ಹುಡುಕಿ

ಫ್ರಾನ್ಸ್‌ನ ಕೆಲವು ಭಾಗಗಳಲ್ಲಿ ಉಷ್ಣ ಅಲೆಯ ನಡುವೆಯೇ ಬರ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಲೊಯರ್ ನದಿಯ ಒಂದು ಶಾಖೆ ಫ್ರಾನ್ಸ್‌ನ ಕೆಲವು ಭಾಗಗಳಲ್ಲಿ ಉಷ್ಣ ಅಲೆಯ ನಡುವೆಯೇ ಬರ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಲೊಯರ್ ನದಿಯ ಒಂದು ಶಾಖೆ 

ಹವಾಮಾನ ನ್ಯಾಯಕ್ಕಾಗಿ ನಾಯಕತ್ವ ವಹಿಸಲು ಐರ್ಲೆಂಡ್‌ನ EU ಅಧ್ಯಕ್ಷತೆಗೆ ಕ್ರೈಸ್ತ ಸಂಘಟನೆಗಳ ಕರೆ

ಲೌದಾತೋ ಸಿ' ಚಳವಳಿ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯ ಪ್ರಕಾರ, ಯುರೋಪಿನಾದ್ಯಂತದ 170ಕ್ಕೂ ಹೆಚ್ಚು ಕ್ರೈಸ್ತ ಸಂಘಟನೆಗಳು, ಐರ್ಲೆಂಡ್‌ ಯುರೋಪಿಯನ್ ಒಕ್ಕೂಟದ ಮಂಡಳಿಯ ಅಧ್ಯಕ್ಷತೆಯನ್ನು ಬಳಸಿಕೊಂಡು ಮಹತ್ವಾಕಾಂಕ್ಷೆಯ ಹವಾಮಾನ ನೀತಿಗಳನ್ನು ಮುನ್ನಡೆಸುವಂತೆ ಮನವಿ ಮಾಡಿವೆ. ಪಳೆಯುಳಿಕೆ ಇಂಧನಗಳಿಂದ ಗಳಿಸುವ ಲಾಭದ ಮೇಲೆ ಶಾಶ್ವತ ತೆರಿಗೆ ವಿಧಿಸುವುದರ ಜೊತೆಗೆ, ಕಲ್ಲಿದ್ದಲು, ತೈಲ ಮತ್ತು ಅನಿಲದ ಬಳಕೆಯಿಂದ ವೇಗವಾಗಿ ಹೊರಬರುವಂತೆ ಅವು ಕರೆ ನೀಡಿವೆ.

ಲೇಖಕರು: ಫ್ರಾನ್ಸೆಸ್ಕಾ ಮೆರ್ಲೊ

ಲೌದಾತೋ ಸಿ' ಚಳವಳಿ ಪ್ರಕಟಿಸಿದ ಪತ್ರಿಕಾ ಪ್ರಕಟಣೆಯ ಪ್ರಕಾರ, ಐರ್ಲೆಂಡ್ ತನ್ನ ಆರು ತಿಂಗಳ ಯುರೋಪಿಯನ್ ಒಕ್ಕೂಟದ ಮಂಡಳಿಯ ಅಧ್ಯಕ್ಷತೆಯನ್ನು ಆರಂಭಿಸುತ್ತಿರುವ ಸಂದರ್ಭದಲ್ಲಿ, 170ಕ್ಕೂ ಹೆಚ್ಚು ಕ್ರೈಸ್ತ ಸಂಘಟನೆಗಳ ಒಕ್ಕೂಟ ಹವಾಮಾನ ನ್ಯಾಯ ಮತ್ತು ಸೃಷ್ಟಿಯ ಸಂರಕ್ಷಣೆಯನ್ನು ಯುರೋಪಿನ ಕಾರ್ಯಸೂಚಿಯ ಕೇಂದ್ರಬಿಂದುವಾಗಿಸಲು ಐರ್ಲೆಂಡ್ ಸರ್ಕಾರಕ್ಕೆ ಮನವಿ ಮಾಡಿದೆ.

ಯುರೋಪಿಯನ್ ಒಕ್ಕೂಟದ 21 ಸದಸ್ಯ ರಾಷ್ಟ್ರಗಳಲ್ಲಿರುವ 3.3 ಕೋಟಿಗೂ ಹೆಚ್ಚು ಕ್ರೈಸ್ತರನ್ನು ಪ್ರತಿನಿಧಿಸುವ ಈ ಒಕ್ಕೂಟವು " ಯುರೋಪೇ ನಮ್ಮೆಲ್ಲರ ಮನೆಯ ವಿಷಯದಲ್ಲಿ ನಿಷ್ಠೆಯಿಂದಿರು" ಎಂಬ ಘೋಷವಾಕ್ಯದಡಿ ತನ್ನ ಮನವಿಯನ್ನು ಆರಂಭಿಸಿದೆ. ಸ್ಪರ್ಧಾತ್ಮಕತೆಯನ್ನು ಸಾಧಿಸುವ ಯುರೋಪಿನ ಪ್ರಯತ್ನವು ಸಾಮಾಜಿಕ ಒಗ್ಗಟ್ಟು, ಹವಾಮಾನ ಕ್ರಮ, ಗ್ರಾಮೀಣ ಅಭಿವೃದ್ಧಿ ಅಥವಾ ಮಾನವ ಘನತೆಯ ಬೆಲೆಯ ಮೇಲೆ ಆಗಬಾರದು ಎಂದು ಅದು ಎಚ್ಚರಿಸಿದೆ.

ಐರ್ಲೆಂಡ್‌ನ EU ಅಧ್ಯಕ್ಷತೆಯ ಆರಂಭದ ಸಂದರ್ಭದಲ್ಲಿ, ಯುರೋಪಿಯನ್ ಒಕ್ಕೂಟದ ಧರ್ಮಾಧ್ಯಕ್ಷರ ಸಮ್ಮೇಳನಗಳ ಆಯೋಗ (COMECE) ಮತ್ತು ಯುರೋಪಿಯನ್ ಧರ್ಮಸಭೆಗಳ ಸಮ್ಮೇಳನ (CEC) ಪ್ರತಿನಿಧಿಗಳು, ಐರ್ಲೆಂಡ್ ಕಥೋಲಿಕ ಧರ್ಮಾಧ್ಯಕ್ಷರ ಸಮ್ಮೇಳನದ ಸದಸ್ಯರು ಹಾಗೂ ಹಿರಿಯ ಪ್ರೊಟೆಸ್ಟಂಟ್ ಧಾರ್ಮಿಕ ಮುಖಂಡರು ಡಬ್ಲಿನ್‌ನಲ್ಲಿ ಐರ್ಲೆಂಡ್‌ನ ತಾವೋಸೀಚ್ ಮೈಕೇಲ್ ಮಾರ್ಟಿನ್ ಅವರನ್ನು ಬುಧವಾರ ಭೇಟಿಯಾದ ಸಂದರ್ಭದಲ್ಲಿ ಈ ಮನವಿಯನ್ನು ಸಲ್ಲಿಸಲಾಯಿತು.

COMECE ಪ್ರಕಾರ, ಧರ್ಮಸಭೆಯ ಪ್ರತಿನಿಧಿಗಳು ಯುರೋಪಿನ ಸ್ಪರ್ಧಾತ್ಮಕತೆಯನ್ನು ಬಲಪಡಿಸುವ ಪ್ರಯತ್ನಗಳಿಗೆ ಬೆಂಬಲ ವ್ಯಕ್ತಪಡಿಸುವ ನಿಲುವು ಪತ್ರವನ್ನು ಐರ್ಲೆಂಡ್ ಸರ್ಕಾರಕ್ಕೆ ಸಲ್ಲಿಸಿದರು. ಆದರೆ ಆರ್ಥಿಕ ಬೆಳವಣಿಗೆಯು ಐಕ್ಯತೆ, ಪರಿಸರದ ಜವಾಬ್ದಾರಿ ಮತ್ತು ಪ್ರತಿಯೊಬ್ಬ ವ್ಯಕ್ತಿಯ ಘನತೆಗೆ ಗೌರವ ಎಂಬ ತತ್ವಗಳಲ್ಲಿ ಬೇರೂರಿರಬೇಕು ಎಂದು ಅವರು ಎಚ್ಚರಿಸಿದರು.

ಇದೇ ಕಳವಳವನ್ನು ವಿಶಾಲ ಕ್ರೈಸ್ತ ಒಕ್ಕೂಟವೂ ವ್ಯಕ್ತಪಡಿಸಿದೆ. ಜುಲೈ 9 ಮತ್ತು 10ರಂದು ಡಬ್ಲಿನ್ ಕೋಟೆಯಲ್ಲಿ ಇಯು ಸ್ಪರ್ಧಾತ್ಮಕತೆ ಸಚಿವರು ಸಭೆ ಸೇರುತ್ತಿದ್ದ ಸಂದರ್ಭದಲ್ಲಿ, ಯುರೋಪಿನ ದೀರ್ಘಕಾಲೀನ ಭದ್ರತೆ ಮತ್ತು ಸಮೃದ್ಧಿಯು ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆಯನ್ನು ಹೆಚ್ಚಿಸುವುದಲ್ಲ, ಅದನ್ನು ಕಡಿಮೆ ಮಾಡುವುದರ ಮೇಲೆ ಅವಲಂಬಿತವಾಗಿದೆ ಎಂದು ಅದು ವಾದಿಸಿತು.

'ಲೌದಾತೋ ಸಿ''ಯಿಂದ ಪ್ರೇರಣೆ

ಜಗದ್ಗುರುಗಳಾದ ಫ್ರಾನ್ಸಿಸ್ ಅವರ ಲೌದಾತೋ ಸಿ' ವಿಶ್ವಪತ್ರಿಕೆ ಹಾಗೂ ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರ Magnifica Humanitas ವಿಶ್ವಪತ್ರಿಕೆಯಿಂದ ಪ್ರೇರಣೆ ಪಡೆದಿರುವ ಈ ಒಕ್ಕೂಟವು, ಪರಿಸರ ಬಿಕ್ಕಟ್ಟನ್ನು ನ್ಯಾಯ, ಶಾಂತಿ ಮತ್ತು ಮಾನವ ಘನತೆಯ ಪ್ರಶ್ನೆಗಳಿಂದ ಬೇರ್ಪಡಿಸಲು ಸಾಧ್ಯವಿಲ್ಲ ಎಂದು ಹೇಳಿದೆ.

ಪತ್ರಿಕಾ ಪ್ರಕಟಣೆಯು ಇತ್ತೀಚೆಗೆ ಆಸ್ಟ್ರಿಯನ್ ವರ್ಲ್ಡ್ ಶೃಂಗ ಸಭೆಯಲ್ಲಿ ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರು ಮಾಡಿದ ಭಾಷಣವನ್ನು ಉಲ್ಲೇಖಿಸಿದೆ. ಅದರಲ್ಲಿ ಅವರು ಪರಿಸರ ಬಿಕ್ಕಟ್ಟನ್ನು "ಪ್ರತ್ಯೇಕ ಸಮಸ್ಯೆಯಲ್ಲ; ಅದು ಸಮಕಾಲೀನ ಸಾಮಾಜಿಕ-ಆರ್ಥಿಕ ಬಿಕ್ಕಟ್ಟಿನ ಪರಿಸರ ಸಂಬಂಧಿತ ಆಯಾಮವಾಗಿದೆ" ಎಂದು ವಿವರಿಸಿದ್ದರು. ಹಾಗೆಯೇ ‘ಲೌದಾತೋ ಸಿ'ಯಲ್ಲಿ ಜಗದ್ಗುರುಗಳಾದ ಫ್ರಾನ್ಸಿಸ್ ಅವರು ಪಳೆಯುಳಿಕೆ ಇಂಧನಗಳನ್ನು ನವೀಕರಿಸಬಹುದಾದ ಇಂಧನ ಮೂಲಗಳಿಂದ ಬದಲಾಯಿಸಬೇಕು ಹಾಗೂ "ಭೂಮಿಯ ಕೂಗು ಮತ್ತು ಬಡವರ ಕೂಗು" ಎರಡನ್ನೂ ಆಲಿಸಬೇಕು ಎಂದು ನೀಡಿದ ಕರೆಯನ್ನೂ ಅದು ನೆನಪಿಸಿದೆ.

ಐರ್ಲೆಂಡ್ ಕಥೋಲಿಕ ಧರ್ಮಾಧ್ಯಕ್ಷರ ಸಮ್ಮೇಳನದ ಲೌದಾತೋ ಸಿ' ಸಂಯೋಜಕರಾದ ಧರ್ಮಾಧ್ಯಕ್ಷ ಮಾರ್ಟಿನ್ ಹೇಯ್ಸ್, ಈ ಅಭಿಯಾನವನ್ನು ಸ್ವಾಗತಿಸಿ, ಐರ್ಲೆಂಡ್‌ನ EU ಅಧ್ಯಕ್ಷತೆಯು "ನಮ್ಮ ಸಾಮಾನ್ಯ ಮನೆಯನ್ನು ರಕ್ಷಿಸಲು ಸಮಗ್ರ ವಿಧಾನವನ್ನು ಉತ್ತೇಜಿಸಲು ಮತ್ತು ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು" ಉತ್ತಮ ಅವಕಾಶವಾಗಿದೆ ಎಂದು ಹೇಳಿದರು.

ಸ್ಪರ್ಧಾತ್ಮಕತೆ, ಮೌಲ್ಯಗಳು ಮತ್ತು ಭದ್ರತೆ ಎಂಬ ಯುರೋಪಿಯನ್ ಒಕ್ಕೂಟದ ಆದ್ಯತೆಗಳ ನಡುವೆ ಸಮತೋಲನ ಉಳಿಯಬೇಕು ಎಂದು ಅವರು ಹೇಳಿದರು. ಹವಾಮಾನ ಬದಲಾವಣೆಯಿಂದ ಹೆಚ್ಚು ಬಾಧಿತವಾಗಿರುವ ಬಡ ರಾಷ್ಟ್ರಗಳ ಅಗತ್ಯಗಳಿಗೆ ಸ್ಪಂದಿಸಲು ಯುರೋಪ್ "ಕಡಿಮೆ ಆರ್ಥಿಕ ಬೆಳವಣಿಗೆಯನ್ನು ಸಹ ಒಪ್ಪಿಕೊಳ್ಳಬೇಕಾಗಬಹುದು" ಎಂದರು.

ರಾಜಕೀಯ ಕ್ರಮಕ್ಕೆ ಕರೆ

ಯುರೋಪಿನ ಇತಿಹಾಸದಲ್ಲೇ ದಾಖಲಾದ ಅತ್ಯಂತ ತೀವ್ರ ಉಷ್ಣ ಅಲೆಯ ನಂತರ ಹಾಗೂ ಯುರೋಪಿಯನ್ ಒಕ್ಕೂಟದ ಮುಂದಿನ ಏಳು ವರ್ಷದ ಬಜೆಟ್ ಕುರಿತ ಚರ್ಚೆಗಳು ಆರಂಭವಾಗುತ್ತಿರುವ ಸಂದರ್ಭದಲ್ಲಿ ಈ ಅಭಿಯಾನ ಆರಂಭವಾಗಿದೆ.

ಒಕ್ಕೂಟದ ಪ್ರಕಾರ, 2026ರ ಮೊದಲ ತ್ರೈಮಾಸಿಕದಲ್ಲಿ ಯುರೋಪಿನ ಆರು ಅತಿದೊಡ್ಡ ತೈಲ ಮತ್ತು ಅನಿಲ ಕಂಪನಿಗಳು ಒಟ್ಟಾಗಿ 22 ಬಿಲಿಯನ್ ಅಮೆರಿಕನ್ ಡಾಲರ್ ಲಾಭ ಗಳಿಸಿವೆ. ಇದೇ ವೇಳೆ ಲಕ್ಷಾಂತರ ಜನರು ಹೆಚ್ಚುತ್ತಿರುವ ಇಂಧನ ವೆಚ್ಚ ಮತ್ತು ಪದೇ ಪದೇ ಸಂಭವಿಸುತ್ತಿರುವ ಹವಾಮಾನ ಸಂಬಂಧಿತ ವಿಪತ್ತುಗಳ ಪರಿಣಾಮವನ್ನು ಅನುಭವಿಸುತ್ತಿದ್ದಾರೆ.

ಲೌದಾತೋ ಸಿ' ಚಳವಳಿಯ ಕಾರ್ಯನಿರ್ವಾಹಕ ನಿರ್ದೇಶಕಿ ಡಾ. ಲೋರ್ನಾ ಗೋಲ್ಡ್, ರಾಜಕೀಯ ನಾಯಕರು "ಧೈರ್ಯ, ಶಾಂತಿ ಮತ್ತು ಸಾಮಾನ್ಯ ಹಿತದ ಮಾರ್ಗವನ್ನು" ಆಯ್ಕೆ ಮಾಡಬೇಕು ಎಂದು ಹೇಳಿದರು. ನವೀಕರಿಸಬಹುದಾದ ಇಂಧನ, ವಿದ್ಯುದೀಕರಣ ಮತ್ತು ಇಂಧನ ದಕ್ಷತೆಯಲ್ಲಿ ಗಣನೀಯ ಹೂಡಿಕೆ ಮಾಡುವುದರ ಜೊತೆಗೆ, ಪಳೆಯುಳಿಕೆ ಇಂಧನಗಳಿಂದ ದೊರೆಯುವ ಹೆಚ್ಚುವರಿ ಲಾಭದ ಮೇಲೆ ಶಾಶ್ವತ ತೆರಿಗೆ ವಿಧಿಸುವಂತೆ ಅವರು ಕರೆ ನೀಡಿದರು.

ಟ್ರೋಕೈರ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಾನ್ ಫಾರೆಲ್, ಹವಾಮಾನ ಬದಲಾವಣೆಗೆ ಅತಿ ಕಡಿಮೆ ಕಾರಣರಾಗಿರುವ ಸಮುದಾಯಗಳೇ ಅದರ ಅತ್ಯಂತ ವಿನಾಶಕಾರಿ ಪರಿಣಾಮಗಳನ್ನು ಅನುಭವಿಸುತ್ತಿವೆ ಎಂದು ಒತ್ತಿ ಹೇಳಿದರು. ಬಿಕ್ಕಟ್ಟಿನ ಮುಂಚೂಣಿಯಲ್ಲಿರುವ ರಾಷ್ಟ್ರಗಳಿಗೆ ನ್ಯಾಯಯುತ ಹವಾಮಾನ ಹಣಕಾಸು ಒದಗಿಸುತ್ತಲೇ, ಪಳೆಯುಳಿಕೆ ಇಂಧನಗಳ ಬಳಕೆಯನ್ನು ಹಂತಹಂತವಾಗಿ ಸ್ಥಗಿತಗೊಳಿಸುವ ನೈತಿಕ ಹೊಣೆ ಯುರೋಪಿನ ಮೇಲಿದೆ ಎಂದರು.

ನಾಲ್ಕು ಆದ್ಯತೆಗಳು

ಈ ಒಕ್ಕೂಟವು ಯುರೋಪಿನ ನಾಯಕರಿಗೆ ತಕ್ಷಣವೇ ನಾಲ್ಕು ಕ್ರಮಗಳನ್ನು ಕೈಗೊಳ್ಳುವಂತೆ ಕರೆ ನೀಡಿದೆ: 2030ರೊಳಗೆ ಕಲ್ಲಿದ್ದಲು, 2035ರೊಳಗೆ ಅನಿಲ ಮತ್ತು 2040ರೊಳಗೆ ತೈಲದ ಬಳಕೆಯನ್ನು ಹಂತಹಂತವಾಗಿ ಸ್ಥಗಿತಗೊಳಿಸುವ ಕಾನೂನುಬದ್ಧ ಕಾರ್ಯತಂತ್ರ, ಜೊತೆಗೆ ಹೊಸ ಪಳೆಯುಳಿಕೆ ಇಂಧನ ಅನ್ವೇಷಣೆಗೆ ತಕ್ಷಣ ಅಂತ್ಯ; ಪಳೆಯುಳಿಕೆ ಇಂಧನ ಲಾಭಗಳ ಮೇಲೆ ಶಾಶ್ವತ ಹೆಚ್ಚುವರಿ ತೆರಿಗೆ; ನವೀಕರಿಸಬಹುದಾದ ಇಂಧನ, ಇಂಧನ ದಕ್ಷತೆ, ವಿದ್ಯುದೀಕರಣ ಮತ್ತು ವೃತ್ತಾಕಾರದ ಆರ್ಥಿಕತೆಯಲ್ಲಿ ಗಣನೀಯ ಹೂಡಿಕೆ; ಹಾಗೂ ಯುರೋಪಿಯನ್ ಒಕ್ಕೂಟದ ಮುಂದಿನ ಬಹುವರ್ಷೀಯ ಹಣಕಾಸು ಚೌಕಟ್ಟಿನಲ್ಲಿ ಹವಾಮಾನ ಹಣಕಾಸನ್ನು ಬಲಪಡಿಸುವುದು.

ಈ ಉಪಕ್ರಮವನ್ನು ಬೆಂಬಲಿಸುವ ಸಂಸ್ಥೆಗಳಲ್ಲಿ ಟ್ರೋಕೈರ್, ಕ್ರಿಶ್ಚಿಯನ್ ಏಡ್ ಐರ್ಲೆಂಡ್, ಜೆಸ್ಯೂಟ್ ಸೆಂಟರ್ ಫಾರ್ ಫೇತ್ ಅಂಡ್ ಜಸ್ಟಿಸ್, ನಾಕ್ ರಾಷ್ಟ್ರೀಯ ದೇವಾಲಯ, ಮಿಸಿಯಾನ್ ಕಾರಾ, ಲೌದಾತೋ ಸಿ' ಚಳವಳಿ, ಕರಿತಸ್ ಯುರೋಪಾ ಮತ್ತು CIDSE ಸೇರಿವೆ.

ಪತ್ರಿಕಾ ಪ್ರಕಟಣೆಯ ಪ್ರಕಾರ, 2027ರ ಆರಂಭದಲ್ಲಿ ಟುವಾಲು ದೇಶದೊಂದಿಗೆ ಸೇರಿ ಪಳೆಯುಳಿಕೆ ಇಂಧನಗಳನ್ನು ಹಂತಹಂತವಾಗಿ ಸ್ಥಗಿತಗೊಳಿಸುವ ಕುರಿತು ಅಂತರರಾಷ್ಟ್ರೀಯ ಸಮ್ಮೇಳನವನ್ನು ಐರ್ಲೆಂಡ್ ಸಹ ಆಯೋಜಿಸಲು ಸಿದ್ಧತೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ, ನಮ್ಮ ಕಾಲದ ಪ್ರಮುಖ ನೈತಿಕ ಸವಾಲುಗಳಲ್ಲಿ ಒಂದೆಂದು ಅವರು ಬಣ್ಣಿಸುವ ವಿಷಯಕ್ಕೆ ಪ್ರತಿಕ್ರಿಯಿಸುವಲ್ಲಿ ಯುರೋಪ್ ನಾಯಕತ್ವವನ್ನು ಪ್ರದರ್ಶಿಸಲು ಐರ್ಲೆಂಡ್‌ನ EU ಅಧ್ಯಕ್ಷತೆಯು ಮಹತ್ವದ ಅವಕಾಶವನ್ನು ಒದಗಿಸುತ್ತದೆ ಎಂದು ಅಭಿಯಾನದ ಸಂಘಟಕರು ನಂಬಿದ್ದಾರೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

10 ಜುಲೈ 2026, 22:32