ಹುಡುಕಿ

ಕಡತ ಚಿತ್ರ: ಇಂಡೋನೇಷ್ಯಾದ ಕಥೋಲಿಕ ಧರ್ಮಾಧ್ಯಕ್ಷರ ಸಮ್ಮೇಳನದ ಅಧ್ಯಕ್ಷರಾದ ಧರ್ಮಾಧ್ಯಕ್ಷ ಆಂಟೋನಿಯಸ್ ಸುಬಿಯಾಂಟೋ ಬುಂಜಾಮಿನ್ (FABC 12ನೇ ಮಹಾಸಭೆ 2026) ಕಡತ ಚಿತ್ರ: ಇಂಡೋನೇಷ್ಯಾದ ಕಥೋಲಿಕ ಧರ್ಮಾಧ್ಯಕ್ಷರ ಸಮ್ಮೇಳನದ ಅಧ್ಯಕ್ಷರಾದ ಧರ್ಮಾಧ್ಯಕ್ಷ ಆಂಟೋನಿಯಸ್ ಸುಬಿಯಾಂಟೋ ಬುಂಜಾಮಿನ್ (FABC 12ನೇ ಮಹಾಸಭೆ 2026)  (@ FABC 12 Assembly 2026 )

ಏಷ್ಯಾದ ಧರ್ಮಸಭೆಯು ಪರಸ್ಪರ ಆಲಿಸುವ ಧರ್ಮಸಭೆಯಾಗಬೇಕು: ಇಂಡೋನೇಷ್ಯಾದ ಧರ್ಮಾಧ್ಯಕ್ಷರ ಸಮ್ಮೇಳನದ ಅಧ್ಯಕ್ಷರ ಕರೆ

ಏಷ್ಯಾದ ಧರ್ಮಾಧ್ಯಕ್ಷರ ಸಮ್ಮೇಳನಗಳ ಒಕ್ಕೂಟದ (FABC) 12ನೇ ಮಹಾಸಭೆಯ ಉದ್ಘಾಟನಾ ಸಂದರ್ಭದಲ್ಲಿ, ಇಂಡೋನೇಷ್ಯಾದ ಕಥೋಲಿಕ ಧರ್ಮಾಧ್ಯಕ್ಷರ ಸಮ್ಮೇಳನದ ಅಧ್ಯಕ್ಷರಾದ ಧರ್ಮಾಧ್ಯಕ್ಷ ಆಂಟೋನಿಯಸ್ ಸುಬಿಯಾಂಟೋ ಬುಂಜಾಮಿನ್, OSC ಅವರು, ಏಷ್ಯಾದ ಧರ್ಮಸಭೆಯು ‘ಆಲಿಸುವ ಧರ್ಮಸಭೆ’ಯಾಗಬೇಕು ಎಂದು ಕರೆ ನೀಡಿದರು. ನಿಜವಾದ ಸಿನೋಡಲ್ ಪಯಣವು ದೇವರ ಧ್ವನಿಯನ್ನು, ಪರಸ್ಪರರ ಮಾತುಗಳನ್ನು ಹಾಗೂ ಸಮಾಜದ ಅಂಚಿನಲ್ಲಿರುವವರ ಧ್ವನಿಯನ್ನು ಆಲಿಸುವುದರಿಂದಲೇ ಆರಂಭವಾಗುತ್ತದೆ ಎಂದು ಹೇಳಿದರು.

ಲೇಖಕರು: ಅಮಾಡಿಯಾ ಪ್ರನಾಸ್ಟಿತಿ – ಜಕಾರ್ತ

“ಈ ಮಹಾಸಭೆಯು ಕೇವಲ ಧರ್ಮಾಧ್ಯಕ್ಷರ ಸಭೆಯಲ್ಲ,ಇದು ಪವಿತ್ರಾತ್ಮರ ಧ್ವನಿಯನ್ನು ಆಲಿಸಲು, ಪರಸ್ಪರರನ್ನು ಆಲಿಸಲು ಹಾಗೂ ಏಷ್ಯಾದ ಜನರ ಧ್ವನಿಯನ್ನು ಆಲಿಸಲು ದೊರೆತಿರುವ ಒಂದು ಪವಿತ್ರ ಕ್ಷಣವಾಗಿದೆ” ಎಂದು ಜುಲೈ 21ರಂದು ಜಕಾರ್ತದ ಹೋಟೆಲ್ ಮುಲಿಯಾದಲ್ಲಿ ಸೇರಿದ್ದ ಪ್ರತಿನಿಧಿಗಳನ್ನು ಉದ್ದೇಶಿಸಿ ಧರ್ಮಾಧ್ಯಕ್ಷ ಆಂಟೋನಿಯಸ್ ಹೇಳಿದರು.  ಉದ್ಘಾಟನಾ ಸಮಾರಂಭದಲ್ಲಿ ಧರ್ಮಸಭೆಯ ನಾಯಕರು, ಸರ್ಕಾರಿ ಅಧಿಕಾರಿಗಳು ಹಾಗೂ ಏಷ್ಯಾದ ವಿವಿಧ ರಾಷ್ಟ್ರಗಳಿಂದ ಆಗಮಿಸಿದ ಪ್ರತಿನಿಧಿಗಳು ಭಾಗವಹಿಸಿದ್ದರು.

ವೇದಿಕೆಯಲ್ಲಿ ಭಾರತದ ಕಾರ್ಡಿನಲ್ ಫಿಲಿಪೆ ನೆರಿ ಫೆರಾವೊ, FABC ಅಧ್ಯಕ್ಷರು; ಫಿಲಿಪ್ಪೀನ್ಸ್‌ನ ಕಾರ್ಡಿನಲ್ ಪಾಬ್ಲೊ ವರ್ಜಿಲಿಯೋ ಡೇವಿಡ್, FABC ಉಪಾಧ್ಯಕ್ಷರು; ಜಪಾನ್‌ನ ಕಾರ್ಡಿನಲ್ ಟಾರ್ಸಿಸಿಯೋ ಇಸಾವೊ ಕಿಕುಚಿ, FABC ಪ್ರಧಾನ ಕಾರ್ಯದರ್ಶಿ; ಹಾಗೂ ಗೌರವ ಅತಿಥಿಯಾಗಿ ಇಂಡೋನೇಷ್ಯಾದ ಧಾರ್ಮಿಕ ವ್ಯವಹಾರಗಳ ಸಚಿವ ನಸರುದ್ದೀನ್ ಉಮರ್ ಉಪಸ್ಥಿತರಿದ್ದರು.

ಇಂಡೋನೇಷ್ಯಾಕ್ಕೆ ಸ್ವಾಗತ ಕೋರುತ್ತಾ, ಧರ್ಮಾಧ್ಯಕ್ಷ ಆಂಟೋನಿಯಸ್, ಪ್ರತಿನಿಧಿಗಳು ದೇಶದ ಆತಿಥ್ಯವನ್ನು ಅನುಭವಿಸುವುದರ ಜೊತೆಗೆ ಏಷ್ಯಾದ ಸ್ಥಳೀಯ ಧರ್ಮಸಭೆಗಳ ನಡುವಿನ ಐಕ್ಯತೆಯ ಬಂಧವನ್ನು ಇನ್ನಷ್ಟು ಬಲಪಡಿಸಲಿ ಎಂಬ ಆಶಯವನ್ನು ವ್ಯಕ್ತಪಡಿಸಿದರು.

FABCಯು ಬಹುಕಾಲದಿಂದ ಸಂವಾದವನ್ನೇ ಏಷ್ಯಾದ ಧರ್ಮಸಭೆಯ ವಿಶಿಷ್ಟ ಲಕ್ಷಣವಾಗಿ ಒತ್ತಿಹೇಳುತ್ತ ಬಂದಿದೆ ಎಂದು ಅವರು ಸ್ಮರಿಸಿದರು. 1990ರಲ್ಲಿ ಇಂಡೋನೇಷ್ಯಾದ ಬಾಂಡುಂಗ್ನಲ್ಲಿ ನಡೆದ FABC ಮಹಾಸಭೆಯಲ್ಲಿ ಧರ್ಮಾಧ್ಯಕ್ಷರು "ತ್ರಿವಿಧ ಸಂವಾದ" ಎಂಬ ಆಧ್ಯಾತ್ಮಿಕ ದೃಷ್ಟಿಕೋನವನ್ನು ಮಂಡಿಸಿದ್ದರು. ಅದು ಬಡವರೊಂದಿಗೆ ಸಂವಾದ, ಸಂಸ್ಕೃತಿಗಳೊಂದಿಗೆ ಸಂವಾದ ಹಾಗೂ ಇತರ ಧರ್ಮಗಳೊಂದಿಗೆ ಸಂವಾದವನ್ನು ಒಳಗೊಂಡಿತ್ತು. ಇಂದು ಇದಕ್ಕೆ ಸೃಷ್ಟಿಯ ಸಂರಕ್ಷಣೆ ಎಂಬ ಮತ್ತೊಂದು ಪ್ರಮುಖ ಆಯಾಮವೂ ಧರ್ಮಸಭೆಯ ಧರ್ಮಪ್ರಚಾರದ ಅವಿಭಾಜ್ಯ ಅಂಗವಾಗಿದೆ ಎಂದು ಅವರು ಹೇಳಿದರು.

ಆಲಿಸುವಿಕೆ, ಸಹಯೋಗ ಹಾಗೂ ಭವಿಷ್ಯದ ಬಗ್ಗೆ ಹಂಚಿಕೊಂಡ ದೃಷ್ಟಿಕೋನದ ಮೂಲಕ ತಮ್ಮ ಸಿನೋಡಲ್ ಪರಿವರ್ತನೆಯನ್ನು ಇನ್ನಷ್ಟು ಆಳಗೊಳಿಸುವಂತೆ ಧರ್ಮಾಧ್ಯಕ್ಷ ಆಂಟೋನಿಯಸ್ ಪ್ರತಿನಿಧಿಗಳನ್ನು ಪ್ರೋತ್ಸಾಹಿಸಿದರು.

ಇತ್ತೀಚಿನ ಪೂಜ್ಯ ಜಗದ್ಗುರುಗಳ ಬೋಧನೆಗಳೊಂದಿಗೆ ಅವರು ಸಿನೋಡಲ್ ಪಯಣವನ್ನು ಕೂಡ ಜೋಡಿಸಿದರು. ಪೂಜ್ಯ ಜಗದ್ಗುರುಗಳಾದ ಫ್ರಾನ್ಸಿಸ್ ಅವರು, ಮಾತನಾಡುವ ಮೊದಲು ಆಲಿಸುವ ಮತ್ತು ತೀರ್ಪು ನೀಡುವ ಮೊದಲು ಜೊತೆಯಾಗಿ ನಡೆಯುವ ಧರ್ಮಸಭೆಯಾಗಿರಬೇಕು ಎಂದು ಕರೆ ನೀಡಿದ್ದರು ಎಂದು ಅವರು ಸ್ಮರಿಸಿದರು. ಅದೇ ದೃಷ್ಟಿಕೋನವನ್ನು ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರು ಸಂವಾದ, ಮುಕ್ತ ಮನಸ್ಸು ಮತ್ತು ಪ್ರೀತಿಯ ಮೂಲಕ ಸೇತುವೆಗಳನ್ನು ನಿರ್ಮಿಸುವ ಧರ್ಮಸಭೆಯಾಗುವಂತೆ ಆಹ್ವಾನಿಸುವ ಮೂಲಕ ಮತ್ತೊಮ್ಮೆ ದೃಢಪಡಿಸಿದ್ದಾರೆ ಎಂದು ಹೇಳಿದರು.

ಉದ್ಘಾಟನಾ ಸಮಾರಂಭದ ಅಂಗವಾಗಿ ನುಸಾಂತಾರ ನೃತ್ಯ ತಂಡ ಇಂಡೋನೇಷ್ಯಾದ ಸಮೃದ್ಧ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವ ಸಾಂಪ್ರದಾಯಿಕ ನೃತ್ಯಗಳನ್ನು ಪ್ರದರ್ಶಿಸಿತು. ಸುಮಾತ್ರ, ಜಾವಾ ಹಾಗೂ ನುಸಾ ತೆಂಗಾರಾ ಪ್ರದೇಶಗಳ ಸಂಸ್ಕೃತಿಯನ್ನು ಪ್ರತಿನಿಧಿಸುವ ಈ ನೃತ್ಯಗಳು ದೇಶದ ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆಯನ್ನು ಪರಿಚಯಿಸುವುದರ ಜೊತೆಗೆ ಏಷ್ಯಾದ ವಿವಿಧ ರಾಷ್ಟ್ರಗಳಿಂದ ಆಗಮಿಸಿದ ಪ್ರತಿನಿಧಿಗಳಿಗೆ ಹೃತ್ಪೂರ್ವಕ ಸ್ವಾಗತವನ್ನು ಕೋರಿದವು.

ಮಹಾಸಭೆಯ ಆತಿಥ್ಯ ವಹಿಸಲು ಸಹಕರಿಸಿದ ಇಂಡೋನೇಷ್ಯಾ ಸರ್ಕಾರಕ್ಕೆ, ವಿಶೇಷವಾಗಿ ಧಾರ್ಮಿಕ ವ್ಯವಹಾರಗಳ ಸಚಿವಾಲಯಕ್ಕೆ, ವಿವಿಧ ಧಾರ್ಮಿಕ ನಾಯಕರಿಗೆ, ಸ್ವಯಂಸೇವಕರಿಗೆ, ದಾನಿಗಳಿಗೆ ಹಾಗೂ ಸಂಘಟನಾ ಸಮಿತಿಗೆ ಧರ್ಮಾಧ್ಯಕ್ಷ ಆಂಟೋನಿಯಸ್ ಕೃತಜ್ಞತೆ ಸಲ್ಲಿಸಿದರು. ಅವರ ಸಹಕಾರವು ಸಿನೋಡಲ್ ಮನೋಭಾವದ ಸ್ಪಷ್ಟ ಅಭಿವ್ಯಕ್ತಿಯಾಗಿದೆ ಎಂದು ಅವರು ಬಣ್ಣಿಸಿದರು.

ತಮ್ಮ ಭಾಷಣದ ಅಂತ್ಯದಲ್ಲಿ, ಈ ಮಹಾಸಭೆಯನ್ನು ಪವಿತ್ರಾತ್ಮನ ಮಾರ್ಗದರ್ಶನಕ್ಕೆ ಸಮರ್ಪಿಸುತ್ತಾ, ಇದು ಏಷ್ಯಾದ ಸ್ಥಳೀಯ ಧರ್ಮಸಭೆಗಳನ್ನು ಇನ್ನಷ್ಟು ಬಲಪಡಿಸಲಿ, ಸಾಮಾನ್ಯ ವಿಶ್ವಾಸಿಗಳು ಹಾಗೂ ಯುವಜನರನ್ನು ಸಬಲಗೊಳಿಸಲಿ, ಸೃಷ್ಟಿಯ ಸಂರಕ್ಷಣೆಯ ಬದ್ಧತೆಯನ್ನು ಗಾಢಗೊಳಿಸಲಿ ಹಾಗೂ ಖಂಡದಾದ್ಯಂತ ಧರ್ಮಸಭೆಯ ಸಾಕ್ಷಿಜೀವನವನ್ನು ನವೀಕರಿಸಲಿ ಎಂದು ಅವರು ಪ್ರಾರ್ಥಿಸಿದರು.

ಕೊನೆಗೆ, ಮಹಾಸಭೆಯ ದೃಷ್ಟಿಕೋನವನ್ನು ಸಾರುವ ಈ ಪ್ರಾರ್ಥನೆಯೊಂದಿಗೆ ಅವರು ತಮ್ಮ ಸಂದೇಶವನ್ನು ಮುಕ್ತಾಯಗೊಳಿಸಿದರು: “ಪ್ರಭುವೇ ನಮ್ಮನ್ನು ಶಾಂತಿಯ ಸಾಧನಗಳನ್ನಾಗಿ ಮಾಡಿರಿ. FABCಯನ್ನು ಶಾಂತಿಯ ಸಾಧನವನ್ನಾಗಿ ಮಾಡಿರಿ. ಆಗ ನಾವು ಇನ್ನೂ ಮಹತ್ತರವಾದ ಕಾರ್ಯಗಳನ್ನು ಕಾಣುವೆವು.”

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

22 ಜುಲೈ 2026, 20:36