FABC ಉದ್ಘಾಟನಾ ಪವಿತ್ರ ಬಲಿಪೂಜೆಯಲ್ಲಿ ಕಾರ್ಡಿನಲ್ ಗ್ರಾಸಿಯಾಸ್: ಸಿನೋಡಲ್ ಪಯಣವು ಲೋಕಕ್ಕೆ ಧರ್ಮಸಭೆಯ ಅಮೂಲ್ಯ ಕೊಡುಗೆ
ಲೇಖಕರು: ಅಬ್ದಿ ಸುಸಾಂತೋ – ಜಕಾರ್ತ
ಜಕಾರ್ತದ ಹೋಟೆಲ್ ಮುಲಿಯಾದ ಬಾಲ್‌ರೂಮ್ 2 ಮತ್ತು 3ರಲ್ಲಿ ಬೆಳಿಗ್ಗೆ 9 ಗಂಟೆಗೆ ನಡೆದ ಉದ್ಘಾಟನಾ ಪವಿತ್ರ ಸಂಸ್ಕಾರದ ಆಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾರ್ಡಿನಲ್ ಗ್ರಾಸಿಯಾಸ್, ಜನರನ್ನು ಒಂದಾಗಿಸುವುದು, ಸೌಹಾರ್ದತೆಯನ್ನು ಬೆಳೆಸುವುದು ಮತ್ತು ಶಾಂತಿಯ ಸಾಧನವಾಗುವುದು ಧರ್ಮಸಭೆಯ ಧರ್ಮಪ್ರಚಾರವಾಗಿದೆ ಎಂದು ಹೇಳಿದರು.
“ನಮ್ಮ ಧರ್ಮಪ್ರಚಾರವು ಸೇತುವೆ ನಿರ್ಮಿಸುವವರಾಗುವುದಾಗಿದೆ,” ಎಂದು ಅವರು ತಮ್ಮ ಪ್ರಭೋದನೆಯಲ್ಲಿ ಹೇಳಿದರು. “ಧರ್ಮಸಭೆಯು ಸೇತುವೆಗಳನ್ನು ನಿರ್ಮಿಸಲು ಕರೆಯಲ್ಪಟ್ಟಿದೆ.”
ಉದ್ಘಾಟನಾ ಪವಿತ್ರ ಬಲಿಪೂಜೆಯು ಇಂಡೋನೇಷ್ಯಾದ ವಿವಿಧ ಸಾಂಸ್ಕೃತಿಕ ಸಂಪ್ರದಾಯಗಳನ್ನು ಒಳಗೊಂಡಿತ್ತು. ಅಲ್ಲದೆ, ಏಷ್ಯಾದ ಧರ್ಮಸಭೆಯನ್ನು ಪ್ರತಿನಿಧಿಸುವ ವಿವಿಧ ಭಾಷೆಗಳ ಪ್ರಾರ್ಥನೆಗಳು ಈ ಆಚರಣೆಗೆ ವಿಶೇಷ ಮೆರುಗು ನೀಡಿದವು.
ಕಾರ್ಡಿನಲ್ ಗ್ರಾಸಿಯಾಸ್ ಅವರೊಂದಿಗೆ ಹಾಂಗ್ ಕಾಂಗ್‌ನ ಕಾರ್ಡಿನಲ್ ಸ್ಟೀಫನ್ ಚೌ ಸೌ-ಯಾನ್ ಹಾಗೂ ಪೂರ್ವ ತಿಮೋರ್‌ನ ಕಾರ್ಡಿನಲ್ ವರ್ಜಿಲಿಯೋ ಡೊ ಕಾರ್ಮೊ ದ ಸಿಲ್ವಾ ಮುಖ್ಯ ಸಹ-ಆಚರಣೆ ನಡೆಸಿದರು. ಇವರೊಂದಿಗೆ ಏಷ್ಯಾದ ವಿವಿಧ ರಾಷ್ಟ್ರಗಳಿಂದ ಆಗಮಿಸಿದ್ದ 100ಕ್ಕೂ ಹೆಚ್ಚು ಕಾರ್ಡಿನಲ್‌ಗಳು, ಧರ್ಮಾಧ್ಯಕ್ಷರು, ಧರ್ಮಗುರುಗಳು, ದೇವರಿಗೆ ಸಮರ್ಪಿತ ಜೀವಿಗಳು ಹಾಗೂ ಪ್ರತಿನಿಧಿಗಳು ಈ ವಾರಪೂರ್ತಿ ನಡೆಯುವ ಮಹಾಸಭೆಯಲ್ಲಿ ಭಾಗವಹಿಸಿದ್ದರು.
ಪ್ರವೇಶ ಮೆರವಣಿಗೆ ಆರಂಭವಾಗುತ್ತಿದ್ದಂತೆ, ಇಂಡೋನೇಷ್ಯಾದ ಉತ್ತರ ಸುಮಾತ್ರ ಪ್ರಾಂತ್ಯದ ಸಾಂಪ್ರದಾಯಿಕ ಉಡುಪು ಧರಿಸಿದ್ದ ಪುರುಷರು ಮತ್ತು ಮಹಿಳೆಯರು—ನಿಯಾಸ್, ಬಟಾಕ್ ಮತ್ತು ಮಿನಾಂಗ್‌ಕಬೌ ಸಮುದಾಯಗಳ ಸದಸ್ಯರು—ಧರ್ಮಾಧ್ಯಕ್ಷರು ಮತ್ತು ಪ್ರತಿನಿಧಿಗಳನ್ನು ಸಭಾಂಗಣಕ್ಕೆ ಆತ್ಮೀಯವಾಗಿ ಸ್ವಾಗತಿಸಿದರು. ಈ ಸಾಂಸ್ಕೃತಿಕ ಸ್ವಾಗತವು ಇಂಡೋನೇಷ್ಯಾದ ಶ್ರೀಮಂತ ಜನಾಂಗೀಯ ಪರಂಪರೆಯನ್ನು ಪ್ರತಿಬಿಂಬಿಸುವುದರ ಜೊತೆಗೆ ಆತಿಥೇಯ ಧರ್ಮಸಭೆಯ ಆತಿಥ್ಯವನ್ನೂ ವ್ಯಕ್ತಪಡಿಸಿತು.
ವಿಶ್ವಾಸಿಗಳ ಪ್ರಾರ್ಥನೆ ಕೂಡ ಏಷ್ಯಾದ ವೈವಿಧ್ಯತೆಯನ್ನು ಪ್ರತಿಬಿಂಬಿಸಿತು. ಜಾವಾನೀಸ್, ಮೆಂಟವಾಯಿ, ಮ್ಯಾಂಡರಿನ್ ಚೀನೀ, ಬೋರ್ನಿಯೋದ ಬೆನಾವಾಸ್ ದಯಾಕ್ ಮತ್ತು ಪೂರ್ವ ನುಸಾ ತೆಂಗಾರಾದ ಸುಂಬಾನೀಸ್ ಸೇರಿದಂತೆ ಹಲವು ಭಾಷೆಗಳಲ್ಲಿ ಮನವಿಗಳು ಸಲ್ಲಿಸಲ್ಪಟ್ಟವು. ಈ ಬಹುಭಾಷಾ ಪ್ರಾರ್ಥನೆಗಳು ಖಂಡದ ಅನೇಕ ಜನಾಂಗಗಳು, ಸಂಸ್ಕೃತಿಗಳು ಮತ್ತು ಭಾಷೆಗಳ ನಡುವೆಯೂ ಧರ್ಮಸಭೆಯ ಏಕತೆಯನ್ನು ಒತ್ತಿಹೇಳಿದವು.
ಈ ಆಚರಣೆಯ ಮತ್ತೊಂದು ವಿಶಿಷ್ಟ ಅಂಶವೆಂದರೆ ಸಂತರ ಲಿತನಿ. ಚೀನಾ, ಭಾರತ, ಜಪಾನ್, ಕೊರಿಯಾ, ಮಲೇಷ್ಯಾ, ಫಿಲಿಪ್ಪೀನ್ಸ್, ಶ್ರೀಲಂಕಾ, ಹಾಂಗ್ ಕಾಂಗ್, ಥೈಲ್ಯಾಂಡ್, ಮ್ಯಾನ್ಮಾರ್, ಕಝಾಕಿಸ್ತಾನ್, ಇಂಡೋನೇಷ್ಯಾ, ಲಾವೋಸ್ ಮತ್ತು ಅಫ್ಘಾನಿಸ್ತಾನ ಸೇರಿದಂತೆ ಏಷ್ಯಾದ ವಿವಿಧ ರಾಷ್ಟ್ರಗಳ ಪವಿತ್ರ ಪುರುಷರು ಮತ್ತು ಮಹಿಳಾ ಸಂತರ ಮಧ್ಯಸ್ಥಿಕೆಯನ್ನು ಕೋರಿ ಮಹಾಸಭೆಯು ಪ್ರಾರ್ಥಿಸಿತು. ಇದು ಏಷ್ಯಾದ ಸಮೃದ್ಧ ಕ್ರೈಸ್ತ ಪರಂಪರೆಯನ್ನು ವಿಶೇಷವಾಗಿ ಎತ್ತಿಹಿಡಿಯಿತು.
ತಮ್ಮ ಪ್ರಭೋದನೆಯಲ್ಲಿ ಕಾರ್ಡಿನಲ್ ಗ್ರಾಸಿಯಾಸ್, FABC ಮಹಾಸಭೆಯು ಕೇವಲ ಒಂದು ಆಡಳಿತಾತ್ಮಕ ಸಭೆಯಲ್ಲ ಎಂದು ನೆನಪಿಸಿದರು. ಬದಲಾಗಿ, ಕಾಲದ ಸಂಕೇತಗಳನ್ನು ವಿವೇಚಿಸಲು ಮತ್ತು ಶುಭಸಂದೇಶವನ್ನು ಸಾರುವ ತಮ್ಮ ಬದ್ಧತೆಯನ್ನು ನವೀಕರಿಸಲು ಏಷ್ಯಾದ ಸ್ಥಳೀಯ ಧರ್ಮಸಭೆಗಳಿಗೆ ಇದು ಒಂದು ಅಮೂಲ್ಯ ಅವಕಾಶವಾಗಿದೆ ಎಂದು ಅವರು ಹೇಳಿದರು.
FABCಯ ಐದು ದಶಕಗಳಿಗೂ ಹೆಚ್ಚು ಕಾಲದ ಪಯಣವನ್ನು ಸ್ಮರಿಸಿದ ಅವರು, ಇತ್ತೀಚಿನ ವರ್ಷಗಳಲ್ಲಿ ಕೊವಿಡ್-19 ಸಾಂಕ್ರಾಮಿಕವು ಧರ್ಮಸಭೆಯು ಎದುರಿಸಿದ ಪ್ರಮುಖ ಸವಾಲುಗಳಲ್ಲಿ ಒಂದಾಗಿದೆ ಎಂದು ಹೇಳಿದರು. ಈ ಬಿಕ್ಕಟ್ಟು ಖಂಡದಾದ್ಯಂತ ಅಪಾರ ದುಃಖವನ್ನು ಉಂಟುಮಾಡಿದರೂ, ಏಷ್ಯಾದ ಧರ್ಮಸಭೆಗಳ ಸ್ಥೈರ್ಯ, ಐಕ್ಯತೆ ಮತ್ತು ಸಹೋದರ ಸಹಕಾರದ ಮನೋಭಾವವನ್ನು ಸ್ಪಷ್ಟವಾಗಿ ತೋರಿಸಿಕೊಟ್ಟಿತು ಎಂದರು.
ಯುದ್ಧ ಮತ್ತು ಹಿಂಸಾಚಾರವು ಇಂದಿನ ಮಾನವಕುಲ ಎದುರಿಸುತ್ತಿರುವ ಅತಿದೊಡ್ಡ ಸವಾಲುಗಳಲ್ಲಿ ಒಂದಾಗಿದೆ ಎಂದು ಕಾರ್ಡಿನಲ್ ಗ್ರಾಸಿಯಾಸ್ ಹೇಳಿದರು. ಈ ಸಂದರ್ಭದಲ್ಲಿ ಪೂಜ್ಯ ಜಗದ್ಗುರುಗಳಾದ ಫ್ರಾನ್ಸಿಸ್ ಅವರು ಪ್ರಸ್ತುತ ಜಾಗತಿಕ ಪರಿಸ್ಥಿತಿಯನ್ನು "ತುಂಡು ತುಂಡಾಗಿ ನಡೆಯುತ್ತಿರುವ ಮೂರನೇ ವಿಶ್ವಯುದ್ಧ" ಎಂದು ಬಣ್ಣಿಸಿದ್ದ ಮಾತನ್ನು ಅವರು ಉಲ್ಲೇಖಿಸಿದರು.
ಸಿನೋಡಲ್ ಪಯಣವು ಧರ್ಮಸಭೆಗೆ ಮಾತ್ರವಲ್ಲ, ಇಡೀ ಸಮಾಜಕ್ಕೂ ಒಂದು ಅಮೂಲ್ಯ ಕೊಡುಗೆಯಾಗಿದೆ ಎಂದು ಅವರು ಹೇಳಿದರು. ಕುಟುಂಬ ಜೀವನ, ಸಮುದಾಯ ಮೌಲ್ಯಗಳು ಮತ್ತು ಪರಸ್ಪರ ಗೌರವದ ಮೂಲಕ ಒಟ್ಟಾಗಿ ನಡೆಯುವ ಮನೋಭಾವವು ಏಷ್ಯಾದ ಸಂಸ್ಕೃತಿಗಳಲ್ಲಿ ಬಹುಕಾಲದಿಂದ ಅಸ್ತಿತ್ವದಲ್ಲಿದೆ ಎಂದು ಅವರು ತಿಳಿಸಿದರು. ಆಲಿಸುವಿಕೆ, ಭಾಗವಹಿಸುವಿಕೆ, ಮುಕ್ತತೆ ಮತ್ತು ಹಂಚಿಕೊಂಡ ಜವಾಬ್ದಾರಿಯಂತಹ ಸಿನೋಡಲ್ ಮೌಲ್ಯಗಳು ಉತ್ತಮ ಆಡಳಿತವನ್ನು ಉತ್ತೇಜಿಸುವುದಲ್ಲದೆ, ಏಷ್ಯಾದ ಅನೇಕ ಭಾಗಗಳಲ್ಲಿ ಭ್ರಷ್ಟಾಚಾರವನ್ನು ಎದುರಿಸಲು ಸಹ ನೆರವಾಗಬಲ್ಲವು ಎಂದು ಅವರು ಹೇಳಿದರು.
ಪವಿತ್ರ ಬಲಿಪೂಜೆಯ ಅಂತ್ಯದಲ್ಲಿ ಕಾರ್ಡಿನಲ್ ಗ್ರಾಸಿಯಾಸ್, ಖಂಡದಾದ್ಯಂತ ಶಾಂತಿ ಮತ್ತು ಸಹೋದರತ್ವವನ್ನು ಬೆಳೆಸಲು ಹೊಸ ಹಾಗೂ ಸೃಜನಾತ್ಮಕ ಮಾರ್ಗಗಳನ್ನು ಕಂಡುಕೊಳ್ಳುವಂತೆ ಪ್ರತಿನಿಧಿಗಳನ್ನು ಉತ್ತೇಜಿಸಿದರು.
“ದೇವರು FABCಯನ್ನು ಆಶೀರ್ವದಿಸಲಿ. ದೇವರು ಏಷ್ಯಾವನ್ನು ಆಶೀರ್ವದಿಸಲಿ,” ಎಂದು ಅವರು ತಮ್ಮ ಸಂದೇಶವನ್ನು ಮುಕ್ತಾಯಗೊಳಿಸಿದರು.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).