ಉತ್ತರ ಅರೇಬಿಯಾ: ಕ್ರೈಸ್ತ ಸಮುದಾಯಗಳಿಗೆ ಭೇಟಿ ನೀಡಿದ ಧರ್ಮಾಧ್ಯಕ್ಷ ಬೆರಾರ್ಡಿ
ಲೇಖಕರು: ರಾಬರ್ಟೊ ಪಾಗ್ಲಿಯಲೋಂಗಾ
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಸಂದರ್ಭದಲ್ಲಿ, ಉತ್ತರ ಅರೇಬಿಯಾದ ಪ್ರೇಷಿತ ಪ್ರತಿನಿಧಿ ಧರ್ಮಾಧ್ಯಕ್ಷ ಅಲ್ಡೊ ಬೆರಾರ್ಡಿ ಅವರು 2026ರ ಮೊದಲ ಆರು ತಿಂಗಳಲ್ಲಿ ತಮ್ಮ ಧರ್ಮಕ್ಷೇತ್ರದ ವಿವಿಧ ಧರ್ಮಕೇಂದ್ರಗಳಿಗೆ ಧಾರ್ಮಿಕ ಭೇಟಿಗಳನ್ನು ಪೂರ್ಣಗೊಳಿಸಿದ್ದಾರೆ. ಈ ಭೇಟಿಗಳ ಮೂಲಕ ಧರ್ಮಸಭೆಯು ವಿಶ್ವಾಸಿಗಳೊಂದಿಗೆ ಇರುವ ಸನಿಹವನ್ನು ವ್ಯಕ್ತಪಡಿಸುವುದರ ಜೊತೆಗೆ, ಐಕ್ಯತೆ, ಆಶಾಭರವ ಮತ್ತು ಶಾಂತಿಗಾಗಿ ಪ್ರಾರ್ಥಿಸುವಂತೆ ಉತ್ತೇಜಿಸಿದೆ.
ಕೊಲ್ಲಿ ರಾಷ್ಟ್ರಗಳ ಧರ್ಮಕೇಂದ್ರಗಳಿಗೆ ಭೇಟಿ
ಉತ್ತರ ಅರೇಬಿಯಾದ ಪ್ರೇಷಿತ ಧರ್ಮಪ್ರಾಂತ್ಯ ಬಿಡುಗಡೆ ಮಾಡಿದ ಪ್ರಕಟಣೆಯ ಪ್ರಕಾರ, ಧರ್ಮಾಧ್ಯಕ್ಷ ಬೆರಾರ್ಡಿ ಅವರು ಕುವೈತ್, ಕತಾರ್, ಬಹ್ರೇನ್ ಮತ್ತು ಸೌದಿ ಅರೇಬಿಯಾದಲ್ಲಿರುವ ಹತ್ತು ಧರ್ಮಕೇಂದ್ರಗಳು ಮತ್ತು ಎರಡು ಪ್ರಧಾನ ದೇವಾಲಯಗಳಿಗೆ ಭೇಟಿ ನೀಡಿದರು. ಈ ಭೇಟಿಯ ಉದ್ದೇಶವು "ಐಕ್ಯತೆಯನ್ನು ಬಲಪಡಿಸುವುದು, ವಿಶ್ವಾಸಿಗಳಿಗೆ ಬೆಂಬಲ ನೀಡುವುದು ಹಾಗೂ ಕೊಲ್ಲಿ ಪ್ರದೇಶದಾದ್ಯಂತ ಧರ್ಮಸಭೆಯ ಧರ್ಮಪ್ರಚಾರವನ್ನು ಉತ್ತೇಜಿಸುವುದು" ಆಗಿತ್ತು. ಈ ಭೇಟಿಗಳ ಸಂದರ್ಭದಲ್ಲಿ ಸಂವಾದ ಹಾಗೂ ಧರ್ಮಸಭೆಯ ಸಾಮಾನ್ಯ ಧರ್ಮಪ್ರಚಾರದ ಕಾರ್ಯಕ್ಕೆ ವಿಶೇಷ ಮಹತ್ವ ನೀಡಲಾಯಿತು. ಈ ಧಾರ್ಮಿಕ ಭೇಟಿಯನ್ನು "ಭೇಟಿ ಮತ್ತು ಆಧ್ಯಾತ್ಮಿಕ ನವೀಕರಣಕ್ಕಾಗಿ ದೇವರ ಕೃಪೆಯ ಕ್ಷಣ" ಎಂದು ವಿವರಿಸಲಾಯಿತು.
ಪವಿತ್ರ ಸಂಸ್ಕಾರದ ಮೂಲಕ ಕ್ರಿಸ್ತರೊಂದಿಗಿನ ತಮ್ಮ ಸಂಬಂಧವನ್ನು ಮತ್ತಷ್ಟು ಆಳಗೊಳಿಸುವಂತೆ, ವಿಶ್ವಾಸದಲ್ಲಿ ದೃಢವಾಗಿ ಉಳಿಯುವಂತೆ ಹಾಗೂ ತಮ್ಮ ಕುಟುಂಬ, ಉದ್ಯೋಗ ಮತ್ತು ಸಮುದಾಯಗಳಲ್ಲಿ ಶುಭಸಂದೇಶಕ್ಕೆ ಸಾಕ್ಷಿಗಳಾಗಿ ಬದುಕುವುದನ್ನು ಮುಂದುವರಿಸುವಂತೆ ಧರ್ಮಾಧ್ಯಕ್ಷರು ವಿಶ್ವಾಸಿಗಳನ್ನು ಪ್ರೋತ್ಸಾಹಿಸಿದರು.
'ಅರೇಬಿಯಾದ ಮಾತೆ' ಸಾಕ್ಷ್ಯಚಿತ್ರ
ಈ ಭೇಟಿಗಳಲ್ಲಿ ಒಂದರ ಸಂದರ್ಭದಲ್ಲಿ "Our Lady of Arabia – A Legacy of Faith" ಎಂಬ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು. ಈ ಚಿತ್ರವು ಕುವೈತ್‌ನ ಅಹ್ಮದಿ ನಗರದಲ್ಲಿರುವ ಅರೇಬಿಯಾದ ಮಾತೆಯ ಕಿರಿಯ ಬಸಿಲಿಕಾದ ಇತಿಹಾಸ, ಆಧ್ಯಾತ್ಮಿಕ ಪರಂಪರೆ ಹಾಗೂ ನಿರಂತರ ಧರ್ಮಪ್ರಚಾರದ ಕಾರ್ಯವನ್ನು ಪರಿಚಯಿಸುತ್ತದೆ. ಅಹ್ಮದಿಯಲ್ಲಿದ್ದ ವೇಳೆ, ಧರ್ಮಾಧ್ಯಕ್ಷ ಬೆರಾರ್ಡಿ ಹಾಗೂ ಧರ್ಮಪ್ರಾಂತ್ಯದ ಪ್ರತಿನಿಧಿಗಳು ಕುವೈತ್ ಆಯಿಲ್ ಕಂಪನಿಯ ಅಧಿಕಾರಿಗಳನ್ನು ಸೌಹಾರ್ದಯುತವಾಗಿ ಭೇಟಿ ಮಾಡಿ, ಧರ್ಮಸಭೆ ಮತ್ತು ಸಂಸ್ಥೆಯ ನಡುವಿನ ದೀರ್ಘಕಾಲದ ಸಂಬಂಧವನ್ನು ಮತ್ತೊಮ್ಮೆ ದೃಢಪಡಿಸಿದರು.
ವಿಶ್ವಾಸಿಗಳ ಮಾತುಗಳಿಗೆ ಕಿವಿಯಾದ ಧರ್ಮಾಧ್ಯಕ್ಷರು
ಧರ್ಮಾಧ್ಯಕ್ಷ ಬೆರಾರ್ಡಿಯವರ ಭೇಟಿಯ ಬಹುಪಾಲು ಸಮಯವು ವಿಶ್ವಾಸಿಗಳ ಅನುಭವಗಳು, ಸವಾಲುಗಳು ಮತ್ತು ನಿರೀಕ್ಷೆಗಳನ್ನು ಆಲಿಸುವುದರಲ್ಲಿ ಕಳೆಯಿತು. ಪ್ರತಿಯೊಂದು ಧರ್ಮಕೇಂದ್ರದ ಆಧ್ಯಾತ್ಮಿಕ ಹಾಗೂ ಸಂಘಟನಾ ಬೆಳವಣಿಗೆಗೆ ಅಗತ್ಯವಾದ ಧಾರ್ಮಿಕ ಮಾರ್ಗದರ್ಶನವನ್ನೂ ಅವರು ನೀಡಿದರು. ಪ್ರತಿಯೊಂದು ಸಮುದಾಯವೂ ಪರಸ್ಪರ ಸಹಕಾರವನ್ನು ಬಲಪಡಿಸುವಂತೆ, ಧರ್ಮಪ್ರಚಾರದ ಶಿಷ್ಯತ್ವವನ್ನು ಉತ್ತೇಜಿಸುವಂತೆ ಹಾಗೂ ಪವಿತ್ರಾತ್ಮರಿಂದ ಪ್ರೇರಿತವಾದ ಸೇವಾ ಮನೋಭಾವವನ್ನು ಅಳವಡಿಸಿಕೊಳ್ಳುವಂತೆ ಅವರು ಕರೆ ನೀಡಿದರು.
ಬಹ್ರೇನ್‌ನ ಪವಿತ್ರ ಹೃದಯ ದೇವಾಲಯದಲ್ಲಿ, ಧರ್ಮಾಧ್ಯಕ್ಷ ಬೆರಾರ್ಡಿ ಅವರು 155 ಅಭ್ಯರ್ಥಿಗಳಿಗೆ ದೃಢೀಕರಣದ ಸಂಸ್ಕಾರವನ್ನು ನೀಡಿದರು. ಅಲ್ಲದೆ, ಪೂಜ್ಯ ಜಗದ್ಗುರುಗಳಾದ ಫ್ರಾನ್ಸಿಸ್ ಅವರು ಬಹ್ರೇನ್‌ಗೆ ನಡೆಸಿದ ಪ್ರೇಷಿತ ಭೇಟಿಯ ಸಂದರ್ಭದಲ್ಲಿ ಆಚರಿಸಿದ ಐತಿಹಾಸಿಕ ಪವಿತ್ರ ಬಲಿಪೂಜೆಗಾಗಿ ನಿರ್ಮಿಸಲಾಗಿದ್ದ ಮರಿಯಮ್ಮನವರ ಪ್ರತಿಮೆಯನ್ನು ಹೊಂದಿರುವ ಕನ್ಯಾ ಮರಿಯಮ್ಮನವರ ಪುಣ್ಯಕ್ಷೇತ್ರವನ್ನೂ ಆಶೀರ್ವದಿಸಿದರು. ಈ ಧಾರ್ಮಿಕ ಭೇಟಿಯು ಅಸ್ಸಿಸಿಯ ಸಂತ ಫ್ರಾನ್ಸಿಸ್ ಅವರ 800ನೇ ವಾರ್ಷಿಕೋತ್ಸವದ ವಿಶೇಷ ಜುಬಿಲಿ ವರ್ಷಕ್ಕೂ ಚಾಲನೆ ನೀಡಿತು.
ಹಲವು ಸಂದರ್ಭಗಳಲ್ಲಿ, ವಿಶ್ವಾಸ, ಭರವಸೆ ಮತ್ತು ಪ್ರೀತಿಯಲ್ಲಿ ವಿಶ್ವಾಸಿಗಳು ಒಂದಾಗಿರುವಾಗಲೇ ಧರ್ಮಸಭೆಯು ತನ್ನ ಧರ್ಮಪ್ರಚಾರದ ಕಾರ್ಯವನ್ನು ಅತ್ಯುತ್ತಮವಾಗಿ ನೆರವೇರಿಸುತ್ತದೆ ಎಂದು ಧರ್ಮಾಧ್ಯಕ್ಷ ಬೆರಾರ್ಡಿ ವಿಶ್ವಾಸಿಗಳಿಗೆ ನೆನಪಿಸಿದರು.
ದಕ್ಷಿಣ ಅರೇಬಿಯಾದಲ್ಲಿ ಆರಂಭವಾದ ಬೇಸಿಗೆ ಶಿಬಿರಗಳು
ಇದೇ ವೇಳೆ, ಒಮಾನ್, ಸಂಯುಕ್ತ ಅರಬ್ ಎಮಿರೇಟ್ಸ್ ಮತ್ತು ಯೆಮೆನ್ ದೇಶಗಳನ್ನು ಒಳಗೊಂಡಿರುವ ದಕ್ಷಿಣ ಅರೇಬಿಯಾದ ಪ್ರೇಷಿತ ಧರ್ಮಪ್ರಾಂತ್ಯದ ವ್ಯಾಪ್ತಿಯಲ್ಲಿ ಧರ್ಮಕೇಂದ್ರಗಳ ಬೇಸಿಗೆ ಶಿಬಿರಗಳು ಆರಂಭಗೊಂಡಿವೆ. ಇತ್ತೀಚಿನ ತಿಂಗಳುಗಳ ಸವಾಲುಗಳು ಮತ್ತು ಕೊಲ್ಲಿ ಪ್ರದೇಶದ ಮೇಲೆ ಪರಿಣಾಮ ಬೀರಿದ ಪ್ರಾದೇಶಿಕ ಉದ್ವಿಗ್ನತೆಗಳ ನಡುವೆಯೂ ಈ ಶಿಬಿರಗಳು ನಡೆಯುತ್ತಿವೆ. ಧರ್ಮಪ್ರಾಂತ್ಯದ ಪ್ರಕಾರ, ಇದು ದೀರ್ಘಕಾಲದ ಸಂಪ್ರದಾಯವಾಗಿದ್ದು, ಇತ್ತೀಚಿನ ತಿಂಗಳುಗಳ ಕಷ್ಟಕರ ಪರಿಸ್ಥಿತಿಯ ನಂತರ ಈ ವರ್ಷ ಇದಕ್ಕೆ ವಿಶೇಷ ಮಹತ್ವ ಬಂದಿದೆ.
ದಕ್ಷಿಣ ಅರೇಬಿಯಾದ ಪ್ರೇಷಿತ ಪ್ರತಿನಿಧಿ. ಧರ್ಮಾಧ್ಯಕ್ಷ ಪೌಲೊ ಮಾರ್ಟಿನೆಲ್ಲಿ ಅವರು, ನೂರಾರು ಮಕ್ಕಳನ್ನು ಸ್ವಾಗತಿಸುವುದು "ಹೊಸ ಆರಂಭ ಮತ್ತು ಆಶಾಭರವಿನ ಸ್ಪಷ್ಟ ಸಂಕೇತವಾಗಿದೆ; ಭವಿಷ್ಯವನ್ನು ವಿಶ್ವಾಸ ಮತ್ತು ಧೈರ್ಯದಿಂದ ನೋಡುವ ಅವಕಾಶವಾಗಿದೆ" ಎಂದು ಹೇಳಿದರು.
ಪ್ರಾರ್ಥನೆ, ಶಿಕ್ಷಣ ಮತ್ತು ಸಹಭಾಗಿತ್ವ
ಧರ್ಮಪ್ರಾಂತ್ಯದ ವಿವಿಧ ಧರ್ಮಕೇಂದ್ರಗಳಲ್ಲಿ ನಡೆಯುತ್ತಿರುವ ಈ ಬೇಸಿಗೆ ಶಿಬಿರಗಳಲ್ಲಿ ಸಾವಿರಾರು ಮಕ್ಕಳು ಮತ್ತು ಯುವಜನರು ಪ್ರಾರ್ಥನಾ ಗುಂಪುಗಳು, ಧರ್ಮೋಪದೇಶ, ಆಟಗಳು, ಶೈಕ್ಷಣಿಕ ಕಾರ್ಯಾಗಾರಗಳು ಹಾಗೂ ಸಹಭಾಗಿತ್ವದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಪ್ರತಿಯೊಂದು ಧರ್ಮಕೇಂದ್ರವು ತನ್ನದೇ ಆದ ಕಾರ್ಯಕ್ರಮವನ್ನು ರೂಪಿಸಿಕೊಂಡಿದ್ದು, ವಿಶ್ವಾಸ, ಕುಟುಂಬ, ಶಾಂತಿ, ಸೃಷ್ಟಿಯ ಕಾಳಜಿ ಮತ್ತು ಕ್ರಿಸ್ತರನ್ನು ಅನುಸರಿಸುವುದು ಮುಂತಾದ ವಿಷಯಗಳ ಮೇಲೆ ಕೇಂದ್ರೀಕರಿಸಿದೆ.
ಧರ್ಮಪ್ರಾಂತ್ಯದ ಪ್ರಕಾರ, ಮಕ್ಕಳ ಮತ್ತು ಯುವಜನರಿಗೆ ಮಾನವೀಯ ಹಾಗೂ ಕ್ರೈಸ್ತ ಮೌಲ್ಯಗಳ ಸಮಗ್ರ ರೂಪುಗೊಳ್ಳುವಿಕೆಯನ್ನು ನೀಡುವುದು, ವಿಶ್ವಾಸ, ಸ್ನೇಹ, ಸೇವಾ ಮನೋಭಾವ ಮತ್ತು ಸಮುದಾಯ ಜೀವನವನ್ನು ಬೆಳೆಸುವುದು ಇದರ ಉದ್ದೇಶವಾಗಿದೆ. ಈ ಕಾರ್ಯದಲ್ಲಿ ಅನೇಕ ಸ್ವಯಂಸೇವಕರ ಸೇವೆಯೂ ಮಹತ್ವದ ಪಾತ್ರ ವಹಿಸುತ್ತಿದೆ.
ಶಾಂತಿಗಾಗಿ ಶಿಕ್ಷಣ
"ಶಾಶ್ವತ ಶಾಂತಿಯನ್ನು ಮಾನವ ಹೃದಯಗಳಲ್ಲಿ ಮತ್ತು ಜನಾಂಗಗಳ ನಡುವೆ ನಿರ್ಮಿಸಲು ನಾವು ನೀಡಬಹುದಾದ ಅತ್ಯಂತ ಸ್ಪಷ್ಟ ಕೊಡುಗೆಗಳಲ್ಲಿ ಶಿಕ್ಷಣದಲ್ಲಿ ಹೂಡಿಕೆ ಮಾಡುವುದೂ ಒಂದಾಗಿದೆ" ಎಂದು ಧರ್ಮಾಧ್ಯಕ್ಷ ಮಾರ್ಟಿನೆಲ್ಲಿ ಹೇಳಿದರು.
"ನಿಜವಾದ ಶಾಂತಿಯು ಪ್ರೀತಿಸುವ ಹೃದಯದಲ್ಲಿ ಆರಂಭವಾಗುತ್ತದೆ" ಎಂಬ ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರ ಮಾತುಗಳನ್ನು ನೆನಪಿಸಿಕೊಂಡ ಅವರು, ಇಂತಹ ಶಿಬಿರಗಳು ಯುವಜನರು ವಿಶ್ವಾಸ, ಸ್ನೇಹ, ಸೇವೆ ಮತ್ತು ಆಶಾಭರವಿನಲ್ಲಿ ಬೆಳೆಯಲು ಅವಕಾಶ ಕಲ್ಪಿಸುವ ಅಮೂಲ್ಯ ಸ್ಥಳಗಳಾಗಿವೆ ಎಂದು ಹೇಳಿದರು.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).