ಪೂಜಾವಿಧಿಯ ಸಮಯದಲ್ಲಿ ಕಾರ್ಡಿನಲ್ ಝೆರ್ನಿ ಪೂಜಾವಿಧಿಯ ಸಮಯದಲ್ಲಿ ಕಾರ್ಡಿನಲ್ ಝೆರ್ನಿ 

ಕಾರ್ಡಿನಲ್ ಚೆರ್ನಿ: ತಾಳ್ಮೆಯಿಂದ ನಿಜವಾದ ಐಕ್ಯತೆಯ ಸೇತುವೆಗಳನ್ನು ನಿರ್ಮಿಸೋಣ

ಪೂರ್ವ ಆಫ್ರಿಕಾದ ಸದಸ್ಯ ಧರ್ಮಾಧ್ಯಕ್ಷರ ಸಮ್ಮೇಳನಗಳ ಸಭೆಯ (AMECEA) ಮಹಾಸಭೆಯ ಉದ್ಘಾಟನಾ ಪವಿತ್ರ ಬಲಿ ಪೂಜೆಯಲ್ಲಿ, ಧರ್ಮಕ್ಷೇತ್ರದ ಸಮಗ್ರ ಮಾನವ ಅಭಿವೃದ್ಧಿ ವಿಭಾಗದ ಆಡಳಿತಾಧಿಕಾರಿಯಾದ ಕಾರ್ಡಿನಲ್ ಮೈಕಲ್ ಚೆರ್ನಿ ಅವರು, ಪವಿತ್ರಾತ್ಮರಿಗೆ ತಮ್ಮೊಳಗೆ ಕಾರ್ಯನಿರ್ವಹಿಸಲು ಅವಕಾಶ ನೀಡುವ ಮೂಲಕ ಲೋಕವನ್ನು ರೂಪಾಂತರಿಸಿ ಐಕ್ಯತೆಯನ್ನು ಬೆಳೆಸುವಂತೆ ಕ್ರೈಸ್ತರನ್ನು ಪ್ರೋತ್ಸಾಹಿಸಿದರು.

ಲೇಖಕರು: ಇಸಬೆಲ್ಲಾ ಎಚ್. ಡಿ ಕಾರ್ವಾಲೊ

ಸಂಕಷ್ಟದ ಸಮಯಗಳಲ್ಲಿ ಭರವಸೆಯನ್ನು ಕಳೆದುಕೊಳ್ಳದೆ, ತಾಳ್ಮೆಯಿಂದ ಐಕ್ಯತೆಯ ಸೇತುವೆಗಳನ್ನು ನಿರ್ಮಿಸುವ ಮೂಲಕ ಲೋಕವನ್ನೂ ಅದರಲ್ಲಿರುವ ನೋವಿನ ಪರಿಸ್ಥಿತಿಗಳನ್ನೂ ರೂಪಾಂತರಗೊಳಿಸಿ ಎಂದು ಧರ್ಮಕ್ಷೇತ್ರದ ಸಮಗ್ರ ಮಾನವ ಅಭಿವೃದ್ಧಿ ವಿಭಾಗದ ಆಡಳಿತಾಧಿಕಾರಿಯಾದ ಕಾರ್ಡಿನಲ್ ಮೈಕಲ್ ಚೆರ್ನಿ ಅವರು ಪೂರ್ವ ಆಫ್ರಿಕಾದ ಸದಸ್ಯ ಧರ್ಮಾಧ್ಯಕ್ಷರ ಸಮ್ಮೇಳನಗಳ ಸಂಘದ (AMECEA) ಮಹಾಸಭೆಯ ಉದ್ಘಾಟನಾ ಪವಿತ್ರ ಬಲಿ ಪೂಜೆಯಲ್ಲಿ ಕರೆ ನೀಡಿದರು. 

“ಲೋಕದಲ್ಲಿ ಬದುಕುತ್ತಿರುವ ಕ್ರೈಸ್ತರು, ಪವಿತ್ರಾತ್ಮರ ರೀತಿಯಲ್ಲಿ ಒಳಗಿನಿಂದಲೇ ಲೋಕವನ್ನು ಪರಿವರ್ತಿಸಿ ರೂಪಾಂತರಗೊಳಿಸುವ ಕರೆಯನ್ನು ಪಡೆದಿದ್ದೇವೆ” ಎಂದು ಅವರು 2026ರ ಜುಲೈ 19ರಂದು, ಭಾನುವಾರ ಕೀನ್ಯಾದ ನೈರೋಬಿಯಲ್ಲಿ ಅರ್ಪಿಸಲಾದ ಪವಿತ್ರ ಬಲಿ ಪೂಜೆಯಲ್ಲಿ ಹೇಳಿದರು. ಜುಲೈ 18ರಿಂದ 22ರವರೆಗೆ ಕಾರ್ಡಿನಲ್ ಚೆರ್ನಿ ಅವರು ನೈರೋಬಿಯಲ್ಲಿ ನಡೆಯುತ್ತಿರುವ AMECEAಯ 21ನೇ ಮಹಾಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಈ ಸಭೆಯು ಪೂರ್ವ ಆಫ್ರಿಕಾದ ಒಂಬತ್ತು ರಾಷ್ಟ್ರಗಳಲ್ಲಿನ ಎಂಟು ರಾಷ್ಟ್ರೀಯ ಕಥೋಲಿಕ ಧರ್ಮಾಧ್ಯಕ್ಷರ ಸಮ್ಮೇಳನಗಳನ್ನು ಒಳಗೊಂಡಿದೆ.

ಈ ಮಹಾಸಭೆಯು ಪೂರ್ವ ಆಫ್ರಿಕಾದ ಕಥೋಲಿಕ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿದ್ದು, ಸುಡಾನ್, ದಕ್ಷಿಣ ಸುಡಾನ್, ಇಥಿಯೋಪಿಯಾ, ಎರಿಟ್ರಿಯಾ, ಉಗಾಂಡಾ, ಕೀನ್ಯಾ, ತಾಂಜಾನಿಯಾ, ಮಲಾವಿ, ಜಾಂಬಿಯಾ ಹಾಗೂ ಜಿಬೂಟಿ ಮತ್ತು ಸೊಮಾಲಿಯಾದ ಸಂಬಂಧಿತ ಪ್ರದೇಶಗಳಿಂದ ಆಗಮಿಸಿರುವ 140 ಧರ್ಮಾಧ್ಯಕ್ಷರು ಇದರಲ್ಲಿ ಭಾಗವಹಿಸಿದ್ದಾರೆ.

ಈ ವರ್ಷದ ಮಹಾಸಭೆಯ ವಿಷಯ: “ಯುವಜನರೊಂದಿಗೆ AMECEAಯ ಸಿನೋಡಲ್ ಪಯಣ: ಐಕ್ಯತೆ, ಭರವಸೆ, ನ್ಯಾಯ ಮತ್ತು ಉತ್ತಮ ಆಡಳಿತದ ಸೇತುವೆಗಳನ್ನು ನಿರ್ಮಿಸುವುದು.”

ಐಕ್ಯತೆಯ ಸೇತುವೆಗಳನ್ನು ನಿರ್ಮಿಸೋಣ

ದಿನದ ಶುಭಸಂದೇಶದಲ್ಲಿ ಬರುವ ಹುಳಿಹಿಟ್ಟಿನ (ಯೀಸ್ಟ್) ಸಾಮತಿಯ ಕುರಿತು ಕಾರ್ಡಿನಲ್ ಚೆರ್ನಿ ಅವರು ಚಿಂತನೆ ನಡೆಸಿದರು. ದೇವರ ರಾಜ್ಯವು ಹಿಟ್ಟಿನಲ್ಲಿ ಸೇರಿಸಲಾದ ಸ್ವಲ್ಪ ಹುಳಿಯಂತಿದ್ದು, ಅದು ಇಡೀ ಹಿಟ್ಟನ್ನೇ ಹುಳಿಯೆಬ್ಬಿಸುತ್ತದೆ ಎಂದು ಪ್ರಭು ಯೇಸು ಬೋಧಿಸುತ್ತಾರೆ.

“ಈ ಸಾಮತಿಯು ನೋವು ಮತ್ತು ಅನ್ಯಾಯದಿಂದ ಕೂಡಿದ ಪರಿಸ್ಥಿತಿಗಳನ್ನು ಶಾಂತವಾಗಿ, ಆಳವಾಗಿ ಮತ್ತು ಪರಿಣಾಮಕಾರಿಯಾಗಿ ಪರಿವರ್ತಿಸುವ ಕಾರ್ಯಕ್ಕೆ ನಮ್ಮನ್ನು ಸ್ಪಷ್ಟವಾಗಿ ಆಹ್ವಾನಿಸುತ್ತದೆ” ಎಂದು ಕಾರ್ಡಿನಲ್ ವಿವರಿಸಿದರು. “ನಾವು ನಮ್ಮನ್ನು ಪ್ರದರ್ಶಿಸಿಕೊಳ್ಳುವುದಕ್ಕಾಗಿ ಅಲ್ಲ, ಆದರೆ ದೇವರೊಂದಿಗೂ ಇತರರೊಂದಿಗೂ ಆಳವಾದ ಐಕ್ಯತೆಯಲ್ಲಿ ಬದುಕುತ್ತಾ, ನಮ್ಮ ದೈನಂದಿನ ಜೀವನದ ಮೂಲಕ ಒಳಗಿನಿಂದಲೇ ಲೋಕವನ್ನು ರೂಪಾಂತರಗೊಳಿಸಲು ಕರೆಯಲ್ಪಟ್ಟಿದ್ದೇವೆ.”

ಪ್ರತಿಯೊಬ್ಬ ಕ್ರೈಸ್ತನೊಳಗೆ ಕಾರ್ಯನಿರ್ವಹಿಸುವ ಪವಿತ್ರಾತ್ಮರು ಲೋಕವನ್ನು ಬದಲಾಯಿಸುತ್ತಾರೆ. ಕಾಲದ ಸಂಕೇತಗಳನ್ನು ಗುರುತಿಸಲು ಮತ್ತು ಇತರರತ್ತ ಕೈಚಾಚಲು ಪವಿತ್ರಾತ್ಮರು ನಮಗೆ ನೆರವಾಗುತ್ತಾರೆ ಎಂದರು.

ಈ ಹಿನ್ನೆಲೆಯಲ್ಲಿ, ವಿಶೇಷವಾಗಿ ಯುವಜನರಿಗೆ, “ನಿಜವಾದ ಐಕ್ಯತೆಯ ಸೇತುವೆಗಳನ್ನು ನಿರ್ಮಿಸಿ” ಎಂದು ಕಾರ್ಡಿನಲ್ ಕರೆ ನೀಡಿದರು. “ಲೋಕದ ಮಾರ್ಗಗಳನ್ನು ವಿವೇಚನೆಯಿಲ್ಲದೆ ಅನುಕರಿಸುವುದರಿಂದ ಅಥವಾ ನಮ್ಮ ಕ್ರೈಸ್ತ ಗುರುತನ್ನು ದುರ್ಬಲಗೊಳಿಸುವುದರಿಂದ ಅಥವಾ ಶುಭಸಂದೇಶದ ಬೇಡಿಕೆಗಳನ್ನು ತೆಳುವಾಗಿಸುವುದರಿಂದಲ್ಲ; ಬದಲಾಗಿ ಹುಳಿಯಂತೆ ಜೀವಂತ ಶಕ್ತಿಯಾಗಿ ಬದುಕುವ ಮೂಲಕ” ಈ ಕಾರ್ಯ ಸಾಧ್ಯ. “ಹೀಗೆ ನಾವು ಬದುಕುವ ವಿಭಿನ್ನ ಸಂದರ್ಭಗಳಲ್ಲಿ ‘ಹುಳಿಯ’ ಪಾತ್ರವನ್ನು ನಿರ್ವಹಿಸುತ್ತಾ ದೇವರ ರಾಜ್ಯದ ನಿರ್ಮಾಣದಲ್ಲಿ ನಿಜವಾಗಿಯೂ ಸಹಕರಿಸುತ್ತೇವೆ” ಎಂದು ಅವರು ಒತ್ತಿ ಹೇಳಿದರು.

ತಾಳ್ಮೆಯಿಂದ ಸೇತುವೆಗಳನ್ನು ನಿರ್ಮಿಸಿ

ಶುಭಸಂದೇಶದಲ್ಲಿರುವ ಮತ್ತೊಂದು ಸಾಮತಿಯಾದ ಗೋಧಿ ಮತ್ತು ಕಳೆ ಕುರಿತು ಮಾತನಾಡಿದ ಕಾರ್ಡಿನಲ್ ಚೆರ್ನಿ, ಹೊಲದ ಮಾಲೀಕನು ಕಳೆಯನ್ನು ತಕ್ಷಣ ಕಿತ್ತುಹಾಕದೆ ತಾಳ್ಮೆಯಿಂದ ಕಾಯುವ ಮನೋಭಾವವನ್ನು ವಿಶೇಷವಾಗಿ ವಿವರಿಸಿದರು. “ಇದು ತಾಳ್ಮೆ, ವಿವೇಕ ಮತ್ತು ವಿಶ್ವಾಸದಿಂದ ಕೂಡಿದ ಮನೋಭಾವವಾಗಿದೆ. ಕಳೆಯಿಂದ ಉಂಟಾಗುವ ಕೆಡುಕನ್ನು ರೈತನು ನೋಡಿದರೂ, ನ್ಯಾಯವನ್ನು ಪುನಃ ಸ್ಥಾಪಿಸಲು ಹಾಗೂ ಜೀವವನ್ನು ಕಾಪಾಡಲು, ಒಳ್ಳೆಯದು ಈಗಾಗಲೇ ಮೊಳಕೆಯೊಡೆದು ಬೆಳೆಯುತ್ತಿರುವ ಸ್ಥಳಗಳನ್ನೂ ನಾಶಪಡಿಸುವ ಅಪಾಯವಿರುವ ತ್ವರಿತ, ಸುಲಭ ಹಾಗೂ ದಂಡನಾತ್ಮಕ ಕ್ರಮಗಳ ಪ್ರಲೋಭನೆಗೆ ಅವನು ಒಳಗಾಗುವುದಿಲ್ಲ” ಎಂದು ಹೇಳಿದರು.

ಕಾರ್ಡಿನಲ್ ಚೆರ್ನಿ ಅವರ ಪ್ರಕಾರ, ಈ “ವಿವೇಕಪೂರ್ಣ ಮತ್ತು ತಾಳ್ಮೆಯ ದೃಷ್ಟಿಕೋನ”ವು ಎಲ್ಲಾ ಕ್ರೈಸ್ತರಿಗೆ “ಧರ್ಮಸಭೆಯೊಳಗೂ ಸಮಾಜದಲ್ಲಿಯೂ ಪ್ರತಿಯೊಬ್ಬರೊಂದಿಗೆ ಸೇತುವೆಗಳನ್ನು ನಿರ್ಮಿಸುವ ದೈನಂದಿನ ರಾಜತಾಂತ್ರಿಕತೆಯನ್ನು” ಬೆಳೆಸಲು ಸಹಾಯ ಮಾಡಬೇಕು. “ಅವಸರದ ಮತ್ತು ಅನ್ಯಾಯದ ತೀರ್ಪುಗಳಲ್ಲಿ ಸಿಲುಕಿಕೊಳ್ಳುವುದು ತುಂಬಾ ಸುಲಭ” ಎಂದು ಎಚ್ಚರಿಸಿದರು.

ದುಷ್ಟತನವನ್ನು ಧೈರ್ಯದಿಂದ ಖಂಡಿಸೋಣ

ಕೊನೆಯಲ್ಲಿ, ಸಾಸಿವೆ ಬೀಜದ ಸಾಮತಿಯ ಕುರಿತು ಮಾತನಾಡಿದ ಕಾರ್ಡಿನಲ್ ಚೆರ್ನಿ, ದೇವರ ರಾಜ್ಯವು ಅತಿ ಸಣ್ಣ ಬೀಜದಿಂದಲೂ ಮಹತ್ತರವಾಗಿ ಬೆಳೆಯಬಲ್ಲದು ಎಂದು ಪ್ರಭು ಯೇಸು ಬೋಧಿಸುತ್ತಾರೆ ಎಂದು ಹೇಳಿದರು.

ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರ ‘ಭವ್ಯ ಮಾನವೀಯತೆ’ (Magnifica Humanitas) ವಿಶ್ವಪತ್ರಿಕೆಯನ್ನು ಉಲ್ಲೇಖಿಸಿದ ಅವರು, ಈ ಸಾಮ್ಯವು “ವಾಸ್ತವಿಕತೆಯ ಅತ್ಯಂತ ನಿರಾಶಾದಾಯಕ ಅರ್ಥೈಸುವಿಕೆಗಳನ್ನೂ ಸವಾಲು ಮಾಡುವ ಆಳವಾದ ಭರವಸೆಯ ಜೀವನವನ್ನು ನಡೆಸುವಂತೆ ಕರೆಯುತ್ತದೆ. ಅನೇಕ ಕಷ್ಟಗಳ ನಡುವೆಯೂ ಚಿಕ್ಕ ಬೀಜವು ಮೊಳಕೆಯೊಡೆದು ಬೆಳೆಯುವ ಶಕ್ತಿಯನ್ನು ವಿಶ್ವಾಸದಿಂದ ಕಾಣುವಂತೆ ಅದು ನಮ್ಮನ್ನು ಪ್ರೇರೇಪಿಸುತ್ತದೆ.” ಪೂಜ್ಯ ಜಗದ್ಗುರುಗಳು ‘ಸುಳ್ಳು ವಾಸ್ತವವಾದ’ ಎಂದು ಕರೆಯುವ ನಿರಾಸಕ್ತಿ ಮತ್ತು ಶರಣಾಗತಿಯ ವಿರುದ್ಧ ಎಚ್ಚರಿಸುತ್ತಾರೆ” ಎಂದು ಅವರು ಮುಂದುವರಿಸಿದರು. “ಅದರ ಬದಲಿಗೆ ಅವರು ದುಷ್ಟತನವನ್ನು ಧೈರ್ಯದಿಂದ ಖಂಡಿಸಬೇಕೆಂದು ಒತ್ತಿ ಹೇಳುತ್ತಾರೆ. ಕ್ರೈಸ್ತರಾದ ನಾವು ಕೇವಲ ಖಂಡನೆಯಲ್ಲೇ ನಿಲ್ಲಬಾರದು. ಅದು ಅಗತ್ಯವಾದರೂ ಸಾಕಾಗುವುದಿಲ್ಲ. ಪ್ರಭು ಈಗಾಗಲೇ ನಮ್ಮ ಮುಂದೆ ತೆರೆಯುತ್ತಿರುವ ಹೊಸ ಮಾರ್ಗಗಳನ್ನು ಗುರುತಿಸಿ ಅನುಸರಿಸಲು ನಾವು ಪ್ರಯತ್ನಿಸಬೇಕು.”

“ಬೀಜದ ಕುರಿತ ಶುಭಸಂದೇಶದ  ಸಾಮತಿಯನ್ನು ನಮ್ಮ ಹೃದಯದಲ್ಲಿ ಉಳಿಸಿಕೊಳ್ಳೋಣ” ಎಂದು ಕಾರ್ಡಿನಲ್ ಮನವಿ ಮಾಡಿದರು. “ನಾವು ‘ಭರವಸೆಯ ಸೇತುವೆಗಳನ್ನು’ ಹೇಗೆ ನಿರ್ಮಿಸಬೇಕೆಂಬುದನ್ನು ಹೆಚ್ಚು ಹೆಚ್ಚು ಕಲಿಯಲು ಪ್ರಭು ನಮ್ಮನ್ನು ನಡೆಸಲಿ. ಆಗ ನಾವು ನಿಮ್ಮ ರಾಜ್ಯ ಬರಲಿ’ ಎಂದು ಪ್ರಾರ್ಥಿಸುವುದಷ್ಟೇ ಅಲ್ಲ, ಅದಕ್ಕಾಗಿ ಶ್ರಮಿಸುವವರಾಗಿಯೂ ಇರೋಣ.”

ತಮ್ಮ ಪ್ರವಾದನೆಯ ಕೊನೆಯಲ್ಲಿ, “ಸ್ವರ್ಗದಿಂದ ದೊರಕುವ ವರವಾಗಿ, ಐಕ್ಯತೆ, ಭರವಸೆ, ನ್ಯಾಯ ಮತ್ತು ಉತ್ತಮ ಆಡಳಿತದ ಸೇತುವೆಗಳನ್ನು ನಿರ್ಮಿಸುವ ಅನುಗ್ರಹ ನಮಗೆ ದೊರಕಲಿ” ಎಂದು ಅವರು ಪ್ರಾರ್ಥಿಸಿದರು.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

20 ಜುಲೈ 2026, 13:30