ಆಲ್ಝೈಮರ್ಸ್ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿ ಆಲ್ಝೈಮರ್ಸ್ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿ 

ದಯಾಮರಣಕ್ಕೆ ‘ಸಕಾರಾತ್ಮಕ ಪರ್ಯಾಯಗಳನ್ನು’ ಒದಗಿಸಬೇಕು: ಸಿಡ್ನಿ ಮಹಾಧರ್ಮಾಧ್ಯಕ್ಷರು

ಆನ್‌ಲೈನ್ ಸಮಾಲೋಚನೆಗಳ ಮೂಲಕ ಸ್ವಯಂಪ್ರೇರಿತ ನೆರವಿನೊಂದಿಗೆ ಮರಣ (Voluntary Assisted Dying) ಪಡೆಯಲು ಅವಕಾಶ ಕಲ್ಪಿಸುವ ಪ್ರಸ್ತಾವನೆಗೆ ಆಡಳಿತ ಪಕ್ಷ ಬೆಂಬಲ ನೀಡಿರುವ ಹಿನ್ನೆಲೆಯಲ್ಲಿ, ಸಿಡ್ನಿಯ ಮಹಾಧರ್ಮಾಧ್ಯಕ್ಷ ಆಂಥೋನಿ ಫಿಷರ್ ಅವರು “Telehealth” ಎಂಬ ಕಲ್ಪನೆಯು “Teledeath” ಆಗಿ ಮಾರ್ಪಟ್ಟಿದೆ ಎಂದು ಹೇಳಿದ್ದು, ಕಥೋಲಿಕ ಆರೋಗ್ಯ ಸಂಸ್ಥೆಗಳಿಗೆ ಕಾನೂನುಬದ್ಧ ರಕ್ಷಣೆಯನ್ನು ಒದಗಿಸುವಂತೆ ಆಗ್ರಹಿಸಿದ್ದಾರೆ.

ಲೇಖಕರು: ಕಿಯೆಲ್ಸೆ ಗುಸ್ಸಿ  

2024ರಲ್ಲಿ, ಡಾರ್ವಿನ್‌ನ ಧರ್ಮಾಧ್ಯಕ್ಷ ಚಾರ್ಲ್ಸ್ ಗೌಸಿ ಅವರು ಸ್ವಯಂಪ್ರೇರಿತ ನೆರವಿನೊಂದಿಗೆ ಮರಣವನ್ನು “ಪ್ಯಾಂಡೋರಾದ ಪೆಟ್ಟಿಗೆ” ಎಂದು ವರ್ಣಿಸಿದ್ದರು. ಈಗ ಆ ಪೆಟ್ಟಿಗೆಯನ್ನು ಆಸ್ಟ್ರೇಲಿಯಾದಲ್ಲಿ ತೆರೆಯಲಾಗುತ್ತಿದೆ. ಡಾರ್ವಿನ್ ಆಸ್ಟ್ರೇಲಿಯಾದ ಉತ್ತರ ಪ್ರದೇಶದ (Northern Territory) ರಾಜಧಾನಿಯಾಗಿದೆ. ಮುಂದಿನ ಕೆಲ ವಾರಗಳಲ್ಲಿ ಅಲ್ಲಿ ಸ್ವಯಂಪ್ರೇರಿತ ನೆರವಿನೊಂದಿಗೆ ಮರಣವನ್ನು ಕಾನೂನುಬದ್ಧಗೊಳಿಸುವ ನಿರೀಕ್ಷೆಯಿದೆ. ಅದು ಜಾರಿಯಾದರೆ, ಆಸ್ಟ್ರೇಲಿಯಾದ ಎಲ್ಲಾ ರಾಜ್ಯಗಳು ಮತ್ತು ಪ್ರದೇಶಗಳಲ್ಲಿ ಸ್ವಯಂಪ್ರೇರಿತ ನೆರವಿನೊಂದಿಗೆ ಮರಣ (VAD) ಕಾನೂನುಬದ್ಧವಾಗಲಿದೆ.

ಕಳೆದ ಜುಲೈ 24ರಂದು, ಪ್ರಸ್ತುತ ಆಡಳಿತದಲ್ಲಿರುವ ಲೇಬರ್ ಪಕ್ಷವು ದಯಾಮರಣಕ್ಕೆ ಅನುಮೋದನೆ ನೀಡುವ ಉದ್ದೇಶದ ಆನ್‌ಲೈನ್ ಸಮಾಲೋಚನೆಗಳ ಮೇಲಿದ್ದ ಫೆಡರಲ್ ನಿರ್ಬಂಧಗಳನ್ನು ತೆಗೆದುಹಾಕಲು ಬೆಂಬಲ ಸೂಚಿಸಿತು. ಜೊತೆಗೆ, ಭವಿಷ್ಯದಲ್ಲಿ ಸ್ವಯಂಪ್ರೇರಿತ ನೆರವಿನೊಂದಿಗೆ ಮರಣಕ್ಕೆ ಸಂಬಂಧಿಸಿದ ಮಸೂದೆಗಳ ಮೇಲೆ ಸಂಸದರಿಗೆ ಆತ್ಮಸಾಕ್ಷಿಯ ಆಧಾರದ ಮೇಲೆ ಮತ ಚಲಾಯಿಸುವ ಅವಕಾಶ ನೀಡುವಂತೆ ತನ್ನ ಸಂವಿಧಾನವನ್ನು ತಿದ್ದುಪಡಿ ಮಾಡಿತು. ಈ ಮತದಾನದ ಮೂಲಕ ಇನ್ನೂ ಯಾವುದೇ ಕಾನೂನು ಜಾರಿಯಾಗಿಲ್ಲದಿದ್ದರೂ, ದೇಶದಾದ್ಯಂತ ದಯಾಮರಣವನ್ನು ಇನ್ನಷ್ಟು ಸುಲಭವಾಗಿ ಲಭ್ಯವಾಗುವಂತೆ ಮಾಡುವ ಚರ್ಚೆ ಆಸ್ಟ್ರೇಲಿಯಾದಲ್ಲಿ ತೀವ್ರವಾಗಿ ನಡೆಯುತ್ತಿದೆ.

ಇನ್ನೊಂದು ಹೆಜ್ಜೆ

ವ್ಯಾಟಿಕನ್ ವಾರ್ತಾ ಸಂಸ್ಥೆಯೊಂದಿಗೆ ಮಾತನಾಡಿದ ಸಿಡ್ನಿಯ ಮಹಾಧರ್ಮಾಧ್ಯಕ್ಷ ಆಂಥೋನಿ ಫಿಷರ್, ಈ ಮತದಾನವು ಲೇಬರ್ ಪಕ್ಷದ ನೀತಿಯಲ್ಲಿ ಬದಲಾವಣೆಯನ್ನು ಸೂಚಿಸುತ್ತದೆ ಎಂದು ಹೇಳಿದರು. “ಲೇಬರ್ ಪಕ್ಷದ ನೀತಿಪತ್ರದಲ್ಲಿ ಅನೇಕ ವಿಷಯಗಳಿವೆ. ಆದರೆ ಅವುಗಳಲ್ಲಿ ಹಲವನ್ನು ಆಸ್ಟ್ರೇಲಿಯಾದಲ್ಲಿ ಎಂದಿಗೂ ಕಾನೂನಾಗಿ ಜಾರಿಗೊಳಿಸಲಾಗಿಲ್ಲ. ಕುತೂಹಲಕಾರಿ ಸಂಗತಿಯೆಂದರೆ, ಈ ವಿಷಯದಲ್ಲಿ ಪ್ರಧಾನಮಂತ್ರಿಯವರೇ ತಾವು ಇದನ್ನು ಬೆಂಬಲಿಸುವುದಿಲ್ಲ ಎಂದು ಸಾರ್ವಜನಿಕವಾಗಿ ಹೇಳಿದ್ದಾರೆ” ಎಂದೂ ಅವರು ಹೇಳಿದರು.

ಆದಾಗ್ಯೂ, ಈ ಮತದಾನವು ಆಸ್ಟ್ರೇಲಿಯಾದಲ್ಲಿ ದಯಾಮರಣದ ಲಭ್ಯತೆ ಮತ್ತು ಅದರ ಅನುಷ್ಠಾನದ ವಿಧಾನಗಳನ್ನು ವಿಸ್ತರಿಸುವ ಒತ್ತಡವನ್ನು ಮತ್ತಷ್ಟು ಹೆಚ್ಚಿಸಿದೆ. ದೇಶದಲ್ಲಿ ಸ್ವಯಂಪ್ರೇರಿತ ನೆರವಿನೊಂದಿಗೆ ಮರಣವನ್ನು ಕಾನೂನುಬದ್ಧಗೊಳಿಸಿದ ಪ್ರಕ್ರಿಯೆ ಬಹಳ ವೇಗವಾಗಿ ನಡೆದಿದೆ. ಮೊದಲ ಕಾನೂನು 2017ರಲ್ಲಿ ವಿಕ್ಟೋರಿಯಾ ರಾಜ್ಯದಲ್ಲಿ ಅಂಗೀಕರಿಸಲ್ಪಟ್ಟಿದ್ದು, 2019ರಲ್ಲಿ ಜಾರಿಗೆ ಬಂತು. ಅದರ ನಂತರ ಪಶ್ಚಿಮ ಆಸ್ಟ್ರೇಲಿಯಾ, ಟಾಸ್ಮೇನಿಯಾ, ದಕ್ಷಿಣ ಆಸ್ಟ್ರೇಲಿಯಾ, ಕ್ವೀನ್ಸ್‌ಲ್ಯಾಂಡ್ ಮತ್ತು ನ್ಯೂ ಸೌತ್ ವೇಲ್ಸ್ ರಾಜ್ಯಗಳು 2019ರಿಂದ 2021ರ ನಡುವೆ ಇದೇ ಕ್ರಮವನ್ನು ಅನುಸರಿಸಿದವು. 2022ರಲ್ಲಿ ಫೆಡರಲ್ ನಿಷೇಧವನ್ನು ರದ್ದುಪಡಿಸಿದ ಬಳಿಕ, ಆಸ್ಟ್ರೇಲಿಯನ್ ಕ್ಯಾಪಿಟಲ್ ಟೆರಿಟರಿ (ACT) ಕೂಡ ಸ್ವಯಂಪ್ರೇರಿತ ನೆರವಿನೊಂದಿಗೆ ಮರಣವನ್ನು ಕಾನೂನುಬದ್ಧಗೊಳಿಸಿತು.

“ಈ ದೇಶದಲ್ಲಿ ಯಾವುದೇ ದಯಾಮರಣ ಕಾನೂನುಬದ್ಧವಾಗಿರದ ಸ್ಥಿತಿಯಿಂದ, ಈಗ 14,000ಕ್ಕೂ ಹೆಚ್ಚು ಜನರು ಇದಕ್ಕಾಗಿ ಅರ್ಜಿ ಸಲ್ಲಿಸಿದ್ದು, 7,000ಕ್ಕೂ ಹೆಚ್ಚು ಜನರು ಇದರ ಮೂಲಕ ಮರಣ ಹೊಂದಿರುವ ಸ್ಥಿತಿಗೆ ನಾವು ಎಷ್ಟು ಬೇಗ ತಲುಪಿದ್ದೇವೆ ಎಂಬುದು ನೋವಿನ ಸಂಗತಿಯಾಗಿದೆ” ಎಂದು ಮಹಾಧರ್ಮಾಧ್ಯಕ್ಷ ಫಿಷರ್ ವಿಷಾದ ವ್ಯಕ್ತಪಡಿಸಿದರು. ಸ್ವಯಂಪ್ರೇರಿತ ನೆರವಿನೊಂದಿಗೆ ಮರಣಕ್ಕೆ ಸಂಬಂಧಿಸಿದ ಆನ್‌ಲೈನ್ ಸಮಾಲೋಚನೆಗಳಿಗೆ ಅವಕಾಶ ನೀಡುವ ಪ್ರಸ್ತಾವನೆಯು, ದೇಶದಲ್ಲಿ ದಯಾಮರಣವನ್ನು ಇನ್ನಷ್ಟು ಸಾಮಾನ್ಯಗೊಳಿಸಲು ನಡೆಯುತ್ತಿರುವ ಹಲವು ಪ್ರಯತ್ನಗಳ ಭಾಗವಾಗಿದೆ. “ಬಹಳ ಬೇಗನೆ, ಒಂದೊಂದಾಗಿ ಎಲ್ಲಾ ಸುರಕ್ಷತಾ ಕ್ರಮಗಳನ್ನು ತೆಗೆದುಹಾಕುವ ಪ್ರಯತ್ನಗಳು ನಡೆಯುತ್ತಿವೆ” ಎಂದು ಅವರು ಎಚ್ಚರಿಸಿದರು.

ಜಾಗತಿಕ ಚರ್ಚೆ

ಸ್ವಯಂಪ್ರೇರಿತ ನೆರವಿನೊಂದಿಗೆ ಮರಣವನ್ನು ಕಾನೂನುಬದ್ಧಗೊಳಿಸಿ ಅದನ್ನು ಸುಲಭವಾಗಿ ಲಭ್ಯವಾಗುವಂತೆ ಮಾಡುತ್ತಿರುವುದು ಆಸ್ಟ್ರೇಲಿಯಾ ಮಾತ್ರವಲ್ಲ. ಜುಲೈ 15ರಂದು, ಹಲವು ವರ್ಷಗಳ ಚರ್ಚೆಯ ಬಳಿಕ ಫ್ರಾನ್ಸ್ ಕಠಿಣ ಷರತ್ತುಗಳೊಂದಿಗೆ ದಯಾಮರಣಕ್ಕೆ ಅನುಮತಿ ನೀಡಿದ 14ನೇ ರಾಷ್ಟ್ರವಾಯಿತು. ಅಮೆರಿಕದ 13 ರಾಜ್ಯಗಳು ಈಗಾಗಲೇ ಈ ಪದ್ಧತಿಯನ್ನು ಕಾನೂನುಬದ್ಧಗೊಳಿಸಿವೆ. ಸ್ವಿಟ್ಜರ್ಲೆಂಡ್ನಲ್ಲಿ 1942ರಿಂದಲೇ ನೆರವಿನೊಂದಿಗೆ ಆತ್ಮಹತ್ಯೆ ಕಾನೂನುಬದ್ಧವಾಗಿದೆ. ಜಗತ್ತಿನಾದ್ಯಂತ ಸ್ವಯಂಪ್ರೇರಿತ ನೆರವಿನೊಂದಿಗೆ ಮರಣಕ್ಕೆ ಹೆಚ್ಚುತ್ತಿರುವ ಅಂಗೀಕಾರ ಮತ್ತು ಕಾನೂನುಬದ್ಧತೆಯ ಹಿನ್ನೆಲೆಯಲ್ಲಿ, ಈ ಅನುಭವ ಹೊಂದಿರುವ ರಾಷ್ಟ್ರಗಳಲ್ಲಿನ ಕಥೋಲಿಕ ಧರ್ಮಸಭೆಗಳು ಹೊಸ ರಾಷ್ಟ್ರಗಳಿಗೆ ಮಾರ್ಗದರ್ಶನ ನೀಡಬಹುದು ಎಂದು ಮಹಾಧರ್ಮಾಧ್ಯಕ್ಷ ಫಿಷರ್ ಅಭಿಪ್ರಾಯ ವ್ಯಕ್ತಪಡಿಸಿದರು.

ಇದು “ಮಾನವ ಜೀವವನ್ನು ಗೌರವಿಸುವ ಮತ್ತು ರಕ್ಷಿಸುವ ಅಗತ್ಯವನ್ನು ಸಮರ್ಥವಾಗಿ ಮಂಡಿಸಲು ಸಹಾಯ ಮಾಡುತ್ತದೆ.” ಇಂದು “Telehealth” ಎಂಬ ಹೆಸರಿನಲ್ಲಿ ಪ್ರಚಾರವಾಗುತ್ತಿರುವುದು ವಾಸ್ತವವಾಗಿ “Teledeath” ಎಂದು ಅವರು ಹೇಳಿದರು. ದೂರವಾಣಿ ಅಥವಾ ಅಂತರ್ಜಾಲದ ಮೂಲಕ ನಡೆಯುವ ಸಮಾಲೋಚನೆಗಳು ರೋಗಿಯ ನೈಜ ಅಗತ್ಯಗಳನ್ನು ಸರಿಯಾಗಿ ಗುರುತಿಸುವ ಅತ್ಯಂತ ಪ್ರಮುಖ ಹಂತಗಳನ್ನು ತೆಗೆದುಹಾಕುತ್ತವೆ ಎಂದು ತಿಳಿಸಿದರು. “ವೈದ್ಯರು ರೋಗಿಯನ್ನು ವೈಯಕ್ತಿಕವಾಗಿ ಭೇಟಿಯಾಗದೆ, ಅವರಿಗೆ ನಿಜವಾಗಿ ಯಾವ ರೀತಿಯ ಆರೈಕೆ ಅಗತ್ಯ, ಉಪಶಾಮಕ ಚಿಕಿತ್ಸೆ ಅಥವಾ ಇತರ ವೈದ್ಯಕೀಯ ಚಿಕಿತ್ಸೆ ಬೇಕೇ ಎಂಬುದನ್ನು ಸಮಗ್ರವಾಗಿ ಪರಿಶೀಲಿಸದೆ ದಯಾಮರಣವನ್ನು ಪಡೆಯಲು ಅವಕಾಶ ನೀಡುವುದು ಸರಿಯಲ್ಲ” ಎಂದು ಹೇಳಿದರು.

ಜೀವಪರ ಪರ್ಯಾಯ ಮಾರ್ಗಗಳು

ಈ ಚರ್ಚೆಯ ನಡುವೆಯೂ, ಕಥೋಲಿಕ ಧರ್ಮಸಭೆಯು ದಯಾಮರಣ ಅಥವಾ ಸ್ವಯಂಪ್ರೇರಿತ ನೆರವಿನೊಂದಿಗೆ ಮರಣವು “ಮಾನವ ವ್ಯಕ್ತಿಯ ಘನತೆಗೆ ಮತ್ತು ಅವನ ಸೃಷ್ಟಿಕರ್ತನಾದ ಜೀವಂತ ದೇವರಿಗೆ ಸಲ್ಲಬೇಕಾದ ಗೌರವಕ್ಕೆ ಗಂಭೀರವಾಗಿ ವಿರುದ್ಧವಾದದ್ದು” (ಕಥೋಲಿಕ ಧರ್ಮೋಪದೇಶ ಸಂಕಲನ 2324) ಎಂಬ ತನ್ನ ಬೋಧನೆಯನ್ನು ಮುಂದುವರಿಸಿದೆ. ಈ ಹಿನ್ನೆಲೆಯಲ್ಲಿ, ಸ್ವಯಂಪ್ರೇರಿತ ನೆರವಿನೊಂದಿಗೆ ಮರಣವನ್ನು ಕಾನೂನುಬದ್ಧಗೊಳಿಸುತ್ತಿರುವ ಪ್ರದೇಶಗಳಲ್ಲಿ ಸ್ಥಳೀಯ ಧರ್ಮಸಭೆಯ ಕರ್ತವ್ಯವನ್ನು ಮಹಾಧರ್ಮಾಧ್ಯಕ್ಷ ಫಿಷರ್ ಒತ್ತಿಹೇಳಿದರು.

“ನಾವು ಧರ್ಮಸಭೆಯಾಗಿ ಜನರಿಗೆ ಸಕಾರಾತ್ಮಕ ಪರ್ಯಾಯ ಮಾರ್ಗಗಳನ್ನು ತೋರಿಸಬೇಕು” ಎಂದು ಹೇಳಿದರು. ಉತ್ತಮ  ಚಿಕಿತ್ಸೆ, ಪ್ರೀತಿ ಮತ್ತು ಕಾಳಜಿ ದೊರೆತರೆ, ವಿವಿಧ ಆಯ್ಕೆಗಳನ್ನು ಅವರಿಗೆ ಸಮರ್ಪಕವಾಗಿ ವಿವರಿಸಿದರೆ ಹಾಗೂ ನೋವನ್ನು ಎದುರಿಸುವ ಇತರ ಮಾರ್ಗಗಳ ಬಗ್ಗೆ ತಿಳಿಸಿದರೆ, ದಯಾಮರಣವೇ ಏಕೈಕ ಆಯ್ಕೆ ಎಂದು ಜನರು ಭಾವಿಸುವುದಿಲ್ಲ ಎಂದು ಹೇಳಿದರು. “ಆದರೆ ಅವರಿಗೆ ಇತರ ಆಯ್ಕೆಗಳನ್ನು ನೀಡದಿದ್ದರೆ, ಅನೇಕರು ತಮ್ಮ ನಿಯಂತ್ರಣ ಕಳೆದುಕೊಳ್ಳುವ ಭಯದಿಂದ, ತೀವ್ರ ನೋವಿನ ಭಯದಿಂದ ಅಥವಾ ಇತರರಿಗೆ ಹೊರೆಯಾಗುವ ಭಯದಿಂದ ಬಳಲುತ್ತಾರೆ” ಎಂದು ಮಹಾಧರ್ಮಾಧ್ಯಕ್ಷರು ಹೇಳಿದರು. ಇಂತಹ ಸಂದರ್ಭದಲ್ಲಿ ಧರ್ಮಸಭೆಯು ಮುಂದೆ ಬರಬೇಕಾಗಿದೆ ಎಂದು  ಒತ್ತಿಹೇಳಿದರು.

“ಜೀವನದ ಅಂತಿಮ ಹಂತದಲ್ಲಿರುವವರಿಗೆ ಉಪಶಮಕ ಚಿಕಿತ್ಸೆ, ಉತ್ತಮ ಧಾರ್ಮಿಕ ಆರೈಕೆ, ಮರಣಶಯ್ಯೆಯಲ್ಲಿರುವವರು ಮತ್ತು ವಯೋವೃದ್ಧರನ್ನು ನೋಡಿಕೊಳ್ಳುತ್ತಿರುವ ಕುಟುಂಬಗಳಿಗೆ ವಿಶ್ರಾಂತಿ ಆರೈಕೆ ಸೇರಿದಂತೆ ದಯಾಮರಣಕ್ಕೆ ಪರ್ಯಾಯ ಸೇವೆಗಳನ್ನು ಒದಗಿಸುವ ಅತಿದೊಡ್ಡ ಸಂಸ್ಥೆ ನಾವೇ ಆಗಿದ್ದೇವೆ” ಎಂದು   ಹೇಳಿದರು. ಇದಲ್ಲದೆ, ಆಸ್ಟ್ರೇಲಿಯಾದ ಕಥೋಲಿಕ ಸಮುದಾಯವು ಕಥೋಲಿಕ ಆರೋಗ್ಯ ಸಂಸ್ಥೆಗಳು, ವಯೋವೃದ್ಧರ ಆರೈಕೆ ಕೇಂದ್ರಗಳು ಹಾಗೂ ಕಥೋಲಿಕ ಆರೋಗ್ಯ ವೃತ್ತಿಪರರಿಗೆ ದಯಾಮರಣ ಪ್ರಕ್ರಿಯೆಯಿಂದ ಹೊರಗುಳಿಯುವ ಹಕ್ಕು ನೀಡುವಂತೆ ನಿರಂತರವಾಗಿ ಒತ್ತಾಯಿಸುತ್ತಿದೆ. ದೇಶದ ಕೆಲವು ಭಾಗಗಳಲ್ಲಿ ಇಂತಹ ಕಾನೂನುಬದ್ಧ ರಕ್ಷಣೆಗಳಿದ್ದರೂ, ಇನ್ನೂ ಕೆಲವು ಕಡೆ ಅವು ಇಲ್ಲ ಅಥವಾ ಅತ್ಯಂತ ಸೀಮಿತವಾಗಿವೆ.

ಆದಾಗ್ಯೂ, ಪ್ರತಿಯೊಬ್ಬ ವ್ಯಕ್ತಿಯ ಗರ್ಭಧಾರಣೆಯ ಕ್ಷಣದಿಂದ ಸಹಜ ಮರಣದವರೆಗೆ ಇರುವ ಮಾನವ ಘನತೆ ಮತ್ತು ಜೀವಿಸುವ ಹಕ್ಕನ್ನು ಒತ್ತಿಹೇಳುತ್ತಾ, ರೋಗಿಗಳು, ಕುಟುಂಬಗಳು ಮತ್ತು ವ್ಯಕ್ತಿಗಳಿಗೆ ಜೀವವನ್ನು ಆಯ್ಕೆಮಾಡುವ ಅವಕಾಶ ದೊರಕುವಂತೆ ಕಥೋಲಿಕ ಸಮುದಾಯವು ತನ್ನ ಪ್ರಯತ್ನವನ್ನು ಮುಂದುವರಿಸಲಿದೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

31 ಜುಲೈ 2026, 15:10