ಹುಡುಕಿ

ಉಕ್ರೇನ್‌ನ ಲ್ಯಾಟಿನ್ ಕಥೋಲಿಕ ಧರ್ಮಸಭೆಯ ರಚನೆಗಳು ಪುನಃಸ್ಥಾಪನೆಯಾಗಿ 35 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ನಡೆಯುತ್ತಿರುವ ಸಂಭ್ರಮಾಚರಣೆಗಳಿಗೆ ಬೆರ್ಡಿಚಿವ್‌ನ ಪವಿತ್ರ ಸ್ಕಾಪುಲರ್ ಮಾತೆಯ ರಾಷ್ಟ್ರೀಯ ಪುಣ್ಯಕ್ಷೇತ್ರ ಆತಿಥ್ಯ ವಹಿಸಿದೆ. ಉಕ್ರೇನ್‌ನ ಲ್ಯಾಟಿನ್ ಕಥೋಲಿಕ ಧರ್ಮಸಭೆಯ ರಚನೆಗಳು ಪುನಃಸ್ಥಾಪನೆಯಾಗಿ 35 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ನಡೆಯುತ್ತಿರುವ ಸಂಭ್ರಮಾಚರಣೆಗಳಿಗೆ ಬೆರ್ಡಿಚಿವ್‌ನ ಪವಿತ್ರ ಸ್ಕಾಪುಲರ್ ಮಾತೆಯ ರಾಷ್ಟ್ರೀಯ ಪುಣ್ಯಕ್ಷೇತ್ರ ಆತಿಥ್ಯ ವಹಿಸಿದೆ. 

35 ವರ್ಷಗಳ ಪುನಃಸ್ಥಾಪನೆಯನ್ನು ಸ್ಮರಿಸುತ್ತಿರುವ ಉಕ್ರೇನ್‌ನ ಲ್ಯಾಟಿನ್ ಕಥೋಲಿಕ ಧರ್ಮಸಭೆ

ಇಂದು, ಜುಲೈ 19ರಂದು, ಉಕ್ರೇನ್‌ನ ಲ್ಯಾಟಿನ್ ಕಥೋಲಿಕ ಧರ್ಮಸಭೆಯ ರಚನೆಗಳು ಪುನಃ ಸ್ಥಾಪನೆಯಾಗಿ 35 ವರ್ಷಗಳು ಪೂರ್ಣಗೊಂಡಿವೆ. ಈ ಪ್ರಯುಕ್ತ ಬೆರ್ಡಿಚಿವ್‌ನ ಪವಿತ್ರ ಸ್ಕಾಪುಲರ್ ಮಾತೆಯ ರಾಷ್ಟ್ರೀಯ ಪುಣ್ಯಕ್ಷೇತ್ರದಲ್ಲಿ ಸಂಭ್ರಮಾಚರಣೆಗಳು ನಡೆಯುತ್ತಿದ್ದು, ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರ ವಿಶೇಷ ಪ್ರತಿನಿಧಿಯಾಗಿ ಮಹಾಧರ್ಮಾಧ್ಯಕ್ಷರಾದ ಪಾಲ್ ರಿಚರ್ಡ್ ಗ್ಯಾಲಘರ್ ಅವರು ಭಾಗವಹಿಸಿದ್ದಾರೆ.

ಲೇಖಕರು:ಸಹೋದರಿ ಅಲೀನಾ ಪೆಟ್ರಾಸ್ಕೈಟ್ ಮತ್ತು ಸ್ವಿತ್ಲಾನಾ ದುಖೋವಿಚ್

ಇಂದು, ಭಾನುವಾರ ಜುಲೈ 19ರಂದು, ಬೆರ್ಡಿಚಿವ್‌ನ ಪವಿತ್ರ ಸ್ಕಾಪುಲರ್ ಮಾತೆಯ ರಾಷ್ಟ್ರೀಯ ಪುಣ್ಯಕ್ಷೇತ್ರವು ಉಕ್ರೇನ್‌ನ ಲ್ಯಾಟಿನ್  ಕಥೋಲಿಕ ಧರ್ಮಸಭೆಯ ರಚನೆಗಳು ಪುನಃ ಸ್ಥಾಪನೆಯಾಗಿ 35 ವರ್ಷಗಳು ಪೂರ್ಣಗೊಂಡಿರುವ ಸಂಭ್ರಮಾಚರಣೆಗಳಿಗೆ ಆತಿಥ್ಯ ವಹಿಸಿದೆ. ಈ ಸಂದರ್ಭದಲ್ಲಿ, ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರು ಜಗದ್ಗುರುಗಳ ಅಧಿಕಾರ ಪೀಠದ ರಾಷ್ಟ್ರಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗಿನ ಸಂಬಂಧಗಳ ಕಾರ್ಯದರ್ಶಿಯಾದ ಮಹಾಧರ್ಮಾಧ್ಯಕ್ಷ ಪಾಲ್ ರಿಚರ್ಡ್ ಗ್ಯಾಲಘರ್ ಅವರನ್ನು ತಮ್ಮ ವಿಶೇಷ ಪ್ರತಿನಿಧಿಯಾಗಿ ನೇಮಿಸಿದ್ದಾರೆ.

ಈ ವಾರ್ಷಿಕೋತ್ಸವದ ಅಂಗವಾಗಿ ವ್ಯಾಟಿಕನ್ ವಾರ್ತಾ ಸಂಸ್ಥೆಯೊಂದಿಗೆ ಮಾತನಾಡಿದ, ಧಾರ್ಮಿಕ ಅಧ್ಯಯನ ಸಂಸ್ಥೆಯ ನಿರ್ದೇಶಕರೂ ಹಾಗೂ ಮಹಾಧರ್ಮಾಧ್ಯಕ್ಷ ಗ್ಯಾಲಘರ್ ನೇತೃತ್ವದ ಜಗದ್ಗುರುಗಳ ವಿಶೇಷ ನಿಯೋಗದ ಸದಸ್ಯರೂ ಆದ ವಂ. ಗುರು ಪಾವ್ಲೊ ಖೋಮಿಯಾಕ್, ಈ ಆಚರಣೆಯ ಮಹತ್ವವನ್ನು ವಿವರಿಸಿದರು. “ಉಕ್ರೇನ್‌ನಲ್ಲಿ ಲ್ಯಾಟಿನ್  ಕಥೋಲಿಕ ಧರ್ಮಸಭೆಯ ರಚನೆಗಳು ಪುನಃ ಸ್ಥಾಪನೆಯಾಗಿ 35 ವರ್ಷಗಳು ಪೂರ್ಣಗೊಂಡಿರುವುದು ಕೇವಲ ಐತಿಹಾಸಿಕ ಸ್ಮರಣೆಯಲ್ಲ; ಅದು ಧರ್ಮಸಭೆಯ ಆಧ್ಯಾತ್ಮಿಕ ಸ್ಥೈರ್ಯ ಮತ್ತು ಜೀವಂತ ಸ್ಮೃತಿಯ ಸಂಕೇತವಾಗಿದೆ” ಎಂದು ಅವರು ಹೇಳಿದರು.

10ನೇ ಶತಮಾನದಿಂದಲೇ ಕಥೋಲಿಕ ಧರ್ಮಸಭೆಯು ಉಕ್ರೇನ್‌ನಲ್ಲಿ ಅಸ್ತಿತ್ವದಲ್ಲಿದೆ ಎಂಬುದನ್ನು ನೆನಪಿಸಿದ ವಂ. ಗುರು ಖೋಮಿಯಾಕ್, ರಾಜಕುಮಾರಿ ಓಲ್ಗಾ ಅವರು ಕಥೋಲಿಕ ಧರ್ಮಗುರುಗಳನ್ನು ಕೀವ್‌ಗೆ ಆಹ್ವಾನಿಸಿದ ಬಗ್ಗೆ ಐತಿಹಾಸಿಕ ದಾಖಲೆಗಳಿವೆ ಎಂದು ಉಲ್ಲೇಖಿಸಿದರು. ಉಕ್ರೇನ್ ರಾಷ್ಟ್ರದ ನಿರ್ಮಾಣದಲ್ಲಿ ಧರ್ಮಸಭೆಯ ಆರಂಭಿಕ ಕೊಡುಗೆಯನ್ನು ಇದು ತೋರಿಸುತ್ತದೆ ಎಂದರು. ಅವರ ಅಭಿಪ್ರಾಯದಲ್ಲಿ, ಧರ್ಮಸಭೆಯ ರಚನೆಗಳ ಪುನಃ ಸ್ಥಾಪನೆ ಎಂದರೆ ಹಳೆಯದ್ದನ್ನು “ದುರಸ್ತಿ” ಮಾಡುವುದು ಅಲ್ಲ; ಅದು ಹೊಸ ಐತಿಹಾಸಿಕ ಯುಗದಲ್ಲಿ ಪುನರ್ಜನ್ಮ ಪಡೆದಂತಾಗಿದೆ. “ಕಥೋಲಿಕ ಧರ್ಮಸಭೆಯು ಉಕ್ರೇನ್‌ನಲ್ಲಿ ಎಂದಿಗೂ ಅಸ್ತಿತ್ವ ಕಳೆದುಕೊಂಡಿರಲಿಲ್ಲ. ತೀವ್ರ ನಿರ್ಬಂಧಗಳನ್ನು ಎದುರಿಸಿದರೂ ಮತ್ತು ಅನೇಕ ಹಕ್ಕುಗಳಿಂದ ವಂಚಿತಗೊಂಡಿದ್ದರೂ, ತನ್ನ ಸಾಂಸ್ಥಿಕ ನಿರಂತರತೆಯನ್ನು ಅದು ಸದಾ ಉಳಿಸಿಕೊಂಡಿತ್ತು.”

ಇತಿಹಾಸವೇ ಸಿದ್ಧಪಡಿಸಿದ ಪುನರ್ಜನ್ಮ

1991ರ ಜನವರಿ 16ರಂದು, ಸಂತ ಎರಡನೇ ಜಾನ್ ಪಾಲ್ ಅವರು ಲ್ವೀವ್ ಮಹಾಧರ್ಮಕ್ಷೇತ್ರ ಹಾಗೂ ಝೈಟೊಮಿರ್ ಮತ್ತು ಕಾಮಿಯಾನೆಟ್ಸ್–ಪೊಡಿಲ್ಸ್ಕಿ ಧರ್ಮಕ್ಷೇತ್ರಗಳಿಗೆ ಧರ್ಮಾಧ್ಯಕ್ಷರನ್ನು ನೇಮಿಸುವ ಮೂಲಕ ಉಕ್ರೇನ್‌ನ ರೋಮನ್ ಕಥೋಲಿಕ ಧರ್ಮಸಭೆಯ ಶ್ರೇಣಿಕ್ರಮವನ್ನು ಪುನಃ ಸ್ಥಾಪಿಸಿದರು.

ವಂ. ಗುರು ಖೋಮಿಯಾಕ್ ಅವರ ಪ್ರಕಾರ, ಜಗದ್ಗುರುಗಳ ಈ ನಿರ್ಧಾರವು ದೀರ್ಘಕಾಲದ ಐತಿಹಾಸಿಕ ಪ್ರಕ್ರಿಯೆಯ ಪರಿಪಾಕವಾಗಿತ್ತು. ಶತಮಾನಗಳ ಕಾಲ ಇಂದಿನ ಉಕ್ರೇನ್‌ನ ಪ್ರದೇಶಗಳು ವಿವಿಧ ರಾಜಕೀಯ ಆಡಳಿತಗಳ ಅಧೀನದಲ್ಲಿದ್ದವು. 1946ರವರೆಗೆ ದ್ವಿತೀಯ ಪೋಲಿಷ್ ಗಣರಾಜ್ಯದ ಭಾಗವಾಗಿದ್ದ ಪಶ್ಚಿಮ ಉಕ್ರೇನ್‌ನಲ್ಲಿ ಕಥೋಲಿಕ ಧರ್ಮಸಭೆಗೆ ತುಲನಾತ್ಮಕವಾಗಿ ಹೆಚ್ಚಿನ ಸ್ವಾತಂತ್ರ್ಯವಿತ್ತು. ಆದರೆ ಸೋವಿಯತ್ ಆಡಳಿತದ ಪ್ರದೇಶಗಳಲ್ಲಿ ಧರ್ಮಸಭೆಯು ಕ್ರೂರ ಹಿಂಸೆಯನ್ನು ಎದುರಿಸಬೇಕಾಯಿತು. “1920ರ ದಶಕದಿಂದಲೇ ಧರ್ಮಗುರುಗಳ ಮೇಲೆ ದೌರ್ಜನ್ಯ ಆರಂಭವಾಯಿತು. ಲ್ಯಾಟಿನ್  ಕಥೋಲಿಕರ ಅಸ್ತಿತ್ವವನ್ನೇ ನಿರ್ಮೂಲ ಮಾಡುವ ಪ್ರಯತ್ನಗಳು ನಡೆದವು” ಎಂದು ಅವರು ಹೇಳಿದರು.

ಎರಡನೇ ಮಹಾಯುದ್ಧದ ಬಳಿಕ ಹಾಗೂ ಯಾಲ್ಟಾ ಸಮ್ಮೇಳನದ ನಂತರ ಗಡಿಗಳನ್ನು ಮರುನಿರ್ಧರಿಸಿದಾಗ, ಲ್ವೀವ್ ಲ್ಯಾಟಿನ್ ಮಹಾಧರ್ಮಕ್ಷೇತ್ರದ ಬಹುತೇಕ ಪ್ರದೇಶಗಳು ಸೋವಿಯತ್ ಆಡಳಿತಕ್ಕೆ ಸೇರಿಬಿಟ್ಟವು. ಲುಬಾಚೂವ್ ಕೇಂದ್ರವಾಗಿದ್ದ ಸಣ್ಣ ಪ್ರದೇಶ ಮಾತ್ರ ಪೋಲೆಂಡ್‌ನಲ್ಲಿ ಉಳಿಯಿತು. ಅಲ್ಲಿ ಮಹಾಧರ್ಮಕ್ಷೇತ್ರದ ನಿರಂತರತೆಯನ್ನು ಉಳಿಸಿಕೊಳ್ಳಲು ಪ್ರೇಷಿತ ಆಡಳಿತ ಕೇಂದ್ರ ಸ್ಥಾಪಿಸಲಾಯಿತು. 1946ರಲ್ಲಿ ಮಹಾಧರ್ಮಾಧ್ಯಕ್ಷ ಯೂಜೆನಿಯುಷ್ ಬಾಜಿಯಾಕ್ ಅವರನ್ನು ಲ್ವೀವ್‌ನಿಂದ ಹೊರಹಾಕಿದ ನಂತರ ಹಾಗೂ ಸೋವಿಯತ್ ಆಡಳಿತ ಕಥೋಲಿಕ ಧರ್ಮಗುರುಗಳ ಮೇಲೆ ಹಿಂಸೆ ಆರಂಭಿಸಿದ ಬಳಿಕ, ಇದೇ ಆಡಳಿತವು ಧರ್ಮಸಭೆಯ ಸಾಂಸ್ಥಿಕ ರಚನೆಯನ್ನು ಜೀವಂತವಾಗಿರಿಸಿತು.

ಕಥೋಲಿಕರ ಮೇಲಿನ ನಿರ್ಬಂಧಗಳು ಮತ್ತು ಧರ್ಮಗುರುಗಳ ಸೇವೆ

ಸೋವಿಯತ್ ಆಡಳಿತದ ಅವಧಿಯಲ್ಲಿ ಕಥೋಲಿಕ ವಿಶ್ವಾಸಿಗಳು ತೀವ್ರ ನಿರ್ಬಂಧಗಳ ಅಡಿಯಲ್ಲಿ ಬದುಕಬೇಕಾಯಿತು ಎಂದು ವಂ. ಗುರು ಖೋಮಿಯಾಕ್ ಹೇಳಿದ್ದಾರೆ. ತಮ್ಮ ನಂಬಿಕೆಯನ್ನು ಆಚರಿಸಿದರೆ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸಬೇಕಾಗುತ್ತಿತ್ತು. ಧರ್ಮಸಭೆಯ ಸದಸ್ಯರಾಗಿದ್ದಕ್ಕಾಗಿ ಅಥವಾ ತಮ್ಮ ವಿಶ್ವಾಸವನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಕ್ಕಾಗಿ ಅನೇಕರು ಹಿಂಸೆಗೆ ಒಳಗಾದರು.

ಧರ್ಮಗುರುಗಳ ಸಂಖ್ಯೆಯೂ ತೀವ್ರವಾಗಿ ಕುಸಿಯಿತು. 1957ರ ವೇಳೆಗೆ ಇಡೀ ಉಕ್ರೇನ್‌ನಲ್ಲಿ ಲ್ಯಾಟಿನ್ ಕೇವಲ 80 ಧರ್ಮಗುರುಗಳು ಮಾತ್ರ ಸೇವೆಯಲ್ಲಿದ್ದರು. ನಂತರದ ವರ್ಷಗಳಲ್ಲಿ ಈ ಸಂಖ್ಯೆಯೂ ಇನ್ನಷ್ಟು ಕಡಿಮೆಯಾಯಿತು. ಆದರೂ ಧೈರ್ಯಶಾಲಿ ಧರ್ಮಗುರುಗಳು ಧರ್ಮಸಭೆಯನ್ನು ಜೀವಂತವಾಗಿರಿಸಿದರು. ಅವರಲ್ಲಿ ವಂ. ಗುರು ರಫಾಯೆಲ್ ಕಿಯೆರ್ನಿಕಿ ಅವರ ಸೇವೆಯನ್ನು ವಂ. ಗುರು ಖೋಮಿಯಾಕ್ ವಿಶೇಷವಾಗಿ ಸ್ಮರಿಸುತ್ತಾರೆ. ಅವರು ಲ್ವೀವ್‌ನ ಪರಮಪವಿತ್ರ ಕನ್ಯಾ ಮರಿಯಮ್ಮನವರ ಸ್ವರ್ಗಾರೋಹಣ ಪ್ರಧಾನ ದೇವಾಲಯದ ಧರ್ಮಗುರುಗಳಾಗಿ 40 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದರು. ಲ್ಯಾಟಿನ್ ಹಾಗೂ ಬೈಜಾಂಟೈನ್ ಸಂಪ್ರದಾಯದ ವಿಶ್ವಾಸಿಗಳಿಗೆ ಅವರು ಸೇವೆ ಸಲ್ಲಿಸಿದರು. ದೇಶದ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇತರ ಧರ್ಮಗುರುಗಳೂ ಧರ್ಮಸಭೆಯನ್ನು ಜೀವಂತವಾಗಿರಿಸಿದರು.

1984ರ ಮೇ ತಿಂಗಳಲ್ಲಿ, ಸಂತ ಎರಡನೇ ಜಾನ್ ಪಾಲ್ ಅವರು ಮಾನ್ಸಿನ್ಯೋರ್ ಮರಿಯನ್ ಯಾವೊರ್ಸ್ಕಿ ಅವರನ್ನು ಲುಬಾಚೂವ್ ಕೇಂದ್ರವಾಗಿದ್ದ ಲ್ವೀವ್‌ನ ಪ್ರೇಷಿತ ಆಡಳಿತಾಧಿಕಾರಿಯಾಗಿ ನೇಮಿಸಿದರು. 1991ರಲ್ಲಿ ಅವರು ಲ್ವೀವ್ ಮಹಾಧರ್ಮಾಧ್ಯಕ್ಷರಾದರು.

ವಂ. ಗುರು ಖೋಮಿಯಾಕ್ ಅವರ ಪ್ರಕಾರ, ಲ್ಯಾಟಿನ್  ಕಥೋಲಿಕ ಧರ್ಮಸಭೆಯ ಪುನಃ ಸ್ಥಾಪನೆಯನ್ನು ಉಕ್ರೇನ್‌ನ ಎರಡು ಕಥೋಲಿಕ ಸಂಪ್ರದಾಯಗಳಾದ ಲ್ಯಾಟಿನ್ ಧರ್ಮಸಭೆ ಮತ್ತು ಉಕ್ರೇನಿಯನ್ ಗ್ರೀಕ್ ಕಥೋಲಿಕ ಧರ್ಮಸಭೆಯ ಸಮಾನಾಂತರ ಪಯಣದೊಂದಿಗೆ ನೋಡಬೇಕು.

1987ರ ಆಗಸ್ಟ್ 4ರಂದು ಉಕ್ರೇನಿಯನ್ ಗ್ರೀಕ್ ಕಥೋಲಿಕ ಧರ್ಮಸಭೆಯ ಧರ್ಮಗುರುಗಳು ಮತ್ತು ವಿಶ್ವಾಸಿಗಳ ಪ್ರತಿನಿಧಿಗಳು ಭೂಗತ ಸ್ಥಿತಿಯಿಂದ ಹೊರಬಂದು ಸೋವಿಯತ್ ಆಡಳಿತದಿಂದ ಕಾನೂನು ಮಾನ್ಯತೆ ಪಡೆಯುವ ಉದ್ದೇಶವನ್ನು ಸಾರ್ವಜನಿಕವಾಗಿ ಘೋಷಿಸಿದರು. “ಇದು ಧರ್ಮಸಭೆಯು ಮತ್ತೆ ಸಾರ್ವಜನಿಕ ಜೀವನಕ್ಕೆ ಮರಳಿದ ನಿರ್ಣಾಯಕ ಹೆಜ್ಜೆಯಾಗಿತ್ತು” ಎಂದು ಅವರು ಹೇಳಿದರು.

ಸಂತ ಎರಡನೇ ಜಾನ್ ಪಾಲ್ ಅವರ ನಿರ್ಣಾಯಕ ಪಾತ್ರ

“35 ವರ್ಷಗಳ ಹಿಂದೆ ಸರ್ವಾಧಿಕಾರಿ ಆಡಳಿತದ ಸ್ವರೂಪವನ್ನು ವೈಯಕ್ತಿಕವಾಗಿ ಅರಿತಿದ್ದ ಸಂತ ಎರಡನೇ ಜಾನ್ ಪಾಲ್ ಅವರು, ಆಗಲೂ ಸೋವಿಯತ್ ಆಡಳಿತದ ಅಧೀನದಲ್ಲಿದ್ದ ಈ ಪ್ರದೇಶದಲ್ಲಿ ಕಥೋಲಿಕ ಧರ್ಮಸಭೆಯನ್ನು ಪುನಃ ಸ್ಥಾಪಿಸುವ ಧೈರ್ಯವನ್ನು ತೋರಿದರು” ಎಂದು ವಂ. ಗುರು ಖೋಮಿಯಾಕ್ ಹೇಳುತ್ತಾರೆ. 1989ರ ಡಿಸೆಂಬರ್‌ನಲ್ಲಿ ಮಿಖಾಯಿಲ್ ಗೋರ್ಬಚೆವ್ ಅವರು ವ್ಯಾಟಿಕನ್‌ಗೆ ಭೇಟಿ ನೀಡಿದ ಸಂದರ್ಭ ಮತ್ತು 1990ರಲ್ಲಿ ನಡೆದ ರಾಜತಾಂತ್ರಿಕ ಮಾತುಕತೆಗಳನ್ನು ಅವರು ಸ್ಮರಿಸಿದರು. ಆ ಸಂದರ್ಭದಲ್ಲಿ, “ಸೋವಿಯತ್ ಒಕ್ಕೂಟದಲ್ಲಿರುವ ಲಕ್ಷಾಂತರ ಕಥೋಲಿಕರು ಶ್ರೇಣಿಕ್ರಮವಿಲ್ಲದೆ ಉಳಿಯುವುದನ್ನು ನಾನು ಒಪ್ಪಲಾರೆ” ಎಂದು ಜಗದ್ಗುರುಗಳು ಸ್ಪಷ್ಟವಾಗಿ ಹೇಳಿದ್ದರು.

ವಂ. ಗುರು ಖೋಮಿಯಾಕ್ ಅವರ ಮಾತಿನಲ್ಲಿ, “ಅದು ನಿಜವಾಗಿಯೂ ಅನುಗ್ರಹದ ಕಾಲವಾಗಿತ್ತು.” “ಕಾಲದ ಸಂಕೇತಗಳನ್ನು ಗುರುತಿಸಿದ ಧರ್ಮಸಭೆಯು ಉಕ್ರೇನ್ ರಾಷ್ಟ್ರದ ನಿರ್ಮಾಣ ಪ್ರಕ್ರಿಯೆಯಲ್ಲಿ ಮಹತ್ವದ ಪಾತ್ರವನ್ನು ವಹಿಸಿತು.” 1991ರ ಜನವರಿ 16ರಂದು ಲ್ಯಾಟಿನ್ ಕಥೋಲಿಕ ಶ್ರೇಣಿಕ್ರಮ ಪುನಃ ಸ್ಥಾಪನೆಯಾದ ಕೆಲವೇ ತಿಂಗಳುಗಳ ನಂತರ, ಅದೇ ವರ್ಷದ ಆಗಸ್ಟ್ 24ರಂದು ಉಕ್ರೇನ್ ಸ್ವಾತಂತ್ರ್ಯ ಘೋಷಿಸಿತು. ಇದರೊಂದಿಗೆ ಧರ್ಮಸಭೆಯ ಜೀವನದಲ್ಲಿ ಹೊಸ ಅಧ್ಯಾಯ ಆರಂಭವಾಯಿತು.

“ಅಂದಿನಿಂದ ಅನೇಕ ದೇವಾಲಯಗಳನ್ನು ಹಿಂದಿರುಗಿಸಲಾಯಿತು ಮತ್ತು ಪುನಃ ತೆರೆಯಲಾಯಿತು. ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕಾರ್ಯಗಳು ವಿಸ್ತರಿಸಿದವು. ಧರ್ಮಗುರುಗಳು ಹಾಗೂ ದೇವರಿಗೆ ಸಮರ್ಪಿತ ಜೀವಿಗಳು ಸಮಾಜದ ಪುನರ್‌ನಿರ್ಮಾಣದಲ್ಲಿ ಸಕ್ರಿಯವಾಗಿ ಭಾಗವಹಿಸಿದರು” ಎಂದು ಅವರು ಹೇಳಿದರು.

ಈ ಪುನಃಸ್ಥಾಪನೆಯ ಅಂತರರಾಷ್ಟ್ರೀಯ ಆಯಾಮವನ್ನೂ ಅವರು ಒತ್ತಿ ಹೇಳಿದರು. “ಧರ್ಮಸಭೆಯು ಜಗತ್ತಿನ ಮುಂದೆ ಉಕ್ರೇನ್‌ನ ಧ್ವನಿಯಾಗತೊಡಗಿತು. ಧರ್ಮಸಭೆಯ ರಾಜತಾಂತ್ರಿಕ ಸೇವೆಯು ಅದನ್ನು ಅತ್ಯುತ್ತಮ ರೀತಿಯಲ್ಲಿ ನೆರವೇರಿಸಿತು.” ಈ ಪುನಃ ಸ್ಥಾಪನೆಯೊಂದಿಗೆ ಉಕ್ರೇನ್‌ನ ಲ್ಯಾಟಿನ್  ಕಥೋಲಿಕ ಧರ್ಮಾಧ್ಯಕ್ಷರ ಸಮ್ಮೇಳನ ಹಾಗೂ ವಿಶ್ವಾಸಿಗಳ ವಿವಿಧ ಅಗತ್ಯಗಳಿಗೆ ಸೇವೆ ಸಲ್ಲಿಸುವ ಅನೇಕ ಧಾರ್ಮಿಕ ಆಯೋಗಗಳೂ ಸ್ಥಾಪನೆಯಾದವು.

ಉಕ್ರೇನ್‌ನಲ್ಲಿರುವ ಕಥೋಲಿಕ ಧರ್ಮಸಭೆಯ ಸಾರ್ವತ್ರಿಕ ಆಯಾಮ

ಕಳೆದ 35 ವರ್ಷಗಳಲ್ಲಿ ಉಕ್ರೇನ್‌ನ ಕಥೋಲಿಕ ಧರ್ಮಸಭೆಯ ಸಾರ್ವತ್ರಿಕ ಸ್ವರೂಪವು ಸಂಪೂರ್ಣವಾಗಿ ವ್ಯಕ್ತವಾಗಿದೆ ಎಂದು ವಂ. ಗುರು ಖೋಮಿಯಾಕ್ ಹೇಳಿದರು. “ಇದು ಪ್ರತಿಯೊಬ್ಬರಿಗೂ ಸ್ಥಾನವಿರುವ ಧರ್ಮಸಭೆಯಾಗಿದೆ. ಅವರ ಮೂಲ, ಹಿನ್ನೆಲೆ ಅಥವಾ ವೈಯಕ್ತಿಕ ನಂಬಿಕೆ ಏನೇ ಆಗಿರಲಿ, ಎಲ್ಲವೂ ಪ್ರಭು ಯೇಸು ಕ್ರಿಸ್ತರ ಸುತ್ತ ಒಂದಾಗಿವೆ.”

ವಿಶೇಷವಾಗಿ ರಷ್ಯಾದ ಪೂರ್ಣ ಪ್ರಮಾಣದ ಆಕ್ರಮಣ ಆರಂಭವಾದ ನಂತರ ಧರ್ಮಸಭೆಯ ಸೇವಾಕಾರ್ಯ ಇನ್ನಷ್ಟು ಸ್ಪಷ್ಟವಾಗಿ ಗೋಚರಿಸಿದೆ ಎಂದು ಅವರು ಹೇಳಿದರು.  “ಕಳೆದ 35 ವರ್ಷಗಳಲ್ಲಿ ಕಥೋಲಿಕ ಧರ್ಮಸಭೆಯ ಸೇವಾಕಾರ್ಯ—ವಿಶೇಷವಾಗಿ ಯುದ್ಧ ಆರಂಭವಾದ ಬಳಿಕ—ಲಕ್ಷಾಂತರ ಜನರಿಗೆ ಅಮೂಲ್ಯವಾದ ನೆರವು ಮತ್ತು ಬೆಂಬಲವನ್ನು ನೀಡಿದೆ.”

ಲ್ಯಾಟಿನ್ ಕಥೋಲಿಕ ಧರ್ಮಸಭೆಯ ಪುನಃ ಸ್ಥಾಪನೆಯ 35ನೇ ವಾರ್ಷಿಕೋತ್ಸವವನ್ನು ನೆನಪಿಸಿಕೊಳ್ಳುತ್ತಾ, ಹಿಂದಿನ ತಲೆಮಾರುಗಳಿಂದ ಪಡೆದ ಆಧ್ಯಾತ್ಮಿಕ ಪರಂಪರೆಯನ್ನು ಕಾಪಾಡಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಜವಾಬ್ದಾರಿಯನ್ನು ವಂ. ಗುರು ಖೋಮಿಯಾಕ್ ಒತ್ತಿ ಹೇಳಿದರು. ಅವರ ಪ್ರಕಾರ, ಈ ವಾರ್ಷಿಕೋತ್ಸವವು ಅತ್ಯಂತ ಕಠಿಣ ಕಾಲದಲ್ಲಿಯೂ “ಧರ್ಮಸಭೆಯು ಜನರೊಂದಿಗೆ ಇತ್ತು, ಇಂದೂ ಇದೆ ಮತ್ತು ಮುಂದೆಯೂ ಇರುತ್ತದೆ” ಎಂಬುದನ್ನು ವಿಶ್ವಾಸಿಗಳಿಗೆ ನೆನಪಿಸುತ್ತದೆ. ವೈಯಕ್ತಿಕ ದುಃಖಗಳಾಗಲಿ, ಇಡೀ ರಾಷ್ಟ್ರ ಅನುಭವಿಸುತ್ತಿರುವ ನೋವಾಗಲಿ, ಧರ್ಮಸಭೆಯು ವಿಶ್ವಾಸಿಗಳೊಂದಿಗೆ ನಡೆದು ಅವರಿಗೆ ಮಾನವೀಯ ಮತ್ತು ಆಧ್ಯಾತ್ಮಿಕ ಬೆಂಬಲವನ್ನು ನೀಡುತ್ತಲೇ ಇದೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

19 ಜುಲೈ 2026, 20:23