ಪ್ರಭುವಿನ ದಿನದ ಧ್ಯಾನ: ಗೋಧಿ, ಕಳೆ ಮತ್ತು ವಾರಾಂತ್ಯ
ಲೇಖಕರು: ಜೆನ್ನಿ ಕ್ರಾಸ್ಕಾ
ಪಾಶ್ಚಿಮಾತ್ಯ ದೇಶಗಳಲ್ಲಿ ಜುಲೈ ತಿಂಗಳ ಮಧ್ಯಭಾಗದಲ್ಲಿ ಮತ್ತು ಭಾರತದಲ್ಲಿ ಏಪ್ರಿಲ್-ಮೇ ತಿಂಗಳುಗಳಲ್ಲಿ ನಮ್ಮಲ್ಲಿ ಅನೇಕರು ಬೇಸಿಗೆಯ ನಿಧಾನಗತಿಯ ಜೀವನಶೈಲಿಗೆ ಹೊಂದಿಕೊಂಡಿರುತ್ತೇವೆ. ರಜಾ ದಿನಗಳು ಆರಂಭವಾಗಿರುತ್ತವೆ. ಶಾಲೆಗಳಿಗೆ ರಜೆ ಇರುತ್ತದೆ. ದಿನಚರಿಯ ಒತ್ತಡ ಕಡಿಮೆಯಾಗಿರುತ್ತದೆ. ಮನೆಯ ಮುಂಭಾಗದ ಮಂಟಪದಲ್ಲಿ ಕುಳಿತು ವಿಶ್ರಾಂತಿ ಪಡೆಯಲು, ಕುಟುಂಬದವರೊಂದಿಗೆ ಸವಿರುಚಿ ಸವಿಯಲು, ನೀರಿನ ತೀರದಲ್ಲಿ ಒಂದು ಮಧ್ಯಾಹ್ನ ಕಳೆಯಲು ಅಥವಾ ಬೆಳಗಿನ ಒಂದು ಕಪ್ ಕಾಫಿಯನ್ನು ನಿಧಾನವಾಗಿ ಆಸ್ವಾದಿಸಲು ಸಮಯ ಸಿಗುತ್ತದೆ. ಬೇಸಿಗೆಯು ವಿಶ್ರಾಂತಿಗೆ ಸುಂದರ ಅವಕಾಶವನ್ನು ನೀಡುತ್ತದೆ. ವಿಶ್ರಾಂತಿ ಕೇವಲ ಒಂದು ವರವಲ್ಲ; ಅದು ದೇವರು ನಮಗಾಗಿ ಬಯಸುವ ಸಂಗತಿಯೂ ಹೌದು.
ಆದರೆ ನಾವು ವಿಶ್ರಾಂತಿ ಪಡೆಯಲು ಆರಂಭಿಸುವಷ್ಟರಲ್ಲಿ, ಈ ಭಾನುವಾರದ ಶುಭಸಂದೇಶದಲ್ಲಿ ಪ್ರಭು ಯೇಸು ತಮ್ಮ ಅತ್ಯಂತ ಸವಾಲಿನ ಸಾಮತಿಗಳಲ್ಲಿ ಒಂದಾದ ಗೋಧಿ ಮತ್ತು ಕಳೆಯ ಸಾಮತಿಯನ್ನು ನಮ್ಮ ಮುಂದಿಡುತ್ತಾರೆ.
ನಾವು ಪ್ರಾಮಾಣಿಕವಾಗಿ ಹೇಳುವುದಾದರೆ, ಬೇಸಿಗೆಯ ಸುಮ್ಮನಿರುವ ವಾರಾಂತ್ಯದಲ್ಲಿ ಕೇಳಲು ನಾವು ಆಯ್ಕೆ ಮಾಡಿಕೊಳ್ಳುವ ಶುಭಸಂದೇಶ ಇದಲ್ಲ. ಈ ಋತುವಿನ ನಿರಾಳ ಮನೋಭಾವಕ್ಕೆ ಹೊಂದುವ, ಹಗುರವಾದ ಸಂದೇಶವನ್ನು ನಾವು ಬಯಸಬಹುದು. ಆದರೆ ಅದರ ಬದಲಿಗೆ, ಶಿಷ್ಯತ್ವದ ಕಾರ್ಯವು ನಿರಂತರವಾಗಿ ಮುಂದುವರಿಯುತ್ತದೆ ಎಂಬುದನ್ನು ಪ್ರಭು ಯೇಸು ನಮಗೆ ನೆನಪಿಸುತ್ತಾರೆ. ಕ್ರೈಸ್ತ ಜೀವನವು ಬೇಸಿಗೆಯ ರಜೆಯನ್ನು ತೆಗೆದುಕೊಳ್ಳುವುದಿಲ್ಲ.
ಈ ಶುಭಸಂದೇಶವನ್ನು ವಿಶೇಷಗೊಳಿಸುವ ಸಂಗತಿಯೆಂದರೆ, ಪ್ರಭು ಯೇಸುವೇ ಈ ಸಾಮತಿಯ ಅರ್ಥವನ್ನು ವಿವರಿಸುತ್ತಾರೆ. ಹೊಲವು ಲೋಕವನ್ನು ಸೂಚಿಸುತ್ತದೆ. ಒಳ್ಳೆಯ ಬೀಜವು ದೇವರ ರಾಜ್ಯದ ಮಕ್ಕಳನ್ನು ಸೂಚಿಸುತ್ತದೆ. ಕಳೆಯು ದುಷ್ಟನ ಕಾರ್ಯವಾಗಿದೆ. ಕೊಯ್ಲು ಯುಗಾಂತ್ಯವನ್ನು ಸೂಚಿಸುತ್ತದೆ ಮತ್ತು ಕೊಯ್ಯುವವರು ದೇವದೂತರು. ನಾವು ಒಂದು ವಿಶಾಲವಾದ ಆಧ್ಯಾತ್ಮಿಕ ಹೋರಾಟದ ಮಧ್ಯೆ ಬದುಕುತ್ತಿದ್ದೇವೆ ಎಂಬುದನ್ನು ಪ್ರಭು ಯೇಸು ನೆನಪಿಸುತ್ತಾರೆ. ಅಂತಿಮ ಕೊಯ್ಲಿನವರೆಗೆ ಒಳ್ಳೆಯದು ಮತ್ತು ಕೆಟ್ಟದ್ದು ಒಂದೇ ಹೊಲದಲ್ಲಿ ಜೊತೆಯಾಗಿ ಬೆಳೆಯುತ್ತವೆ.
ಇದು ನಮಗೆ ಅಸಮಾಧಾನವನ್ನು ಉಂಟುಮಾಡಬಹುದು. ಒಳ್ಳೆಯದು ಯಾವಾಗಲೂ ತಕ್ಷಣವೇ ಗೆಲ್ಲುವ, ಪ್ರತಿಯೊಂದು ಅನ್ಯಾಯವೂ ಕೂಡಲೇ ಸರಿಪಡಿಸಲ್ಪಡುವ ಲೋಕವನ್ನು ನಾವು ಬಯಸುತ್ತೇವೆ. ಆದರೆ ಇತಿಹಾಸವು ಅದಕ್ಕಿಂತ ಹೆಚ್ಚು ಸಂಕೀರ್ಣವಾಗಿದೆ ಎಂದು ಪ್ರಭು ಯೇಸು ಹೇಳುತ್ತಾರೆ. ದೇವರು ಒಳ್ಳೆಯ ಬೀಜವನ್ನು ಬಿತ್ತಿದ್ದಾರೆ. ಆದರೆ ಶತ್ರುವೂ ತನ್ನ ಕೆಲಸವನ್ನು ಮಾಡಿದ್ದಾನೆ. ಕಾಲಾಂತ್ಯದವರೆಗೆ ಗೋಧಿ ಮತ್ತು ಕಳೆಯು ಒಟ್ಟಿಗೇ ಬೆಳೆಯಲಿವೆ.
ಇದರರ್ಥ, ಕ್ರೈಸ್ತರು ದುಷ್ಟತನದ ಅಸ್ತಿತ್ವವನ್ನು ನೋಡಿ ಆಶ್ಚರ್ಯಪಡಬಾರದು ಅಥವಾ ನಿರಾಶೆಗೊಳ್ಳಬಾರದು. ಹೊಲದಲ್ಲಿ ಕಳೆ ಇರುವುದರಿಂದ ರೈತನು ತನ್ನ ಹೊಲವನ್ನು ತೊರೆದುಬಿಟ್ಟಿದ್ದಾನೆ ಎಂದರ್ಥವಲ್ಲ. ಅದಕ್ಕೆ ವಿರುದ್ಧವಾಗಿ, ಆ ಹೊಲವು ಕ್ರಿಸ್ತನಿಗೆ ಸೇರಿದೆ. ನರಪುತ್ರನು ಇನ್ನೂ ಒಳ್ಳೆಯ ಬೀಜವನ್ನು ಬಿತ್ತುತ್ತಲೇ ಇದ್ದಾನೆ, ಅದರ ಬೆಳವಣಿಗೆಯನ್ನು ಪೋಷಿಸುತ್ತಲೇ ಇದ್ದಾನೆ ಮತ್ತು ದೇವರು ನಿಗದಿಪಡಿಸಿದ ಸಮಯದಲ್ಲಿ ಕೊಯ್ಲು ಖಂಡಿತವಾಗಿಯೂ ಬರಲಿದೆ ಎಂದು ಭರವಸೆ ನೀಡುತ್ತಾನೆ.
ಈ ಸಾಮತಿಯಲ್ಲಿ ಮತ್ತೊಂದು ಪಾಠವೂ ಇದೆ. ಇತರರ ಜೀವನದಲ್ಲಿ ಕಳೆಯನ್ನೇ ಗುರುತಿಸುವಂತೆ ಈ ಸಾಮತಿಯು ನಮಗೆ ಆಹ್ವಾನ ನೀಡುವುದಿಲ್ಲ. ಯುಗಾಂತ್ಯದಲ್ಲಿ ನ್ಯಾಯತೀರ್ಪು ನೀಡುವ ಅಧಿಕಾರವನ್ನು ಪ್ರಭು ಯೇಸು ದೇವದೂತರಿಗೆ ಮಾತ್ರ ಮೀಸಲಿಟ್ಟಿದ್ದಾರೆ. ಯಾರು ಗೋಧಿ, ಯಾರು ಕಳೆ ಎಂದು ತೀರ್ಮಾನಿಸುವುದು ನಮ್ಮ ಕೆಲಸವಲ್ಲ. ಕ್ರಿಸ್ತನಲ್ಲಿ ದೃಢವಾಗಿ ನೆಲೆಗೊಂಡು ಉತ್ತಮ ಫಲಗಳನ್ನು ಕೊಡುವುದೇ ನಮ್ಮ ಕರ್ತವ್ಯ.
ಬೇಸಿಗೆಯ ತಿಂಗಳುಗಳಲ್ಲಿಯೂ ಈ ಸವಾಲು ಕಡಿಮೆಯಾಗುವುದಿಲ್ಲ. ಪ್ರತಿದಿನವೂ ನಾವು ಯಾವ ರೀತಿಯ ಬೀಜವಾಗಬೇಕೆಂದು ಆಯ್ಕೆ ಮಾಡುತ್ತೇವೆ. ಪ್ರೀತಿ, ಕರುಣೆ ಮತ್ತು ವಿಶ್ವಾಸದ ಕಾರ್ಯಗಳ ಮೂಲಕ ದೇವರ ರಾಜ್ಯದ ಬೆಳವಣಿಗೆಗೆ ನಾವು ಸಹಕರಿಸುತ್ತೇವೆಯೇ, ಅಥವಾ ಸ್ವಾರ್ಥ, ದ್ವೇಷ ಮತ್ತು ನಿರಾಸಕ್ತಿಗೆ ನಮ್ಮ ಹೃದಯದಲ್ಲಿ ಬೇರು ಬಿಡಲು ಅವಕಾಶ ಮಾಡಿಕೊಡುತ್ತೇವೆಯೇ ಎಂಬುದು ನಮ್ಮ ಆಯ್ಕೆಯಾಗಿದೆ. ವಿಶ್ರಾಂತಿ ಮುಖ್ಯವೇ ಸರಿ, ಆದರೆ ಅದು ನಮ್ಮ ಧ್ಯೇಯದಿಂದ ನಮ್ಮನ್ನು ದೂರಮಾಡುವುದಕ್ಕಲ್ಲ; ಬದಲಾಗಿ, ನಮ್ಮ ಧ್ಯೇಯವನ್ನು ಇನ್ನಷ್ಟು ಉತ್ಸಾಹದಿಂದ ಮುಂದುವರಿಸಲು ನಮ್ಮನ್ನು ನವೀಕರಿಸಬೇಕು.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).