ಮೆಡ್ಜುಗೊರ್ಯಾ ಧರ್ಮಕೇಂದ್ರದಲ್ಲಿ ಧ್ವಂಸಕೃತ್ಯ ಖಂಡನೆ; ಪ್ರಾರ್ಥನೆ ಮತ್ತು ಕ್ಷಮೆಗೆ ಕರೆ
ವ್ಯಾಟಿಕನ್ ವರದಿ
ಮೆಡ್ಜುಗೊರ್ಯಾ ಧರ್ಮಕೇಂದ್ರವು ರಾತ್ರಿ ನಡೆದ ಧ್ವಂಸಕೃತ್ಯವನ್ನು ತೀವ್ರವಾಗಿ ಖಂಡಿಸಿದ್ದು, ತನ್ನ ಹಲವು ಪ್ರಾರ್ಥನಾ ಸ್ಥಳಗಳಿಗೆ ಹಾನಿ ಉಂಟುಮಾಡಿದ ಈ ಘಟನೆಯ ಬಳಿಕ ವಿಶ್ವಾಸಿಗಳು "ಪ್ರಾರ್ಥನೆ, ಉಪವಾಸ ಮತ್ತು ಕ್ಷಮೆ"ಯೊಂದಿಗೆ ಪ್ರತಿಕ್ರಿಯಿಸುವಂತೆ ಆಹ್ವಾನಿಸಿದೆ.
"ಈ ಧ್ವಂಸಕೃತ್ಯದ ಸುದ್ದಿ ಅತೀವ ದುಃಖ ತಂದಿದೆ" ಎಂದು ಮೆಡ್ಜುಗೊರ್ಯಾ ಧರ್ಮಕೇಂದ್ರದ ಕಚೇರಿಯು ಮಂಗಳವಾರ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ. ಹಾನಿಗೊಳಗಾದ ಸ್ಥಳಗಳನ್ನು ಮತ್ತೆ ಪ್ರಾರ್ಥನೆಗೆ ಯೋಗ್ಯವಾಗಿಸಲು ತಕ್ಷಣವೇ ಸ್ವಚ್ಛತೆ ಮತ್ತು ದುರಸ್ತಿ ಕಾರ್ಯಗಳನ್ನು ಆರಂಭಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ದುರಸ್ತಿ ಕಾರ್ಯದಲ್ಲಿ ಸಹಕರಿಸುತ್ತಿರುವ ಎಲ್ಲರಿಗೂ ಧರ್ಮಕೇಂದ್ರವು ಕೃತಜ್ಞತೆ ಸಲ್ಲಿಸಿದ್ದು, ಅವರ ಸೇವೆಯು ಈ ಪುಣ್ಯಕ್ಷೇತ್ರವನ್ನು "ದೇವರೊಂದಿಗಿನ ಭೇಟಿಯ ಹಾಗೂ ಶಾಂತಿಯ ಸ್ಥಳ"ವಾಗಿ ಉಳಿಸಿಕೊಳ್ಳಲು ಸಹಾಯ ಮಾಡುತ್ತಿದೆ ಎಂದು ಹೇಳಿದೆ.
ಮೆಡ್ಜುಗೊರ್ಯಾ ಪುಣ್ಯಕ್ಷೇತ್ರದಲ್ಲಿ ಕನ್ಯೆ ಮರಿಯಮ್ಮನವರನ್ನು ಶಾಂತಿಯ ರಾಣಿಯಾಗಿ ಗೌರವಿಸಲಾಗುತ್ತದೆ. ಕೋಪದಿಂದ ಪ್ರತಿಕ್ರಿಯಿಸುವ ಬದಲು, ಈ ಕೃತ್ಯ ಎಸಗಿದವರಿಗಾಗಿ ಪ್ರಾರ್ಥಿಸುವಂತೆ ಧರ್ಮಕೇಂದ್ರವು ಕಥೋಲಿಕರಿಗೆ ಕರೆ ನೀಡಿದೆ. "ಈ ಕೃತ್ಯ ಎಸಗಿದವರ ಹೃದಯಗಳ ಮನಪರಿವರ್ತನೆಗಾಗಿ ನಾವು ಪ್ರಾರ್ಥಿಸುತ್ತೇವೆ" ಎಂದು ಪ್ರಕಟಣೆಯಲ್ಲಿ ತಿಳಿಸಿದ್ದು, ಪ್ರಭುವು ತಮ್ಮ ಕೃಪೆಯಿಂದ ಅವರನ್ನು ಸ್ಪರ್ಶಿಸಿ ಒಳಿತಿನ ಮಾರ್ಗದಲ್ಲಿ ನಡೆಸಲಿ ಎಂದು ಪ್ರಾರ್ಥಿಸಿದೆ. ಪ್ರತಿಯೊಬ್ಬರ ಹೃದಯದಲ್ಲೂ ಶಾಂತಿ ನೆಲೆಸಲೆಂದು ಧರ್ಮಕೇಂದ್ರವು ಮನವಿ ಮಾಡಿದೆ. "ದುಷ್ಟತನಕ್ಕೆ ದುಷ್ಟತನದಿಂದ ಪ್ರತಿಯಾಗಿ ಕೊಡಬೇಡಿ" ಎಂದು ವಿಶ್ವಾಸಿಗಳನ್ನು ಉತ್ತೇಜಿಸಿ, ತಮ್ಮ ಜೀವನದ ಮೂಲಕ ಪ್ರೀತಿ, ಕ್ಷಮೆ ಮತ್ತು ಭರವಸೆಯ ಸಾಕ್ಷಿಯಾಗುವಂತೆ ಕರೆ ನೀಡಿದೆ.
ಧ್ವಂಸಕೃತ್ಯ ಮತ್ತು ಬೆಂಕಿ ಹಚ್ಚಿದ ಘಟನೆ
ಬೆಳಿಗ್ಗೆ ಸುಮಾರು 4:30 ಗಂಟೆಗೆ, ಪ್ರತ್ಯಕ್ಷದರ್ಶನ ಬೆಟ್ಟ (ಪೊಡ್ಬ್ರ್ಡೊ)ದಲ್ಲಿರುವ ನಮ್ಮ ಮಾತೆಯವರ ಪ್ರತಿಮೆಯ ಮುಖ ಮತ್ತು ಕೈಗಳಿಗೆ ಕಪ್ಪು ಬಣ್ಣ ಬಳಿದಿರುವುದು ಹಾಗೂ ಅದರ ಸಮೀಪ ಅವಹೇಳನಕಾರಿ ಬರಹಗಳು ಕಂಡುಬಂದಿರುವ ಕುರಿತು ಬೋಸ್ನಿಯಾ ಮತ್ತು ಹರ್ಜೆಗೋವಿನಾದ ಪೊಲೀಸರಿಗೆ ಮೊದಲ ಮಾಹಿತಿ ದೊರೆಯಿತು. ಸುಮಾರು ಅರ್ಧ ಗಂಟೆಯ ನಂತರ, ಸಂತ ಜೇಮ್ಸ್ ದೇವಾಲಯದ ಹೊರಾಂಗಣ ಬಲಿಪೀಠದಲ್ಲಿ ಬೆಂಕಿ ಕಾಣಿಸಿಕೊಂಡಿರುವ ಕುರಿತು ಪೊಲೀಸರಿಗೆ ಮತ್ತೊಂದು ಮಾಹಿತಿ ಲಭಿಸಿತು. ಕಣ್ಗಾವಲು ಕ್ಯಾಮೆರಾದ ದೃಶ್ಯಾವಳಿಗಳ ಪ್ರಕಾರ, ವ್ಯಕ್ತಿಯೊಬ್ಬನು ಬಲಿಪೀಠದ ಮೇಲೆ ಪೆಟ್ರೋಲ್ ಎಂದು ಶಂಕಿಸಲಾದ ದ್ರವವನ್ನು ಸುರಿದು ನಂತರ ಅದಕ್ಕೆ ಬೆಂಕಿ ಹಚ್ಚಿದ್ದಾನೆ. ಬೆಂಕಿಯನ್ನು ತಕ್ಷಣವೇ ನಂದಿಸಲಾಯಿತು.
ಪೊಲಿಷ್ ಭಾಷೆಯಲ್ಲಿ ಬರೆಯಲಾಗಿದ್ದ ಬ್ಯಾನರ್ ಒಂದರಲ್ಲಿ, 1981ರಲ್ಲಿ ಮೊದಲ ಬಾರಿಗೆ ವರದಿಯಾದ ಪ್ರತ್ಯಕ್ಷದರ್ಶನಗಳಿಗೆ ಸಂಬಂಧಿಸಿದ ಆರು ಮಂದಿಯ ಹೆಸರುಗಳನ್ನು ಉಲ್ಲೇಖಿಸಿ, ಅವರು ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ನಂತರ, ಲ್ಯೂಬುಷ್ಕಿ ಪ್ರದೇಶದಲ್ಲಿ ಈ ಘಟನೆಗಳಿಗೆ ಸಂಬಂಧಿಸಿದ ಶಂಕೆಯ ಮೇರೆಗೆ ಒಬ್ಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದರು. ಆತನ ಗುರುತು, ರಾಷ್ಟ್ರೀಯತೆ ಹಾಗೂ ಇತರ ವೈಯಕ್ತಿಕ ವಿವರಗಳನ್ನು ಬಹಿರಂಗಪಡಿಸಲಾಗಿಲ್ಲ. ಈ ಘಟನೆಗಳ ಹಿಂದಿನ ಉದ್ದೇಶವೇನು ಮತ್ತು ಮೆಡ್ಜುಗೊರ್ಜೆಯಲ್ಲಿ ನಡೆದ ಎಲ್ಲ ಕೃತ್ಯಗಳಿಗೂ ಇದೇ ವ್ಯಕ್ತಿಯ ಸಂಬಂಧವಿದೆಯೇ ಎಂಬುದನ್ನು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಎಂದಿನಂತೆ ತೆರೆದಿರುವ ಪುಣ್ಯಕ್ಷೇತ್ರ
ತಮ್ಮ ಪ್ರಕಟಣೆಯಲ್ಲಿ, ಎಲ್ಲಾ ಯಾತ್ರಿಗಳಿಗೆ ಪುಣ್ಯಕ್ಷೇತ್ರ ಎಂದಿನಂತೆ ತೆರೆದಿದ್ದು, ನಿಯಮಿತ ಪ್ರಾರ್ಥನಾ ಕಾರ್ಯಕ್ರಮಗಳು ಯಾವುದೇ ಅಡೆತಡೆಯಿಲ್ಲದೆ ಮುಂದುವರಿಯುತ್ತಿವೆ ಎಂದು ಧರ್ಮಕೇಂದ್ರವು ಸ್ಪಷ್ಟಪಡಿಸಿದೆ. ಹಾನಿಗೊಳಗಾದ ಪ್ರದೇಶಗಳನ್ನು ಸಾಧ್ಯವಾದಷ್ಟು ಶೀಘ್ರವಾಗಿ ಸ್ವಚ್ಛಗೊಳಿಸಿ ಪುನಃಸ್ಥಾಪಿಸಲಾಗುತ್ತಿದೆ.
2024ರ ಸೆಪ್ಟೆಂಬರ್‌ನಲ್ಲಿ, ಪೂಜ್ಯ ಜಗದ್ಗುರುಗಳಾದ ಫ್ರಾನ್ಸಿಸ್ ಅವರ ಅನುಮೋದನೆಯೊಂದಿಗೆ ವಿಶ್ವಾಸ ಸಿದ್ಧಾಂತ ವಿಭಾಗವು (Dicastery for the Doctrine of the Faith) ಮೆಡ್ಜುಗೊರ್ಯಾಗೆ ಸಂಬಂಧಿಸಿದ ಆಧ್ಯಾತ್ಮಿಕ ಅನುಭವದ ಕುರಿತು "ನಿಹಿಲ್ ಓಬ್ಸ್ಟಾಟ್" (ಯಾವುದೇ ಆಕ್ಷೇಪವಿಲ್ಲ) ಎಂಬ ತೀರ್ಮಾನವನ್ನು ಹೊರಡಿಸಿತು.
ಈ ತೀರ್ಮಾನವು ಮೆಡ್ಜುಗೊರ್ಯಾಪುಣ್ಯಕ್ಷೇತ್ರಕ್ಕೆ ಸಂಬಂಧಿಸಿದ ಸಕಾರಾತ್ಮಕ ಆಧ್ಯಾತ್ಮಿಕ ಫಲಗಳನ್ನು ಗುರುತಿಸಿ, ಸಾರ್ವಜನಿಕ ಭಕ್ತಿಗೆ ಅನುಮತಿ ನೀಡಿತು. ಆದರೆ ವರದಿಯಾಗಿರುವ ಪ್ರತ್ಯಕ್ಷದರ್ಶನಗಳು ಅಲೌಕಿಕ ಸ್ವರೂಪದ್ದೇ ಎಂಬ ಕುರಿತು ಯಾವುದೇ ಘೋಷಣೆಯನ್ನು ಮಾಡಲಿಲ್ಲ.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).