮ್ಮ ದಾಸರನ್ನಾಗಿ ಅಲ್ಲ, ತಮ್ಮ ಸ್ನೇಹಿತರನ್ನಾಗಿ ಕರೆದಿದ್ದಾರೆ, "ನಾವು ಅವರ ಧರ್ಮಪ್ರಚಾರದ ಕಾರ್ಯದಲ್ಲಿ ಪಾಲುದಾರರಾಗಿರುವ ಸ್ನೇಹಿತರು." ನಿಜವಾದ ಸ್ನೇಹದ ಮೇಲೆ ನಿರ್ಮಿತವಾದ ಧರ್ಮಸಭೆಯಲ್ಲಿ ಯಾರೂ ಏಕಾಂಗಿಯಾಗಿ ನಡೆಯಬೇಕಾಗಿಲ್ಲ ಎಂದು ಅವರು ಹೇಳಿದರು.
ವಿಭಜನೆಯ ಜಗತ್ತಿನಲ್ಲಿ ಸ್ನೇಹದ ಮರುಶೋಧನೆ
ಈಗ ತನ್ನ 12ನೇ ಆವೃತ್ತಿಗೆ ಕಾಲಿಟ್ಟಿರುವ ಫಿಲಿಪ್ಪೀನ್ಸ್ ಹೊಸ ಶುಭಸಂದೇಶಪ್ರಚಾರ ಸಮ್ಮೇಳನವು, ಧರ್ಮಾಧ್ಯಕ್ಷರು, ಧರ್ಮಗುರುಗಳು, ಧಾರ್ಮಿಕ ಸೇವಕ-ಸೇವಕಿಯರು ಹಾಗೂ ಸಾಮಾನ್ಯ ವಿಶ್ವಾಸಿಗಳನ್ನು ಒಟ್ಟುಗೂಡಿಸಿ, ಕ್ರೈಸ್ತ ಶಿಷ್ಯತ್ವ ಮತ್ತು ಧರ್ಮಪ್ರಚಾರದ ಅವಿಭಾಜ್ಯ ಅಭಿವ್ಯಕ್ತಿಯಾಗಿ ಸ್ನೇಹದ ಕುರಿತು ಚಿಂತನೆ ನಡೆಸುತ್ತಿದೆ.
ಈ ವರ್ಷದ ವಿಷಯವು ಸಹಪ್ರಯಾಣದ ಸಿನೋಡ್‌ನ ಅನುಷ್ಠಾನ ಹಂತಕ್ಕೆ ಪ್ರತಿಕ್ರಿಯೆಯಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ. ದೇವರೊಂದಿಗೆ, ಪರಸ್ಪರರೊಂದಿಗೆ ಹಾಗೂ ಸಮಸ್ತ ಸೃಷ್ಟಿಯೊಂದಿಗೆ ಸಂಬಂಧಗಳನ್ನು ಮತ್ತಷ್ಟು ಆಳಗೊಳಿಸಲು ಧರ್ಮಸಭೆಯನ್ನು ಈ ಸಿನೋಡ್ ಆಹ್ವಾನಿಸುತ್ತದೆ. ಹೆಚ್ಚುತ್ತಿರುವ ಧ್ರುವೀಕರಣ ಮತ್ತು ವಿಭಜನೆಯಿಂದ ಕೂಡಿರುವ ಇಂದಿನ ಜಗತ್ತಿನಲ್ಲಿ, ಐಕ್ಯತೆ, ಸಹಪ್ರಯಾಣ ಮತ್ತು ಸುವಾರ್ತಾಪ್ರಚಾರದ ಮಾರ್ಗವಾಗಿ ಸ್ನೇಹವನ್ನು ಮರುಶೋಧಿಸಲು ಕಥೋಲಿಕರಿಗೆ ಈ ಸಮ್ಮೇಳನ ನೆರವಾಗುವ ಉದ್ದೇಶವನ್ನು ಹೊಂದಿದೆ.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).