ಪ್ರಭುವಿನ ದಿನದ ಧ್ಯಾನ: 'ದೀನ ಹಾಗೂ ವಿನಯ ಹೃದಯ'
ಲೇಖಕರು: ವಂದನೀಯ ಗುರು ಎಡ್ಮಂಡ್ ಪವರ್, OSB
ದೇವರ ಪ್ರೀತಿಗೆ ನಿಮ್ಮನ್ನು ಸಂಪೂರ್ಣವಾಗಿ ಒಪ್ಪಿಸಿಕೊಡುವುದು ನಿಮಗೆ ಕಷ್ಟವಾಗುತ್ತಿದೆಯೇ? ಇಂದಿನ ಶುಭಸಂದೇಶ ಅತ್ಯಂತ ವಿಶಿಷ್ಟವಾಗಿದೆ. ಅದರ ಹಿಂದಿನ ಮತ್ತು ಮುಂದಿನ ಭಾಗಗಳೊಂದಿಗೆ ಸ್ಪಷ್ಟವಾದ ಸಂಬಂಧವಿಲ್ಲದ ಸ್ವತಂತ್ರ ಭಾಗದಂತೆ ಅದು ಕಾಣಿಸುತ್ತದೆ.
ಪ್ರಭು ಯೇಸು ಕ್ರಿಸ್ತರು ಇದಕ್ಕೂ ಮೊದಲು ಕೊರಾಜ್ಜಿನ್, ಬೆತ್ಸಾಯಿದಾ ಮತ್ತು ಕಪೆರ್ನವುಮ್ ನಗರಗಳ ಜನರು ತಮ್ಮ ಮಹತ್ಕಾರ್ಯಗಳಿಗೆ ಸ್ಪಂದಿಸದ ಕಾರಣ ಅವರನ್ನು ಖಂಡಿಸುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ಅವರ ಧ್ವನಿಯಲ್ಲಿ ಸಂಪೂರ್ಣ ಬದಲಾವಣೆ ಕಂಡುಬರುತ್ತದೆ. ಅವರು ಎಲ್ಲಿದ್ದಾರೆ, ಅವರೊಂದಿಗೆ ಯಾರು ಇದ್ದಾರೆ ಎಂಬುದು ನಮಗೆ ತಿಳಿದಿಲ್ಲ. ಶುಭಸಂದೇಶದ ನಿರೂಪಣೆಯಿಂದ ಹೊರಬಂದು ನೇರವಾಗಿ ನಮ್ಮ ಮುಂದೆ ನಿಂತು ಮಾತನಾಡುತ್ತಿರುವಂತೆ ಭಾಸವಾಗುತ್ತದೆ.
ಅವರ ಮೊದಲ ಮಾತುಗಳು ನಾಲ್ಕನೇ ಶುಭಸಂದೇಶದ ಶೈಲಿಯಲ್ಲಿ ತಂದೆಗೆ ಸಲ್ಲಿಸಿದ ಪ್ರಾರ್ಥನೆಯಾಗಿದೆ. ಅದು ಅರಿವಾಗದಂತೆ ನಿಧಾನವಾಗಿ ಒಂದು ಆಹ್ವಾನವಾಗಿ ಬದಲಾಗುತ್ತದೆ. ಆದರೆ ಆ ಆಹ್ವಾನ ಯಾರಿಗೆ? ಅವರ ಕರೆಯು ಯಾವುದೇ ಭೇದವಿಲ್ಲದೆ ಎಲ್ಲರನ್ನೂ ಅಪ್ಪಿಕೊಳ್ಳುತ್ತದೆ: "ದುಡಿದು ಭಾರ ಹೊತ್ತು ಬಳಲಿ ಬೆಂಡಾಗಿರುವವರೆಲ್ಲರೂ ನನ್ನ ಬಳಿಗೆ ಬನ್ನಿರಿ."
ಪ್ರಿಯ ಓದುಗರೇ, ನೀವು ಸಹ ಕೆಲವೊಮ್ಮೆ ಅಂತಹವರಲ್ಲಿ ಒಬ್ಬರಾಗಿರುವುದಿಲ್ಲವೇ? ನಂಬಿಕೆಯಿಂದ ನಿಮ್ಮನ್ನು ದೇವರಿಗೆ ಒಪ್ಪಿಸಿ, ಅವರಿಂದ ಹೊತ್ತುಕೊಳ್ಳಲ್ಪಡುವ ಅನುಭವವನ್ನು ಪಡೆಯುವ ಆಸೆ ನಿಮ್ಮಲ್ಲಿಲ್ಲವೇ? ನಾವು ಅವರ ಬಳಿಗೆ ಹೋದರೆ ಏನನ್ನು ಕಾಣುತ್ತೇವೆ? ಹಲವಾರು ಅಮೂಲ್ಯ ವರಗಳನ್ನು ಕಾಣುತ್ತೇವೆ.
ಮೊದಲನೆಯದಾಗಿ, ಸೃಷ್ಟಿಕರ್ತನಾದ ತಂದೆಯ ಅನಂತ ಪ್ರೀತಿಯ ಪ್ರಕಟಣೆ. ಆ ತಂದೆಯನ್ನು ಮಗನಾದ ಪ್ರಭು ಯೇಸು ಕ್ರಿಸ್ತರು ಮಾತ್ರ ಸಂಪೂರ್ಣವಾಗಿ ಅರಿತಿದ್ದಾರೆ. ಆದರೆ ಅವರು ತಮ್ಮ ಜ್ಞಾನದಲ್ಲಿ ನಮ್ಮನ್ನೂ ಪಾಲುಗಾರರನ್ನಾಗಿಸಲು ಸಿದ್ಧರಾಗಿದ್ದಾರೆ.
ಎರಡನೆಯದಾಗಿ, ನಾವು ವಿಶ್ರಾಂತಿಯನ್ನು ಪಡೆಯುತ್ತೇವೆ. ಹೊರೆಗಳು, ಒತ್ತಡಗಳು, ನಿರೀಕ್ಷೆಗಳು, ಭಯಗಳು ಮತ್ತು ಚಿಂತೆಗಳಿಂದ ತುಂಬಿರುವ ಈ ಜಗತ್ತಿನಲ್ಲಿ ಅವರು ನಮಗೆ ನಿಜವಾದ ವಿಶ್ರಾಂತಿಯನ್ನು ನೀಡುತ್ತಾರೆ. ನಮ್ಮ ವಿಶ್ರಾಂತಿಯ ಅಗತ್ಯವನ್ನು ಪ್ರಭು ಯೇಸು ಕ್ರಿಸ್ತರು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ. ಆದ್ದರಿಂದಲೇ "ನೀಬನ್ನಿ, ಪ್ರತ್ಯೇಕವಾಗಿ ನಾವು ನಿರ್ಜನಪ್ರದೇಶಕ್ಕೆ ಹೋಗಿ ಸ್ವಲ್ಪ ವಿಶ್ರಮಿಸಿಕೊಂಡು ಬರೋಣರಿ" (ಮಾರ್ಕ 6:31) ಎಂದು ತಮ್ಮ ಪ್ರೇಷಿತರಿಗೆ ಹೇಳುತ್ತಾರೆ. ಹಾಗಾದರೆ ಇಂದಿನ ದೇವರ ವಾಕ್ಯವು ನಮ್ಮ ಬಗ್ಗೆ ನಾವೂ ಕಾಳಜಿ ವಹಿಸಬೇಕೆಂದು, ನಮ್ಮ ನೈಜ ಅಗತ್ಯಗಳನ್ನು ಒಪ್ಪಿಕೊಂಡು ಸಮತೋಲನಯುತ ಜೀವನ ನಡೆಸಬೇಕೆಂದು ನಮಗೆ ಬೋಧಿಸುತ್ತಿದೆಯೇ?
ಮೂರನೆಯದಾಗಿ, ಪ್ರಭು ನಮಗೆ ತಮ್ಮ ನಿರಂತರ ಸಾನ್ನಿಧ್ಯವನ್ನು ನೀಡುತ್ತಾರೆ. "ನನ್ನಿಂದ ಕಲಿಯಿರಿ" ಎಂದು ಅವರು ಹೇಳುವಾಗ ಕೇವಲ ತಮ್ಮನ್ನು ಅನುಕರಿಸಿರಿ ಎಂದು ಮಾತ್ರ ಹೇಳುವುದಿಲ್ಲ; ತಮ್ಮೊಂದಿಗಿನ ಆಳವಾದ ಐಕ್ಯತೆಯತ್ತ ನಮ್ಮನ್ನು ಆಹ್ವಾನಿಸುತ್ತಾರೆ.
"ನನ್ನ ಬಳಿಗೆ ಬನ್ನಿರಿ" ಎಂದು ಆರಂಭವಾಗುವ ಕೊನೆಯ ಮೂರು ವಚನಗಳಲ್ಲಿ ಅವರ ಸಾನ್ನಿಧ್ಯವೇ ಪ್ರಧಾನವಾಗಿದೆ. ವ್ಯಾಕರಣದ ದೃಷ್ಟಿಯಿಂದಲೂ "ನಾನು", "ನನ್ನ", "ನನ್ನಿಂದ" ಎಂಬ ಪದಗಳು ಏಳು ಬಾರಿ ಬಳಕೆಯಾಗಿದ್ದು, ಸಂಪೂರ್ಣ ಪಾಠವನ್ನು ಅವರ ಸಾನ್ನಿಧ್ಯದಿಂದ ತುಂಬಿಸುತ್ತವೆ. ನಾವು ಯಾವುದೇ ಕಾರ್ಯವನ್ನು ಕೈಗೊಂಡರೂ ಅದನ್ನು ಒಬ್ಬರೇ ಮಾಡುವುದಿಲ್ಲ; ಅವರು ನಮ್ಮೊಂದಿಗಿರುತ್ತಾರೆ.
ಎರಡು ಬಾರಿ ಉಲ್ಲೇಖವಾಗುವ "ನೊಗ" ಶಿಲುಬೆಯನ್ನು ಸೂಚಿಸುತ್ತಿರಬಹುದು. ಇದರ ಕುರಿತು ಪ್ರಭು ಯೇಸು ಕ್ರಿಸ್ತರು ಈಗಾಗಲೇ (ಮತ್ತಾಯ 10:38) ಮಾತನಾಡಿದ್ದಾರೆ; ಮುಂದೆ ಮತ್ತೆ (ಮತ್ತಾಯ 16:24) ಅದನ್ನು ಬೋಧಿಸಲಿದ್ದಾರೆ.
ಆದರೆ ಇಲ್ಲಿ ಅತ್ಯಂತ ಗಮನಾರ್ಹವಾದ ಸಂಗತಿಯೆಂದರೆ, "ವಿನಯಶೀಲರೂ ದೀನ ಹೃದಯರೂ ಆಗಿರಿ" ಎಂಬ ಅವರ ಸರಳ ಆಹ್ವಾನ. ಅಧಿಕಾರ, ರಾಜಕಾರಣ, ಸೈನಿಕ ಬಲ ಮತ್ತು ಅಹಂಕಾರದ ಪ್ರದರ್ಶನಗಳಿಂದ ತುಂಬಿರುವ ಇಂದಿನ ಜಗತ್ತಿನಲ್ಲಿ ಇದಕ್ಕಿಂತ ಪ್ರತಿಸಂಸ್ಕೃತಿಯ ಸಂದೇಶ ಮತ್ತೊಂದಿರಬಹುದೇ? ಇಂತಹ ಜೀವನ ನಿಜವಾಗಿಯೂ ಸಾಧ್ಯವೇ?
ಹೌದು, ಆದರೆ ಅದು "ನೀವು ಶರೀರಕ್ಕೆ ಅಧೀನರಾಗಿಲ್ಲ; ಪವಿತ್ರಾತ್ಮರಿಗೆ ಅಧೀನರಾಗಿದ್ದೀರಿ" ಎಂಬ ಎರಡನೇ ವಾಚನದಲ್ಲಿರುವ ಪವಿತ್ರ ಪೌಲರ ಮಾತುಗಳನ್ನು ನಾವು ನಂಬಿದಾಗ ಮಾತ್ರ ಸಾಧ್ಯ. ಮತ್ತು ಮೊದಲನೇ ವಾಚನದಲ್ಲಿ ಹೇಳುವಂತೆ, "ವಿನಮ್ರನಾಗಿ ಹೇಸರಗತ್ತೆಯನ್ನೇರಿ ಬರುತ್ತಿರುವ ರಾಜನಿಗೆ" ನಮ್ಮ ನಿಷ್ಠೆಯನ್ನು ಅರ್ಪಿಸಿದಾಗ ಮಾತ್ರ ಅದು ಸಾಧ್ಯ ಆಗ ದೇವರ ಪ್ರೀತಿಗೆ ನಮ್ಮನ್ನು ಸಂಪೂರ್ಣವಾಗಿ ಒಪ್ಪಿಸಿಕೊಡುವುದು ಅಷ್ಟೇನೂ ಕಷ್ಟಕರವಾಗಿರುವುದಿಲ್ಲ.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).