ಉಕ್ರೇನಿನ ಮಕ್ಕಳಿಗೆ ಯುದ್ಧದ ಸಮಯದಲ್ಲಿ ಹೃದಯಗಳನ್ನು ಬಲಪಡಿಸುವ ಭರವಸೆ
ಲೇಖಕರು: ಅಲೀನಾ ಅನಸ್ತಾಸಿಯ ಪೆಟ್ರಾಸ್ಕೈಟ್,SCM
ಯುದ್ಧದ ಭೀಕರತೆ ಸುತ್ತಲೂ ಆವರಿಸಿರುವಾಗ, ಮಕ್ಕಳು ಮತ್ತು ಹದಿಹರೆಯದವರು ತಮ್ಮ ಬಾಲ್ಯದ ಸಂತೋಷವನ್ನು ಉಳಿಸಿಕೊಳ್ಳಲು ನಾವು ಹೇಗೆ ಸಹಾಯ ಮಾಡಬಹುದು? ಉಕ್ರೇನ್‌ನ ರೋಮನ್ ಕಥೋಲಿಕ ಧರ್ಮಸಭೆಯ ಕೀವ್–ಝಿಟೊಮಿರ್ ಧರ್ಮಪ್ರಾಂತ್ಯದ ಯುವಜನ ಪಾಲನಾ ಆಯೋಗದ ಕಾರ್ಯದರ್ಶಿ, ರೋಮನ್ ಕಥೋಲಿಕ ಶಿಕ್ಷಣದ ಸಂಯೋಜಕಿ ಹಾಗೂ ಝಿಟೊಮಿರ್‌ನ “ವ್ಸೆಸ್ವಿತ್” ಸೇಲೇಶಿಯನ್ ಖಾಸಗಿ ಲೈಸಿಯಂನ ಶಿಕ್ಷಕಿ ಐರಿನಾ ನಜರೆಂಕೊ, ವ್ಯಾಟಿಕನ್ ಸುದ್ದಿ ಸಂಸ್ಥೆಯೊಂದಿಗೆ ನೀಡಿದ ಸಂದರ್ಶನದಲ್ಲಿ ಯುವ ಪೀಳಿಗೆಯೊಂದಿಗೆ ತಮ್ಮ ದೈನಂದಿನ ಸೇವೆ, ಮುಂಚೂಣಿ ಪ್ರದೇಶದಲ್ಲಿರುವ ಸೈನಿಕರಿಗೆ ಮಕ್ಕಳು ಬರೆಯುವ ಪತ್ರಗಳು, ಸಮುದಾಯದ ವಿಶೇಷ ಪ್ರಾರ್ಥನಾ ಕ್ಷಣಗಳು ಹಾಗೂ ನಿರಾಶೆಯನ್ನು ದೂರವಿಡಲು ತಮಗೆ ಶಕ್ತಿ ನೀಡುವ ಮೂಲಗಳ ಕುರಿತು ಮಾತನಾಡುತ್ತಾರೆ.
ಧರ್ಮಸಭೆಯ ಸೇವೆ: ಫುಟ್‌ಬಾಲ್ ಪಂದ್ಯಾವಳಿಗಳಿಂದ ಆಧ್ಯಾತ್ಮಿಕ ಸೌಖ್ಯದವರೆಗೆ
ಐರಿನಾ ನಜರೆಂಕೊ ಅವರ ಪ್ರಕಾರ, ಉಕ್ರೇನ್‌ನ ಕೀವ್–ಝಿಟೊಮಿರ್ ಧರ್ಮಪ್ರಾಂತ್ಯದ ಯುವಜನ ಪಾಲನಾ ಆಯೋಗವು ವಂ. ಗುರು ಮಿಖಾಯಿಲ್ ವೊಚಿಯಲ್, ಎಸ್‌ಡಿಬಿ ಅವರ ನೇತೃತ್ವದಲ್ಲಿ, ಪೂರ್ಣ ಪ್ರಮಾಣದ ಯುದ್ಧ ಆರಂಭವಾಗುವ ಸ್ವಲ್ಪ ದಿನಗಳ ಮುಂಚೆ ಅಸ್ತಿತ್ವಕ್ಕೆ ಬಂದಿತು ಈ ತಂಡದಲ್ಲಿ ಯಾಜಕರು, ಧಾರ್ಮಿಕ ಸಹೋದರಿಯರು ಹಾಗೂ ವಿವಿಧ ಧರ್ಮಕ್ಷೇತ್ರಗಳ ಸಕ್ರಿಯ ಯುವಜನರು ಸೇರಿದ್ದಾರೆ.
ಧರ್ಮಸಭೆ, ಮಕ್ಕಳು, ಹದಿಹರೆಯದವರು ಮತ್ತು ತಮ್ಮ ಸಮವಯಸ್ಕರ ಸೇವೆ ಮಾಡುವ ನಿಟ್ಟಿನಲ್ಲಿ ನಾವು ಯುವಜನರಿಗಾಗಿ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ, ಅವರ ಆಲೋಚನೆಗಳು ಮತ್ತು ಆಶಯಗಳನ್ನು ಆಲಿಸುವುದು ನಮಗೆ ಅತ್ಯಂತ ಮುಖ್ಯವಾಗಿದೆ ಎಂದು ಆಯೋಗದ ಕಾರ್ಯದರ್ಶಿ ಒತ್ತಿಹೇಳಿದರು. ವಿವಿಧ ಚಟುವಟಿಕೆಗಳ ಮೂಲಕ, ಸಂಘಟಕರು ಸುರಕ್ಷಿತ ವಿಶ್ರಾಂತಿ, ನಿಜವಾದ ಸಂತೋಷ ಮತ್ತು ಜೀವಂತ ಧರ್ಮಸಭೆಯ ಅನುಭವವನ್ನು ಒಟ್ಟುಗೂಡಿಸುವ ವಾತಾವರಣವನ್ನು ನಿರ್ಮಿಸಲು ಪ್ರಯತ್ನಿಸುತ್ತಾರೆ. ಇದು ಮಕ್ಕಳಿಗೆ ಮತ್ತು ಯುವಜನರಿಗೆ ಆಂತರಿಕ ಶಾಂತಿ ಹಾಗೂ ಆಧ್ಯಾತ್ಮಿಕ ಬಲವನ್ನು ಕಂಡುಕೊಳ್ಳಲು ಸಹಾಯ ಮಾಡುತ್ತದೆ.
ಅವರು ಹಲವು ವರ್ಷಗಳಿಂದ ಸತತವಾಗಿ ಧರ್ಮಪ್ರಾಂತ್ಯ ಮಟ್ಟದ ಮಕ್ಕಳ ದಿನಾಚರಣೆಯನ್ನು ಆಯೋಜಿಸುತ್ತಿದ್ದಾರೆ. ಈ ವರ್ಷ, 300ಕ್ಕೂ ಹೆಚ್ಚು ಮಕ್ಕಳು ಹಾಗೂ ಯುವಜನರು, ಯಾಜಕರು ಮತ್ತು ಮನರಂಜನಾ ಸಿಬ್ಬಂದಿಯೊಂದಿಗೆ ಸೇರಿ, ಯುದ್ಧಕಾಲದ ದೈನಂದಿನ ಆತಂಕಗಳಿಂದ ಕನಿಷ್ಠ ಕೆಲವು ಕ್ಷಣಗಳಾದರೂ ದೂರವಾಗುವ ಅವಕಾಶವನ್ನು ಪಡೆದರು.
ರೂಪುಗೊಳಿಸುವಿಕೆಯ ಪ್ರಮುಖ ಅಂಶಗಳಲ್ಲಿ ಒಂದು ಕ್ರೀಡೆ ಮತ್ತು ಶುಭಸಂದೇಶ ಸೇವೆಯನ್ನು ಒಗ್ಗೂಡಿಸುವುದು. ವಿಶೇಷವಾಗಿ, ವಾರ್ಷಿಕ “ಬಿಷಪ್ ಕಪ್” ಫುಟ್‌ಬಾಲ್ ಪಂದ್ಯಾವಳಿಯ ಮೂಲಕ ಇದನ್ನು ಸಾಧಿಸಲಾಗುತ್ತಿದೆ. ದೇವರ ವಾಕ್ಯದ ಸುತ್ತ ಮಕ್ಕಳು ಮತ್ತು ಯುವಜನರನ್ನು ಒಗ್ಗೂಡಿಸಲು ಬೈಬಲ್ ಒಲಿಂಪಿಯಾಡ್‌ಗಳು ಹಾಗೂ ಬೈಬಲ್ ಅಗಾಪೆ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗುತ್ತದೆ.
ಇದಲ್ಲದೆ, ಐರಿನಾ ನಜರೆಂಕೊ ಅವರ ಪ್ರಕಾರ, ಸಲೇಶಿಯನ್ ಅನಿಮೇಶನ್ ಶಾಲೆಯು ಹದಿಹರೆಯದವರು ಮತ್ತು ಯುವಜನರಿಗೆ ಸ್ವಯಂಸೇವಾ ಮನೋಭಾವ, ತಂಡದ ಕಾರ್ಯ, ಸಂವಹನ ಕೌಶಲ್ಯಗಳು ಮತ್ತು ತಮ್ಮ ಸಮವಯಸ್ಕರ ಸೇವೆಯನ್ನು ಕಲಿಸುವಲ್ಲಿ ಅತ್ಯಂತ ಯಶಸ್ವಿಯಾಗಿದೆ.
ಈ ವರ್ಷದ ಹದಿಹರೆಯದವರು ದಿನಾಚರಣೆ ವಿಶೇಷವಾಗಿ ಆಳವಾದ ಅನುಭವವನ್ನು ನೀಡಿತು. ಸುಮಾರು 400 ಮಂದಿ ಭಾಗವಹಿಸಿದ್ದ ಈ ಕಾರ್ಯಕ್ರಮವು ಮೂರು ದಿನಗಳ ಕಾಲ ನಡೆಯಿತು ಮತ್ತು ಪಂಚಾಶತ್ತಮ ಹಬ್ಬದ ಮಹೋತ್ಸವದೊಂದಿಗೆ ಮುಕ್ತಾಯಗೊಂಡಿತು. ಈ ಕಾರ್ಯಕ್ರಮದ ವಿನ್ಯಾಸವನ್ನು, ವೈಯಕ್ತಿಕ ಬೆಳವಣಿಗೆಯ ಈ ಸವಾಲಿನ ಹಂತದಲ್ಲಿ ಯುವಜನರು ಕ್ರಿಸ್ತನೊಂದಿಗೆ ಜೀವಂತ ಭೇಟಿಯ ಅನುಭವವನ್ನು ಪಡೆಯುವಂತೆ ಎಚ್ಚರಿಕೆಯಿಂದ ರೂಪಿಸಲಾಗಿತ್ತು.
ಅನೇಕ ಹದಿಹರೆಯದವರನ್ನು ಒಂದೇ ಸೂರಿನಡಿ ಸೇರಿಸುವುದು ಆರಂಭದಲ್ಲಿ “ನಿಜವಾದ ಚಂಡಮಾರುತದಂತೆ ಅನಿಸಿತು” ಎಂದು ಐರಿನಾ ನಜರೆಂಕೊ ನೆನಪಿಸಿಕೊಳ್ಳುತ್ತಾರೆ. ಆದರೆ ಪ್ರಾರ್ಥನೆಯ ಸಮಯದಲ್ಲಿ ಆ ಶಕ್ತಿಯು ಶಾಂತಿಯಾಗಿ ಪರಿವರ್ತಿತವಾಯಿತು. ಕಾರ್ಯಕ್ರಮದ ವೇಳೆ ವಿಶೇಷ ಗುಡಾರಗಳನ್ನು ಸ್ಥಾಪಿಸಲಾಗಿತ್ತು. ಅಲ್ಲಿ ಯಾಜಕರು ಆಧ್ಯಾತ್ಮಿಕ ಮಾರ್ಗದರ್ಶನ ಮತ್ತು ಪಾಪಸಂಕೀರ್ತನೆಯ ಸಂಸ್ಕಾರಕ್ಕಾಗಿ ಲಭ್ಯರಿದ್ದರು. ತಮ್ಮ ಮನಸ್ಸಿನ ಆತಂಕಗಳಿಗೆ ಉತ್ತರಗಳನ್ನು ಹುಡುಕುತ್ತಾ ಪಾಪನಿವೇದನೆ ಅಥವಾ ಆಧ್ಯಾತ್ಮಿಕ ಮಾರ್ಗದರ್ಶನಕ್ಕಾಗಿ ಬಂದಿದ್ದ ಅನೇಕ ಹುಡುಗರು ಮತ್ತು ಹುಡುಗಿಯರನ್ನು ಕಂಡು ಯಾಜಕರು ಆಳವಾಗಿ ಸ್ಪರ್ಶಿತರಾದರು.
ಯುದ್ಧದ ಕಠಿಣ ವಾಸ್ತವತೆಗಳು: ನಷ್ಟ, ಬಾಂಬ್ ಆಶ್ರಯ ಕೇಂದ್ರಗಳು ಮತ್ತು ಮುಂಚೂಣಿ ಪ್ರದೇಶಕ್ಕೆ ಪತ್ರಗಳು
ಇಂದಿನ ಉಕ್ರೇನಿನ ಮಕ್ಕಳು ಯಾವುದೇ ಮಗುವೂ ಎಂದಿಗೂ ಅನುಭವಿಸಬಾರದಂತಹ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಆದಾಗ್ಯೂ, ಧರ್ಮಸಭೆ ಮತ್ತು ಶಿಕ್ಷಣತಜ್ಞರು ಅವರು ತೀವ್ರ ಸಂಕಷ್ಟದ ನಡುವೆಯೂ ದೃಢವಾಗಿ ನಿಲ್ಲಲು ಸಾಧ್ಯವಾಗುವಂತೆ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದ್ದಾರೆ.
ಐರಿನಾ ನಜರೆಂಕೊ ಅವರ ಪ್ರಕಾರ, ಯುದ್ಧಕಾಲವು ಪ್ರತಿಯೊಬ್ಬರಿಗೂ ಅತ್ಯಂತ ಕಠಿಣ ಪರೀಕ್ಷೆಯಾಗಿದೆ. “ಒತ್ತಡ” ಎಂಬ ಪದವು ಈ ವಾಸ್ತವಿಕತೆಯನ್ನು ವಿವರಿಸಲು ಸಾಕಾಗುವುದಿಲ್ಲ. ಲೈಸಿಯಂನ ಅನೇಕ ಹಳೆಯ ವಿದ್ಯಾರ್ಥಿಗಳು ಮುಂಚೂಣಿ ಪ್ರದೇಶಗಳಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದಾರೆ. ಶಿಕ್ಷಕಿಯವರ ಮಾತಿನಂತೆ, ಈ ವರ್ಣಿಸಲಾಗದ ನೋವನ್ನು ದೇವರ ಸಹಾಯದಿಂದ ಮಾತ್ರ ಸಹಿಸಿಕೊಳ್ಳಲು ಸಾಧ್ಯ.
“ಮಕ್ಕಳು ಮತ್ತು ಹದಿಹರೆಯದವರು ತಮ್ಮನ್ನು ರಕ್ಷಿಸುತ್ತಿರುವ ಮುಂಚೂಣಿ ಪ್ರದೇಶದ ಸೈನಿಕರಿಗಾಗಿ ತುಂಬಾ ಶ್ರದ್ಧೆಯಿಂದ ಪ್ರಾರ್ಥಿಸುತ್ತಾರೆ. ಪ್ರತಿದಿನ ಶಾಲೆಗೆ ಹೋಗುವಾಗ ಅವರು ತಮ್ಮ ರಕ್ಷಕರನ್ನು ನೆನಪಿಸಿಕೊಳ್ಳುತ್ತಾರೆ. ನಾವೂ ಒಟ್ಟಾಗಿ ಪ್ರಾರ್ಥಿಸುತ್ತೇವೆ. ದೀರ್ಘಕಾಲ ಸಂಪರ್ಕವಿಲ್ಲದಿದ್ದ ಪ್ರೀತಿಪಾತ್ರ ವ್ಯಕ್ತಿಯೊಬ್ಬರು ಕೊನೆಗೂ ಕರೆ ಮಾಡಿ ಜೀವಂತವಾಗಿದ್ದಾರೆ ಎಂಬ ಸುದ್ದಿ ಸಿಕ್ಕಾಗ ಮಗುವಿನ ಮುಖದಲ್ಲಿ ಕಾಣುವ ಸಂತೋಷವನ್ನು ನೋಡುವುದು ನಿಜವಾಗಿಯೂ ಅಪಾರ ಆನಂದವನ್ನು ನೀಡುತ್ತದೆ,” ಎಂದು ಐರಿನಾ ಹಂಚಿಕೊಳ್ಳುತ್ತಾರೆ.
ಇಂದು ಶಿಕ್ಷಣ ಪ್ರಕ್ರಿಯೆಯು ಆಗಾಗ್ಗೆ ವಾಯುದಾಳಿ ಎಚ್ಚರಿಕೆಯ ಸೈರನ್‌ಗಳಿಂದ ಅಡ್ಡಿಪಡಿಸಲ್ಪಡುತ್ತದೆ. ಇದರ ಪರಿಣಾಮವಾಗಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಲವು ಗಂಟೆಗಳ ಕಾಲ ಬಾಂಬ್ ಆಶ್ರಯ ಕೇಂದ್ರಗಳಲ್ಲಿ ಕಳೆಯಬೇಕಾಗುತ್ತದೆ. ಇದು ಮಕ್ಕಳಿಗೆ ಅತ್ಯಂತ ಆಯಾಸಕರವಾಗಿದ್ದರೂ, ಅವರು ಪ್ರತಿದಿನ ಲೈಸಿಯಂಗೆ ಬರುತ್ತಲೇ ಇರುತ್ತಾರೆ. ಹೊಸ ದಿನದ ಉಡುಗೊರೆಗಾಗಿ ಮತ್ತು ಕಲಿಯುವ ಅವಕಾಶಕ್ಕಾಗಿ ದೇವರಿಗೆ ಹೃತ್ಪೂರ್ವಕವಾಗಿ ಕೃತಜ್ಞತೆ ಸಲ್ಲಿಸುತ್ತಾರೆ.
ಉಕ್ರೇನಿನ ರಕ್ಷಕರಿಗೆ ಬೆಂಬಲ ನೀಡುವುದು ಈಗ ಧರ್ಮಕ್ಷೇತ್ರ ಮತ್ತು ಶಾಲಾ ಜೀವನದ ಅವಿಭಾಜ್ಯ ಭಾಗವಾಗಿದೆ. ಮಕ್ಕಳು ರಾಷ್ಟ್ರದ ಚಿಹ್ನೆಗಳಿಂದ ಅಲಂಕರಿಸಿದ ಶುಭಾಶಯ ಪತ್ರಗಳು ಮತ್ತು ಕೃತಜ್ಞತೆಯ ಪತ್ರಗಳನ್ನು ರಚಿಸುತ್ತಾರೆ. ನಂತರ ಸ್ವಯಂಸೇವಕರು ಅವುಗಳನ್ನು ಮುಂಚೂಣಿ ಪ್ರದೇಶಗಳಿಗೆ ತಲುಪಿಸುತ್ತಾರೆ. ಈ ಚಿತ್ರಗಳು ಮತ್ತು ಸಂದೇಶಗಳು ಎಷ್ಟು ಹೃದಯಸ್ಪರ್ಶಿಯಾಗಿರುತ್ತವೆ ಎಂದರೆ, ಅವುಗಳನ್ನು ನೋಡಿದಾಗ ಕಣ್ಣೀರು ತಡೆಯುವುದು ಬಹಳ ಕಷ್ಟ.
ಐರಿನಾ ನಜರೆಂಕೊ ಅವರು ಕ್ರಿಸ್ತಜಯಂತಿಯ ಸಂದರ್ಭದಲ್ಲಿ ನಡೆದ ಒಂದು ವಿಶೇಷ ಅನುಭವವನ್ನು ನೆನಪಿಸಿಕೊಳ್ಳುತ್ತಾರೆ. ಅವರು ತಮ್ಮ ವಿದ್ಯಾರ್ಥಿಗಳೊಂದಿಗೆ ಸೇನಾ ಆಸ್ಪತ್ರೆಯೊಂದಕ್ಕೆ ತೆರಳಿ ಕ್ರಿಸ್ತಜಯಂತಿಯ ಗೀತೆಗಳನ್ನು ಹಾಡಿದರು. ಗಾಯಗೊಂಡ ಸೈನಿಕರು ಮಕ್ಕಳ ಗಾಯನವನ್ನು ಆಲಿಸುತ್ತಾ ಕಣ್ಣೀರು ಹಾಕುತ್ತಿದ್ದರು. ಅವರ ಹಾಸಿಗೆಗಳ ಮೇಲ್ಭಾಗದಲ್ಲಿ ಮಕ್ಕಳಿಂದ ರಚಿಸಲ್ಪಟ್ಟ ಡಜನ್‌ಗಟ್ಟಲೆ ಚಿತ್ರಗಳು ತೂಗುಹಾಕಲಾಗಿದ್ದವು. ಕಣ್ಣೀರಿನಿಂದ ತುಂಬಿದ ಕಣ್ಣುಗಳೊಂದಿಗೆ ಆ ಸೈನಿಕರು, ತಾವು ಮುಂಚೂಣಿ ಪ್ರದೇಶದಲ್ಲಿ ತಮ್ಮ ಜೀವವನ್ನು ಪಣಕ್ಕಿಡುವುದಕ್ಕೂ, ಅಗತ್ಯವಿದ್ದರೆ ಅದನ್ನು ಅರ್ಪಿಸುವುದಕ್ಕೂ ಕಾರಣವೇ ಈ ಮಕ್ಕಳಾಗಿದ್ದಾರೆ ಎಂದು ಪದೇಪದೇ ಹೇಳುತ್ತಿದ್ದರು.
ದಿನವನ್ನು ಹೇಗಾದರೂ ತಳ್ಳುವ ಬದುಕು: ಸ್ಫೋಟಗಳ ನಡುವೆಯೂ ಶಕ್ತಿಯನ್ನು ಎಲ್ಲಿ ಕಂಡುಕೊಳ್ಳಬಹುದು?
ಪೂರ್ಣ ಪ್ರಮಾಣದ ಆಕ್ರಮಣ ಆರಂಭವಾದ ದಿನದಿಂದಲೂ ಉಕ್ರೇನ್‌ನಲ್ಲಿಯೇ ಉಳಿದಿರುವ ಐರಿನಾ ನಜರೆಂಕೊ, ಶತ್ರುಗಳ ದಾಳಿಗಳು ನಗರಗಳನ್ನು ಧ್ವಂಸಗೊಳಿಸುತ್ತಾ ನಿರಪರಾಧಿಗಳ ಜೀವಗಳನ್ನು ಬಲಿಯಾಗಿಸುತ್ತಿರುವ ಕಾರಣ, ನಾಳೆ ತಾವು ಎಚ್ಚರಗೊಳ್ಳುವೋ ಇಲ್ಲವೋ ಎಂಬುದು ಯಾರಿಗೂ ತಿಳಿದಿಲ್ಲ ಎಂಬ ಅರಿವಿನೊಂದಿಗೆ ಉಕ್ರೇನಿಯರು ಇಂದು ಬದುಕುತ್ತಿದ್ದಾರೆ ಎಂದು ಸಾಕ್ಷ್ಯ ನೀಡುತ್ತಾರೆ.
ನಿರಂತರ ಅಪಾಯದ ಈ ಪರಿಸ್ಥಿತಿಯಲ್ಲಿ, ಅವರ ದೃಢವಾದ ಆಧಾರವೆಂದರೆ ಆಳವಾದ ನಂಬಿಕೆ ಮತ್ತು ಸಂಸ್ಕಾರಗಳ ಜೀವನ. ಪ್ರಾರ್ಥನೆಯು ಅವರಿಗೆ ಆಂತರಿಕ ಶಕ್ತಿಯನ್ನು ನೀಡುತ್ತದೆ. ದೇವರಿಲ್ಲದೆ ಮತ್ತು ಪವಿತ್ರ ಬಲಿಪೂಜೆಯಲ್ಲಿ ಭಾಗವಹಿಸದೆ ಈ ದುರಂತಮಯ ಕಾಲವನ್ನು ತಾವು ಎಂದಿಗೂ ಎದುರಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಈ ಶಿಕ್ಷಕಿ ಒಪ್ಪಿಕೊಳ್ಳುತ್ತಾರೆ. ಅವರ ಸಂಪೂರ್ಣ ಭರವಸೆಯು ದೇವರ ಕರುಣೆ ಮತ್ತು ರಕ್ಷಣೆಯ ಮೇಲೆಯೇ ನೆಲೆಗೊಂಡಿದೆ.
“ನಾನು ಪ್ರತಿದಿನ ಎಚ್ಚರಗೊಂಡಾಗ, ಮಕ್ಕಳೊಂದಿಗೆ ಕೆಲಸ ಮಾಡಲು, ಅವರಿಗೆ ಬೋಧಿಸಲು, ಅವರೊಂದಿಗೆ ಮಾತನಾಡಲು ಮತ್ತು ಅವರಿಗೆ ಬೆಳಕನ್ನು ತಲುಪಿಸಲು ಪ್ರಭು ನನಗೆ ಶಕ್ತಿಯನ್ನು ನೀಡುತ್ತಿರುವುದನ್ನು ಕಾಣುತ್ತೇನೆ. ಆದ್ದರಿಂದ ನಾನು ಮುಂದುವರಿಯುತ್ತೇನೆ,” ಎಂದು ಐರಿನಾ ನಜರೆಂಕೊ ತಮ್ಮ ಮಾತುಗಳನ್ನು ಮುಕ್ತಾಯಗೊಳಿಸಿದರು.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).