ಜೀವನಾಂತ್ಯ ಕಾನೂನಿನ ಕುರಿತು ಕಳವಳ ವ್ಯಕ್ತಪಡಿಸಿದ ಫ್ರೆಂಚ್ ಧರ್ಮಾಧ್ಯಕ್ಷರು; ಕಾನೂನು ಕ್ರಮಗಳ ಪರಿಶೀಲನೆ
ಲೇಖಕರು: ಜೀನ್-ಚಾರ್ಲ್ಸ್ ಪುಟ್ಜೊಲು
ಬುಧವಾರ ಸಂಜೆ ಕಾನೂನು ಅಂತಿಮವಾಗಿ ಅಂಗೀಕರಿಸಲ್ಪಟ್ಟ ಕೆಲವೇ ಕ್ಷಣಗಳ ಬಳಿಕ, ಫ್ರಾನ್ಸ್‌ನ ಕಥೋಲಿಕ ಧರ್ಮಸಭೆಯು ತನ್ನ ವಿಷಾದವನ್ನು ವ್ಯಕ್ತಪಡಿಸಿತು. ನೋವನ್ನು ನಿವಾರಿಸುವುದು ಮತ್ತು ಪ್ರತಿಯೊಬ್ಬರಿಗೂ ಜೀವನದ ಸಹಜ ಅಂತ್ಯದವರೆಗೆ ಜೊತೆಗಿರುವುದೇ ಧ್ಯೇಯವಾಗಿದ್ದ ದೇಶದ ಆರೋಗ್ಯ ಸೇವೆಯ ಸುದೀರ್ಘ ಸಂಪ್ರದಾಯದಿಂದ ಈ ನಿರ್ಧಾರ ವಿಚಲಿತವಾಗಿದೆ ಎಂದು ಅದು ತಿಳಿಸಿತು.
ಕಳೆದ ನಾಲ್ಕು ವರ್ಷಗಳ ಚರ್ಚೆಯ ಅವಧಿಯಿಡೀ ತಾವು ಭಾಗವಹಿಸಿದ್ದಾಗಿ ಧರ್ಮಾಧ್ಯಕ್ಷರು ನೆನಪಿಸಿದರು. ರೋಗಿಗಳು, ಮರಣಾವಸ್ಥೆಯಲ್ಲಿರುವವರು ಹಾಗೂ ಅವರ ಕುಟುಂಬಗಳ ಆರೈಕೆಯಲ್ಲಿ ಧರ್ಮಸಭೆಗೆ ಶತಮಾನಗಳ ಅನುಭವವಿದೆ ಎಂದು ಅವರು ಒತ್ತಿಹೇಳಿದರು. ಈ ರೀತಿಯ ಕಾನೂನು ಸಮಾಜವು ದುರ್ಬಲತೆ, ವೃದ್ಧಾಪ್ಯ, ಅಂಗವೈಕಲ್ಯ ಮತ್ತು ಅನಾರೋಗ್ಯವನ್ನು ನೋಡುವ ದೃಷ್ಟಿಕೋನವನ್ನು ಮೂಲಭೂತವಾಗಿ ಬದಲಾಯಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಆದಾಗ್ಯೂ, ಹೋರಾಟ ಮುಗಿದಿಲ್ಲ ಎಂದು ಸ್ಪಷ್ಟಪಡಿಸಿದ ಅವರು ಇನ್ನೂ ಹಲವಾರು ಪ್ರಮುಖ ಕಾನೂನು ಮಾರ್ಗಗಳು ತೆರೆದಿರುವುದರಿಂದ ಈ ವಿಷಯ ಅಂತ್ಯಗೊಂಡಿಲ್ಲ ಎಂದು ಹೇಳಿದರು.
ಈ ವಿಷಯವಾಗಿ ವ್ಯಾಟಿಕನ್ ವಾರ್ತಾ ಸಂಸ್ಥೆ ಫ್ರಾನ್ಸ್ ಧರ್ಮಾಧ್ಯಕ್ಷರ ಸಮ್ಮೇಳನದ ಜೀವನಾಂತ್ಯ ವಿಷಯಗಳ ವಕ್ತಾರರಾದ ನಾಂತೇರ್ ಧರ್ಮಾಧ್ಯಕ್ಷರಾದ ಪೂಜ್ಯ ಮಥಿಯು ರೂಝೆ ಅವರೊಂದಿಗೆ ಮಾತುಕತೆ ನಡೆಸಿತು.
ಪೂಜ್ಯರೇ, ಕಥೋಲಿಕ ಸಂಸ್ಥೆಗಳಿಗೆ ಮನಸ್ಸಾಕ್ಷಿಯ ಹಕ್ಕು ಹೇಗೆ ಅನ್ವಯಿಸುತ್ತದೆ?
ಅಂಗೀಕರಿಸಲ್ಪಟ್ಟಿರುವ ಕಾನೂನಿನಲ್ಲಿ ವೈದ್ಯರಿಗೆ ಮನಸ್ಸಾಕ್ಷಿಯ ಆಧಾರದ ಮೇಲೆ ವಿನಾಯಿತಿ ನೀಡಲಾಗಿದೆ. ಆದರೆ, ಮನೆಯಲ್ಲಿ ಸಹಾಯಿತ ಆತ್ಮಹತ್ಯೆ ನಡೆಯುವ ಸಂದರ್ಭಗಳಲ್ಲಿ ಮಾರಕ ಔಷಧವನ್ನು ಸಂಗ್ರಹಿಸಿಡುವ ಸ್ಥಳವಾಗಿ ಔಷಧಾಲಯಗಳು ಕಾರ್ಯನಿರ್ವಹಿಸಬೇಕಾಗಿರುವುದರಿಂದ, ಔಷಧ ವಿತರಕರಿಗೆ ಅಂತಹ ವಿನಾಯಿತಿ ನೀಡದಿರುವುದು ವಿಷಾದನೀಯವಾಗಿದೆ. ಆದರೆ ಇದಕ್ಕಿಂತಲೂ ಹೆಚ್ಚು ಕಳವಳಕಾರಿ ವಿಷಯವೆಂದರೆ, ದಯಾಮರಣವನ್ನು ವಿರೋಧಿಸುವ ನೈತಿಕ ನೀತಿ ಅಥವಾ ಧಾರ್ಮಿಕ ಗುರುತನ್ನು ಹೊಂದಿರುವ ಸಂಸ್ಥೆಗಳಲ್ಲಿಯೂ ಈ ಪ್ರಕ್ರಿಯೆ ನಡೆಯಲು ಅವಕಾಶ ನೀಡಬೇಕಾದ ಕಡ್ಡಾಯವಾಗಿದೆ. ಇದು ಕೇವಲ ವೈಯಕ್ತಿಕ ಮನಸ್ಸಾಕ್ಷಿಯ ಪ್ರಶ್ನೆಯಲ್ಲ, ಏಕೆಂದರೆ ಮನಸ್ಸಾಕ್ಷಿ ವ್ಯಕ್ತಿಗಳಿಗೆ ಸಂಬಂಧಿಸಿದೆ. ಆರೋಗ್ಯ ಸಂಸ್ಥೆಗಳಿಗೂ ಕಾನೂನುಬದ್ಧವಾಗಿ ರಕ್ಷಣೆ ನೀಡುವ ಸಾಂಸ್ಥಿಕ ಮನಸ್ಸಾಕ್ಷಿಯ ಹಕ್ಕು ಅಗತ್ಯವಾಗಿದೆ.
ಈ ವಿಷಯದಲ್ಲಿ ಸರ್ಕಾರವು ಫ್ರೆಂಚ್ ಧರ್ಮಾಧ್ಯಕ್ಷರಿಗೆ ಕೆಲವು ಭರವಸೆಗಳನ್ನು ನೀಡಿದ್ದರೂ, ಇದುವರೆಗೆ ಅವು ಈಡೇರಿಲ್ಲ. ಧಾರ್ಮಿಕ ಸಭೆಗಳು ನಡೆಸುವ ಆಸ್ಪತ್ರೆಗಳು ಮತ್ತು ಆರೈಕೆ ಕೇಂದ್ರಗಳಲ್ಲಿ ಇದರಿಂದ ತೀವ್ರ ಕಳವಳ ಉಂಟಾಗಿದೆ. ವಿಶೇಷವಾಗಿ ಲಿಟಲ್ ಸಿಸ್ಟರ್ಸ್ ಆಫ್ ದ ಪೂರ್, ಹಾಗೆಯೇ ಅನೇಕ ಕಥೋಲಿಕ ಹೆರಿಗೆ ಆಸ್ಪತ್ರೆಗಳನ್ನು ನಿರ್ವಹಿಸುವ ಸಂತ ಥೋಮಸ್ ಆಫ್ ವಿಲ್ಲೆನೋವ್ ಸಹೋದರಿಯರ ಸಂಸ್ಥೆಯನ್ನು ಅವರು ಉಲ್ಲೇಖಿಸಿದರು. ಪ್ಯಾರಿಸ್‌ನ ಜೀನ್ ಗಾರ್ನಿಯರ್ ಮೊದಲಾದ ಸಂಸ್ಥೆಗಳೂ ಇದೇ ಪರಿಸ್ಥಿತಿಯನ್ನು ಎದುರಿಸುತ್ತಿವೆ.
ಮುಂದಿನ ವಾರಗಳಲ್ಲಿ ಸಲ್ಲಿಸಲಿರುವ ವಿವಿಧ ಕಾನೂನು ಮೇಲ್ಮನವಿಗಳ ಮೂಲಕ, ತಮ್ಮ ಇತಿಹಾಸ, ಧ್ಯೇಯ ಅಥವಾ ನೀತಿ ಸಂಹಿತೆಯ ಪ್ರಕಾರ ಉದ್ದೇಶಪೂರ್ವಕವಾಗಿ ಮರಣಕ್ಕೆ ಕಾರಣವಾಗುವುದನ್ನು ತಿರಸ್ಕರಿಸುವ ಆರೋಗ್ಯ ಸಂಸ್ಥೆಗಳಿಗೆ ವಿನಾಯಿತಿ ದೊರೆತು, ತಮ್ಮ ಮೌಲ್ಯಗಳಿಗೆ ಅನುಗುಣವಾಗಿ ಸೇವೆ ಮುಂದುವರಿಸಲು ಅವಕಾಶ ಸಿಗಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ಈ ದಿನಗಳಲ್ಲಿ ಫ್ರಾನ್ಸ್‌ನ ಧರ್ಮಸಭೆ ಏನು ಹೇಳಬಹುದು?
ಜುಲೈ 15ರ ಬುಧವಾರ ಫ್ರಾನ್ಸ್ ಧರ್ಮಾಧ್ಯಕ್ಷರ ಸಮ್ಮೇಳನವು ತನ್ನ ಅಧ್ಯಕ್ಷರು ಮತ್ತು ಇಬ್ಬರು ಉಪಾಧ್ಯಕ್ಷರ ಸಹಿಯೊಂದಿಗೆ ಪ್ರಕಟಣೆ ಹೊರಡಿಸಿ, ಈ ಕಾನೂನಿನ ಕುರಿತು ವಿಷಾದ ಮತ್ತು ಆಳವಾದ ಕಳವಳವನ್ನು ವ್ಯಕ್ತಪಡಿಸಿತು. ಈ ರೀತಿಯ ಕಾನೂನಿನ ಎಲ್ಲಾ ಪರಿಣಾಮಗಳನ್ನು—ಮಾನವೀಯ ಐಕ್ಯತೆ, ಸಾಮಾಜಿಕ ಜೀವನ ಅಥವಾ ಮುಂದಿನ ದಿನಗಳಲ್ಲಿ ಅರ್ಹತೆಯ ಮಾನದಂಡಗಳು ವಿಸ್ತರಿಸುವ ಸಾಧ್ಯತೆಯನ್ನು—ಮುಂಚಿತವಾಗಿ ಊಹಿಸಲು ಸಾಧ್ಯವಿಲ್ಲ. ಆದ್ದರಿಂದ ಅತ್ಯಂತ ಎಚ್ಚರಿಕೆ ಅಗತ್ಯವೆಂದು ಅವರು ಹೇಳಿದರು.
ಈಗ ಮುಂದಿರುವ ಕರ್ತವ್ಯವೆಂದರೆ, ಆರೋಗ್ಯ ಸಂಸ್ಥೆಗಳ ನೈಜ ಸ್ವಾತಂತ್ರ್ಯವನ್ನು ಕಾಪಾಡುವುದು, ಅವುಗಳ ನೈತಿಕ ಸಂಹಿತೆಗೆ ಗೌರವ ನೀಡುವುದು ಹಾಗೂ ಮೇಲ್ಮನವಿಗಳಿಗೆ ಸಂಪೂರ್ಣ ಬೆಂಬಲ ನೀಡುವುದು ಎಂದು ಅವರು ತಿಳಿಸಿದರು. ಏಕಾಂಗಿತನ, ದುರ್ಬಲತೆ ಮತ್ತು ಅಸಹಾಯಕ ಪರಿಸ್ಥಿತಿಯಲ್ಲಿ ಬದುಕುತ್ತಿರುವ, ಜೊತೆಯಾಗುವವರಿಲ್ಲದ ಅನೇಕ ಜನರಿದ್ದಾರೆ. ಮಾನವ ಜೀವನದ ಅತ್ಯಂತ ಮೂಲಭೂತ ಪ್ರಶ್ನೆಯಾದ ಬದುಕಬೇಕೋ, ಸಾಯಬೇಕೋ ಎಂಬ ನಿರ್ಧಾರದ ಎದುರು ಅವರು ಸಂಪೂರ್ಣ ಒಂಟಿಯಾಗಬಹುದು. ಇಂತಹ ಕಾನೂನಿಗೆ ಕ್ರೈಸ್ತರ ಪ್ರತಿಕ್ರಿಯೆ ಕೇವಲ ನೈತಿಕ ಖಂಡನೆಯಾಗಿರಬಾರದು. ಅದು ಸ್ಪಷ್ಟವಾದ ಕಾರ್ಯರೂಪದ ಬದ್ಧತೆಯಾಗಿರಬೇಕು.
ಆದ್ದರಿಂದಲೇ ಬುಧವಾರ ಸಂಜೆ ಪ್ರಕಟಿಸಿದ ಹೇಳಿಕೆಯಲ್ಲಿ ಹಾಗೂ ಮತದಾನದ ಮುನ್ನ ಮತ್ತು ನಂತರ ನೀಡಿದ ಸಾರ್ವಜನಿಕ ಹೇಳಿಕೆಗಳಲ್ಲಿ, ದುರ್ಬಲರು, ಏಕಾಂಗಿಗಳು, ಬಡವರು ಮತ್ತು ಸಂಕಷ್ಟದಲ್ಲಿರುವವರೊಂದಿಗೆ ಇನ್ನಷ್ಟು ಬದ್ಧತೆಯಿಂದ ನಿಲ್ಲುವಂತೆ ಕ್ರೈಸ್ತರನ್ನು ಧರ್ಮಸಭೆ ಬಲವಾಗಿ ಪ್ರೋತ್ಸಾಹಿಸಿದೆ.
ಆಳವಾದ ನೋವು ಮತ್ತು ಏಕಾಂಗಿತನ ಅನುಭವಿಸುವ ಜನರ ಮನಸ್ಸಿನಲ್ಲಿ ಕೆಲವೊಮ್ಮೆ ಮೂಡುವ ಜೀವನವನ್ನು ಕೊನೆಗೊಳಿಸಬೇಕೆಂಬ ಬಯಕೆಗೆ ಉತ್ತರ ನೀಡುವುದು, ಪ್ರಾಯೋಗಿಕ ಕರುಣೆ ಮತ್ತು ಸಹೋದರತ್ವದ ಮೂಲಕವೇ ಸಾಧ್ಯ ಎಂದು ಅವರು ಹೇಳಿದರು. ನಮ್ಮ ಪ್ರತಿಕ್ರಿಯೆ ಕೇವಲ ನೈತಿಕ ತತ್ವಗಳನ್ನು ವ್ಯಕ್ತಪಡಿಸುವುದಲ್ಲ; ಅದು ಸಹೋದರ ಪ್ರೀತಿಯ ಬದ್ಧತೆಯಾಗಿದೆ. ಇದೇ ಸಂದೇಶವನ್ನು ನಾವು ಸಾರಲು ಬಯಸುತ್ತೇವೆ ಎಂದು ಅವರು ಹೇಳಿದರು.
ಕಾನೂನು ಏನೇ ಹೇಳಲಿ—ಕಾನೂನು ಕೇವಲ ಕಾನೂನಷ್ಟೇ—ಫ್ರಾನ್ಸ್‌ನ ಕ್ರೈಸ್ತರು ನಿಜವಾದ ಸಹೋದರತ್ವವನ್ನು ಇನ್ನಷ್ಟು ಆಳವಾಗಿಸಿಕೊಳ್ಳುವಂತೆ ನಾವು ಆಶಿಸುತ್ತೇವೆ. ಉದ್ದೇಶಪೂರ್ವಕವಾಗಿ ಮರಣಕ್ಕೆ ಕಾರಣವಾಗುವ ಪ್ರವೃತ್ತಿ ನಮ್ಮ ದೇಶದಲ್ಲಿ ಅತಿಯಾಗಿ ವ್ಯಾಪಿಸುವುದನ್ನು ತಡೆಯುವುದು ಇದೇ ಮಾರ್ಗ ಎಂದು ನಾವು ನಂಬುತ್ತೇವೆ.
ಇನ್ನೆರಡು ತಿಂಗಳಲ್ಲಿ ಪೂಜ್ಯ ಜಗದ್ಗುರುಗಳಾದ ೧೪ನೇ ಲಿಯೋರವರು ಫ್ರಾನ್ಸ್‌ಗೆ ಭೇಟಿ ನೀಡಲಿದ್ದಾರೆ. ಈ ವಿಷಯದಲ್ಲಿ ಅವರು ಯಾವ ಸಂದೇಶ ನೀಡಲಿ ಎಂದು ನೀವು ನಿರೀಕ್ಷಿಸುತ್ತೀರಿ?
ಜಗದ್ಗುರುಗಳು ಅನೇಕ ವಿಷಯಗಳ ಕುರಿತು, ಈ ವಿಷಯವೂ ಸೇರಿದಂತೆ, ಮಹತ್ವದ ಸಂದೇಶಗಳನ್ನು ನೀಡಲಿದ್ದಾರೆ ಎಂಬ ವಿಶ್ವಾಸ ನನಗಿದೆ ಎಂದು ಧರ್ಮಾಧ್ಯಕ್ಷ ರೂಝೆ ಹೇಳಿದರು ಇತ್ತೀಚಿನ ತಿಂಗಳುಗಳಲ್ಲಿ ಅವರು ರೋಮ್ ಮತ್ತು ಸ್ಪೇನ್‌ನಲ್ಲಿ ಈ ಕುರಿತು ಅತ್ಯಂತ ಸ್ಪಷ್ಟವಾಗಿ ಮಾತನಾಡಿದ್ದಾರೆ ಎಂದು ಅವರು ನೆನಪಿಸಿದರು.
ಇತ್ತೀಚಿನ ದಿನಗಳಲ್ಲಿ ನಾನು ಮ್ಯಾಗ್ನಿಫಿಕಾ ಹ್ಯುಮಾನಿಟಸ್ ವಿಶ್ವ ಪತ್ರದಲ್ಲಿರುವ ಒಂದು ಮಹತ್ವದ ಭಾಗವನ್ನು ಪದೇಪದೇ ಉಲ್ಲೇಖಿಸಿದ್ದೇನೆ. ಅದರಲ್ಲಿ ಜೀವನದ ಹಕ್ಕು—ಇತರ ಎಲ್ಲಾ ಹಕ್ಕುಗಳಿಗೆ ಆಧಾರವಾದ ಮೂಲಭೂತ ಹಕ್ಕು—ಗರ್ಭಧಾರಣೆಯಿಂದ ಸಹಜ ಮರಣದವರೆಗೆ ರಕ್ಷಿಸಲ್ಪಡಬೇಕು ಎಂದು ಜಗದ್ಗುರುಗಳು ಹೇಳಿದ್ದಾರೆ. ಈ ಮೂಲಭೂತ ಹಕ್ಕನ್ನು, ದಯಾಮರಣದ ಮೂಲಕವೂ ಸೇರಿದಂತೆ, ನಿರಾಕರಿಸಿದಾಗ ಧರ್ಮಸಭೆಯು ಅದನ್ನು ಗಂಭೀರವಾಗಿ ತಪ್ಪಾದ ಆಯ್ಕೆಯೆಂದು ಪರಿಗಣಿಸುತ್ತದೆ ಎಂದು ಅವರು ಹೇಳಿದ್ದಾರೆ. 2020ರಲ್ಲಿ ಜಗದ್ಗುರುಗಳ ಅಧಿಕಾರ ಪೀಠ ಪ್ರಕಟಿಸಿದ ಸಮಾರಿತಾನುಸ್ ಬೋನಸ್ ಎಂಬ ಘೋಷಣೆಯನ್ನೂ ಅವರು ಉಲ್ಲೇಖಿಸಿ, ಅದು ಈ ವಿಷಯದಲ್ಲಿ ಇನ್ನೂ ಪ್ರಮುಖ ಮಾರ್ಗದರ್ಶಕ ದಾಖಲೆಯಾಗಿದೆ ಎಂದು ಹೇಳಿದರು. ಈ ಕಾರಣಗಳಿಂದ, ಜಗದ್ಗುರುಗಳು ಕ್ರೈಸ್ತರಿಗೆ ದುರ್ಬಲ ಪರಿಸ್ಥಿತಿಯಲ್ಲಿರುವವರೊಂದಿಗೆ ಇನ್ನಷ್ಟು ಬದ್ಧತೆಯಿಂದ ನಿಲ್ಲುವಂತೆ ಕರೆ ನೀಡುವುದರ ಜೊತೆಗೆ, ಇಡೀ ಸಮಾಜಕ್ಕೂ ಸ್ಪಷ್ಟ ಸಂದೇಶ ನೀಡಲಿದ್ದಾರೆ ಎಂಬ ವಿಶ್ವಾಸ ನನಗಿದೆ.
ನಿಸ್ಸಂದೇಹವಾಗಿ, ಇನ್ನಷ್ಟು ಅನುಕೂಲಕರವಾದ ಕಾನೂನು ಪರಿಸ್ಥಿತಿಯಲ್ಲಿ ಅವರನ್ನು ಸ್ವಾಗತಿಸಲು ನಾವು ಬಯಸುತ್ತಿದ್ದೆವು. ಆದಾಗ್ಯೂ, ಈ ವಿಷಯ ಸೇರಿದಂತೆ ಅನೇಕ ವಿಷಯಗಳಲ್ಲಿ ಅವರ ಮಾತುಗಳು ನಮಗೆ ಅತ್ಯಂತ ಅಮೂಲ್ಯವಾಗಲಿದ್ದು, ನಾವು ಅವುಗಳನ್ನು ಅಪಾರ ನಿರೀಕ್ಷೆಯಿಂದ ಎದುರು ನೋಡುತ್ತಿದ್ದೇವೆ.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).