ಗುವಾಮ್‌ನ ಸ್ವಾತಂತ್ರ್ಯ ದಿನಾಚರಣೆಯ ಪವಿತ್ರ ಬಲಿಪೂಜೆ ಗುವಾಮ್‌ನ ಸ್ವಾತಂತ್ರ್ಯ ದಿನಾಚರಣೆಯ ಪವಿತ್ರ ಬಲಿಪೂಜೆ 

ಗುವಾಮ್‌ನ ವಿಮೋಚನಾ ದಿನಾಚರಣೆಯ ಅಂಗವಾಗಿ ಪವಿತ್ರ ಬಲಿಪೂಜೆ ಅರ್ಪಿಸಿದ ಪ್ರೇಷಿತ ರಾಯಭಾರಿ

ನ್ಯೂಜಿಲೆಂಡ್‌ನ ಪ್ರೇಷಿತ ರಾಯಭಾರಿ ಹಾಗೂ ಪೆಸಿಫಿಕ್ ದ್ವೀಪಗಳ ಪ್ರೇಷಿತ ಪ್ರತಿನಿಧಿಯಾದ ಪೂಜ್ಯ ಮಹಾಧರ್ಮಾಧ್ಯಕ್ಷ ಗಾಬೋರ್ ಪಿಂಟರ್ ಅವರು ಗುವಾಮ್‌ನ 82ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಪವಿತ್ರ ಬಲಿಪೂಜೆಯನ್ನು ಅರ್ಪಿಸಿ, ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರ ಶಾಂತಿ ಮತ್ತು ಶಸ್ತ್ರನಿರಸ್ತ್ರೀಕರಣದ ಕರೆಗಳನ್ನು ಪುನರುಚ್ಚರಿಸಿದರು. ಅವರು ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಗುವಾಮ್‌ನ ಜನರು ಅನುಭವಿಸಿದ ನೋವು ಮತ್ತು ತ್ಯಾಗವನ್ನು ಸ್ಮರಿಸಿ, ಪೂಜ್ಯ ಜಗದ್ಗುರುಗಳ ಆಧ್ಯಾತ್ಮಿಕ ಸಾನ್ನಿಧ್ಯವನ್ನು ಜನರಿಗೆ ತಲುಪಿಸಿದರು.

ಲೇಖಕರು: ದೆಬೋರ ಕ್ಯಾಸ್ತೆಲ್ಲಾನೋ ಲುಬೋವ್

2026ರ ಜುಲೈ 21ರಂದು, ನ್ಯೂಜಿಲೆಂಡ್‌ನ ಪ್ರೇಷಿತ ರಾಯಭಾರಿ ಹಾಗೂ ಪೆಸಿಫಿಕ್ ದ್ವೀಪಗಳ ಪ್ರೇಷಿತ ಪ್ರತಿನಿಧಿಯಾದ ಪೂಜ್ಯ ಮಹಾಧರ್ಮಾಧ್ಯಕ್ಷ ಗಾಬೋರ್ ಪಿಂಟರ್ ಅವರು, ಹಗಾಟ್ನಾದಲ್ಲಿರುವ ಡಲ್ಸೆ ನೊಂಬ್ರೆ ದೆ ಮರಿಯಾ ಪ್ರಧಾನ ದೇವಾಲಯದಲ್ಲಿ, ಜಪಾನಿನ ಸಾಮ್ರಾಜ್ಯಶಾಹಿ ಸೇನೆಯಿಂದ ಗುವಾಮ್ ವಿಮೋಚನೆಗೊಂಡ 82ನೇ ವಾರ್ಷಿಕೋತ್ಸವದ ಅಂಗವಾಗಿ ಪವಿತ್ರ ಬಲಿಪೂಜೆ ಅರ್ಪಿಸಿದರು.

ಪೆಸಿಫಿಕ್ ದ್ವೀಪಗಳಲ್ಲಿನ ಪೂಜ್ಯ ಜಗದ್ಗುರುಗಳ ಪ್ರತಿನಿಧಿಯಾಗಿರುವ ಅವರು, ಅಗಾನಾ ಮಹಾಧರ್ಮಪ್ರಾಂತ್ಯದ ಮಹಾಧರ್ಮಾಧ್ಯಕ್ಷ ರಯಾನ್ ಪಿ. ಜಿಮೆನೆಸ್ ಹಾಗೂ ಮಹಾಧರ್ಮಪ್ರಾಂತ್ಯದ ಧರ್ಮಗುರುಗಳೊಂದಿಗೆ ಸೇರಿ ಪವಿತ್ರ ಬಲಿಪೂಜೆಯನ್ನು ಅರ್ಪಿಸಿದರು. ಈ ಸಂದರ್ಭದಲ್ಲಿ ಅವರು ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರ ಆಧ್ಯಾತ್ಮಿಕ ಸಾನ್ನಿಧ್ಯವನ್ನು ಗುವಾಮ್ ಜನರಿಗೆ ತಲುಪಿಸಿದರು. ಪ್ರತಿ ವರ್ಷ ಜುಲೈ 21ರಂದು ಗುವಾಮ್‌ನಲ್ಲಿ ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ದೇವರಿಗೆ ಕೃತಜ್ಞತೆ ಸಲ್ಲಿಸುವುದರ ಜೊತೆಗೆ, ದ್ವೀಪದ ಜನರಿಗೆ ಸ್ವಾತಂತ್ರ್ಯವನ್ನು ಮರಳಿ ತಂದುಕೊಡಲು ಹೋರಾಡಿದ ಅಮೆರಿಕದ ನೌಕಾಪಡೆ (Marines) ಹಾಗೂ ಅಮೆರಿಕದ ಸೇನೆಯ ಯೋಧರನ್ನು ಗೌರವಿಸಲಾಗುತ್ತದೆ.

ಪವಿತ್ರ ಬಲಿ ಪೂಜೆಯ ನಂತರ ಬಸಿಲಿಕಾದಲ್ಲಿ ನಡೆದ ಗಂಭೀರ ಸ್ಮರಣಾ ಪ್ರಾರ್ಥನಾ ಕಾರ್ಯಕ್ರಮದಲ್ಲಿ, ಯುದ್ಧದ ಸಮಯದಲ್ಲಿ ಕಷ್ಟ ಅನುಭವಿಸಿ ಪ್ರಾಣ ತ್ಯಾಗ ಮಾಡಿದವರ ವಿಶ್ವಾಸ ಮತ್ತು ಧೈರ್ಯಕ್ಕೂ ಗೌರವ ಸಲ್ಲಿಸಲಾಯಿತು.

ಗುವಾಮ್ ಮೇಲಿನ ಆಕ್ರಮಣ ಮತ್ತು ವಿಮೋಚನೆ

1941ರ ಡಿಸೆಂಬರ್ 8ರಂದು, ಅಮಲೋದ್ಭವ ಹಬ್ಬದ ಅಂಗವಾಗಿ ಪವಿತ್ರ ಬಲಿಪೂಜೆಯಲ್ಲಿ ಭಾಗವಹಿಸಲು ಹಾಗೂ ಗುವಾಮ್‌ನ ಪೋಷಕಿಯಾದ ಸಾಂತಾ ಮರಿಯನ್ ಕಾಮಲೆನ್ ಅವರನ್ನು ಗೌರವಿಸಲು ಅನೇಕ ಜನರು ಹಳೆಯ ಅಗಾನಾ ಪ್ರಧಾನ ದೇವಾಲಯದ ಸ್ಥಳದಲ್ಲಿ ಸೇರಿದ್ದರು. ಆಗ ಜಪಾನಿನ ಯುದ್ಧ ವಿಮಾನಗಳು ದ್ವೀಪದ ಮೇಲೆ ಬಾಂಬ್ ದಾಳಿ ನಡೆಸಿದ ಕಾರಣ ಕಾರ್ಯಕ್ರಮವು ಮಧ್ಯದಲ್ಲೇ ಸ್ಥಗಿತಗೊಂಡಿತು. ಯುದ್ಧ ಆರಂಭವಾಗಿತ್ತು. ಅಮೆರಿಕದ ಸಣ್ಣ ಭೂಪ್ರದೇಶವಾಗಿದ್ದ ಗುವಾಮ್ ದ್ವೀಪವೂ ಎರಡನೇ ಮಹಾಯುದ್ಧದೊಳಗೆ ಎಳೆಯಲ್ಪಟ್ಟಿತು. ಪರ್ಲ್ ಹಾರ್ಬರ್ ಮೇಲಿನ ದಾಳಿಯಷ್ಟು ವ್ಯಾಪಕವಾಗಿ ನೆನಪಿಸಿಕೊಳ್ಳದಿದ್ದರೂ, ಅದರ ಮರುದಿನವೇ, ಅಂದರೆ ಡಿಸೆಂಬರ್ 8ರಂದು, ಕೇವಲ ನಾಲ್ಕು ಗಂಟೆಗಳ ನಂತರ ಜಪಾನಿನ ಸೇನೆ ಗುವಾಮ್ ಮೇಲೆ ದಾಳಿ ನಡೆಸಿತು. 1944ರ ಜುಲೈ 21ರಂದು ದ್ವೀಪವು ವಿಮೋಚನೆಗೊಳ್ಳುವವರೆಗೂ ನಡೆದ ಆಕ್ರಮಣವು ಗುವಾಮ್ ಜನರಿಗೆ ಅಪಾರ ನೋವು ಮತ್ತು ಸಂಕಷ್ಟವನ್ನುಂಟು ಮಾಡಿತು.

ಪೂಜ್ಯ ಜಗದ್ಗುರುಗಳ ಆಧ್ಯಾತ್ಮಿಕ ಸಾನ್ನಿಧ್ಯ ಮತ್ತು ಶಾಂತಿಯ ಸಂದೇಶ

ಎರಡನೇ ಮಹಾಯುದ್ಧದಿಂದ ಬದುಕುಳಿದವರು, ಗುವಾಮ್‌ನ ರಾಜ್ಯಪಾಲರು, ಸರ್ಕಾರದ ಅಧಿಕಾರಿಗಳು, ಸೇನಾ ಅಧಿಕಾರಿಗಳು ಹಾಗೂ ನಾಗರಿಕ ನಾಯಕರು ಸೇರಿದಂತೆ 800ಕ್ಕೂ ಹೆಚ್ಚು ಜನರನ್ನು ಉದ್ದೇಶಿಸಿ ಪ್ರೇಷಿತ ರಾಯಭಾರಿ ಮಾತನಾಡಿದರು. "ಗುವಾಮ್‌ನ ಜನರಿಗಾಗಿ, ಅಗಾನಾ ಮಹಾಧರ್ಮಪ್ರಾಂತ್ಯಕ್ಕಾಗಿ, ಪ್ರತಿಯೊಂದು ಕುಟುಂಬಕ್ಕಾಗಿ ಹಾಗೂ ವಿಶೇಷವಾಗಿ ಎರಡನೇ ಮಹಾಯುದ್ಧದ ಕರಾಳ ವರ್ಷಗಳ ನೋವಿನ ನೆನಪುಗಳನ್ನು ಇನ್ನೂ ತಮ್ಮ ಹೃದಯದಲ್ಲಿ ಹೊತ್ತುಕೊಂಡಿರುವ ಎಲ್ಲರಿಗಾಗಿ ಪೂಜ್ಯ ಜಗದ್ಗುರುಗಳು ಪ್ರಾರ್ಥಿಸುತ್ತಿದ್ದಾರೆ ಎಂಬುದನ್ನು ನಿಮಗೆ ತಿಳಿಸುವಂತೆ ಅವರು ನನ್ನನ್ನು ಕಳುಹಿಸಿದ್ದಾರೆ" ಎಂದು ಅವರು ಹೇಳಿದರು.

ಬಸಿಲಿಕಾದ ನೇರಪ್ರಸಾರದ ಮೂಲಕ ಸ್ಥಳೀಯವಾಗಿ ಹಾಗೂ ವಿದೇಶಗಳಲ್ಲಿ ಸಾವಿರಾರು ಜನರು ಈ ಪವಿತ್ರ ಬಲಿಪೂಜೆಯಲ್ಲಿ ಭಾಗಿಯಾದರು. ಪ್ರೇಷಿತ ರಾಯಭಾರಿಯವರು ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರ ಶಾಂತಿ ಮತ್ತು ಶಸ್ತ್ರನಿರಸ್ತ್ರೀಕರಣದ ನಿರಂತರ ಕರೆಗಳನ್ನು ಮತ್ತೊಮ್ಮೆ ಪುನರುಚ್ಚರಿಸಿ, ಯುದ್ಧ ಮತ್ತು ಸಂಘರ್ಷಗಳಿಂದ ಬಳಲುತ್ತಿರುವ ರಾಷ್ಟ್ರಗಳಿಗಾಗಿ ಪ್ರಾರ್ಥಿಸುವಂತೆ ವಿಶ್ವಾಸಿಗಳಿಗೆ ಮನವಿ ಮಾಡಿದರು.

ವಿನಾಶಕ್ಕಿಂತ ಸಂವಾದ

"ಇಂದು ಬೆಳಗಿನ ನಮ್ಮ ಪ್ರಾರ್ಥನೆಯು ಗುವಾಮ್‌ಗೆ ಮಾತ್ರ ಸೀಮಿತವಾಗಿಲ್ಲ. ಹಿಂಸಾಚಾರವು ಇನ್ನೂ ದೇವರ ಮಕ್ಕಳನ್ನು ಗಾಯಗೊಳಿಸುತ್ತಿರುವ ಪ್ರತಿಯೊಂದು ಸ್ಥಳಕ್ಕಾಗಿ ನಾವು ಪ್ರಾರ್ಥಿಸುತ್ತೇವೆ" ಎಂದು ಅವರು ಹೇಳಿದರು. "ರಾಜಕೀಯ ನಾಯಕರು ವಿನಾಶದ ಬದಲು ಸಂವಾದದ ಮಾರ್ಗವನ್ನು ಆರಿಸಿಕೊಳ್ಳಲಿ ಮತ್ತು ಸೇನಾ ಶಕ್ತಿಯು ಯಾವಾಗಲೂ ಶಾಂತಿ ಹಾಗೂ ನ್ಯಾಯದ ಸೇವೆಗೆ ಮಾತ್ರ ಬಳಕೆಯಾಗಲಿ ಎಂದು ನಾವು ಪ್ರಾರ್ಥಿಸುತ್ತೇವೆ.”

ತಮ್ಮ ಆರಂಭಿಕ ಸಂದೇಶದಲ್ಲಿ ಮಹಾಧರ್ಮಾಧ್ಯಕ್ಷ ಪಿಂಟರ್ ಅವರು ಯುದ್ಧದ ವರ್ಷಗಳಲ್ಲಿ ಕಷ್ಟ ಅನುಭವಿಸಿದವರನ್ನು ಸ್ಮರಿಸಿದರು. "ಆ ದುರಂತದ ವರ್ಷಗಳಲ್ಲಿ ತಮ್ಮ ಭೌತಿಕ ಜೀವನವನ್ನು ಕಳೆದುಕೊಂಡ ಪುರುಷರು, ಮಹಿಳೆಯರು ಮತ್ತು ಮಕ್ಕಳನ್ನು ನಾವು ಸ್ಮರಿಸುತ್ತೇವೆ. ಮನೆಗೆ ಮರಳಿ ಬರದವರನ್ನು ನಾವು ಸ್ಮರಿಸುತ್ತೇವೆ. ಶಸ್ತ್ರಾಸ್ತ್ರಗಳ ಸದ್ದು ನಿಂತ ನಂತರವೂ ಗಾಯಗಳೊಂದಿಗೆ ಬದುಕಿದವರನ್ನು ನಾವು ಸ್ಮರಿಸುತ್ತೇವೆ" ಎಂದು ಹೇಳಿದರು.

ಯೋನನ ಗುರುತು ಮತ್ತು ಪುನರುತ್ಥಾನದ ಭರವಸೆ

ತಮ್ಮ ಪ್ರವಚನದಲ್ಲಿ ಪ್ರೇಷಿತ ರಾಯಭಾರಿ, ಸಂತ ಮತ್ತಾಯರ ಶುಭಸಂದೇಶದ ವಾಕ್ಯಭಾಗ ಮತ್ತು ದೊಡ್ಡ ಮೀನಿನ ಹೊಟ್ಟೆಯಿಂದ ಯೋನನು ಬಿಡುಗಡೆಯಾದ ಘಟನೆಯನ್ನು ಆಧರಿಸಿ ಚಿಂತನೆ ನಡೆಸಿದರು. "ಕ್ರೈಸ್ತರಿಗೆ ಯೋನನ ಗುರುತು ನೇರವಾಗಿ ಕ್ರಿಸ್ತರನ್ನೇ ಸೂಚಿಸುತ್ತದೆ. ಯೋನನು ದೊಡ್ಡ ಮೀನಿನ ಹೊಟ್ಟೆಯಲ್ಲಿ ಮೂರು ದಿನಗಳಿದ್ದ ನಂತರ ಜೀವಂತವಾಗಿ ಹೊರಬಂದಂತೆ, ಯೇಸು ಕೂಡ ಮೂರು ದಿನ ಸಮಾಧಿಯಲ್ಲಿದ್ದು ನಂತರ ಮೃತರಿಂದ ಪುನರುತ್ಥಾನಗೊಂಡರು" ಎಂದು ಮಹಾಧರ್ಮಾಧ್ಯಕ್ಷ ಪಿಂಟರ್ ಹೇಳಿದರು.

ಮಾನವ ದುಃಖಕ್ಕೆ ದೇವರು ನೀಡಿದ ಮಹತ್ತರ ಉತ್ತರವೇ ಪುನರುತ್ಥಾನ ಎಂದು ಅವರು ಒತ್ತಿಹೇಳಿದರು. "ಶಿಲುಬೆಯು ಸೋಲಿನಂತೆ ಕಂಡರೂ, ಪುನರುತ್ಥಾನ ಮಹೋತ್ಸವವು ವಿಜಯವನ್ನು ಪ್ರಕಟಿಸಿತು; ಪುನರುತ್ಥಾನವು ಹೊಸ ಆರಂಭವಾಯಿತು" ಎಂದು ಹೇಳಿದರು.

ಸ್ವಾತಂತ್ರ್ಯದ ವರಕ್ಕಾಗಿ ದೇವರಿಗೆ ಕೃತಜ್ಞತೆ

ಈ ಆಚರಣೆಯ ಮಹತ್ವವನ್ನು ವಿವರಿಸಿದ ಮಹಾಧರ್ಮಾಧ್ಯಕ್ಷ ರಯಾನ್ ಜಿಮೆನೆಸ್, ವಿಮೋಚನಾ ದಿನದ ಪವಿತ್ರ ಬಲಿಪೂಜೆಯನ್ನು ಆಳವಾದ ಐಕ್ಯತೆಯ ಕ್ಷಣವೆಂದು ಬಣ್ಣಿಸಿದರು. "ಪ್ರಧಾನ ದೇವಾಲಯದಲ್ಲಿ ನಡೆದ ಸ್ವಾತಂತ್ರ್ಯ ದಿನದ ಪವಿತ್ರ ಬಲಿ ಪೂಜೆಯು, ಧರ್ಮಸಭೆ ಹೇಗಿರಬೇಕೆಂಬುದನ್ನು ಸುಂದರವಾಗಿ ಪ್ರತಿಬಿಂಬಿಸಿತು—ಕ್ರಿಸ್ತನ ಒಂದೇ ದೇಹವಾಗಿ" ಎಂದು  ಹೇಳಿದರು.

"ಧರ್ಮಗುರುಗಳು, ಧಾರ್ಮಿಕ ಸೇವಕ-ಸೇವಕಿಯರು, ಸಾಮಾನ್ಯ ವಿಶ್ವಾಸಿಗಳು, ನಾಗರಿಕ ನಾಯಕರು, ಸಶಸ್ತ್ರ ಪಡೆಗಳ ಸದಸ್ಯರು, ನಿವೃತ್ತ ಯೋಧರು ಹಾಗೂ ನಮ್ಮ ದ್ವೀಪದ ಎಲ್ಲ ವರ್ಗದ ಜನರು ಒಟ್ಟಾಗಿ ಪ್ರಾರ್ಥನೆಯಲ್ಲಿ ಭಾಗವಹಿಸಿರುವುದನ್ನು ನೋಡುವುದರಿಂದ, ನಮ್ಮ ನಿಜವಾದ ಐಕ್ಯತೆಯು ನಮ್ಮ ಭಿನ್ನತೆಗಳಲ್ಲಿ ಅಲ್ಲ, ಕ್ರಿಸ್ತರಲ್ಲಿ ನೆಲೆಗೊಂಡಿದೆ ಎಂಬುದನ್ನು ನಾವು ನೆನಪಿಸಿಕೊಂಡೆವು" ಎಂದು ಅವರು ಹೇಳಿದರು.

"ನಾವೆಲ್ಲರೂ ಸೇರಿ ಸ್ವಾತಂತ್ರ್ಯದ ವರಕ್ಕಾಗಿ ದೇವರಿಗೆ ಕೃತಜ್ಞತೆ ಸಲ್ಲಿಸಿದೆವು, ಶಾಶ್ವತ ಶಾಂತಿಗಾಗಿ ಪ್ರಾರ್ಥಿಸಿದೆವು, ನಮ್ಮ ರಾಷ್ಟ್ರಕ್ಕಾಗಿ ಮಹಾನ್ ತ್ಯಾಗ ಮಾಡಿದವರನ್ನು ಗೌರವಿಸಿದೆವು ಹಾಗೂ ಗುವಾಮ್ ಅನ್ನು ದೇವರ ಪ್ರೀತಿಯ ಆರೈಕೆಗೆ ಒಪ್ಪಿಸಿದೆವು" ಎಂದು ಮಹಾಧರ್ಮಾಧ್ಯಕ್ಷ ಜಿಮೆನೆಸ್ ಹೇಳಿದರು.

"ಪವಿತ್ರ ಸಂಸ್ಕಾರದ ಸುತ್ತ ನಾವು ಒಂದಾಗಿ ಸೇರುವಾಗ, ನಾವು ಒಂದೇ ಕುಟುಂಬವಾಗುತ್ತೇವೆ, ಒಂದೇ ಸಮುದಾಯವಾಗುತ್ತೇವೆ ಹಾಗೂ ಪ್ರಭುವಿನಲ್ಲಿ ಒಂದಾದ ಒಂದೇ ಜನಾಂಗವಾಗುತ್ತೇವೆ ಎಂಬುದಕ್ಕೆ ಇದು ಆಳವಾದ ಸಂಕೇತವಾಗಿತ್ತು" ಎಂದು ಅವರು ಹೇಳಿದರು.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

29 ಜುಲೈ 2026, 17:45