ಉಕ್ರೇನ್ ಭೇಟಿಗೆ ಚಾಲನೆ ನೀಡಿ, ಯುದ್ಧ ಅಂತ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸಿದ ಕಾರ್ಡಿನಲ್ ಜುಪ್ಪಿ
ವ್ಯಾಟಿಕನ್ ವರದಿ
ಕಾರ್ಡಿನಲ್ ಮತ್ತೆಯೋ ಮರಿಯಾ ಜುಪ್ಪಿ ಅವರು ಉಕ್ರೇನ್‌ನ ಲ್ವಿವ್ ಪ್ರದೇಶದ ಜಖಿದ್–1 ಬಂಧನ ಕೇಂದ್ರದಲ್ಲಿ, ರಷ್ಯಾ ಸೇನೆ ಪರವಾಗಿ ಹೋರಾಡಿ ಬಂಧಿತರಾಗಿರುವ ಕೈದಿಗಳಿಗೆ ಮೂರು ಉಡುಗೊರೆಗಳನ್ನು ನೀಡಿದರು. ಮೊದಲನೆಯದು ಕೀ ಚೈನ್. “ಶೀಘ್ರದಲ್ಲೇ ನಿಮ್ಮ ಮನೆಯ ಕೀಲಿಯನ್ನು ಇದಕ್ಕೆ ಜೋಡಿಸಿ, ನಿಮ್ಮ ಮನೆಯ ಬಾಗಿಲು ತೆರೆಯುವ ಮೂಲಕ ನಿಮ್ಮ ಆತ್ಮೀಯರನ್ನು ಅಪ್ಪಿಕೊಳ್ಳುವ ದಿನ ಬರಲಿ” ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದರು. ಎರಡನೆಯದು ಸಾಲುಸ್ ಪೊಪುಲಿ ರೋಮಾನಿ ಅವರ ಚಿತ್ರ. “ಕ್ರೈಸ್ತರಿಗೆ ಇದು ನಮ್ಮ ತಾಯಿಯ ಚಿತ್ರ; ಆದರೆ ಎಲ್ಲರಿಗೂ ಇದು ಭರವಸೆಯ ಸಂಕೇತವಾಗಿದೆ” ಎಂದು ಅವರು ಹೇಳಿದರು. ಮೂರನೆಯದು ಜಗದ್ಗುರುಗಳಾದ 14ನೆ ಲಿಯೋ ಅವರ ಛಾಯಾಚಿತ್ರ. “ಯುದ್ಧ ಕೊನೆಗೊಳ್ಳಲಿ ಮತ್ತು ಶಾಂತಿ ನೆಲೆಸಲಿ ಎಂದು ಅವರು ಪ್ರಾರ್ಥಿಸುತ್ತಿದ್ದಾರೆ ಎಂಬುದನ್ನು ತಿಳಿಸಲು ಅವರು ನನ್ನನ್ನು ಇಲ್ಲಿಗೆ ಕಳುಹಿಸಿದ್ದಾರೆ” ಎಂದು ಕಾರ್ಡಿನಲ್ ಜುಪ್ಪಿ ಹೇಳಿದರು.
ಈ ಭೇಟಿ, ಯುದ್ಧ ಆರಂಭವಾದ ನಂತರ ಕಾರ್ಡಿನಲ್ ಜುಪ್ಪಿ ಕೈಗೊಂಡಿರುವ ಎರಡನೇ ಉಕ್ರೇನ್ ಶಾಂತಿ ಕಾರ್ಯಾಚರಣೆಯಾಗಿದೆ. ಮೊದಲ ಮಿಷನ್‌ನ್ನು 2023ರ ಜೂನ್‌ನಲ್ಲಿ ಜಗದ್ಗುರು ಫ್ರಾನ್ಸಿಸ್ ಅವರ ವಿನಂತಿಯ ಮೇರೆಗೆ ಕೈಗೊಂಡಿದ್ದರು. ಆ ಸಂದರ್ಭದಲ್ಲಿ ಅವರು ಕೀವ್‌ನಲ್ಲಿ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಸೇರಿದಂತೆ ರಾಜಕೀಯ ಮತ್ತು ಧರ್ಮಸಭೆಯ ನಾಯಕರನ್ನು ಭೇಟಿಯಾಗಿದ್ದರು. ಬಳಿಕ ಮಾಸ್ಕೋ, ವಾಷಿಂಗ್ಟನ್ ಮತ್ತು ಬೀಜಿಂಗ್‌ಗೆ ಭೇಟಿ ನೀಡಿದ್ದರು. ಯುದ್ಧದಿಂದ ತೊಂದರೆಗೊಳಗಾದವರೊಂದಿಗೆ ಧರ್ಮಸಭೆಯ ಐಕ್ಯತೆಯನ್ನು ವ್ಯಕ್ತಪಡಿಸುವುದರ ಜೊತೆಗೆ, ಉಕ್ರೇನಿನಿಂದ ಬಲವಂತವಾಗಿ ಕರೆದೊಯ್ಯಲ್ಪಟ್ಟ ಮಕ್ಕಳನ್ನು ಮರಳಿ ಕರೆತರುವುದು, ಯುದ್ಧ ಕೈದಿಗಳ ವಿನಿಮಯ ಮತ್ತು ಮೃತಪಟ್ಟವರ ಪಾರ್ಥಿವ ಶರೀರಗಳನ್ನು ತಾಯ್ನಾಡಿಗೆ ಮರಳಿಸುವ ಪ್ರಯತ್ನಗಳಿಗೆ ಬೆಂಬಲ ನೀಡುವುದು ಈ ಮಾನವೀಯ ಮಿಷನ್‌ನ ಉದ್ದೇಶವಾಗಿತ್ತು.
ಪ್ರೇಷಿತ ಪ್ರತಿನಿಧಿ ಹಾಗೂ ಉಕ್ರೇನ್ ರಾಯಭಾರಿಯೊಂದಿಗೆ ಭೇಟಿ
ಕೀವ್‌ಗೆ ತೆರಳುವ ಮೊದಲು, ಪ್ರೇಷಿತ ಪ್ರತಿನಿಧಿಯಾದ ಮಹಾಧರ್ಮಾಧ್ಯಕ್ಷ ವಿಸ್ವಾಲ್ದಾಸ್ ಕುಲ್ಬೋಕಾಸ್ ಹಾಗೂ ಜಗದ್ಗುರುಗಳ ಅಧಿಕಾರ ಪೀಠದ ಉಕ್ರೇನ್ ರಾಯಭಾರಿ ಆಂಡ್ರಿ ಯುರಾಶ್ ಅವರೊಂದಿಗೆ ಕಾರ್ಡಿನಲ್ ಜುಪ್ಪಿ ಬಂಧನ ಕೇಂದ್ರಕ್ಕೆ ಭೇಟಿ ನೀಡಿ, ಕೈದಿಗಳ ವಾಸದ ಕೊಠಡಿಗಳು, ಪ್ರಾರ್ಥನಾ ಮಂದಿರ ಮತ್ತು ಚಿಕಿತ್ಸಾ ಘಟಕವನ್ನು ಪರಿಶೀಲಿಸಿದರು. ಈ ಕೇಂದ್ರವು ಅಂತರರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿದ್ದು, ಕೈದಿಗಳ ಪರಿಸ್ಥಿತಿಯನ್ನು ಪರಿಶೀಲಿಸಲು ಬಯಸುವವರಿಗೆ ಮುಕ್ತವಾಗಿದೆ ಎಂದು ರಾಯಭಾರಿ ಯುರಾಶ್ ಹೇಳಿದರು.
ಇಟಲಿಯ ಅವೆನಿರೆ ಪತ್ರಿಕೆಯ ವಿವರವಾದ ವರದಿಯ ಪ್ರಕಾರ, ಕಾರ್ಡಿನಲ್ ಜುಪ್ಪಿ 50ಕ್ಕೂ ಹೆಚ್ಚು ದೇಶಗಳಿಂದ ಬಂದಿರುವ ಡಜನ್‌ಗಟ್ಟಲೆ ಕೈದಿಗಳನ್ನು ಭೇಟಿ ಮಾಡಿ, ಅವರೊಂದಿಗೆ ಫ್ರೆಂಚ್ ಮತ್ತು ಸ್ಪ್ಯಾನಿಷ್ ಭಾಷೆಗಳಲ್ಲಿ ಮಾತನಾಡಿ ಅವರ ಅನುಭವಗಳನ್ನು ಆಲಿಸಿದರು. ಒಂದು ಕಾಲು ಕಳೆದುಕೊಂಡಿದ್ದ 25 ವರ್ಷದ ಕೈದಿಯನ್ನು ಭೇಟಿಯಾದ ಅವರು, ಶೀಘ್ರದಲ್ಲೇ ಕೃತಕ ಕಾಲು ಅಳವಡಿಸಿಕೊಳ್ಳುವ ಅವಕಾಶ ದೊರೆಯಲಿ ಎಂಬ ಆಶಯ ವ್ಯಕ್ತಪಡಿಸಿದರು.
ಎಲ್ಲರಿಗಾಗಿ ಮತ್ತು ಯುದ್ಧ ಅಂತ್ಯಕ್ಕಾಗಿ ಜಗದ್ಗುರುಗಳ ಪ್ರಾರ್ಥನೆ
ತಮ್ಮ ಭೇಟಿಯ ಉದ್ದೇಶವನ್ನು ಪುನರುಚ್ಚರಿಸಿದ ಕಾರ್ಡಿನಲ್ ಜುಪ್ಪಿ, “ಜಗದ್ಗುರು ಲಿಯೋ ಅವರು ಪ್ರೇಷಿತ ಪ್ರತಿನಿಧಿ ಮತ್ತು ನನ್ನನ್ನು ನಿಮ್ಮ ಬಳಿಗೆ ಭರವಸೆಯ ಸಂದೇಶದೊಂದಿಗೆ ಕಳುಹಿಸಿದ್ದಾರೆ. ಯುದ್ಧ ಕೊನೆಗೊಂಡು ನೀವು ಮನೆಗಳಿಗೆ ಮರಳಲಿ ಎಂದು ಅವರು ನಿಮ್ಮೆಲ್ಲರಿಗಾಗಿ ಪ್ರಾರ್ಥಿಸುತ್ತಿದ್ದಾರೆ” ಎಂದು ಕೈದಿಗಳಿಗೆ ಹೇಳಿದರು.
ಉಡುಗೊರೆಗಳನ್ನು ಸ್ವತಃ ವಿತರಿಸುತ್ತಾ, ಕೀ ಚೈನ್‌ನ ಅರ್ಥವನ್ನು ವಿವರಿಸಿದ ಅವರು, “ಜಗದ್ಗುರು ನಿಮಗೆ ಈ ಕೀ ಚೈನ್ ನೀಡುವಂತೆ ನನ್ನನ್ನು ಕೇಳಿದ್ದಾರೆ. ಶೀಘ್ರದಲ್ಲೇ ನಿಮ್ಮ ಮನೆಯ ಕೀಲಿಯನ್ನು ಇದಕ್ಕೆ ಜೋಡಿಸುವ ದಿನ ಬರಲಿ ಎಂದು ನಾನು ಆಶಿಸುತ್ತೇನೆ. ನೀವು ಭವಿಷ್ಯದತ್ತ ಭರವಸೆಯಿಂದ ನೋಡಬೇಕು. ಯುದ್ಧ ಕೊನೆಗೊಂಡು ನೀವು ನಿಮ್ಮ ಮನೆಗಳಿಗೆ ಮರಳಬೇಕು. ಅದು ಶೀಘ್ರದಲ್ಲೇ ನೆರವೇರಲಿ ಎಂದು ನಾವು ಹೃತ್ಪೂರ್ವಕವಾಗಿ ಪ್ರಾರ್ಥಿಸುತ್ತಿದ್ದೇವೆ” ಎಂದು ಹೇಳಿದರು.
ಕೊನೆಯಲ್ಲಿ ಬಂಧನ ಕೇಂದ್ರದ ಪ್ರಾರ್ಥನಾ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಿದ ಕಾರ್ಡಿನಲ್ ಜುಪ್ಪಿ, “ಶೀಘ್ರದಲ್ಲೇ ನೀವು ನಿಮ್ಮ ಮನೆಗಳಿಗೆ ಮರಳಲಿ, ಈ ಎಲ್ಲವೂ ಅಂತ್ಯಗೊಳ್ಳಲಿ ಮತ್ತು ಹೊಸ ಜೀವನ ಆರಂಭಿಸಲಿ ಎಂದು ಪ್ರಾರ್ಥಿಸೋಣ” ಎಂದರು. ತಮ್ಮ ಹೃದಯವನ್ನು ತೋರಿಸುತ್ತಾ, “ನಮ್ಮೊಳಗಿನ ಎಲ್ಲ ದುಷ್ಟತೆಯನ್ನು ಹೊರಹಾಕಬೇಕು. ದೇವರು ಯಾವಾಗಲೂ ನಮಗೆ ಭರವಸೆ ನೀಡುತ್ತಾನೆ. ದುಷ್ಟತೆಯನ್ನು ನಮ್ಮೊಳಗೆ ಬೆಳೆಯಲು ಎಂದಿಗೂ ಅವಕಾಶ ನೀಡಬಾರದು. ಆಗ ದೇವರು ಅದನ್ನು ಜಯಿಸಲು ಸದಾ ನಮ್ಮ ನೆರವಾಗುತ್ತಾನೆ” ಎಂದು ಹೇಳಿದರು.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).