ಕ್ಯಾಮರೂನ್ ಮಹಾಧರ್ಮಾಧ್ಯಕ್ಷರಿಂದ ಅಮಾನವೀಯ ಕಾರಾಗೃಹ ಪರಿಸ್ಥಿತಿ ಮತ್ತು ಭ್ರಷ್ಟಾಚಾರದ ವಿರುದ್ಧ ತೀವ್ರ ಖಂಡನೆ
ಲೇಖಕರು: ದೆಬೋರ ಕ್ಯಾಸ್ತೆಲ್ಲಾನೋ ಲುಬೋವ್
"ಕೈದಿಗಳನ್ನು ನಾವು ಹೇಗೆ ನಡೆಸಿಕೊಳ್ಳುತ್ತೇವೆಯೋ ಅದು ದೇವರೊಂದಿಗಿನ ನಮ್ಮ ಸಂಬಂಧದ ಮಾನದಂಡವಾಗಿದೆ. ಅವರ ನೋವನ್ನು ಕಡೆಗಣಿಸುವುದು ಎಂದರೆ ಪ್ರಭು ಯೇಸು ಕ್ರಿಸ್ತರನ್ನು ಕಡೆಗಣಿಸಿದಂತೆಯೇ. ಅವರ ದುಃಖವನ್ನು ನಿವಾರಿಸಲು ಮತ್ತು ನ್ಯಾಯವನ್ನು ಮರುಸ್ಥಾಪಿಸಲು ನಾವು ಬದ್ಧರಾಗುವುದು ಎಂದರೆ ಪ್ರಭು ಯೇಸು ಕ್ರಿಸ್ತರ ಸೇವೆ ಮಾಡುವುದಾಗಿದೆ."
ಕ್ಯಾಮರೂನ್‌ನ ಡೌಲಾ ಮಹಾಧರ್ಮಾಧ್ಯಕ್ಷರಾದ ಸ್ಯಾಮ್ಯುಯೆಲ್ ಕ್ಲೇಡಾ ಅವರು ಜೂನ್ ಅಂತ್ಯದಲ್ಲಿ ಪ್ರಕಟಿಸಿದ ಕಾರಾಗೃಹ ಪರಿಸ್ಥಿತಿಯ ಕುರಿತ ತಮ್ಮ ಪಾಲನಾ ಪತ್ರದಲ್ಲಿ ಈ ಮಾತುಗಳನ್ನು ನೆನಪಿಸಿದ್ದಾರೆ ಎಂದು ವ್ಯಾಟಿಕನ್ ವಾರ್ತಾ ಸಂಸ್ಥೆ 'ಫಿಡೆಸ್' ತಿಳಿಸಿದೆ.
"ನಾನು ಬಂಧಿಯಾಗಿದ್ದೆ ನೀವು ನನ್ನನ್ನು ಸಂಧಿಸಿದಿರಿ" ಎಂಬ ಸಂತ ಮತ್ತಾಯರ ಶುಭಸಂದೇಶದಲ್ಲಿರುವ ಪ್ರಭು ಯೇಸು ಕ್ರಿಸ್ತರ ಬೋಧನೆಯನ್ನು ಸ್ಮರಿಸಿರುವ ಈ ಪತ್ರವು, "ವಿವಾದ ಮಾಡುವ ಉದ್ದೇಶದಿಂದ ಅಲ್ಲ, ಕರ್ತವ್ಯಪ್ರಜ್ಞೆ ಹಾಗೂ ತುರ್ತು ಕನಿಕರದ ಮನೋಭಾವದಿಂದ ಹುಟ್ಟಿದ ಸತ್ಯ ಮತ್ತು ಪಾಲನಾ ಪ್ರೀತಿಯ ಅಭಿವ್ಯಕ್ತಿಯಾಗಿದೆ" ಎಂದು ಮಹಾಧರ್ಮಾಧ್ಯಕ್ಷರು ವಿವರಿಸಿದ್ದಾರೆ.
ವ್ಯವಸ್ಥಿತ ಅನ್ಯಾಯ
ಈ ಪತ್ರದ ಉದ್ದೇಶವು "ಅನೇಕ ಕ್ಯಾಮರೂನ್ ನಾಗರಿಕರ ಬಂಧನ, ಸೆರೆವಾಸ ಮತ್ತು ಕಾರಾಗೃಹ ಜೀವನದ ಸುತ್ತಲಿನ ವ್ಯವಸ್ಥಿತ ಅನ್ಯಾಯವನ್ನು ಖಂಡಿಸುವುದಾಗಿದೆ" ಎಂದು ಅವರು ಹೇಳಿದ್ದಾರೆ. ಅಪಹರಣಗಳು, ಏಕಾಂತ ಸೆರೆವಾಸ, ಪೊಲೀಸ್ ಠಾಣೆಗಳು ಹಾಗೂ ಸಶಸ್ತ್ರ ಪೋಲಿಸ್ ಪಡೆ ಕೇಂದ್ರಗಳಲ್ಲಿನ ಅಮಾನವೀಯ ಮತ್ತು ಅವಮಾನಕರ ಪರಿಸ್ಥಿತಿಗಳು, ಕಾರಾಗೃಹ ವ್ಯವಸ್ಥೆಯ ದುಸ್ಥಿತಿ, ಇಡೀ ನ್ಯಾಯಾಂಗ ವ್ಯವಸ್ಥೆಯನ್ನು ವ್ಯಾಪಿಸಿರುವ ಭ್ರಷ್ಟಾಚಾರ ಹಾಗೂ ಅಪರಾಧ ನ್ಯಾಯ ಪ್ರಕ್ರಿಯೆಯ ನಿರಂತರ ಉಲ್ಲಂಘನೆಗಳನ್ನು ಈ ಪತ್ರವು ಬಯಲಿಗೆಳೆಯುತ್ತದೆ ಎಂದು ತಿಳಿಸಿದ್ದಾರೆ.
ಮೊದಲಿಗೆ, ನಾಪತ್ತೆಯಾಗುತ್ತಿರುವ ವ್ಯಕ್ತಿಗಳ ದುಸ್ಥಿತಿಯನ್ನು ಪ್ರಸ್ತಾಪಿಸಿದ ಅವರು, "ಸಮವಸ್ತ್ರದಲ್ಲಿರುವ ಅಥವಾ ಸಾಮಾನ್ಯ ಉಡುಪಿನಲ್ಲಿರುವ ಅಧಿಕಾರಿಗಳು ಅನೇಕ ಬಾರಿ ವಾರಂಟ್ ಇಲ್ಲದೆ ಜನರನ್ನು ಬಂಧಿಸಿ ಅಪಹರಿಸುತ್ತಾರೆ. ನಂತರ ಅವರು ರಹಸ್ಯ ಸ್ಥಳಗಳಲ್ಲಿ ಇರಿಸಲ್ಪಡುತ್ತಾರೆ. ಅವರ ದೂರವಾಣಿಗಳನ್ನು ಸ್ಥಗಿತಗೊಳಿಸಲಾಗುತ್ತದೆ ಮತ್ತು ಅವರು ಎಲ್ಲಿದ್ದಾರೆ ಎಂಬ ಎಲ್ಲ ಸುಳಿವುಗಳನ್ನು ಅಳಿಸಿಹಾಕಲಾಗುತ್ತದೆ" ಎಂದು ಹೇಳಿದರು.
"ಭಯಭೀತರಾದ ಅವರ ಕುಟುಂಬದವರು ಒಂದು ಪೊಲೀಸ್ ಠಾಣೆಯಿಂದ ಮತ್ತೊಂದಕ್ಕೆ, ನ್ಯಾಯಾಲಯದಿಂದ ಸೇನಾ ಶಿಬಿರದವರೆಗೆ ಅಲೆದಾಡುತ್ತಾರೆ. ಆದರೆ ಅವರಿಗೆ ಸಿಗುವುದು ನಿರಾಕರಣೆ, ನಿರ್ಲಕ್ಷ್ಯ ಅಥವಾ ಬೆದರಿಕೆ ಮಾತ್ರ" ಎಂದು ಅವರು ವಿಷಾದ ವ್ಯಕ್ತಪಡಿಸಿದರು.
'ಕಾನೂನಿನ ಬಹಿರಂಗ ಉಲ್ಲಂಘನೆ'
"ಅಪರಿಚಿತ ಮತ್ತು ಕೆಲವೊಮ್ಮೆ ಅಧಿಕೃತವಲ್ಲದ ಸ್ಥಳಗಳಲ್ಲಿ ನಡೆಸುವ ಈ ರಹಸ್ಯ ಬಂಧನಗಳು ಕಾನೂನಿನ ಬಹಿರಂಗ ಉಲ್ಲಂಘನೆಯಾಗಿದೆ" ಎಂದು ಅವರು ಒತ್ತಿ ಹೇಳಿದರು. ದೇಶದ ಅಧಿಕೃತ ಕಾರಾಗೃಹಗಳ ಪರಿಸ್ಥಿತಿಯನ್ನು ಖಂಡಿಸಿದ ಅವರು, ವೈದ್ಯಕೀಯ ಸೇವೆಗಳು "ಕೇವಲ ಹೆಸರಿಗೆ ಮಾತ್ರ ಇರುವಂತಿವೆ" ಎಂದು ಹೇಳಿದರು.
ಕಾರಾಗೃಹ ಚಿಕಿತ್ಸಾಲಯಗಳು ಅಗತ್ಯ ಸೌಲಭ್ಯಗಳಿಂದ ವಂಚಿತವಾಗಿದ್ದು, ವೈದ್ಯಕೀಯ ಸಿಬ್ಬಂದಿ ತೀವ್ರ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. "ಕ್ಷಯರೋಗ, ತುರಿಕೆ ಮತ್ತು ಟೈಫಾಯಿಡ್‌ನಂತಹ ಸಾಂಕ್ರಾಮಿಕ ರೋಗಗಳು ನಿಯಂತ್ರಣವಿಲ್ಲದೆ ಹರಡುತ್ತಿವೆ. HIV ಅಥವಾ ಮಧುಮೇಹದಿಂದ ಬಳಲುತ್ತಿರುವ ಕೈದಿಗಳ ಆರೋಗ್ಯ, ಸೂಕ್ತ ಚಿಕಿತ್ಸೆಯ ಕೊರತೆಯಿಂದ ವೇಗವಾಗಿ ಹದಗೆಡುತ್ತಿದೆ" ಎಂದು ಅವರು ಕಳವಳ ವ್ಯಕ್ತಪಡಿಸಿದರು. ವಿಟಮಿನ್ ಮತ್ತು ಪೌಷ್ಟಿಕಾಂಶಗಳ ಕೊರತೆಯಿರುವ ಆಹಾರವು ಈಗಾಗಲೇ ದುರ್ಬಲಗೊಂಡಿರುವ ಕೈದಿಗಳ ಆರೋಗ್ಯವನ್ನು ಕಾಪಾಡಲು ಸಾಕಾಗುತ್ತಿಲ್ಲ ಎಂದು ಅವರು ಹೇಳಿದರು. ಆದ್ದರಿಂದ, ಕೈದಿಗಳ ಬದುಕು "ಹೆಚ್ಚಾಗಿ ತಮ್ಮ ಬಂಧುಗಳ ನೆರವು ಅಥವಾ ಕಾರಾಗೃಹದ ಕಾಳಸಂತೆಯನ್ನು ಅವಲಂಬಿಸಿದೆ".
ಮಹಿಳೆಯರು ಮತ್ತು ಅಪ್ರಾಪ್ತರ ಬಗ್ಗೆ ಕಳವಳ
ಮಹಾಧರ್ಮಾಧ್ಯಕ್ಷರು ಮಹಿಳೆಯರು ಮತ್ತು ಅಪ್ರಾಪ್ತ ವಯಸ್ಕರ ಪರಿಸ್ಥಿತಿಯ ಬಗ್ಗೆಯೂ ತೀವ್ರ ಕಳವಳ ವ್ಯಕ್ತಪಡಿಸಿದರು. "ಸೆರೆಯಲ್ಲಿರುವ ಮಹಿಳೆಯರಿಗೆ ಮೂಲಭೂತ ಮಹಿಳಾ ಸ್ವಚ್ಛತಾ ಸಾಮಗ್ರಿಗಳೂ ದೊರೆಯುತ್ತಿಲ್ಲ. ಕೆಲವರು ತಮ್ಮ ಶಿಶುಗಳೊಂದಿಗೆ ಸೆರೆವಾಸ ಅನುಭವಿಸುತ್ತಿದ್ದು, ಸಹಜ ಬೆಳವಣಿಗೆಗೆ ಅಗತ್ಯವಾದ ವಾತಾವರಣವಿಲ್ಲದೆ ಆ ಮಕ್ಕಳು ಕಾರಾಗೃಹದಲ್ಲೇ ಬೆಳೆಯಬೇಕಾಗಿದೆ" ಎಂದು ಅವರು ವಿಷಾದಿಸಿದರು.
"ವಯಸ್ಕರಿಂದ ಪ್ರತ್ಯೇಕವಾಗಿರಿಸಿ ಸೂಕ್ತ ಶಿಕ್ಷಣ ನೀಡಬೇಕಾದ ಅಪ್ರಾಪ್ತರು ಅನೇಕ ಬಾರಿ ತಮ್ಮಷ್ಟಕ್ಕೆ ತಾವೇ ಬಿಟ್ಟುಬಿಡಲ್ಪಟ್ಟಿದ್ದಾರೆ. ಅವರು ಬಲಿಷ್ಠರ ದಬ್ಬಾಳಿಕೆ, ದೌರ್ಜನ್ಯ ಮತ್ತು ಶೋಷಣೆಗೆ ಒಳಗಾಗುತ್ತಿದ್ದಾರೆ" ಎಂದು ಅವರು ಖಂಡಿಸಿದರು. ಈ ಎಲ್ಲ ದುರುಪಯೋಗಗಳಿಗೆ "ಭ್ರಷ್ಟಾಚಾರ ಮತ್ತು ನ್ಯಾಯದ ವಿಕೃತಿಯೇ ಕಾರಣ" ಎಂದು ಮಹಾಧರ್ಮಾಧ್ಯಕ್ಷರು ಹೇಳಿದರು.
ವಿಚಾರಣೆಗೆ ಮುನ್ನ ದೀರ್ಘಕಾಲ ಬಂಧನದಲ್ಲಿಡುವ ಪದ್ಧತಿಯನ್ನು ಖಂಡಿಸಿದ ಅವರು, "ಅಪರೂಪದ ಕ್ರಮವಾಗಿರಬೇಕಾದ ಇದು ಈಗ ಸಾಮಾನ್ಯ ಪದ್ಧತಿಯಾಗಿದ್ದು, ಅನೇಕ ಬಾರಿ ವರ್ಷಗಳವರೆಗೆ ಮುಂದುವರಿಯುತ್ತದೆ. ಇದರ ಪರಿಣಾಮವಾಗಿ ಇನ್ನೂ ಅಪರಾಧ ಸಾಬೀತಾಗದವರನ್ನೇ ಶಿಕ್ಷೆಗೆ ಗುರಿಯಾದ ಕೈದಿಗಳಂತೆ ನಡೆಸಿಕೊಳ್ಳಲಾಗುತ್ತಿದೆ" ಎಂದು ಹೇಳಿದರು.
ಈ ರೀತಿಯ ನ್ಯಾಯ ನಿರಾಕರಣೆಯು "ಎರಡು ರೀತಿಯ ಶಿಕ್ಷೆಯಾಗಿದೆ: ಒಂದು, ಸ್ವಾತಂತ್ರ್ಯವನ್ನು ಕಸಿದುಕೊಳ್ಳುವುದು; ಮತ್ತೊಂದು, ಸಮಂಜಸವಾದ ಅವಧಿಯೊಳಗೆ ನ್ಯಾಯಸಮ್ಮತ ವಿಚಾರಣೆ ಪಡೆಯುವ ಹಕ್ಕನ್ನು ನಿರಾಕರಿಸುವುದು" ಎಂದು ಅವರು ವಿವರಿಸಿದರು.
ಮಾನವ ಘನತೆಯನ್ನು ಗೌರವಿಸುವಂತೆ ಮನವಿ
ಕೊನೆಯಲ್ಲಿ, ಸೆರೆವಾಸದ ಉದ್ದೇಶವು ಸಮಾಜವನ್ನು ರಕ್ಷಿಸುವುದರ ಜೊತೆಗೆ, ಶಿಕ್ಷೆಗೊಳಗಾದವರಿಗೆ "ಅವರ ಮಾನವ ಘನತೆಯನ್ನು ಸಂಪೂರ್ಣವಾಗಿ ಗೌರವಿಸುವ ವಾತಾವರಣದಲ್ಲಿ ಆತ್ಮಾವಲೋಕನ ಮಾಡಲು, ಪಶ್ಚಾತ್ತಾಪಪಟ್ಟು ತಿದ್ದಿಕೊಳ್ಳಲು ಹಾಗೂ ಬಿಡುಗಡೆಯ ನಂತರ ಸಮಾಜದಲ್ಲಿ ಯಶಸ್ವಿಯಾಗಿ ಮರುಸೇರ್ಪಡೆಯಾಗಲು ಅಗತ್ಯ ಕೌಶಲಗಳನ್ನು ಪಡೆದುಕೊಳ್ಳಲು ಅವಕಾಶ ಕಲ್ಪಿಸುವುದಾಗಿರಬೇಕು" ಎಂದು ಮಹಾಧರ್ಮಾಧ್ಯಕ್ಷರಾದ ಸ್ಯಾಮ್ಯುಯೆಲ್ ಕ್ಲೇಡಾ ಪುನರುಚ್ಚರಿಸಿದರು.
ಕೈದಿಗಳನ್ನು ಗೌರವ ಮತ್ತು ಮಾನವ ಘನತೆಯಿಂದ ನಡೆಸಿಕೊಳ್ಳುವಂತೆ ಅವರು ಪ್ರತಿಯೊಬ್ಬರ ಮನಸ್ಸಾಕ್ಷಿಗೆ ಮನವಿ ಮಾಡಿದರು. ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರು ಏಪ್ರಿಲ್ 13ರಿಂದ 23ರವರೆಗೆ ನಾಲ್ಕು ಆಫ್ರಿಕಾ ರಾಷ್ಟ್ರಗಳಿಗೆ ಕೈಗೊಂಡ ಪ್ರೇಷಿತೀಯ ಭೇಟಿಯ ಸಂದರ್ಭದಲ್ಲಿ ಕ್ಯಾಮರೂನ್ ರಾಷ್ಟ್ರಕ್ಕೂ ಭೇಟಿ ನೀಡಿದ್ದರು.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).