ವೆಸ್ಟ್‌ಮಿನ್ಸ್ಟರ್ ಮಹಾಧರ್ಮಾಧ್ಯಕ್ಷರಿಗೆ ಪಾಲಿಯಂ ಪ್ರದಾನ: "ಇದು ಅತ್ಯಂತ ಶಕ್ತಿಯುತ ಸಂಕೇತ"
ಲೇಖಕರು: ಕೀಲ್ ಗಸ್ಸಿ
ಇಂದು ಬೆಳಿಗ್ಗೆ ಹೊಸದಾಗಿ ನೇಮಕಗೊಂಡ 35 ಮಹಾಧರ್ಮಾಧ್ಯಕ್ಷರು ಸಂತ ಪೇತ್ರರ ಪ್ರಧಾನ ದೇವಾಲಯವನ್ನು ಪ್ರವೇಶಿಸಿ, ಸಣ್ಣದಾದರೂ ಮಹತ್ತರ ಜವಾಬ್ದಾರಿಯನ್ನು ಸೂಚಿಸುವ ಹೊಸ ಆರಾಧನಾ ವಸ್ತ್ರವನ್ನು ಧರಿಸಿಕೊಂಡು ಹೊರಬಂದರು.
ರೋಮ್‌ನ ಪಾಲಕರಾದ ಸಂತ ಪೇತ್ರ ಮತ್ತು ಸಂತ ಪೌಲರ ಮಹಾಪರ್ವದ ಅಂಗವಾಗಿ ನಡೆದ ಪವಿತ್ರ ಬಲಿಪೂಜೆಯ ವೇಳೆ, ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರು ಬಿಳಿ ಬಣ್ಣದ ಉಣ್ಣೆಯ ಪಟ್ಟಿಯನ್ನು, ಪಾಲಿಯಂ ಎಂದು ಕರೆಯಲಾಗುವ ಆರಾಧನಾ ವಸ್ತ್ರವನ್ನು, ಮಹಾಧರ್ಮಾಧ್ಯಕ್ಷರ ಭುಜಗಳ ಮೇಲೆ ಸ್ವತಃ ಪಾಲಿಯಂ ತೊಡಿಸಿದರು. ಅವರಲ್ಲಿ ವೆಸ್ಟ್‌ಮಿನ್ಸ್ಟರ್ ಮಹಾಧರ್ಮಾಧ್ಯಕ್ಷ ರಿಚರ್ಡ್ ಮೋತ್ ಅವರೂ ಒಬ್ಬರಾಗಿದ್ದು,ಜಗದ್ಗುರುಗಳೊಂದಿಗಿನ ಈ ಕ್ಷಣವನ್ನು ಅವರು "ನಿಜಕ್ಕೂ ಅಸಾಮಾನ್ಯ ಅನುಭವ" ಎಂದು ಬಣ್ಣಿಸಿದರು.
ಕಳೆದ ಹನ್ನೊಂದು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಒಬ್ಬ ಜಗದ್ಗುರು ಹೊಸ ಮಹಾಧರ್ಮಾಧ್ಯಕ್ಷರಿಗೆ ಸ್ವತಃ ಪಾಲಿಯಂ ತೊಡಿಸಿದ್ದಾರೆ. ಹನ್ನೊಂದು ವರ್ಷಗಳ ಹಿಂದೆ ಪೂಜ್ಯ ಜಗದ್ಗುರುಗಳಾದ ಫ್ರಾನ್ಸಿಸ್ ಅವರು ಪಾಲಿಯಂ ಧರಿಸುವ ವಿಧಿಯನ್ನು ರೋಮ್‌ನಿಂದ ಸಂಬಂಧಿತ ಮಹಾಧರ್ಮಾಧ್ಯಕ್ಷರ ಮಹಾಧರ್ಮಕ್ಷೇತ್ರಕ್ಕೆ ಸ್ಥಳಾಂತರಿಸಿದ್ದರು. ಅಲ್ಲಿ ಪ್ರೇಷಿತ ಪ್ರತಿನಿಧಿ ಅವರ ಮೂಲಕ ಪಾಲಿಯಂ ಧರಿಸಲಾಗುತ್ತಿತ್ತು. ಆದರೆ ಹೊಸ ಮಹಾಧರ್ಮಾಧ್ಯಕ್ಷರನ್ನು ಜಗದ್ಗುರುಗಳೊಂದಿಗೆ ಪವಿತ್ರ ಬಲಿಪೂಜೆಯಲ್ಲಿ ಸಹಆಚರಣೆ ಮಾಡಲು ಹಾಗೂ ಪಾಲಿಯಂ ಆಶೀರ್ವಾದದ ಸಂದರ್ಭದಲ್ಲಿ ಉಪಸ್ಥಿತರಿರಲು ರೋಮ್‌ಗೆ ಆಹ್ವಾನಿಸಲಾಗುತ್ತಿತ್ತು.
"ಜಗದ್ಗುರುಗಳಿಂದ ನೇರವಾಗಿ ಪಾಲಿಯಂ ಸ್ವೀಕರಿಸುವ ಸಂಪ್ರದಾಯ ನನಗೆ ವೈಯಕ್ತಿಕವಾಗಿ ಬಹಳ ಇಷ್ಟ. ಇದು ಪವಿತ್ರ ತಂದೆಯವರ ಮೂಲಕ ಪೇತ್ರರ ಸೇವೆಯೊಂದಿಗೆ ನಿಮ್ಮ ನಿಕಟ ಸಂಬಂಧದ ಸಂಕೇತವಾಗಿದೆ. ಇದು ಅತ್ಯಂತ ಶಕ್ತಿಯುತ ಅನುಭವ ಮತ್ತು ಪ್ರತಿಯೊಬ್ಬರಿಗೂ ಅತ್ಯಂತ ಅರ್ಥಪೂರ್ಣ ಸಂಕೇತವೆಂದು ನಾನು ಭಾವಿಸುತ್ತೇನೆ" ಎಂದು ಮಹಾಧರ್ಮಾಧ್ಯಕ್ಷ ಮೋತ್ ವ್ಯಾಟಿಕನ್ ವ್ಯಾಟಿಕನ್ ಸುದ್ದಿ ಸಂಸ್ಥೆಗೆ ತಿಳಿಸಿದರು.
ಹೊಸ ವರ್ಷ, ಹೊಸ ಜವಾಬ್ದಾರಿಗಳು
ಕಳೆದ ಹನ್ನೊಂದು ವರ್ಷಗಳಿಂದ ದಕ್ಷಿಣ ಇಂಗ್ಲೆಂಡ್‌ನ ಅರುಂಡೆಲ್ ಮತ್ತು ಬ್ರೈಟನ್ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾಗಿದ್ದ ಮಹಾಧರ್ಮಾಧ್ಯಕ್ಷ ಮೋತ್, ವೆಸ್ಟ್‌ಮಿನ್ಸ್ಟರ್‌ಗೆ ಸ್ಥಳಾಂತರವಾಗಿರುವುದು ಮುಖ್ಯವಾಗಿ ಅದರ ವ್ಯಾಪ್ತಿಯ ವ್ಯತ್ಯಾಸ ಎಂದು ಹೇಳಿದರು. "85 ಸಮುದಾಯಗಳಿಂದ 206 ಸಮುದಾಯಗಳಿಗೆ ಬಂದಿದ್ದೇನೆ. ಆದ್ದರಿಂದ ಎಲ್ಲವೂ ದೊಡ್ಡ ಪ್ರಮಾಣದಲ್ಲಿದೆ. ಇಂತಹ ದೊಡ್ಡ ವ್ಯಾಪ್ತಿಗೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ" ಎಂದು ಅವರು ಹೇಳಿದರು.
ಆದರೆ ಕಳೆದ ಏಳು ತಿಂಗಳಲ್ಲಿ ಅವರು ಸ್ವೀಕರಿಸಿದ ಹೊಸ ಜವಾಬ್ದಾರಿ ಇದೊಂದೇ ಅಲ್ಲ. ಕಳೆದ ವರ್ಷದ ಡಿಸೆಂಬರ್‌ನಲ್ಲಿ ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರು ಅವರನ್ನು ವೆಸ್ಟ್‌ಮಿನ್ಸ್ಟರ್‌ನ 12ನೇ ಮಹಾಧರ್ಮಾಧ್ಯಕ್ಷರನ್ನಾಗಿ ನೇಮಿಸಿದ ಬಳಿಕ, 2026ರ ಏಪ್ರಿಲ್‌ನಲ್ಲಿ ಅವರು ಇಂಗ್ಲೆಂಡ್ ಮತ್ತು ವೇಲ್ಸ್ ಕಥೋಲಿಕ ಧರ್ಮಾಧ್ಯಕ್ಷರ ಸಮಾವೇಶದ ಅಧ್ಯಕ್ಷರಾಗಿ ಆಯ್ಕೆಯಾದರು. ಈ ಜವಾಬ್ದಾರಿಯನ್ನು ಕುರಿತು ಮಾತನಾಡಿದ ಅವರು, "ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ನಾವು ಬಹಳ ಆಶೀರ್ವದಿಸಲ್ಪಟ್ಟಿದ್ದೇವೆ. ಇಲ್ಲಿ ಧರ್ಮಾಧ್ಯಕ್ಷರು ಅತ್ಯಂತ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುತ್ತಿದ್ದು, ಧರ್ಮಸಭೆಯ ಧ್ಯೇಯಕ್ಕಾಗಿ ನಾವು ಒಟ್ಟಾಗಿ ದುಡಿಯುತ್ತಿದ್ದೇವೆ ಎಂಬ ನೈಜ ಮನೋಭಾವ ನಮ್ಮಲ್ಲಿದೆ" ಎಂದು ಹೇಳಿದರು.
ಧರ್ಮಾಧ್ಯಕ್ಷರ ಸಮಾವೇಶದ ಪ್ರಮುಖ ಆದ್ಯತೆಗಳಲ್ಲಿ ಒಂದೆಂದರೆ ಪ್ರತಿಯೊಬ್ಬ ಮಾನವ ವ್ಯಕ್ತಿಯ ಘನತೆಯನ್ನು ಕಾಪಾಡುವುದು. ಉದಾಹರಣೆಯಾಗಿ, "ದಯಾಮರಣ/ವೈದ್ಯರ ನೆರವಿನ ಮರಣ’ (Assisted Dying) ಮಸೂದೆಯನ್ನು ತಡೆಯುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಮತ್ತೆ ಈ ವಿಷಯವನ್ನು ಎದುರಿಸಬೇಕಾಗುವ ಸಾಧ್ಯತೆ ಇದೆ" ಎಂದು ಮಹಾಧರ್ಮಾಧ್ಯಕ್ಷರು ಹೇಳಿದರು.
ಧರ್ಮಾಧ್ಯಕ್ಷರ ಸಮಾವೇಶದ ಅಧ್ಯಕ್ಷರಾಗಿರುವುದು "ಸ್ವಲ್ಪ ಹೆಚ್ಚುವರಿ ಕೆಲಸವೇ ಸರಿ, ಆದರೆ ಅದೊಂದು ಮಹತ್ತರ ಗೌರವವೂ ಹೌದು. ಈ ಜವಾಬ್ದಾರಿಯಲ್ಲಿ ನನ್ನ ಸಹೋದರ ಧರ್ಮಾಧ್ಯಕ್ಷರ ಬೆಂಬಲವನ್ನು ನಾನು ಆಳವಾಗಿ ಅನುಭವಿಸುತ್ತೇನೆ" ಎಂದು ಅವರು ಹಾಸ್ಯಮಿಶ್ರಿತವಾಗಿ ಹೇಳಿದರು.
ಮುಂಜಾನೆ 5 ಗಂಟೆಗೆ ಪ್ರತಿದಿನದ ಆರಂಭ
ತಮ್ಮ ಹೊಸ ಮಹಾಧರ್ಮಕ್ಷೇತ್ರದ ಕುರಿತು ಮಾತನಾಡಿದ ಮಹಾಧರ್ಮಾಧ್ಯಕ್ಷರು, ಪ್ರಾರ್ಥನೆಯೇ ತಮ್ಮ ಸೇವೆಯ ಅಡಿಪಾಯವಾಗಿದ್ದು ಮುಂದೆಯೂ ಹಾಗೆಯೇ ಮುಂದುವರಿಯಲಿದೆ ಎಂದು ಒತ್ತಿ ಹೇಳಿದರು. "ನಾನು ಧರ್ಮಾಧ್ಯಕ್ಷನಾಗಿರುವ ವರ್ಷಗಳಲ್ಲಿ ನನಗೆ ಹೆಚ್ಚು ಸ್ಪಷ್ಟವಾಗಿರುವ ವಿಷಯವೆಂದರೆ ಪ್ರತಿಯೊಂದು ಕಾರ್ಯವೂ ಪ್ರಾರ್ಥನೆಯಿಂದಲೇ ಆರಂಭವಾಗಬೇಕು. ನಾವು ಹಾಗೆ ಮಾಡದಿದ್ದರೆ, ಯಾವುದನ್ನೂ ಮಾಡಲು ಸಾಧ್ಯವಿಲ್ಲ" ಎಂದು ಅವರು ಹೇಳಿದರು.
ಪ್ರಾರ್ಥನೆಯ ಮೂಲಕವೇ ದೇವರು ನಮಗೆ ನೀಡಿರುವ ಧ್ಯೇಯವನ್ನು ಸಮರ್ಪಕವಾಗಿ ನೆರವೇರಿಸಲು ನಾವು ಸಿದ್ಧರಾಗುತ್ತೇವೆ ಎಂದು ಮಹಾಧರ್ಮಾಧ್ಯಕ್ಷರು ಹೇಳಿದರು. ಇದೇ ಕಾರಣದಿಂದ, ತಮ್ಮ ಹೊಸ ಜವಾಬ್ದಾರಿಯಲ್ಲಿ ಆಧ್ಯಾತ್ಮಿಕ ತರಬೇತಿ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ ಎಂದರು. "ಪ್ರಾರ್ಥನೆ ಮತ್ತು ಆಧ್ಯಾತ್ಮಿಕ ತರಬೇತಿಯನ್ನು ಒಟ್ಟುಗೂಡಿಸಿದಾಗ ಮಾತ್ರ ಕ್ರೈಸ್ತರಾದ ನಾವು ಶುಭಸಂದೇಶವನ್ನು ಸಾರುವ ನಮ್ಮ ಕರೆಯನ್ನು ನೆರವೇರಿಸಲು ಸಾಧ್ಯ. ಅರುಂಡೆಲ್ ಮತ್ತು ಬ್ರೈಟನ್ ಧರ್ಮಕ್ಷೇತ್ರದಲ್ಲಿ ಇದನ್ನು ನಾನು ಅನೇಕ ಬಾರಿ ಹೇಳಿದ್ದೇನೆ. ನಾವು ಯಾವಾಗಲೂ ಪ್ರಾರ್ಥನೆ, ಆಧ್ಯಾತ್ಮಿಕ ತರಬೇತಿ ಮತ್ತು ನಂತರ ಧ್ಯೇಯಕಾರ್ಯದ ಕುರಿತು ಮಾತನಾಡುತ್ತೇವೆ" ಎಂದು ಅವರು ಹೇಳಿದರು.
ಈ ಸಂದೇಶವನ್ನು ಮಹಾಧರ್ಮಾಧ್ಯಕ್ಷ ಮೋತ್ ತಮ್ಮ ಜೀವನದಲ್ಲಿಯೂ ಅಳವಡಿಸಿಕೊಂಡಿದ್ದಾರೆ. ಪ್ರತಿದಿನ ಪ್ರಾರ್ಥನೆಗಾಗಿ ಅವರು ವಿಶೇಷ ಸಮಯ ಮೀಸಲಿಡುತ್ತಾರೆ. "ದಿನದ ಕೊನೆಯಲ್ಲಿ ಅಥವಾ ಮಧ್ಯದಲ್ಲಿ ಅಲ್ಲ. ಪ್ರತಿದಿನ ಬೆಳಗ್ಗೆ ಐದು ಗಂಟೆಗೆ ಆರಂಭ. ಸಭೆಗಳು ಮತ್ತು ದಿನನಿತ್ಯದ ಇತರ ಕಾರ್ಯಗಳು ಆರಂಭವಾಗುವ ಮೊದಲು ಪ್ರಾರ್ಥನೆಗಾಗಿ, ಮೌನಕ್ಕಾಗಿ ಸಮಯ ಮೀಸಲಿಡುತ್ತೇನೆ. ಉಳಿದ ಎಲ್ಲವೂ ಆ ಸಮಯದಿಂದಲೇ ಬೆಳೆಯುತ್ತದೆ" ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕಥೋಲಿಕ ಧರ್ಮಾಧ್ಯಕ್ಷರ ಸಮಾವೇಶದ ಅಧ್ಯಕ್ಷರು ಹೇಳಿದರು.
ಇಬ್ಬರು ಧರ್ಮಾಧ್ಯಕ್ಷರು, ಒಂದು ಸಂವಾದ
ಈ ವರ್ಷದ ಏಪ್ರಿಲ್‌ನಲ್ಲಿ ಮಹಾಧರ್ಮಾಧ್ಯಕ್ಷ ಮೋತ್ ಅವರು ರೋಮ್‌ಗೆ ಭೇಟಿ ನೀಡಿ, ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಹಾಗೂ ಕ್ಯಾಂಟರ್ಬರಿಯ ನೂತನ ಮಹಾಧರ್ಮಾಧ್ಯಕ್ಷೆ ಸಾರಾ ಮುಲ್ಲಾಲಿ ಅವರೊಂದಿಗೆ ನಡೆದ ಭೇಟಿಯಲ್ಲಿ ಪಾಲ್ಗೊಂಡರು. UKಯಲ್ಲಿ ನಡೆದ ಪರಸ್ಪರ ಪದಗ್ರಹಣ ಸಮಾರಂಭಗಳಲ್ಲಿ ತಾವಿಬ್ಬರೂ ಭಾಗವಹಿಸಿದ್ದುದನ್ನು ಅವರು ನೆನಪಿಸಿಕೊಂಡರು.
"ಸಾಧ್ಯವಾದ ಎಲ್ಲ ಕ್ಷೇತ್ರಗಳಲ್ಲಿ ನಾವು ಒಟ್ಟಾಗಿ ಕೆಲಸ ಮಾಡುವ ಆಶಯವನ್ನು ಈ ಭೇಟಿ ವ್ಯಕ್ತಪಡಿಸಿತು ಎಂದು ನಾನು ಭಾವಿಸುತ್ತೇನೆ ವಿಶೇಷವಾಗಿ ಇಂಗ್ಲೆಂಡ್ ಮತ್ತು ವೇಲ್ಸ್‌ನಾದ್ಯಂತ ಸಾಮಾಜಿಕ ಸೇವೆಯ ಕೆಲವು ಕ್ಷೇತ್ರಗಳಲ್ಲಿ ನಾವು ಒಟ್ಟಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ" " ಎಂದು ಮಹಾಧರ್ಮಾಧ್ಯಕ್ಷ ಮೋತ್ ಹೇಳಿದರು.
ರೋಮನ್ ಕಥೋಲಿಕ ಧರ್ಮಸಭೆ ಮತ್ತು ಇಂಗ್ಲೆಂಡ್ ಧರ್ಮಸಭೆಯ ನಡುವಿನ ಭವಿಷ್ಯದ ಸಂಬಂಧವನ್ನು ಕುರಿತು ಮಾತನಾಡಿದ ಅವರು, ಪರಸ್ಪರ ಸಂವಾದವನ್ನು ನಿರಂತರವಾಗಿ ಮುಂದುವರಿಸುವ ಮಹತ್ವವನ್ನು ಒತ್ತಿ ಹೇಳಿದರು. "ನಾನು ಮತ್ತು ಮಹಾಧರ್ಮಾಧ್ಯಕ್ಷೆ ಮುಲ್ಲಾಲಿ ಇಬ್ಬರೂ ಇಂಗ್ಲೆಂಡ್‌ನ 'ಚರ್ಚಸ್ ಟುಗೆದರ್' ಸಂಘಟನೆಯ ಅಧ್ಯಕ್ಷರಾಗಿದ್ದೇವೆ. ಇತರರೊಂದಿಗೆ ಸೇರಿ ನಾವು ಕಾರ್ಯನಿರ್ವಹಿಸುತ್ತಿರುವುದರಿಂದ, ಒಟ್ಟಾಗಿ ಕೆಲಸ ಮಾಡಲು ಸಾಕಷ್ಟು ಅವಕಾಶಗಳು ದೊರೆಯಲಿವೆ" ಎಂದು ಅವರು ಹೇಳಿದರು.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).