ಹುಡುಕಿ

ಪಾಕಿಸ್ತಾನ ಪಾಕಿಸ್ತಾನ  (AFP or licensors)

ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಧರ್ಮಸಭೆಯ ಮನವಿಯನ್ನು ಪುನರುಚ್ಚರಿಸಿದ ಪಾಕಿಸ್ತಾನದ ಧರ್ಮಾಧ್ಯಕ್ಷರಾದ ವಂ.ಜೋಸೆಫ್ ಅರ್ಷದ್

ಮತ್ತು ಶೋಷಣೆಯಿಂದ ರಕ್ಷಿಸುವ ಧರ್ಮಸಭೆಯ ಬದ್ಧತೆಯನ್ನು ಪುನರುಚ್ಚರಿಸುತ್ತಾ, "ಮಕ್ಕಳ ಸುರಕ್ಷತೆ ಕೇವಲ ಕುಟುಂಬದ ಜವಾಬ್ದಾರಿಯಲ್ಲ; ಅದು ರಾಷ್ಟ್ರದ ನೈತಿಕ ಹೊಣೆಗಾರಿಕೆಯಾಗಿದೆ" ಎಂದು ಒತ್ತಿಹೇಳಿದ್ದಾರೆ.

ವ್ಯಾಟಿಕನ್ ವರದಿ

ಅಪಹರಣ, ಅತ್ಯಾಚಾರ ಮತ್ತು ಪ್ರತಿದಿನದ ಮಕ್ಕಳ ಮೇಲಿನ ದೌರ್ಜನ್ಯ

"ಮಕ್ಕಳ ರಕ್ಷಣೆ ಅತ್ಯಂತ ಮಹತ್ವದ್ದಾಗಿದೆ" ಎಂದು ಧರ್ಮಾಧ್ಯಕ್ಷರಾದ ವಂ. ಜೋಸೆಫ್ ಅರ್ಷದ್ ಹೇಳಿದ್ದಾರೆ. ಪಾಕಿಸ್ತಾನದಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಅವರು ಆಳವಾದ ಕಳವಳ ವ್ಯಕ್ತಪಡಿಸಿದ್ದಾರೆ. ವ್ಯಾಟಿಕನ್ ಸುದ್ದಿ ಸಂಸ್ಥೆಗೆ ಅವರು ನೀಡಿದ ಸಂದರ್ಶನದಲ್ಲಿ, "ಪಾಕಿಸ್ತಾನದಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಇನ್ನೂ ವ್ಯಾಪಕವಾಗಿದ್ದು, ಈ ಸಮಸ್ಯೆಗೆ ತುರ್ತು ಗಮನ ಅಗತ್ಯವಿದೆ" ಎಂದು ಹೇಳಿದ್ದಾರೆ.

ದೇಶದಾದ್ಯಂತ ಮಕ್ಕಳ ಮೇಲಿನ ದೌರ್ಜನ್ಯವನ್ನು ಪ್ರತಿದಿನ ದಾಖಲಿಸುವ ಪಾಕಿಸ್ತಾನದ ಸ್ವಯಂಸೇವಾ ಸಂಸ್ಥೆ ಸಾಹಿಲ್ ಪ್ರಕಟಿಸಿರುವ "ಕ್ರೂಯಲ್ ನಂಬರ್ಸ್" ವರದಿಯನ್ನು ಉಲ್ಲೇಖಿಸಿದ ಅವರು, 2025ರಲ್ಲಿ ಮಕ್ಕಳ ಮೇಲಿನ ಹಿಂಸಾಚಾರದ ವರದಿಯಾದ ಪ್ರಕರಣಗಳಲ್ಲಿ 8 ಶೇಕಡಾ ಏರಿಕೆ ಕಂಡುಬಂದಿದ್ದು, ಒಟ್ಟು 3,630 ಪ್ರಕರಣಗಳು ದೃಢಪಟ್ಟಿವೆ. ಅಂದರೆ ಪ್ರತಿದಿನ ಸರಾಸರಿ ಒಂಬತ್ತಕ್ಕೂ ಹೆಚ್ಚು ಮಕ್ಕಳು ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಈ ವರದಿಯ ಪ್ರಕಾರ, ಅಪಹರಣ ಮತ್ತು ಅತ್ಯಾಚಾರ ಅತ್ಯಂತ ಸಾಮಾನ್ಯ ಅಪರಾಧಗಳಾಗಿದ್ದು, ಸಂತ್ರಸ್ತರಲ್ಲಿ 53 ಶೇಕಡಾ ಬಾಲಕಿಯರು ಇದ್ದಾರೆ. 11ರಿಂದ 15 ವರ್ಷ ವಯಸ್ಸಿನ ಮಕ್ಕಳು ಅತ್ಯಂತ ಹೆಚ್ಚು ಅಪಾಯದಲ್ಲಿದ್ದಾರೆ. "ಮಕ್ಕಳ ವಿರುದ್ಧದ ಅಪರಾಧಗಳು ಮಾನವ ಘನತೆಯ ಮೇಲಿನ ಅತ್ಯಂತ ನಾಚಿಕೆಗೇಡಿನ ಮತ್ತು ಅಸಹನೀಯ ಉಲ್ಲಂಘನೆಗಳಾಗಿವೆ" ಎಂದು ಧರ್ಮಾಧ್ಯಕ್ಷರು ವಿಷಾದ ವ್ಯಕ್ತಪಡಿಸಿದ್ದಾರೆ.

"ಮಕ್ಕಳನ್ನು ಅತ್ಯುನ್ನತ ನೈತಿಕ, ಸಾಮಾಜಿಕ, ಕಾನೂನು ಮತ್ತು ಸಾಂಸ್ಥಿಕ ಹೊಣೆಗಾರಿಕೆಯಿಂದ ರಕ್ಷಿಸಬೇಕು"

"ತಮ್ಮ ಮಕ್ಕಳು ಬೆದರಿಕೆ, ಭಯ ಮತ್ತು ಅಭದ್ರತೆಯ ನಡುವೆ ಬದುಕುತ್ತಿರುವವರೆಗೆ ಯಾವುದೇ ಸಮಾಜವು ತನ್ನನ್ನು ನ್ಯಾಯಯುತ, ಶಾಂತಿಯುತ ಅಥವಾ ನಾಗರಿಕ ಸಮಾಜವೆಂದು ಕರೆಯಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ. "ಮಕ್ಕಳು ದೇವರ ಪವಿತ್ರ ಕೊಡುಗೆಯಾಗಿದ್ದು, ಅವರನ್ನು ಅತ್ಯುನ್ನತ ನೈತಿಕ, ಸಾಮಾಜಿಕ, ಕಾನೂನು ಮತ್ತು ಸಾಂಸ್ಥಿಕ ಹೊಣೆಗಾರಿಕೆಯಿಂದ ರಕ್ಷಿಸಬೇಕು" ಎಂದು ಒತ್ತಿಹೇಳಿದರು.

ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಸರ್ಕಾರ, ಕಾನೂನು ಜಾರಿ ಸಂಸ್ಥೆಗಳು, ಮಕ್ಕಳ ರಕ್ಷಣಾ ಇಲಾಖೆಗಳು ಹಾಗೂ ಸಂಬಂಧಿತ ಎಲ್ಲ ಸಂಸ್ಥೆಗಳು ಇಂತಹ ಅಪರಾಧಗಳಿಗೆ ಹೊಣೆಗಾರರ ವಿರುದ್ಧ ತಕ್ಷಣದ, ದೃಢವಾದ, ಪಾರದರ್ಶಕ ಹಾಗೂ ಮಾದರಿಯಾಗುವ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು. ಮಕ್ಕಳ ಮೇಲಿನ ದೌರ್ಜನ್ಯ ಎಸಗುವವರನ್ನು ಯಾವುದೇ ವಿಳಂಬವಿಲ್ಲದೆ ನ್ಯಾಯದ ಮುಂದೆ ತರಬೇಕು. ಮೌನ, ನಿರ್ಲಕ್ಷ್ಯ ಹಾಗೂ ಕಾನೂನು ಜಾರಿಯಲ್ಲಿ ಆಗುವ ವೈಫಲ್ಯವನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕು ಎಂದು ಕರೆ ನೀಡಿದರು.

ಈ ವಿಷಯದ ಕುರಿತು ಜಾಗೃತಿ ಮೂಡಿಸಲು, ಉತ್ತರ ಪಾಕಿಸ್ತಾನದ ಇಸ್ಲಾಮಾಬಾದ್–ರಾವಲ್ಪಿಂಡಿ ಕಥೋಲಿಕ ಸಮುದಾಯವು 2026ನೇ ವರ್ಷವನ್ನು "ಮಕ್ಕಳ ವರ್ಷ"ವಾಗಿ ಆಚರಿಸುತ್ತಿದೆ.

ಧರ್ಮಸಭೆಯ ದೃಢ ಬದ್ಧತೆ

ಈ ಉಪಕ್ರಮವು "ಮಕ್ಕಳ ಘನತೆ, ರಕ್ಷಣೆ, ಶಿಕ್ಷಣ, ವ್ಯಕ್ತಿತ್ವ ನಿರ್ಮಾಣ ಮತ್ತು ಸಮಗ್ರ ಕಲ್ಯಾಣವನ್ನು ಉತ್ತೇಜಿಸುವ ಧರ್ಮಸಭೆಯ ದೃಢ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ" ಎಂದು ಧರ್ಮಾಧ್ಯಕ್ಷರು ತಿಳಿಸಿದ್ದಾರೆ. ಧರ್ಮಕೇಂದ್ರಗಳು, ಶಾಲೆಗಳು ಮತ್ತು ವಿವಿಧ ಸಂಘಟನೆಗಳ ಮೂಲಕ ಧರ್ಮಕ್ಷೇತ್ರವು ಜಾಗೃತಿ ಮೂಡಿಸುವ ಕಾರ್ಯವನ್ನು ಮುಂದುವರಿಸಲಿದ್ದು, ಕುಟುಂಬಗಳು, ಶಾಲೆಗಳು, ಧರ್ಮಕೇಂದ್ರಗಳು ಹಾಗೂ ಸಮುದಾಯಗಳು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿ ಪ್ರತಿಯೊಬ್ಬ ಮಗುವಿನ ಸುರಕ್ಷತೆ ಮತ್ತು ಅಭಿವೃದ್ಧಿಗೆ ಕೈಜೋಡಿಸುವಂತೆ ಪ್ರೋತ್ಸಾಹಿಸಲಿದೆ ಎಂದು ಅವರು ಹೇಳಿದರು. ಅಲ್ಲದೆ, ಪೋಷಕರು, ಶಿಕ್ಷಕರು, ಧಾರ್ಮಿಕ ನಾಯಕರು, ಮಾಧ್ಯಮಗಳು, ನಾಗರಿಕ ಸಮಾಜ ಹಾಗೂ ಎಲ್ಲ ನಾಗರಿಕರು ಮಕ್ಕಳ ರಕ್ಷಣೆಯ ಹೊಣೆಗಾರಿಕೆಯನ್ನು ಸ್ವೀಕರಿಸಬೇಕು ಎಂದು ಮನವಿ ಮಾಡಿದರು.

"ಪೋಷಕರು ಸದಾ ಎಚ್ಚರಿಕೆಯಿಂದಿರಬೇಕು, ತಮ್ಮ ಮಕ್ಕಳೊಂದಿಗೆ ವಿಶ್ವಾಸದ ಸಂಬಂಧ ಬೆಳೆಸಬೇಕು, ಅವರ ಮಾತುಗಳನ್ನು ಗಮನದಿಂದ ಆಲಿಸಬೇಕು ಹಾಗೂ ವೈಯಕ್ತಿಕ ಸುರಕ್ಷತೆಯ ಬಗ್ಗೆ ಅವರಿಗೆ ಶಿಕ್ಷಣ ನೀಡಬೇಕು" ಎಂದು ಸಲಹೆ ನೀಡಿದರು.

"ಸಂದೇಹಾಸ್ಪದ ಪ್ರತಿಯೊಂದು ಪ್ರಕರಣವನ್ನೂ ಸಂಬಂಧಿಸಿದ ಅಧಿಕಾರಿಗಳಿಗೆ ವರದಿ ಮಾಡಬೇಕು"

"ಸಮಾಜವು ಮೌನ, ಭಯ, ಕಳಂಕ ಮತ್ತು ನಿರ್ಲಕ್ಷ್ಯವನ್ನು ತಿರಸ್ಕರಿಸಬೇಕು. ಮಕ್ಕಳ ಮೇಲಿನ ದೌರ್ಜನ್ಯದ ಪ್ರತಿಯೊಂದು ಸಂದೇಹಾಸ್ಪದ ಪ್ರಕರಣವನ್ನೂ ಸಂಬಂಧಿಸಿದ ಅಧಿಕಾರಿಗಳಿಗೆ ಕಡ್ಡಾಯವಾಗಿ ವರದಿ ಮಾಡಬೇಕು" ಎಂದು ಧರ್ಮಾಧ್ಯಕ್ಷ ಅರ್ಷದ್ ಹೇಳಿದರು.

"ಮಕ್ಕಳ ಸುರಕ್ಷತೆ ಕೇವಲ ಕುಟುಂಬದ ವಿಷಯವಲ್ಲ; ಅದು ರಾಷ್ಟ್ರದ ನೈತಿಕ ಹೊಣೆಗಾರಿಕೆಯಾಗಿದೆ. ನಮ್ಮ ಪ್ರೀತಿಯ ಮಕ್ಕಳು ಭಯವಿಲ್ಲದೆ ಬದುಕುವ, ಘನತೆಯಿಂದ ಬೆಳೆಯುವ ಹಾಗೂ ಭರವಸೆಯಿಂದ ಭವಿಷ್ಯವನ್ನು ಎದುರು ನೋಡುವ ಸಮಾಜಕ್ಕೆ ಅರ್ಹರಾಗಿದ್ದಾರೆ" ಎಂದು ಅವರು ಒತ್ತಿಹೇಳಿದರು. ಕೊನೆಯಲ್ಲಿ, ಧರ್ಮಭೇದವಿಲ್ಲದೆ ಎಲ್ಲರೂ ಒಂದಾಗಿ ಮಕ್ಕಳ ಕಲ್ಯಾಣಕ್ಕಾಗಿ ಕೈಜೋಡಿಸುವಂತೆ ಅವರು ಮನವಿ ಮಾಡಿದರು.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

09 ಜುಲೈ 2026, 20:12