ತಲಿತಾ ಕುಮ್ ಇಂಟರ್‌ನ್ಯಾಷನಲ್ 2025 ವಾರ್ಷಿಕ ವರದಿ (ತಲಿತಾ ಕುಮ್ ಇಂಟರ್‌ನ್ಯಾಷನಲ್) ತಲಿತಾ ಕುಮ್ ಇಂಟರ್‌ನ್ಯಾಷನಲ್ 2025 ವಾರ್ಷಿಕ ವರದಿ (ತಲಿತಾ ಕುಮ್ ಇಂಟರ್‌ನ್ಯಾಷನಲ್)  (Talitha Kum International)

ಇಂದಿನ ಜಗತ್ತಿನ ಮಾನವ ಕಳ್ಳಸಾಗಣೆ: ಯಾರನ್ನೂ ವಸ್ತುವಿನಂತೆ ಪರಿಗಣಿಸಬಾರದು

ತಲಿತಾ ಕುಮ್ ಇಂಟರ್‌ನ್ಯಾಷನಲ್ ತನ್ನ 2025ರ ವಾರ್ಷಿಕ ವರದಿಯನ್ನು ಬಿಡುಗಡೆ ಮಾಡಿದ್ದು, ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ಮಾನವ ಕಳ್ಳಸಾಗಣೆಯೂ ಹೆಚ್ಚುತ್ತಿರುವುದನ್ನು ಬಹಿರಂಗಪಡಿಸಿದೆ. ಆನ್‌ಲೈನ್ ಶೋಷಣೆ ಮತ್ತು ವಂಚನೆಗಳು 21ನೇ ಶತಮಾನದಲ್ಲಿ ಜನರನ್ನು ಬಲೆಗೆ ಬೀಳಿಸುವ ಪ್ರಮುಖ ಸಾಧನಗಳಾಗಿವೆ.

ಲೇಖಕರು: ಕೀಯಲ್ಸೆ ಗುಸ್ಸಿ

ಸಾಂಪ್ರದಾಯಿಕ ಗುಲಾಮಗಿರಿಯನ್ನು ಕಾನೂನಿನ ಮೂಲಕ ರದ್ದುಪಡಿಸಲಾಗಿದ್ದರೂ, ಇಂದಿಗೂ ಸುಮಾರು 5 ಕೋಟಿ ಜನರು ಆಧುನಿಕ ಗುಲಾಮಗಿರಿಯಲ್ಲಿ ಸಿಲುಕಿಕೊಂಡಿದ್ದಾರೆ. ಅದರ ಜೊತೆಗೆ, ಮಾನವ ಕಳ್ಳಸಾಗಣೆ ಮತ್ತು ಇತರ ಶೋಷಣೆಯ ರೂಪಗಳು ಭಾರೀ ಪ್ರಮಾಣದ ಅಕ್ರಮ ಹಣ ಸಂಪಾದನೆಯ ಮಾರ್ಗಗಳಾಗಿವೆ. ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ILO) ಮತ್ತು ಅಂತರರಾಷ್ಟ್ರೀಯ ವಲಸೆ ಸಂಸ್ಥೆ (IOM)ಗಳ ಪ್ರಕಾರ, ಇವುಗಳಿಂದ ಪ್ರತಿವರ್ಷ 236 ಶತಕೋಟಿ ಅಮೆರಿಕನ್ ಡಾಲರ್ ಅಕ್ರಮ ಲಾಭ ಗಳಿಸಲಾಗುತ್ತಿದೆ.

ಜುಲೈ 30ರಂದು ಆಚರಿಸಲಿರುವ ಮಾನವ ಕಳ್ಳಸಾಗಣೆ ವಿರೋಧಿ ವಿಶ್ವ ದಿನದ ಮುನ್ನ ವ್ಯಾಟಿಕನ್ ವಾರ್ತಾ ಸಂಸ್ಥೆಗೆ ಮಾತನಾಡಿದ ತಲಿತಾ ಕುಮ್ ಇಂಟರ್‌ನ್ಯಾಷನಲ್‌ನ ಅಂತರರಾಷ್ಟ್ರೀಯ ಸಂಯೋಜಕಿ ಸಹೋದರಿ ಅಬ್ಬಿ ಅವೆಲಿನೊ, MM, "ಮಾನವ ಕಳ್ಳಸಾಗಣೆಯ ಸಮಸ್ಯೆ ದಿನದಿಂದ ದಿನಕ್ಕೆ ಇನ್ನಷ್ಟು ಸಂಕೀರ್ಣ ರೀತಿಯಲ್ಲಿ ಹೆಚ್ಚುತ್ತಿದೆ" ಎಂದು ಹೇಳಿದರು. ಈ ವರ್ಷದ ವಿಷಯ: "ವಂಚನೆಯ ಬಲೆಯ ಹಿಂದೆ ಸಿಲುಕಿರುವವರು".

ವಿಶ್ವ ದಿನದ ಮುನ್ನ, ಧಾರ್ಮಿಕ ಸಹೋದರಿಯರು ನಡೆಸುತ್ತಿರುವ ಅಂತರರಾಷ್ಟ್ರೀಯ ಜಾಲತಾಣವಾದ ತಲಿತಾ ಕುಮ್ ತನ್ನ 2025ರ ವಾರ್ಷಿಕ ವರದಿಯನ್ನು ಬಿಡುಗಡೆ ಮಾಡಿತು. ಕಳೆದ ವರ್ಷ ಜಾಲತಾಣ ವಿಶ್ವದಾದ್ಯಂತ 12.1 ಲಕ್ಷ ಜನರನ್ನು ತಲುಪಿರುವುದಾಗಿ ವರದಿ ತಿಳಿಸಿದೆ. ಇದು 2024ಕ್ಕೆ ಹೋಲಿಸಿದರೆ 29.6 ಶೇಕಡಾ ಹೆಚ್ಚಳವಾಗಿದೆ. ಆದಾಗ್ಯೂ, ತಲಿತಾ ಕುಮ್‌ನ ಕಾರ್ಯವ್ಯಾಪ್ತಿ ವಿಸ್ತರಿಸುತ್ತಿದ್ದರೂ, ವಿಶೇಷವಾಗಿ ಯುರೋಪ್ ಮತ್ತು ಏಷ್ಯಾದಲ್ಲಿ ಮಾನವ ಕಳ್ಳಸಾಗಣೆಯ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಈ ಕಾರ್ಯದ ತುರ್ತು ಅಗತ್ಯತೆ ಇನ್ನಷ್ಟು ಹೆಚ್ಚಾಗಿದೆ.

ತಂತ್ರಜ್ಞಾನದ ಲಾಭ ಮತ್ತು ಸವಾಲುಗಳು

2025ರ ವಾರ್ಷಿಕ ವರದಿಯು ಹೊಸ ತಂತ್ರಜ್ಞಾನಗಳ ಬೆಳವಣಿಗೆಯೊಂದಿಗೆ ಮಾನವ ಕಳ್ಳಸಾಗಣೆಯೂ ಹೆಚ್ಚುತ್ತಿದೆ ಎಂಬುದನ್ನು ತೋರಿಸುತ್ತದೆ. ಆನ್‌ಲೈನ್ ಶೋಷಣೆ ಮತ್ತು ವಂಚನೆಗಳು ಇಂದು ಜನರನ್ನು ಬಲೆಗೆ ಬೀಳಿಸುವ 21ನೇ ಶತಮಾನದ ಹೊಸ ಮಾರ್ಗಗಳಾಗಿವೆ. ಆನ್‌ಲೈನ್ ವಂಚನೆಗಳ ಹೆಚ್ಚಳದ ಕುರಿತು ಸಹೋದರಿ ಅಬ್ಬಿ ಅವೆಲಿನೊ, "ನಾವು ಭೇಟಿಯಾಗುವ ಅನೇಕ ಬದುಕುಳಿದವರು ಡಿಜಿಟಲ್ ವೇದಿಕೆಗಳ ಸಂಕೀರ್ಣ ಬಲೆಗೆ ಸಿಲುಕಿದ್ದಾರೆ" ಎಂದು ಹೇಳಿದರು.

ಬದುಕುಳಿದವರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದು, ಆನ್‌ಲೈನ್‌ನಲ್ಲಿ ಉತ್ತಮ ಉದ್ಯೋಗದ ಭರವಸೆ ನೀಡಿ ಅವರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಆದರೆ ಅವರು ತಲುಪಿದ ನಂತರ ಆ ಉದ್ಯೋಗವೇ ಸುಳ್ಳಾಗಿರುವುದು ತಿಳಿಯುತ್ತದೆ. ಅವರ ಪಾಸ್‌ಪೋರ್ಟ್‌ಗಳನ್ನು ಕಸಿದುಕೊಳ್ಳಲಾಗುತ್ತದೆ ಮತ್ತು ಅವರ ಸ್ವಾತಂತ್ರ್ಯ ಕಸಿದುಕೊಳ್ಳಲಾಗುತ್ತದೆ. "ಇದು ಈಗಿನ ಪ್ರವೃತ್ತಿಯಾಗಿದೆ. ಅಪರಾಧಿ ಸಂಘಟನೆಗಳು ಉತ್ತಮ ಭವಿಷ್ಯ ಮತ್ತು ಉತ್ತಮ ಉದ್ಯೋಗವನ್ನು ಹುಡುಕುತ್ತಿರುವ ಯುವಜನರನ್ನು ಬಲೆಗೆ ಬೀಳಿಸಲು ಡಿಜಿಟಲ್ ವೇದಿಕೆಗಳನ್ನು ಬಳಸುತ್ತಿವೆ" ಎಂದು ಸಹೋದರಿ ಅಬ್ಬಿ ವಿವರಿಸಿದರು.

ಆನ್‌ಲೈನ್ ಅಪಾಯಗಳ ಬಗ್ಗೆ ಎಚ್ಚರಿಕೆ ನೀಡುತ್ತಿರುವವರು ಅವರೊಬ್ಬರೇ ಅಲ್ಲ. ಅಂತರರಾಷ್ಟ್ರೀಯ ವಲಸೆ ಸಂಸ್ಥೆಯ ಮಹಾನಿರ್ದೇಶಕಿ ಏಮಿ ಪೋಪ್, ಜುಲೈ 28ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ, "80ಕ್ಕೂ ಹೆಚ್ಚು ದೇಶಗಳ ಜನರು, ವಿಶೇಷವಾಗಿ ಏಷ್ಯಾದಲ್ಲಿ, ಆನ್‌ಲೈನ್ ವಂಚನಾ ಕೇಂದ್ರಗಳ ಬಲಿಯಾಗುತ್ತಿದ್ದಾರೆ" ಎಂದು ಹೇಳಿದರು.

ಮಾನವ ಕಳ್ಳಸಾಗಣೆಯ ಪ್ರಮಾಣ ಅತ್ಯಂತ ದೊಡ್ಡದಾಗಿದೆ ಎಂದು ಪೋಪ್ ತಿಳಿಸಿದರು. ವಿಶ್ವಸಂಸ್ಥೆಯ ಮಾದಕ ವಸ್ತುಗಳು ಮತ್ತು ಅಪರಾಧಗಳ ಕಚೇರಿ (UNODC) ವರದಿಯ ಪ್ರಕಾರ, ವಂಚನೆಗಳಿಂದ ಪ್ರತಿವರ್ಷ ಶತಕೋಟಿ ಅಮೆರಿಕನ್ ಡಾಲರ್ ನಷ್ಟವಾಗುತ್ತಿದೆ. ಪೂರ್ವ ಏಷ್ಯಾ, ಆಗ್ನೇಯ ಏಷ್ಯಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಪ್ರದೇಶಗಳಲ್ಲಿ ಇರುವ ವಂಚನಾ ಕೇಂದ್ರಗಳಲ್ಲಿ ಲಕ್ಷಾಂತರ ಮಾನವ ಕಳ್ಳಸಾಗಣೆಗೆ ಒಳಗಾದ ಕಾರ್ಮಿಕರು ಇದ್ದಾರೆ ಎಂದು ಅಂದಾಜಿಸಲಾಗಿದೆ.

ವಂಚನೆಗಳನ್ನು ಎದುರಿಸುವುದು

ಈ ರೀತಿಯ ವಂಚನೆಗಳನ್ನು ತಡೆಯಲು ತಲಿತಾ ಕುಮ್ ಕೈಗೊಂಡಿರುವ ಪ್ರಮುಖ ಪ್ರಯತ್ನಗಳಲ್ಲಿ ಒಂದಾಗಿದೆ, ಆನ್‌ಲೈನ್ ಕಳ್ಳಸಾಗಣೆಯ ಪ್ರಮುಖ ಗುರಿಯಾಗಿರುವ ಯುವಜನರಿಗೆ ಶಿಕ್ಷಣ ನೀಡುವುದು. "ಯುವಜನರು ಮಾತ್ರವಲ್ಲ, ಡಿಜಿಟಲ್ ವೇದಿಕೆಗಳಲ್ಲಿ ಸಿಲುಕುವ ಸಾಧ್ಯತೆ ಇರುವ ಪ್ರತಿಯೊಬ್ಬರಿಗೂ ಜಾಗೃತಿ ಮೂಡಿಸಲು ನಮ್ಮ ಜಾಲವನ್ನು ಸಕ್ರಿಯಗೊಳಿಸುತ್ತಿದ್ದೇವೆ" ಎಂದು ಅಂತರರಾಷ್ಟ್ರೀಯ ಸಂಯೋಜಕಿ ಹೇಳಿದರು.

ತಲಿತಾ ಕುಮ್ ಯುವ ರಾಯಭಾರಿ ಕಾರ್ಯಕ್ರಮದ ಮೂಲಕ, ಯುವಜನರಿಗೆ ಮಾನವ ಕಳ್ಳಸಾಗಣೆಯ ಕುರಿತು ತರಬೇತಿ ನೀಡಲಾಗುತ್ತದೆ. ಅದನ್ನು ಹೇಗೆ ಗುರುತಿಸುವುದು ಮತ್ತು ಹೇಗೆ ಎದುರಿಸುವುದು ಎಂಬುದನ್ನು ಅವರಿಗೆ ಕಲಿಸಲಾಗುತ್ತದೆ. ನಂತರ ಅವರು ತಮ್ಮ ಸ್ಥಳೀಯ ಸಮುದಾಯಗಳು ಮತ್ತು ದೇಶಗಳಲ್ಲಿ ಇತರ ಯುವಜನರಿಗೆ ಇದೇ ಜಾಗೃತಿಯನ್ನು ಮೂಡಿಸುತ್ತಾರೆ.

ಮಾನವ ಕಳ್ಳಸಾಗಣೆ ನಡೆಸುವವರು ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿರುವ ಹಿನ್ನೆಲೆಯಲ್ಲಿ, ಅದೇ ವೇದಿಕೆಗಳನ್ನು ಬಳಸಿಕೊಂಡು ಜಾಗೃತಿ ಮೂಡಿಸಲು ತಲಿತಾ ಕುಮ್ ಮುಂದಾಗಿದೆ. ಇದಕ್ಕಾಗಿ ಸಾಮಾಜಿಕ ಜಾಲತಾಣ ಖಾತೆಗಳು, ದೂರದರ್ಶನ ಮತ್ತು ರೇಡಿಯೋ ಕಾರ್ಯಕ್ರಮಗಳನ್ನು ಆರಂಭಿಸಿ, ಆನ್‌ಲೈನ್ ಮಾನವ ಕಳ್ಳಸಾಗಣೆಯ ಅಪಾಯಗಳ ಕುರಿತು ಸಾರ್ವಜನಿಕರಿಗೆ ಶಿಕ್ಷಣ ನೀಡುತ್ತಿದೆ.

ಪರಿಹಾರದ ಒಂದು ಭಾಗ

2025ರ ವಾರ್ಷಿಕ ವರದಿಯು ಮಾನವ ಕಳ್ಳಸಾಗಣೆಯ ಹಲವು ಅಂಶಗಳನ್ನು ವಿವರಿಸುತ್ತದೆ. ಅವುಗಳಲ್ಲಿ ತಡೆಗಟ್ಟುವಿಕೆ, ಬದುಕುಳಿದವರಿಗೆ ಬೆಂಬಲ, ನ್ಯಾಯದ ಪ್ರವೇಶ, ಸಹಭಾಗಿತ್ವ ಮತ್ತು ಹಕ್ಕು ಪ್ರತಿಪಾದನೆ ಪ್ರಮುಖವಾಗಿವೆ. ಇವುಗಳಲ್ಲಿ ವಿಶೇಷವಾಗಿ ಬದುಕುಳಿದವರಿಗೆ ಬೆಂಬಲ ಅತ್ಯಂತ ಮುಖ್ಯ ಎಂದು ಸಹೋದರಿ ಅಬ್ಬಿ ಒತ್ತಿಹೇಳಿದರು. ಬದುಕುಳಿದವರೇ ಪರಿಹಾರದ ಒಂದು ಭಾಗ. "ಇದು ಕೇವಲ ರಕ್ಷಿಸುವುದರ ವಿಷಯವಲ್ಲ. ಬದುಕುಳಿದವರಿಗೆ ತಮ್ಮ ಅಗತ್ಯಗಳನ್ನು ವ್ಯಕ್ತಪಡಿಸಲು, ಅವಕಾಶಗಳನ್ನು ಪಡೆಯಲು ಮತ್ತು ದೀರ್ಘಕಾಲಿಕ ಸಹಪ್ರಯಾಣವನ್ನು ಅನುಭವಿಸಲು ವೇದಿಕೆಯನ್ನು ನೀಡಬೇಕಾಗಿದೆ" ಎಂದು ಅವರು ಹೇಳಿದರು.

ಈ “ಬದುಕುಳಿದವರನ್ನು ಕೇಂದ್ರವಾಗಿಟ್ಟುಕೊಂಡ ದೃಷ್ಟಿಕೋನ"ದ ಜೊತೆಗೆ, ಮಾನವ ಕಳ್ಳಸಾಗಣೆಯ ಮೂಲ ಕಾರಣಗಳನ್ನು ಪರಿಹರಿಸುವ ವ್ಯವಸ್ಥಾತ್ಮಕ ಬದಲಾವಣೆಯ ಅಗತ್ಯವಿದೆ ಎಂದು ಅವರು ಕರೆ ನೀಡಿದರು. ಜನರು ಉತ್ತಮ ಭವಿಷ್ಯಕ್ಕಾಗಿ ಏಕೆ ತಮ್ಮ ಊರುಗಳನ್ನು ಬಿಟ್ಟು ಹೋಗುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಅಗತ್ಯ ಎಂದು ಹೇಳಿದರು. "ಜನರು ಬಡತನದಿಂದ ವಲಸೆ ಹೋಗುತ್ತಾರೆ. ಅಸಮಾನತೆಯಿಂದ ವಲಸೆ ಹೋಗುತ್ತಾರೆ. ಸಂಘರ್ಷಗಳಿಂದ ವಲಸೆ ಹೋಗುತ್ತಾರೆ. ಆದ್ದರಿಂದ ಮಾನವ ಕಳ್ಳಸಾಗಣೆಯಿಲ್ಲದ ಜಗತ್ತನ್ನು ನಿರ್ಮಿಸಲು ನಾವು ಒಟ್ಟಾಗಿ ನಡೆಯಬೇಕು" ಎಂದು ಸಹೋದರಿ ಅಬ್ಬಿ ಹೇಳಿದರು.

ಆದರೆ ಈ ಅಪರಾಧವನ್ನು ಕೊನೆಗೊಳಿಸುವ ಕಾರ್ಯವು ಸ್ಥಳೀಯ ಮಟ್ಟದಿಂದಲೇ ಆರಂಭವಾಗಬೇಕು. ಏಕೆಂದರೆ, "ಮಾನವ ಕಳ್ಳಸಾಗಣೆ ನಡೆಸುವವರ ಕಾರ್ಯವಿಧಾನ ಜಾಗತಿಕವಾಗಿ ಇನ್ನಷ್ಟು ಸಂಕೀರ್ಣವಾಗುತ್ತಿದೆ" ಎಂದು ಅವರು ಎಚ್ಚರಿಸಿದರು. ಆದ್ದರಿಂದ ತಡೆಗಟ್ಟುವಿಕೆ, ಹಕ್ಕು ಪ್ರತಿಪಾದನೆ, ಬದುಕುಳಿದವರಿಗೆ ಬೆಂಬಲ ಮತ್ತು ರಕ್ಷಣೆಯು ಅತ್ಯಗತ್ಯವಾಗಿದೆ. ಇದಕ್ಕಿಂತಲೂ ಮುಖ್ಯವಾಗಿ, ಮಾನವ ಕಳ್ಳಸಾಗಣೆಯನ್ನು ಮುಂದುವರಿಸುವ ಮೂಲ ಕಾರಣಗಳನ್ನು ಪರಿಹರಿಸಲು ಸ್ಥಳೀಯ ಹಾಗೂ ಜಾಗತಿಕ ನಾಯಕರನ್ನು ಒತ್ತಾಯಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಅವರು ಹೇಳಿದರು.

ಶಿಕ್ಷಣವೇ ಪ್ರಮುಖ ಕೀಲಿಕೈ

ಈ ಅಪರಾಧವನ್ನು ಕೊನೆಗೊಳಿಸುವುದು ಸಾಧ್ಯ. ಆದರೆ ಅದನ್ನು ಒಬ್ಬ ವ್ಯಕ್ತಿ, ಒಂದು ದೇಶ ಅಥವಾ ಒಂದೇ ಸಂಸ್ಥೆ ಸಾಧಿಸಲು ಸಾಧ್ಯವಿಲ್ಲ. ಶಿಕ್ಷಣವೇ ಆ ಬಾಗಿಲು ತೆರೆಯುವ ಪ್ರಮುಖ ಕೀಲಿಕೈ ಎಂದು ಸಹೋದರಿ ಅಬ್ಬಿ ಹೇಳಿದರು. "ಅತ್ಯಂತ ಚಿಕ್ಕ ಮಕ್ಕಳಿಗೂ ಮಾನವ ಕಳ್ಳಸಾಗಣೆ ಹೇಗೆ ಹರಡುತ್ತಿದೆ ಎಂಬುದನ್ನು ಜಾಗತಿಕ ಮಟ್ಟದಲ್ಲಷ್ಟೇ ಅಲ್ಲ, ಸ್ಥಳೀಯ ಮಟ್ಟದಲ್ಲಿಯೂ ಮತ್ತು ಜೀವನದ ಪ್ರತಿಯೊಂದು ಹಂತದಲ್ಲಿಯೂ ತಿಳಿಸಬೇಕು" ಎಂದು ಅವರು ವಾದಿಸಿದರು.

ಈ ಜಾಗತಿಕ ಅಪರಾಧವನ್ನು ಕೊನೆಗೊಳಿಸಲು ಇನ್ನೊಂದು ಅತ್ಯಗತ್ಯ ಸಂಗತಿಯೆಂದರೆ, ಅಂಕಿಅಂಶಗಳ ಹಿಂದೆ ಕೇವಲ ಸಂಖ್ಯೆಗಳಲ್ಲ, ಮಾನವರು, ಅವರ ಕಥೆಗಳು ಮತ್ತು ಅವರ ಜೀವನಗಳು ಇವೆ ಎಂಬುದನ್ನು ಗುರುತಿಸುವುದು. ಆದ್ದರಿಂದ ಒಟ್ಟಾಗಿ ಕೆಲಸ ಮಾಡುವುದೇ ತಲಿತಾ ಕುಮ್‌ನ ಧ್ಯೇಯದ ಕೇಂದ್ರಬಿಂದುವಾಗಿದೆ.

ತಲಿತಾ ಕುಮ್‌ನ ಧ್ಯೇಯದ ಹೃದಯದಲ್ಲಿರುವ ಸಂದೇಶ ಒಂದೇ: "ಯಾರನ್ನೂ ಎಂದಿಗೂ ಒಂದು ವಸ್ತುವಿನಂತೆ ಪರಿಗಣಿಸಬಾರದು.”

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

29 ಜುಲೈ 2026, 16:47