ಪೂಜ್ಯ ಧರ್ಮಾಧ್ಯಕ್ಷ ಶೋಮಾಲಿ: ಇನ್ನೂ ತೀವ್ರ ಸಂಕಷ್ಟವನ್ನು ಎದುರಿಸುತ್ತಿರುವ ಗಾಜಾದ ನಿವಾಸಿಗಳು
ಲೇಖಕರು: ಜೀನ್-ಚಾರ್ಲ್ಸ್ ಪುಟ್ಜೊಲು
2025ರ ಅಕ್ಟೋಬರ್ 10ರಂದು ಜಾರಿಗೆ ಬಂದ ಕದನ ವಿರಾಮದ ಕಾರಣ ಗಾಜಾ ಸೈದ್ಧಾಂತಿಕವಾಗಿ ರಕ್ಷಿತವಾಗಿದೆ. ಆದರೆ ಅದು ಕೇವಲ ಸೈದ್ಧಾಂತಿಕವಾಗಿಯೇ ಉಳಿದಿದೆ. ಕಳೆದ ಒಂಬತ್ತು ತಿಂಗಳುಗಳ ಅವಧಿಯಲ್ಲಿ ಇಸ್ರಾಯೇಲಿ ದಾಳಿಗಳು ಪ್ಯಾಲೇಸ್ತೀನಿನ ಪ್ರದೇಶದಾದ್ಯಂತ ಮುಂದುವರಿದಿವೆ. ವ್ಯಾಟಿಕನ್ ವಾರ್ತಾ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ, ಜೆರುಸಲೇಮಿನ ಲ್ಯಾಟಿನ್ ಪ್ರಧಾನ ಧರ್ಮಕೇಂದ್ರಗಳ ಶ್ರೇಷ್ಠ ಗುರುಗಳಾದ(Vicar General) ಪೂಜ್ಯ ಧರ್ಮಾಧ್ಯಕ್ಷ ವಿಲಿಯಂ ಶೋಮಾಲಿ, ಗಾಜಾದಲ್ಲಿ ಮುಂದುವರಿಯುತ್ತಿರುವ ದಾರುಣ ವಾಸ್ತವತೆಯ ಕುರಿತು ಮಾತನಾಡಿದರು. ಪತ್ರಿಕೆಗಳ ಮುಖಪುಟಗಳಿಂದಲೂ ದೂರದರ್ಶನದ ಸುದ್ದಿಗಳಿಂದಲೂ ದೂರ ಸರಿದಿದ್ದರೂ, ಗಾಜಾದ ದುರಂತದಲ್ಲಿ ಯಾವುದೇ ಬದಲಾವಣೆ ಸಂಭವಿಸಿಲ್ಲ ಎಂದು ಅವರು ವಿಷಾದ ವ್ಯಕ್ತಪಡಿಸಿದರು . ಗಾಜಾದ ಆರೋಗ್ಯ ಸಚಿವಾಲಯ ಸಂಗ್ರಹಿಸಿರುವ ಅಂಕಿ-ಅಂಶಗಳ ಪ್ರಕಾರ, ಕದನ ವಿರಾಮ ಜಾರಿಗೆ ಬಂದ ನಂತರದ ಒಂಬತ್ತು ತಿಂಗಳುಗಳಲ್ಲಿ 265 ಮಕ್ಕಳು ಸೇರಿದಂತೆ 1,000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಮತ್ತೊಂದು 3,400 ಮಂದಿ ಗಾಯಗೊಂಡಿದ್ದಾರೆ. ವಿಶ್ವಸಂಸ್ಥೆಯು ಈ ಅಂಕಿ-ಅಂಶಗಳನ್ನು ವಿಶ್ವಾಸಾರ್ಹವೆಂದು ಪರಿಗಣಿಸಿ ಜುಲೈ ಆರಂಭದಲ್ಲಿ ಪ್ರಕಟಿಸಿದ ತನ್ನ ವರದಿಯಲ್ಲಿ ಅವುಗಳನ್ನು ಸೇರಿಸಿದೆ.
ಪೂಜ್ಯ ಧರ್ಮಾಧ್ಯಕ್ಷರೇ, ಗಾಜಾದಲ್ಲಿರುವ ಪ್ಯಾಲೇಸ್ತೀನಿಯರ ದೈನಂದಿನ ಜೀವನವನ್ನು ನೀವು ಹೇಗೆ ವಿವರಿಸುತ್ತೀರಿ?
ಗಾಜಾದ ಜನರು ಈಗ ಒಟ್ಟು ಪ್ರದೇಶದ ಕೇವಲ 47 ಶೇಕಡಾ ಭಾಗದಲ್ಲಿ ಮಾತ್ರ ವಾಸಿಸುತ್ತಿದ್ದಾರೆ. ಉಳಿದ 53 ಶೇಕಡಾ ಪ್ರದೇಶವನ್ನು ಇಸ್ರಾಯೇಲ್ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಇದರ ಪರಿಣಾಮವಾಗಿ ಜನಸಾಂದ್ರತೆ ಅತ್ಯಂತ ಹೆಚ್ಚಾಗಿದೆ. ಕಟ್ಟಡಗಳು ಮಾತ್ರವಲ್ಲದೆ ನೀರು ಮತ್ತು ವಿದ್ಯುತ್ ವ್ಯವಸ್ಥೆಗಳೂ ಸೇರಿದಂತೆ ಶೇಕಡಾ 80ರಷ್ಟು ಮೂಲಸೌಕರ್ಯಗಳು ನಾಶವಾಗಿವೆ. ಅನೇಕ ಶಾಲೆಗಳು ಮತ್ತು ವಿಶ್ವವಿದ್ಯಾಲಯಗಳು ಇನ್ನು ಅಸ್ತಿತ್ವದಲ್ಲೇ ಇಲ್ಲ. ಸಾವಿರಾರು ಜನರು ಗುಡಾರಗಳಲ್ಲಿ ಜೀವನ ನಡೆಸುತ್ತಿದ್ದಾರೆ.
ಈ ದಿನಗಳಲ್ಲಿ ಗಾಜಾಗೆ ಸಾಕಷ್ಟು ಮಾನವೀಯ ನೆರವು ತಲುಪುತ್ತಿದೆಯೇ?
ಮಾನವೀಯ ನೆರವು ಎಂದರೆ ಆಹಾರ, ಔಷಧಿಗಳು ಮತ್ತು ಬದುಕಲು ಅಗತ್ಯವಾದ ಎಲ್ಲ ವಸ್ತುಗಳು. ವೈಯಕ್ತಿಕವಾಗಿ ನಾನು ಆಹಾರವನ್ನು ಮತ್ತು ಉಳಿದ ವಸ್ತುಗಳನ್ನು ಪ್ರತ್ಯೇಕವಾಗಿ ಪರಿಗಣಿಸುತ್ತೇನೆ. ಕೆಲವು ಔಷಧಿಗಳು ಗಾಜಾಗೆ ಬರುತ್ತಿವೆ, ಆದರೆ ಅಗತ್ಯವಿರುವ ಎಲ್ಲಾ ಔಷಧಿಗಳು ಬರುತ್ತಿಲ್ಲ ಮತ್ತು ಬರುತ್ತಿರುವ ಪ್ರಮಾಣವೂ ಬಹಳ ಸೀಮಿತವಾಗಿದೆ. ಕಳೆದ ಕೆಲವು ತಿಂಗಳುಗಳಿಂದ ಗಾಜಾಗೆ ಬರುತ್ತಿರುವ ಆಹಾರವನ್ನು ವ್ಯಾಪಾರಿಗಳು ಇಸ್ರಾಯೇಲ್‌ನಿಂದ ಆಮದು ಮಾಡಿಕೊಳ್ಳುತ್ತಿದ್ದಾರೆ. ನಂತರ ಅದನ್ನು ಗಾಜಾದೊಳಗೆ ಮಾರಾಟ ಮಾಡಲಾಗುತ್ತದೆ. ಜೂನ್ ತಿಂಗಳಲ್ಲಿ ಗಾಜಾಗೆ ಭೇಟಿ ನೀಡಿದ್ದ ಲ್ಯಾಟಿನ್ ಪ್ರಧಾನ ಧರ್ಮಕೇಂದ್ರಗಳ ಧರ್ಮಾಧ್ಯಕ್ಷರಾದ ಪ್ರಧಾನ ಗುರು ಪಿಯರ್‌ಬತ್ತಿಸ್ತಾ ಪಿಜ್ಜಬಲ್ಲಾ , ಕ್ರಿಸ್‌ಮಸ್‌ಗೂ ಮುನ್ನದ ತಮ್ಮ ಹಿಂದಿನ ಭೇಟಿಗೆ ಹೋಲಿಸಿದರೆ ಮಾರುಕಟ್ಟೆಯಲ್ಲಿ ಈಗ ಸ್ವಲ್ಪ ಹೆಚ್ಚು ಸರಕುಗಳು ಲಭ್ಯವಿವೆ ಎಂದು ಕಂಡರು. ಆ ಸಮಯದಲ್ಲಿ ನಾನು ಅವರೊಂದಿಗೆ ಇದ್ದೆ. ಅಂಗಡಿಗಳಲ್ಲಿ ಇನ್ನೂ ಬಹಳ ಕಡಿಮೆ ವಸ್ತುಗಳಿದ್ದುದನ್ನು ನನ್ನ ಕಣ್ಣಾರೆ ನೋಡಿದ್ದೇನೆ. ನಾನು "ಅಂಗಡಿಗಳು" ಎಂದು ಹೇಳುವಾಗ, ಒಂದಕ್ಕೊಂದು ಪಕ್ಕದಲ್ಲಿ ಹಾಕಿರುವ ಒಂದು ಅಥವಾ ಎರಡು ಗುಡಾರಗಳನ್ನು ಉದ್ದೇಶಿಸುತ್ತೇನೆ. ಅವು ಸೂಪರ್‌ಮಾರ್ಕೆಟ್‌ಗಳಲ್ಲ. ವ್ಯಾಪಾರಿಗಳು ಆ ಗುಡಾರಗಳಿಂದಲೇ ಆಹಾರವನ್ನು ಮಾರಾಟ ಮಾಡುತ್ತಿದ್ದಾರೆ.
ಗಾಜಾದ ಅನೇಕ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಅವರು ಆಹಾರವನ್ನು ಹೇಗೆ ಖರೀದಿಸುತ್ತಿದ್ದಾರೆ?
ಉದ್ಯೋಗದಲ್ಲಿದ್ದು ವೇತನ ಪಡೆಯುತ್ತಿದ್ದ ಅನೇಕರು—ವಿಶೇಷವಾಗಿ ಪ್ಯಾಲೇಸ್ತೀನಿಯನ್ ಸರ್ಕಾರದ ನೌಕರರು—ಇನ್ನೂ ತಮ್ಮ ವೇತನವನ್ನು ಪಡೆಯುತ್ತಿದ್ದಾರೆ. ಶಾಲಾ ಶಿಕ್ಷಕರು ಮತ್ತು ವಿವಿಧ ಸರ್ಕಾರಿ ಸಂಸ್ಥೆಗಳ ಸಿಬ್ಬಂದಿಯೂ ತಮ್ಮ ಸಂಬಳವನ್ನು ಪಡೆಯುತ್ತಿದ್ದಾರೆ. ನಮ್ಮ ಶಾಲೆಯ ಶಿಕ್ಷಕರೂ ತಮ್ಮ ವೇತನವನ್ನು ಪಡೆಯುತ್ತಿದ್ದಾರೆ. ಆದರೆ ಉಳಿದ ಎಲ್ಲರಿಗೂ ಈಗ ನಾವು ಹಣದ ಮೂಲಕ ನೆರವು ನೀಡಬೇಕಾಗಿದೆ. ಮೊದಲು ನಾವು ಆಹಾರ ವಿತರಿಸುತ್ತಿದ್ದೆವು. ಈಗ ಜನರು ತಾವೇ ಆಹಾರ ಖರೀದಿಸಿಕೊಳ್ಳಲು ಹಣವನ್ನು ನೀಡುವ ಮೂಲಕ ಸಹಾಯ ಮಾಡುತ್ತಿದ್ದೇವೆ. ಗಾಜಾದ ಲ್ಯಾಟಿನ್ ಧರ್ಮಕೇಂದ್ರದ ಆವರಣದಲ್ಲಿ ಆಶ್ರಯ ಪಡೆದಿರುವ ನಮ್ಮ ಧರ್ಮಕೇಂದ್ರದ ಸದಸ್ಯರಿಗಾಗಿ ನಾವು ಇದೇ ಕಾರ್ಯವನ್ನು ಮಾಡುತ್ತಿದ್ದೇವೆ.
ಅಮೆರಿಕದ ಶಾಂತಿ ಯೋಜನೆಯ ಪ್ರಕಾರ ಈಗ ಎರಡನೇ ಹಂತ ಆರಂಭವಾಗಬೇಕಿತ್ತು. ಇದರಲ್ಲಿ ಹಮಾಸ್‌ನ ನಿರಾಯುಧೀಕರಣ, ಪುನರ್‌ನಿರ್ಮಾಣ ಮತ್ತು ಅದಕ್ಕಾಗಿ ನಿಧಿ ಬಿಡುಗಡೆ ಸೇರಿದೆ. ಆ ಎರಡನೇ ಹಂತದ ಸ್ಥಿತಿ ಏನು?
ಪುನರ್‌ನಿರ್ಮಾಣವು ನಿರಾಯುಧೀಕರಣಕ್ಕೆ ಸಂಬಂಧಿಸಿದೆ. ಆದರೆ ಮೊದಲ ಹಂತವಾದ ನಿರಾಯುಧೀಕರಣ ಇನ್ನೂ ಪೂರ್ಣಗೊಂಡಿಲ್ಲ. ಹಮಾಸ್ ಇನ್ನೂ ಆ ಪ್ರದೇಶದಲ್ಲಿ ಅಸ್ತಿತ್ವದಲ್ಲಿದೆ. ಗಾಜಾದ ಜನರು ವಾಸಿಸುವ ಪ್ರದೇಶದ ಭದ್ರತೆಯನ್ನು ಇನ್ನೂ ಹಮಾಸ್‌ವೇ ನಿಯಂತ್ರಿಸುತ್ತಿದೆ. ಆದ್ದರಿಂದ ಪುನರ್‌ನಿರ್ಮಾಣ ಆರಂಭವಾಗಲು ಸಾಧ್ಯವಾಗುತ್ತಿಲ್ಲ. ಈ ಸಂದರ್ಭದಲ್ಲಿ ಮಕ್ಕಳಿಗೆ ಮಾಡುವ ಕೆಲಸವೇ ಇಲ್ಲ ಎಂಬುದನ್ನೂ ನಾನು ಸೇರಿಸಿ ಹೇಳಲು ಬಯಸುತ್ತೇನೆ. ಏಕೆಂದರೆ ಅವರು ಶಾಲೆಗೆ ಹೋಗುತ್ತಿಲ್ಲ. ಅವರು ತಮ್ಮ ದಿನಗಳನ್ನು ಮರದ ತುಂಡುಗಳು, ಮೊಳೆಗಳು ಹಾಗೂ ಮರುಬಳಕೆ ಮಾಡಬಹುದಾದ ಅಥವಾ ಮಾರಾಟ ಮಾಡಬಹುದಾದ ಯಾವುದೇ ವಸ್ತುಗಳನ್ನು ಸಂಗ್ರಹಿಸುತ್ತಾ ಕಳೆಯುತ್ತಿದ್ದಾರೆ. ಆದರೆ ಈ ಬರುವ ಸೆಪ್ಟೆಂಬರ್‌ನಲ್ಲಿ ಪವಿತ್ರ ಕುಟುಂಬ ಧರ್ಮಕೇಂದ್ರದ ನಮ್ಮ ಶಾಲೆಯನ್ನು ಪುನಃ ತೆರೆಯುವ ಆಶಯವನ್ನು ನಾವು ಹೊಂದಿದ್ದೇವೆ. ಸುಮಾರು 1,000 ಮಕ್ಕಳನ್ನು ದಾಖಲಿಸಿಕೊಳ್ಳುವ ನಿರೀಕ್ಷೆಯಿದೆ. ಹೀಗೆ ಅವರು ಬೀದಿಗಳಲ್ಲಿ ಉದ್ದೇಶವಿಲ್ಲದೆ ಸಮಯ ಕಳೆಯುವ ಬದಲು ಮತ್ತೆ ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ. ಅವರು ಮತ್ತೆ ಕಲಿಯಲು ಆರಂಭಿಸುವುದು ಅತ್ಯಂತ ಮುಖ್ಯವಾಗಿದೆ. ನಿಧಾನವಾಗಿ ಅವರು ಯುದ್ಧವು ಉಂಟುಮಾಡಿದ ಆಘಾತ ಮತ್ತು ಮಾನಸಿಕ ಆವೇಗದಿಂದ ಹೊರಬರಲು ಸಾಧ್ಯವಾಗುತ್ತದೆ.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).