ಹುಡುಕಿ

ತೈಬೆಹ್ ಗ್ರಾಮದ ಸುತ್ತಮುತ್ತಲಿನ ಕೃಷಿಭೂಮಿಗಳಿಗೆ ಇಸ್ರಾಯೇಲಿ ವಸಾಹತುಗಾರರು ಬೆಂಕಿ ಹಚ್ಚುತ್ತಿರುವ ದೃಶ್ಯ ತೈಬೆಹ್ ಗ್ರಾಮದ ಸುತ್ತಮುತ್ತಲಿನ ಕೃಷಿಭೂಮಿಗಳಿಗೆ ಇಸ್ರಾಯೇಲಿ ವಸಾಹತುಗಾರರು ಬೆಂಕಿ ಹಚ್ಚುತ್ತಿರುವ ದೃಶ್ಯ  (AFP or licensors)

ಪಶ್ಚಿಮ ದಂಡೆಯ ಧರ್ಮಕೇಂದ್ರದ ಗುರು: ಕ್ರೈಸ್ತರ ಉಪಸ್ಥಿತಿಯನ್ನು ಉಳಿಸಲು ಕೇವಲ ಮಾತಲ್ಲ, ಕಾರ್ಯ ಅಗತ್ಯ

ಪಶ್ಚಿಮ ದಂಡೆಯ ಸಂಪೂರ್ಣ ಕ್ರೈಸ್ತ ಪ್ಯಾಲೆಸ್ತೀನಿಯನ್ ಗ್ರಾಮವಾದ ತೈಬೆಹ್‌ನಲ್ಲಿ ಇಸ್ರಾಯೇಲಿ ವಸಾಹತುಗಾರರ ಹೊಸ ನೆಲೆ ನಿರ್ಮಾಣವಾಗುವ ಸಾಧ್ಯತೆ ಎದುರಾಗಿದ್ದು, ಆ ಪ್ರದೇಶದಲ್ಲಿನ ಕೊನೆಯ ಸಂಪೂರ್ಣ ಕ್ರೈಸ್ತ ಪ್ಯಾಲೆಸ್ತೀನಿಯನ್ ಗ್ರಾಮದ ಭವಿಷ್ಯದ ಬಗ್ಗೆ ಮತ್ತೆ ಆತಂಕ ಮೂಡಿಸಿದೆ. ಪವಿತ್ರ ಭೂಮಿಯನ್ನು ಕೇವಲ ಮಾತುಗಳಿಂದಲ್ಲ, ದೃಢವಾದ ಕಾರ್ಯಗಳ ಮೂಲಕವೇ ಸಂರಕ್ಷಿಸಬೇಕು ಎಂದು ಧರ್ಮಕೇಂದ್ರದ ಗುರು ವಂ. ಬಶಾರ್ ಫವಾದ್ಲೆಹ್ ಎಚ್ಚರಿಕೆ ನೀಡಿದ್ದಾರೆ.

ಪಶ್ಚಿಮ ದಂಡೆಯ ಸಂಪೂರ್ಣ ಕ್ರೈಸ್ತ ಪ್ಯಾಲೆಸ್ತೀನಿಯನ್ ಗ್ರಾಮವಾದ ತೈಬೆಹ್‌ನಲ್ಲಿ ಇಸ್ರಾಯೇಲಿ ವಸಾಹತುಗಾರರ ಹೊಸ ನೆಲೆ ನಿರ್ಮಾಣವಾಗುವ ಸಾಧ್ಯತೆ ಎದುರಾಗಿದ್ದು, ಆ ಪ್ರದೇಶದಲ್ಲಿನ ಕೊನೆಯ ಸಂಪೂರ್ಣ ಕ್ರೈಸ್ತ ಪ್ಯಾಲೆಸ್ತೀನಿಯನ್ ಗ್ರಾಮದ ಭವಿಷ್ಯದ ಬಗ್ಗೆ ಮತ್ತೆ ಆತಂಕ ಮೂಡಿಸಿದೆ. ಪವಿತ್ರ ಭೂಮಿಯನ್ನು ಕೇವಲ ಮಾತುಗಳಿಂದಲ್ಲ, ದೃಢವಾದ ಕಾರ್ಯಗಳ ಮೂಲಕವೇ ಸಂರಕ್ಷಿಸಬೇಕು ಎಂದು ಧರ್ಮಕೇಂದ್ರದ ಗುರು ವಂ. ಬಶಾರ್ ಫವಾದ್ಲೆಹ್ ಎಚ್ಚರಿಕೆ ನೀಡಿದ್ದಾರೆ.

ಲೇಖಕರು: ಬಿಯಾಟ್ರಿಸ್ ಗ್ವಾರೇರಾ

ಪಶ್ಚಿಮ ದಂಡೆಯಲ್ಲಿರುವ ಸಂಪೂರ್ಣ ಕ್ರೈಸ್ತ ಪ್ಯಾಲೆಸ್ತೀನಿಯನ್ ಗ್ರಾಮವಾದ ತೈಬೆಹ್, ತನ್ನ ಭೂಮಿ, ತನ್ನ ಜನರು ಹಾಗೂ ಐತಿಹಾಸಿಕ ಕ್ರೈಸ್ತ ಉಪಸ್ಥಿತಿಗೆ ಇದುವರೆಗೆ ಕಂಡಿರದಂತಹ ಗಂಭೀರ ಬೆದರಿಕೆಯನ್ನು ಎದುರಿಸುತ್ತಿದೆ ಎಂದು ಅಲ್ಲಿನ ಧರ್ಮಕೇಂದ್ರದ ಗುರು ವಂ. ಬಶಾರ್ ಫವಾದ್ಲೆಹ್ ತಿಳಿಸಿದ್ದಾರೆ.

ಗ್ರಾಮದ ವಿರುದ್ಧ ನಿರಂತರವಾಗಿ ನಡೆಯುತ್ತಿರುವ ಹಿಂಸಾಚಾರದ ಕುರಿತು ಹಲವು ತಿಂಗಳುಗಳಿಂದ ಮನವಿಗಳನ್ನು ಸಲ್ಲಿಸಿದ ಬಳಿಕ, ಈಗ ಮತ್ತೊಂದು ಹೊಸ ಅಪಾಯ ಎದುರಾಗಿದೆ ಎಂದು ಅವರು ಹೇಳಿದ್ದಾರೆ. ಪ್ರತ್ಯಕ್ಷದರ್ಶಿಗಳು ಹಾಗೂ ಸ್ಥಳೀಯ ಮೇಲ್ವಿಚಾರಣಾ ಸಂಘಟನೆಗಳ ಮಾಹಿತಿಯ ಪ್ರಕಾರ, ಇಸ್ರಾಯೇಲಿ ವಸಾಹತುಗಾರರು ಗ್ರಾಮದ ಒಡೆತನದ ಪರ್ವತ ಪ್ರದೇಶವಾದ ಜಬಲ್ ಅಲ್-ಮಸ್ಸಿಸ್ನಲ್ಲಿ ಕಾನೂನುಬಾಹಿರವೆಂದು ನಂಬಲಾಗಿರುವ ಹೊಸ ವಸಾಹತು ನೆಲೆಯನ್ನು ನಿರ್ಮಿಸಲು ಆರಂಭಿಸಿದ್ದಾರೆ.

ಹೆಚ್ಚುತ್ತಿರುವ ಆತಂಕ ಮತ್ತು ಅನಿಶ್ಚಿತತೆ

ವಸಾಹತುಗಾರರ ಹೊಸ ನೆಲೆ ಗ್ರಾಮದಲ್ಲಿನ ನಿವಾಸಗಳ ಕೆಲವೇ ಮೀಟರ್ ದೂರದಲ್ಲಿ ನಿರ್ಮಾಣವಾಗುವ ಸಾಧ್ಯತೆಯು ಸ್ಥಳೀಯರಲ್ಲಿ ಭಾರೀ ಆತಂಕ ಉಂಟುಮಾಡಿದೆ. ಕುಟುಂಬಗಳು ನಿರಂತರ ಬೆದರಿಕೆಯ ನಡುವೆ ಬದುಕಬೇಕಾಗುತ್ತದೆ ಎಂಬ ಭಯದಲ್ಲಿವೆ ಎಂದು ವಂ. ಗುರು ಫವಾದ್ಲೆಹ್ ಹೇಳುತ್ತಾರೆ. ಗ್ರಾಮದ ಪೂರ್ವ ಭಾಗದಲ್ಲಿರುವ ತಮ್ಮ ಕೃಷಿಭೂಮಿಗಳು ಮತ್ತು ಕೋಳಿ ಸಾಕಾಣಿಕೆ ಕೇಂದ್ರಗಳಿಗೆ ತಲುಪಲು ಸಾಧ್ಯವಾಗುವುದಿಲ್ಲ ಎಂಬ ಆತಂಕ ರೈತರಲ್ಲಿಯೂ ಹೆಚ್ಚಾಗಿದೆ.

ಈ ಕ್ರಮದ ಉದ್ದೇಶ ಬಲವಂತವಾಗಿ "ಹೊಸ ವಾಸ್ತವಿಕತೆಯನ್ನು" ಸೃಷ್ಟಿಸಿ, ತೈಬೆಹ್ ನಿವಾಸಿಗಳನ್ನು ತಮ್ಮ ಭೂಮಿಯನ್ನು ತೊರೆಯುವಂತೆ ಒತ್ತಾಯಿಸುವುದಾಗಿದೆ ಎಂದು ಅವರು ಆರೋಪಿಸುತ್ತಾರೆ. ಸಾಮಾನ್ಯವಾಗಿ ಇಂತಹ ವಸಾಹತು ನೆಲೆಗಳು ಮುಂದೆ ಶಾಶ್ವತ ವಸಾಹತುಗಳಾಗಿ ಬೆಳೆಯುವುದರಿಂದ, ಸಮುದಾಯದಲ್ಲಿ ಈಗಾಗಲೇ ಇರುವ ಅಭದ್ರತೆಯ ಭಾವನೆ ಇನ್ನಷ್ಟು ಹೆಚ್ಚುತ್ತದೆ ಎಂದು ಧರ್ಮಕೇಂದ್ರದ ಗುರು ಎಚ್ಚರಿಸುತ್ತಾರೆ.

ಈ ಭೂಭಾಗವು ಒಸ್ಲೊ ಒಪ್ಪಂದಗಳ ಪ್ರಕಾರ ಬಿ ವಲಯದಲ್ಲಿ (Area B) ಇದೆ. ಇಲ್ಲಿ ನಾಗರಿಕ ಆಡಳಿತದ ಹೊಣೆ ಪ್ಯಾಲೆಸ್ತೀನಿಯನ್ ಪ್ರಾಧಿಕಾರದ್ದಾಗಿದ್ದರೆ, ಭದ್ರತಾ ಹೊಣೆಗಾರಿಕೆಯನ್ನು ಪ್ಯಾಲೆಸ್ತೀನಿಯನ್ ಪೊಲೀಸರು ಮತ್ತು ಇಸ್ರಾಯೇಲಿ ಸೇನಾ ಅಧಿಕಾರಿಗಳು ಜಂಟಿಯಾಗಿ ನಿರ್ವಹಿಸುತ್ತಾರೆ.

ಸ್ಪಂದನೆ ಸಿಗದ ಮನವಿಗಳು

ಕಳೆದ ಹಲವು ತಿಂಗಳುಗಳಿಂದ ಗ್ರಾಮವು ತನ್ನ ಪರಿಸ್ಥಿತಿಯ ಬಗ್ಗೆ ಅಂತರರಾಷ್ಟ್ರೀಯ ಸಮುದಾಯದ ಗಮನ ಸೆಳೆಯಲು ರಾಯಭಾರಿಗಳು, ಧಾರ್ಮಿಕ ನಾಯಕರು ಮತ್ತು ವಿವಿಧ ದೇಶಗಳ ನಿಯೋಗಗಳನ್ನು ಆಹ್ವಾನಿಸಿದೆ ಎಂದು ವಂ. ಗುರು ಫವಾದ್ಲೆಹ್ ತಿಳಿಸುತ್ತಾರೆ. ನಡೆದಿರುವ ಘಟನೆಗಳಿಗೆ ಸಂಬಂಧಿಸಿದ ವರದಿಗಳು, ಛಾಯಾಚಿತ್ರಗಳು, ವೀಡಿಯೊಗಳು ಹಾಗೂ ಪ್ರತ್ಯಕ್ಷದರ್ಶಿಗಳ ಸಾಕ್ಷ್ಯಗಳನ್ನು ಕೂಡ ಅವರಿಗೆ ಒದಗಿಸಲಾಗಿದೆ. ಆದಾಗ್ಯೂ, ಈ ಎಲ್ಲ ಪ್ರಯತ್ನಗಳ ನಡುವೆಯೂ ಹಿಂಸಾಚಾರ ಮುಂದುವರಿದಿದೆ ಎಂದು ಅವರು ವಿಷಾದ ವ್ಯಕ್ತಪಡಿಸುತ್ತಾರೆ. ಜಬಲ್ ಅಲ್-ಮಸ್ಸಿಸ್ ಪ್ರದೇಶ ಮಾತ್ರವಲ್ಲದೆ, ಗ್ರಾಮದ ಪಶ್ಚಿಮ ಭಾಗದಲ್ಲಿಯೂ ಕಳೆದ ವಾರದಿಂದ ಸ್ಥಳೀಯ ಸಿಮೆಂಟ್ ಕಾರ್ಖಾನೆಗೆ ಕಾರ್ಮಿಕರು ತೆರಳದಂತೆ ವಸಾಹತುಗಾರರು ತಡೆಹಿಡಿಯುತ್ತಿದ್ದಾರೆ ಎಂಬ ವರದಿಗಳಿವೆ.

ಗ್ರಾಮವನ್ನು ನಾಲ್ಕೂ ಕಡೆಯಿಂದ ಸುತ್ತುವರಿಯುವ ಹೊಸ ವಸಾಹತು ನೆಲೆ ನಿರ್ಮಾಣವಾಗುವ ಸಾಧ್ಯತೆಯು ನಿವಾಸಿಗಳಲ್ಲಿ ಒಂಟಿತನ ಮತ್ತು ಸಿಕ್ಕಿಹಾಕಿಕೊಂಡ ಭಾವನೆಯನ್ನು ಹೆಚ್ಚಿಸಿದೆ ಎಂದು ಅವರು ಹೇಳುತ್ತಾರೆ. ನಿರಾಶೆ ಹೆಚ್ಚಾಗುತ್ತಿದ್ದಂತೆ, ಅಂತರರಾಷ್ಟ್ರೀಯ ಕಾನೂನು ಮತ್ತು ವಿಶ್ವ ಸಮುದಾಯಕ್ಕೆ ಸಲ್ಲಿಸುತ್ತಿರುವ ಪುನರಾವರ್ತಿತ ಮನವಿಗಳು ಇನ್ನೂ ಯಾವುದೇ ಬದಲಾವಣೆ ತರಬಹುದೇ ಎಂಬ ಪ್ರಶ್ನೆ ಜನರಲ್ಲಿ ಮೂಡತೊಡಗಿದೆ.

"ನಾವು ಭಯವಿಲ್ಲದೆ ನಮ್ಮ ಸ್ವಂತ ಭೂಮಿಯಲ್ಲಿ ಬದುಕಲು ಅವಕಾಶ ನೀಡುವಂತೆ ಮಾತ್ರ ಕೇಳುತ್ತಿದ್ದೇವೆ," ಎಂದು ಅವರು ಹೇಳುತ್ತಾರೆ.

"ಈಗಲೇ ಕ್ರಮ ಕೈಗೊಳ್ಳುವ ಸಮಯ"

ಪವಿತ್ರ ಭೂಮಿಯಲ್ಲಿನ ಕ್ರೈಸ್ತರ ಉಪಸ್ಥಿತಿಯನ್ನು ಕಾಪಾಡಲು ಸಂಸ್ಥೆಗಳು ಹಾಗೂ ಸದ್ಭಾವನೆಯುಳ್ಳ ಎಲ್ಲರೂ ಸ್ಪಷ್ಟ ಮತ್ತು ದೃಢವಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ವಂ.ಗುರು ಫವಾದ್ಲೆಹ್ ಮನವಿ ಮಾಡಿದ್ದಾರೆ. "ಪವಿತ್ರ ಭೂಮಿಯನ್ನು ಕೇವಲ ಮಾತುಗಳಿಂದ ಸಂರಕ್ಷಿಸಲು ಸಾಧ್ಯವಿಲ್ಲ. ಅದನ್ನು ದೃಢವಾದ ಕಾರ್ಯಗಳ ಮೂಲಕವೇ ರಕ್ಷಿಸಬೇಕು," ಎಂದು ಅವರು ಹೇಳುತ್ತಾರೆ. ಮತ್ತೊಂದು ವಸಾಹತು ನೆಲೆ ನಿರ್ಮಾಣಕ್ಕೆ ಅವಕಾಶ ನೀಡುವುದು, ಇಲ್ಲಿನ ಕ್ರೈಸ್ತ ಸಮುದಾಯಕ್ಕೆ ತಮ್ಮ ಭದ್ರತೆ, ಹಕ್ಕುಗಳು ಮತ್ತು ಭವಿಷ್ಯ ಇನ್ನು ಮುಂದೆ ರಕ್ಷಿಸಲ್ಪಡುವುದಿಲ್ಲ ಎಂಬ ವಿನಾಶಕಾರಿ ಸಂದೇಶವನ್ನು ನೀಡುತ್ತದೆ ಎಂದು ಎಚ್ಚರಿಸಿದರು.

"ತುಂಬಾ ತಡವಾಗುವವರೆಗೆ ಕಾಯಬೇಡಿ," ಎಂದು ಅವರು ಮನವಿ ಮಾಡಿದರು. "ಮತ್ತೊಂದು ಹಿಂತಿರುಗಿಸಲಾಗದ ವಾಸ್ತವಿಕತೆಯನ್ನು ಹೇರಲಾಗುವವರೆಗೆ ಕಾಯಬೇಡಿ. ಈಗಲೇ ಕ್ರಮ ಕೈಗೊಳ್ಳಬೇಕಾದ ಸಮಯ."

ಅಚಲವಾಗಿ ಉಳಿಯಲು ಸಂಕಲ್ಪಿಸಿರುವ ಸಮುದಾಯ

ಒಂದು ವರ್ಷದ ಹಿಂದೆ, ವಸಾಹತುಗಾರರ ಗುಂಪೊಂದು ಗ್ರಾಮದ ಸ್ಮಶಾನ ಹಾಗೂ ಪ್ರಾಚೀನ ಅಲ್-ಖಾದರ್ ದೇವಾಲಯ (ಸಂತ ಜಾರ್ಜ್ ದೇವಾಲಯ) ಸಮೀಪ ಬೆಂಕಿ ಹಚ್ಚಿದ ಘಟನೆ ನಡೆದಿತ್ತು. ಅದರ ನಂತರವೂ ತೈಬೆಹ್‌ನ ಕ್ರೈಸ್ತರು ಅಭದ್ರತೆಯ ಭಾವನೆಯೊಂದಿಗೇ ಬದುಕುತ್ತಿದ್ದಾರೆ. ಎಲ್ಲಾ ಸಂಕಷ್ಟಗಳ ನಡುವೆಯೂ ಧರ್ಮಕೇಂದ್ರದ ಜೀವನ ಎಂದಿನಂತೆ ಮುಂದುವರಿದಿದೆ. ಗ್ರಾಮದ ಮೂರು ಕ್ರೈಸ್ತ ಸಮುದಾಯಗಳಾದ ಗ್ರೀಕ್ ಆರ್ಥೊಡಾಕ್ಸ್, ಮೆಲ್ಕೈಟ್ ಗ್ರೀಕ್ ಕಥೋಲಿಕ ಮತ್ತು ಲ್ಯಾಟಿನ್ ಕಥೋಲಿಕ ಧರ್ಮಕೇಂದ್ರಗಳ ಗುರುಗಳ ಸಂಯುಕ್ತ ನೇತೃತ್ವದಲ್ಲಿ, 161 ಮಕ್ಕಳ ಭಾಗವಹಿಸುವಿಕೆಯಿಂದ ಬೇಸಿಗೆ ಶಿಬಿರವು ಸೋಮವಾರ ಆರಂಭವಾಗಿದೆ.

ಅಂತರರಾಷ್ಟ್ರೀಯ ಸಮುದಾಯದ ಮೇಲಿನ ವಿಶ್ವಾಸ ಕುಂದಿದ್ದರೂ, ವಿಶ್ವಾಸಿಗಳು ದೇವರ ಮೇಲೂ ಧರ್ಮಸಭೆಯ ಮೇಲೂ ತಮ್ಮ ನಂಬಿಕೆಯನ್ನು ಮುಂದುವರಿಸಿದ್ದಾರೆ ಎಂದು ವಂ. ಗುರು ಫವಾದ್ಲೆಹ್ ಹೇಳುತ್ತಾರೆ.

ಕೊನೆಯಲ್ಲಿ ಅವರು ತೈಬೆಹ್ ಅನ್ನು ಮರೆಯದಂತೆ ಎಲ್ಲರಿಗೂ ಮನವಿ ಮಾಡಿದರು. "ಈ ಗ್ರಾಮವು ತನ್ನ ಜನರನ್ನು ಕಳೆದುಕೊಂಡರೆ, ಜಗತ್ತು ಕೇವಲ ಒಂದು ಗ್ರಾಮವನ್ನಷ್ಟೇ ಕಳೆದುಕೊಳ್ಳುವುದಿಲ್ಲ; ಜೀವಂತ ಕ್ರೈಸ್ತ ಸಮುದಾಯವನ್ನೇ ಕಳೆದುಕೊಳ್ಳುತ್ತದೆ," ಎಂದು ಅವರು ಎಚ್ಚರಿಸಿದರು.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

07 ಜುಲೈ 2026, 23:45