ಜಕಾರ್ತದಲ್ಲಿ FABC ಮಹಾಸಭೆಗೆ ಚಾಲನೆ: "ಸೇತುವೆಗಳನ್ನು ನಿರ್ಮಿಸುವ ಧರ್ಮಸಭೆ"ಯಾಗಲು ಏಷ್ಯಾದ ಧರ್ಮಸಭೆಗೆ ಕರೆ
ಲೇಖಕರು:ವಂ. ಗುರು ಕಾಸ್ಮಿರ್ ನೇಮಾ, SVD – ಜಕಾರ್ತ
ಜುಲೈ 20ರಿಂದ 26ರವರೆಗೆ ನಡೆಯುತ್ತಿರುವ ಈ ಮಹಾಸಭೆಯ ವಿಷಯ: "ಸಿನೋಡಲ್ ಪರಿವರ್ತನೆಗೆ ಕರೆ ಮತ್ತು ಏಷ್ಯಾದಲ್ಲಿ ಸೇತುವೆಗಳು ಹಾಗೂ ಸೇತುವೆ ನಿರ್ಮಿಸುವವರಾಗುವ ಧರ್ಮಪ್ರಚಾರ." ಈ ಮಹಾಸಭೆಯಲ್ಲಿ FABCಯ 22 ಸದಸ್ಯ ಧರ್ಮಾಧ್ಯಕ್ಷರ ಸಮ್ಮೇಳನಗಳು ಮತ್ತು ಧಾರ್ಮಿಕ ಆಡಳಿತ ಘಟಕಗಳ ಪ್ರತಿನಿಧಿಗಳು ಭಾಗವಹಿಸಿದ್ದಾರೆ.
ಏಷ್ಯಾದ ವೈವಿಧ್ಯಮಯ ಸಾಂಸ್ಕೃತಿಕ ಮತ್ತು ಧಾರ್ಮಿಕ ಸಂದರ್ಭಗಳಲ್ಲಿ ಸ್ಥಳೀಯ ಧರ್ಮಸಭೆಗಳು ಸಿನೋಡಲ್ ಪಯಣವನ್ನು ಹೇಗೆ ಆಳಗೊಳಿಸಬಹುದು ಹಾಗೂ ಸಂವಾದ, ಸೌಹಾರ್ದತೆ ಮತ್ತು ಧರ್ಮಪ್ರಚಾರವನ್ನು ಹೇಗೆ ಬಲಪಡಿಸಬಹುದು ಎಂಬುದರ ಕುರಿತು ಪ್ರತಿನಿಧಿಗಳು ಚಿಂತನೆ ನಡೆಸುತ್ತಿದ್ದಾರೆ.
1970ರಲ್ಲಿ ಜಗದ್ಗುರು ಸಂತ 4ನೆ ಪೌಲ್ ಅವರು ಮನಿಲಾಗೆ ಭೇಟಿ ನೀಡಿದ ಸಂದರ್ಭದಲ್ಲಿ ಏಷ್ಯಾದ ಧರ್ಮಾಧ್ಯಕ್ಷರ ಸಭೆಯ ನಂತರ FABC ಸ್ಥಾಪನೆಯಾಯಿತು. ಅಂದಿನಿಂದ ದಕ್ಷಿಣ, ಆಗ್ನೇಯ, ಪೂರ್ವ ಮತ್ತು ಮಧ್ಯ ಏಷ್ಯಾದ ಸ್ಥಳೀಯ ಧರ್ಮಸಭೆಗಳ ನಡುವಿನ ಸಹಕಾರವನ್ನು ಉತ್ತೇಜಿಸುತ್ತಾ, ಶುಭಸಂದೇಶ ಪ್ರಚಾರ, ಅಂತರಧರ್ಮೀಯ ಸಂವಾದ, ದೇವತಾಶಾಸ್ತ್ರೀಯ ಚಿಂತನೆ ಮತ್ತು ಸಾಮಾಜಿಕ ಸೇವೆಯನ್ನು ಬೆಳೆಸಿಕೊಂಡು ಬಂದಿದೆ.
ಉದ್ಘಾಟನಾ ಪತ್ರಿಕಾಗೋಷ್ಠಿಯಲ್ಲಿ ರೇಡಿಯೋ ವೆರಿತಾಸ್ ಏಷ್ಯಾಗೆ ನೀಡಲಾದ ಮಾಹಿತಿಯ ಪ್ರಕಾರ, ಈ ಮಹಾಸಭೆಯನ್ನು ಕೇವಲ ಸಮ್ಮೇಳನವಲ್ಲ, ಸಿನೋಡಲ್ ಅನುಭವವಾಗಿ ರೂಪಿಸಲಾಗಿದೆ. ಪ್ರತಿನಿಧಿಗಳು ಪ್ರಾರ್ಥನೆ, "ಪವಿತ್ರಾತ್ಮರಲ್ಲಿ ಸಂವಾದ" (Conversations in the Spirit), ಪ್ರಾದೇಶಿಕ ಸಭೆಗಳು ಹಾಗೂ ಗುಂಪು ಚರ್ಚೆಗಳಲ್ಲಿ ಭಾಗವಹಿಸಲಿದ್ದಾರೆ. ಬಡತನ, ವಲಸೆ, ಸಂಘರ್ಷ ಮತ್ತು ಸೃಷ್ಟಿಯ ಸಂರಕ್ಷಣೆ ಮೊದಲಾದ ಧಾರ್ಮಿಕ ಸವಾಲುಗಳ ಕುರಿತು ಅವರು ಚಿಂತನೆ ನಡೆಸಲಿದ್ದಾರೆ.
ಸಂವಾದದ ಮೂಲಕ ಸೇತುವೆಗಳ ನಿರ್ಮಾಣ
ಉದ್ಘಾಟನಾ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾರ್ಡಿನಲ್ ಫಿಲಿಪೆ ನೆರಿ ಫೆರಾವೊ, ಗೋವಾ ಮತ್ತು ದಮನ್ ಮಹಾಧರ್ಮಾಧ್ಯಕ್ಷರು ಹಾಗೂ FABC ಅಧ್ಯಕ್ಷರು, ಏಷ್ಯಾದ ಅನೇಕ ಭಾಗಗಳಲ್ಲಿ ಅಲ್ಪಸಂಖ್ಯಾತರಾಗಿ ಬದುಕುತ್ತಿರುವ ಕ್ರೈಸ್ತರ ಪರಿಸ್ಥಿತಿಯನ್ನು ಕುರಿತು ಚಿಂತನೆ ಹಂಚಿಕೊಂಡರು. "ತನ್ನ ಇತಿಹಾಸದುದ್ದಕ್ಕೂ ಧರ್ಮಸಭೆಯು ಯಾವಾಗಲೂ ಸವಾಲಿನ ಪರಿಸ್ಥಿತಿಗಳನ್ನು ಎದುರಿಸಿದೆ,” ಎಂದು ಅವರು ಹೇಳಿದರು.
ಭಯದಿಂದ ಪ್ರತಿಕ್ರಿಯಿಸುವ ಬದಲು, ಸಂಬಂಧಗಳನ್ನು ಬೆಳೆಸಲು, ಸಂವಾದವನ್ನು ಉತ್ತೇಜಿಸಲು ಹಾಗೂ ಸೌಹಾರ್ದತೆಯನ್ನು ನಿರ್ಮಿಸಲು ಧರ್ಮಸಭೆಗೆ ಕರೆ ಇದೆ ಎಂದು ಅವರು ಹೇಳಿದರು. ಈ ಧರ್ಮಪ್ರಚಾರವು ಜನರು, ಸಂಸ್ಕೃತಿಗಳು ಮತ್ತು ಧರ್ಮಗಳ ನಡುವೆ ಸೇತುವೆ ನಿರ್ಮಿಸುವವರಾಗಲು ಕ್ರೈಸ್ತರನ್ನು ಆಹ್ವಾನಿಸುತ್ತದೆ ಎಂದು ಅವರು ಒತ್ತಿಹೇಳಿದರು.
ಫಿಲಿಪ್ಪೀನ್ಸ್‌ನ ಕಲೂಕಾನ್ ಧರ್ಮಾಧ್ಯಕ್ಷರು ಹಾಗೂ FABC ಉಪಾಧ್ಯಕ್ಷರಾದ ಕಾರ್ಡಿನಲ್ ಪಾಬ್ಲೊ ವರ್ಜಿಲಿಯೋ ಡೇವಿಡ್ ಕೂಡ ಇದೇ ಕರೆಯನ್ನು ಪುನರುಚ್ಚರಿಸಿದರು. “ವೈರತ್ವದ ಪರಿಸ್ಥಿತಿಗಳಿಗೆ ನಮ್ಮ ಉತ್ತರವು ರಕ್ಷಣಾತ್ಮಕ ಗೋಡೆಗಳನ್ನು ನಿರ್ಮಿಸುವುದಲ್ಲ; ಬದಲಾಗಿ ಸಂವಾದದ ಸೇತುವೆಗಳನ್ನು ನಿರ್ಮಿಸುವುದಾಗಿದೆ” ಎಂದು ಅವರು ಹೇಳಿದರು.
ಅನೇಕ ಕ್ರೈಸ್ತ ಸಮುದಾಯಗಳು ಸಾಮಾಜಿಕ ಉದ್ವಿಗ್ನತೆಗಳ ಮಧ್ಯೆ "ಸಣ್ಣ ಹಿಂಡು"ಗಿ ಬದುಕುತ್ತಿವೆ ಎಂದು ಅವರು ಹೇಳಿದರು. ಸಂವಾದವು ಪ್ರತಿಯೊಬ್ಬ ವ್ಯಕ್ತಿಯ ಘನತೆಯನ್ನು ಗುರುತಿಸುವುದರಿಂದ ಹಾಗೂ ಸಾಮಾನ್ಯ ಹಿತವನ್ನು ಅರಸುವುದರಿಂದ ಆರಂಭವಾಗುತ್ತದೆ ಎಂದು ಅವರು ತಿಳಿಸಿದರು.
ಸ್ಥಳೀಯ ಸಮುದಾಯಗಳಿಂದ ಆರಂಭವಾಗುವ ಸಿನೋಡಲ್ ಪಯಣ
ಉದ್ಘಾಟನಾ ದಿನವು ಪವಿತ್ರ ಸಂಸ್ಕಾರದ ಆಚರಣೆಯೊಂದಿಗೆ ಮುಕ್ತಾಯಗೊಂಡಿತು. ಇದರ ಅಧ್ಯಕ್ಷತೆಯನ್ನು ಟೋಕಿಯೊ ಮಹಾಧರ್ಮಾಧ್ಯಕ್ಷರು ಹಾಗೂ FABC ಪ್ರಧಾನ ಕಾರ್ಯದರ್ಶಿಯಾದ ಕಾರ್ಡಿನಲ್ ಟಾರ್ಸಿಸಿಯೋ ಇಸಾವೊ ಕಿಕುಚಿ, SVD ವಹಿಸಿದ್ದರು. ತಮ್ಮ ಪ್ರಬೋಧನೆಯಲ್ಲಿ, ಇಂಡೋನೇಷ್ಯಾದ ಫ್ಲೊರೆಸ್ ದ್ವೀಪದ ಎಂಡೆ ಪ್ರದೇಶದಲ್ಲಿರುವ ಒಂದು ಸಣ್ಣ ಸಾವಯವ ಕೃಷಿ ಸಮುದಾಯಕ್ಕೆ ತಾವು ಇತ್ತೀಚೆಗೆ ನೀಡಿದ ಭೇಟಿಯನ್ನು ಅವರು ಸ್ಮರಿಸಿದರು. ಆ ಸಮುದಾಯವು ಸಿನೋಡಲ್ ಜೀವನದ ಜೀವಂತ ಮಾದರಿಯಾಗಿದೆ ಎಂದು ಅವರು ಹೇಳಿದರು.
“ಭರವಸೆಯು ನಾವು ಖರೀದಿಸಬಹುದಾದ ಅಥವಾ ಇತರರಿಗೆ ನೀಡಬಹುದಾದ ವಸ್ತುವಲ್ಲ. ಒಬ್ಬರನ್ನೊಬ್ಬರು ನಿಜವಾಗಿ ಕಾಳಜಿಯಿಂದ ನೋಡಿಕೊಳ್ಳುವ ಜನರನ್ನು ನಾವು ಭೇಟಿಯಾದಾಗ ಭರವಸೆ ಹುಟ್ಟುತ್ತದೆ” ಎಂದು ಅವರು ಹೇಳಿದರು. ಕರಿತಸ್ ಇಂಟರ್‌ನ್ಯಾಷನಾಲಿಸ್ ಅಧ್ಯಕ್ಷರಾಗಿದ್ದ ತಮ್ಮ ಅನುಭವವನ್ನು ಉಲ್ಲೇಖಿಸಿದ ಅವರು, ಸಿನೋಡಲ್ ಪಯಣವು ಕೇವಲ ಒಂದು ಸೈದ್ಧಾಂತಿಕ ಕಲ್ಪನೆಯಲ್ಲ; ಅದು ಶುಭಸಂದೇಶವನ್ನು ಒಟ್ಟಾಗಿ ಬದುಕುವ ಜೀವನಶೈಲಿಯಾಗಿದೆ ಎಂದು ಆ ಸಮುದಾಯವು ತೋರಿಸಿದೆ ಎಂದರು.
“ನಾವು ಇಡೀ ಲೋಕವನ್ನು ಒಂದೇ ಬಾರಿಗೆ ಬದಲಾಯಿಸಲು ಸಾಧ್ಯವಿಲ್ಲ. ನಾವು ಸಣ್ಣ ಸಮುದಾಯಗಳಿಂದಲೇ ಆರಂಭಿಸಬೇಕು” ಎಂದು ಅವರು ಹೇಳಿದರು.
ಏಷ್ಯಾದ ಧರ್ಮಸಭೆಗೆ ಪ್ರಾಯೋಗಿಕ ಮಾರ್ಗ
ಮಹಾಸಭೆಯ ವಕ್ತಾರರಾದ ಫಿಲಿಪ್ಪೀನ್ಸ್‌ನ ಸಾನ್ ಪಾಬ್ಲೊ ಧರ್ಮಾಧ್ಯಕ್ಷರಾದ ಮಾರ್ಸೆಲಿನೊ ಅಂಟೋನಿಯೊ ‘ಜೂನಿ’ ಮರಾಲಿತ್ ಜೂನಿಯರ್ ಅವರು, ಈ ಮಹಾಸಭೆಯು ಧರ್ಮಸಭೆಯ ವಿಶಾಲ ಸಿನೋಡಲ್ ಪಯಣದ ಭಾಗವಾಗಿದೆ ಎಂದು ಹೇಳಿದರು.
FABCಯ 50ನೇ ಮಹಾಸಮ್ಮೇಳನ, 2023ರ ಬ್ಯಾಂಕಾಕ್ ದಾಖಲೆ, ಸಿನೋಡಲ್ ಪಯಣ ಕುರಿತ ಮಹಾಸಭೆಯ ಅಂತಿಮ ದಾಖಲೆ, 2025ರ ಭರವಸೆಯ ಜುಬಿಲಿ ವರ್ಷ, ಹಾಗೂ ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರ ಪದವಿಯ ಆರಂಭವನ್ನು ಅವರು ಈ ಪಯಣದ ಪ್ರಮುಖ ಮೈಲಿಗಲ್ಲುಗಳೆಂದು ಉಲ್ಲೇಖಿಸಿದರು. ಏಷ್ಯಾದ ಧರ್ಮಸಭೆಯು ಒಟ್ಟಾಗಿ ಪ್ರಾರ್ಥಿಸಲು, ಕಾಲದ ಸಂಕೇತಗಳನ್ನು ವಿವೇಚಿಸಲು ಹಾಗೂ ಶುಭಸಂದೇಶವನ್ನು ಸಾರುವ ಹೊಸ ಮಾರ್ಗಗಳನ್ನು ಕಂಡುಕೊಳ್ಳಲು ಈ ಮಹಾಸಭೆಯು ಸಹಕಾರಿಯಾಗಲಿದೆ ಎಂದು ಅವರು ಹೇಳಿದರು.
ರೇಡಿಯೋ ವೆರಿತಾಸ್ ಏಷ್ಯಾಗೆ ನೀಡಿದ ಮಾಹಿತಿಯ ಪ್ರಕಾರ, ಮಹಾಸಭೆಯು ಎರಡು ಪ್ರಮುಖ ಅಂತಿಮ ದಾಖಲೆಗಳನ್ನು ಪ್ರಕಟಿಸುವ ನಿರೀಕ್ಷೆಯಿದೆ. ಮೊದಲನೆಯದು, ಸ್ಥಳೀಯ ಧರ್ಮಸಭೆಗಳಿಗೆ ಮಾರ್ಗದರ್ಶನ ನೀಡುವ "ಏಷ್ಯಾದಲ್ಲಿನ ಸಿನೋಡಲ್ ಪಯಣದ ಕೈಪಿಡಿ (Vademecum)" ಹಾಗೂ ಎರಡನೆಯದು, ಸಿನೋಡಲ್ ನವೀಕರಣದ ಪಯಣವನ್ನು ಮುಂದುವರಿಸಲು ಕಥೋಲಿಕರನ್ನು ಉತ್ತೇಜಿಸುವ "ಏಷ್ಯಾದ ಧರ್ಮಸಭೆಗೆ ಸಂದೇಶ."
ಈ ಕಾರ್ಯಕ್ರಮದಲ್ಲಿ ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರ ವಿಶೇಷ ಪ್ರತಿನಿಧಿಯಾಗಿ ಕಾರ್ಡಿನಲ್ ಆಸ್ವಾಲ್ಡ್ ಗ್ರಾಸಿಯಾಸ್ ಭಾಗವಹಿಸಲಿದ್ದಾರೆ. ಕಾರ್ಡಿನಲ್ ಲೂಯಿಸ್ ಅಂಟೋನಿಯೊ ಟಾಗ್ಲೆ ಅವರ ನೇತೃತ್ವದಲ್ಲಿ ಧ್ಯಾನದ ದಿನ ನಡೆಯಲಿದ್ದು, ಕಾರ್ಡಿನಲ್ ಮಾರಿಯೊ ಗ್ರೆಕ್ ಅವರು ಸಿನೋಡಲ್ ಪಯಣದ ಅನುಷ್ಠಾನದ ಕುರಿತು ಮುಖ್ಯ ಭಾಷಣ ಮಾಡಲಿದ್ದಾರೆ. ಅಲ್ಲದೆ, ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರ ವೀಡಿಯೊ ಸಂದೇಶವೂ ಪ್ರಸಾರವಾಗಲಿದೆ.
ಜುಲೈ 26ರಂದು ಜಕಾರ್ತದ ಕನ್ಯಾ ಮರಿಯಮ್ಮನವರ ಸ್ವರ್ಗಾರೋಹಣ ಪ್ರಧಾನ ದೇವಾಲಯದಲ್ಲಿ ಅರ್ಪಿಸಲಾಗುವ ಪವಿತ್ರ ಸಂಸ್ಕಾರದ ಆಚರಣೆಯೊಂದಿಗೆ ಮಹಾಸಭೆಯು ಸಮಾಪ್ತಿಗೊಳ್ಳಲಿದೆ. ಬಳಿಕ ಪ್ರತಿನಿಧಿಗಳು ಪ್ರಧಾನ ದೇವಾಲಯವನ್ನು ಪಕ್ಕದಲ್ಲಿರುವ ಇಸ್ತಿಕ್ಲಾಲ್ ಮಸೀದಿಗೆ ಸಂಪರ್ಕಿಸುವ "ಸ್ನೇಹ ಸುರಂಗ"ದ ಮೂಲಕ ಒಟ್ಟಾಗಿ ನಡೆಯಲಿದ್ದಾರೆ. ಇದು ಇಂಡೋನೇಷ್ಯಾದ ಅಂತರಧರ್ಮೀಯ ಸೌಹಾರ್ದತೆಯ ಬದ್ಧತೆಯ ಸಂಕೇತವಾಗಿದೆ.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).