ಪಾಕಿಸ್ತಾನ: ಕ್ರೈಸ್ತ ಕುಟುಂಬದ ಮೇಲಿನ ಹಿಂಸಾಚಾರವನ್ನು ತಡೆದ ಸರ್ವಧರ್ಮ ಸಹಕಾರ
ಲೇಖಕರು: ಫ್ರಾನ್ಸೆಸ್ಕಾ ಮೆರ್ಲೊ ಮತ್ತು ಲಿಂಡಾ ಬೋರ್ಡೋನಿ
ಸ್ಥಳೀಯ ಆಡಳಿತ, ಮುಸ್ಲಿಂ ಧಾರ್ಮಿಕ ನಾಯಕರು, ಇಸ್ಲಾಮಿಕ್ ಸೆಮಿನರಿಗಳ ವಿದ್ಯಾರ್ಥಿಗಳು ಮತ್ತು ಸಮುದಾಯದ ಸದಸ್ಯರು ತ್ವರಿತವಾಗಿ ಮಧ್ಯಪ್ರವೇಶಿಸಿದ್ದರಿಂದ, ಕುರಾನನ್ನು ಅಪವಿತ್ರಗೊಳಿಸಲಾಗಿದೆ ಎಂಬುದು ಸಾಬೀತಾಗದ ಆರೋಪದ ನಂತರ ಕರಾಚಿಯಲ್ಲಿ ಕ್ರೈಸ್ತ ಕುಟುಂಬದ ವಿರುದ್ಧ ಸಂಭವಿಸಬಹುದಾಗಿದ್ದ ಹಿಂಸಾಚಾರವನ್ನು ತಡೆಯಲು ಸಾಧ್ಯವಾಯಿತು.
ವ್ಯಾಟಿಕನ್ ವಾರ್ತಾ ಸಂಸ್ಥೆಯೊಂದಿಗೆ ಮಾತನಾಡಿದ ಪಾಕಿಸ್ತಾನದ ಕಥೋಲಿಕ ಶಾಂತಿ ಮತ್ತು ನ್ಯಾಯ ಆಯೋಗದ ಕಾರ್ಯನಿರ್ವಾಹಕ ನಿರ್ದೇಶಕರಾದ ನಯೀಮ್ ಯೂಸುಫ್ ಗಿಲ್, ಜುಲೈ 9ರಂದು ಬಾಲ್ದಿಯಾ ಟೌನ್ನಲ್ಲಿ ನಡೆದ ಘಟನೆ, ಸಕಾಲಿಕ ಕ್ರಮ ಮತ್ತು ಸರ್ವಧರ್ಮ ಸಹಕಾರವು ಹೇಗೆ ದುರಂತವನ್ನು ತಪ್ಪಿಸಬಲ್ಲದು ಎಂಬುದನ್ನು ತೋರಿಸಿದೆ ಎಂದು ಹೇಳಿದರು. ಆದರೆ, ದೇವದೂಷಣೆ ಆರೋಪಗಳು ಕೇಳಿಬಂದಾಗಲೆಲ್ಲಾ ಪಾಕಿಸ್ತಾನದ ಕ್ರೈಸ್ತರು ಇನ್ನೂ ಅಸುರಕ್ಷಿತರಾಗಿಯೇ ಭಾವಿಸುತ್ತಾರೆ ಎಂದು ಅವರು ಎಚ್ಚರಿಸಿದರು.
ಗಿಲ್ ಅವರ ಪ್ರಕಾರ, "ಯಾರೋ ಒಬ್ಬರು ಅಪವಿತ್ರಗೊಳಿಸಲಾದ ಕುರಾನನ್ನು ಒಂದು ಪುಟವನ್ನು ಸ್ಥಳೀಯ ಅಂಗಡಿಯ ಮಾಲೀಕರಿಗೆ ಅಂಚೆ ಮೂಲಕ ಕಳುಹಿಸಿದ್ದರು." ಆ ಪುಟದಲ್ಲಿ ಅಜೀಮ್ ಜಾವೇದ್ ಎಂಬ ಕ್ರೈಸ್ತ ವ್ಯಕ್ತಿ ಮತ್ತು ಅವರ ತಾಯಿಯ ಛಾಯಾಚಿತ್ರಗಳಿದ್ದವು ಎನ್ನಲಾಗಿದೆ. ಅವರು ಬಾಲ್ದಿಯಾ ಟೌನ್‌ನ ಖಜಾಫಿ ಕಾಲೋನಿ ನಿವಾಸಿಗಳಾಗಿದ್ದಾರೆ. ಇದರ ಬೆನ್ನಲ್ಲೇ, "ಆರೋಪಿಯಾಗಿದ್ದ ಅಜೀಮ್ ಅವರ ಮನೆಯ ಸುತ್ತ ಹಿಂಸಾತ್ಮಕ ಗುಂಪೊಂದು ಮುತ್ತಿಗೆ ಹಾಕಿತು. ಸರ್ಕಾರ ಮತ್ತು ಆಡಳಿತ ತಕ್ಷಣ ಕ್ರಮ ಕೈಗೊಂಡು, ಪೊಲೀಸರು ಸಮಗ್ರ ತನಿಖೆ ನಡೆಸಿ ನಿಜವಾದ ಅಪರಾಧಿಗಳನ್ನು ಪತ್ತೆಹಚ್ಚುವುದಾಗಿ ಪ್ರತಿಭಟನಾಕಾರರಿಗೆ ಭರವಸೆ ನೀಡಿದ್ದರಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬಂತು" ಎಂದು ಗಿಲ್ ವಿವರಿಸಿದರು. ಇದರ ಪರಿಣಾಮವಾಗಿ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು.
ಐಕ್ಯತೆಯ ಪ್ರದರ್ಶನ
ಕ್ರೈಸ್ತ ಕುಟುಂಬಗಳನ್ನು ರಕ್ಷಿಸಲು ಮುಸ್ಲಿಂ ಧಾರ್ಮಿಕ ನಾಯಕರು, ಇಸ್ಲಾಮಿಕ್ ಸೆಮಿನರಿಗಳ ವಿದ್ಯಾರ್ಥಿಗಳು ಮತ್ತು ಸ್ಥಳೀಯ ರಾಜಕಾರಣಿಗಳು ಮಧ್ಯಪ್ರವೇಶಿಸಿದ್ದು ಅನಿರೀಕ್ಷಿತ ಬೆಳವಣಿಗೆಯಾಗಿತ್ತು ಎಂದು ಗಿಲ್ ಒಪ್ಪಿಕೊಂಡರು. "ಇದನ್ನು ಅತ್ಯಂತ ಆಶ್ಚರ್ಯ ಮತ್ತು ಕೃತಜ್ಞತೆಯಿಂದ ಸ್ವಾಗತಿಸಲಾಯಿತು," ಎಂದು ಅವರು ಹೇಳಿ, ಈ ಘಟನೆ "ಕ್ರಮೇಣ ವಿವಿಧ ಸಮುದಾಯಗಳ ನಡುವೆ ಉತ್ತಮ ಸಂಬಂಧಗಳನ್ನು ನಿರ್ಮಿಸಲು ದಾರಿ ಮಾಡಿಕೊಡಲಿದೆ" ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಬಾಲ್ದಿಯಾ ಟೌನ್‌ನ ಘಟನೆಗಳು, ಬಿಕ್ಕಟ್ಟಿನ ಸಮಯದಲ್ಲಿ ದೃಢ ಮತ್ತು ವಿವೇಕಯುತ ನಾಯಕತ್ವದ ಅಗತ್ಯವನ್ನು ಒತ್ತಿ ತೋರಿಸುತ್ತವೆ ಎಂದು ಗಿಲ್ ಅಭಿಪ್ರಾಯಪಟ್ಟರು. "ಆಡಳಿತ ಮತ್ತು ಧಾರ್ಮಿಕ ನಾಯಕತ್ವವು ಸಮಯೋಚಿತವಾಗಿ ಹಾಗೂ ವಿವೇಕದಿಂದ ಕ್ರಮ ಕೈಗೊಂಡರೆ, ಜರನ್ವಾಲಾ ಮತ್ತು ಗೋಜ್ರಾ ಮಾದರಿಯ ಘಟನೆಗಳನ್ನು ತಪ್ಪಿಸಬಹುದು" ಎಂದು ಅವರು ಹೇಳಿದರು. ಈ ಮೂಲಕ ಅವರು ಪಾಕಿಸ್ತಾನದಲ್ಲಿ ಈ ಹಿಂದೆ ನಡೆದ ಕ್ರೈಸ್ತ ವಿರೋಧಿ ಹಿಂಸಾಚಾರದ ಘಟನೆಗಳನ್ನು ಉಲ್ಲೇಖಿಸಿದರು.
ಎಚ್ಚರಿಕೆಯ ಮೌಲ್ಯಮಾಪನ
ಘಟನೆ ಶಾಂತಿಯುತವಾಗಿ ಅಂತ್ಯಗೊಂಡಿದ್ದರೂ, ಇದನ್ನು ಕಾನೂನಿನ ಆಡಳಿತದ ಬಗ್ಗೆ ಸಮಾಜದ ಮನೋಭಾವದಲ್ಲಿ ವ್ಯಾಪಕ ಬದಲಾವಣೆಯಾಗಿದೆ ಎಂದು ಅರ್ಥೈಸಬಾರದು ಎಂದು ಗಿಲ್ ಎಚ್ಚರಿಸಿದರು. "ಒಂದೇ ಒಂದು ಘಟನೆಯ ಆಧಾರದ ಮೇಲೆ ಕಾನೂನಿನ ಗೌರವ ಹೆಚ್ಚುತ್ತಿದೆ ಎಂದು ಹೇಳಲು ಸಾಧ್ಯವಿಲ್ಲ. ಅದಕ್ಕೆ ಇನ್ನೂ ಸಮಯ ಬೇಕು," ಎಂದು ಅವರು ಹೇಳಿದರು. ದೇವದೂಷಣೆ ಆರೋಪಗಳು ಕೇಳಿಬಂದಾಗಲೆಲ್ಲಾ ಕ್ರೈಸ್ತ ಸಮುದಾಯವು ಇನ್ನೂ ತೀವ್ರ ಆತಂಕಕ್ಕೆ ಒಳಗಾಗುತ್ತದೆ ಎಂದು ಅವರು ಹೇಳಿದರು.
"ಪುನರಾವರ್ತಿತ ಘಟನೆಗಳ ಕಾರಣ ಪಾಕಿಸ್ತಾನದ ಕ್ರೈಸ್ತ ಸಮುದಾಯವು ಅಸುರಕ್ಷಿತ ಮತ್ತು ರಕ್ಷಣೆಯಿಲ್ಲದ ಸ್ಥಿತಿಯಲ್ಲಿದೆ. ಆರೋಪ ಒಬ್ಬ ವ್ಯಕ್ತಿಯ ವಿರುದ್ಧವೇ ಇರಬಹುದು. ಆದರೆ ಆರೋಪಿತ ವ್ಯಕ್ತಿ ಕ್ರೈಸ್ತನಾಗಿದ್ದರೆ ಅದರ ಬೆಲೆ ಇಡೀ ಸಮುದಾಯವೇ ತೆರಬೇಕಾಗುತ್ತದೆ. ಸಮುದಾಯದ ವಿಶ್ವಾಸವನ್ನು ಮರುಸ್ಥಾಪಿಸಲು ಸಮಯ ಬೇಕಾಗುತ್ತದೆ," ಎಂದು ಅವರು ಸೇರಿಸಿದರು.
ಸಂಬಂಧಗಳ ಮಹತ್ವ
ಸ್ಥಳೀಯ ಸಮುದಾಯದೊಂದಿಗೆ ಹಲವು ವರ್ಷಗಳಿಂದ ಬೆಳೆಸಿಕೊಂಡಿದ್ದ ಸಂಬಂಧಗಳ ಕಾರಣದಿಂದಲೇ ಕಥೋಲಿಕ ಶಾಂತಿ ಮತ್ತು ನ್ಯಾಯ ಆಯೋಗವು ತಕ್ಷಣ ಸ್ಪಂದಿಸಲು ಸಾಧ್ಯವಾಯಿತು ಎಂದು ಗಿಲ್ ವಿವರಿಸಿದರು. ಅದೇ ರಸ್ತೆಯಲ್ಲಿ ವಾಸಿಸುತ್ತಿದ್ದ ಆಯೋಗದ ಮಾಜಿ ಸಿಬ್ಬಂದಿಯೊಬ್ಬರು ಘಟನೆಯ ಬಗ್ಗೆ ಆಯೋಗದ ಸಂಯೋಜಕರಿಗೆ ಮಾಹಿತಿ ನೀಡಿದರು. ಅವರು ಕೂಡಲೇ ಸ್ಥಳೀಯ ಅಧಿಕಾರಿಗಳು, ಉಪಸಭಾಧ್ಯಕ್ಷ ನವೀದ್, ಹಾಗೂ ಇತರ ಅಧಿಕಾರಿಗಳು ಮತ್ತು ಸಮಾನ ಮನಸ್ಕ ಧಾರ್ಮಿಕ ಮುಖಂಡರನ್ನು ಸಂಪರ್ಕಿಸಿದರು ಎಂದು ಅವರು ಹೇಳಿದರು.
ಅಲ್ಲದೆ, ಆಯೋಗವು ಹಲವು ವರ್ಷಗಳಿಂದ ಆ ಪ್ರದೇಶದಲ್ಲಿ ಸರ್ವಧರ್ಮ ಸೌಹಾರ್ದತೆ ಕುರಿತ ವಿಚಾರಗೋಷ್ಠಿಗಳನ್ನು ಆಯೋಜಿಸಿದ್ದು, ಬಹುಸಂಖ್ಯಾತ ಸಮುದಾಯಗಳೊಂದಿಗೆ ಉತ್ತಮ ಬಾಂಧವ್ಯವನ್ನು ಬೆಳೆಸಿತ್ತು. "ಆ ಪ್ರಯತ್ನವು ಕ್ರೈಸ್ತ ಸಮುದಾಯವನ್ನು ರಕ್ಷಿಸಲು ಅನೇಕ ಸದ್ಭಾವನೆಯುಳ್ಳ ಜನರನ್ನು ಸಕ್ರಿಯಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿತು," ಎಂದು ಹೇಳಿದರು. ಈ ಘಟನೆ ಸರ್ವಧರ್ಮ ಸಂವಾದದ ಮಹತ್ವಕ್ಕೆ ಸ್ಪಷ್ಟ ಉದಾಹರಣೆಯಾಗಿದೆ ಎಂದು ಗಿಲ್ ಅಭಿಪ್ರಾಯಪಟ್ಟರು.
"ಸರ್ವಧರ್ಮ ಸಂವಾದವು ಅತ್ಯಂತ ಮಹತ್ವದ್ದಾಗಿದೆ. ಅದು ನಿರಂತರವಾಗಿ ಮುಂದುವರಿಯಬೇಕು. ಅದು ಪರಸ್ಪರ ಇರುವ ಗೋಡೆಗಳನ್ನು ಒಡೆಯುತ್ತದೆ," ಎಂದು ಹೇಳಿದರು.
ಭವಿಷ್ಯದ ಹಿಂಸಾಚಾರ ತಡೆಗಟ್ಟಲು ಕರೆ
ಭವಿಷ್ಯದಲ್ಲಿ ದೇವದೂಷಣೆ ಆರೋಪಗಳು ಹಿಂಸಾಚಾರಕ್ಕೆ ತಿರುಗದಂತೆ ತಡೆಯಲು ಜನಜಾಗೃತಿ ಅತ್ಯಗತ್ಯ ಎಂದು ಗಿಲ್ ಕರೆ ನೀಡಿದರು. "ಸರ್ಕಾರವು ಎಲ್ಲಾ ಮಾಧ್ಯಮಗಳ ಮೂಲಕ ಜನಜಾಗೃತಿ ಅಭಿಯಾನವನ್ನು ಆರಂಭಿಸಬೇಕು," ಎಂದು ಅವರು ಹೇಳಿದರು. "ಇಂತಹ ಅಭಿಯಾನವನ್ನು ಇದುವರೆಗೆ ಎಂದಿಗೂ ಕೈಗೊಂಡಿಲ್ಲ" ಎಂದೂ ಅವರು ವಿಷಾದಿಸಿದರು.
"ಪಠ್ಯಪುಸ್ತಕಗಳು, ದೂರದರ್ಶನ ಧಾರಾವಾಹಿಗಳು, ಸಾಮಾಜಿಕ ಜಾಲತಾಣಗಳು ಹಾಗೂ ಕಿರುಸಂದೇಶಗಳ ಮೂಲಕ ಜನರನ್ನು ಇಂತಹ ಸಂದರ್ಭಗಳಲ್ಲಿ ವಿವೇಕದಿಂದ ವರ್ತಿಸಲು ಸಿದ್ಧಗೊಳಿಸಬೇಕು" ಎಂದು ಅವರು ಸಲಹೆ ನೀಡಿದರು. ಕರಾಚಿಯ ಘಟನೆ ಶಾಂತಿಯುತವಾಗಿ ಅಂತ್ಯಗೊಂಡಿರುವುದನ್ನು ಸ್ವಾಗತಿಸಿದರೂ, ಪಾಕಿಸ್ತಾನದ ಅನೇಕ ಕ್ರೈಸ್ತರು ಇನ್ನೂ ತಾರತಮ್ಯವನ್ನು ಎದುರಿಸುತ್ತಿದ್ದಾರೆ ಎಂಬುದನ್ನು ಗಿಲ್ ಅಂತರರಾಷ್ಟ್ರೀಯ ಸಮುದಾಯಕ್ಕೆ ನೆನಪಿಸಿದರು.
"ಪಾಕಿಸ್ತಾನದ ಕಥೋಲಿಕರು ಅತ್ಯಂತ ಕಠಿಣ ಜೀವನ ನಡೆಸುತ್ತಿದ್ದಾರೆ. ಅವರು ತಮ್ಮ ಜೀವನದ ಎಲ್ಲ ಕ್ಷೇತ್ರಗಳಲ್ಲೂ ತಾರತಮ್ಯ, ಅವಮಾನ ಮತ್ತು ದ್ವೇಷವನ್ನು ಎದುರಿಸುತ್ತಿದ್ದಾರೆ. ಆದರೂ ಅವರು ಘನತೆಯಿಂದ ಬದುಕಲು ಹೋರಾಟ ಮುಂದುವರಿಸಿದ್ದಾರೆ," ಎಂದು ಅವರು ಹೇಳಿದರು.
ಈ ಘಟನೆ ಭರವಸೆಗೆ ಕಾರಣವಾಗಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಗಿಲ್, ಒಂದು ಪ್ರಮುಖ ಪ್ರಾದೇಶಿಕ ವ್ಯತ್ಯಾಸವನ್ನು ಸೂಚಿಸಿದರು. "ಈ ಘಟನೆ ಸಿಂಧ್ ಪ್ರಾಂತ್ಯದಲ್ಲಿ ನಡೆದಿದೆ. ಸಿಂಧ್, ಪಂಜಾಬ್‌ಗೆ ಹೋಲಿಸಿದರೆ ಹೆಚ್ಚು ಸಹಿಷ್ಣು ಸಮಾಜವಾಗಿದೆ. ಕ್ರೈಸ್ತರ ವಿರುದ್ಧದ ಬಹುತೇಕ ಹಿಂಸಾತ್ಮಕ ದಾಳಿಗಳು ಪಂಜಾಬ್‌ನಲ್ಲೇ ನಡೆಯುತ್ತವೆ," ಎಂದು ಅವರು ಹೇಳಿದರು.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).