ಕಾರ್ಡಿನಲ್ ಬೈಚೋಕ್: ಉಕ್ರೇನ್ ಏಕಾಂಗಿಯಲ್ಲ; ಧರ್ಮಸಭೆ ಮತ್ತು ಪೂಜ್ಯ ಜಗದ್ಗುರುಗಳು ನಮ್ಮೊಂದಿಗಿದ್ದಾರೆ
ಲೇಖಕರು: ವಿಕ್ಟೋರಿಯಾ ಹವಾಲೆಶ್ಕೊ ಮತ್ತು ಇಸಬೆಲ್ಲಾ ಎಚ್. ಡೆ ಕಾರ್ವಾಲೊ
ಉಕ್ರೇನ್‌ನಲ್ಲಿನ ಯುದ್ಧ ಮುಂದುವರಿಯುತ್ತಿರುವ ಸಂದರ್ಭದಲ್ಲಿ, ಉಕ್ರೇನ್ ಮೂಲದ ಕಾರ್ಡಿನಲ್ ಪೂಜ್ಯ ಮೈಕೋಲಾ ಬೈಚೋಕ್ ಅವರು ಜೂನ್ 24ರಂದು ಯುದ್ಧದಲ್ಲಿ ಹೋರಾಡಿದ ಸೈನಿಕನಿಗೆ ಸೇರಿದ ಧ್ವಜ ಮತ್ತು ಶಿಲುಬೆಯನ್ನು ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರಿಗೆ ಉಡುಗೊರೆಯಾಗಿ ನೀಡಿ, ತಮ್ಮ ದೇಶದ ಜನರ ನೋವನ್ನು ಅವರ ಮುಂದಿಟ್ಟರು.
ಕಾರ್ಡಿನಲ್ ಬೈಚೋಕ್ ಅವರು ಆಸ್ಟ್ರೇಲಿಯಾದ ಮೆಲ್ಬೋರ್ನ್‌ನ ಸಂತ ಪೇತ್ರ ಮತ್ತು ಸಂತ ಪೌಲರ ಪ್ರಾಂತೀಯ ಧರ್ಮಾಧ್ಯಕ್ಷರಾಗಿದ್ದಾರೆ. ಜೂನ್ 26ರಿಂದ 29ರವರೆಗೆ ವ್ಯಾಟಿಕನ್‌ನಲ್ಲಿ ನಡೆದ ವಿಶೇಷ ಕಾರ್ಡಿನಲರ ಸಭೆಯಲ್ಲಿ ಭಾಗವಹಿಸಲು ಅವರು ರೋಮ್‌ನಲ್ಲಿದ್ದರು. ಬುಧವಾರದ ಸಾರ್ವಜನಿಕ ಭೇಟಿ ಕಾರ್ಯಕ್ರಮದ ಕೊನೆಯಲ್ಲಿ ಅವರು ಈ ಉಡುಗೊರೆಗಳನ್ನು ಪೂಜ್ಯ ಜಗದ್ಗುರುಗಳಿಗೆ ನೀಡಿದರು.
ವ್ಯಾಟಿಕನ್ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ, ಈ ಉಡುಗೊರೆಯ ಮಹತ್ವ, ಕಾರ್ಡಿನಲರ ವಿಶೇಷ ಸಭೆಯ ಕುರಿತ ತಮ್ಮ ನಿರೀಕ್ಷೆಗಳು ಮತ್ತು ಶಾಂತಿಯ ಕುರಿತು ನಡೆಯುವ ಚರ್ಚೆಗಳಿಗೆ ಉಕ್ರೇನಿನ ಧರ್ಮಸಭೆ ನೀಡಬಹುದಾದ ಕೊಡುಗೆಯ ಕುರಿತು ಕಾರ್ಡಿನಲ್ ಬೈಚೋಕ್ ಮಾತನಾಡಿದರು.
ಸ್ಪಷ್ಟತೆ ಮತ್ತು ಭಾಷಾ ಶೈಲಿಗಾಗಿ ಈ ಸಂದರ್ಶನದ ಪ್ರತಿಲೇಖನವನ್ನು ಪರಿಷ್ಕರಿಸಲಾಗಿದೆ.
ಪ್ರಶ್ನೆ: ಮಹಾಧರ್ಮಾಧ್ಯಕ್ಷರೇ, ಬುಧವಾರದ ಸಾರ್ವಜನಿಕ ಭೇಟಿ ಕಾರ್ಯಕ್ರಮದ ಕೊನೆಯಲ್ಲಿ ನಿಮಗೆ ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರನ್ನು ಭೇಟಿಯಾಗಿ ಉಡುಗೊರೆಯೊಂದನ್ನು ನೀಡುವ ಅವಕಾಶ ದೊರೆಯಿತು. ಆ ಕ್ಷಣದ ಮತ್ತು ಆ ಉಡುಗೊರೆಯ ಮಹತ್ವದ ಕುರಿತು ವಿವರಿಸಬಹುದೇ?
ಇದು ನನಗೆ ಒಂದು ಅಪೂರ್ವ ಅವಕಾಶವಾಗಿತ್ತು. ಮೊದಲನೆಯದಾಗಿ, ಪೂಜ್ಯ ಜಗದ್ಗುರುಗಳೊಂದಿಗೆ ಪ್ರಾರ್ಥಿಸುವ ಹಾಗೂ ಸಾರ್ವಜನಿಕ ಭೇಟಿ ಕಾರ್ಯಕ್ರಮದ ವೇಳೆ ದೇವರ ವಾಕ್ಯದ ಕುರಿತು ಚಿಂತಿಸುವ ಅವಕಾಶ ದೊರೆಯಿತು. ನಂತರ ಕಾರ್ಯಕ್ರಮದ ಕೊನೆಯಲ್ಲಿ, ಈಗ ಯುದ್ಧದ ನಿವೃತ್ತ ಸೈನಿಕರಾಗಿರುವ ಒಬ್ಬ ಉಕ್ರೇನಿಯನ್ ಯೋಧನಿಗೆ ಸೇರಿದ ಶಿಲುಬೆ ಮತ್ತು ಉಕ್ರೇನಿನ ಧ್ವಜವನ್ನು ಪೂಜ್ಯ ಜಗದ್ಗುರುಗಳಿಗೆ ನೀಡಲು ನನಗೆ ಸಾಧ್ಯವಾಯಿತು. ಅವರು ಮೂರು ವರ್ಷಗಳ ಕಾಲ ಯುದ್ಧದಲ್ಲಿ ಸೇವೆ ಸಲ್ಲಿಸಿದ್ದರು.
ವಾಸ್ತವವಾಗಿ, ಇನ್ನೊಬ್ಬ ನಿವೃತ್ತ ಸೈನಿಕರ ಮೂಲಕ ಈ ಉಡುಗೊರೆಯನ್ನು ಪೂಜ್ಯ ಜಗದ್ಗುರುಗಳಿಗೆ ತಲುಪಿಸುವಂತೆ ಅವರು ನನ್ನನ್ನು ವಿನಂತಿಸಿದ್ದರು. ಕಳೆದ ಫೆಬ್ರವರಿಯಲ್ಲಿ ನಾನು ಈ ವಸ್ತುಗಳನ್ನು ಒಬ್ಬ ಉಕ್ರೇನಿಯನ್ ಯಾಜಕರಿಗೆ ನೀಡಿದ್ದೆ. ಮೆಲ್ಬೋರ್ನ್‌ನಿಂದ ರೋಮ್‌ಗೆ ಬಂದಾಗ, ಆ ಯಾಜಕರು ಧ್ವಜ ಮತ್ತು ಶಿಲುಬೆ ಇನ್ನೂ ತಮ್ಮ ಬಳಿಯೇ ಇರುವುದಾಗಿ ನನಗೆ ತಿಳಿಸಿದರು.
ಇದು ದೇವರ ಒಂದು ವಿಶೇಷ ಸಂಕೇತವಾಗಿತ್ತು. ಏಕೆಂದರೆ ನಾನು ಪೂಜ್ಯ ಜಗದ್ಗುರುಗಳ ಸಾರ್ವಜನಿಕ ಭೇಟಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಯೋಜಿಸಿದ್ದೆ. ನಂತರ ನಾನು ಪೂಜ್ಯ ಜಗದ್ಗುರುಗಳನ್ನು ಭೇಟಿಯಾಗಿ ಆಸ್ಟ್ರೇಲಿಯಾ ಮತ್ತು ಉಕ್ರೇನಿನ ಶುಭಾಶಯಗಳನ್ನು ತಿಳಿಸಿದೆ.
ಈ ಯುದ್ಧದ ಸಂದರ್ಭದಲ್ಲಿ ಉಕ್ರೇನ್‌ಗೆ ನೀಡುತ್ತಿರುವ ಬೆಂಬಲಕ್ಕಾಗಿ ಹಾಗೂ ವಿಶೇಷವಾಗಿ ಗಾಯಗೊಂಡಿರುವ, ಆಳವಾದ ಮಾನಸಿಕ ಆಘಾತ ಅನುಭವಿಸಿರುವ ಉಕ್ರೇನಿನ ಜನರಿಗಾಗಿ—ಮುಂಚೂಣಿಯಲ್ಲಿ ಹಲವು ವರ್ಷಗಳನ್ನು ಕಳೆದ ನಮ್ಮ ಸೈನಿಕರು, ನಿವೃತ್ತ ಯೋಧರು, ನಾಪತ್ತೆಯಾದವರು ಮತ್ತು ಬಂಧನದಲ್ಲಿರುವವರಿಗಾಗಿ—ಅವರಿಗೆ ನಾನು ಕೃತಜ್ಞತೆ ಸಲ್ಲಿಸಿದೆ.
ಈ ಉಡುಗೊರೆಯನ್ನು ಪೂಜ್ಯ ಜಗದ್ಗುರುಗಳಿಗೆ ನೀಡುವಾಗ, ಈ ಧ್ವಜ ಮತ್ತು ಶಿಲುಬೆ ಉಕ್ರೇನ್‌ಗೆ ಅತ್ಯಂತ ಮಹತ್ವದ ಸಂಕೇತಗಳಾಗಿವೆ ಎಂಬುದನ್ನು ನಾನು ಒತ್ತಿಹೇಳಿದೆ. ಉಕ್ರೇನಿನ ಯುದ್ಧದ ಸತ್ಯವನ್ನು ಜಗತ್ತಿಗೆ ನಿರಂತರವಾಗಿ ಘೋಷಿಸುತ್ತಿರಬೇಕೆಂದು, ಭರವಸೆ ಮತ್ತು ಸತ್ಯದ ದೀಪಸ್ತಂಭವಾಗಿರಬೇಕೆಂದು ಉಕ್ರೇನಿನ ಸೈನಿಕರ ಮನವಿಯನ್ನೂ ಅವರಿಗೆ ತಿಳಿಸಿದೆ.
ಆ ನಿವೃತ್ತ ಯೋಧನ ಎಲ್ಲ ಸಂದೇಶಗಳನ್ನು ನಾನು ಪೂಜ್ಯ ಜಗದ್ಗುರುಗಳಿಗೆ ತಲುಪಿಸಿದೆ. ಈ ಮಾತುಗಳು ಮತ್ತು ಈ ಪವಿತ್ರ ವಸ್ತುಗಳನ್ನು ಅವರಿಗೆ ತಲುಪಿಸುವ ಸಾಧನವಾಗಲು ಸಾಧ್ಯವಾದದ್ದು ನನಗೆ ಬಹಳ ಸಂತೋಷವನ್ನು ನೀಡಿತು.
ಇದು ಉಕ್ರೇನ್‌ಗೆ ಭರವಸೆಯ ಸಂಕೇತವಾಗಿತ್ತು. ನಾವು ಏಕಾಂಗಿಯಲ್ಲ. ದೇವರು ನಮ್ಮೊಂದಿಗಿದ್ದಾರೆ. ಕಥೋಲಿಕ ಧರ್ಮಸಭೆಯೂ ನಮ್ಮೊಂದಿಗಿದೆ. ಧರ್ಮಸಭೆಯ ಮುಖ್ಯಸ್ಥರಾದ ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರೂ ನಮ್ಮೊಂದಿಗಿದ್ದಾರೆ.
ಪ್ರಶ್ನೆ: ಜೂನ್ 26, 27 ಮತ್ತು 29ರಂದು ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರು ವಿಶ್ವದ ವಿವಿಧ ಭಾಗಗಳ ಕಾರ್ಡಿನಲ್‌ಗಳೊಂದಿಗೆ ಕಾರ್ಡಿನಲರ ವಿಶೇಷ ಸಭೆಯನ್ನು ನಡೆಸುತ್ತಿದ್ದಾರೆ. ನಡೆಯುತ್ತಿರುವ ಯುದ್ಧಗಳು, ವಿಭಜನೆಗಳು, ಸಂಘರ್ಷಗಳು ಹಾಗೂ ಶಾಂತಿ ನಿರ್ಮಾಣದಲ್ಲಿ ಧರ್ಮಸಭೆಯ ಪಾತ್ರ ಈ ಸಭೆಯ ಪ್ರಮುಖ ಚರ್ಚಾ ವಿಷಯಗಳಾಗಿವೆ. ಉಕ್ರೇನಿನ ಧರ್ಮಸಭೆಯ ಪ್ರತಿನಿಧಿಯಾಗಿ ಈ ಸಭೆಯಿಂದ ನಿಮ್ಮ ನಿರೀಕ್ಷೆಗಳೇನು?
ಈ ವಿಶೇಷ ಕಾರ್ಡಿನಲರ ಸಭೆ ಅತ್ಯಂತ ಮಹತ್ವದ್ದಾಗಿದೆ. ಕಳೆದ ಸಭೆ ಜನವರಿಯಲ್ಲಿ ನಡೆದಿತ್ತು; ಇದು ಎರಡನೇ ಸಭೆಯಾಗಿದೆ.
ಈ ಸಭೆಯ ಪ್ರಮುಖ ವಿಷಯ ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರ ‘ಭವ್ಯ ಮಾನವೀಯತೆ’ (Magnifica Humanitas) ವಿಶ್ವಪತ್ರವಾಗಿದೆ. ಇದರ ಜೊತೆಗೆ ಚರ್ಚೆಗಾಗಿ ನಾಲ್ಕು ಪ್ರಮುಖ ವಿಷಯಗಳಿವೆ. ಅವುಗಳಲ್ಲಿ ಕೆಲವು ಯುದ್ಧ ಮತ್ತು ಶಾಂತಿಗೆ ಸಂಬಂಧಿಸಿದವು. ಉಕ್ರೇನ್ ಮೂಲದ ಕಾರ್ಡಿನಲ್ ಆಗಿರುವ ನನಗೆ ಮಾತ್ರವಲ್ಲ, ಇತರ ಕಾರ್ಡಿನಲ್‌ಗಳಿಗೂ ತಮ್ಮ ಅನುಭವಗಳು ಮತ್ತು ನಿರೀಕ್ಷೆಗಳನ್ನು ಹಂಚಿಕೊಳ್ಳಲು ಇದು ಉತ್ತಮ ಅವಕಾಶವಾಗಿದೆ. ಕಳೆದ ಕೆಲವು ವರ್ಷಗಳಿಂದ ನಾವು ಉಕ್ರೇನಿಯನ್ನರು ಈ ವಿಷಯವನ್ನು ಅನೇಕ ಬಾರಿ ಪ್ರಸ್ತಾಪಿಸಲು ಪ್ರಯತ್ನಿಸಿದ್ದೇವೆ. ಈಗ ಕಥೋಲಿಕ ಧರ್ಮಸಭೆಯ ಅತ್ಯುನ್ನತ ಮಟ್ಟದಲ್ಲಿ ಈ ಕುರಿತು ಚರ್ಚೆ ನಡೆಯುತ್ತಿರುವುದು ಅತ್ಯಂತ ಸಂತೋಷದ ಸಂಗತಿಯಾಗಿದೆ.
ಈ ವಿಶೇಷ ಸಭೆಯ ಬಗ್ಗೆ ನನಗೆ ಅಪಾರ ಭರವಸೆ ಇದೆ. ಎಲ್ಲಾ ಕಾರ್ಡಿನಲ್‌ಗಳು ಮತ್ತು ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರೊಂದಿಗೆ ನಡೆಯುವ ಈ ಚರ್ಚೆಗಳ ಫಲವನ್ನು ನಾವು ಮುಂದಿನ ದಿನಗಳಲ್ಲಿ ಕಾಣುತ್ತೇವೆ.
ಪ್ರಶ್ನೆ: ನಿಮ್ಮ ಅಭಿಪ್ರಾಯದಲ್ಲಿ, ಶಾಂತಿಯ ಕುರಿತ ಈ ಚರ್ಚೆಗಳಿಗೆ ಉಕ್ರೇನಿನ ಧರ್ಮಸಭೆ ಯಾವ ರೀತಿಯ ಕೊಡುಗೆ ನೀಡಬಹುದು?
ನಾವು ಸಂವಾದಕ್ಕೆ ಸದಾ ಮುಕ್ತವಾಗಿರಬೇಕು. ನಮ್ಮ ದೇಶಕ್ಕೆ ಗಡಿಗಳಿವೆ; ಅದು ನಮ್ಮ ನೆಲವಾದ್ದರಿಂದ ನಾವು ಅವನ್ನು ಬಿಟ್ಟುಬಿಡಲು ಸಾಧ್ಯವಿಲ್ಲ. ನಮ್ಮ ದೇಶದ ಭವಿಷ್ಯಕ್ಕಾಗಿ, ನಮ್ಮ ಕುಟುಂಬಗಳಿಗಾಗಿ ಹಾಗೂ ನಮ್ಮ ಮಕ್ಕಳಿಗಾಗಿ ಸಾವಿರಾರು ಸೈನಿಕರು ಮತ್ತು ಮಹಿಳೆಯರು ತಮ್ಮ ಪ್ರಾಣವನ್ನು ಅರ್ಪಿಸಿದ್ದಾರೆ. ಆದ್ದರಿಂದ ನಾವು ಸಂವಾದಕ್ಕೆ ಮುಕ್ತರಾಗಿರಬೇಕು. ಆದರೆ ಯುದ್ಧವು ಅನೇಕ ಮಾನಸಿಕ ಗಾಯಗಳು, ನೋವುಗಳು ಮತ್ತು ನಷ್ಟಗಳನ್ನು ಉಂಟುಮಾಡುತ್ತದೆ. ಯುದ್ಧದ ಪರಿಣಾಮಗಳನ್ನು ಈಗಲೇ ನಾವು ನೋಡುತ್ತಿದ್ದೇವೆ. ವಿಶೇಷವಾಗಿ ಮುಂಚೂಣಿಯಲ್ಲಿ ಸೇವೆ ಸಲ್ಲಿಸಿದವರು—ಸೈನಿಕರಾಗಲಿ ಅಥವಾ ಸಾಮಾನ್ಯ ನಾಗರಿಕರಾಗಲಿ—ಶಾಂತಿಯ ವಾತಾವರಣದಲ್ಲೂ ಸಹಜವಾಗಿ ಬದುಕುವುದು ಅವರಿಗೆ ಕಷ್ಟವಾಗುತ್ತದೆ. ಇವೆಲ್ಲವೂ ಯುದ್ಧವು ಬಿಟ್ಟಿರುವ ಆಳವಾದ ಗಾಯಗಳಾಗಿವೆ. ನಾವು ಕೆಲವು ಸವಾಲುಗಳನ್ನು ಎದುರಿಸಿ ದಾಟಿದ್ದೇವೆ. ಆದರೆ ಇನ್ನೂ ಅನೇಕ ಸವಾಲುಗಳು ನಮ್ಮ ಮುಂದೆ ಇವೆ ಎಂದು ನಾನು ಭಾವಿಸುತ್ತೇನೆ. ಯುದ್ಧ ನಿಂತ ನಂತರವೂ ಹೊಸ ಗಾಯಗಳು ತೆರೆದುಕೊಳ್ಳುತ್ತವೆ.
ಆದಾಗ್ಯೂ, ನಾನು ಮೊದಲೇ ಹೇಳಿದಂತೆ, ನಾವು ಏಕಾಂಗಿಯಲ್ಲ. ದೇವರು ನಮ್ಮೊಂದಿಗಿದ್ದಾರೆ. ಕಥೋಲಿಕ ಧರ್ಮಸಭೆಯೂ ನಮ್ಮೊಂದಿಗಿದೆ. ಪೂರ್ಣ ಪ್ರಮಾಣದ ಆಕ್ರಮಣ ಆರಂಭವಾದಾಗಿನಿಂದಲೇ ನಮ್ಮ ಕೈಗಳು ನಿರಂತರ ಸೇವೆಯಿಂದ ತುಂಬಿವೆ. ಯುರೋಪ್, ಅಮೆರಿಕ ಹಾಗೂ ಆಸ್ಟ್ರೇಲಿಯಾ ಸೇರಿದಂತೆ ವಿಶ್ವದಾದ್ಯಂತದ ಕಥೋಲಿಕ ಧರ್ಮಸಭೆಯು ನಮ್ಮ ಜನರಿಗೆ ನೀರು, ಆಹಾರ ಮತ್ತು ದೈನಂದಿನ ಬದುಕಿಗೆ ಅಗತ್ಯವಾದ ಅನೇಕ ವಸ್ತುಗಳನ್ನು ಒದಗಿಸಲು ಬೇಕಾದ ಸಂಪನ್ಮೂಲಗಳನ್ನು ಸಂಗ್ರಹಿಸಿದೆ. ಯುದ್ಧದ ಅನುಭವ ಹೊಂದಿರುವ ಇತರ ದೇಶಗಳ ತಜ್ಞರ ಸಹಕಾರವೂ ನಮಗೆ ದೊರೆತಿದೆ. ಅವರು ನೀಡಿದ ಉತ್ತಮ ಅನುಭವಗಳನ್ನು ನಮ್ಮ ದೇಶಕ್ಕೆ ತಂದು ಜನರಿಗೆ ನೆರವಾಗಲು ನಾವು ಪ್ರಯತ್ನಿಸುತ್ತಿದ್ದೇವೆ.
ಧರ್ಮಸಭೆಯಾಗಿ ನಮ್ಮ ಸ್ವಂತ ಅನುಭವಗಳನ್ನೂ ನಾವು ಹಂಚಿಕೊಳ್ಳಬಹುದು. ಯುದ್ಧ ಆರಂಭವಾದಾಗಿನಿಂದ ಪೂರ್ವ ಉಕ್ರೇನ್‌ನಿಂದ ದೇಶದ ಪಶ್ಚಿಮ ಹಾಗೂ ಮಧ್ಯ ಭಾಗಗಳಿಗೆ ಲಕ್ಷಾಂತರ ಜನರು ಆಂತರಿಕವಾಗಿ ಸ್ಥಳಾಂತರಗೊಂಡರು. ಇನ್ನೂ ಲಕ್ಷಾಂತರ ಜನರು ವಿಶ್ವದ ವಿವಿಧ ದೇಶಗಳಿಗೆ ವಲಸೆ ಹೋಗಬೇಕಾಯಿತು. ಆದರೂ ಅವರು ಶಿಬಿರಗಳಲ್ಲಿ ಉಳಿಯಬೇಕಾಗಲಿಲ್ಲ. ಹಿಂದಿನ ಅನೇಕ ಯುದ್ಧಗಳಲ್ಲಿ ಹೆಚ್ಚಿನ ಜನರು ಗುಡಾರಗಳಲ್ಲಿ ವಾಸಿಸುತ್ತಿದ್ದರು ಎಂಬುದನ್ನು ನೀವು ನೆನಪಿಸಿಕೊಳ್ಳಬಹುದು. ನಾವು ಒಗ್ಗಟ್ಟಾಗಿದ್ದರೆ ಎಷ್ಟೊಂದು ಒಳ್ಳೆಯ ಕಾರ್ಯಗಳನ್ನು ಮಾಡಬಹುದು ಎಂಬುದಕ್ಕೆ ಇದು ಉತ್ತಮ ಉದಾಹರಣೆಯಾಗಿದೆ. ಯುದ್ಧದ ಸಮಯದಲ್ಲಿ ಹೇಗೆ ಬದುಕಬೇಕು, ಯುದ್ಧದ ಮಾನಸಿಕ ಆಘಾತವನ್ನು ಹೇಗೆ ಜಯಿಸಬೇಕು, ಯುದ್ಧದ ವೇಳೆ ಹಾಗೂ ಅದರ ನಂತರ ಧರ್ಮಸಭೆ ಯಾವ ರೀತಿಯಲ್ಲಿ ಸೇವೆ ಸಲ್ಲಿಸಬಹುದು ಎಂಬುದರ ಕುರಿತು ನಮ್ಮಲ್ಲಿ ಅಮೂಲ್ಯ ಅನುಭವಗಳಿವೆ. ಇದು ಕೇವಲ ಉಕ್ರೇನ್‌ಗೆ ಮಾತ್ರವಲ್ಲ, ಇಡೀ ನಾಗರಿಕ ಜಗತ್ತಿಗೆ ದೊಡ್ಡ ಪ್ರಯೋಜನವಾಗಲಿದೆ.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).