ಹುಡುಕಿ

ನೈರೋಬಿಯಲ್ಲಿ ನಡೆಯುತ್ತಿರುವ AMECEA ಮಹಾಸಭೆಯಲ್ಲಿ ಪ್ರಮುಖ ಕೇಂದ್ರಬಿಂದುವಾಗಿರುವ  ಯುವಜನರು ನೈರೋಬಿಯಲ್ಲಿ ನಡೆಯುತ್ತಿರುವ AMECEA ಮಹಾಸಭೆಯಲ್ಲಿ ಪ್ರಮುಖ ಕೇಂದ್ರಬಿಂದುವಾಗಿರುವ ಯುವಜನರು 

ಪೂರ್ವ ಆಫ್ರಿಕಾದಲ್ಲಿ ನೈತಿಕ ಹೂಡಿಕೆಗೆ ಧರ್ಮಸಭೆಯ ನಾಯಕರ ಕರೆ

ನೈರೋಬಿಯಲ್ಲಿ ನಡೆಯುತ್ತಿರುವ AMECEAಯ 21ನೇ ಮಹಾಸಭೆಗೆ ಮುನ್ನ, “ಲೌದಾತೋ ಸಿ' ಆಫ್ರಿಕಾ ಆಂದೋಲನ”ವು ಪೂರ್ವ ಆಫ್ರಿಕಾದ ಸದಸ್ಯ ಧರ್ಮಾಧ್ಯಕ್ಷರ ಸಮ್ಮೇಳನಗಳ ಸಭೆಯ (AMECEA) ಸಹಯೋಗದಲ್ಲಿ “ಕಥೋಲಿಕರಿಗಾಗಿ ನೈತಿಕ ಹೂಡಿಕೆ” ಕುರಿತ ಕಾರ್ಯತಂತ್ರದ ಸಮಾಲೋಚನಾ ಕಾರ್ಯಾಗಾರವನ್ನು ಆಯೋಜಿಸಿತು. ಇದರ ಅಂತ್ಯದಲ್ಲಿ ಪ್ರಕಟವಾದ ‘ನೈರೋಬಿ ಘೋಷಣೆ’ಯು ನೈತಿಕ ಹೂಡಿಕೆ, ಸೃಷ್ಟಿಯ ಸಂರಕ್ಷಣೆ ಹಾಗೂ ಯುವಜನರ ಹೆಚ್ಚಿನ ಪಾಲ್ಗೊಳ್ಳುವಿಕೆಗೆ ಕರೆ ನೀಡಿದೆ.

ವ್ಯಾಟಿಕನ್ ವರದಿ

ನೈರೋಬಿಯಲ್ಲಿ AMECEA (ಪೂರ್ವ ಆಫ್ರಿಕಾದ ಸದಸ್ಯ ಧರ್ಮಾಧ್ಯಕ್ಷರ ಸಮ್ಮೇಳನಗಳ ಸಭೆಯ 21ನೇ ಮಹಾಸಭೆ ಆರಂಭವಾಗುತ್ತಿರುವ ಸಂದರ್ಭದಲ್ಲಿ, ಕಥೋಲಿಕ ನೈತಿಕ ಹೂಡಿಕೆ ಕುರಿತ ಸಮಾಲೋಚನೆಯಲ್ಲಿ ಭಾಗವಹಿಸಿದ್ದ ಪ್ರತಿನಿಧಿಗಳು ‘ನೈರೋಬಿ ಘೋಷಣೆ’ಯನ್ನು ಮಂಡಿಸಿದರು. ಧರ್ಮಸಭೆಯ ಹಣಕಾಸಿನ ನಿರ್ಧಾರಗಳು ಕಥೋಲಿಕ ಸಾಮಾಜಿಕ ಬೋಧನೆ, ಸೃಷ್ಟಿಯ ಸಂರಕ್ಷಣೆ ಹಾಗೂ ಸಾರ್ವಜನಿಕ ಹಿತಾಸಕ್ತಿಯನ್ನು ಪ್ರತಿಬಿಂಬಿಸಬೇಕು ಎಂದು ಈ ಘೋಷಣೆ ಒತ್ತಾಯಿಸುತ್ತದೆ.

ಈ ಘೋಷಣೆಯು ಜುಲೈ 17ರಂದು ಕೀನ್ಯಾದ ರಾಜಧಾನಿ ನೈರೋಬಿಯಲ್ಲಿ ನಡೆದ “ಕಥೋಲಿಕರಿಗಾಗಿ ನೈತಿಕ ಹೂಡಿಕೆ” ಕುರಿತ ಕಾರ್ಯತಂತ್ರದ ಸಮಾಲೋಚನೆಯ ಫಲಿತಾಂಶವಾಗಿದೆ. “ಲೌದಾತೋ ಸಿ' ಆಫ್ರಿಕಾ ಆಂದೋಲನ”ದ ಸಹಯೋಗದಲ್ಲಿ ನಡೆದ ಈ ಸಭೆಯಲ್ಲಿ ಧರ್ಮಾಧ್ಯಕ್ಷರು, ಧರ್ಮಗುರುಗಳು, ದೈವ ಸೇವಕ-ಸೇವಕಿಯರು, ಸಾಮಾನ್ಯ ವಿಶ್ವಾಸಿ ತಜ್ಞರು ಹಾಗೂ ನಾಗರಿಕ ಸಮಾಜದ ಪ್ರತಿನಿಧಿಗಳು ಭಾಗವಹಿಸಿದ್ದರು. ಈ ದಾಖಲೆಯನ್ನು, “ಯುವಜನರೊಂದಿಗೆ AMECEAಯ ಸಿನೋಡಲ್ ಪಯಣ: ಐಕ್ಯತೆ, ಭರವಸೆ, ನ್ಯಾಯ ಮತ್ತು ಉತ್ತಮ ಆಡಳಿತದ ಸೇತುವೆಗಳನ್ನು ನಿರ್ಮಿಸುವುದು” ಎಂಬ ವಿಷಯದಡಿ ನಡೆಯುತ್ತಿರುವ AMECEA ಮಹಾಸಭೆಗೆ ತಮ್ಮ ಕೊಡುಗೆಯಾಗಿ ಅವರು ಸಲ್ಲಿಸಿದರು.

ನೈತಿಕ ಹೂಡಿಕೆ – ಕ್ರೈಸ್ತ ಸಾಕ್ಷ್ಯದ ಭಾಗ

ಧರ್ಮಸಭೆಯ ಸಂಪನ್ಮೂಲಗಳ ಜವಾಬ್ದಾರಿಯುತ ನಿರ್ವಹಣೆ ಕ್ರೈಸ್ತ ಸಾಕ್ಷ್ಯದ ಅವಿಭಾಜ್ಯ ಅಂಗವಾಗಿದೆ ಎಂದು ಭಾಗವಹಿಸಿದವರು ತಿಳಿಸಿದರು. “ಧರ್ಮಸಭೆಯ ಹೆಸರಿನಲ್ಲಿ ಮಾಡಲಾಗುವ ಯಾವುದೇ ಹೂಡಿಕೆಯೂ ನೈತಿಕವಾಗಿ ತಟಸ್ಥವಾಗಿರುವುದಿಲ್ಲ” ಎಂದು ಅವರು ಸ್ಪಷ್ಟಪಡಿಸಿದರು.

ಕಥೋಲಿಕ ಧರ್ಮಕ್ಷೇತ್ರಗಳು, ಕ್ರೈಸ್ತ ಸಭೆಗಳು, ಶಾಲೆಗಳು, ನಿವೃತ್ತಿ ವೇತನ ನಿಧಿಗಳು ಹಾಗೂ ಇತರ ಸಂಸ್ಥೆಗಳು ತಮ್ಮ ಹೂಡಿಕೆ ನೀತಿಗಳನ್ನು ಮಾನವ ಘನತೆ, ಸೃಷ್ಟಿಯ ಸಂರಕ್ಷಣೆ ಮತ್ತು ಸಾರ್ವಜನಿಕ ಹಿತಾಸಕ್ತಿಯ ಬೆಳಕಿನಲ್ಲಿ ಮರುಪರಿಶೀಲಿಸಬೇಕು ಎಂದು ಅವರು ಕರೆ ನೀಡಿದರು.

ಸಂಸ್ಥೆಗಳ ಹೂಡಿಕೆ ಕ್ರಮಗಳು ಮತ್ತು ಸಹಭಾಗಿತ್ವಗಳ ಕುರಿತು ಹೆಚ್ಚಿನ ವಿವೇಚನೆಯ ಅಗತ್ಯವಿದೆ ಎಂದು ಘೋಷಣೆ ತಿಳಿಸುತ್ತದೆ. ಪರಿಸರ ಸ್ನೇಹಿ ಎಂಬ ಸುಳ್ಳು ಪ್ರಚಾರವನ್ನು (Greenwashing) ತಡೆಯುವ ಕ್ರಮಗಳ ಜೊತೆಗೆ, ಅಗತ್ಯವಿರುವಲ್ಲಿ ಜೈವಿಕ ಇಂಧನ ಕ್ಷೇತ್ರಗಳಿಂದ ಹೂಡಿಕೆಯನ್ನು ಹಿಂತೆಗೆದು, ನವೀಕರಿಸಬಹುದಾದ ಇಂಧನ ಹಾಗೂ ಸ್ಥಳೀಯ ಸಮುದಾಯಗಳನ್ನು ಬಲಪಡಿಸುವ ಯೋಜನೆಗಳಲ್ಲಿ ಮರುಹೂಡಿಕೆ ಮಾಡುವುದನ್ನೂ ಪರಿಗಣಿಸಬೇಕು ಎಂದು ಅದು ಶಿಫಾರಸು ಮಾಡುತ್ತದೆ.

‘ಲೌದಾತೋ ಸಿ'’ ವಿಶ್ವಪತ್ರಿಕೆಯಲ್ಲಿ ಬೇರೂರಿದ ದೃಷ್ಟಿಕೋನ

ಈ ದಾಖಲೆಯು ಪೂಜ್ಯ ಜಗದ್ಗುರುಗಳಾದ ಫ್ರಾನ್ಸಿಸ್ ಅವರ ಲೌದಾತೋ ಸಿ' ವಿಶ್ವಪತ್ರಿಕೆಯನ್ನು ವ್ಯಾಪಕವಾಗಿ ಉಲ್ಲೇಖಿಸುತ್ತದೆ. “ಎಲ್ಲವೂ ಪರಸ್ಪರ ಸಂಬಂಧ ಹೊಂದಿವೆ” ಎಂಬ ಅದರ ಸಂದೇಶವನ್ನು ನೆನಪಿಸುತ್ತಾ, “ಭೂಮಿಯ ಕೂಗು ಮತ್ತು ಬಡವರ ಕೂಗು ಎರಡನ್ನೂ ಆಲಿಸಬೇಕು” ಎಂಬ ಅಗತ್ಯವನ್ನು ಒತ್ತಿ ಹೇಳುತ್ತದೆ. ಅದೇ ರೀತಿ, ಆಫ್ರಿಕಾ ಮತ್ತು ಮಡಗಾಸ್ಕರ್ ಧರ್ಮಾಧ್ಯಕ್ಷರ ಸಮ್ಮೇಳನಗಳ ಒಕ್ಕೂಟ (SECAM)ದ ಇತ್ತೀಚಿನ ಹೇಳಿಕೆಗಳು, COP30 ಶೃಂಗಸಭೆಗೆ ಮುನ್ನ ಸಿದ್ಧಪಡಿಸಲಾದ ಸಂದೇಶಗಳು ಹಾಗೂ ಹವಾಮಾನ ವ್ಯವಸ್ಥೆಗೆ ಗಂಭೀರ ಹಾನಿಯಾಗದಂತೆ ತಡೆಯುವಲ್ಲಿ ರಾಷ್ಟ್ರಗಳ ಕರ್ತವ್ಯಗಳ ಕುರಿತು 2025ರಲ್ಲಿ ಅಂತರರಾಷ್ಟ್ರೀಯ ನ್ಯಾಯಾಲಯ ನೀಡಿದ ಸಲಹಾ ಅಭಿಪ್ರಾಯವನ್ನೂ ಈ ದಾಖಲೆಯು ಉಲ್ಲೇಖಿಸುತ್ತದೆ.

ಪರಿಸರ ಪರಿವರ್ತನೆ ಹಾಗೂ ಭವಿಷ್ಯದ ಪೀಳಿಗೆಗಳ ಬಗ್ಗೆ ಕಾಳಜಿ – ಇವೆರಡೂ ಬೇರ್ಪಡಿಸಲಾಗದ ವಿಷಯಗಳಾಗಿದ್ದು, ಸೃಷ್ಟಿಯ ಸಂರಕ್ಷಣೆ ಧರ್ಮಸಭೆಯ ಧರ್ಮಪ್ರಚಾರದ ಅವಿಭಾಜ್ಯ ಅಂಗವಾಗಿದೆ ಎಂದು ಭಾಗವಹಿಸಿದವರು ಹೇಳಿದರು.

ಪೂರ್ವ ಆಫ್ರಿಕಾದ ಸವಾಲುಗಳು ಮತ್ತು ನ್ಯಾಯಸಮ್ಮತ ಪರಿವರ್ತನೆ

ಪೂರ್ವ ಆಫ್ರಿಕಾದ ಪರಿಸ್ಥಿತಿಯನ್ನು ಅವಲೋಕಿಸಿರುವ ಈ ಘೋಷಣೆಯು, ಆಫ್ರಿಕಾದ ಅನೇಕ ಸಮುದಾಯಗಳು ಇಂದಿಗೂ ಇಂಧನದ ಕೊರತೆಯನ್ನು ಎದುರಿಸುತ್ತಿರುವುದರ ಜೊತೆಗೆ, ಹವಾಮಾನ ಬದಲಾವಣೆಯಿಂದ ಉಂಟಾಗುತ್ತಿರುವ ಬರ, ಪ್ರವಾಹ ಹಾಗೂ ಸ್ಥಳಾಂತರದ ದುಷ್ಪರಿಣಾಮಗಳನ್ನೂ ಅನುಭವಿಸುತ್ತಿವೆ ಎಂದು ತಿಳಿಸಿದೆ. ಈ ಹಿನ್ನೆಲೆಯಲ್ಲಿ, ನವೀಕರಿಸಬಹುದಾದ ಇಂಧನ, ಸಮುದಾಯಗಳ ಸ್ಥೈರ್ಯ ಹಾಗೂ ಘನತೆಯುತ ಉದ್ಯೋಗಾವಕಾಶಗಳನ್ನು ಉತ್ತೇಜಿಸುವ ಅಭಿವೃದ್ಧಿಯ ಮಾರ್ಗಗಳನ್ನು ಅನುಸರಿಸುವಂತೆ ಅದು ಕರೆ ನೀಡಿದೆ. ಪರಿಸರ ಹಾನಿಯ ಮೂಲ ಕಾರಣಗಳನ್ನು ಪರಿಹರಿಸದ “ಸುಳ್ಳು ಪರಿಹಾರಗಳ” ಬಗ್ಗೆ ಎಚ್ಚರಿಕೆಯನ್ನೂ ನೀಡಿದೆ.

ಇದರೊಂದಿಗೆ ಪ್ರಕಟಿಸಲಾದ ಪತ್ರಿಕಾ ಪ್ರಕಟಣೆಯಲ್ಲಿ, ಕಥೋಲಿಕ ಸಾಮಾಜಿಕ ಬೋಧನೆ ಹಾಗೂ ಧರ್ಮಸಭೆಯ ವಿಶ್ವಾಸಕ್ಕೆ ಅನುಗುಣವಾದ ಹೂಡಿಕೆ ನೀತಿಗಳು ಪೂರ್ವ ಆಫ್ರಿಕಾದ ಕಥೋಲಿಕ ಸಂಸ್ಥೆಗಳ ಹಣಕಾಸಿನ ನಿರ್ಧಾರಗಳಿಗೆ ಹೇಗೆ ಮಾರ್ಗದರ್ಶನ ನೀಡಬಹುದು ಎಂಬುದನ್ನು ಚರ್ಚಿಸಲಾಗಿದೆ ಎಂದು ತಿಳಿಸಲಾಗಿದೆ. ಅಲ್ಲದೆ, ಹೂಡಿಕೆ ನಿರ್ಧಾರಗಳ ಧಾರ್ಮಿಕ ಮತ್ತು ಸಾಮಾಜಿಕ ಪರಿಣಾಮಗಳು ಹಾಗೂ ದೊಡ್ಡ ಪ್ರಮಾಣದ ಗಣಿಗಾರಿಕೆ ಮತ್ತು ಸಂಪನ್ಮೂಲ ಶೋಷಣಾ ಯೋಜನೆಗಳಿಂದ ತೊಂದರೆಗೊಳಗಾದ ಸಮುದಾಯಗಳ ಅನುಭವಗಳನ್ನೂ ಪ್ರತಿನಿಧಿಗಳು ಆಲಿಸಿದರು.

ಯುವಜನರೇ ಕೇಂದ್ರಬಿಂದು

AMECEA ಮಹಾಸಭೆಯ ವಿಷಯಕ್ಕೆ ಅನುಗುಣವಾಗಿ, ಈ ಘೋಷಣೆಯು ಯುವಜನರ ಪಾತ್ರಕ್ಕೆ ವಿಶೇಷ ಒತ್ತು ನೀಡುತ್ತದೆ. ಇಂದಿನ ಪರಿಸರ ಸವಾಲುಗಳಿಗೆ ಪರಿಣಾಮಕಾರಿಯಾಗಿ ಸ್ಪಂದಿಸಲು, ಧರ್ಮಪ್ರಾಂತ್ಯಗಳ ನಿರ್ಧಾರ ಪ್ರಕ್ರಿಯೆಯಲ್ಲಿ ಯುವಜನರ ಹೆಚ್ಚಿನ ಪಾಲ್ಗೊಳ್ಳುವಿಕೆ, ನೈತಿಕ ಹೂಡಿಕೆ ಹಾಗೂ ಪರಿಸರ ಸಂರಕ್ಷಣೆ ಕುರಿತ ತರಬೇತಿ ಮತ್ತು ಯುವಜನರ ನೇತೃತ್ವದ ನವೀಕರಿಸಬಹುದಾದ ಇಂಧನ ಯೋಜನೆಗಳಿಗೆ ಬೆಂಬಲ ಅಗತ್ಯವೆಂದು ಅದು ತಿಳಿಸುತ್ತದೆ.

ಯುವಜನರೊಂದಿಗೆ ಐಕ್ಯತೆ, ಭರವಸೆ, ನ್ಯಾಯ ಮತ್ತು ಉತ್ತಮ ಆಡಳಿತದ ಸೇತುವೆಗಳನ್ನು ನಿರ್ಮಿಸುವುದೆಂದರೆ, ಧರ್ಮಸಭೆಯ ಆಡಳಿತದಲ್ಲಿ ಪಾರದರ್ಶಕತೆಯನ್ನು ಖಚಿತಪಡಿಸುವುದು ಹಾಗೂ ಸಮಗ್ರ ಪರಿಸರ ಸಂರಕ್ಷಣೆಯ ಧರ್ಮಸಭೆಯ ಧರ್ಮಪ್ರಚಾರದಲ್ಲಿ ಅವರ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವುದೂ ಆಗಿದೆ ಎಂದು ಘೋಷಣೆ ಹೇಳುತ್ತದೆ.

ಧರ್ಮಾಧ್ಯಕ್ಷರಿಗೆ ಮನವಿ

ಈ ಘೋಷಣೆಯ ಕೊನೆಯಲ್ಲಿ, AMECEAಯ 21ನೇ ಮಹಾಸಭೆಯಲ್ಲಿ ಭಾಗವಹಿಸಿರುವ ಧರ್ಮಾಧ್ಯಕ್ಷರು ಈ ದಾಖಲೆಯನ್ನು ಪ್ರದೇಶದ ಸಿನೋಡಲ್ ಪಯಣಕ್ಕೆ ಒಂದು ಮಹತ್ವದ ಕೊಡುಗೆಯಾಗಿ ಸ್ವೀಕರಿಸಬೇಕೆಂದು ಮನವಿ ಮಾಡಲಾಗಿದೆ. ಪೂರ್ವ ಆಫ್ರಿಕಾದಾದ್ಯಂತ ಇರುವ ಧರ್ಮಕ್ಷೇತ್ರಗಳು ಹಾಗೂ ಧರ್ಮಾಧ್ಯಕ್ಷರ ಸಮ್ಮೇಳನಗಳು ಅಳವಡಿಸಿಕೊಳ್ಳಬಹುದಾದ, ವಿಶ್ವಾಸಕ್ಕೆ ಅನುಗುಣವಾದ ಪ್ರಾದೇಶಿಕ ಹೂಡಿಕೆ ಮಾರ್ಗಸೂಚಿಗಳನ್ನು ರೂಪಿಸುವಂತೆ ಭಾಗವಹಿಸಿದವರು ಪ್ರೋತ್ಸಾಹಿಸಿದ್ದಾರೆ.

ಇದಲ್ಲದೆ, ಲೌದಾತೋ ಸಿ' ಕ್ರಿಯಾ ವೇದಿಕೆಯಲ್ಲಿ ಇನ್ನಷ್ಟು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಹಾಗೂ ಈ ಬದ್ಧತೆಗಳನ್ನು ಮಹಾಸಭೆಯ ಅಂತಿಮ ಸಂದೇಶದಲ್ಲಿ ಪ್ರತಿಬಿಂಬಿಸುವಂತೆ ಧರ್ಮಾಧ್ಯಕ್ಷರನ್ನು ಈ ದಾಖಲೆ ಕೋರಿದೆ. ನಮ್ಮ ಭೂಮಿಯ ಸಂರಕ್ಷಣೆ ಧರ್ಮಸಭೆಯ ಧರ್ಮಪ್ರಚಾರ, ಶುಭಸಂದೇಶ ಪ್ರಚಾರ ಮತ್ತು ಕ್ರೈಸ್ತ ಸಾಕ್ಷ್ಯದ ಅವಿಭಾಜ್ಯ ಭಾಗವಾಗಿದೆ ಎಂದು ಅದು ಪುನರುಚ್ಚರಿಸಿದೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

20 ಜುಲೈ 2026, 13:38