ಕಾರಕಾಸ್ ಧರ್ಮಕೇಂದ್ರದ ಧರ್ಮಗುರು: ಅನೇಕರು ಸುರಕ್ಷಿತವಲ್ಲದ ಮನೆಗಳಲ್ಲಿ ಬದುಕುವಂತಾಗಿದೆ
ಲೇಖಕರು: ಜೋಹಾನ್ ಪಚೆಕೊ
ಜೂನ್ 29ರ ಸೋಮವಾರ ಬೆಳಿಗ್ಗೆ, ಉತ್ತರ-ಮಧ್ಯ ಕಾರಕಾಸ್‌ನ ಸಾನ್ ಜೊಸೆ ಧರ್ಮಕೇಂದ್ರದ ಧರ್ಮಗುರು ವಂ. ಗುರು ಲೂಯಿಸ್ ಅಂಟೋನಿಯೊ ಗಾರ್ಸಿಯಾ ಥೋಮಸ್ ಅವರೊಂದಿಗೆ ಈ ಸಂದರ್ಶನ ಆರಂಭವಾಗುತ್ತಿದ್ದಂತೆಯೇ ಮತ್ತೊಂದು ಪ್ರಬಲ ಭೂಕಂಪನ ಸಂಭವಿಸಿತು.
"ಇದೀಗ ಕಾರಕಾಸ್‌ನಲ್ಲಿ ಮತ್ತೊಂದು ಭೂಕಂಪನವನ್ನು ಅನುಭವಿಸಿದ್ದೇವೆ," ಎಂದು ಅವರು ಹೇಳುತ್ತಾ, ಜೂನ್ 24ರಂದು ಸಂಭವಿಸಿದ ಭೂಕಂಪದ ನೆನಪಿನಿಂದ ಇನ್ನೂ ಆತಂಕದಲ್ಲಿದ್ದರು. ಆ ದುರಂತವು 1,400ಕ್ಕೂ ಹೆಚ್ಚು ಜನರ ಜೀವವನ್ನು ಬಲಿತೆಗೆದುಕೊಂಡಿದೆ.
"ಒಂದೆಡೆ ಪರಿಸ್ಥಿತಿ ಅತ್ಯಂತ ಹೃದಯವಿದ್ರಾವಕವಾಗಿದೆ. ಸುದ್ದಿಗಳಲ್ಲಿ ನೀವು ನೋಡಿದಂತೆ, ಲಾ ಗ್ವೈರಾದಲ್ಲಿನ ವಿನಾಶ ಭೀಕರವಾಗಿದೆ. 1999ರ ಭೂಕುಸಿತಕ್ಕಿಂತಲೂ ಇದು ಹೆಚ್ಚು ಭಯಾನಕವಾಗಿದೆ ಎಂದು ಹೇಳಬಹುದು. ಇಲ್ಲಿ ಕಾರಕಾಸ್‌ನಲ್ಲಿಯೂ ಇದರ ಪರಿಣಾಮಗಳು ತೀವ್ರವಾಗಿವೆ. ಅನೇಕ ಜನರ ಮನೆಗಳು ಈಗ ಸುರಕ್ಷಿತವಾಗಿಲ್ಲ. ಹಲವರು ತಮ್ಮ ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಯಾರೂ ಊಹಿಸದಂತಹ ಪರಿಸ್ಥಿತಿಯನ್ನು ನಾವು ಎದುರಿಸುತ್ತಿದ್ದೇವೆ," ಎಂದು ಅವರು ವ್ಯಾಟಿಕನ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಅದೇ ವೇಳೆ, ಧರ್ಮಸಭೆಯ ಪ್ರತಿಕ್ರಿಯೆಯನ್ನು ಅವರು ವಿಶೇಷವಾಗಿ ಪ್ರಸ್ತಾಪಿಸಿದರು. "ನಾವು ತಕ್ಷಣ ಸ್ಪಂದಿಸಲು ಸಾಧ್ಯವಾಯಿತು. ನಮ್ಮನ್ನು ನಾವು ಸಂಘಟಿಸಿಕೊಂಡೆವು. ಭರವಸೆಯ ಜುಬಿಲಿ ವರ್ಷದುದ್ದಕ್ಕೂ ನಾವು ಧ್ಯಾನಿಸಿದ, ಪ್ರಾರ್ಥಿಸಿದ ಹಾಗೂ ಪರಸ್ಪರ ಹಂಚಿಕೊಂಡ ಸಹಯಾತ್ರೆಯ ಮನೋಭಾವವನ್ನು ಕಾರ್ಯರೂಪಕ್ಕೆ ತರಲು ಇದರಿಂದ ಸಾಧ್ಯವಾಯಿತು ಎಂದು ನಾನು ನಂಬುತ್ತೇನೆ," ಎಂದು ಹೇಳಿದರು.
"ನಿಸ್ಸಂದೇಹವಾಗಿ ಇದು ದುರಂತದ ಘಟನೆಯಾಗಿದೆ. ನಮ್ಮ ದೇಶದ ಇತ್ತೀಚಿನ ಇತಿಹಾಸದಲ್ಲಿ, ವಿಶೇಷವಾಗಿ ಕಾರಕಾಸ್ ಮತ್ತು ಲಾ ಗ್ವೈರಾ ಒಳಗೊಂಡ ಮಹಾ ಕಾರಕಾಸ್ ಪ್ರದೇಶದಲ್ಲಿ, ಇಷ್ಟೊಂದು ತೀವ್ರತೆಯ ಭೂಕಂಪವನ್ನು ನಾವು ಎಂದಿಗೂ ಅನುಭವಿಸಿರಲಿಲ್ಲ. ಆದರೆ, ಇದೇ ಘಟನೆ ಧರ್ಮಸಭೆಯಾಗಿ ನಮ್ಮ ಸಾಮರ್ಥ್ಯವನ್ನು ಒಗ್ಗೂಡಿಸಲು ಸಹಾಯ ಮಾಡಿತು. ಕೇವಲ ಸಾಮಾಜಿಕ ನೆರವಿನಲ್ಲಷ್ಟೇ ಅಲ್ಲ, ಶುಭಸಂದೇಶ ಸಾರುವ ಕಾರ್ಯದಲ್ಲಿಯೂ ನಾವು ಸಕ್ರಿಯರಾಗಿದ್ದೇವೆ. ಸಂತ್ರಸ್ತರಿಗೆ ಆಧ್ಯಾತ್ಮಿಕ ಸಾಂತ್ವನ ನೀಡಲು, ಸಾರ್ವಜನಿಕ ಸ್ಥಳಗಳಲ್ಲಿ ಸೇರಿ ಪ್ರಾರ್ಥಿಸಲು, ಆರಾಧನೆ ಮತ್ತು ಧಾರ್ಮಿಕ ವಿಧಿವಿಧಾನಗಳನ್ನು ಆಚರಿಸಲು ನಮಗೆ ಸಾಧ್ಯವಾಯಿತು. ಅದು ನಮಗೆಲ್ಲರಿಗೂ ಸಾಂತ್ವನವನ್ನು ನೀಡಿದೆ."
ಪೂಜ್ಯ ಜಗದ್ಗುರು 14ನೇ ಲಿಯೋ ವ್ಯಕ್ತಪಡಿಸಿದ ಪ್ರಾರ್ಥನೆ ಮತ್ತು ಐಕಮತ್ಯದ ಕುರಿತು ಮಾತನಾಡಿದ ವಂ. ಗುರು ಗಾರ್ಸಿಯಾ, "ಅವು ನಮ್ಮೆಲ್ಲರಿಗೂ ಅಪಾರ ಧೈರ್ಯವನ್ನು ನೀಡಿವೆ. ಈ ದುರಂತದಿಂದ ಸಂಕಷ್ಟಕ್ಕೊಳಗಾದ ಜನರು ಧರ್ಮಸಭೆಯು ತಮ್ಮೊಂದಿಗೆ ಇದೆ ಎಂಬ ಅನುಭವವನ್ನು ಪಡೆದಿದ್ದಾರೆ ಮತ್ತು ಅದಕ್ಕಾಗಿ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಿದ್ದಾರೆ' ಎಂದು ಹೇಳಿದರು.
ತಮ್ಮ ಧರ್ಮಕ್ಷೇತ್ರದ ದೇವಾಲಯಕ್ಕೆ ಸಂಭವಿಸಿರುವ ಹಾನಿಯ ಬಗ್ಗೆಯೂ ಅವರು ವಿವರಿಸಿದರು. "ಕೊರೊಮೊಟೊ ವಿಭಾಗದ ಮೇಲ್ಛಾವಣಿ ಸಂಪೂರ್ಣವಾಗಿ ಕುಸಿದುಬಿದ್ದಿದೆ. ಅದರ ಪಕ್ಕದ ಮೇಲ್ಛಾವಣಿಯ ಒಂದು ಭಾಗವೂ ಕುಸಿದಿದೆ. ಜೊತೆಗೆ ಗಂಟೆಗೋಪುರಗಳಲ್ಲಿ ಒಂದಕ್ಕೆ ಈಗ ಯಾವುದೇ ದೃಢವಾದ ಆಧಾರ ಉಳಿದಿಲ್ಲ. ಅದು ಯಾವುದೇ ಕ್ಷಣದಲ್ಲಿ ಕುಸಿಯುವ ಅಪಾಯವಿದೆ. ಇದರಿಂದ ಉಳಿದಿರುವ ಮೇಲ್ಛಾವಣಿಗೆ ಮಾತ್ರವಲ್ಲ, ಸುತ್ತಮುತ್ತಲಿನ ಜನರಿಗೂ ಗಂಭೀರ ಅಪಾಯ ಉಂಟಾಗಿದೆ."
ಕೊನೆಯಲ್ಲಿ ವಂ. ಗುರು ಗಾರ್ಸಿಯಾ, ಐಕಮತ್ಯ ಮತ್ತು ಪ್ರಾರ್ಥನೆಯ ಮನೋಭಾವವನ್ನು ಮುಂದುವರಿಸುವಂತೆ ಎಲ್ಲರಿಗೂ ಕರೆ ನೀಡಿದರು. "ಸಹಕರಿಸುವ ಧರ್ಮಸಭೆಯಾಗಿ ನಾವು ಮುಂದುವರಿಯೋಣ. ಪರಸ್ಪರರೊಂದಿಗೆ ಇರೋಣ. ಒಬ್ಬರನ್ನೊಬ್ಬರು ಬೆಂಬಲಿಸುತ್ತಾ ಸಾಗೋಣ, ದೇವಾಲಯಕ್ಕೆ ಹಾನಿಯಾಗಿರುವ ಕಾರಣ ಈಗ ಬೀದಿಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ದಿವ್ಯಾರಾಧನೆಗಳನ್ನು ಆಚರಿಸಲಾಗುತ್ತಿದ್ದು, ಇದರಿಂದ ಜನರೊಂದಿಗೆ ಇನ್ನಷ್ಟು ಹತ್ತಿರವಾಗಿರಲು ಅವಕಾಶ ದೊರೆತಿದೆ” ಎಂದು ವಿವರಿಸಿದರು.
"ನಮ್ಮ ಜೀವವನ್ನು ಕಾಪಾಡಿರುವವರು ಪ್ರಭುವೇ. ಈ ಪುನರ್‌ನಿರ್ಮಾಣದ ಪಯಣದಲ್ಲಿ ಅವರು ಮುಂದೆಯೂ ನಮ್ಮೊಂದಿಗೆ ನಡೆದು, ನಮ್ಮೆಲ್ಲರನ್ನು ಪುನಃ ಸ್ಥಾಪಿಸುವರು."
ಅವರು ಅಂತರರಾಷ್ಟ್ರೀಯ ನೆರವಿನ ಅಗತ್ಯವನ್ನೂ ಒತ್ತಿಹೇಳಿ,"ವಿದೇಶದಲ್ಲಿರುವವರು ಆರ್ಥಿಕ ನೆರವು ಸೇರಿದಂತೆ ಯಾವುದೇ ರೀತಿಯ ಸಹಾಯ ಮಾಡಲು ಬಯಸಿದರೆ, ವೆನೆಜುವೆಲಾದ ಧರ್ಮಾಧ್ಯಕ್ಷರ ಸಮಾವೇಶದ ಅಧಿಕೃತ ಖಾತೆಗಳ ಮೂಲಕ ತಮ್ಮ ನೆರವನ್ನು ನೀಡುವಂತೆ ನಾವು ಆಹ್ವಾನಿಸುತ್ತೇವೆ. ಆ ಸಹಾಯ ನಿಸ್ಸಂದೇಹವಾಗಿ ಅತ್ಯಂತ ಅಗತ್ಯವಿರುವವರನ್ನು ತಲುಪಲಿದೆ' ಎಂದು ವಿನಂತಿಸಿದ್ದಾರೆ.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).